ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿ ಸಾಗರದ ನಾಲ್ಕು ನದಿಗಳು

Last Updated 1 ಮಾರ್ಚ್ 2016, 19:58 IST
ಅಕ್ಷರ ಗಾತ್ರ

‘ನಿಮಗೆಲ್ಲ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್ ಥರದವರ ಜೊತೆ ಬೆಳೆಯುವ ಅವಕಾಶ ಸಿಕ್ಕಿತು; ನಮ್ಮ ತಲೆಮಾರಿಗೆ ನೀವು ಅವರನ್ನೆಲ್ಲ ಹೇಳಿಕೊಡಬೇಕು’ ಎಂದು ನಟ ಸತೀಶ್ ನೀನಾಸಂ ಹೇಳಿದಾಗ ಅಚ್ಚರಿಯಾಯಿತು. ಹೊಸ ತಲೆಮಾರಿನ ಒಳ್ಳೆಯ ನಟರೊಬ್ಬರ ತುಡಿತ ಕಂಡಾಗ ಉತ್ತಮ ಆದರ್ಶಗಳನ್ನು ಕುರಿತ ದಾಹ ಎಲ್ಲ ಕಾಲದಲ್ಲೂ ಇರುವುದನ್ನು ನಾವು ಸರಿಯಾಗಿ ಗಮನಿಸುತ್ತಿಲ್ಲವೇನೋ ಎನ್ನಿಸತೊಡಗಿತು. ಇದಕ್ಕಿಂತ ಮೊದಲು ‘ಪ್ರಜಾವಾಣಿ’ಯಲ್ಲಿ ಎಂಡಿಎನ್ ಅವರ 80ನೇ ಹುಟ್ಟುಹಬ್ಬದ ದಿನ ಮಗಳು ಚುಕ್ಕಿ ಹಂಚಿಕೊಂಡಿದ್ದ ನೆನಪುಗಳನ್ನು ಓದಿದ್ದ ಹೊಸ ತಲೆಮಾರಿನ ಕವಿಯೊಬ್ಬರು, ಎಂಡಿಎನ್ ಹೋರಾಟದ ಬಗ್ಗೆ ಆಸಕ್ತಿ ತೋರತೊಡಗಿದ್ದರು. ಎಂಡಿಎನ್ ಬಗ್ಗೆ ಯೋಚಿಸುತ್ತಿರುವಾಗ, ಮಾರ್ಚ್‌ನಲ್ಲಿ ಲಂಕೇಶ್ (8 ಮಾರ್ಚ್), ಶಾಂತವೇರಿ ಗೋಪಾಲಗೌಡ (14 ಮಾರ್ಚ್), ರಾಮಮನೋಹರ ಲೋಹಿಯಾ (23 ಮಾರ್ಚ್) ಹುಟ್ಟುಹಬ್ಬಗಳೂ ಬರುತ್ತಿರುವುದು ನೆನಪಾಯಿತು. ಇವರು ಆಧುನಿಕ ಕರ್ನಾಟಕದ ಚಳವಳಿ, ಸಾಹಿತ್ಯ, ರಾಜಕಾರಣಗಳ ಜೊತೆ ಬೆರೆತಿರುವ ರೀತಿಯನ್ನು ಮತ್ತೆ ಚರ್ಚಿಸಬೇಕೆನ್ನಿಸಿತು.

ಸಾಗರ ತಾಲ್ಲೂಕಿನ ಕಾಗೋಡಿನಲ್ಲಿ ಗಣಪತಿಯಪ್ಪ ರೂಪಿಸುತ್ತಿದ್ದ ಗೇಣಿದಾರರ ಹೋರಾಟಕ್ಕೆ ಶಾಂತವೇರಿ ಗೋಪಾಲಗೌಡರ ನಾಯಕತ್ವದಲ್ಲಿ ಸಮಾಜವಾದಿ ಪಕ್ಷವೂ ಇಳಿಯಿತು; ಸಮಾಜವಾದಿ ರಾಷ್ಟ್ರೀಯ ನಾಯಕ ಲೋಹಿಯಾ ಕಾಗೋಡಿಗೆ ಬಂದು ಹೋರಾಟವನ್ನು ಬೆಂಬಲಿಸಿದರು. ಈ ಹೋರಾಟ ಮುಂದೆ ಕರ್ನಾಟಕದ ರೈತ ಹೋರಾಟಕ್ಕೂ ಒಂದು ರೀತಿಯ ತಳಹದಿಯನ್ನೊದಗಿಸಿತು. ಲಂಕೇಶ್ ಗೋಪಾಲಗೌಡರ ಆತ್ಮೀಯರಾಗಿದ್ದರು. ಎಂಡಿಎನ್ ಹಾಗೂ ಲಂಕೇಶ್ ಎಪ್ಪತ್ತರ ದಶಕದಲ್ಲಿ ಗೆಳೆಯರಾಗಿದ್ದರು. ಎಂಡಿಎನ್ ಆರಂಭಿಸಿದ ಯುವಜನ ಸಮಾಜವಾದಿ ಸಭಾದ ಮೂಲಕ ಲೋಹಿಯಾ ಚಿಂತನೆಗಳು, ವಿಚಾರವಾದಿ ನೋಟಕ್ರಮಗಳು ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್, ಟಿ.ಎನ್. ಸೀತಾರಾಂ, ಸಿದ್ಧಲಿಂಗಯ್ಯ, ಡಿ.ಆರ್. ನಾಗರಾಜ್ ಥರದ ಆ ಕಾಲದ ಎಳೆಯರಲ್ಲಿ ಬೆಳೆಯತೊಡಗಿದವು. ಕರ್ನಾಟಕದಲ್ಲಿ ವೈಚಾರಿಕ ಆಂದೋಲನವೊಂದರ ಭೂಮಿಕೆ ಸಿದ್ಧವಾಗತೊಡಗಿತು. ಕರ್ನಾಟಕದ ಹಲವು ವಲಯಗಳಲ್ಲಿರುವ ಸಮಾಜವಾದಿ ಎಳೆಗಳು ಅಕಸ್ಮಾತಾಗಿ ಹದಿಹರೆಯದಲ್ಲಿ ನಮ್ಮೊಳಗೆ ಲಂಕೇಶ್, ಎಂಡಿಎನ್ ಮೂಲಕ ಇಳಿದವು. ಈ ಇಬ್ಬರಿಗೂ ಲೋಹಿಯಾವಾದದ ಪ್ರೇರಣೆಗಳಿದ್ದವು. ಲಂಕೇಶರ ಪತ್ರಿಕೆಯ ಮೂಲಕ ವ್ಯವಸ್ಥೆಯ ವಿರೋಧಿ ಚಿಂತನೆಯನ್ನು ಕಲಿತ ನಮ್ಮಂಥವರಿಗೆ ಎಂಡಿಎನ್ ಅವರು ಸುಂದರೇಶ್, ಕಡಿದಾಳು ಶಾಮಣ್ಣನವರ ಜೊತೆಗೂಡಿ ರೈತಸಂಘಟನೆಯ ಶಕ್ತಿ ತೋರಿಸಿಕೊಟ್ಟರು. ಎಂಡಿಎನ್ ಮತ್ತು ತೇಜಸ್ವಿ ರೂಪಿಸಿದ್ದ ‘ಲೋಹಿಯಾ ಕೆಂಪು ಪುಸ್ತಕ’ ರಾಜಕಾರಣ, ಜಾತಿಪದ್ಧತಿ, ಮಾನವ ಸಂಬಂಧಗಳು ಎಲ್ಲವನ್ನೂ ನೋಡುವ ನೋಟಕ್ರಮವೊಂದನ್ನು ನಮ್ಮೊಳಗೆ ಬಿತ್ತತೊಡಗಿತು. ಹೀಗೆ ಈ ನಾಲ್ವರೂ ನಮ್ಮೊಳಗೆ ವಿಕಾಸಗೊಳ್ಳತೊಡಗಿದರು.


ಕಳೆದ ಎಪ್ಪತ್ತು ವರ್ಷಗಳ ಕರ್ನಾಟಕದ ಅನೇಕ ಆರೋಗ್ಯಕರ ಬೆಳವಣಿಗೆಗಳಲ್ಲಿ ಈ ನಾಲ್ವರ ಒಂದಲ್ಲ ಒಂದು ಕೊಡುಗೆ ಇದೆ. ರೈತ, ದಲಿತ, ಭಾಷಾ ಚಳವಳಿ; ಜಾತೀಯತೆ ಹಾಗೂ ಕೋಮುವಾದದ ವಿರುದ್ಧದ ಹೋರಾಟ, ಗ್ರಾಮೀಣ ಕರ್ನಾಟಕದ ಚಲನೆಗಳು, ವಿಕೇಂದ್ರೀಕರಣ ಚಿಂತನೆ, ಸಮಾನತೆಯ ರಾಜಕೀಯ ಪ್ರಯೋಗಗಳು, ಹಕ್ಕುಗಳ ಹೋರಾಟಗಳು…ಹೀಗೆ ಈ ನಾಲ್ವರೂ ಸಮಾಜವಾದದ ಎಲ್ಲೆಯನ್ನು ವಿಸ್ತರಿಸುತ್ತಾ ಹೋದರು. ಚಿಂತನೆ, ಹೋರಾಟಗಳ ಜೊತೆಗೇ ಅವರು ಅಧಿಕಾರ ರಾಜಕಾರಣವನ್ನು ನೋಡಿದ ರೀತಿ ಕೂಡ ಮುಖ್ಯವಾದುದು. ಲೋಹಿಯಾ ಲೋಕಸಭಾ ಸದಸ್ಯರಾಗಿದ್ದರು. ಗೋಪಾಲಗೌಡರು ಎರಡು ಸಲ ವಿಧಾನಸಭೆಯ ಶಾಸಕರಾದರು; ಒಂದು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಪದವಿಯ ಹತ್ತಿರಕ್ಕೂ ಬಂದು, ‘ಉಳುವವನೇ ಹೊಲದೊಡೆಯ’ ಮಸೂದೆಯನ್ನು ಮಂಡಿಸುವ ಆಸೆಯಿಂದ ಕಾದರು; ಅದು ಈಡೇರಲಿಲ್ಲ. ಎಂಡಿಎನ್ ಶಾಸಕರಾಗಿದ್ದರು. ಲಂಕೇಶ್ ‘ಪ್ರಗತಿರಂಗ’ ಎಂಬ ರಾಜಕೀಯ ಪಕ್ಷ ಕಟ್ಟಿ ಹಿಂದೆ ಸರಿದರು. ಈ ಎಲ್ಲರಲ್ಲೂ ಸಮಾನತೆಯ ಚಿಂತನೆಗಳನ್ನು ಸಾಕಾರಗೊಳಿಸುವ ವಿಶಾಲ ರಾಜಕೀಯ ಕ್ರಿಯೆಗೆ ಸಿದ್ಧರಾಗಬೇಕೆಂಬ ಕಾಳಜಿ ಇತ್ತು.  ಪ್ರಬುದ್ಧ ಸಾಮಾಜಿಕ ಚಿಂತನೆ, ರಾಜಕೀಯ ಕ್ರಿಯೆಯನ್ನು ಬೆಸೆಯುವ ಈ ಮಾದರಿ ಎಲ್ಲ ಕಾಲದಲ್ಲೂ ಪ್ರಯೋಗವಾಗುತ್ತಿರಬೇಕಾಗುತ್ತದೆ. ‘ರಾಜಕೀಯ ಅಧಿಕಾರ ಹಿಡಿಯುವುದು ನನಗಾಗಿಯಲ್ಲ; ಜನರಿಗೆ ಹೆಚ್ಚಿನ ಅಧಿಕಾರ ಕೊಡಲು ಹಾಗೂ ಕೊಡಿಸಲು’ ಎಂಬುದನ್ನು ಒತ್ತಿ ಹೇಳುವ ಇಂಥ ಮಾದರಿಗಳನ್ನು ಎಲ್ಲ ಕಾಲದಲ್ಲೂ ಚಾಲ್ತಿಯಲ್ಲಿಟ್ಟಿರಬೇಕಾಗುತ್ತದೆ.

ಇಂಥ ಸ್ವತಂತ್ರ ವ್ಯಕ್ತಿತ್ವಗಳು ರೂಪುಗೊಳ್ಳುವ ಕ್ರಮವನ್ನು ಕೂಡ ನಾವು ಗಮನಿಸಬೇಕು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಲೋಹಿಯಾ, ಗಾಂಧೀಜಿ ಸೂಚಿಸಿದರೂ ಸರ್ಕಾರದಲ್ಲಿ ಭಾಗಿಯಾಗಲಿಲ್ಲ; ಹಾದಿತಪ್ಪಿದ ತಮ್ಮ ಪಕ್ಷದ ರಾಜ್ಯ ಸರ್ಕಾರದ ವಿರುದ್ಧವೇ ಚಳವಳಿ ಸಂಘಟಿಸಿದರು. ಗೋಪಾಲಗೌಡರು ಶಾಸಕರಾಗಿದ್ದಾಗ ಒಮ್ಮೆ ಕೆಮ್ಮಣ್ಣುಗುಂಡಿಯಲ್ಲಿದ್ದರು. ಅಲ್ಲಿಗೆ ಬಂದಿದ್ದ ರಾಜ್ಯದ ಮುಖ್ಯಮಂತ್ರಿ ‘ಗೌಡರೇ, ನೀವೇಕೆ ಇಷ್ಟು ಬಡತನ ಅನುಭವಿಸಬೇಕು? ನಮ್ಮ ಪಕ್ಷಕ್ಕೆ ಬನ್ನಿ. ಮಂತ್ರಿಪದವಿ ಕೊಡುತ್ತೇನೆ’ ಎಂದರು. ಗೌಡರು ‘ಇನ್ನೊಮ್ಮೆ ಇಂಥ ಮಾತಾಡಿದರೆ ಬೇರೆ ಥರ ಉತ್ತರ ಕೊಡಬೇಕಾಗುತ್ತದೆ’ ಎಂದು ರೇಗಿ ಅವರನ್ನು ಸಾಗಹಾಕಿದರು. ಬೆಂಗಳೂರಿನಲ್ಲಿ ನಡೆಯಲಿದ್ದ ವಿಶ್ವಸೌಂದರ್ಯ ಸ್ಪರ್ಧೆಯನ್ನು ರೈತಸಂಘ ವಿರೋಧಿಸುತ್ತಿದ್ದಾಗ, ಮುಂಬೈನ ಸಿನಿಮಾ ನಿರ್ಮಾಪಕನೊಬ್ಬ ಇಪ್ಪತ್ತೈದು ಲಕ್ಷ ರೂಪಾಯಿ ಹಿಡಿದು ಎಂಡಿಎನ್ ಮನೆಗೆ ಬಂದ; ‘ಬಾಗಿಲು ತೆರೆದಿದೆ’ ಎಂದು ಒಂದೇ ಮಾತು ಹೇಳಿದ ಎಂಡಿಎನ್, ಅಲ್ಲಿಂದ ತೊಲಗಲು ಅವನಿಗೆ ಸೂಚಿಸಿದರು. ಲಂಕೇಶರು ಅಧಿಕಾರಿಗಳು, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳನ್ನು ಉಗ್ರವಾಗಿ ಟೀಕಿಸುವ ದನಿಯನ್ನು ಕೊನೆತನಕ ಉಳಿಸಿಕೊಂಡರು. ಈ ಅದ್ಭುತ ದಿಟ್ಟತನ ಚೀರುಗಂಟಲುಗಳಿಂದ ಬರುವುದಿಲ್ಲ; ಅದು ಆಳದ ನಿಷ್ಠುರ ನೈತಿಕತೆಯಿಂದ ಹಾಗೂ ಎಂಜಲಿಗೆ ಕೈಯೊಡ್ಡದ ಆತ್ಮಗೌರವದಿಂದ ಮಾತ್ರ ಬರಬಲ್ಲದು.

ಈ ನಾಲ್ವರ ಆಳದಲ್ಲೂ ಇಂಡಿಯಾದ ಬಗೆಬಗೆಯ ಭ್ರಷ್ಟತೆಯ ಬಗ್ಗೆ ನಿಜವಾದ ಸಿಟ್ಟಿತ್ತು. ‘ಇಂಡಿಯಾದಂಥ ದೇಶದಲ್ಲಿ ಒಂದು ಅತಿಗೆ ಹೋಗಿ ಹೇಳದಿದ್ದರೆ ಏನೂ ತಲುಪುವುದಿಲ್ಲ’ ಎಂದು ಲೋಹಿಯಾ ಹೇಳಿದ್ದು ಉಳಿದ ಮೂವರ ಭಾಷೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಸೀಳುವ ವ್ಯಂಗ್ಯವನ್ನು ಈ ನಾಲ್ವರೂ ಚಿಕಿತ್ಸಕವಾಗಿ ಬಳಸಬಲ್ಲವರಾಗಿದ್ದರು. ಒಮ್ಮೆ ಗೋಪಾಲಗೌಡರ ಜೊತೆಯಲ್ಲಿದ್ದ ಶೇಷಪ್ಪ, ಸಾಹುಕಾರರೊಬ್ಬರ ಮನೆಯನ್ನು ಗೋಣೆತ್ತಿ ನೋಡುತ್ತಿದ್ದರು. ‘ಶೇಷಪ್ಪಾ! ಬಹಳ ಜನರ ಗೋಣು ಮುರಿದು ಕಟ್ಟಿದ ಮನೆ ಕಣೋ. ನೀನ್ಯಾಕೆ ಹಂಗೆ ಗೋಣು ಮುರಕೊಂಡು ನೋಡ್ತೀಯೋ!’ ಎಂದರು ಗೌಡರು. ಲೋಹಿಯಾ ಬಳಸುತ್ತಿದ್ದ ತೀಕ್ಷ್ಣವ್ಯಂಗ್ಯಕ್ಕೆ ಪ್ರಧಾನಿ ನೆಹರೂ ಕೂಡ ಕಂಗಾಲಾಗುತ್ತಿದ್ದರು. ‘ರೈತರು ಸಾಲಗಾರರಲ್ಲ; ಸರ್ಕಾರವೇ ಬಾಕಿದಾರ’ ಎಂಬ ರೀತಿಯ ಘೋಷಣೆಗಳನ್ನು ರೂಪಿಸಿದ ಎಂಡಿಎನ್, ಸರ್ಕಾರಗಳನ್ನು ನೇರವಾಗಿ ತಿವಿಯುತ್ತಿದ್ದರು. ಗೋಪಾಲಗೌಡರು ವಿಧಾನಸಭೆಯಲ್ಲಿ ಮೈಕ್ ಕಿತ್ತೆಸೆಯಬಲ್ಲವರಾಗಿದ್ದರು. ದುಷ್ಟ ಸರ್ಕಾರಗಳು ಅವರ ದನಿಗಳನ್ನು ಅಡಗಿಸಲಾಗಲಿಲ್ಲ ಎನ್ನುವುದು ಅವರ ವ್ಯಕ್ತಿತ್ವದ ವಿಶಿಷ್ಟ ಶಕ್ತಿಯಂತೆಯೇ ಅವರಿಗೆ ಜನಮಾನಸದೊಳಗಿದ್ದ ವ್ಯಾಪಕ ನೈತಿಕ ಬೆಂಬಲವನ್ನೂ ಸೂಚಿಸುತ್ತದೆ.    

ಇದೆಲ್ಲದರ ಜೊತೆಗೆ, ಈ ನಾಲ್ವರೂ ಗೊಡ್ಡಾಗಿ ಬದುಕದೆ, ಬದುಕಿನ ಸುಖದ ಗಳಿಗೆಗಳನ್ನು ಗಳಿಸಿ, ಉಳಿಸಿಕೊಳ್ಳಬಲ್ಲ ತೀವ್ರ ವ್ಯಕ್ತಿಗಳಾಗಿದ್ದರು. ಅದು ಅವರಿಗೆ ಸಾರ್ವಜನಿಕ ಜೀವನದ ಅನೇಕ ಬಗೆಯ ಕ್ಷುದ್ರತೆಗಳನ್ನು ಮೀರಬಲ್ಲ ಒಳಶಕ್ತಿಯನ್ನೂ ಕೊಟ್ಟಿರಬಹುದು. ಲೋಹಿಯಾ ಇಂಡಿಯಾದ ಪುರಾಣಗಳ ಒಳದನಿಗಳನ್ನೂ, ನದಿ, ಕಲ್ಲುಗಳ ಪಿಸುಮಾತುಗಳನ್ನೂ ಕೇಳಿಸಿಕೊಳ್ಳಬಲ್ಲವರಾಗಿದ್ದರು. ಶಾಂತವೇರಿಯವರಿಗೆ ಗಾಯಕ ಕಾಳಿಂಗರಾಯರಿಂದ ಹಿಡಿದು ತರಾಸು, ಗೋಪಾಲಕೃಷ್ಣ ಅಡಿಗ, ನಿಸಾರರಂಥ ಸಾಹಿತಿಗಳ ಸಂಗವಿತ್ತು. ಕವಿ ಪುತಿನ ವಿಧಾನಸಭೆಯಲ್ಲಿ ಶಾಂತವೇರಿಯವರ ಕನ್ನಡ ಕೇಳಿ ಪುಳಕಗೊಳ್ಳುತ್ತಿದ್ದರು. ಎಂಡಿಎನ್ ಜಗತ್ತಿನ ವಿವಿಧ ದಿಕ್ಕುಗಳ ಸಾಹಿತ್ಯ, ಸಿದ್ಧಾಂತ ಹಾಗೂ ಆರ್ಥಿಕ ಚಿಂತನೆಗಳನ್ನು ಆಳವಾಗಿ ಗ್ರಹಿಸಿದ್ದರು.

ಜಾಗತೀಕರಣದ ಅಪಾಯಗಳನ್ನು ಅವರಷ್ಟು ಸ್ಪಷ್ಟವಾದ ಕನ್ನಡದಲ್ಲಿ ಸಾಮಾನ್ಯರೈತರಿಗೂ ತಿಳಿಯುವಂತೆ ವಿವರಿಸಿದ ಇನ್ನೊಬ್ಬರಿಲ್ಲ. ಲಂಕೇಶರು ಚಿಂತನೆ, ಸೃಜನಶೀಲತೆಗಳೆರಡನ್ನೂ ಬೆಸೆದು ಕನ್ನಡದ ಶ್ರೇಷ್ಠಲೇಖಕರಲ್ಲೊಬ್ಬರಾದರು. ಇವರೆಲ್ಲರ ಒಡನಾಟದಲ್ಲಿ ಕನ್ನಡನಾಡು ಸಮಾಜವಾದವನ್ನು ವಿಶಿಷ್ಟ ರೀತಿಯಲ್ಲಿ ಹೀರಿಕೊಂಡಿದೆ. ತೇಜಸ್ವಿ, ಅನಂತಮೂರ್ತಿ, ಕೆ.ರಾಮದಾಸ್, ಕಲ್ಲೆಶಿವೋತ್ತಮರಾವ್, ನಾಗಭೂಷಣ್, ಚಂಪಾ, ಬಾನುಮುಷ್ತಾಕ್, ಕುಂವೀ ಥರದ ನೂರಾರು ಲೇಖಕ, ಲೇಖಕಿಯರು ಸಮಾಜವಾದಿ ನೋಟಕ್ರಮವನ್ನು ಹಬ್ಬಿಸಿದ್ದಾರೆ. ಹಳ್ಳಿಯ ಮಂದಣ್ಣನ ಸಹಜಪ್ರತಿಭೆ ಸಮಾಜವಾದಿ ತೇಜಸ್ವಿ ಸೃಷ್ಟಿಸಿದ ಕರ್ವಾಲೋನ ಕಣ್ಣಿಗೆ ಬೀಳುವ ಪವಾಡವನ್ನೇ ಗಮನಿಸಿ. ಸಮಾನತೆಯ ತತ್ವವನ್ನು ಬಿಂಬಿಸುವ ಇಂಥ ಸಾವಿರಾರು ಉದಾಹರಣೆಗಳನ್ನು ಕನ್ನಡ ಸಾಹಿತ್ಯದಿಂದ ಕೊಡುತ್ತಾ ಹೋಗಬಹುದು.

ಹೊಸ ಸಮಾಜದ ಕನಸುಗಳು ಕಣ್ಣೆದುರೇ ಕುಸಿಯುತ್ತಿರುವುದನ್ನು ಕಂಡು ದುಃಖಿಯಾಗಿದ್ದ ಲೋಹಿಯಾ ತಮ್ಮ ಬದುಕಿನ ಕೊನೆಯಲ್ಲಿ ಹೇಳಿದ್ದರು: ‘ಜನ ನನ್ನನ್ನು ಕೇಳಿಸಿಕೊಳ್ಳುತ್ತಾರೆ; ಪ್ರಾಯಶಃ ನಾನು ಸತ್ತ ಮೇಲೆ. ಅಂತೂ ಒಂದು ದಿನ ಅವರು ನನ್ನನ್ನು ಕೇಳಿಸಿಕೊಳ್ಳಲೇಬೇಕು’. ಅವರನ್ನು ಸರಿಯಾಗಿ ಓದಿರುವ ಎಲ್ಲರೂ ಅವರನ್ನು ಕೇಳಿಸಿಕೊಳ್ಳುತ್ತಲೇ ಬಂದಿದ್ದಾರೆ. ಗೋಪಾಲಗೌಡ, ಎಂಡಿಎನ್, ಲಂಕೇಶರ ಚಿಂತನೆಗಳನ್ನೂ ಜನ ಕೇಳಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಈ ಚಿಂತನೆಗಳಿಗೆ ಖಚಿತವಾದ ಸಂಘಟನಾತ್ಮಕ ದಿಕ್ಕು ಕೊಡುವ ಕೆಲಸವನ್ನು ನಮ್ಮ ಸಾಂಸ್ಕೃತಿಕ, ಸಾಮಾಜಿಕ ವೇದಿಕೆಗಳು ಇನ್ನಷ್ಟು ವ್ಯವಸ್ಥಿತವಾಗಿ ಮಾಡಬೇಕಾಗುತ್ತದೆ. ಈ ಚಿಂತನೆಗಳ ಸಾರವನ್ನು ಹೊಸ ತಲೆಮಾರುಗಳಿಗೆ ಕಮ್ಮಟಗಳ ಮೂಲಕ ಎಲ್ಲೆಡೆ ತಲುಪಿಸಬೇಕಾಗುತ್ತದೆ; ಹಾಗೆಯೇ ಹಳೆಯ ತಲೆಮಾರಿನವರು ಅವನ್ನು ಮತ್ತೆ ಈ ಕಾಲದಲ್ಲಿ ಗ್ರಹಿಸಿ ಹೊಸ ಸ್ಫೂರ್ತಿ ಪಡೆಯಬೇಕಾಗುತ್ತದೆ. ಈ ನಾಲ್ವರೂ ತಮ್ಮ ಆಳದ ಬದ್ಧತೆ, ಸೂಕ್ಷ್ಮಗ್ರಹಿಕೆ, ಕ್ರಿಯೆಗಳ ಮೂಲಕ ಜನರ ಸಂವೇದನೆಯನ್ನು ರೂಪಿಸಲು ಹಾಗೂ ಜನತೆಯ ಬದುಕನ್ನು ತಕ್ಕ ಮಟ್ಟಿಗಾದರೂ ಬದಲಿಸಲು ದುಡಿದ ರೀತಿಗಾಗಿ ಅವರನ್ನು ಕೃತಜ್ಞತೆಯಿಂದ ನೆನೆಯುತ್ತಲೇ ಅವರ ಚಿಂತನೆಗಳನ್ನು ಹೊಸ ನೆಲದಲ್ಲಿ ಬಿತ್ತಲು ಅಣಿಯಾಗಬೇಕು.    


ಕೊನೆ ಟಿಪ್ಪಣಿ: ಸಮಾಜವಾದದ ಒಳಪ್ರವಾಹ
ಲಂಕೇಶರ ‘ಕಲ್ಲು ಕರಗುವ ಸಮಯ’ ಕತೆಯಲ್ಲಿ ಪುಟ್ಟ ಊರೊಂದರಲ್ಲಿ ಹೊಸ ಅಲೆಯ ಸಿನಿಮಾ ಕಮ್ಮಟ ನಡೆಯುತ್ತದೆ. ಅದರಲ್ಲಿ ಭಾಗಿಯಾಗುವ ತಿಪ್ಪಣ್ಣ ಹಾಗೂ ಶ್ಯಾಮಲ ಎಂಬ ಎಳೆಯ ಸೂಕ್ಷ್ಮಜೀವಿಗಳಿಗೆ ಕಮ್ಮಟದ ಅನುಭವ ಹೊಸ ನೋಟ, ನುಡಿಗಟ್ಟುಗಳನ್ನು ಕೊಡುತ್ತದೆ. ಅವರಲ್ಲಿ ಜಾತಿ ಮೀರಿ ಪ್ರೀತಿಸುವ ಛಲ ಮೂಡುತ್ತದೆ. ತನ್ನ ಕ್ರೂರ ತಂದೆಯನ್ನು ದಿಟ್ಟವಾಗಿ ಎದುರಿಸಬಲ್ಲ ಛಾತಿ ಶ್ಯಾಮಲಳಲ್ಲಿ ಮೊಳೆಯುತ್ತದೆ. ಜಡ ಸಮಾಜದಲ್ಲಿ ಮಂಕಾಗಿದ್ದ ಎಳೆಯರಿಗೆ ನವಚೈತನ್ಯ ಮೂಡುವುದು ಹೊಸ ಅಲೆಯ ಸಿನಿಮಾ ಕಮ್ಮಟವೊಂದರಿಂದ ಎಂಬ ಸೂಕ್ಷ್ಮ ಅಂಶವೊಂದನ್ನು ಹೇಳುತ್ತಾ ಕತೆ ಮುಂದೆ ಸಾಗುತ್ತದೆ.

ಮೊನ್ನೆ ಹೊಸ ತಲೆಮಾರಿನ ಉತ್ತಮ ನಿರ್ದೇಶಕ ಗಿರಿರಾಜ್ ಅವರಿಗೆ ಈ ಕತೆಯಲ್ಲಿ ಒಳ್ಳೆಯ ಸಿನಿಮಾದ ಪ್ರಭಾವ ಸೂಚಿತವಾಗಿರುವ ರೀತಿಯನ್ನು ನೆನಪಿಸಿದ ಮೇಲೆ, ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ತೋರಿಸುತ್ತಿದ್ದ ಗಂಭೀರ ಸಿನಿಮಾಗಳು ಅಲ್ಲಿನ ಜನರ ಅಭಿರುಚಿಯನ್ನು ತಿದ್ದಿದ್ದು ಕಣ್ಣೆದುರು ಬಂತು. ಸುಬ್ಬಣ್ಣ ಲೋಹಿಯಾರ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕವನ್ನು ಆತ್ಮೀಯವಾಗಿ ಕನ್ನಡಿಸಿದ್ದು, ಅದು ಕನ್ನಡದ ಮುಖ್ಯ ಸಾಂಸ್ಕೃತಿಕ ಪಠ್ಯವಾಗಿದ್ದು
ನೆನಪಾಗಿ ಸುಬ್ಬಣ್ಣನವರ ಚಿಂತನೆ- ಸಂಸ್ಥೆಗಳಲ್ಲಿರುವ ಲೋಹಿಯಾ ಪ್ರಭಾವದ ಅರ್ಥಪೂರ್ಣತೆ ಸ್ಪಷ್ಟವಾಗತೊಡಗಿತು. ಒಂದು ಮಟ್ಟದಲ್ಲಾದರೂ ಸಮಾಜವಾದಿ ಚಿಂತನೆ ನೀನಾಸಂನ ಹಲವು ತಲೆಮಾರಿನ ನಟ, ನಟಿಯರಲ್ಲಿ ಹಬ್ಬಿದೆ. ಅವರಲ್ಲಿ ಅನೇಕರು ಜಾತಿ ಮೀರಿ ಮದುವೆಯಾಗಿದ್ದಾರೆ. ಸಮಾನತೆಯ ಸಂದೇಶವನ್ನು ಹಬ್ಬಿಸಬಲ್ಲ ಸೂಕ್ಷ್ಮ ನಟ, ನಟಿಯರಾಗಿ, ನಿರ್ದೇಶಕರಾಗಿ ಬೆಳೆದಿದ್ದಾರೆ. ಕರ್ನಾಟಕದಲ್ಲಿ ಎಲ್ಲೆಡೆ ಹರಿಯುತ್ತಲೇ ಇರುವ ಇಂಥ ಸಮಾಜವಾದದ, ಸಮಾನತೆಯ ತೊರೆಗಳನ್ನು ಹೊಸ ತಲೆಮಾರು ಯಾವ ಕಾರಣಕ್ಕೂ ಬತ್ತಲು ಬಿಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT