ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯತೆಯ ಸಂಪ್ರದಾಯ ಮುರಿದ ಸಂದರ್ಭ

Last Updated 13 ಆಗಸ್ಟ್ 2017, 18:28 IST
ಅಕ್ಷರ ಗಾತ್ರ

ನಮ್ಮಲ್ಲಿ ವಿಚಾರವೊಂದರಲ್ಲಿ ಏನು ಹೇಳಲಾಗಿದೆ ಎಂಬುದಕ್ಕಿಂತ ಅದನ್ನು ಹೇಳಿದವರು ಯಾರು ಎಂಬುದೇ ಬಹುತೇಕ ಸಂದರ್ಭಗಳಲ್ಲಿ ಹೆಚ್ಚು ಮುಖ್ಯವಾಗಿರುತ್ತದೆ. ಭಾರತದ ಮಟ್ಟಿಗೆ ಅತ್ಯಂತ ವಿಚಿತ್ರವಾದ ಸಂಗತಿಗಳಲ್ಲಿ ಇದೂ ಒಂದು. ವಿಶ್ವದ ಬಹುತೇಕ ಕಡೆಗಳಲ್ಲಿ ಕೂಡ ಇದೇ ಪರಿಸ್ಥಿತಿ ಇದೆ ಎಂಬುದು ನಿಜ. ನಮ್ಮಲ್ಲಿ ವಿವಾದಾತ್ಮಕ ವಿಚಾರವೊಂದನ್ನು ಒಬ್ಬ ಹೇಳಿದಾಗ ಆ ವ್ಯಕ್ತಿಯ ಅಸ್ಮಿತೆಯನ್ನು ಆಧರಿಸಿ, ಆತ ಆ ಮಾತನ್ನು ಏಕೆ ಆಡಿದ ಎಂಬ ಲೆಕ್ಕಾಚಾರ ನಡೆಸಲಾಗುತ್ತದೆ.

ನಾನು ಪಟೇಲ ಸಮುದಾಯದವರಿಗೆ ಮೀಸಲಾತಿ ನೀಡುವ ಪರವಾಗಿ ಮಾತನಾಡಿದರೆ, ನಾನು ಅದೇ ಸಮುದಾಯದವನು ಹಾಗಾಗಿ ಅದರ ಪರ ಮಾತನಾಡುತ್ತಿದ್ದೇನೆ ಎನ್ನಲಾಗುತ್ತದೆ. ಪ್ರತಿಭಟನೆ ನಡೆಸುವವರ ಮೇಲೆ ಬಂದೂಕಿನಿಂದ ಗುಂಡು ಹಾರಿಸಬಾರದು ಎಂದು ಯಾರಾದರೂ ಹೇಳಿದರೆ, ಆ ವ್ಯಕ್ತಿ ಕಾಶ್ಮೀರಿಯಾಗಿರುವ ಕಾರಣಕ್ಕೇ ಬಹು ಜನರಿಗೆ ಒಳಿತು ಮಾಡುವ ಬದಲು ತನ್ನ ಸಮುದಾಯದವರನ್ನು ಬೆಂಬಲಿಸುತ್ತಿದ್ದಾನೆ ಎನ್ನಲಾಗುತ್ತದೆ. ಇಂತಹ ಮಾತುಗಳಿಗೆ ಸುಲಭವಾಗಿ ಸಿಗುವವರು ಭಾರತದ ಮುಸ್ಲಿಮರು. ‘ಸಂಕುಚಿತ ಮನಸ್ಥಿತಿಯವರು’ ಎಂಬ ಆರೋಪವನ್ನು ಇವರ ಮೇಲೆ ಬಹಳ ಸುಲಭವಾಗಿ ಹೊರಿಸಲಾಗುತ್ತದೆ.

ಅವರು ಏನು ಹೇಳುತ್ತಿದ್ದಾರೆ ಎಂಬುದನ್ನೂ ಪರಿಶೀಲಿಸದೆ ಈ ಕೆಲಸ ಮಾಡಲಾಗುತ್ತದೆ. ನಾನು ಈಗ ವಿವರಿಸುತ್ತಿರುವುದನ್ನು ನಾವು ದಿನನಿತ್ಯದ ಜೀವನದಲ್ಲಿ, ಟಿ.ವಿ. ವಾಹಿನಿಗಳ ಸುದ್ದಿಯಲ್ಲಿ ಕಾಣಬಹುದು. ಹಾಗಾಗಿ ಈ ಬಗ್ಗೆ ಹೆಚ್ಚಿನ ವಿವರದ ಅಗತ್ಯ ಇಲ್ಲ. ನಾನು ಹೇಳುತ್ತಿರುವುದು ಏನು ಎಂಬುದು ಎಲ್ಲಾ ಓದುಗರಿಗೆ ಗೊತ್ತು. ಹೀಗಿದ್ದರೂ, ಈ ರೀತಿಯ ವರ್ತನೆಗಳು ನಮ್ಮ ದೇಶದ ಉನ್ನತ ಮಟ್ಟದ ರಾಜಕೀಯದಲ್ಲಿ ಪ್ರವೇಶ ಪಡೆದಿದ್ದನ್ನು ನಾವು ಕಂಡಿರಲಿಲ್ಲ. ಈ ಮಟ್ಟದ ರಾಜಕೀಯದಲ್ಲಿ ಸುಸಂಸ್ಕೃತ ನಡವಳಿಕೆ, ಶಿಷ್ಟಾಚಾರದ ಪಾಲನೆ ಇದೆ. ಉಪ ರಾಷ್ಟ್ರಪತಿಯವರ ಬಗ್ಗೆ ಪ್ರಧಾನಿ ಆಡಿದ ಮಾತುಗಳ ಕಾರಣದಿಂದಾಗಿ ಆ ಸಂಪ್ರದಾಯ ಮುರಿದಿದೆ ಎಂದು ನಾನು ಭಾವಿಸಿದ್ದೇನೆ.

ಇದೆಲ್ಲಾ ಆಗಿದ್ದು ರಾಜ್ಯಸಭಾ ಟಿ.ವಿ. ವಾಹಿನಿಯಲ್ಲಿ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲಿ ಈ ಒಂದು ಪ್ರಶ್ನೆಯನ್ನು ಕೇಳಿದ ನಂತರ: ‘...ಮುಸ್ಲಿಂ ಸಮುದಾಯ ಆತಂಕದಲ್ಲಿದೆ. ಆ ಸಮುದಾಯದಲ್ಲಿ ಅಭದ್ರತೆಯ ಭಾವ ಇದೆ. ಈ ಮಾತುಗಳು ಭಾರತೀಯ ಮುಸ್ಲಿಮರು ಅನುಭವಿಸುತ್ತಿರುವ ಪರಿಸ್ಥಿತಿಯ ಸರಿಯಾದ ಚಿತ್ರಣವೇ ಅಥವಾ ಇದು ಉತ್ಪ್ರೇಕ್ಷೆಯೇ?’ ಈ ಪ್ರಶ್ನೆಗೆ ಹಮೀದ್ ಅನ್ಸಾರಿ ಅವರು ಹೀಗೆ ಉತ್ತರಿಸಿದರು: ‘ದೇಶದ ಬೇರೆ ಬೇರೆ ಕಡೆಗಳಲ್ಲಿ ನಾನು ಕೇಳಿಸಿಕೊಂಡಿರುವುದರ ಅನ್ವಯ ಇದು ಸರಿ
ಯಾದ ಚಿತ್ರಣ. ಈ ಮಾತನ್ನು ನಾನು ಬೆಂಗಳೂರಿನಲ್ಲಿಯೂ ಕೇಳಿಸಿಕೊಂಡಿದ್ದೇನೆ. ಬೇರೆ ಕಡೆಗಳಲ್ಲೂ ಕೇಳಿಸಿಕೊಂಡಿದ್ದೇನೆ. ಉತ್ತರ ಭಾರತದಲ್ಲಿ ನಾನು ಇದನ್ನು ಹೆಚ್ಚಾಗಿ ಕೇಳಿಸಿಕೊಂಡಿದ್ದೇನೆ. ಒಂದು ಬಗೆಯ ಆತಂಕ, ಅಭದ್ರತೆಯ ಭಾವ ನುಸುಳುತ್ತಿದೆ’.

ಈ ಸಾಲುಗಳನ್ನು ಎತ್ತಿಕೊಂಡು ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿ ಮಾಡಲಾಯಿತು. ಅನ್ಸಾರಿ ಅವರು ಎಷ್ಟು ಅಳೆದು-ತೂಗಿ, ಸಂಯಮದಿಂದ ಮಾತನಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪೂರ್ತಿ ಸಂದರ್ಶನ ನೋಡಬೇಕು. ಅವರು ತಪ್ಪು ಮಾತುಗಳನ್ನು ಆಡಿಲ್ಲ. ಅವರು ತಾವು ಕೇಳಿಸಿಕೊಂಡಿದ್ದನ್ನು, ಕಂಡುಕೊಂಡಿದ್ದನ್ನು ವರದಿಯ ರೀತಿಯಲ್ಲಿ ಹೇಳಿದ್ದಾರೆ. ಅವರು ಸರ್ಕಾರವನ್ನು ದೂಷಿಸಿಲ್ಲ. ಆದರೆ ಇದಕ್ಕೆ ಬಿಜೆಪಿ ನೀಡಿದ ಪ್ರತಿಕ್ರಿಯೆ ಅಪಾಯಕಾರಿಯಾಗಿಯೂ, ತೀರಾ ಕೋಮುವಾದಿಯಾಗಿಯೂ ಇತ್ತು.

ಅನ್ಸಾರಿ ಅವರ ಅಧಿಕಾರಾವಧಿಯ ಕಡೆಯ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅಣಕಿಸಿ ಆಡಿದ ಮಾತು ನನ್ನ ಮನಸ್ಸನ್ನು ಕಲಕಿತು, ಬೇಸರ ಉಂಟು ಮಾಡಿತು. ಅನ್ಸಾರಿ ಅವರು ಆರಂಭದಿಂದಲೂ ಬಿಜೆಪಿಯವರ ಟೀಕೆಗೆ ಸುಲಭದ ತುತ್ತಾಗಬಲ್ಲವರಾಗಿದ್ದರು ಎಂಬುದನ್ನು ಓದುಗರು ನೆನಪು ಮಾಡಿಕೊಳ್ಳಬಲ್ಲರು. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಅನ್ಸಾರಿ ಅವರ ನಡತೆಯ ಬಗ್ಗೆ ಅಜ್ಞಾನದಿಂದ ಕೆಲವು ಹೇಳಿಕೆಗಳನ್ನು ನೀಡಿದರು. ತಾವು ಹೇಳಿದ್ದು ತಪ್ಪು ಎಂಬುದು ಗೊತ್ತಾದ ನಂತರ ರಾಮ್ ಮಾಧವ್ ಅವರು ಆ ಮಾತುಗಳನ್ನು ಟ್ವಿಟರ್ ಖಾತೆಯಿಂದ ಅಳಿಸಿಹಾಕಿದರು. ಆಗ ಆಗಿದ್ದು ಏನು ಎಂಬುದನ್ನು ನಾನು ಇಲ್ಲಿ ಮತ್ತೆ ಉಲ್ಲೇಖಿಸುವುದಿಲ್ಲ. ಅದು ಉತ್ತಮ ಅಭಿರುಚಿಯಿಂದ ಕೂಡಿರಲಿಲ್ಲ.

ಇವೆಲ್ಲ ನಡೆಯುತ್ತಿದ್ದಾಗ ಕೂಡ ಅನ್ಸಾರಿ ಅವರು ಶಿಷ್ಟಾಚಾರ ಹಾಗೂ ಸಭ್ಯತೆಯ ಸಂಕೇತವಾಗಿದ್ದರು. ಅನ್ಸಾರಿ ಅವರ ಅಧಿಕಾರಾವಧಿಯ ಕಡೆಯ ದಿನ ಮೋದಿ ಅವರು ಈ ಮಾತನ್ನು ಅನ್ಸಾರಿ ಅವರ ಎದುರಿನಲ್ಲೇ ಹೇಳಿದರು: ‘ರಾಜತಾಂತ್ರಿಕರು ಕೈಕುಲುಕುವುದರ ಅಥವಾ ಮುಗುಳ್ನಗುವುದರ ಅರ್ಥವನ್ನು ತಕ್ಷಣಕ್ಕೆ ಗೊತ್ತುಮಾಡಿಕೊಳ್ಳುವುದು ಕಷ್ಟ. ರಾಜತಾಂತ್ರಿಕ ವೃತ್ತಿ ನಡೆಸಿದವರ ನಿಜ ಅರ್ಥ ನನಗೆ ಪ್ರಧಾನಿಯಾದ ನಂತರವೇ ಗೊತ್ತಾಯಿತು. ಅನ್ಸಾರಿ ಅವರ ಕುಟುಂಬ ಬಹಳ ಹಿಂದಿನಿಂದಲೂ ಕಾಂಗ್ರೆಸ್ ಹಾಗೂ ಖಿಲಾಫತ್ ಚಳವಳಿ ಜೊತೆ ಗುರುತಿಸಿಕೊಂಡಿದೆ’. ಅನ್ಸಾರಿ ಅವರು ರಾಜತಾಂತ್ರಿಕರಾಗಿದ್ದಾಗ ಮಧ್ಯಪ್ರಾಚ್ಯದ ಬಗ್ಗೆ ಆದ್ಯತೆ ನೀಡಿದ್ದರು. ಅವರು ‘ಅದೇ ತರಹದ ವಾತಾವರಣ, ಅದೇ ರೀತಿಯ ಸಿದ್ಧಾಂತ ಹಾಗೂ ಅದೇ ಬಗೆಯ ಜನರ ಜೊತೆ ಗುರುತಿಸಿಕೊಂಡಿದ್ದರು’ ಎಂದು ಮೋದಿ ಹೇಳಿದರು.

ನಿವೃತ್ತಿಯ ನಂತರ ಕೂಡ ಅನ್ಸಾರಿ ಅವರು ಹೆಚ್ಚಿನ ಕಾಲ ಅಲ್ಪಸಂಖ್ಯಾತರ ಆಯೋಗ ಹಾಗೂ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಜೊತೆ ಕೆಲಸ ಮಾಡಿದ್ದರು ಎಂದು ಮೋದಿ ಹೇಳಿದರು. ಮೋದಿ ಅವರು ತಮ್ಮ ಮಾತನ್ನು ಈ ಹೇಳಿಕೆಯ ಮೂಲಕ ಕೊನೆಗೊಳಿಸಿದರು: ‘ನಿಮ್ಮೊಳಗೇ ಕೆಲವು ಸಂಘರ್ಷಗಳು ನಡೆದಿರಬಹುದು (ಉಪರಾಷ್ಟ್ರಪತಿಯಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ). ಆದರೆ ಇನ್ನು ಮುಂದೆ ಈ ಬಗೆಯ ದ್ವಂದ್ವಗಳನ್ನು ಎದುರಿಸಬೇಕಾಗಿಲ್ಲ. ನಿಮ್ಮಲ್ಲಿ ಸ್ವಾತಂತ್ರ್ಯದ ಒಂದು ಭಾವನೆ ಬರುತ್ತದೆ. ನಿಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಕೆಲಸ ಮಾಡುವ, ಆಲೋಚಿಸುವ ಮತ್ತು ಮಾತನಾಡುವ ಅವಕಾಶ ಸಿಗುತ್ತದೆ’.

ಪ್ರಧಾನಿಯವರ ಪ್ರಕಾರ ಅನ್ಸಾರಿ ಅವರು ಯಾವ ಸಿದ್ಧಾಂತವನ್ನು ಇಟ್ಟುಕೊಂಡಿದ್ದಾರೆ? ಅದನ್ನು ಮೋದಿ ಅವರು ಹೇಳಲಿಲ್ಲ. ಅವರು ಹೇಳಬೇಕಾಗಿಯೂ ಇಲ್ಲ. ಮೋದಿ ಅವರು ಒತ್ತಿ ಹೇಳಿದ್ದರ ಹಿಂದಿನ ಉದ್ದೇಶವನ್ನು ಗ್ರಹಿಸದಿರಲು ಸಾಧ್ಯವೇ ಇಲ್ಲ. ಮೋದಿ ಅವರು ಅನ್ಸಾರಿ ಅವರನ್ನು ಉದ್ದೇಶಪೂರ್ವಕವಾಗಿ ಅವರ ಮುಸ್ಲಿಂ ಅಸ್ಮಿತೆಯ ಜೊತೆ ತಳಕು ಹಾಕುತ್ತಿದ್ದರು. ಅರಬ್ ಜಗತ್ತಿನಲ್ಲಿ ರಾಜತಾಂತ್ರಿಕರಾಗಿ, ಶಿಕ್ಷಣ ತಜ್ಞರಾಗಿ ಕೆಲಸ ಮಾಡಿದ್ದನ್ನು, ಅಸಹಿಷ್ಣುತೆಯ ಬಗ್ಗೆ ಆಡಿದ ಮಾತುಗಳನ್ನು ಅನ್ಸಾರಿ ಅವರ ಧರ್ಮದ ಜೊತೆ ಸಮೀಕರಿಸಿ ನೋಡುತ್ತಿದ್ದರು. ಇದನ್ನು ಗ್ರಹಿಸಿದ ಮೋದಿ ಅವರ ಬೆಂಬಲಿಗರು ಟ್ವಿಟರ್ ಹಾಗೂ ಟಿ.ವಿ. ವಾಹಿನಿಗಳ ಮೂಲಕ ಅನ್ಸಾರಿ ಅವರ ಮೇಲೆ ಅತ್ಯಂತ ಅಸಭ್ಯವಾಗಿ ದಾಳಿ ನಡೆಸಿದರು.

ಅನ್ಸಾರಿ ಅವರು ತಮ್ಮ ಭಾಷಣವನ್ನು ಈ ದ್ವಿಪದಿಯ ಮೂಲಕ ಆರಂಭಿಸಿದರು: ‘ಮುಝೆ ಇಲ್ಜಾಂ ಇತನೆ ಲಗಾಯೆ ಗಯೆ, ಬೇಗುನಾಹಿ ಕೆ ಅಂದಾಜ್ ಜಾತೆ ರಹೆ’. ತಮ್ಮ ವಿರುದ್ಧ ಯುಕ್ತವಲ್ಲದ ರೀತಿಯಲ್ಲಿ ಎಷ್ಟೊಂದು ಬಾರಿ ಆರೋಪಗಳನ್ನು ಹೊರಿಸಲಾಯಿತು ಎಂದರೆ, ತಾನು ನಿರಪರಾಧಿ ಎಂದು ಸಾಬೀತು ಮಾಡುವುದು ಈಗ ಅಸಾಧ್ಯ ಎನ್ನುವ ಸ್ಥಿತಿ ಎದುರಾಗಿದೆ ಎಂಬುದು ಇದರ ಅರ್ಥ. ಉಪ ರಾಷ್ಟ್ರಪತಿಯೊಬ್ಬರು ಅಧಿಕಾರದಿಂದ ಕೆಳಗಿಳಿಯುವ ಹೊತ್ತಿನಲ್ಲಿ ಇಂತಹ ಮಾತುಗಳನ್ನು ಆಡಿರುವುದು ಭಾರತೀಯರೆಲ್ಲರ ಚಿಂತೆಗೆ ಕಾರಣವಾಗಬೇಕಲ್ಲವೇ?

ಬಹುಶಃ ಈ ಬಗ್ಗೆ ನಾವು ಹೆಚ್ಚು ಆಲೋಚನೆ ಮಾಡುವುದಿಲ್ಲ. ಒಂದು ವೇಳೆ ಆಲೋಚನೆ ಮಾಡಿದರೂ, ಅನ್ಸಾರಿ ಅವರು ನೀಡಿರುವ ಎಚ್ಚರಿಕೆಯನ್ನು ನಮ್ಮಲ್ಲಿ ಬಹುತೇಕರು ಉಪೇಕ್ಷಿಸುತ್ತಾರೆ. ಈ ವಾತಾವರಣದಲ್ಲಿ ಭಾರತದ ಮುಸ್ಲಿಮರು ಅಭದ್ರತೆಯ ಭಾವನೆ ಹೊಂದಿದ್ದಾರೆಯೇ? ಅದು ನಮಗೆ ಮುಖ್ಯವಲ್ಲ. ಅವರು ಅಭದ್ರತೆಯ ಭಾವನೆ ಹೊಂದಿದ್ದಾರೆ ಎಂದು ಉಪ ರಾಷ್ಟ್ರಪತಿ ಹೇಳಿದ್ದಾರೆ ಎಂದಾದರೆ, ತಾವೂ (ಉಪ ರಾಷ್ಟ್ರಪತಿ) ಮುಸ್ಲಿಮರಾಗಿರುವ ಕಾರಣ ಹಾಗೆ ಹೇಳಿದ್ದಾರೆ!

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT