ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯದ ಗೊಂಬೆಯಾದ

Last Updated 31 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

`ವಿಶ್ವ ಏಡ್ಸ್ ದಿನಾಚರಣೆ~ಯ ದೂಳು ಅಡಗಿದರೂ, ಸಿದ್ದು ಎನ್ನುವ ಆ ಹುಡುಗನನ್ನು ಮರೆಯಲಿಕ್ಕೆ ನನಗೆ ಸಾಧ್ಯವಾಗುತ್ತಿಲ್ಲ.

ಸಿದ್ದು ಹದಿನಾರು ವರ್ಷಗಳ ಹುಡುಗ. ಬಳ್ಳಾರಿ ಜಿಲ್ಲೆಯ ಹಳ್ಳಿಯೊಂದರವ. ಅಪ್ಪ, ಅಮ್ಮ ಹಾಗೂ ಒಬ್ಬ ಅಕ್ಕ- ಇದಿಷ್ಟೇ ಅವನ ಕುಟುಂಬ. ವಾಸಿಸಲಿಕ್ಕೆ ಸ್ವಂತ ಮನೆಯಿತ್ತು. ಸಿದ್ದುವಿನ ಅಪ್ಪ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಸ್ವಂತ ಕಾರ್ ಕೂಡ ಇತ್ತು.

ಮನೋಜ್ ಎನ್ನುವ ಸಹಾಯಕನೂ ಇದ್ದ. ಸಿದ್ದು ಏಳನೇ ತರಗತಿ ವಿದ್ಯಾರ್ಥಿ, ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿದ್ದ. ನಮ್ಮ ಸಂಸಾರ ಆನಂದ ಸಾಗರ ಎನ್ನುವಂತೆಯೇ ಕುಟುಂಬದಲ್ಲಿ ಎಲ್ಲವೂ ಸರಿಯಾಗಿತ್ತು.

ಸಿದ್ದು ತನ್ನ ಅಪ್ಪನನ್ನು ತುಂಬಾ ಹಚ್ಚಿಕೊಂಡಿದ್ದ. ಅಮ್ಮ ಗೃಹಿಣಿ. ಆದರೆ ಆಕೆ ಮನೆಯಲ್ಲಿರುತ್ತಿದ್ದುದೇ ಕಡಿಮೆ. ಪದೇಪದೇ ಮನೆಯಿಂದ ಹೊರಗೆ ಹೋಗುತ್ತಿದ್ದ ಆಕೆ ಕುಟುಂಬದ ಬಗ್ಗೆ ಅಷ್ಟೇನೂ ಕಾಳಜಿ ವಹಿಸುತ್ತಿರಲಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಆಕೆಯನ್ನು ಸಿದ್ದು ದ್ವೇಷಿಸುತ್ತಿದ್ದ. ಮನೆಗೆಲಸವೆಲ್ಲ ಅಕ್ಕನ ಮೇಲೆ ಬಿದ್ದಿತ್ತು. ಅಪ್ಪ-ಅಮ್ಮ ಆಗಾಗ ಜಗಳವಾಡುತ್ತಿದ್ದುದರಿಂದ ಓದಲಿಕ್ಕೆ ಕಷ್ಟವಾಗುತ್ತಿತ್ತು. ಆ ಕಾರಣದಿಂದಾಗಿ ಸಿದ್ದುವನ್ನು ವಸತಿ ಶಾಲೆಯೊಂದಕ್ಕೆ ಸೇರಿಸಲಾಯಿತು. ಅಲ್ಲವನು ಆಗಾಗ ಕಾಯಿಲೆ ಬೀಳುವುದು ಸಾಮಾನ್ಯವಾಯಿತು. ಈ ಹುಡುಗನಿಗೇನಾಗಿದೆ ಎಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವನಿಗೆ ಎಚ್‌ಐವಿ ಸೋಂಕು ತಗುಲಿದ್ದುದು ಗೊತ್ತಾಯಿತು.

ಹಾಗೆಂದರೇನು ಎನ್ನುವುದೇ ತಿಳಿಯದ ಹುಡುಗನನ್ನು `ಆರ್ಟ್~ಗೆ (Anti retroviral treatment)) ಸೇರಿಸಲಾಯಿತು. ಏಡ್ಸ್ ಕಾಯಿಲೆ ಸಿದ್ದುವಿನಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದಿತ್ತು. ಚಿಕಿತ್ಸೆ ಸಮಯದಲ್ಲಿ ಅವನು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡ. ಶಾಲೆಯಿಂದ ಹೊರಬಿದ್ದು, ಅಮ್ಮ ಹಾಗೂ ಅಕ್ಕನೊಂದಿಗೆ ಮನೆಗೆ ತೆರಳಿದ.

ಸಿದ್ದು ಹಾಸ್ಟೆಲ್‌ನಿದ್ದಾಗಲೇ ಅವನ ತಂದೆ ಏಡ್ಸ್‌ಗೆ ತುತ್ತಾಗಿದ್ದರು. ಅದೇ ಸಮಯದಲ್ಲಿ ಅವನ ಅಕ್ಕ ತನ್ನ ಅಪ್ಪನ ಸಹಾಯಕ ಮನೋಜ್‌ನನ್ನು ಮದುವೆಯಾಗಿದ್ದಳು. ಅವಳಿಗೆ ಎರಡು ಮಕ್ಕಳಾಗಿದ್ದವು. ಅವಳಿಗೆ ಕೂಡ ಸೋಂಕು ತಗುಲಿತ್ತು. ಮನೆಯಲ್ಲಿ ಸಣ್ಣಪುಟ್ಟ ಸಂಗತಿಗಳಿಗೂ ಕಚ್ಚಾಟ ನಡೆಯುತ್ತಿತ್ತು. ಭಾವನಾದ ಮನೋಜ್‌ಗೆ ಪರಿಸ್ಥಿತಿಯನ್ನು ನಿಭಾಯಿಸಲಿಕ್ಕಾಗದೆ ಸಿದ್ದುವನ್ನು ಮನೆಯಿಂದ ಹೊರಹಾಕಿದ. ಆಸರೆ ನೀಡಬೇಕಾದ ಅಮ್ಮ ತನ್ನ ಗಿರಾಕಿಗಳನ್ನು ಹುಡುಕಿಕೊಂಡು ಹೊರಟಿದ್ದಳು. ಮಗನಿಗೆ ಒಂದು ಸಾವಿರ ರೂಪಾಯಿ ನೀಡಿದ ಆಕೆ, ತನ್ನ ಜೀವನದಿಂದ ಹೊರಹೋಗುವಂತೆ ಸಿದ್ದುವಿಗೆ ಹೇಳಿದಳು.

ಹದಿನಾರು ವರ್ಷಗಳ ಸಿದ್ದು ಅಕ್ಷರಶಃ ಬೀದಿಪಾಲಾದ. ಪ್ರೀತಿಸುತ್ತಿದ್ದ ಅಪ್ಪ ತನ್ನ ಹೆಂಡತಿಯಿಂದಲೇ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದ. ಸ್ವಾರ್ಥಿ ಅಕ್ಕ ನೆರಳು ನೀಡಲಿಕ್ಕೆ ಮುಂದಾಗಲಿಲ್ಲ. ತನ್ನ ಭಾವನ ಬಗ್ಗೆ ಕೂಡ ಅವನು ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳುವಂತಿರಲಿಲ್ಲ. ಭರವಸೆಗಳೆಲ್ಲ ಬತ್ತಿಹೋದ ಅವನಿಗೆ ತನ್ನ ಕಾಯಿಲೆ ದೇಹದೊಂದಿಗೆ ಮುಂದೇನು ಮಾಡಬೇಕೆಂದು ಗೊತ್ತಿರಲಿಲ್ಲ. ಜೇಬಿನಲ್ಲಿ ಕೆಲವು ರೂಪಾಯಿಗಳನ್ನು ಇಟ್ಟುಕೊಂಡಿದ್ದ ಅವನು ಯಾವುದೋ ಬಸ್ ಹತ್ತಿ ಬೆಂಗಳೂರಿಗೆ ಬಂದ. ಯಾರೋ ಅಪರಿಚಿತರು ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಿದರು. ಆಗವನ ಸ್ಥಿತಿ ದಾರುಣವಾಗಿತ್ತು.

ನಾನವನನ್ನು ಮೊದಲ ಸಲ ನೋಡಿದಾಗ ಸಿದ್ದು ತೀರಾ ಕೊಳಕಾಗಿದ್ದ. ಅವನ ದೇಹ ಚರ್ಮವನ್ನು ಹೊದ್ದ ಮೂಳೆಗಳ ತಡಿಕೆಯಂತಿತ್ತು. ದೇಹದಿಂದ ದುರ್ಗಂಧ ಹೊರಹೊಮ್ಮುತ್ತಿತ್ತು. ನಾವು ಮಾಡಿದ ಮೊದಲ ಕೆಲಸ ಅವನನ್ನು ಶುಚಿಗೊಳಿಸಿದ್ದು. ಆನಂತರವೇ ಅವನಿಗೆ ಚಿಕಿತ್ಸೆ ನೀಡಲು ಶುರುಮಾಡಿದೆವು. ಏಡ್ಸ್ ಹಾಗೂ ಅದಕ್ಕೆ ಪೂರಕವಾದ ಸೋಂಕುಗಳಿಗೆ (opportunistic infections)  ಚಿಕಿತ್ಸೆ ನೀಡತೊಡಗಿದೆವು.

ಅವನ ಶ್ವಾಸಕೋಶಗಳಿಂದ ಎರಡು ಲೀಟರ್ ಕೀವು ತೆಗೆದೆವು. ಎರಡು ವಾರಗಳ ಕಾಲ ಸಿದ್ದು ಭಾವನಾರಹಿತವಾಗಿದ್ದ. ದೇಹಕ್ಕೆ ಕೊಳವೆಗಳನ್ನು ಅಳವಡಿಸುವಾಗ, ರಕ್ತ ತೆಗೆಯುವಾಗ, ನರಕ್ಕೆ ಸೂಜಿ ಚುಚ್ಚಿದಾಗಲೂ ಅವನು ನೋವು ವ್ಯಕ್ತಪಡಿಸುತ್ತಿರಲಿಲ್ಲ.

ಸಿದ್ದು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ. ಅವನ ದೇಹಸ್ಥಿತಿ ಸುಧಾರಿಸಿಕೊಳ್ಳಲಿಕ್ಕೆ ಅನುಕೂಲವಾಗುವಂತೆ ಅಕ್ಕಪಕ್ಕದ ರೋಗಿಗಳು ಕೂಡ ನಮಗೆ ಸಹಕಾರ ನೀಡಿದರು.

ಸುಧಾರಣೆಯ ಹಾದಿಯಲ್ಲಿರುವ ಸಂದರ್ಭದಲ್ಲೇ ಸಿದ್ದು ತನ್ನ ಕಥೆಯನ್ನು ಇಂಗ್ಲಿಷ್‌ನಲ್ಲಿ, ಅತ್ಯಂತ ನಿರ್ಲಿಪ್ತನಾಗಿ ಹೇಳಿಕೊಂಡ. ಅವನ ಇಂಗ್ಲಿಷ್ ತುಂಬಾ ಸೊಗಸಾಗಿತ್ತು.

ಹದಿನಾರರ ವಯಸ್ಸಿನಲ್ಲೇ ಅವನು ತನ್ನ ಬಾಲ್ಯ ಕಳೆದುಕೊಂಡಿದ್ದ. ವಿಪರೀತ ನೋವು ಅನುಭವಿಸಿದ್ದ ಅವನು ನೋವಿಗೆ ಸ್ಪಂದಿಸುವ ಗುಣ ಕಳೆದುಕೊಂಡಿದ್ದ. ಪ್ರೀತಿಗಾಗಿ, ಕಾಳಜಿಗಾಗಿ ಹಾಗೂ ಪ್ರೀತಿಯ ಅಪ್ಪುಗೆಗಾಗಿ ಅವನ ಕೈಗಳು ಚಾಚಿಕೊಂಡಿದ್ದವು.

ನಮ್ಮಲ್ಲಿದ್ದ ಆರು ವಾರಗಳಲ್ಲಿ ಸಿದ್ದು ಹಂತಹಂತವಾಗಿ ಚೇತರಿಸಿಕೊಂಡು ಅತ್ಯಂತ ಚೆಲುವಿನ ಹುಡುಗನಾಗಿ ಕಾಣಿಸತೊಡಗಿದ. ಆದರೆ ಅವನ ಕಣ್ಣುಗಳು ಸದಾ ಏನನ್ನೋ ಹುಡುಕುತ್ತಿದ್ದವು. ಬಹುಶಃ ಅದು ಪ್ರೀತಿ ಹಾಗೂ ಸುರಕ್ಷತೆಯ ಹುಡುಕಾಟವಿದ್ದೀತು. ನಾನು ಹಾಗೂ ನನ್ನ ಸ್ನಾತಕೋತ್ತರ ವಿದ್ಯಾರ್ಥಿಗಳು ಸಿದ್ದುವಿಗೆ ಬಟ್ಟೆ, ತಿಂಡಿ, ಪುಸ್ತಕಗಳು ಹಾಗೂ ಚಿತ್ರ ಬಿಡಿಸಲು ಬೇಕಾದ ಚಿತ್ರಕಲೆ ಸಾಮಗ್ರಿಗಳನ್ನು ತಂದುಕೊಟ್ಟೆವು. ಅವನು ನಿರಂತರವಾಗಿ ಚಿತ್ರಿಸುತ್ತಲೇ ಇದ್ದ. ನಾನು ಅವನನ್ನು ವಿಪರೀತ ಹಚ್ಚಿಕೊಂಡಿದ್ದೆ.

`ಗುಡ್‌ಮಾರ್ನಿಂಗ್ ಸಿದ್ದು, ಇವತ್ತು ನೀನು ಏನನ್ನು ಚಿತ್ರಿಸಿದೆ?~ ಎನ್ನುವ ಕುಶಲೋಪರಿಯೊಂದಿಗೇ ನನ್ನ ಬೆಳಗಿನ ರೌಂಡ್ಸ್ ಪ್ರಾರಂಭವಾಗುತ್ತಿತ್ತು.
ನಾವು ತೆಗೆದುಕೊಳ್ಳುತ್ತಿದ್ದ ಕಾಳಜಿಯಿಂದ ಅವನು ಖುಷಿಯಾಗಿದ್ದಾನೆ ಎಂದೇ ನಾವೆಲ್ಲ ಭಾವಿಸಿದ್ದೆವು. ಆ ಭಾವನೆ ತುಂಬಾ ಸಮಯ ಉಳಿಯಲಿಲ್ಲ. ಒಂದು ದಿನ ಸಿದ್ದು ಹೇಳಿದ- `ಮೇಡಂ, ನಾನು ಇಲ್ಲಿಂದ ಹೊರಹೋಗುತ್ತೇನೆ. ನನ್ನಂಥ ಇತರರಿಗೆ ಈ ಹಾಸಿಗೆ ಬಿಟ್ಟುಕೊಡುವೆ~. ಅವನ ನಿರ್ಧಾರ ಬದಲಿಸುವ ನಮ್ಮ ಯಾವ ಪ್ರಯತ್ನಗಳೂ ಫಲಿಸಲಿಲ್ಲ.

ಸಿದ್ದು ತನ್ನ ತೀರ್ಮಾನಕ್ಕೆ ಅಂಟಿಕೊಂಡಿದ್ದ. ತನ್ನಂತೆ ಇರುವ ಇತರ ಮಕ್ಕಳಿಗಾಗಿ ತಾನು ಮನೆಗೆ ಹೋಗಲು ಅವನು ಬಯಸಿದ್ದ. ಇತರ ಮಕ್ಕಳಿಗೆ ಹೋಲಿಸಿದರೆ ತಾನು ಚೆನ್ನಾಗಿದ್ದೇನೆ ಎಂದು ಅವನು ಹೇಳಿದ. ಊರಿಗೆ ಹೋದ ನಂತರವೂ ಔಷಧ ತೆಗೆದುಕೊಳ್ಳುವುದನ್ನು ತಪ್ಪಿಸುವುದಿಲ್ಲ ಹಾಗೂ ಓದು ಮುಂದುವರಿಸುವೆ ಎಂದು ಅವನು ನನಗೆ ಮಾತು ಕೊಟ್ಟ. ಜೊತೆಗೆ ತನ್ನಿಷ್ಟದ ಚಿತ್ರಕಲೆಯನ್ನೂ ಮುಂದುವರಿಸುತ್ತೇನೆ ಎಂದ.
ಸಿದ್ದುವನ್ನು ಬೀಳ್ಕೊಡುವ ದಿನ ನಾವೆಲ್ಲ ಮಾತು ಕಳೆದುಕೊಂಡಿದ್ದೆವು. ಅವನ ಮುಂದಿನ ಭವಿಷ್ಯದ ಪ್ರಶ್ನೆ ನಮಗೆಲ್ಲ ಆತಂಕ ತಂದಿತ್ತು. ಹಿಂದಿರುಗಿ ನೋಡಿ ನಕ್ಕ ಅವನು, `ನಾನು ಪೊಲೀಸ್ ಆಗುತ್ತೇನೆ~ ಎಂದು ನನಗೆ ಹೇಳಿದ. ತನ್ನ ತಾಯಿಯಂಥ ಜನರನ್ನು ಶಿಕ್ಷಿಸುವುದು ಅವನ ಮಾತಿನ ಅರ್ಥವಾಗಿತ್ತು. ನಾನು ಸ್ತಂಭೀಭೂತಳಾದೆ. ಪರಿಸ್ಥಿತಿಯ ಕೈಗೊಂಬೆಯಾಗಿ, ಸೋಂಕು ತಗುಲಿಸಿಕೊಂಡ ಎಳೆಯ ಆತ್ಮವೊಂದರ ನೋವು ನನಗೆ ಚೆನ್ನಾಗಿ ಅರ್ಥವಾಗುತ್ತಿತ್ತು. ಬಾಲ್ಯದ ಚಹರೆಯೇ ನಾಪತ್ತೆಯಾಗಿ, ಅವನ ಮುಗ್ಧತೆ ನಾಶವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT