ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ಕೋ ಸನ್ಮತಿ ದೇ ಭಗವಾನ್!

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

ಸಿಟ್ಟು, ಅಳು, ಆಕ್ರೋಶ, ಪ್ರತೀಕಾರದ ಕೆಚ್ಚು ಏಕಕಾಲಕ್ಕೆ ಪ್ರಣಯ ನಗರಿ ಪ್ಯಾರಿಸ್‌ನಲ್ಲಿ ಪ್ರಕಟಗೊಳ್ಳುತ್ತಿದೆ. ಈ ಹಿಂದೆ ಕೂಡ ಪ್ಯಾರಿಸ್ ಹೀಗೆಯೇ ವರ್ತಿಸಿತ್ತು. ಎರಡನೇ ಮಹಾಸಮರದ ವೇಳೆ ಜರ್ಮನ್ ರಕ್ಷಣಾದಳದ ಹಿಡಿತದಲ್ಲಿದ್ದ ಪ್ಯಾರಿಸ್ ನಗರವನ್ನು, ಅಮೆರಿಕ ಸೇನೆಯ ಸಹಾಯದೊಂದಿಗೆ ಫ್ರಾನ್ಸ್ ಪಡೆ ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ, ಆಡಳಿತದ ಹೊಣೆ ಹೊತ್ತ ಫ್ರಾನ್ಸ್ ಸೇನೆಯ ದಂಡನಾಯಕ ಚಾರ್ಲ್ಸ್ ಡ ಗೋಲ್ ಐತಿಹಾಸಿಕ ಭಾಷಣ ಮಾಡಿದ್ದರು. ‘Paris! Paris outraged! Paris broken! Paris martyred! But Paris liberated!’ ಅಂದು ಪ್ಯಾರಿಸ್‌ನಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಈಗ ಅರವತ್ತು ವರ್ಷಗಳ ತರುವಾಯ ಮತ್ತೆ ಪ್ಯಾರಿಸ್ ರಕ್ತಸಿಕ್ತವಾಗಿದೆ ಮತ್ತು ಆಕ್ರೋಶದಿಂದ ಕುದಿಯುತ್ತಿದೆ.

ಹಾಗೆ ನೋಡಿದರೆ, ಹತ್ತು ತಿಂಗಳ ಅವಧಿಯಲ್ಲಿ ಫ್ರಾನ್ಸ್ ತಿಂದ ಎರಡನೇ ಹೊಡೆತ ಇದು. ವರ್ಷಾರಂಭದಲ್ಲಿ ‘ಚಾರ್ಲಿ ಹೆಬ್ಡೋ’ ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆಸಿದ್ದ ಉಗ್ರರು, ಪ್ರವಾದಿಯ ವ್ಯಂಗ್ಯಚಿತ್ರವನ್ನು ಪತ್ರಿಕೆ ಪ್ರಕಟಿಸಿತ್ತು ಎಂಬ ಕ್ಷುಲ್ಲಕ ಕಾರಣಕ್ಕಾಗಿ 11 ಜನರನ್ನು ಹತ್ಯೆಮಾಡಿದ್ದರು. ಕಳೆದ ಶುಕ್ರವಾರ ನಡೆದ ದಾಳಿಯಲ್ಲಿ 129 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ಹೀಗೆ ಪದೇಪದೇ ಉಗ್ರರ ಕೆಂಗಣ್ಣಿಗೆ ಗುರಿಯಾಗುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರವೂ ರಾಚುತ್ತಿದೆ. ಫ್ರಾನ್ಸ್, ಜಿಹಾದಿಗಳ ವಿರುದ್ಧ ಯುದ್ಧ ಸಾರಿರುವ ದೇಶ. ಸುಮಾರು 10 ಸಾವಿರ ಫ್ರಾನ್ಸ್ ಸೈನಿಕರನ್ನು ಉಗ್ರರ ನಿಗ್ರಹಕ್ಕಾಗಿ ಹಲವು ದೇಶಗಳಲ್ಲಿ ಫ್ರಾನ್ಸ್ ನಿಯೋಜಿಸಿದೆ. 3 ಸಾವಿರ ಸೈನಿಕರು ಪಶ್ಚಿಮ ಆಫ್ರಿಕಾ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 5 ಸಾವಿರ ಸೈನಿಕರು ಇರಾಕ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದಾರೆ. ಆಫ್ರಿಕಾದ ಮಾಲಿ, ಲಿಬಿಯಾ ಮತ್ತು ಸಿರಿಯಾಗಳಲ್ಲಿ ಅಲ್‌ಕೈದಾ  ಶಕ್ತಿ ಕುಂದುವಂತೆ ಮಾಡುವಲ್ಲಿ ಕೂಡ ಫ್ರಾನ್ಸ್ ಪ್ರಮುಖ ಪಾತ್ರ ವಹಿಸಿತ್ತು.

ಈ ನಡುವೆ ಫ್ರಾನ್ಸ್ ಅಧ್ಯಕ್ಷ ಒಲಾಂಡ್, ‘ಪರ್ಶಿಯನ್ ಗಲ್ಫ್ ಪ್ರದೇಶದಲ್ಲಿ ಐಎಸ್ ವಿರುದ್ಧ ಕಾರ್ಯಾಚರಣೆಗೆ ಸೇನೆಯನ್ನು ಕಳುಹಿಸಲಾಗುವುದು’ ಎಂಬ ಹೇಳಿಕೆ ನೀಡಿದ್ದರು. ಜೊತೆಗೆ ಜಾತ್ಯತೀತ ದೇಶ ಎನಿಸಿಕೊಂಡಿರುವ ಫ್ರಾನ್ಸ್, ತನ್ನ ದೇಶದೊಳಗೆ ಸಮಾನ ನಾಗರಿಕ ಸಂಹಿತೆಯ ನಿಯಮಗಳನ್ನು ಜಾರಿಗೊಳಿಸಿತ್ತು. ಇದು ಇಸ್ಲಾಂನ ಪಾರಂಪರಿಕ ಆಚರಣೆ, ಪದ್ಧತಿಗಳಿಗೆ ತೊಡಕಾಗುತ್ತದೆ ಎಂಬ ವಾದವೂ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದ ಫ್ರಾನ್ಸ್ ಮೇಲೆ ದಾಳಿ ಮಾಡುವುದಾಗಿ ಐಎಸ್ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಎಚ್ಚರಿಸುತ್ತಲೇ ಬಂದಿದ್ದವು. ಬಹುಶಃ ಫ್ರಾನ್ಸ್, ಇಷ್ಟು ದೊಡ್ಡ ಅವಘಡವನ್ನು ಊಹಿಸಿರಲಿಲ್ಲ.

ಪ್ಯಾರಿಸ್ ಘಟನೆಯ ಬಳಿಕ ನಡೆದಿರುವ ಉತ್ತಮ ಬೆಳವಣಿಗೆ ಎಂದರೆ, ಬಲಿಷ್ಠ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಏಕದನಿಯಲ್ಲಿ ಮಾತನಾಡುತ್ತಿವೆ ಎನ್ನುವುದು. ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್, ಪ್ಯಾರಿಸ್ ಘಟನೆಯನ್ನು ‘Piecemeal of Third World War’ ಎಂದೇ ವ್ಯಾಖ್ಯಾನಿಸಿದ್ದಾರೆ. ಜಿ 20 ಶೃಂಗಸಭೆಯಲ್ಲಿ ಭಯೋತ್ಪಾದನೆಯ ವಿರುದ್ಧದ ಸಂಘಟಿತ ಹೋರಾಟದ ಅನಿವಾರ್ಯದ ಬಗ್ಗೆ ಚರ್ಚೆಗಳು ನಡೆದಿವೆ. ಫ್ರಾನ್ಸ್ ಆಗಲೇ ತೊಡೆತಟ್ಟಿಯಾಗಿದೆ. ಫ್ರಾನ್ಸ್ ಸರ್ಕಾರ ಐಎಸ್ ಉಗ್ರರನ್ನು ನಿರ್ನಾಮ ಮಾಡುವ ಸಂಕಲ್ಪ ತೊಟ್ಟು, ಈಗಾಗಲೇ ಉಗ್ರ ನೆಲೆಗಳ ಮೇಲೆ ಪ್ರತಿದಾಳಿ ಮಾಡುವ, ತನ್ನ ದೇಶದಲ್ಲಿ ಅಡಗಿರಬಹುದಾದ ಇತರ ಉಗ್ರರನ್ನು ಹೊರತೆಗೆಯುವ ಕಾರ್ಯಾಚರಣೆಗೆ ಇಳಿದಿದೆ. ಆ ರಭಸ ಹೇಗಿದೆ ಎಂದರೆ ಪ್ಯಾರಿಸ್ ದಾಳಿಯಾದ ಮರುದಿನವೇ ಫ್ರಾನ್ಸ್ ಪೊಲೀಸರು 168 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ 23 ಜನರನ್ನು ಬಂಧಿಸಿಬಿಟ್ಟರು. ಜೊತೆಗೆ ಸಿರಿಯಾದ ಐಎಸ್ ಉಗ್ರ ನೆಲೆಗಳ ಮೇಲೂ ವೈಮಾನಿಕ ದಾಳಿಯನ್ನು ಫ್ರಾನ್ಸ್ ಮುಂದುವರೆಸಿದೆ. ಅಮೆರಿಕವೂ ಜೊತೆಗೂಡಿದೆ. ರಷ್ಯಾ ತೋಳೇರಿಸಿದೆ. ಭಾರತವೂ ಫ್ರಾನ್ಸ್ ಬೆಂಬಲಕ್ಕೆ ನಿಂತಿದೆ.

ಆದರೆ ಮತೀಯ ಉಗ್ರವಾದವನ್ನು ಹತ್ತಿಕ್ಕುವ ಕೆಲಸ ಸುಲಭವೇ? ಜಗತ್ತಿನ ಬಲಾಢ್ಯ ರಾಷ್ಟ್ರಗಳು ಸಾಮರಿಕ ಶಕ್ತಿ ಬಳಸಿ ಐಎಸ್ ಮೇಲೆ ದಾಳಿಗೆ ಮುಂದಾದರೂ, ಉಗ್ರವಾದದ ಬೇರು ಕೀಳಲು ಸಂಘಟಿತ ಪ್ರಯತ್ನದ ಅಗತ್ಯವಿದೆ ಎನಿಸುತ್ತದೆ. ಉಗ್ರರ ನಿಗ್ರಹಕ್ಕೆ ವಿಶ್ವ ಸಂಸ್ಥೆ ರೂಪಿಸಿದ ಹಲವು ಯೋಜನೆಗಳು, ಒಪ್ಪಂದಗಳು ವಿಫಲಗೊಂಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಮುಖ್ಯವಾಗಿ ಭಯೋತ್ಪಾದನೆಗೆ ಸ್ಪಷ್ಟ ವ್ಯಾಖ್ಯಾನ ನೀಡುವಲ್ಲಿಯೇ ಬಲಾಢ್ಯ ರಾಷ್ಟ್ರಗಳು ಸೋತಿವೆ. ಸಂಘಟಿತ ಹೋರಾಟಕ್ಕೆ ಸ್ವಹಿತಾಸಕ್ತಿ, ಪ್ರತಿಷ್ಠೆ ಅಡ್ಡ ಬಂದಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಭಯೋತ್ಪಾದನೆಯ ವಿಷಯದಲ್ಲಿ ಅನುಸರಿಸುತ್ತಿರುವ ದ್ವಿಮುಖ ನೀತಿ ಹಲವು ಬಾರಿ ಚರ್ಚೆಗೆ ಒಳಗಾಗಿದೆ.

2013ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ‘ಜಾಗತಿಕ ಉಗ್ರವಾದ’ ಎಂಬ ಚರ್ಚೆಯಲ್ಲಿ, ‘ಕೆಲವು ರಾಷ್ಟ್ರಗಳು ಭಯೋತ್ಪಾದನೆಯ ವಿಷಯದಲ್ಲಿ ನುಡಿದಂತೆ ನಡೆಯುತ್ತಿಲ್ಲ, ಒಂದೆಡೆ ಉಗ್ರವಾದವನ್ನು ಖಂಡಿಸುತ್ತಾ, ಮತ್ತೊಂದೆಡೆ ಭಯೋತ್ಪಾದನೆಯನ್ನು ಪೋಷಿಸುತ್ತಾ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವನ್ನು ನೀಡುತ್ತಿವೆ’ ಎಂದು ಉಗ್ರವಾದದಿಂದ ತೀವ್ರವಾಗಿ ನೊಂದಿರುವ ಇಸ್ರೇಲ್ ಮತ್ತು ಭಾರತ ಅಭಿಪ್ರಾಯಪಟ್ಟಿದ್ದವು. ಇಸ್ರೇಲ್ ಪ್ರತಿನಿಧಿ ‘There is an elephant in the room in this debate’ ಎಂದು ಕುಟುಕಿದ್ದರು.

‘ಭಯೋತ್ಪಾದನೆಯನ್ನು ಬೆಂಬಲಿಸುವವರು ಯಾರು, ವಿರೋಧಿಸುವವರು ಯಾರು ಎಂಬುದನ್ನು ನಿಖರವಾಗಿ ಗುರುತಿಸುವುದು ಇಂದಿನ ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸುತ್ತಿರುವುದು ಅದೇ ಕಾರಣಕ್ಕೆ. ಐಎಸ್, ಅಲ್‌ಕೈದಾ, ಲಷ್ಕರ್ ಎ ತಯಬಾ, ಹಿಜ್ಬುಲ್ ಮುಜಾಹಿದೀನ್ ಮುಂತಾದ ಸಂಘಟನೆಗಳಿಗೆ ಸಿಗುತ್ತಿರುವ ಹಣಕಾಸು ಹಾಗೂ ತಾಂತ್ರಿಕ ನೆರವುಗಳ ಮೂಲ ಯಾವುದು ಎಂದು ನೋಡಿದರೆ, ಸೌದಿ ಅರೇಬಿಯಾ, ಕತಾರ್ ಮುಂತಾದ ತೈಲ ಶ್ರೀಮಂತ ದೇಶಗಳಿಂದ ಹಣ ಹರಿದು ಬರುತ್ತಿರುವುದು ಗೋಚರಿಸುತ್ತದೆ. ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿರುವುದು, ಉಗ್ರರ ತರಬೇತಿ ಕೇಂದ್ರಗಳನ್ನು ಪೋಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸ್ವಹಿತಾಸಕ್ತಿಯ ಕಾರಣದಿಂದ ಇಂತಹ ರಾಷ್ಟ್ರಗಳಿಗೆ ಕಠಿಣ ಸಂದೇಶ ನೀಡಲು ವಿಶ್ವದ ಬಲಿಷ್ಠ ಶಕ್ತಿಗಳು ಹಿಂದೇಟು ಹಾಕಿದರೆ, ಉಗ್ರವಾದವನ್ನು ನಿಗ್ರಹಿಸುವ ಮಾತು ಮಾತಾಗಿಯಷ್ಟೇ ಉಳಿಯುತ್ತದೆ. ಹಾಗಾಗಿಯೇ ಉಗ್ರವಾದವನ್ನು ತೊಡೆದು ಹಾಕಲು ಸಾಮರಿಕ ಶಕ್ತಿಯೊಂದಿಗೆ, ಸಂಘಟಿತ ರಾಜಕೀಯ ಇಚ್ಛಾಶಕ್ತಿ ಮತ್ತು ಮತೀಯ ಸುಧಾರಣೆಯ ಅಗತ್ಯವೂ ಇದೆ.

ಸಾಮಾನ್ಯವಾಗಿ ಭಯೋತ್ಪಾದಕ ಕೃತ್ಯಗಳಾದಾಗ ‘ಇದು ದಾರಿತಪ್ಪಿದ ಯುವಕರು ಮಾಡುತ್ತಿರುವ ಕೃತ್ಯ, ಭಯೋತ್ಪಾದನೆ ಮತ್ತು ಧರ್ಮ ಎರಡನ್ನೂ ಪ್ರತ್ಯೇಕಿಸಿ ನೋಡಬೇಕು’ ಎಂಬ ಮಾತುಗಳು ಬರುತ್ತವೆ. ಆದರೆ ಯುವಕರು ದಾರಿ ತಪ್ಪುತ್ತಿರುವುದು ಹೇಗೆ ಮತ್ತು ಅದಕ್ಕೆ ಕಾರಣವಾಗುತ್ತಿರುವ ಅಂಶ ಯಾವುದು ಎನ್ನುವ ಬಗ್ಗೆ ಚರ್ಚಿಸಲು ಅಷ್ಟಾಗಿ ಯಾರೂ ಆಸಕ್ತಿ ತೋರುತ್ತಿಲ್ಲ. ಹಲವು ವೇಳೆ ವ್ಯವಸ್ಥೆಯ ನಿರ್ಲಕ್ಷ್ಯ, ತಾರತಮ್ಯ, ಬಡತನ, ಅನಕ್ಷರತೆಯೇ ಉಗ್ರವಾದಕ್ಕೆ ಕಾರಣ, ಪಶ್ಚಿಮ ದೇಶಗಳೇ ಉಗ್ರರನ್ನು ಸೃಷ್ಟಿಸಿದ್ದು ಎಂಬ ವಾದವನ್ನಷ್ಟೇ ಮುಂದಿಡಲಾಗುತ್ತದೆ. ಆದರೆ ವಿದ್ಯಾವಂತ ಯುವಕರೂ ಐಎಸ್ ಸೆಳೆತಕ್ಕೆ ಒಳಗಾಗುತ್ತಿದ್ದಾರೆ, ಜಾಲತಾಣಗಳ ಮೂಲಕವೇ ಐಎಸ್ ತನ್ನ ಕಾರ್ಯಕ್ಷೇತ್ರವನ್ನು (ವಿಲಾಯತ್) ವಿಸ್ತರಿಸಿಕೊಳ್ಳುತ್ತಿದೆ ಎನ್ನುವುದನ್ನು ಹೇಗೆ ಗ್ರಹಿಸಬೇಕು? ಈ ಬಗ್ಗೆ ಲೇಖಕಿ ತಸ್ಲಿಮಾ ನಸ್ರೀನ್  ‘ಪಶ್ಚಿಮ ದೇಶಗಳು ಇಸ್ಲಾಮಿಕ್ ಉಗ್ರರ ಬೆಳವಣಿಗೆಗೆ ಕಾರಣ ಎಂಬ ವಾದವನ್ನು ಎಷ್ಟು ದಿನ ಹೇಳುತ್ತೀರಿ? ಇಸ್ಲಾಂ, ಇಸ್ಲಾಮಿಕ್ ಉಗ್ರರನ್ನು ಸೃಷ್ಟಿಸುತ್ತಿದೆ’ ಎಂದು ನಿರ್ಭಿಡೆಯಿಂದ ಟ್ವೀಟ್ ಮಾಡಿದ್ದಾರೆ. ಇಂತಹ ಆತ್ಮಾವಲೋಕನದ ಮಾತುಗಳು ಮುಸ್ಲಿಂ ಸಮುದಾಯದಿಂದಲೇ ಬಂದರಷ್ಟೇ, ಸಮಸ್ಯೆಯ ಮೂಲ ಮತ್ತು ಪರಿಹಾರದ ದಾರಿ ಸ್ಪಷ್ಟವಾಗುತ್ತದೆ.

ಜೊತೆಗೆ, ತೀವ್ರವಾದವನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರು ಹೊರಬೇಕಾದ ಬಹುದೊಡ್ಡ ಜವಾಬ್ದಾರಿಯಿದೆ. ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ ಈ ನಾಲ್ಕು ವರ್ಷದಲ್ಲಿ ಸುಮಾರು 50 ಸಾವಿರ ಯುವಕರು, ನೂರಕ್ಕೂ ಹೆಚ್ಚು ದೇಶಗಳಿಂದ ಇರಾಕ್ ಮತ್ತು ಸಿರಿಯಾಗೆ ತೆರಳಿ ಐಎಸ್ ಸೇರ್ಪಡೆಗೊಂಡಿದ್ದಾರೆ. ಕುರಾನ್ ಸಂದೇಶಗಳನ್ನು ಅಪವ್ಯಾಖ್ಯಾನಿಸಿ ದ್ವೇಷ ಬಿತ್ತುವ ಕಾರ್ಯ ಉಗ್ರ ಸಂಘಟನೆಗಳಿಂದ ನಡೆದಿರುವಾಗ, ಮುಸ್ಲಿಂ ಸಮಾಜದ ಚಿಂತಕರು, ಧಾರ್ಮಿಕ ಗುರುಗಳು ಇಸ್ಲಾಂನ ಶಾಂತಿ ಸಂದೇಶಗಳನ್ನು ಪ್ರಚುರ ಪಡಿಸಬೇಕಾದ ಅಗತ್ಯವಿದೆ. ಇಸ್ಲಾಂ ಬಹುತ್ವವನ್ನು ಮತ್ತು ಸಹಬಾಳ್ವೆಯನ್ನು ಗೌರವಿಸಲು ಹೇಳುತ್ತದೆ.
ಆತ್ಮಹತ್ಯಾ ದಾಳಿಗಳು ಅಪರಾಧ. ಜಿಹಾದ್ ಎನ್ನುವುದು ಪ್ರತಿ ವ್ಯಕ್ತಿ ಮತ್ತಷ್ಟು ಎತ್ತರಕ್ಕೆ ಏರಲು, ಉತ್ತಮ ಮುಸ್ಲಿಂ ಆಗಲು ಕ್ರಮಿಸಬೇಕಾದ ಕಠಿಣ ಹಾದಿ ಎಂಬುದನ್ನು ಯುವಕರಿಗೆ ಮನವರಿಕೆ ಮಾಡಿಕೊಡಬೇಕಿದೆ. ಸುಧಾರಣೆಗಳಿಗೆ ತೆರೆದುಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಆಶಯಗಳನ್ನು ಎತ್ತಿಹಿಡಿಯಬೇಕಿದೆ. ಆ ಮೂಲಕವಷ್ಟೇ ಮುಸ್ಲಿಂ ಸಮುದಾಯ, ಅನುಮಾನದ ಕಣ್ಣುಗಳಿಂದ ಮುಕ್ತವಾಗಲು ಸಾಧ್ಯ. ಹಲವು ಮುಸ್ಲಿಂ ಧಾರ್ಮಿಕ ಮುಖಂಡರು ಈ ನಿಟ್ಟಿನಲ್ಲಿ ಈಗಾಗಲೇ ದಿಟ್ಟಹೆಜ್ಜೆ ಇಟ್ಟಿರುವುದು ಶ್ಲಾಘನೀಯ. ಅಂತಹವರ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ.

ಇತ್ತೀಚೆಗೆ ಅರ್ಥಶಾಸ್ತ್ರಜ್ಞ ಮತ್ತು ಚಿಂತಕ ಎಸ್.ಗುರುಮೂರ್ತಿ ಮತೀಯ ಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾ, ಕೇವಲ ವಿವಿಧ ಮತಾನುಯಾಯಿಗಳ ನಡುವೆ ಸಾಮರಸ್ಯವಿದ್ದರೆ ಶಾಂತಿ ಸ್ಥಿರವಾಗಲಾರದು, ಮತಗಳ ನಡುವೆ ಮತ್ತು ಆಯಾ ಮತಗಳು ಎತ್ತಿಹಿಡಿಯುವ ದೇವರ ನಡುವೆಯೂ ಸಂಬಂಧ ಏರ್ಪಡಬೇಕಾದ ಅವಶ್ಯಕತೆ ಇದೆ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಅವರ ಮಾತು ದಿಟವೆನಿಸಿತು. ಪೂರಕವಾಗಿ ನಮ್ಮೂರಿನ ಧಾರ್ಮಿಕ ಆಚರಣೆಗಳು ನೆನಪಿಗೆ ಬಂದವು. ನನ್ನ ಊರಾದ ಮಂಡ್ಯ ಜಿಲ್ಲೆಯ ಮದ್ದೂರಿನ ಗ್ರಾಮ ದೇವತೆ ಮದ್ದೂರಮ್ಮ. ಆ ದೇವಿಗೆ ಭಕ್ತರು ಮಾಂಸಾಹಾರವನ್ನು ಅರ್ಪಿಸುತ್ತಾರೆ. ಆ ದೇವಾಲಯಕ್ಕೆ ಅನತಿ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ನರಸಿಂಹಸ್ವಾಮಿ, ಸಿಂಹದ ಮುಖವಿದ್ದರೂ ಶಾಖಾಹಾರಿಯಾಗಿ ಉಳಿದಿದ್ದಾನೆ. ಈ ಎರಡೂ ದೇವರ ನಡುವೆ ಅಣ್ಣ ತಂಗಿಯ ಸಂಬಂಧವನ್ನು ಜನರು ಕಲ್ಪಿಸಿಕೊಂಡಿದ್ದಾರೆ. ಎರಡೂ ಜಾತ್ರೆಗಳು ಒಟ್ಟಿಗೇ ನಡೆಯುತ್ತವೆ. ಮುದ್ರಿತವಾಗುವ
ಕರಪತ್ರವೂ ಒಂದೇ. ಯಾವುದೇ ಘರ್ಷಣೆಯಿಲ್ಲದೆ  ಪರಸ್ಪರರ ಪಾಲ್ಗೊಳ್ಳುವಿಕೆಯಿಂದ ಹಬ್ಬ, ಆಚರಣೆಗಳು ಸರಾಗವಾಗಿ ನಡೆಯುತ್ತವೆ. ಇಂತಹ ಹಲವು ನಿದರ್ಶನಗಳು ಭಾರತದ ಪ್ರತೀ ಊರಿನಲ್ಲೂ ಕಾಣಸಿಗುತ್ತವೆ. ಬಹುಶಃ ದೇವರ ನಡುವೆಯೇ ಇಂತಹ ಸಂಬಂಧಗಳು ಏರ್ಪಟ್ಟಾಗ, ಅನುಯಾಯಿಗಳ ನಡುವೆ ಸಾಮರಸ್ಯ ಸುಲಭ ಎನಿಸುತ್ತದೆ. 

ಆದರೆ ವಿವಿಧ ಮತಗಳ ನಡುವೆ ಇಂತಹ ಹೊಂದಾಣಿಕೆ ಸಾಧ್ಯವಾಗುವುದೇ? ಸೆಮೆಟಿಕ್ ಮತಗಳ ಏಕದೇವತಾ ಉಪಾಸನೆ, ‘ನನ್ನ ದೇವರೇ ಶ್ರೇಷ್ಠ’ ಎನ್ನುವ ಭಾವನೆ ಜಗತ್ತಿನ ಅಶಾಂತಿಗೆ ಬಹುಮಟ್ಟಿಗೆ ಕಾರಣವಾಗಿರುವುದನ್ನು ಇತಿಹಾಸ ಮತ್ತು ವರ್ತಮಾನದಿಂದ ನಾವು ಗುರುತಿಸಬಹುದು. ವ್ಯಕ್ತಿಯ ನೆಲೆಯಲ್ಲಿ ‘ನನ್ನ ದೇವರೇ ಶ್ರೇಷ್ಠ’ ಎಂಬ ಭಾವನೆ ಎಲ್ಲರಲ್ಲೂ ಇದ್ದರೂ, ನಮ್ಮ ಧಾರ್ಮಿಕ ಪಠ್ಯಗಳಾದರೂ ‘ಎಲ್ಲ ದೇವರೂ ಒಬ್ಬನೇ’ ಎನ್ನುವ ಉದಾರ ಚಿಂತನೆಯನ್ನು ಬೋಧಿಸಬೇಕಿದೆ. ಮಹಾತ್ಮ ಗಾಂಧಿ  ಭಜಿಸುತ್ತಿದ್ದರಲ್ಲಾ ‘ಈಶ್ವರ ಅಲ್ಲಾ ತೇರೇ ನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್’, ಈ ಆಶಯವಷ್ಟೇ ಜಗತ್ತನ್ನು ನೆಮ್ಮದಿಯಾಗಿಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT