ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಈ ವರ್ಷ ತಾರಕಕ್ಕೇರಲಿದೆಯೇ? ಆ ಎಲ್ಲ ಸೂಚನೆಗಳೂ ವರ್ಷಾರಂಭದಲ್ಲೇ ಕಾಣಿಸುತ್ತಿವೆ. ಸಾಮಾನ್ಯವಾಗಿ ಚಳಿಗಾಲ ಮುಗಿದು ಬಿಸಿಲೇರುತ್ತಿದ್ದಂತೆ ಪಾಕಿಸ್ತಾನದ ಸೇನೆಗೆ ಗಡಿ ದಾಟುವ, ಕಾಲು ಕೆರೆದು ಜಗಳಕ್ಕೆ ಬರುವ ಹುಮ್ಮಸ್ಸು ಬರುತ್ತದೆ. ಈ ಹಿಂದೆಯೂ ಜನವರಿ-ಫೆಬ್ರುವರಿ ತಿಂಗಳಿನಲ್ಲಿ ಪಾಕಿಸ್ತಾನ ಸಾಕಷ್ಟು ದಾಳಿ ನಡೆಸಿದ್ದಿದೆ. ಆದರೆ ಕಳೆದ ಹತ್ತು ವರ್ಷಗಳ ಪೈಕಿ ಈ ವರ್ಷದ ಮೊದಲೆರಡು ತಿಂಗಳಲ್ಲಿ ಪಾಕಿಸ್ತಾನ ಸೇನೆ ಮತ್ತು ಉಗ್ರರ ದಾಳಿಯಿಂದ ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ.

ಇದೇ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರತದ ನಾಲ್ಕು ಯೋಧರನ್ನು ಗುಂಡಿಕ್ಕಿ ಕೊಂದಿತು. ‘ಪಾಕಿಸ್ತಾನ ಇದಕ್ಕೆ ತಕ್ಕ ಬೆಲೆ ತೆರುತ್ತದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರೆ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ‘ಕಾಶ್ಮೀರದಲ್ಲಿ ರಕ್ತಪಾತ ತಡೆಯುವ ಸಲುವಾಗಿ, ಪಾಕಿಸ್ತಾನದೊಂದಿಗೆ ಭಾರತ ದ್ವಿಪಕ್ಷೀಯ ಮಾತುಕತೆಗೆ ಪುನರ್ಚಾಲನೆ ಕೊಡಬೇಕು. ಈ ಮಾತು ಹೇಳುತ್ತಿರುವುದಕ್ಕಾಗಿ ನನ್ನನ್ನು ರಾಷ್ಟ್ರದ್ರೋಹಿ ಎಂದು ಕರೆದರೂ ಅಡ್ಡಿಯಿಲ್ಲ’ ಎಂಬ ಹೇಳಿಕೆ ಕೊಟ್ಟರು. ಮುಫ್ತಿ ಹೇಳಿಕೆಯ ಬೆನ್ನಲ್ಲೇ ಮತ್ತೊಂದು ಉಗ್ರದಾಳಿ ನಡೆಯಿತು.

ಈ ಸೂತಕದ ಛಾಯೆಯಲ್ಲೇ ಕರಾಚಿಯ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮಣಿಶಂಕರ್ ಅಯ್ಯರ್ ‘ಪಾಕಿಸ್ತಾನದ ಜನ ಅಪರಿಚಿತರಾದರೂ ಸಾಕಷ್ಟು ಪ್ರೀತಿ ತೋರುತ್ತಾರೆ. ಪಾಕಿಸ್ತಾನದಲ್ಲಿ ಪಡೆಯುವ ಪ್ರೀತಿಗಿಂತ ಹೆಚ್ಚಿನ ದ್ವೇಷವನ್ನು ನಾನು ಭಾರತದಲ್ಲಿ ಪಡೆಯುತ್ತೇನೆ. ಶಾಂತಿಯ ಬಗ್ಗೆ ಮಾತನಾಡುತ್ತೇನಾದ್ದರಿಂದ ಇಲ್ಲಿ ನನಗೆ ಹೆಚ್ಚು ಚಪ್ಪಾಳೆ ದೊರಕುತ್ತಿದೆ’ ಎಂದರು. ಜೊತೆಗೆ ‘ನಿರಂತರ ಮತ್ತು ಅಡಚಣೆಗೆ ಆಸ್ಪದವಾಗದ ಮಾತುಕತೆಯಿಂದ ಮಾತ್ರ ಶಾಂತಿ ಸಾಧ್ಯ’ ಎಂಬ ಮಾತು ಸೇರಿಸಿದರು. ಅಲ್ಲಿನ ಕೆಲವು ಸುದ್ದಿವಾಹಿನಿಗಳು ‘ಪಾಕಿಸ್ತಾನದ ಪ್ರಯತ್ನಗಳಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟರು’ ಎಂದು ವರದಿ ಮಾಡಿದವು. ಈ ಎಲ್ಲಾ ಬೆಳವಣಿಗೆಗೆ ಪ್ರತಿಕ್ರಿಯೆಯಂತೆ ‘ಭಯೋತ್ಪಾದನೆ, ಶಾಂತಿ ಸಂಧಾನ ಏಕಕಾಲಕ್ಕೆ ನಡೆಯುವುದಿಲ್ಲ’ ಎಂಬ ಮಾತನ್ನು ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಡಿದ್ದಾರೆ. ಬಹುಶಃ ಇನ್ನು ಕೆಲದಿನಗಳ ಕಾಲ ಈ ಸಂಘರ್ಷ, ಸಂಧಾನದ ಚರ್ಚೆ ಮುಂದುವರೆಯುತ್ತದೆ.

ಹಾಗಾದರೆ ಭಾರತ ಮತ್ತು ಪಾಕಿಸ್ತಾನವು ಮಾತುಕತೆಗೆ ಕೂರಲು ಇದು ಸಕಾಲವೇ? ಕಳೆದ 70 ವರ್ಷಗಳ ಭಾರತ-ಪಾಕಿಸ್ತಾನದ ಹಗೆ-ಮುನಿಸಿನ ಇತಿಹಾಸದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿವೆ. ಉಭಯ ದೇಶಗಳ ಪ್ರಧಾನಿ, ಮಂತ್ರಿ, ರಾಜತಾಂತ್ರಿಕ ಅಧಿಕಾರಿ ಮತ್ತು ಸೇನಾ ಮುಖ್ಯಸ್ಥರ ಮಟ್ಟದಲ್ಲಿ ಸಂಧಾನ ಸೂತ್ರಕ್ಕಾಗಿ ತಲಾಶ್‌ ನಡೆದಿದೆ. ಆದರೆ ಯಾವ ಮಾತುಕತೆಯೂ ಎರಡು ದೇಶಗಳ ನಡುವಿನ ವೈಮನಸ್ಯವನ್ನು ಒಂದಿನಿತೂ ಕಡಿಮೆ ಮಾಡಿಲ್ಲ.

ಬಿಡಿ, ಕಾಶ್ಮೀರ ಸಮಸ್ಯೆಯ ಮೂಲ ಏನು ಎಂಬ ಸಂಗತಿ ನಿಮಗೆ ತಿಳಿದೇ ಇದೆ. ರಾಜ ಹರಿಸಿಂಗ್ ದ್ವಂದ್ವ ನಿಲುವು, ಭಾರತದ ಚುಕ್ಕಾಣಿ ಹಿಡಿದವರ ನಿರುತ್ಸಾಹ, ಜಿನ್ನಾ ತಂಡದ ಯುದ್ಧೋತ್ಸಾಹ... ಎಲ್ಲವೂ ಸೇರಿ ಜಮ್ಮು ಕಾಶ್ಮೀರವನ್ನು ಸಮಸ್ಯೆಯ ಗೂಡಾಗಿಸಿತು. ಎರಡು ದೇಶಗಳ ಸೇನೆಯ
ನಡುವೆ ನೇರಾನೇರಾ ಮೂರು ಕದನ ನಡೆದವು. ಮೂರರಲ್ಲೂ ಪಾಕಿಸ್ತಾನ ಪರಾಜಯಗೊಂಡಿತು. 1971ರ ಯುದ್ಧದ ಬಳಿಕ ಪಾಕಿಸ್ತಾನ ಮಾತುಕತೆಗೆ ತೆರೆದುಕೊಂಡಿತು. 1972ರ ಶಿಮ್ಲಾ ಶೃಂಗಸಭೆಯಲ್ಲಿ ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ‘1949ರ ಕದನ ವಿರಾಮ ರೇಖೆಯನ್ನು (ಸಿಎಫ್ಎಲ್), ಗಡಿ ನಿಯಂತ್ರಣ ರೇಖೆಯನ್ನಾಗಿ (ಎಲ್ಒಸಿ) ಒಪ್ಪಿಕೊಂಡು, ಕಾಶ್ಮೀರ ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಪರಿ
ಹಾರ ಕಂಡುಕೊಳ್ಳಲಾಗುವುದು’ ಎಂಬ ಹೇಳಿಕೆ ಕೊಟ್ಟರು. ಆದರೆ ಯಾವ ಮಾತುಕತೆಯೂ ನಾಲ್ಕು ಹೆಜ್ಜೆ ಮುಂದೆ ಹೋಗಲಿಲ್ಲ.

90ರ ದಶಕದಲ್ಲಿ ಸಂಧಾನಕ್ಕೆ ಚಾಲನೆ ದೊರೆಯಿತಾದರೂ, ಮುಂದಡಿಯಿಟ್ಟ ಪ್ರಜಾ ಸರ್ಕಾರ ಪತನಗೊಂಡು ಮಿಲಿಟರಿ ಸರ್ವಾಧಿಕಾರ ಪಾಕಿಸ್ತಾನದಲ್ಲಿ ಸ್ಥಿರವಾಯಿತು. ವಾಜಪೇಯಿ ಅವರ ಬಸ್ ರಾಜತಾಂತ್ರಿಕತೆ ಕಾರ್ಗಿಲ್ ಯುದ್ಧಭೂಮಿಯಲ್ಲಿ ಪರ್ಯವಸಾನಗೊಂಡಿತು. 2001ರಲ್ಲಿ ಜನರಲ್ ಮುಷರಫ್ ಭಾರತದತ್ತ ಸ್ನೇಹ ಹಸ್ತ ಚಾಚಿದರು. ಹಾಗಂತ ಅವರ ಅಂತರಂಗದಲ್ಲಿ ಪ್ರೇಮ ಪುಷ್ಪವೇನೂ ಅರಳಿರಲಿಲ್ಲ. ಕಾರ್ಗಿಲ್ ಯುದ್ಧಾನಂತರ, ಭಾರತದ ವಿರುದ್ಧ
ದೂರು ಹೊತ್ತು, ಅಂದಿನ ಮಿತ್ರ ರಾಷ್ಟ್ರ ಅಮೆರಿಕಕ್ಕೆ ಮುಷರಫ್ ಹೋದಾಗ, ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ‘Redraw border with blood’ ಎಂದು ನಿಷ್ಠುರವಾಗಿ ಹೇಳಿದ್ದರು. ಮುಷರಫ್ ಶಾಂತಿ ಸಂಧಾನದ ಮೇಜಿಗೆ ಬಂದು ಕೂರುವುದು ಅನಿವಾರ್ಯವಾಯಿತು. ಆಗ್ರಾ ಶೃಂಗಸಭೆಗೆ ವೇದಿಕೆ ಸಜ್ಜಾಯಿತು.

ಭಾರತದ ಕಡೆಯಿಂದ ಹೀಗೊಂದು ಮಾತುಕತೆಗೆ ತುಂಬು ಉತ್ಸಾಹ ತೋರಿದವರು ಅಂದಿನ ಉಪಪ್ರಧಾನಿ ಎಲ್.ಕೆ ಅಡ್ವಾಣಿ. ಈ ಬಗ್ಗೆ ಭಾರತದ ಗೂಢಚರ ಸಂಸ್ಥೆ ಮುಖ್ಯಸ್ಥರಾಗಿದ್ದ ಎ.ಎಸ್. ದುಲತ್ ‘ಕಾಶ್ಮೀರ್: ದಿ ವಾಜಪೇಯಿ ಇಯರ್ಸ್’ ಕೃತಿಯಲ್ಲಿ, ಆಗ್ರಾ ಶೃಂಗಸಭೆಗೆ ವೇದಿಕೆ ಸಿದ್ಧ ಮಾಡಿದ್ದರ ಜೊತೆಗೆ ಮಾತುಕತೆ ವಿಫಲವಾಗುವುದಕ್ಕೆ ಕಾರಣವಾಗಿದ್ದು ಕೂಡ ಅಡ್ವಾಣಿ ಎಂದಿದ್ದಾರೆ. ಆಗಿದ್ದಾದರೂ ಇಷ್ಟೇ, ಅಂದು ಪಾಕಿಸ್ತಾನದ ಹೈಕಮಿಷನರ್
ಆಗಿದ್ದ ಅಶ್ರಫ್ ಜಹಾಂಗೀರ್ ಖಾಸಿ, ಅಡ್ವಾಣಿ ಅವರನ್ನು 20 ಬಾರಿ ಭೇಟಿ ಮಾಡಿ ಪೂರ್ವಭಾವಿ ಮಾತುಕತೆ ನಡೆಸಿದ್ದರು. ಈ ಪ್ರಯತ್ನದಿಂದಾಗಿ ಆಗ್ರಾ ಶೃಂಗಸಭೆ ಆಯೋಜನೆಗೊಂಡಿತು. ಮಾತುಕತೆಯ ವೇಳೆ ‘93ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನ
ಹಸ್ತಾಂತರಿಸಬೇಕು’ ಎಂಬ ಒತ್ತಾಯವನ್ನು ಅಡ್ವಾಣಿ ಮಾಡಿದ್ದರು. ಆದರೆ ಮುಷರಫ್ ಸಿದ್ಧರಿರಲಿಲ್ಲ. ಕೇವಲ ಕಾಶ್ಮೀರವನ್ನಷ್ಟೇ ಮಾತುಕತೆಯ ಕೇಂದ್ರವಾಗಿಸಿಕೊಳ್ಳಬೇಕು, ಭಯೋತ್ಪಾದನೆ ಇತ್ಯಾದಿ ವಿಷಯಗಳು ಮಾತುಕತೆಯಿಂದ ಆಚೆ ಇರಬೇಕೆಂಬ ಪಾಕಿಸ್ತಾನದ ನಿಲುವನ್ನು ಭಾರತ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಮಾತುಕತೆ ಮುರಿದುಬಿತ್ತು.

ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ ಉಭಯ ದೇಶಗಳ ವೈಮನಸ್ಯ ಚಿವುಟಲು ‘ನಾಲ್ಕು ಅಂಶದ ಸಮಾಧಾನ ಸೂತ್ರ’ವನ್ನು ಮುಷರಫ್ ಏಕಪಕ್ಷೀಯವಾಗಿ ಮುಂದಿಟ್ಟಿದ್ದರು. ‘1. ಸೇನೆಯನ್ನು ಹಂತಹಂತವಾಗಿ ಕಾಶ್ಮೀರದಿಂದ ವಾಪಸು ಕರೆಸಿಕೊಳ್ಳಬೇಕು. 2. ಜಮ್ಮು ಕಾಶ್ಮೀರದ ನಾಗರಿಕರ ಸಂಚಾರಕ್ಕೆ ಗಡಿ ಮುಕ್ತವಾಗಿರಬೇಕು. 3. ಪೂರ್ಣ ಸ್ವಾಂತಂತ್ರ್ಯವಲ್ಲದ ಆದರೆ ಸ್ವರಾಜ್ಯ ಮಾದರಿಯ ಆಡಳಿತ ವ್ಯವಸ್ಥೆಯನ್ನು ತರಬೇಕು. 4. ಆಡಳಿತ ಮೇಲುಸ್ತುವಾರಿಯನ್ನು ಜಂಟಿಯಾಗಿ ಭಾರತ, ಪಾಕಿಸ್ತಾನ ನೋಡಿಕೊಳ್ಳಬೇಕು’ ಎಂಬುದು ಮುಷರಫ್ ಸೂತ್ರ. ಆದರೆ ಇದು ಕಾಶ್ಮೀರವನ್ನು ಕಬಳಿಸುವ ಕಪಟ ಗುಣದಿಂದಲೇ ಮುಂದಿಟ್ಟ ಸೂತ್ರವಾಗಿತ್ತು. ಮುಕ್ತಗಡಿ ಮತ್ತು ಸೇನೆಯನ್ನು ವಾಪಸು ಕರೆಸಿಕೊಳ್ಳುವ ನಿರ್ಧಾರ ಅಕ್ರಮ ಶಸ್ತ್ರಾಸ್ತ್ರ ಸಾಗಣೆಗೆ, ಉಗ್ರರ ಒಳನುಸುಳುವಿಕೆಗೆ ದಾರಿ ಮಾಡಿಕೊಡುತ್ತಿತ್ತು. ಆಡಳಿತದ ಮೇಲುಸ್ತುವಾರಿಯ ಹಂಚಿಕೆಯು ಭಾರತದ ಸಂವಿಧಾನದ ಮೂಲ ಸ್ವರೂಪಕ್ಕೆ ವಿರೋಧಾಭಾಸವಾಗಿತ್ತು. ಹಾಗಾಗಿ ಭಾರತ ಅಸಮ್ಮತಿ ಸೂಚಿಸಿತು. ‘ನಾಲ್ಕು ಅಂಶದ ಸೂತ್ರ’ ಮುಷರಫ್ ಬಳಿಯೇ ಉಳಿಯಿತು.

ನಂತರ 2014ರಲ್ಲಿ ಬಹುಮತದೊಂದಿಗೆ ನರೇಂದ್ರ ಮೋದಿ ಅಧಿಕಾರ ಹಿಡಿದಾಗ, ಕದನ ಎದುರು ನೋಡುತ್ತಿದ್ದವರ ಊಹೆ ಸುಳ್ಳು ಮಾಡಿ, ಪಾಕಿಸ್ತಾನದ ಪ್ರಧಾನಿಯನ್ನು ಪ್ರಮಾಣ ವಚನ ಸಮಾರಂಭಕ್ಕೆ ಮೋದಿ ಆಹ್ವಾನಿಸಿದರು. ಷರೀಫ್ ಮೊಮ್ಮಗಳ ಮದುವೆ ಕಾರ್ಯಕ್ರಮಕ್ಕೆ ಅಚ್ಚರಿಯ ಭೇಟಿ ಕೊಟ್ಟದ್ದು ನಡೆಯಿತು. ಆದರೆ ಗಡಿಯಲ್ಲಿ ಗುಂಡಿನ ಮೊರೆತ, ದಾಳಿ-ಪ್ರತಿದಾಳಿ ನಿಲ್ಲಲಿಲ್ಲ. ಕೊನೆಗೆ 2016ರ ಜನವರಿಯಲ್ಲಿ ನಡೆದ ಪಠಾಣ್ ಕೋಟ್ ದಾಳಿಯ ಬಳಿಕ, ಭಾರತವು ಶಾಂತಿ ಸಂಧಾನದ ಪ್ರಕ್ರಿಯೆಗೆ ವಿರಾಮ ಹಾಕಿತು. ಇಷ್ಟೇ ಈ 70 ವರ್ಷಗಳಲ್ಲಿ ನಾವು ಮಾತುಕತೆಯಿಂದ ಸಾಧಿಸಿದ್ದು!

ಹಾಗಾದರೆ, ಭಾರತ-ಪಾಕಿಸ್ತಾನದ ಘರ್ಷಣೆಗೆ ಕಾಶ್ಮೀರವಷ್ಟೇ ಕಾರಣವೇ? ಊಹುಂ, ‘ಕಾಶ್ಮೀರದ ಜನ ಸ್ವಾತಂತ್ರ್ಯ ಬಯಸುತ್ತಿದ್ದಾರೆ, ಒತ್ತಾಯದಿಂದ ಜಮ್ಮು ಕಾಶ್ಮೀರವನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ’ ಎನ್ನುವ ಅರುಧಂತಿ ರಾಯ್, ಮಣಿಶಂಕರ್ ಅಯ್ಯರ್‌ರಂತಹ ಬುದ್ಧಿಜೀವಿ ವರ್ಗದ ಪ್ರತಿನಿಧಿಗಳು ಮತ್ತು ಆಜಾದಿ ಗುಂಪಿನ ಸದಸ್ಯರಾರೂ ಜಮ್ಮು ಕಾಶ್ಮೀರದ ಹೊರತಾಗಿ ಪಾಕಿಸ್ತಾನಕ್ಕೆ ಭಾರತದೊಂದಿಗೆ ಯಾವ ತಕರಾರೂ ಇಲ್ಲವೇ ಎಂಬುದರ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಆದರೆ ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ನೀತಿಯ ವಿಶ್ಲೇಷಕ ಆಶ್ಲೇ ಟೆಲ್ಲಿಸ್, ‘Are India-Pakistan Peace Talks Worth a Damn?’ ಎಂಬ ತಮ್ಮ ಪ್ರಬಂಧದಲ್ಲಿ ಕಾಶ್ಮೀರದ ಹೊರತಾಗಿ ಭಾರತವನ್ನು ದ್ವೇಷಿಸಲು ಪಾಕಿಸ್ತಾನಕ್ಕೆ ಇರುವ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಕೆಲವು ಮುಖ್ಯ ಸಂಗತಿಗಳಿವೆ.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಮೈಮನಸ್ಯ ಮತ್ತು ಪೈಪೋಟಿ, ಸಂಧಾನ ಸಾಧ್ಯವಿರುವ ಭಿನ್ನಾಭಿಪ್ರಾಯಗಳ ಮೂಲದಿಂದ ಟಿಸಿಲೊಡೆದದ್ದಲ್ಲ. ಬದಲಿಗೆ, ದೀರ್ಘಕಾಲೀನ ಸೈದ್ಧಾಂತಿಕ ಭಿನ್ನಾಭಿಪ್ರಾಯ, ಗಡಿ ಕುರಿತ ಅಸಂತೋಷ ಮತ್ತು ಶಕ್ತಿ ರಾಜಕೀಯದ ಭಾಗವಾಗಿ ಅದು ಬೆಳೆದಿದೆ. ಏಷ್ಯಾದ ಮಟ್ಟಿಗೆ ಪ್ರಾದೇಶಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವುದನ್ನು ಪಾಕಿಸ್ತಾನದ ಸೇನೆ ಸಹಿಸುವುದಿಲ್ಲ. ಮೂರು ಯುದ್ಧಗಳ ಸೋಲು ಮತ್ತು ಭಾರತದ ಸರಿಸಮನಾಗಿ ತಾನು ನಿಲ್ಲಬೇಕು ಎಂಬ ಮಹತ್ವಾಕಾಂಕ್ಷೆ ಅದಕ್ಕೆ ಕಾರಣ. ಜೊತೆಗೆ ತಾನು ಅಣ್ವಸ್ತ್ರ ಹೊಂದಿರುವುದರಿಂದ, ದೊಡ್ಡ ಮಟ್ಟದ ಪ್ರತಿದಾಳಿಗೆ ಭಾರತ ಮುಂದಾಗುವುದಿಲ್ಲ. ಅಣ್ವಸ್ತ್ರ ಇರುವ ಕಾರಣದಿಂದಲೇ ಜಾಗತಿಕ ಶಕ್ತಿಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂಬ ಒತ್ತಡವನ್ನು ಭಾರತದ ಮೇಲೆ ಹೇರುತ್ತವೆ ಎಂದು ಪಾಕಿಸ್ತಾನ ನಂಬಿದೆ. ಹಾಗಾಗಿ ಪದೇ ಪದೇ ಭಾರತವನ್ನು ಕೆಣಕುತ್ತಿದೆ. ಮುಖ್ಯವಾಗಿ ಭಾರತದ ಬೆಳವಣಿಗೆಯ ನೆರಳಿನಲ್ಲಿ ಪಾಕಿಸ್ತಾನ ಅಭದ್ರತೆಯಿಂದ ನರಳುತ್ತಿದೆ’ ಎಂಬುದು ಟೆಲ್ಲಿಸ್ ವಾದ.

ಹಾಗೆ ನೋಡಿದರೆ, ಭಾರತ ಕುರಿತ ಪಾಕಿಸ್ತಾನದ ಆತಂಕ, ಅಭದ್ರತೆಗೆ ಕಾರಣಗಳೇ ಇಲ್ಲ. ಪಾಕಿಸ್ತಾನದ ಇರುವಿಕೆಯನ್ನೂ, ಜಮ್ಮು ಕಾಶ್ಮೀರ ಮತ್ತು ಅಂತರರಾಷ್ಟ್ರೀಯ ಗಡಿರೇಖೆ ಕುರಿತ ಯಾಥಾಸ್ಥಿತಿಯನ್ನು ಭಾರತ ಒಪ್ಪಿಕೊಂಡಿದೆ. ಲಾಹೋರ್ ಭೇಟಿಯ ಸಂದರ್ಭದಲ್ಲಿ ಮಿನಾರ್-ಎ- ಪಾಕಿಸ್ತಾನ ಸ್ಮಾರಕದೆದುರು ನಿಂತು ‘ಸ್ಥಿರ, ಸಮೃದ್ಧ ಪಾಕಿಸ್ತಾನವನ್ನು ಭಾರತ ಎದುರು ನೋಡುತ್ತದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ’ ಎಂಬ ಮಾತನ್ನು ವಾಜಪೇಯಿ ಸ್ಪಷ್ಟವಾಗಿ ಹೇಳಿದ್ದರು. ಪ್ರಸ್ತುತ, ಚೀನಾದ ಸವಾಲನ್ನು ಸಮರ್ಥವಾಗಿ ಎದುರಿಸಿ ಜಾಗತಿಕವಾಗಿ ಪ್ರಬಲ ಶಕ್ತಿಯಾಗಿ ಬೆಳೆಯಬೇಕು ಎಂಬುದಷ್ಟೇ ಭಾರತದ ಗುರಿಯಾಗಿದೆ. ಈಗಾಗಾಲೇ ಆ ನಿಟ್ಟಿನಲ್ಲಿ ನಾವು ವಿದೇಶಾಂಗ ನೀತಿ, ಜಾಗತಿಕ ಕಾರ್ಯತಂತ್ರ ಮತ್ತು ಸೇನಾ ಸಾಮರ್ಥ್ಯ
ವನ್ನು ಬೆಳೆಸಿಕೊಂಡಿದ್ದರೂ, ಪಾಕಿಸ್ತಾನ ಒಡ್ದುತ್ತಿರುವ ಅಡೆತಡೆಗಳು ಆ ವೇಗವನ್ನು ತಗ್ಗಿಸಿವೆ. ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಸಮೀಪದ ಅಡ್ಡಿಯಾಗಿ ಪಾಕಿಸ್ತಾನ ಇದೆ.

ಈ ಎಲ್ಲ ಅಂಶಗಳಿಂದ ಸ್ಪಷ್ಟವಾಗುವ ಸಂಗತಿಯಿಷ್ಟೇ. ಕಾಶ್ಮೀರ, ಸಿಯಾಚಿನ್, ಸರ್ ಕ್ರೀಕ್ ಬಿಕ್ಕಟ್ಟಿನಾಚೆ ‘ಭಾರತ ದ್ವೇಷ’ ಪಾಕಿಸ್ತಾನದ ಮಿದುಳು, ಹೃದಯದಲ್ಲಿ ತುಂಬಿ ಹೋಗಿದೆ. 1971ರಲ್ಲಿ ಜಲ್ಫಿಕರ್ ಅಲಿ ಭುಟ್ಟೋ ಯುದ್ಧ ಸೋತಮೇಲೂ ‘ಭಾರತದೊಂದಿಗೆ ಸಾವಿರ ವರ್ಷಗಳ ಕದನಕ್ಕೆ ನಾವು ಸಿದ್ಧ’ ಎಂದಿದ್ದರು. ಮಗಳು ಬೆನಜೀರ್ ಭುಟ್ಟೋ 1989ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ಕೊಟ್ಟು, ‘ಆಜಾದಿ’ ಘೋಷಣೆಯನ್ನು ಬಾಯಿ ತುಂಬಾ ಕೂಗಿ
ಹೋಗಿದ್ದರು. ಆದರೆ ಕಾಶ್ಮೀರದ ಒಂದಂಗುಲವೂ ಕೈ ಬದಲಾಗಲಿಲ್ಲ. ಈಗಲೂ ‘ಭಾರತ ದ್ವೇಷ’ ಪಾಕ್ ರಾಜಕಾರಣಿಗಳಿಗೆ, ಸೇನಾಧಿಕಾರಿಗಳಿಗೆ ಪ್ರಾಣವಾಯು.

ನಿಜ, ಯುದ್ಧ ಯಾವ ಕಾರಣಕ್ಕೂ ಆದ್ಯತೆಯಾಗಬಾರದು. ಆದರೆ ಕಪಟ ಗುಣದ, ದುಷ್ಟ ರಾಷ್ಟ್ರದೊಂದಿಗೆ ಮಾತುಕತೆಯ ನೆಪದಲ್ಲಿ ಕೈಕುಲುಕುವುದು ಕಾಲಹರಣ ಎಂಬುದೂ ಅಷ್ಟೇ ಸತ್ಯ. ‘Love Thy Neighbor’ ಎಂಬ ವಿಷಯದಡಿ ವಾರದ ಕೆಳಗೆ ಅಯ್ಯರ್ ಕರಾಚಿ ಸಾಹಿತ್ಯೋತ್ಸವದಲ್ಲಿ ಮಾತನಾಡಿದಾಗ ತಮ್ಮದೇ ಪಕ್ಷದ, ಶಾಂತಿಯೇ ಮೈವೆತ್ತಿ ನಿಂತಂತಿದ್ದ ನೆಹರೂ, ಮನಮೋಹನ್ ಸಿಂಗ್ ಅವಧಿಯಲ್ಲಾದರೂ ಪಾಕಿಸ್ತಾನ ಭಾರತವನ್ನು ಎಷ್ಟು ಪ್ರೀತಿಸಿತು ಎಂಬುದನ್ನು ಹೇಳಬೇಕಿತ್ತು. ಆಗ ಅಯ್ಯರ್ ಚಪ್ಪಾಳೆ ವಂಚಿತರಾಗುತ್ತಿದ್ದರು. ಭಾರತದ ಮೊದಲ ವಿದೇಶಾಂಗ ಕಾರ್ಯದರ್ಶಿ ಗಿರಿಜಾ ಶಂಕರ್ ಭಾಜಪೈ 1951ರಲ್ಲಿ ಹೇಳಿದ್ದರು ‘ಪಾಕಿಸ್ತಾನಿಗಳ ಹೃದಯದಲ್ಲಿ ಭಾರತದ ಬಗ್ಗೆ ಕಹಿ ಇರುವವರೆಗೂ ಪ್ರಾಮಾಣಿಕ ಮಾತುಕತೆಯಾಗಲೀ, ಮೈತ್ರಿಯಾಗಲೀ ಸಾಧ್ಯವಿಲ್ಲ’. ಆ ಮಾತನ್ನು ಬದಲಿಸಿ ಹೇಳುವ ಪರಿಸ್ಥಿತಿ ಈಗಲೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT