ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಗಳೆಂತು ಸುಂದರ?

Last Updated 16 ಜುಲೈ 2011, 19:30 IST
ಅಕ್ಷರ ಗಾತ್ರ

ನಾನು: ಯಾವ ಕಾಲವಾಯಿತೇ ರುಕ್ಮಾಬಾಯಿ ನಿನ್ನನ್ನು ನೋಡಿ!
ರುಕ್ಮಾ: (ಅಷ್ಟೇ ಸಂತೋಷದಿಂದ) ಹೂನವ್ವ... ಹ್ವಾದ ಜನ್ಮದಾಗೆ ನೋಡ್ದಂಗಿದೆ! ಹೆಂಗಿದೀ? ಮನೇಲೆಲ್ಲ ಹೆಂಗಿದಾರೆ?
ನಾನು: ಚೆನಾಗಿದಾರೆ... ಎಷ್ಟು ವರ್ಷ ನಿಂಗೀಗ?
ರುಕ್ಮಾ: ವರ್ಷಕ್ಕೇನು, ಎಪ್ಪತ್ತರ ಹತ್ರ ಹತ್ರ ಆಗಿರ‌್ಬೇಕು. ನಿಮ್ಮೆಜಮಾನ್ರಿಗಿಂತ ನಾಕ್ವರ್ಷ ದೊಡ್ಡೋಳು ಕಣಮ್ಮ ನಾನೂ.
ನಾನು: ಹೇಗಿದ್ದೀ? ಹೊತ್ತು ಹೇಗೆ ಕಳೀತೀ?
ರುಕ್ಮಾ: ಹೇಗಂತ ಹೇಳೋದು? ಅದೇ ಹೋಗ್ತಿರತ್ತೆ... ಟೀವಿಗೀವಿ ಇದ್ಯಲ್ಲವ್ವ.. ಅದೊಂದು ಇರೋ ಹೊತ್ಗೆ... ಆದ್ರೂ ಟ್ರಾನ್ಸಿಟ್ರು ಬಿಟ್ಟಿಲ್ಲ ಅನ್ನು. ಬೆಳಗೆದ್ದು ಮಾತಾಡೋದು ಅದೇಯ.
ನಾನು: ಅದ್ಯೇನು ಕೂಗ್ತಿರ‌್ತಿತ್ತು ಟ್ರಾನ್ಸಿಸ್ಟರ್, ಸ್ಟಾಪಿಲ್ದೆ, ನಿಮ್ಮ ಬೀದೀಲಿ. ಆಚೀಚೆ ಹೋಗೋವಾಗ ಕಿವಿಮೇಲೆ ಅಪ್ಪಳಿಸ್ತಿತ್ತು.
(ಮುಂಚೆ ಅವರೆಲ್ಲ ಇರೋ ಗಲ್ಲಿಯಲ್ಲಿ ಸಂಜೆ ಆಯಿತೆಂದರೆ ಎಲ್ಲ ಮನೆಗಳಿಂದಲೂ, ಒಂದೇ ಸವನೆ ಟ್ರಾನ್ಸಿಸ್ಟರ್ ಕೂಗು. ಸರಿ ರಾತ್ರಿಯಲ್ಲಿಯೂ ದೂರದಿಂದ ಕ್ಷೀಣವಾಗಿ ಅಲ್ಲಿಂದ ಹಾಡೋ ಮಾತೋ ಕೇಳುತ್ತಲೇ ಇರುತಿತ್ತು. ದಿನವಿಡೀ ದುಡಿವ ಮಂದಿಯ ಗಲ್ಲಿಯಾದರೂ ಅದು ಬೇಗ ಮಲಗುತ್ತಿರಲಿಲ್ಲ. ಈಗ ಅಲ್ಲಿಂದ ದೂರ ಕಾಲೊನಿಯಲ್ಲಿ ಅವರೆಲ್ಲ ವಾಸಿಸುತ್ತಿದ್ದಾರೆ. ಹಳೆಯ ಕೆಲಸದ ಮನೆಗಳೆಲ್ಲ ಈಗ ದೂರವಾಗಿವೆ.)
ರುಕ್ಮಾ: (ಜೋರಾಗಿ ನಗುತ್ತ) ಈಗೆಲ್ಲ ಅದು ಬೆಳಗ್ಗೆ ಮಾತ್ರ. ಆಮೇಲೆ ಆಫ್. ಮತ್ತೆಲ್ಲ ಟೀವೀನೆ.
ನಾನು: ಟೀವೀನಲ್ಲಿ ಏನು ನೋಡ್ತಿ?
ರುಕ್ಮಾ: ಬೆಳಗಾ ಮುಂಚೆ ನ್ಯೂಸ್ ಕೇಳ್ತೀನವ್ವ.
ನಾನು: ನ್ಯೂಸ?
ರುಕ್ಮಾ: ಮುಂಚೇನೂ ಟ್ರಾನ್ಸಿಟ್ರಲ್ಲಿ ನ್ಯೂಸನ್ನೊಂದು ಕೇಳೇ ಕೇಳ್ತಿದ್ದೆ ನಾನು. ಈಗ್ಲೂ ಅಷ್ಟೆ. ಅದನ್ನೊಂದು ಬಿಡಲ್ಲ. ಏನಾದ್ರೂ ನಮಗೆ ಒಳ್ಳೇದಾಗೋದು ಬರತ್ತಾ ಅಂತ ಒಂದು ಆಸೆ ಇರುತ್ತಲ್ಲವ್ವ?... ಆಮೇಲೆ ದಾರಾವಾಯಿ ರಾತ್ರಿವರ‌್ಗೂ.
ನಾನು: ಯಾವ?
ರುಕ್ಮಾ: ಹಚ್ಚಿರೋ ಹೊತ್ಗೆ ಏನು ಬರ‌್ತಿದ್ಯೋ ಅದು. ಒಂದೊಂದು ಭೋ ಚಂದಾಕಿರ‌್ತಾವೆ ಕಣವ್ವ. ನೋಡ್ಕಂಡ್ ಅದು ಮಗಿಯುತ್ಲೇ ಒಂದೊಂದ್ಸಲ ನಾನೂ ಹಂಗೇನೇ ಮಾತಾಡೋದು, ಹಾಡೋದು. ಆಕ್ಟ್ ಮಾಡೋದು. ಕಣ್ಣೀರು ಸುರ‌್ಸೋದು. ಯಾರಾದರೂ ಕಿಟಿಕೀಲಿ ನೋಡಿ ಮಳ್ಳಿ ಎಂದಾರು ಅಂತ ಬಾಗಿಲು ಹಾಕ್ಕಂಡು ಬಿಡೋದು... ಆಕ್ಟಿಂಗ್ ಆಸಿ ಒಂದ್ಸಲ ಹತ್ತಿತೆಂದ್ರೆ ಬಿಟ್ಟೇ ಹೋಗಲ್ಲ ನೋಡು.
ನಾನು: ಅಂದ್ರೆ... ಈಗ ಮನೇಲೇ ಇರ‌್ತೀಯ?
ರುಕ್ಮಾ: ಇಲ್ಲಪ್ಪ, ಕೆಲ್ಸಕ್ಕ್ ಹೋಯ್ತೀನಿ. ಕೆಲ್ಸಕ್ಕೆ ಹೋಗಿ ಬಂದ್ಮೇಲೆ ಇದೆಲ್ಲ.
ನಾನು: ಈಗ್ಲೂ ಕೆಲ್ಸ ಮಾಡ್ತೀಯ?
ರುಕ್ಮಾ: ಇನ್ನೇನು, ಮನೇ ಕೆಲ್ಸ ಒಲ್ಲೆ ಅಂತಿದ್ದೆ. ಅದ್ನೇ ಮಾಡ್ತಿದೀನಿ. 
ನಾನು: ನಿಮ್ಮಮ್ಮಂಗೆ ನೀನು ಮನೆಗೆಲ್ಸ ಮಾಡೋದು ಇಷ್ಟ ಇರ‌್ಲಿಲ್ಲ ಅಲ್ವ?
ರುಕ್ಮಾ: ಇರ‌್ಲಿಲ್ಲ ಸರಿ, ಆದ್ರೆ ನನ್ನ ಇಚಾರ ಹಿಂಗಾಯ್ತಲ್ಲ. ಏನು ಮಾಡೋದು? ಸಾಯೋ ತಂಕಾನೂ ಅವಳ ಮನಸಾಗೆ ನಾನು ನಾಟ್ಕದಾಕೀನೇ. ಕಡೆಕಡೆಗೆ ನಾನು ಕೆಲ್ಸ ಮುಗ್ಸಿ ಮನೀಗ್ ಬಂದ್ರೆ ಮುದ್ಕಿ ನನ್ನ ಕೈಯನ್ನು ಅಂಗೈಯಲ್ಲಿ ತಗೊಂಡು ಅಳೋಳು. ಈ ಕೈ ಕಡೆಗೂ ಮುಸುರೇ ಕೆಲ್ಸ ಮಾಡ್ತಿದೆಯಲ್ಲಪ್ಪಾ, ಆಕ್ಟಿಂಗ್ ಬಿಟ್ಟು ಅಂತ.
ನಾನು: ನಿನ್ನ ಸುತ್ತಮುತ್ತ ತುಂಬ ಬದಲಾವಣೆ ಆಗ್ತಿದೆ ಅಂತ ಅನಿಸತ್ತ?
ರುಕ್ಮಾ: ಆಗಿದೆ ಆಗಿದೆ. ಎಲ್ಲಿ ಕಂಡ್ರೂ ಮನೀಗಳು ಅವ್ವಾ. ಕೆಲ್ಸ ಮಾಡಿ ತಿನ್ನೋರಿಗೆ ಈಗ ಸುಗ್ಗಿ. ನನ್ನವ್ವ ಎಷ್ಟು ಕಷ್ಟ ಪಟ್ಲು ಆ ಕಾಲದಾಗೆ. ಕಾಲೇಜು, ಆಫೀಸು ಕೆಲ್ಸಕ್ಕೆ ಹೆಣ್ಮಕ್ಳು ಕಮ್ಮಿ ನೋಡ್ರೀ ಆಗ, ಈಗ ಅವ್ರೇ ಶಾನೆ ಮಂದಿ. ಬೆಳಗಾ ಮುಂಚೆ ಎದ್ದು ಕೆಲ್ಸಕ್ಕೆ ಹೊರ್ಟು ಬಿಡೋರೇ ಹೆಚ್ಚು. ಹಂಗಾಗಿ ಕೆಲ್ಸ ಮಾಡ್ತೀವಿ ಅಂದರೆ ಎಷ್ಟು ಬೇಕಾದ್ರೂ ಮನೆಗಳಿದಾವೆ. ಯಾರ‌್ಗು ದುಡ್ಡಿನ ಖೇರ್ ಇಲ್ಲ. ಬರವೂ ಇಲ್ಲ. ಆಗ್ಲೇ ಹಿಂಗಿದ್ದಿದ್ರೆ ನಾನು ನಾಟ್ಕ ಕಂಪ್ನಿ ಸೇರ‌್ಕಂತಾನೇ ಇರ‌್ಲಿಲ್ಲ. 
ನಾನು: ಹಾಗಾದ್ರೆ ಈಗ ದುಡಿಮೆ ಚೆನ್ನಾಗಿದೆ ಅನ್ನು.
ರುಕ್ಮಾ: ಅಯ್ಯ. ನಾವು ನಾವು ತಂದ ಪಾತ್ರೆ ಎಷ್ಟಿದೆ ಅಷ್ಟೇ ನಾವು ಪಡೆಯೋದೂ. ತಿಳ್ಕಳೀ. ನನ್ನ ದೇಹದಾಗೆ ನೆಣ ಕಮ್ಮಿಯಾದ್ಮೇಲೆ ಇಂಥ ಕಾಲ ಬಂತು.
ನಾನು: ...
ರುಕ್ಮಾ: ಆದ್ರೂ ನಾನು ತಪ್ಪು ಮಾಡಿದೆ ಅನ್ಸತ್ತೆ ಅವ್ವಾ. ಆದ್ರೆ ಹ್ವಟ್ಟಿಗೆ ಇರ‌್ಲಿಲ್ಲ ನೋಡಿ. ಮುಸುರೆ ಕೆಲ್ಸಕ್ಕೆ ಹೋಗೋಕೆ ಮನಸಿರ‌್ಲಿಲ್ಲ. ಉಣ್ಣೋಕಾದ್ರೂ ಸಿಗತೈತೆ ಅಂತ ನಾಟ್ಕ ಕಂಪ್ನಿ ಸೇರ‌್ಕೊಂಡೆ.
ನಾನು: ಅದು ಯಾವ ಕಂಪ್ನಿಯೆ?
ರುಕ್ಮಾ: ... ಬಸವೇಶ್ವರವೋ.... ಯಂತದೊ ಸಮಾ ನೆನಪಾಗ್ತಿಲ್ಲ. ಕಂಪ್ನಿಯಿಂದ ಕಂಪ್ನಿಗೆ ಹಾರ‌್ತಿದ್ರೆ ಇನ್ನೇನಾಗತ್ತೆ?... ಹೊನ್ನಪ್ಪ ಭಾಗವತರ ಜತೆಗೂ ಆಕ್ಟಿಂಗ್ ಮಾಡಿದೀನಿ. ಹೂ...ಂ!
ನಾನು: ಆವಾಗಿನ ಏನಾದ್ರೂ ನೆನಪು ಹೇಳ್ತೀಯ?
ರುಕ್ಮಾ: (ನೆನಪು ಮಾಡಿಕೊಳ್ಳುತ್ತ) ಹೊನ್ನಪ್ಪ ಭಾಗವತರ ನಾಟಕದಲ್ಲಿ ಪಾರ್ಟು ಮಾಡಿದ್ದೊಂದು ನೋಡು, ಮರೆತೇ ಹೋಗಲ್ಲ. ಏನು ಚೆನ್ನಾಗಿದ್ರು ಆಯಪ್ಪ. ದೇವಲೋಕದಿಂದ ಇಳ್ದು ಬಂದ ಹಾಗೆ ಇದ್ರು. ನಂಗಂತೂ ಅವ್ರ್ ಮುಂದೆ ಮಾತೇ ಮರ‌್ತು ಹೋಗೋದು. ಈಗ ನೆನ್ಸಕಂಡ್ರೂ ಕಣ್ಮುಂದೆ ಕಟ್ಟತ್ತೆ ಆ ರೂಪ. (ಚಿತ್ರ ಮರುಕಳಿಸಿಕೊಳ್ಳುವಂತೆ ಅಕ್ಷರಶಃ ಕಣ್ಮುಚ್ಚಿ ತೆರೆದಳು ರುಕ್ಮಾಬಾಯಿ)
ನಾನು: ಕಂಪ್ನಿ ಯಾಕೆ ಬಿಟ್ಟುಬಿಟ್ಟೆ?
ರುಕ್ಮಾ: ಕಂಪ್ನಿಗಳೇ ಮುಚ್ಚಿ ಹೋದ್ವಲ್ಲ.
ನಾನು: ಮುಚ್ಚಿ ಹೋಗುವ ಮುಂಚೆಯೇ ನೀನು ಈಚೆ ಬಂದಿದ್ದೆ, ನಮ್ಮಲ್ಲಿಗೆಲ್ಲ ಬರ‌್ತಿದ್ದಿಯಲ್ಲ ಅವ್ವನ ಜೊತೆ. ನೆನಪಿದೆ ನಂಗೆ.
ರುಕ್ಮಾ: ಹೂಂ ಮಕ್ಳು ಆದ್ವು, ಎಲ್ಲಿ ಬಿಡೋದು? ಅವ್ವನ ಹತ್ರ ಬಿಡೋಣ ಅಂದ್ರೆ ಅವ್ಳ ನೂರ‌್ಮನೆ ತಿರ‌್ಗೋಳು... ಸಮಸ್ಯೆ ಆಯ್ತು. ತಂದೆಯಾದವಂಗೆ ಜವಾಬ್ದಾರಿ ಇಲ್ದೆ ಹೋದ್ರೆ ಅಷ್ಟೇನೆ ಕಣವ್ವ.
ನಾನು: ಬರ‌್ತಿರ‌್ತಾರ?
ರುಕ್ಮಾ: ಯಾರು?
ನಾನು: ನಿನ್ಗಂಡ
ರುಕ್ಮಾ: ಮಕ್ಳ ಅಪ್ಪ ಅನ್ನವ್ವ. ಅದ್ಯಾವ ಸುಡುಗಾಡು ಗಂಡ... (ಎಂಜಲಿಲ್ಲದ- ಥೂ)
ನಾನು: ಅವ್ರ ಬಂದಾಗ ನಿಮ್ಮಮ್ಮ ಏನು ಸಡಗರ ಪಡೋಳು. ನಿಂಗೆ ಸಿಗೋವಂಥವ್ನೇ ಅಲ್ಲ ಅಂತಿದ್ಲು.
ರುಕ್ಮಾ: ಅಂದವ್ಳ ಕಡೆ ಕಡೆಗೆ ಅದು ಬಂದ್ರೆ ನನ್ನನ್ನು ಕೋಣೆಗೆ ದೂಡಿ ಬಾಗಿಲು ಹಾಕಿ ತಾನು ಹೊರಗೆ ಮೆಟ್ಲ್ ಮೇಲೇ ಪಟ್ಟಾಗಿ ಕೂತು ಅದನ್ನ ಅಲ್ಲಿಂದಲ್ಲಿಂದ್ಲೇ ಸಾಗ ಹಾಕಿ ಬಿಡೋಳು.
ನಾನು: ಈಗಲೂ ಬರ‌್ತಿರ‌್ತಾರ?
ರುಕ್ಮಾ: ಬರ‌್ತಿರತ್ತೆ. ಮನಿ ಬ್ಯಾಸರಾದಾಗ. ಮುಂಚೆ ಮುಂಚೆ ಸ್ವಲ್ಪಾದ್ರೂ ದುಡ್ಡು ಕೊಡ್ತಿತ್ತು. ಈಗ ದುಡ್ಡು ಇಸ್ಕೊಳ್ಳೋಕೇ ಬಂತು ಅಂತ ತಿಳ್ಕಬೇಕು.
ನಾನು: ದುಡ್ಡು ಇಸ್ಕೊಳ್ಳೊಕ? ನಿಂಗೆಲ್ಲಿಂದ?
ರುಕ್ಮಾ: ನನ್ಮಗ ಸಂಪಾದ್ನೆ ಮಾಡ್ತಾನಲ್ಲವ್ವಾ? ಮಗ ದುಡ್ಡು ಕೊಡೋ ತಂಕ ಇಲ್ಲೇ ಜಗಲಿ ಕಾಸಿ ಕಾಸಿ ದುಡ್ಡು ಸಿಕ್ಕಿದ್ದೇ ಹೊರಟು ಹೋಗತ್ತೆ.
ನಾನು: ಸಂಪಾದ್ನೆ ಪರವಾಗಿಲ್ಲವ ಮಗಂಗೆ?
ರುಕ್ಮಾ: ಆ ದೇವ್ರ ಹಿಂಗೇ ನಡೆಸ್ಲಿ. ಏನವಾ, ನನ್ಮಗ ನಾಕು ವರ್ಷ ಬಂಬೈನಾಗೆ ಹೊಲಿಗೀ ಕಲ್ತ್ ಬಂದ ನೋಡಿ, ಭಾರಿ ಪೇಮಸ ಆಗಿದಾನೆ. ಅವ ಹೇಳಿದ್ದೇ ಮಜೂರಿ. ನಾಕೈದು ಮಿಶನು ಹಾಕಿದಾನೆ. ಒಂದು ಗಳಿಗೆ ಟೇಮಿಲ್ಲ. ಈಗ ನೀವು ನೋಡಿದ್ರೆ ಗುರ‌್ತ ಸಿಗಾಕಿಲ್ಲ. ಮದಿವಿಯಾಗಿದೆ. ಬೇರೆ ಮನಿ ಮಾಡಿದಾನೆ. ಒಳ್ಳೇದಾಯ್ತು ಬಿಡಿ. ಕಿರಿಕಿರಿ ಇಲ್ಲ. ಮಕ್ಳನ್ನ ಇಂಗ್ಲಿಷ್ ಸ್ಕೂಲಿಗೆ ಹಾಕಿದ್ದಾನೇ, ಹೂಂ...! ಮಗಳು ಬರತನಾಟ್ಯ ಏನು ಚೆನಾಗಿ ಕುಣಿತ್ತೇ ಅಂತೀರಿ...
ನಾನು: ನಿನ್ನ ಮಗಳೆಲ್ಲಿ?
ರುಕ್ಮಾ: ಅವಳೂ ಮದಿವಿಯಾಗಿ ಗಂಡನ ಮನೇಲಿ ಇದಾಳೆ. ಬೇಗ ಮದಿವಿ ಮಾಡಿ ಬಿಟ್ಟೆ, ಎಸ್ಸೆಲ್ಸಿ ಮುಗಿಸಿದ್ಕೂಡ್ಲೆ, ಹದಿನೈದು ವರ್ಷಕ್ಕೇ.
ನಾನು: ಹ್ಞ! ಅಷ್ಟು ಬೇಗ! ಕಲಿಯುವುದರಲ್ಲಿ ಜಾಣೆ ಇದ್ಲಲ್ಲೇ?
ರುಕ್ಮಾ: ಹೌದವ್ವಾ, ನನ್ನಂಗೆ ಕಾಲು ಜಾರಿದ ಮೇಲೆ ಎಳೆದು ಬಚಾವು ಮಾಡೋಕಾಗತ್ತ? ಅದ್ಕೇ ಹೆಂಗೋ ಒಪ್ಸಿ ಮದ್ವಿ ಮುಗ್ಸಿಬಿಟ್ಟೆ.
ನಾನು: ಜೀವನದಲ್ಲಿ ಇನ್ನು ಸಾಧ್ಯವೇ ಇಲ್ಲ, ಏನು ಮಾಡೋದಪ್ಪಾ ಅಂತನ್ನೋ ಸಂದರ್ಭ...
ರುಕ್ಮಾ: ಈಗೇನು ಅಂಥದ್ದಿಲ್ಲ ಬಿಡು. ಕೆಟ್ಟ ಕಾಲವೆಲ್ಲ ಮುಗಿದು ಹೋಯ್ತು. ಅಯ್ಯಮ್ಮೋ ಅದ್ನೆಲ್ಲ ನೆನೆದ್ರೆ... ಒಂಧಪ ಅಂಥದ್ದೊಂದು ಬಂದಿತ್ತವ್ವಾ... ಯಾವಾಗಂತಿ? ನನ್ಮಗ್ಳೂ ನಾಟ್ಕಕ್ಕೆ ಸೇರ‌್ಕೊತೀನೀ ಅಂತ ರಾಗ ಎಳೀತು ನೋಡು, ಆಗ! ಯ್ಯಮ್ಮೋ ದ್ಯಾವ್ರೆ, ತಾಯಿ ರಕುತ ಮಕ್ಳಿಗೆ ಹೆಂಗೆ ಬರುತ್ತೆ ನೋಡು. ಕೇಳೀ ನಂಗೊದ್ಸಲ ಯೇನು ಆಯ್ತಂತಿಲ್ಲ. ಬಾಸುಂಡೆ ಬರೋ ಹಂಗೆ ಬಾರ‌್ಸಿ ಬಾಯಿ ಮುಚ್ಚಿಸ್ದೆ. ಈಗೆಲ್ಲ ನಿನ್ನ ಕಾಲದ ಹಾಂಗಿನ ನಾಟ್ಕ ಅಲ್ಲವ್ವ ಅಂತನ್ನತ್ತೆ ಈಗ್ಲೂ. ಎಂದಿಗೂ ನಾಟ್ಕ ನಾಟ್ಕನೇ. ಹೆಂಗವ್ವ ಬೇರೆ ಆಗತ್ತೆ?
ನಾನು: ನಾಳೆ, ಅಂದ್ರೆ ಇನ್ನು ಬರೋ ದಿನಗಳು, ಹೇಗಿರ‌್ತವೆ ಅಂತಿ?
ರುಕ್ಮಾ: ಚನ್ನಾಗಿರತ್ತವ್ವ. ಚನ್ನಾಗಿರತ್ತೆ... ಬಗೆಬಗೆ ಬಟ್ಟೆ, ಬಗೆಬಗೆ ಫ್ಯಾಶನ್ನು... ಬಗೆ ಬಗೆ ಕೆಲ್ಸ. ಸಂಪಾದ್ನೆ ಮಾಡೋಕೆ ಗೊತ್ತಿದ್ದವ್ರಿಗೆ ಯಾವ ಕೊರತೆ ಬರಲ್ಲ.
ನಾನು: ಭಾರೀ ದೊಡ್ಡ ಆಸೆ ಅಂದ್ರೆ?
ರುಕ್ಮಾ: ಒಂದೇ. ಮನೀ ಇದೇ ಆದ್ರೂ ಪರವಾಗಿಲ್ಲ. ಮಗ ಕಾರಿಡ್ಬೇಕು. ರಸ್ತಿ ಮ್ಯಾಗೆ ಭರಭರಭರ ಅಂತ ಕಾರ‌್ಗಳು ಹೊಗೋವಾಗ ಯೇನು ಆಸೆ ಆಗತ್ತೇ ಅಂತ. ಆ ಕಾಲನೂ ಬರತ್ತೆ ನೋಡ್ತಿರು ಅಂತಾನೆ ಮಗ. ನೋಡೋಕೆ ದೇವ್ರ ನಂಗೆ ನೂರು ವರ್ಸ ಆಯುಸ್ಯ ಕೊಡ್ಲಿ.
(ಕಂಪನಿಯನ್ನು ಶಾಶ್ವತವಾಗಿ ಬಿಟ್ಟುಬಂದ ಸ್ವಲ್ಪ ಸಮಯದಲ್ಲೇ ವಿಷ ತಿಂದ ಜೀವ ಇದೇಯೇನು?)
ನಾನು: ಖರ್ಚಿಗೆ ಕೊಡ್ತಾನ?
ರುಕ್ಮಾ: ನಾನು ಕೇಳಲ್ಲ. ಕೆಲ್ಸಕ್ಕೆ ಹೋಗ್ಬೇಡ, ಅಸಯ್ಯ ಅಂತಾನೆ. ಕೈಕಾಲು ಗಟ್ಟಿ ಇರೋ ತಂಕ ಹೋಗೇ ಹೋಗ್ತೀನಿ, ನನ್ನ ಸುದ್ದೀಗ್ ಬರ‌್ಬೇಡ ಅಂತ, ಹಟ ನಂದು. 
ನಾನು: ... ರುಕ್ಮಾಬಾಯೀ, ನಾನೊಂದು ಕೇಳ್ತೀನಿ, ...ನೀನೂ ಇದ್ದದ್ದನ್ನು ಹೇಳ್ಬೇಕು. ಕೇಳೋಕೆ ಏನೋ, ತಳಮಳ ನಂಗೂ.
ರುಕ್ಮಾ: ಅದೇನು ಹೇಳವ್ವ.
ನಾನು: ಅಲ್ಲ, ಎಲ್ಲ ನಡೆದು ಬಹಳ ವರ್ಷಗಳೇ ಆಗಿ ಹೋದ್ರಿಂದ ಕೇಳ್ತಿದೀನಿ... ನೀನು ಸಾವ್ಕಾರ ರಂಗಪ್ಪನ ಮಗ್ಳಂತೆ... ಹೌದ?
ರುಕ್ಮಾ: ಅಯ್ಯ. ಅದ್ನ ಕೇಳೋಕೆ ಅದ್ಯಾಕೆ ಇಷ್ಟು ಹಿಂದ್ ಮುಂದ್ ನೋಡ್ತೀಯ? ಅಲ್ಲ ಅಂದೋರ‌್ಯಾರು? ಹೌದೇ. ನಮ್ಮವ್ವನೇ ಹೇಳ್ತಿತ್ತು, ಆ ಸಾವ್ಕಾರ‌್ರ ಹೆಣ್ಣುಮಕ್ಳ ಮದಿವಿ ಆಗೋವಾಗೆಲ್ಲ ನೀನೂ ಅವರಂಗೇ ಇದ್ದಿ. ನಿನ್ನ ಪಾಡು ಮಾತ್ರ ಹಿಂಗಾಯ್ತು ಅಂತ. ನಾನು ನಟೀನಾರೂ ಆಗಿ ಹೆಸ್ರು ಮಾಡಿದ್ರೆ ಅವ್ಳಿಗೆ ಸಂತೋಷ ಆಗ್ತಿತ್ತು. ಅದಕ್ಕೂ ಆ ನಾಟಕದಪ್ಪ ವಕ್ಕರ‌್ಸಿ, ನನ್ನ ಬದ್ಕನ್ನೇ ಹರ‌್ದು ಬಿಟ್ಟ.
ನಾನು: ಆ ಸಾವ್ಕಾರ‌್ರು ಏನಾದ್ರೂ ಸಹಾಯ ಗಿಹಾಯ...
ರುಕ್ಮಾ: ಎಲ್ಲಿ! (ಯಾರೂ ಇರಲಿಲ್ಲವಾದರೂ ಅತ್ತ ಇತ್ತ ನೋಡಿದಳು ರುಕ್ಮಾಬಾಯಿ. ಹಸಕುದನಿಯಲ್ಲಿ.) ಆಯಪ್ಪ ಯಂಥವಾ ಅಂತೀ... ನನ್ಮೇಲೂ ಕಣ್ಣು ಹಾಕಿದ್ದಾ... ಇವತ್ತು ಹೇಳ್ತಿದೀನಿ ಕೇಳೂ... ಯಾರ‌್ಹತ್ರಾನೂ ಬಾಯಿ ಬಿಟ್ಟಿಲ್ಲ ನಾನು ಈವರ‌್ಗೂ. ನಮ್ಮವ್ವನ ಹತ್ರಾನೂ...  ಅವ್ವಾ!! ನಾನು ಹೆದ್ರಿ ಮೂರ‌್ಮುಷ್ಟಿ ಆಗ್ಬಿಟ್ಟೆ. ಇನ್ನೂ ಸಣ್ಹುಡ್ಗಿ ಕಣವ್ವಾ ಆಗ. ಏನುಎತ್ತ ತಿಳಿದಿರ‌್ಲಿಲ್ಲ. ನನ್ಗೀ ಮನೀನೂ ಬ್ಯಾಡಾ, ಈ ಅವ್ವನೂ ಬ್ಯಾಡಾ, ಈ ಊರೇ ಬ್ಯಾಡಾ ಅಂತ ಮನೀಬಿಟ್ಟು ಓಡಿ ಹೋದೆ, ಗ್ರಾಚಾರಕ್ಕೆ ಒಂದು ನಾಟ್ಕ ಕಂಪ್ನಿ ಸಿಕ್ತು, ಸೇರ‌್ಕಂಡೆ. ನಾಟ್ಕ ಕಂಪ್ನಿ ಯಾಕೆ ಸೇರ‌್ಕಂಡೆ ಅಂತೀ, ಇದ್ಕೇ. ಯಾವ ಸುಟ್ಟ ಇಷ್ಟಗಿಷ್ಟಯೇನೂ ಅಲ್ಲ. ಎಲ್ಲ ಸುಳ್ಳೇಯ... 
(ರುಕ್ಮಾಬಾಯಿ ಬಾಯಿಗೆ ಸೆರಗು ಹಿಡಿದು ಬಿಕ್ಕಿದಳು)
ನಾನು: ...
ರುಕ್ಮಾ: ಅಲ್ಲಿಯೂ ನನ್ನ ಅದೃಷ್ಟಕ್ಕೆ ಏನೇನೋ ಆಗ್ಹೋಯ್ತು. ಪಿರಾಯ ಅನ್ನೋದು ಕೆಟ್ಟದು ಅವ್ವ. ಏನೇ ಹೇಳು.
ನಾನು: ... ಎಲ್ಲಾ ತೊರೆದು ಇಲ್ಲಿಗೆ ಬಂದ ಮೇಲೆ, ಪ್ರಾಯದವ್ಳೇ ನೀನು... ಚೆನ್ನಾಗಿದ್ದೆ ಬೇರೆ... ಕಷ್ಟ ಆಗಲಿಲ್ಲವೆ?
ರುಕ್ಮಾ: ಆಗ್ದೆ? ಚಂದಾಗಿರೋದೇ ಮೊದ್ಲ ತಪ್ಪು ಅವ್ವಾ. ಒಂಟಿ ಹೆಣ್ಣಾದವ್ಳ ಹೆಂಗಿರಬೇಕಂದ್ರೆ ನೋಡಿದವ್ರ ಹೆದರೋ ಹಂಗೆ ತಲೆ ಎತ್ತಿ ನಡೀಬೇಕು, ತಗ್ಗಿಸ್ಲೇ ಬಾರ‌್ದು. ತಗ್ಗಿಸಿದ್ಯಾ, ಒಂದು ಕೈ ನೋಡೋಣ ಅಂತ ಸುತ್ತುವರ‌್ಯೋ ಹಡಬೆಗಳು ಎಷ್ಟು ಬೇಕು. ಸಾಯ್ತವೆ ಎಲ್ಲೋ... ಅಕ್ಮಹಾದೇವಿ ನಾಟ್ಕದಾಗೆ ನಂಗೊಂದು ಪಾರ್ಟು ಇತ್ತು. ಅದರ ಗುಂಗಲ್ಲಿ ಕಂಪ್ನೀಲಿರೋ ಆ ಅವ್ನೇ ಸಿವ ಅನ್ಸಿಬಿಡ್ತು. (ತಪ್ತ ನಗೆ) ಅವ್ನೋ! ಬೇಡಿ ತಿಂಬವ. ಹಿಂಗೆಲ್ಲ ಮಾಡ್ಕಂಡೆ ಅಂತ ಅವ್ವ ಒಂದ್ಸಲ ಸಿಟ್ಕೊಂಡು ಚಪ್ಲಿ ಎತ್ತಿ ಹೊಡ್ಯೋಕೆ ಬಂತು. ನಾನು ಸುಮ್ನಿರ‌್ಬೇಕ ಬೇಡ್ವ? ಬದ್ಲು, ನೀನು ಮಾಡಿದ್ದನ್ನೇ ನಾನೂ ಮಾಡ್ದೆ. ನಿನ್ನಿಂದ್ಲೇ ಬಂತು ಎಲ್ಲ ಎಂದೆ! ಕೇಳು! ಪ್ರಾಯದ ದೌಲತ್ತು ಆಗ!
ನಾನು: ...
ರುಕ್ಮಾ: ಇನ್ನೂ ನನ್ನ್ ಮನೀ ಬಾಗ್ಲು ಬಿಟ್ಟಿಲ್ಲ ದರಿದ್ರದಂವ. ನಾವು ಯಾರೂ ಮನೇಲಿಲ್ದ ಹೊತ್ನಾಗೇ ಹೊಂಚಿ ಬಂದು ಕೂತು ಬಿಡೋಂವ. (ಪಿಸುವಾಗಿ) ಸತ್ಯ ಹೇಳ್ತೀನವ್ವಾ, ಮಗ್ಳಿಗೆ ಹಟಾಕಟ್ಟಿ ಬೇಗ ಮದಿವಿ ಮಾಡಿದ್ದೂ ಯಾಕೇಂತ ಮಾಡ್ದೆ? ಇನ್ನೊಬ್ರ ಹತ್ರ ಹೇಳಾಂಗಿಲ್ಲ, ಬಿಡಾಂಗಿಲ್ಲ ಅಂಥಾ ಪುಕ್ಕು ಹುಟ್ಕಂಬಿಟ್ಟಿತ್ತು...
ನಾನು: ...
ರುಕ್ಮಾ: ಯಾಕವ್ವ ಕಣ್ಣಲ್‌ಲ್ ನೀರು ಹಾಕ್ತಿ. ತಗೆ... ಚಂದಾಕಿದ್ದೀಯ? ಯಜಮಾನ್ರು ಮಕ್ಳು ಎಲ್ಲ ಹೆಂಗವ್ರೆ? ...
***
(ಗಂಟೆ ಸಂಜೆ ಐದೂವರೆ ದಾಟುತ್ತಿದೆ. ಕೂಲಿ, ಮನೆಗೆಲಸ ಮುಗಿಸಿ ಮರಳಿದ ಆಚೀಚಿನವರು ಕುತೂಹಲದಿಂದ ಬಂದು ನೋಡುತಿದ್ದಾರೆ. ಈಚೆ, ಯಾವ ಮಾಯಕದಲ್ಲಿ ಜನ ಕಳಿಸಿದ್ದಳೋ, ಒಬ್ಬ ಎಳನೀರು ತಂದು ಒಡೆಯುತ್ತಿದ್ದಾನೆ)
ರುಕ್ಮಾ: ತಗೊಳ್ಳವ್ವ, ಮಳೀಬರೋ ಮುಂಚಿನ ಉರೀ ನೋಡು ಹೆಂಗಿದೆ! ಕುಡಿ.
ಕುಡಿದು, ಬರಲೆ ಎಂದೆ. ಇನ್ನೊಂದು ಸಲ ಪೋನು ಮಾಡಿ ಬಾರವ್ವಾ... ರತ್ನಂಗೆ ರಾಮಣ್ಣಂಗೆ ಕರ್ಸ್ತೀನೀ... ಅವ್ರೆ ನೋಡ್ದಂಗಾಗತ್ತೇ. 
ನಾನು: ಆಯ್ತು ರುಕ್ಮಾ ಬಾಯಿ, ಹಾಗೇ ಮಾಡ್ತೀನಿ, ನಾನೂ ಅವ್ರಿಬ್ಬರನ್ನ ನೋಡದೆ ಸುಮಾರು ವರ್ಷನೇ ಆಯ್ತು...
ಮಾತು ಮುಗಿಸುವುದರೊಳಗೆ ಅಲ್ಲಿರುವ ಹುಡುಗನೊಬ್ಬ ಒಂದು ಚೀಟಿಯಲ್ಲಿ ಉಮೇದಿನಲ್ಲಿ ಬಡಬಡನೆ ನಂಬರು ಬರೆದು ಕೊಟ್ಟ.
ರುಕ್ಮಾ: (ಹಿಗ್ಗಿಂದ) ನಮ್ಮ ರಾಮಣ್ಣಂದು, ಮಬೈಲ್ ನಂಬರು... ಅದ್ಕೇ ಮಾಡು, ನಂಗೆ ತಲುಪತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT