ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಸ್ಫೂರ್ತಿ

Last Updated 1 ಜನವರಿ 2015, 19:30 IST
ಅಕ್ಷರ ಗಾತ್ರ

ಬಂಗಾಳದಲ್ಲಿ ಗೋಪಾಲ ಭಾಂಡ್‍ನ ಕಥೆಗಳು ತುಂಬ ಜನಪ್ರಿಯ. ಆ ಪ್ರದೇಶದ ಕೃಷ್ಣನಗರದ ರಾಜನಾಗಿದ್ದ ಕೃಷ್ಣಚಂದ್ರ ರೈ ಎಂಬುವನ ಆಸ್ಥಾನದಲ್ಲಿ ಆತ ಇದ್ದನಂತೆ, ನಮ್ಮ ಕೃಷ್ಣದೇವ­ರಾಯನ ಆಸ್ಥಾನದ ತೆನ್ನಾಲಿ ರಾಮನಂತೆ. ತುಂಬ ಬಡತನದಲ್ಲಿ ಬಂದ ಗೋಪಾಲ ತನ್ನ ಬುದ್ಧಿವಂತಿಕೆಯಿಂದ, ಚತುರತೆಯಿಂದ ಮಹಾರಾಜನ ಪ್ರೀತಿಗೆ ಪಾತ್ರನಾಗಿದ್ದ. ಈ ಕಥೆ ಅವನು ಮಹಾ­ರಾಜನ ಆಸ್ಥಾನವನ್ನು ಸೇರುವುದಕ್ಕಿಂತ ಮೊದಲು ನಡೆದದ್ದು ಎಂಬ ಪ್ರತೀತಿ. 

ಬಡತನದಿಂದ ಬೇಸತ್ತು ಬೇರೆ ನಾಡಿಗೆ ಹೋಗಿ ಏನಾದರೂ ವ್ಯಾಪಾರ ಮಾಡ­ಬೇಕೆಂದು ಗೋಪಾಲ ತೀರ್ಮಾನಿಸಿದ. ಅವನ ಸ್ನೇಹಿತರು ದೂರದ ಇಂದ್ರಪ್ರಸ್ತಕ್ಕೆ ಹೋಗಲು ಸಲಹೆ ನೀಡಿದರು. ಈತ ಹೊರಡಲು ಸಿದ್ಧನಾದಾಗ ಅವನ ವಯಸ್ಸಾದ ತಂದೆ ಹೇಳಿದರು, ‘ಗೋಪಾಲ, ಅಲ್ಲಿಯ ಜನ ತುಂಬ ಮೋಸ­ಗಾರರು. ನೀನು ಅಲ್ಲಿ ತುಂಬ ಎಚ್ಚರವಾಗಿರಬೇಕು. ಯಾರ ಮುಂದೆಯೂ ಏನಾದರೂ ಹೇಳುವಾಗ, ವ್ಯಾಪಾರ ಮಾಡುವಾಗ ಅವರ ಬಗ್ಗೆ ಚೆನ್ನಾಗಿ ತಿಳಿದುಕೋ, ಅಲ್ಲಿಯ ಸಂಸ್ಕೃತಿಯ ಬಗ್ಗೆ ಗೊತ್ತು ಮಾಡಿಕೋ. ಇಷ್ಟೆಲ್ಲ ಆದರೂ ನಿನ್ನ ಸಮಯ­ಸ್ಫೂರ್ತಿಯೇ ನಿನ್ನನ್ನು ಕಾಯುತ್ತದೆ’. 

ಗೋಪಾಲ ಇಂದ್ರಪ್ರಸ್ತವನ್ನು ಸೇರಿ ಒಂದು ವಸತಿಗೃಹದಲ್ಲಿ ನೆಲೆಸಿದ. ಆ ಗೃಹದ ಮಾಲೀಕನೊಡನೆ ಮಾತ­ನಾಡುತ್ತ ಮೈಮರೆತು ತನ್ನ ಊರು, ಪರಿವಾರ ಎಲ್ಲದರ ಬಗ್ಗೆ ಹೇಳಿ ತಾನು ವ್ಯಾಪಾರ ಮಾಡಲು ಬಂದದ್ದನ್ನು ತಿಳಿಸಿದ. ಮರುದಿನ ಮಾರುಕಟ್ಟೆಯ ಬಳಿಗೆ ಹೊರಟಾಗ ಒಬ್ಬ ವ್ಯಕ್ತಿ ಓಡಿ ಬಂದು ಇವನನ್ನು ನಿಲ್ಲಿಸಿದ. ಅವನಿಗೆ ಒಂದು ಕೈ ಇಲ್ಲ, ಆತ ಜೋರಾಗಿ ಹೇಳಿದ, ‘ನಿನ್ನ ತಂದೆ ಕೆಲವರ್ಷಗಳ ಹಿಂದೆ ನನ್ನ ಬಲಗೈಯನ್ನು ಸಾಲವಾಗಿ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಅದನ್ನು ಮರಳಿ ಕೊಟ್ಟಿಲ್ಲ. ತಕ್ಷಣ ನನ್ನ ಕೈಯನ್ನಾದರೂ ಕೊಡಿಸು ಇಲ್ಲವೇ ಹತ್ತು ಸಾವಿರ ಹೊನ್ನು ಕೊಡು’. ಗೋಪಾಲ ಕ್ಷಣಕಾಲ ಗಾಬರಿಯಾದ.

ನಂತರ ಸಾವರಿಸಿಕೊಂಡು ಮರುದಿನವೇ ಏನಾ­ದರೂ ತೀರ್ಮಾನ ತೆಗೆದುಕೊಳ್ಳುವು­ದಾಗಿ ಮಾತು ಕೊಟ್ಟ. ಮುಂದೆ ನಡೆದಾಗ ಹೆಂಗಸೊಬ್ಬಳು ಬಂದು, ‘ಏ ಗೋಪಾಲಾ, ನಿನ್ನ ಅಪ್ಪ ನನ್ನ ಮದುವೆಯಾಗಿದ್ದ. ನಂತರ ಬಿಟ್ಟು ಓಡಿ ಹೋಗಿದ್ದಾನೆ. ನನಗೆ ಪ್ರತಿ ತಿಂಗಳೂ ಎರಡು ನೂರು ಹೊನ್ನು ಕಳುಹಿಸುತ್ತಿದ್ದ. ಈಗ ಎರಡು ವರ್ಷಗಳಿಂದ ಹಣವನ್ನೇ ಕಳಿಸದೇ ತಪ್ಪಿಸಿಕೊಂಡಿದ್ದಾನೆ. ತಕ್ಷಣವೇ ಅದೆಲ್ಲವನ್ನು ನನಗೆ ಕೊಡು’ ಎಂದು ಒತ್ತಾಯಿಸಿದಳು. ಅವಳಿಂದಲೂ ಒಂದು ದಿನದ ಅವಧಿಯನ್ನು ಗೋಪಾಲ ಪಡೆದುಕೊಂಡ. ತನ್ನ ಬಗ್ಗೆ ಇವರಿಗೆಲ್ಲ ಹೇಗೆ ಗೊತ್ತಾಯಿತು ಎಂದು ಚಿಂತಿಸಿದ. ಆಗ ತಾನು ವಸತಿಗೃಹದ ಮಾಲೀಕನಿಗೆ ತನ್ನ ಬಗ್ಗೆ ತಿಳಿಸಿದ್ದು ಎಲ್ಲರಿಗೂ ತಲುಪಿದೆ ಎಂಬ ಅರಿವಾಯಿತು.

ಇದರಿಂದ ಪಾರಾಗುವ ಬಗೆಯನ್ನು ಚಿಂತಿಸಿದ. ಮರುದಿನ ತಾನೇ ನೇರವಾಗಿ ಕೈಕಳೆದುಕೊಂಡಿದ್ದ ಮನುಷ್ಯನ ಕಡೆಗೆ ಹೋಗಿ ಹೇಳಿದ,‘ನೀನು ಹೇಳಿದ್ದು ಸತ್ಯ. ನನ್ನ ತಂದೆ ಬಹಳಷ್ಟು ಜನರಿಂದ ಕೈಗಳನ್ನು ಸಾಲವಾಗಿ ಪಡೆದಿದ್ದಾರೆ. ನಮ್ಮ ಮನೆಯ ತುಂಬ ಬರೀ ಕೈಗಳೇ ಇವೆ. ಅದರಲ್ಲಿ ನಿನ್ನದಾವುದು ಎಂದು ಹುಡುಕುವುದು ಕಷ್ಟ. ಅದಕ್ಕೆ ನಿನ್ನ ಎಡಗೈಯನ್ನು ಕತ್ತರಿಸಿಕೊಡು. ಅದಕ್ಕೆ ಸರಿಯಾಗಿ ಹೊಂದುವ ನಿನ್ನ ಬಲಗೈಯನ್ನೇ ತಂದುಕೊಡುತ್ತೇನೆ’. ಆಮೇಲೆ ಬರುತ್ತೇನೆಂದು ಆತ ಓಡಿ ಹೋದ. ನಂತರ ಮಹಿಳೆಯ ಕಡೆಗೆ ಹೋಗಿ, ‘ತಾಯಿ, ನನ್ನ ತಂದೆ ನಿನ್ನನ್ನು ಮದುವೆಯಾದ ವಿಷಯವನ್ನು ಅದೇಕೆ ನಮ್ಮಿಂದ ಬಚ್ಚಿಟ್ಟರೋ ತಿಳಿಯದು. ಈಗ ನಮ್ಮ ತಂದೆಗೆ ತುಂಬ ವಯಸ್ಸಾಗಿ, ಆರೋಗ್ಯ ಹದಗೆಟ್ಟಿದೆ, ಅವರನ್ನು ನೋಡಿಕೊಂಡು ಹೊಲದಲ್ಲಿ ಕೆಲಸಮಾ­ಡುವುದು ನನ್ನ ತಾಯಿಗೆ ಕಷ್ಟವಾ­ಗುತ್ತಿದೆ.

ನೀನು ನನ್ನೊಡನೆ ಬಂದು ಬಿಡು. ಆಗ ನೀನು ಹೊಲದಲ್ಲಿ ಕೆಲಸ ಮಾಡಿದರೆ ನನ್ನ ತಾಯಿ, ತಂದೆಯನ್ನು ನೋಡಿಕೊಳ್ಳುತ್ತಾಳೆ’ ಎಂದ. ಆಕೆಯೂ ಒಂದು ನೆಪಹೇಳಿ ಪಾರಾಗಿ ಹೋದಳು. ಗೋಪಾಲ ಹಾಯಾಗಿ ವ್ಯಾಪಾರ ಮಾಡುತ್ತ ಚೆನ್ನಾಗಿ ಗಳಿಸಿದ. ನಾವು ಎಷ್ಟೇ ಕಲಿತಿದ್ದರೂ, ವಿಷಯ ಸಂಗ್ರಹ ಮಾಡಿದ್ದರೂ, ಆಪತ್ತಿನಲ್ಲಿ ನಮ್ಮನ್ನು ಕಾಪಾಡುವುದು ನಾವು ಬೆಳೆಸಿಕೊಂಡ ಸಮಯಸ್ಫೂರ್ತಿ ಮಾತ್ರ. ಹೀಗೆ ತಕ್ಷಣ ಹೊಸದಾಗಿ ಚಿಂತಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT