ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತೆ ಸಾಯುತ್ತಿದೆ, ಹಕ್ಕಿನ ಹೋರಾಟ ಸಾಕು ಬಿಡಿ!

Last Updated 25 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬನ್ನಿ, ಸತ್ಯಾಗ್ರಹ ಮಾಡೋಣ. ಸಾಯುತ್ತಿರುವ ವ್ಯವಸ್ಥೆಗೆ ಬೆನ್ನು ತಿರುಗಿಸಿ ನಿಲ್ಲೋಣ!

*
ವೃಥಾ ಮೈ ನುಗ್ಗು ಮಾಡಿಕೊಳ್ಳದಿರಿ! ಸಾಕುಬಿಡಿ ಹಕ್ಕಿನ ಹೋರಾಟ, ಸಾಕುಬಿಡಿ ಪ್ರಜಾಸತ್ತಾತ್ಮಕ ಭಿಕ್ಷಾವೃತ್ತಿ!  ಸತ್ತೆ ಸಾಯುತ್ತಿದೆ.  ಬರಿದೆ ಅತ್ತರೆ ಕರೆದರೆ ಏನೂ ಪ್ರಯೋಜನವಿಲ್ಲ. ಎದ್ದೇಳಿ! ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ.  ಪ್ರಜಾಸತ್ತೆಯೆಂಬ ಘನವಾದ ಹೆಸರು ಹೊತ್ತಿದ್ದ ಈ ರೋಗಗ್ರಸ್ತ ವ್ಯವಸ್ಥೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಲಾರದು, ಬಡವ ಬಲ್ಲಿದರ ಅಂತರ ಕುಗ್ಗಿಸಲಾರದು.

ಗಟ್ಟಿಮುಟ್ಟಾಗಿದ್ದಾಗ ಈ ಸತ್ತೆಗೆ ಎರಡು ಹೆಗ್ಗಳಿಕೆಗಳಿದ್ದವು. ಹಿಂದಿನ ಎಲ್ಲ ಯುಗಗಳ ಎಲ್ಲ ಸತ್ತೆಗಳಿಗಿಂತ ಮಿಗಿಲಾಗಿ, ಸಂಪತ್ತನ್ನು ಸಂಗ್ರಹಿಸಿದ ಹಾಗೂ ಹಕ್ಕುಗಳನ್ನು ಹಂಚಿದ್ದ ಸತ್ತೆ ಇದಾಗಿತ್ತು. ಈಗ ಸಂಪತ್ತು ಕ್ಷೀಣಿಸತೊಡಗಿದೆ. ಹಕ್ಕು ಸಾಂಕೇತಿಕವಾಗತೊಡಗಿದೆ. ಭಾರತ, ಯುರೋಪು, ಅಮೆರಿಕ ಇತ್ಯಾದಿ ಹೆಸರಾಂತ ಪ್ರಜಾಸತ್ತೆಗಳೇ ತೀವ್ರತರ ಕಾಯಿಲೆಗೆ ಪಕ್ಕಾಗಿ ನರಳತೊಡಗಿವೆ. ಬಡವರು ಸಂತ್ರಸ್ತರನ್ನು ಬಿಡಿ, ಶ್ರೀಮಂತರು ಉದ್ದಿಮೆಪತಿಗಳು ಹಾಗೂ ಮಂತ್ರಿಮಹೋದಯರೂ  ಚಿಂತಾಕ್ರಾಂತರಾಗಿದ್ದಾರೆ. ಆದರೆ, ಸತ್ತೆ ಸಾಯುತ್ತಿದೆ ಎಂಬ ಗುಟ್ಟು ಬಯಲಾಗದಿರಲೆಂದು ಇಲ್ಲಸಲ್ಲದ ಆಟವಾಡುತ್ತಿದ್ದಾರೆ ಇವರು.
 
ಪ್ರಜಾಸತ್ತೆಯೆಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ವ್ಯವಸ್ಥೆ, ಹಿಂದೊಮ್ಮೆ ಮಹತ್ವಾಕಾಂಕ್ಷಿಯಾಗಿತ್ತು, ಮಹತ್ವಾಕಾಂಕ್ಷೆಯೇ ಇದಕ್ಕೆ ಮುಳುವಾಯಿತು. ಮಹತ್ವಾಕಾಂಕ್ಷೆಯ ಗುಂಗಿನಲ್ಲಿ ಇದು ಬದುಕಿನ ಸರಳ ಸತ್ಯಗಳನ್ನು ಮರೆತಿತು. ಹಕ್ಕಿನ ಮತ್ತೊಂದು ಮುಖವಾದ ಬಾಧ್ಯಸ್ಥಿಕೆ, ಸಂಪತ್ತಿನ ಮತ್ತೊಂದು ಮುಖವಾದ ತ್ಯಾಗಗಳನ್ನು ಕಡೆಗಣಿಸಿತು, ಬಹಳಷ್ಟು ಕಾಲ ಕಡೆಗಣಿಸಿತು. ಅಧಿಕಾರ, ಆಡಂಬರ ಹಾಗೂ ಕಾನೂನುಗಳು ಮಾತ್ರವೇ ವಾಸ್ತವಗಳಾದವು ಇಲ್ಲಿ. ಹೃದಯವಂತಿಕೆ ಮಾಯವಾಯಿತು, ಬಾಯಿಬಡಾಯಿ ಹೆಚ್ಚಿತು. ಬಡವರು ಹಾಗೂ ಸಂತ್ರಸ್ತರು ಕೇವಲ ಅಂಕಿಅಂಶಗಳಾದರು.
 
ಹಾಗೆಂದು, ಈ ಸತ್ತೆಗೆ ಹೃದಯವೇ ಇರಲಿಲ್ಲ ಅಥವಾ ಬದ್ಧತೆಯೇ ಇರಲಿಲ್ಲ ಎಂದಲ್ಲ. ಇತ್ತು. ಆದರೆ ಇರಬೇಕಾದಲ್ಲಿರಲಿಲ್ಲ. ಉದ್ಯಮಶೀಲತೆಯಲ್ಲಿದ್ದಷ್ಟು ನಂಬಿಕೆ ಇದಕ್ಕೆ ಸಹಕಾರ ಮನೋಭಾವದಲ್ಲಿರಲಿಲ್ಲ, ಶ್ರೇಷ್ಠತೆಯಲ್ಲಿದ್ದಷ್ಟು ನಂಬಿಕೆ ಸಮಾನತೆಯಲ್ಲಿರಲಿಲ್ಲ, ನಗರಗಳ ಮೇಲಿದ್ದಷ್ಟು ನಂಬಿಕೆ ಗ್ರಾಮಗಳ ಮೇಲಿರಲಿಲ್ಲ, ಯಂತ್ರಗಳ ಮೇಲಿದ್ದಷ್ಟು ನಂಬಿಕೆ ಮನುಷ್ಯರ ಮೇಲಿರಲಿಲ್ಲ.  ಪ್ರಾಣಿ ಪಕ್ಷಿ ಪ್ರಕೃತಿಗಳಂತೂ ಇದರ ಗಣನೆಗೇ ಬರಲಿಲ್ಲ.  ಒಕ್ಕಣ್ಣ ವ್ಯವಸ್ಥೆಯಾಗಿತ್ತು ಇದು.
 
ಸಾಕಷ್ಟು ಸಂಪತ್ತನ್ನೇನೋ ಸೃಷ್ಟಿಸಿತ್ತು ಇದು. ಆದರೆ ಬಡತನ ಕಡಿಮೆ ಮಾಡಲಿಲ್ಲ.  ಹಕ್ಕುಗಳನ್ನೇನೋ ಹಂಚಿತ್ತು, ಆದರೆ ಅಂತರ ಕಡಿಮೆ ಮಾಡಲಿಲ್ಲ. ಸಂಪತ್ತನ್ನು ಹೆಚ್ಚಿಸುವ ಸಲುವಾಗಿ ಪೈಪೋಟಿಯ ಸೈದ್ಧಾಂತಿಕತೆಯನ್ನು ಹರಿಬಿಟ್ಟಿತು ಇದು. ಬಡವ ಬಲ್ಲಿದರ ಅಂತರ ಹೆಚ್ಚಿದ್ದರಿಂದಾಗಿ ಮೊದಲೇ ಸಿಡಿಮದ್ದಿನಂತಾಗಿದ್ದ ಸಮಾಜದೊಳಗೆ, ಪೈಪೋಟಿಯ ಸೈದ್ಧಾಂತಿಕತೆಯು ಅಸಹಿಷ್ಣುತೆ ಹಾಗೂ ಹಿಂಸಾಚಾರಗಳ ಕಿಡಿ ಹೊತ್ತಿಸಿತು. 
 
ಸುಲಭತೆಯ ತಂತ್ರಜ್ಞಾನ ಅಳವಡಿಸಿತು ಇದು. ತಂತ್ರಜ್ಞಾನವು ಪ್ರಜೆಗಳ ಬದುಕನ್ನು ಸುಲಭವಾಗಿಸುವ ಬದಲು ಯುದ್ಧಗಳನ್ನು ಸುಲಭವಾಗಿಸಿತು, ಅಸಹಿಷ್ಣುತೆ ಹಾಗೂ ಹಿಂಸಾಚಾರಗಳನ್ನು ಸುಲಭಸಾಧ್ಯವಾಗಿಸಿತು. ದುಡ್ಡು ತೆತ್ತು ಕಷ್ಟ ಖರೀದಿಸುತ್ತಿದ್ದೇವೆ ನಾವಿಂದು. ಇದೆಲ್ಲದರೊಟ್ಟಿಗೆ, ಪ್ರಕೃತಿ ಬೇರೆ ಮುನಿಸಿಕೊಂಡಿದೆ.  
ಹಕ್ಕಿನ ಹೋರಾಟಗಳು ನಮ್ಮನ್ನು ಬಿಡುಗಡೆಗೊಳಿಸುತ್ತಿಲ್ಲ, ಬಂಧಿಸುತ್ತಿವೆ, ಭ್ರಷ್ಟ ವ್ಯವಸ್ಥೆಯೊಟ್ಟಿಗೆ ಬಂಧಿಸುತ್ತಿವೆ.  ತಿಳಿದೂ ತಿಳಿದೂ ಬಂದಿಗಳಾಗುತ್ತಿದ್ದೇವೆ ನಾವು. ಹಳೆಯ ನೆನಪುಗಳು ಬಂಧಿಸುತ್ತಿವೆ ನಮ್ಮನ್ನು. ಸುಂದರ ನೆನಪುಗಳು ಅವು, ಹೋರಾಟದ ನೆನಪುಗಳು!  ಪ್ರಜಾಸತ್ತೆ ಹುಟ್ಟಿದ್ದೇ ಹಕ್ಕಿನ ಹೋರಾಟಗಳ ಮೂಲಕ ತಾನೆ? ಒಂದು ಕಾಲದಲ್ಲಿ ನಮ್ಮನ್ನೆಲ್ಲ ರೂಪಿಸಿತ್ತು ಹಕ್ಕಿನ ಹೋರಾಟಗಳು.
 
ಈಗ ಹೋರಾಟ ಮುಗಿದಿದೆ, ವ್ಯವಸ್ಥೆ ಉಳಿದಿದೆ.  ಮಾರುಕಟ್ಟೆ ಉಳಿದಿದೆ.  ಎಲ್ಲವೂ ಖರೀದಿಗೆ ಸಿಕ್ಕುತ್ತಿದೆ. ಹಕ್ಕಿನಿಂದ ಹಿಡಿದು ಶಿಕ್ಷಣದವರೆಗೆ, ಸಹಕಾರದಿಂದ ಹಿಡಿದು ಸಮಾನತೆಯವರೆಗೆ, ದೇವರಿಂದ ಹಿಡಿದು ಧ್ಯಾನದವರೆಗೆ, ಎಲ್ಲವೂ ಖರೀದಿಗೆ ಸಿಕ್ಕುತ್ತಿದೆ. ದುಡ್ಡು ತೆತ್ತರೆ ಮಠಮಾನ್ಯಗಳು, ವಿಧಾನಸೌಧ, ನ್ಯಾಯಾಲಯ, ಶಾಲೆ, ಕಚೇರಿ, ಠಾಣೆ ಎಲ್ಲದರ ಬಾಗಿಲು ತೆರೆದುಕೊಳ್ಳುತ್ತದೆ. ಜೇಲಿನ ಬಾಗಿಲು ಮುಚ್ಚಿಕೊಳ್ಳುತ್ತದೆ.
 
ಹೋರಾಟ ಚಟವಾಗಿದೆ ಅಥವಾ ಸಿದ್ಧ ನಾಟಕವೊಂದರ ಯಾಂತ್ರಿಕ ಮರುಪ್ರದರ್ಶನವಾಗಿದೆ ಇಂದು. ಯಾಂತ್ರಿಕ ಮರುಪ್ರದರ್ಶನಗಳ ಕಟು ಅನುಭವ ಇರುವ ನಾಟಕದವನು ನಾನು, ಹೇಳುತ್ತೇನೆ ಕೇಳಿ. ನಾಟಕ ಯಾಂತ್ರಿಕವಾದಾಗ ಪಾತ್ರ ಮಾಯವಾಗುತ್ತದೆ. ನಟನ ಆರ್ಭಟದ ಮಾತು ಮಾತ್ರ ಉಳಿದುಕೊಳ್ಳುತ್ತದೆ.  ಜೀವವಿಲ್ಲದ ಮರುಪ್ರದರ್ಶನವಾಗುತ್ತದೆ ನಾಟಕ. 
 
ಜೀವ ತುಂಬಲೆಂದು ಅತಿ ಮಾತನಾಡತೊಡಗುತ್ತೇವೆ, ಅತಿ ಮೇಕಪ್ ಮಾಡಿಕೊಳ್ಳತೊಡಗುತ್ತೇವೆ.  ದೀಪ ವ್ಯವಸ್ಥೆ, ಧ್ವನಿ ವ್ಯವಸ್ಥೆ ಎಲ್ಲವನ್ನೂ ಅತಿ ಮಾಡುತ್ತೇವೆ. ಪೋಲಿ ಡೈಲಾಗುಗಳನ್ನು ಸೇರಿಸುತ್ತೇವೆ. ವಿಧಾನಸೌಧ ಅಥವಾ ಸಂಸತ್ತಿನ ಭವನದಲ್ಲಿ ಈಗ ನಡೆಯುತ್ತಿರುವ ರಾಜಕಾರಣವೆಂಬ ಹೆಸರಿನ ನಾಟಕ ಇದೇ ಮಾದರಿಯದ್ದು.
 
ಹೀಗಾದಾಗ ನಟರನ್ನು ತುಳಿದು ಸ್ಟಾರುಗಳು ಮೇಲೆದ್ದು ಬರುತ್ತಾರೆ. ರಾಜಕಾರಣದಲ್ಲಿ ಕಾರ್ಯಕರ್ತರನ್ನು ತುಳಿದು ಮಂತ್ರಿಗಳು ಮೇಲೆದ್ದು ಬರತೊಡಗಿದ್ದಾರೆ. ಮಂತ್ರಿಯ ಮಕ್ಕಳು, ಮೊಮ್ಮಕ್ಕಳು, ಗಂಡರು, ಮಿಂಡರು ಎಲ್ಲರೂ ಯಾವುದೇ ಯೋಗ್ಯತೆ ಇಲ್ಲದೆ ಮೇಲೆದ್ದು ಬರತೊಡಗಿದ್ದಾರೆ.  ಮೆಲೊಡ್ರಾಮಾಗಳಲ್ಲಿ ಬಡಿದಾಟದ ದೃಶ್ಯಗಳು ಹೆಚ್ಚುತ್ತವೆ, ರಾಜಕೀಯದಲ್ಲಿ ಹಕ್ಕಿನ ಹೋರಾಟಗಳು ಹೆಚ್ಚುತ್ತಿವೆ. ಸತ್ತ ಸತ್ತೆಗೆ ಶೋಭೆ ತರಲೆಂದೇ ಹಕ್ಕಿನ ಹೋರಾಟಗಳು ನಡೆಯುತ್ತಿವೆ.
 
ಮಾಧ್ಯಮದವರು, ಮಾರುಕಟ್ಟೆಯ ಬಲವಂತದಿಂದಾಗಿ, ಸುಳ್ಳು ಹೋರಾಟಗಳನ್ನು ಸುಳ್ಳೇ ಚಿತ್ರಿಸಿ, ಪ್ರಜೆಗಳ ಮುಂದಿರಿಸಿ, ವಿನಾಕಾರಣ ಉದ್ರೇಕಿಸತೊಡಗಿದ್ದಾರೆ.
ನನ್ನ ಮಾತಿನಲ್ಲಿ ಅನಗತ್ಯ ವ್ಯಂಗ್ಯ ಇಣುಕುತ್ತಿದೆ ಎಂದು ನಿಮಗನ್ನಿಸುತ್ತಿರಬಹುದು. ಅಥವಾ ಅವ್ಯವಸ್ಥೆಯ ಪರವಾಗಿದ್ದಾನೆ ಈತ ಎಂದು ಅನ್ನಿಸುತ್ತಿರಬಹುದು. ಹಾಗೇನಿಲ್ಲ. ಬದಲಾವಣೆ ಸಾಧ್ಯವಿದೆ ಎಂದು ನಂಬುವವನು ನಾನು. ಭ್ರಷ್ಟತೆಗೆ ಪರಿಹಾರವಿದೆ ಎಂದು ನಂಬುವವನು. ಹೋರಾಟಗಳ ರೀತಿ ಬದಲಾಗಲಿ, ಹಕ್ಕು ಬಾಧ್ಯತೆಗಳ ನಡುವಣ ಸಮತೋಲನ ಸರಿ ಹೊಂದಲಿ ಎಂದು ಬಯಸುವವನು ನಾನು. ಕೆಲಕಾಲ ನಾವೆಲ್ಲರೂ ವ್ಯವಸ್ಥೆಗೆ ಮುಖ ತಿರುಗಿಸಿ ನಿಲ್ಲುವ ಅಗತ್ಯವಿದೆ. ಹಾಗೊಮ್ಮೆ ನಿಂತರೆ,  ನಮಗೆ ನಾವೇ ಜವಾಬುದಾರರಾದರೆ, ಅದೂ ಸಹ ಹೋರಾಟವೇ ಸರಿ. ಆ ಮಾದರಿಯ ಹೋರಾಟವನ್ನು ಗಾಂಧೀಜಿ, ಸತ್ಯಾಗ್ರಹ ಎಂದು ಕರೆದಿದ್ದರು.  
 
ಭ್ರಷ್ಟಾಚಾರವನ್ನೇ ತೆಗೆದುಕೊಳ್ಳಿ. ಅಣ್ಣಾ ಹಜಾರೆ ತಪ್ಪು ಮಾಡಿದರು. ಭ್ರಷ್ಟಾಚಾರ ವಿರೋಧಿ ಕಾನೂನು ಮಾಡುವಂತೆ ಸತ್ತೆಯನ್ನು ಕೇಳಿದರು. ಜೀವನದುದ್ದಕ್ಕೂ ಲಂಚ ಕೊಟ್ಟವರಲ್ಲ ಅವರು. ಬಾಧ್ಯಸ್ಥಿಕೆಯ ಸತ್ಯಾಗ್ರಹ ಮಾಡುವ ಯೋಗ್ಯತೆ ಇತ್ತು ಅವರಿಗೆ. ಲಂಚ ಕೊಡುವುದಿಲ್ಲ ಎಂದು ಅವರು ಘೋಷಿಸಿದ್ದರೆ ಸಾಕಿತ್ತು, ಯುವಕರು ಹಿಂದೆ ಬರುತ್ತಿದ್ದರು. ಒಂದೊಮ್ಮೆ ಬಂದಿರದಿದ್ದರೂ ನಷ್ಟವಾಗುತ್ತಿರಲಿಲ್ಲ. ಜವಾಬ್ದಾರಿಯ ಮಾತನ್ನಾಡುವುದು ಚಾರಿತ್ರಿಕ ಅಗತ್ಯವಾಗಿದೆ ಇಂದು. 
 
ಸತ್ಯಾಗ್ರಹಗಳು ಗ್ರಾಮದಿಂದ ಆರಂಭವಾಗಬೇಕು, ದೆಹಲಿಯಿಂದಲ್ಲ. ದೆಹಲಿಯಿಂದಲೇ ಎಲ್ಲವನ್ನೂ ಆರಂಭಿಸುತ್ತದೆ ಸತ್ತೆ. ಆದರೆ ಗ್ರಾಮ ತಲೆಯೆತ್ತಿ ನಿಲ್ಲಬೇಕು ಎನ್ನುವ ನಾವು ಗ್ರಾಮಗಳಿಂದಲೇ ಆರಂಭಿಸಬೇಕು ತಲೆ ಎತ್ತಿ ನಿಲ್ಲಿಸುವ ಕೆಲಸವನ್ನು. ಸಿಟ್ಟಾಗಬಾರದು, ಕೂಗಾಡಬಾರದು.  ನಗುನಗುತ್ತಲೇ ದೆಹಲಿಯ ದರ್ಬಾರನ್ನು ತಲೆಕೆಳಗು ಮಾಡಬೇಕು. ಸತ್ತೆ ಸಿಟ್ಟಾಗಲಿ, ಸತ್ತೆ ಗುಂಡು ಹಾರಿಸಲಿ, ಬೇಕಿದ್ದರೆ.  
 
ನಿಮಗೊಂದು ಅನುಭವ ಹೇಳುತ್ತೇನೆ ಕೇಳಿ. ಕೆಲ ದಿನಗಳಿಂದ ನಾನು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದೇನೆ, ಗಾಂಧಿಯವರ ‘ಹಿಂದ್‌ ಸ್ವರಾಜ್’ ಆಧರಿಸಿದ ನಾಟಕವೊಂದನ್ನು ಆಡಿಸಲೆಂದು ಇಲ್ಲಿ ವಾಸ್ತವ್ಯ ಹೂಡಿದ್ದೇನೆ. ನಾನಿರುವ ಬಡಾವಣೆ ಊರಿಂದ ಕೊಂಚ ಹೊರಗಿದೆ.  ಹಾಗಾಗಿ ರಸ್ತೆಗಳ ಬದಿಯಲ್ಲಿ ಸಾಕಷ್ಟು ಜಾಗವಿದೆ.  ನಾನಿರುವ ಕೋಣೆಯ ಕೆಳಗೆ, ರಸ್ತೆಯಲ್ಲೊಂದು ಗಾಡಿ ಅಂಗಡಿಯಿದೆ.  ಅದು ತಿಂಡಿ ಅಂಗಡಿ.  ಅಂಗಡಿಯ ಬದಿಗೆ ಮರವೊಂದು ನಿಂತು ಅಂಗಡಿಗೆ ನೆರಳು ಒದಗಿಸುತ್ತಿದೆ.  ಮರದ ನೆರಳಲ್ಲಿ ಕಲ್ಲು ಜೋಡಿಸಿ, ಮುರುಕಲು ಹಲಗೆ ಜೋಡಿಸಿ, ಕೂರಲಿಕ್ಕೆ ಆಸನ ಮಾಡಿದ್ದಾರೆ.  ಅಂಗಡಿಯ ಗಿರಾಕಿಗಳು, ಮೈಸೂರನ್ನು ಮಹಾನಗರವಾಗಿಸಲು ಹೆಣಗುತ್ತಿರುವ, ಗಾರೆ ಕೆಲಸಗಾರರು.
 
ಅಂಗಡಿಯ ಯಜಮಾನಿ ಒಬ್ಬ ಹಳ್ಳಿಮುದುಕಿ. ಮುದುಕಿಯ ಗಂಡ, ಮೊಮ್ಮಗ ಮುದುಕಿಯೊಟ್ಟಿಗೆ ದುಡಿಯುತ್ತಾರೆ. ತಿಂಡಿ ಅಂಗಡಿಗೆ ಮುದುಕಿಯೇ ಚಾಲಕ ಶಕ್ತಿ. ಹಳ್ಳಿಯಲ್ಲಿ ಅವರಿಗೆ ಕೊಂಚ ಜಮೀನಿದೆಯಂತೆ, ಬರಗಾಲದಿಂದಾಗಿ ಮೈಸೂರಿಗೆ ಗುಳೆ ಬಂದಿದ್ದಾರಂತೆ, ಬಂದು ಗಾಡಿ ಅಂಗಡಿ ಹೋಟೆಲು ತೆರೆದಿದ್ದಾರೆ.  ಇಲ್ಲಿಯೇ ನಾನು ಊಟ ತಿಂಡಿ ಮಾಡುತ್ತೇನೆ.  ಐದು ರೂಪಾಯಿಗೆ ಇಡ್ಲಿ, ಆರು ರೂಪಾಯಿಗೆ ಚಹ, ಹತ್ತು ರೂಪಾಯಿಗೆ ಮುದ್ದೆ ಉಪ್ಸಾರು ಸಿಕ್ಕುತ್ತದೆ ಇಲ್ಲಿ.  ತುಂಬ ಪ್ರೀತಿಯಿಂದ ನೀಡುತ್ತದೆ ಮುದುಕಿ, ಉಣ್ಣುತ್ತಿರುವಾಗ ಹರಟೆ ಹೊಡೆದು ಮನರಂಜನೆಯನ್ನೂ ನೀಡುತ್ತದೆ. 
 
ವಿಶ್ವ ಮಾರುಕಟ್ಟೆಯ ಅಬ್ಬರದ ಯುಗದಲ್ಲಿ ಕೇವಲ ಇಪ್ಪತ್ತು ರೂಪಾಯಿಗೆ ಹೋಟೆಲಿನ ಊಟ ಮುಗಿಯುತ್ತದೆ. ಇದೂ ಸಹ ಮಾರುಕಟ್ಟೆಯೇ ಸರಿ, ಪರ್ಯಾಯ ಮಾರುಕಟ್ಟೆ. ಪರ್ಯಾಯ ವ್ಯವಸ್ಥೆ! ಪಕ್ಕದಲ್ಲೊಂದು ಅಧಿಕೃತ ಹೋಟೆಲಿದೆ, ಇಂಗ್ಲಿಷ್ ಈಟರಿ. ಈಟರಿಯ ತಲೆಗೊಂದು ಸೂರಿದೆ, ಬಣ್ಣಬಣ್ಣದ ಬೋರ್ಡಿದೆ. ಇಷ್ಟೇ ವ್ಯತ್ಯಾಸ! ಅಲ್ಲಿಯೂ ಇಷ್ಟೇ ಗಲೀಜಿದೆ. ಕಡಿಮೆ ಆರ್ದ್ರತೆಯಿದೆ. ಈಟರಿಯ ಮಾಲೀಕನ ಕಣ್ಣು ಮೂರೂ ಹೊತ್ತು ನಿಮ್ಮ ಜೇಬಿನ ಮೇಲೇ ಇರುತ್ತದೆ. ಇಪ್ಪತ್ತುಪಟ್ಟು ಹೆಚ್ಚಿಗೆ ದುಡ್ಡು ತೆರಬೇಕು. ಈಟರಿಯಲ್ಲಿ ಅದೇ ಊಟಕ್ಕೆ!
 
ಬಡವರಲ್ಲಿ ಕರ್ತೃತ್ವ ಶಕ್ತಿಯಿದೆ. ಸರಳ ಬದುಕಿನ ಅನುಭವ ಅವರಿಗಿದೆ. ಅವರಿಗೆ ಮಾತ್ರವೇ ಇದೆ.  ಕೊಂಚ ಸೋಮಾರಿತನವಿದೆ, ಪಾಳೆಯಗಾರಿ ಪ್ರವೃತ್ತಿ ಹಾಗೂ ಸಣ್ಣತನ ಉಳಿದಿದೆ ನಿಜ. ಆದರೆ ವಿಶ್ವಮಾರುಕಟ್ಟೆಯ ದುಬಾರಿ ಊನಗಳ ಮುಂದೆ ಈ ಊನ ಏನೂ ಅಲ್ಲ.  ಬಡವರ ಪಾಳೆಯಗಾರಿ ಊನಗಳನ್ನು ಸತ್ಯಾಗ್ರಹವು ಖಂಡಿತವಾಗಿ ಪರಿಹರಿಸಬಲ್ಲದು.
 
ಆದರೆ ಈ ಸತ್ತೆಯು ಬಡವರನ್ನು ಜಾತೀವಾರು ವಿಂಗಡಿಸಿ, ಜಾತಿ ಪಾಳೆಯಪಟ್ಟುಗಳನ್ನಾಗಿಸಿಕೊಂಡಿದೆ. ಅಮ್ಮನ ಟೀವಿ, ಅಪ್ಪನ ಅಕ್ಕಿ, ಅಕ್ಕನ ತಾಳಿ ಎಂದೆಲ್ಲ ಕುಹಕದ ಹೆಸರಿನ ಲಂಚದ ವ್ಯವಸ್ಥೆ ಮಾಡಿದೆ. ಕುಹಕಕ್ಕೆ ನಾವು ಜವಾಬ್ದಾರರು, ಉಳ್ಳವರು ಜವಾಬ್ದಾರರು. ಮೇಲ್ವರ್ಗದ ಮನೆ ಮಠಗಳಲ್ಲಿ, ಸಾಫ್ಟ್‌ವೇರ್ ಕಂಪೆನಿಗಳ ಕ್ಯಾಂಟೀನುಗಳಲ್ಲಿ ಕುಹಕವೇ ಮಾತಾಗಿ ಚರ್ಚಿತವಾಗತೊಡಗಿದೆ.  ಕುಹಕ ಏಕೆ? ಯಾರ ಬಗ್ಗೆ ಕುಹಕ? ಬಡವರು ನಮ್ಮ ಕುಹಕಕ್ಕೆ ನಿಜಕ್ಕೂ ಅರ್ಹರೇ?
 
ನೀವೇ ಹರಿಬಿಟ್ಟಿರುವ ವ್ಯವಸ್ಥಿತ ಕುಹಕವಿದು.  ನಾವೇ ಅರ್ಹರು ನಮ್ಮ ಕುಹಕಕ್ಕೆ!  ಮೊದಲು ಹಕ್ಕು ಖರೀದಿಸುವ ದುರಭ್ಯಾಸ ನಿಲ್ಲಿಸೋಣ.  ಖರೀದಿಸಲಾರದ ಬಡವರು ನಮ್ಮೊಟ್ಟಿಗೆ ಬಂದೇ ಬರುತ್ತಾರೆ.
 
ಬನ್ನಿ, ಸತ್ಯಾಗ್ರಹ ಮಾಡೋಣ. ಸಾಯುತ್ತಿರುವ ವ್ಯವಸ್ಥೆಗೆ ಬೆನ್ನು ತಿರುಗಿಸಿ ನಿಲ್ಲೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT