ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಂಸ್ಕೃತಿಯ ವಿಕೃತ ಲೋಕದಲ್ಲಿ...

Last Updated 3 ಜುಲೈ 2014, 19:30 IST
ಅಕ್ಷರ ಗಾತ್ರ

ಕಳೆದ ಶತಮಾನದಲ್ಲಿ ಇತಾಲಿಯಾದಲ್ಲಿ ಜನಿಸಿದ ಅತ್ಯಂತ ದೊಡ್ಡ ಬಹುಮುಖಿ ಪ್ರತಿಭೆಗಳಲ್ಲಿ ಮೊದಲನೆ ಹೆಸರು ಪಿಯರೆ ಪೌಲೋ ಪೊಸೊಲಿನಿ. ಕವಿ, ಕಾದಂಬರಿಕಾರ, ನಾಟಕ­ಕಾರನಾಗಿ, ರಾಜಕೀಯ ಚಿಂತಕನಾಗಿ, ಕಲಾ­ಮೀಮಾಂಸಕ ಮತ್ತು ಸಿನಿಮಾ ನಿರ್ದೇಶಕ­ನಾಗಿ ಅವನು ಜಗತ್ತಿಗೆ ನೀಡಿದ ಕೊಡುಗೆ ಅನುಪಮವಾದುದು.

ಫ್ಯಾಸಿಸ್ಟ್ ನಾಯಕ ಮುಸಲೋನಿಯ ಭಕ್ತ­ನಾಗಿದ್ದ ಮತ್ತು ಸೇನಾ ನಾಯಕನಾಗಿದ್ದ ಅವನ ತಂದೆಯ ಬಗ್ಗೆ ಚಿಕ್ಕಂದಿನಿಂದ ಅಸಹನೆಯನ್ನು ಬೆಳೆಸಿಕೊಂಡ ಪೊಸೊಲಿನಿ ತನ್ನ ತಾಯಿಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದ. ಇಪ್ಪತ್ತರ ಹರೆಯ­ದಲ್ಲಿ ಒಬ್ಬ ಶಾಲಾ ಮಾಸ್ತರನಾಗಿ ನೌಕರಿ ಯಲ್ಲಿದ್ದಾಗ  ವಿದ್ಯಾರ್ಥಿಯೊಬ್ಬನ ಮೇಲೆ ಸಲಿಂಗ ರತಿಯ ಹಲ್ಲೆಯೆಸಗಿ ನೌಕರಿ ಕಳೆದು­ಕೊಂಡ.

ಅಂದಿನಿಂದ ಅವನ ಅಂತ್ಯದ ತನಕ ಅವನ ಸಲಿಂಗರತಿಯ ವಿಷಯ ಕ್ಯಾಥೊಲಿಕ್‌ ಪ್ರಾಧಾ­ನ್ಯದ ಇತಾಲಿಯಾದ  ದೃಷ್ಟಿಯಲ್ಲಿ ಒಂದು ದೊಡ್ಡ ಕಳಂಕವಾಗಿತ್ತು. ಆಮೇಲೆ ರೋಮಿಗೆ ಬಂದು ಬರಹಗಾರನ ವೃತ್ತಿಯನ್ನು ಶುರು ಮಾಡಿದ ಕೆಲವೇ ದಿನಗಳಲ್ಲಿ ಫ್ಯಾಸಿಸಂನಿಂದ ಹಾಳಾಗಿ ಹಸಿವು, ಬಡತನಗಳ ತವರಾಗಿದ್ದ ಇತಾಲಿಯಾಗೆ ಕಮ್ಯುನಿಸಂ ಒಂದೇ ಬಿಡುಗಡೆಯ ದಾರಿಯೆಂದು ತೀರ್ಮಾನಿಸಿ  ಕಮ್ಯುನಿಸ್ಟ್ ಪಾರ್ಟಿಯ ಸದಸ್ಯನಾದ. ಆದರೆ ಮತೊಮ್ಮೆ ಸಲಿಂಗರತಿಯ ಆರೋಪದಿಂದ ಪಾರ್ಟಿ ಅವ­ನನ್ನು ಹೊರಹಾಕಿತು. 

ಕಲೆಯ ಹಲವು ಪ್ರಕಾರ­ಗಳಲ್ಲಿ ತನ್ನ ವಿಪುಲ ಮತ್ತು ವಿಸ್ಮಯಕಾರಿ ಸೃಷ್ಟಿ­ಯನ್ನು ತನ್ನ ದುರಂತಮಯ ಸಾವಿನವರೆಗೂ  ಪೊಸೊಲಿನಿ ಮುಂದುವರಿಸಿದ. ಪೊಸೊಲಿನಿ ಇಪ್ಪತ್ತನೇ ಶತಮಾನದ ಇತಾಲಿ­ಯಾದ ಅತಿಶ್ರೇಷ್ಠ ಕವಿಯೆಂದು  ನೊಬೆಲ್ ಪುರ­ಸ್ಕೃತ ಕಾದಂಬರಿಕಾರ  ಮೊರಾವಿಯಾ ಘೋಷಿ­ಸಿದ. ಅಮೆರಿಕನ್ ವಿಮರ್ಶಕ ಹೆರಾಲ್ಡ್ ಬ್ಲೂಂ, ಪೊಸೊಲಿನಿ ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಅಗ್ಗಳ­ನೆಂದು ಗುರುತಿಸಿದ್ದಾನೆ. 

ಇತಾಲಿಯಾದ ಜಗತ್ಪ್ರ­ಸಿದ್ಧ ಕವಿಗಳಾದ ಡಾಂಟೆ, ಪೆತ್ರಾರ್ಕ್, ಲಿಯೊ­ಪರ್ದಿ, ಕ್ವಾಸಿಮಾದೋ, ಮೊಂತಾಲೆ ಮುಂತಾದ ಗಣ್ಯರ ಸಾಲಿನಲ್ಲಿ ನಿಲ್ಲ ಬಲ್ಲವನಾದರೂ ಅವರೆಲ್ಲ­ರಿಗಿಂತ ಭಿನ್ನ ಸಾಧನೆಯೊಂದನ್ನು ಪೊಸೊಲಿನಿ ಮಾಡಿದ್ದಾನೆಂದು ಮೊರಾವಿಯಾ ತಿಳಿಸಿದ್ದಾನೆ. ಅವರೆಲ್ಲರೂ ಇತಾಲಿಯಾದ ಭವ್ಯ ‘ಕ್ಲಾಸಿಕಲ್’ ಪರಂಪರೆಯ ದೃಷ್ಟಿಯಲ್ಲಿ ಜಗತ್ತನ್ನು ನೋಡಿ­ದರು. ಆದರೆ ಪೊಸೊಲಿನಿ ಆ ಸಂಸ್ಕೃತಿಯ ಅಡಿ­ಪಾಯಕ್ಕೆ ಸಿಕ್ಕಿ ಅಜ್ಜಿಬಜ್ಜಿಯಾದವರ ಭಾವ ಮತ್ತು ಜೀವನ ವಿವರಗಳಿಂದ ತನ್ನ ಕಾವ್ಯ, ಕಾದಂಬರಿ ಮತ್ತು ಸಿನಿಜಗತ್ತನ್ನು ಪುನಾರಚಿಸಿದ.

ಪೊಸೊಲಿನಿ ಹೇಗೆ ಬ್ರೆಕ್ಟಿಯನ್‌ ಭಾಷೆಯನ್ನು, ಭವ್ಯತೆಯ ಕ್ಲೀಷೆಯಿಂದ ಮುಕ್ತಗೊಳಿಸಿದನೋ ಅದೇ ಥರ ಪೊಸೊಲಿನಿ ಇತಾಲಿಯಾದ ಕಾವ್ಯದ ಭಾಷೆ ಮತ್ತು ಬಂಧವನ್ನು ಭವ್ಯತೆಯ ಕೃತಕತೆ­ಯಿಂದ ಬಿಡುಗಡೆಗೊಳಿಸಿದ. ಅವನ ಕಲಾಜೀವನದ ಆರಂಭಕಾಲದಲ್ಲಿ ಇತಾಲಿಯಾದ ಪ್ರಸಿದ್ಧ ಮಾರ್ಕ್ಸ್‌ವಾದಿ ಚಿಂತಕ ಅಂತೊನಿಯೋ ಗ್ರಾಮ್ಷಿಯ ಪ್ರಭಾವಕ್ಕೊಳಗಾದ. ಆಳುವ ವರ್ಗಗಳ ಯಜಮಾನಿಕೆಯಿಂದ ಸಮಾ­ಜ­ವನ್ನು ಮುಕ್ತಗೊಳಿಸಲು ಜನರ ಕಲೆಯನ್ನು ಸೃಷ್ಟಿ­ಸು­ವುದರ ಅಗತ್ಯವನ್ನು ಗ್ರಾಮ್ಷಿ ಪ್ರತಿಪಾದಿ­ಸಿದ್ದ. ಇದು ಪೊಸೊಲಿನಿಗೆ ಸ್ಫೂರ್ತಿ.

ಪೊಸೊ­ಲಿನಿಯ ಮೊದಲ ಸಿನಿಮಾಗಳಾದ ‘ಅಕ್ಕತ್ತೊನೆ’ ಮತ್ತು ‘ಮಮಾ ರೋಮಾ’,  ವಿತ್ತೋರಿಯಾ ದಿ ಸೀಕಾ ಜನಪ್ರಿಯಗೊಳಿಸಿದ್ದ ‘ನಿಯೊ ರಿಯಲಿಸ್ಟ್’ ಶೈಲಿಯಲ್ಲಿದ್ದವು. ಈ ಚಿತ್ರಗಳಲ್ಲಿ ರೋಮಿನ ಸ್ಲಮ್‌ಗಳಲ್ಲಿ ಅತ್ಯಂತ ದಯನೀಯ ಪರಿಸ್ಥಿತಿ­ಯಲ್ಲಿ ಜೀವನ ಸಾಗಿಸುತ್ತಿದ್ದ ತಲೆಹಿಡುಕರ, ಸೂಳೆ­ಯರ, ಕಳ್ಳರ, ಗೂಂಡಾಗಳ ಬದುಕಿನ ಸಂಘರ್ಷ­ಗಳನ್ನು ಅವರ ಬದುಕಿನ ಕ್ರೌರ್ಯ, ಹಾಸ್ಯ ಮತ್ತು ವ್ಯಂಗ್ಯಗಳೊಂದಿಗೆ ಅವನು ಸೆರೆಹಿಡಿದಿಟ್ಟ. ‘ಅಕ್ಕ­ತ್ತೊನೆ’­ಯಲ್ಲಿ ತಲೆಹಿಡುಕನೊಬ್ಬ ಸೂಳೆಯೊಬ್ಬ­ಳನ್ನು ಪ್ರೇಮಿಸಿ, ತನ್ನ ವೃತ್ತಿಯನ್ನು ಬಿಟ್ಟು, ಪ್ರಾಮಾ­ಣಿಕವಾದ ಕೆಲಸ ಮಾಡತೊಡಗಿ ದುರಂತ­ಕ್ಕೊಳಗಾಗುವ ಹೃದಯ ವಿದ್ರಾವಕ ಚಿತ್ರಣ­ವಿದೆ.

‘ಮಮಾ ರೋಮಾ’ದಲ್ಲಿ ಸೂಳೆ­ಯೊ­ಬ್ಬಳು ತಾನು ಹೆತ್ತ ಮಗನಿಗಾಗಿ ತನ್ನ ವೃತ್ತಿ­ಯನ್ನು ಬಿಟ್ಟು ತರಕಾರಿ ಮಾರಿ ಮಗನನ್ನು ಸಾಕ­ತೊಡಗುತ್ತಾಳೆ. ಅದರೆ ಮಗನಿಗೆ ಒಂದು ದಿನ ತಾಯಿ ಹಿಂದೆ ಸೂಳೆಯಾಗಿದ್ದಳೆಂದು ಗೊತ್ತಾಗಿ ರೊಚ್ಚಿಗೆದ್ದು ಕಳ್ಳತನ ಮಾಡಿ ಜೈಲಿಗೆ ಹೋಗು­ತ್ತಾನೆ. ಪೊಸೊಲಿನಿಯ ಪಾತ್ರಗಳು ಕೇವಲ ಬಲಿ­ಪಶುಗಳಾಗಿ ಕಾಣುವುದಿಲ್ಲ. ಮೊರಾವಿಯಾನ ಪ್ರಕಾರ ಪೊಸೊಲಿನಿ ಸ್ಲಮ್‌ಜೀವಿಗಳನ್ನು ಹೋಮ­ರನ ಕಾವ್ಯದ ಧೀರೋದಾತ್ತ ಪಾತ್ರ­ಗಳೋಪಾದಿಯಲ್ಲಿ ಬಿಡಿಸಿಡುತ್ತಾನೆ.

ಮುಂದಿನ ಸಿನಿಮಾಗಳಲ್ಲಿ ತನಗೆ ಅಂತರ­ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದ ಈ ಶೈಲಿ­ಯನ್ನು ಪೊಸೊಲಿನಿ ಕೈಬಿಟ್ಟ.  ಗ್ರಾಮ್ಷಿ ಹೇಳಿದ ಜನಗಳ ಕಲೆಯಲ್ಲಿ ಅವನಿಗೆ ವಿಶ್ವಾಸ ಉಳಿಯ­ಲಿಲ್ಲ.  ತನ್ನ ಕಲೆಯ ವಸ್ತುಗಳಾಗಿದ್ದ ಕೆಳಕಾರ್ಮಿ­ಕರ ಜಗತ್ತೂ ಬೂರ್ಶ್ವಾ ಪ್ರಜಾಪ್ರಭುತ್ವದಲ್ಲಿ ಭ್ರಷ್ಟವಾಗತೊಡಗಿತ್ತು. ಉತ್ಕಟ ಬದುಕಿನ ತೀವ್ರತೆ­ಯನ್ನು ಕಳೆದುಕೊಂಡ ಕೆಳಕಾರ್ಮಿಕರು ಮನೆ, ಮಠ, ಸವಲತ್ತುಗಳ ಬೆನ್ನುಹತ್ತಿದ್ದರು. ತನ್ನ ಮಾರ್ಕ್ಸ್‌­ವಾದಿ ದೃಷ್ಟಿಕೋನವನ್ನು ಸದಾ ಉಳಿಸಿ­ಕೊಂಡ­ನಾದರೂ ತನ್ನಲ್ಲಿ ಮೂಡುತ್ತಿದ್ದ ರಾಜ­ಕೀಯ ಒಳನೋಟಗಳಿಗನುಸಾರ ತನ್ನ ಕಲಾ­ಮೀಮಾಂಸೆಯನ್ನು ಪೊಸೊಲಿನಿ ಮರು­ನಿರ್ಮಾಣ ಮಾಡಿಕೊಳ್ಳುತ್ತಿದ್ದ.  ಅವನಲ್ಲಿ ಸುಪ್ತ­ವಾಗಿದ್ದ ಧಾರ್ಮಿಕ ದೃಷ್ಟಿ ಅವನಿಗೆ ಸಹಾಯವಾಯಿತು.

ಪೊಸೊಲಿನಿ ಮತ್ತು ಕ್ರೈಸ್ತ ಧರ್ಮದ ಸಂಬಂಧವೂ ಕಮ್ಯುನಿಸ್ಟರಿಗೆ ನುಂಗಲಾರದ ತುತ್ತಾ­ಗಿತ್ತು. ತನ್ನ ಒಂದು ಸಂದರ್ಶನದಲ್ಲಿ ಪೊಸೊಲಿನಿ ತನ್ನ ಧಾರ್ಮಿಕ ಸಂದಿಗ್ಧಗಳನ್ನು ವಿವರಿಸಿದ್ದ. ತನ್ನ ಕವಿತೆ ಮತ್ತು ಕಾದಂಬರಿಗಳಲ್ಲಿ ಚರ್ಚಿನ ಶೋಷಣೆಯ ವೈಖರಿಯನ್ನು ಮುಲಾ­ಜಿ­ಲ್ಲದೆ ಬಯಲಿಗೆಳೆದಿದ್ದ ಪೊಸೊಲಿನಿ. ತನ್ನ ಕಾಲದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಚರ್ಚಿನ ಬಳಿ ಯಾವ ಪರಿಹಾರವೂ ಇಲ್ಲವೆಂದು ಬಲ್ಲವನಾಗಿದ್ದ. ಆದರೆ ಬೈಬಲ್ ಅವನ ಮನ­ದಾಳ­ದಲ್ಲಿ ಪ್ರವೇಶಿಸಿಬಿಟ್ಟಿತ್ತು.

ಅವನ ಪ್ರಕಾರ ಬೈಬಲ್ ಮಾನವೀಯ ಚಿಂತನೆಯ ಒಂದು ಮಹಾನ್ ಸೌಧ. ಅಲ್ಲದೆ ಅವನು ಬದುಕನ್ನು ನೋಡುವ ದೃಷ್ಟಿಯೆ ಧಾರ್ಮಿಕವೆಂದು  ವಿವರಿ­ಸಿದ. ಅಂದರೆ ಈ ಇಳಾತಳದಲ್ಲಿ ಎಲ್ಲವೂ ಎಲ್ಲರೂ ಪವಿತ್ರ. ಭೌತಿಕವಾದಿಗಳ ಅಪವಿತ್ರತಾ ದೃಷ್ಟಿ ಅವನಿಗೆ ಒಪ್ಪಿತವಿರಲಿಲ್ಲ. ತನ್ನನ್ನು ‘ಕ್ಯಾಥೊಲಿಕ್ ಕಮ್ಯುನಿಸ್ಟ್‌’ ಎಂದು ಕರೆದುಕೊಂಡ ಪೊಸೊಲಿನಿಯ ಮುಂದಿನ ಚಿತ್ರ­ಗಳು ವಾಸ್ತವವಾದಿತ್ವವನ್ನು ತ್ಯಜಿಸಿದರೂ ಮಾರ್ಕ್ಸ್‌­ವಾದಿ ದರ್ಶನವನ್ನು ಬಿಟ್ಟುಕೊಡಲಿಲ್ಲ.

ಈ ಘಟ್ಟದಲ್ಲಿ ಆತ ನಿರ್ಮಿಸಿದ ಮೂರು ಚಿತ್ರಗಳು ಹೆಸರು ಮಾಡಿದವು. ಮೊದಲನೆಯದು ‘ಇಲ್ ವನಗೇಲೊ ಸಿಕೊನೊಂದೋ ಮತ್ತೇಯೊ’ (ಸಂತ ಮಥಾಯನ ಪ್ರಕಾರ ಸುವಾರ್ತೆ). ಇದು ಏಸುವಿನ ಜೀವನಗಾಥೆ. ವಿಚಿತ್ರವೆಂದರೆ ಈ ಸಿನಿಮಾ­ವನ್ನು ಅವನು ನಿರೂಪಿಸಿದ್ದು ಒಬ್ಬ ನಂಬಿಕಸ್ಥ ಕ್ರೈಸ್ತನ ದೃಷ್ಟಿಯಿಂದ. ಸುವಾರ್ತೆ­ಯನ್ನು ಯಥಾವತ್ತಾಗಿ ಚಿತ್ರಿಸಿದರೂ ಪೊಸೊಲಿನಿ ಒತ್ತು ನೀಡಿದ್ದು ಏಸುವಿನ ಶೋಷಣಾವಿರೋಧಿ ಮಾನವೀಯ ಗುಣಗಳಿಗೆ.

ಈ ಗಂಭೀರ ಚಿತ್ರಕ್ಕಿಂತ ತೀರಾ ಭಿನ್ನವಾದ್ದು ಈ ಕಾಲದ ಇನ್ನೊಂದು ಚಿತ್ರ– ‘ಉಚ್ಚೆಲಚ್ಚಿ ಈ ಉಚ್ಚೆಲೆನಿ’ (ಹದ್ದುಗಳೂ ಗುಬ್ಬಚ್ಚಿಗಳೂ). ಇದೊಂದು ಮಾಂತ್ರಿಕ ವಾಸ್ತವ­ವಾದಿ ಚಿತ್ರ. ತಂದೆ–ಮಕ್ಕಳಿಬ್ಬರು ರೋಮಿನ ಹೊರ­ವಲಯದಲ್ಲಿ ವಾಕಿಂಗ್  ಹೋಗುತ್ತಿ­ರು­ವಾಗ ಅವರಿಗೊಂದು ಮಾತಾಡುವ ಕಾಗೆ ಸಿಗು­ತ್ತದೆ.

ಅದರ ನಿರ್ದೇಶನದ ಪ್ರಕಾರ ಅವರು ಕಾಲ­ದಲ್ಲಿ ಹಿಂದೆ ಹೋಗಿ ಸಂತ ಫ್ರಾಂಚೆಸ್ಕೋನನ್ನು ಭೆಟ್ಟಿ ಮಾಡಿದಾಗ ಆತ ಅವರಿಗೆ ಹದ್ದು ಮತ್ತು ಗುಬ್ಬಚ್ಚಿಗಳ ನಡುವೆ ಪ್ರೇಮವುಂಟಾಗುವಂತೆ ಏನಾದರೂ ಮಾಡಿ ಎಂದು ಆದೇಶ ನೀಡುತ್ತಾನೆ. ಈ ಪ್ರಯತ್ನದಲ್ಲಿ ವಿಫಲರಾಗಿ ಹಿಂತಿರುಗಿದಾಗ ಕಾಗೆ ಬುದ್ಧಿಜೀವಿಯಂತೆ ಅವರಿಗೆ ಇನ್ನೊಂದು ಭಾಷಣ ಬಿಗಿಯುತ್ತದೆ. ಆಗ ಸಿಟ್ಟಿಗೆದ್ದು ಅವರಿ­ಬ್ಬರೂ ಆ ಕಾಗೆಯನ್ನು ಕೊಂದು ತಿಂದು ಬಿಡು­ತ್ತಾರೆ.

‘ತಿಯೆರೊಮೋ’ (ಸಿದ್ಧಾಂತ) ಎಂಬ ಚಿತ್ರ ಇನ್ನೊಂದು ಬಗೆಯದು. ಇದರಲ್ಲಿ ದೇವ ಯುವ­ಕ­ನೊಬ್ಬ ಒಂದು ಸಣ್ಣ ಪಟ್ಟಣದಲ್ಲಿ ಅವತಾರ ತಳೆ­ಯುತ್ತಾನೆ. ಅಲ್ಲಿನ ಒಂದಾನೊಂದು ಅತೃಪ್ತ ಕುಟುಂಬದ ಅತಿಥಿಯಾಗಿ ಬಂದು ಆ ಕುಟುಂಬದ ಎಲ್ಲರ ಸುಪ್ತ ಮನೋಕಾಮನೆ­ಗ­ಳನ್ನು ತೀರಿಸುತ್ತಾನೆ. ರೋಗಿಷ್ಠನಾದ ಮನೆ­ಯೊ­ಡೆಯನಿಗೆ ಪ್ರೇಮದಿಂದ ಆರೈಕೆ ಮಾಡಿ ಅವನ ದುಃಖವನ್ನು ತೊಡೆಯುತ್ತಾನೆ.

ಸಲಿಂಗರತಿಗಾಗಿ ತಹತಹಿಸುತ್ತಿರುವ ಅವನ ಮಗನ ಆಸೆಯನ್ನು ಈಡೇರಿಸುತ್ತಾನೆ. ಪೌರುಷಹೀನನಾದ ಗಂಡ­ನಿಂದ ಸುಖ ಸಿಗದೆ ಅತೃಪ್ತಳಾದ ಮನೆಯೊಡತಿಗೆ ಸಂಭೋಗಸುಖ ನೀಡುತ್ತಾನೆ. ಅತ್ಯಂತ ಧಾರ್ಮಿಕ ಸ್ವಭಾವದವಳಾಗಿ ತೋರಿದರೂ ಕಾಮವಾಸನಾ ಪೀಡಿತಳಾದ ಮನೆಯ ಕೆಲಸಗಾರ್ತಿಗೂ ಮೈ­ಸುಖ ನೀಡುತ್ತಾನೆ. ಆದರೆ ಇದರಿಂದ ಎಲ್ಲರೂ ದುರಂತ­ಕ್ಕೀಡಾಗುತ್ತಾರೆ.

ಮನೆಯೊಡೆಯ ತನ್ನ ಫ್ಯಾಕ್ಟರಿಯನ್ನು ಬಿಟ್ಟು ಬಟ್ಟೆ ಕಳಚಿ ಊರು ಬಿಟ್ಟು ಹೋಗುತ್ತಾನೆ. ಮನೆಯೊಡತಿ ಕಾಮದ ತೀಟೆ ತಾಳ­ಲಾರದೆ ಸಿಕ್ಕಸಿಕ್ಕ ಹುಡುಗರ ಜೊತೆ ಮಲಗ­ತೊಡಗಿ ತನಗೆ  ತಾನೇ ಹೇಸಿ ಆತ್ಮಹತ್ಯೆ ಮಾಡಿ­ಕೊಳ್ಳು­­ತ್ತಾಳೆ. ಮನೆಕೆಲಸದಾಕೆ ಪಾಪಪ್ರಜ್ಞೆ­ಯಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು ತನ್ನನ್ನು ಜೀವಂತ ಸಮಾಧಿ ಮಾಡಿಸಿ­ಕೊಳ್ಳು­ತ್ತಾಳೆ. ಮನೆಯ ಮಗನೂ ದಿಕ್ಕಾಪಾಲಾಗು­ತ್ತಾನೆ. ಹೀಗೆ ತಮಗೆ ಸಿಕ್ಕ ತೃಪ್ತಿಯನ್ನು ತಾಳಿ­ಕೊಳ್ಳ­ಲಾಗದೆ ಒಂದು ಬೂರ್ಶ್ವಾ ಕುಟುಂಬ ನಷ್ಟವಾ­ಗುವ ದುರಂತ ವಿಶಿಷ್ಟವಾದುದು.

ಈ ದುರಂತ ದರ್ಶನದ ಮುಂದುವರಿಕೆ­ಯೆಂಬಂತೆ ಪ್ರಸಿದ್ಧ ಗ್ರೀಕ್ ರುದ್ರನಾಟಕಗಳಾದ ‘ಔದಿಪೋಸ್’ ಮತ್ತು ‘ಮೀದಿಯಾ’ಗಳನ್ನು ಪೊಸೊ­­ಲಿನಿ ವಿಶಿಷ್ಟ ಬಗೆಯಲ್ಲಿ ಚಿತ್ರಿಸಿದ. ಮಾನವ­ವಿಕಾಸದ ಆದಿಮ ಹಂತದಲ್ಲಿ ಎಲ್ಲೋ ಎಳೆತಪ್ಪಿ ಅಂದಿನಿಂದ ಇಂದಿನವರೆಗೂ ಮಾನವ­ಚೇತನ­ವನ್ನು ಕಾಡುತ್ತಿರುವ ದುರಂತ ‘ಔದಿ­ಪೋಸ್’ ಚಿತ್ರದ ತಿರುಳು.

ಪ್ರಕೃತಿಗೆ ನಿಕಟವಾದ ಹೆಣ್ಣಾಳಿಕೆಯ ಸಮಾಜದ ಮಾಟಗಾತಿ ಚೆಲುವೆ ಮೀದಿಯಾ ಗಂಡಾಳಿಕೆಯ ಮೌಲ್ಯದ ಕೊರಿಂಥಿನ ದೊರೆಯನ್ನು ಮೋಹಿಸಿ ವಂಚಿತಳಾಗಿ ತನ್ನ ಇಡೀ ಕುಟುಂಬವನ್ನೂ ಕೊನೆಗೆ ತನ್ನನ್ನೂ ಘೋರ ವಿನಾಶಕ್ಕೆ ಈಡುಮಾಡುವ ಕಠೋರ ದರ್ಶನ ಮೀದಿಯಾದಲ್ಲಿದೆ. ಈ ಶುದ್ಧ ದುರಂತ ದರ್ಶನಕ್ಕೆ ವಿರುದ್ಧವಾಗಿ ಮುಂದೆ, ಜೀವನೋತ್ಸಾಹವನ್ನು ನಿರ್ಭಿಡೆಯಿಂದ ಸಂಭ್ರಮಿಸುವ ಮೂರು ಚಿತ್ರಗಳನ್ನು  ಪೊಸೊಲಿನಿ ನಿರ್ಮಿಸಿದ: ಬೊಕಾಸಿಯೋನ ಶೃಂಗಾರಪ್ರಧಾನ ಕೃತಿಯನ್ನಾಧರಿಸಿದ ‘ದೆಕಮೊರೊನ್’; ಚಾಸರನ ‘ಕ್ಯಾಂಟರ್‌ಬರಿ ಟೇಲ್ಸ್’ ಆಧಾರಿತ ‘ಇಲ್ ರಕ್ಕೊಂತಿ ದಿ ಕ್ಯಾಂಟರ್‌ಬರಿ’; ಅರೆಬಿಯನ್ ನೈಟ್ಸ್ ಆಧಾರಿತ ‘ಇಲ್ ಫ್ಲೋರೆ ದಿಲ್ಲೆ ಮಿಲ್ಲೆ ಎ ಊನ ನೋಟ್ಟೆ’. 

ಇವೆಲ್ಲವುಗಳ ವಸ್ತು ಎಗ್ಗಿರದ  ಲೈಂಗಿಕತೆಯ ಸಂಭ್ರಮ. ಕಾಮದ ಹಾಸ್ಯ, ವ್ಯಂಗ್ಯ ಮತ್ತು ವಿಪರ್ಯಾಸಗಳನ್ನು ರಸವತ್ತಾಗಿ ಚಿತ್ರಿಸಿ­ರುವ ಈ ಕೃತಿಗಳು ಅಮೆರಿಕದ ಸೆಕ್ಸ್‌ಷಾಪ್‌ಗಳಲ್ಲಿ ಅಪಾರ ಜನಪ್ರಿಯತೆ ಪಡೆದವು. ಬೂರ್ಶ್ವಾ ಮತ್ತು ಕಮ್ಯುನಿಸ್ಟ್ ಲೋಕದೃಷ್ಟಿಗಳಿಗೆ ಸಮಾನ­ವಾದ ಲೈಂಗಿಕತೆಯ ನಿಷೇಧವನ್ನು ಧಿಕ್ಕರಿಸಿ ಈ ಚಿತ್ರಗಳು ಕಾಮವಾಸನೆಯ ಆಸ್ಫೋಟದಂತಿವೆ, ನಿಜ. ಆದರೆ ಕಾಮವನ್ನು ಕುರಿತ ಪೊಸೊಲಿನಿಯ ತಾದಾತ್ಮ್ಯ, ದೇಹಗಳನ್ನು ಕೇವಲ ಪ್ರದರ್ಶನದ ವಸ್ತು­ಗಳನ್ನಾಗಿಸಿ ತೋರಿಸುವ ಹಾಲಿವುಡ್ ಮತ್ತು ಬಾಲಿವುಡ್ ಸಂಸ್ಕೃತಿಗಳಿಗಿಂತ ಭಿನ್ನ­ವೆಂಬುದು ಮುಖ್ಯ.

ಆದರೆ ಈ ಮೂರೂ ಚಿತ್ರಗಳನ್ನು ಪೊಸೊಲಿನಿ ಅನಂತರ ತಿರಸ್ಕರಿಸಿದ.  ಅವನ ಚಿಂತನೆ ಮೂಲ­ಭೂತವಾಗಿ ಬದಲಾಗಿತ್ತು. ಬೂರ್ಶ್ವಾ ಪ್ರಜಾಸತ್ತೆ ಫ್ಯಾಸಿಸಂಗಿಂತಲೂ ಕ್ರೂರವಾದುದೆಂದು ಅವನಿ­ಗನಿ­ಸ­ತೊಡಗಿತು. ಫ್ಯಾಸಿಸಂನ ಉದ್ದೇಶ ಸರ್ವಾ­ಧಿ­ಕಾರಿತ್ವದಿಂದ ಏಕರೂಪತೆಯನ್ನು ತರುವುದು. ಆದರೆ ಅದು ಈ ಉದ್ದೇಶದಲ್ಲಿ ಪೂರ್ಣ ಸಫಲತೆ ಹೊಂದಲಿಲ್ಲ. ಆದರೆ ಸರಕು ಸಂಸ್ಕೃತಿಯನ್ನು ಮೂಲ­ಮಂತ್ರವನ್ನಾಗಿಸಿಕೊಂಡ ಬೂರ್ಶ್ವಾ ಪ್ರಜಾ­ಸತ್ತೆ ನಿರ್ದಯೆಯಿಂದ ಏಕರೂಪತೆಯನ್ನು ತರತೊಡಗಿತ್ತು.

ಸರಕು  ಸಂಸ್ಕೃತಿಯ ಮುಖ್ಯ ಅಭಿ­ವ್ಯಕ್ತಿ ನರಶರೀರಗಳ ನಿರ್ಭಾವುಕ ಸರಕೀಕರಣ. ಇದು ಅವನ ಪ್ರಕಾರ ಫ್ಯಾಸಿಸಂನ ಪರಾಕಾಷ್ಠತೆ. ತನ್ನ ಲೈಂಗಿಕಪ್ರಧಾನ ಚಿತ್ರಗಳೂ ಈ ಸಂಸ್ಕೃತಿಯ ಭಾಗವಾಗಿ ಅವನಿಗೆ ಕಾಣತೊಡಗಿದ್ದವು. ಈ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂಬಂತೆ ತನ್ನ ಕೊನೆಯ ಚಿತ್ರ ‘ಸಾಲೊ ಓಲೆ ೧೨೦ ಗಿಯೊರ್ನಾತೆ ದಿ ಸೊದೊಮಾ’ (೧೨೦ ವಿಪರೀತ ಲೈಂಗಿಕತೆಯ ದಿವಸಗಳು) ವನ್ನು ಮಾಡಿದ.

40ರ ದಶಕದಲ್ಲಿ ಮುಸಲೋನಿಯ ಪತನದ ನಂತರ ಫ್ಯಾಸಿಸ್ಟರ ಒಂದು ಗುಂಪು ನಿರ್ಜನ ಪ್ರದೇ­ಶದ ಬಂಗಲೆಯೊಂದರಲ್ಲಿ ತನ್ನ ವಿಕೃತ ಲೈಂಗಿಕ ಪ್ರಯೋಗಗಳನ್ನು ಮಾಡಲು ಹದಿನೆಂಟು ಮಂದಿ ಯುವಕ–ಯುವತಿಯರನ್ನು ಸೆರೆಹಿಡಿಯುತ್ತದೆ. ಅವರ ದೇಹಗಳನ್ನು ತಮ್ಮಿಚ್ಛೆಯಂತೆ ಬಳಸಿ­ಕೊಂಡು ತಮ್ಮ ಪೂರ್ಣಸ್ವಾತಂತ್ರ್ಯವನ್ನು ಅವರು ಮೆರೆಯತೊಡಗುತ್ತಾರೆ.

ಯುವಕ–ಯುವತಿ­ಯ­ರನ್ನು ಎಲ್ಲೆಂದರಲ್ಲಿ ಬತ್ತಲೆಗೊಳಿಸಿ ಬೇಕಾದಂತೆ ಮಾನಭಂಗ ಮಾಡುತ್ತಾರೆ. ಅವರಿಗೆ ಮಲ ಮೂತ್ರ­ಗಳನ್ನು ತಿನ್ನಿಸಿ ಆನಂದಿ ಸುವುದಲ್ಲದೆ ಮರ್ಮಾಂಗಗಳನ್ನು ಸುಡುವ, ನಾಲಗೆಗಳನ್ನು ಕತ್ತರಿಸುವ ಮನೋರಂಜನೆಗಳನ್ನು ಏರ್ಪಡಿ ಸು­ತ್ತಾರೆ. ಅವರೆಲ್ಲರೂ ನಾಯಿಗಳಂತೆ ಬೊಗಳಿ, ಕುಯ್ಗ­ಡುವಂತೆ ಮಾಡುತ್ತಾರೆ.

ಲೈಂಗಿಕ ಪರ­ಪೀಡನೆಯ ಈ ಘೋರ ನರಕದ ದುಃಸ್ವಪ್ನವನ್ನು ನಿಷ್ಠುರತೆಯಿಂದ ತೋರಿಸುವ ಈ ಚಿತ್ರ ತೀರಾ ಭಯಾನಕವಾಗಿರುವುದರಿಂದ ಹಲವು ದೇಶಗ­ಳಲ್ಲಿ ನಿಷೇಧಕ್ಕೊಳಗಾಗಿ ವಿವಾದಾಸ್ಪದ­ವಾ­ಯಿತು. ಆದರೆ ಅದನ್ನರಗಿಸಿಕೊಳ್ಳುವ ತಾಕತ್ತಿರು­ವ­ವರಿಗೆ ಈ ಚಿತ್ರ ಸರಕು ಸಂಸ್ಕೃತಿಯ ಫ್ಯಾಸಿಸ್ಟ್ ಅಮಾನವೀಕರಣದ ವಿರುದ್ಧದ ಅಂತಿಮ ಎಚ್ಚರಿಕೆ­ಯಾಗಿ ಕಾಣುತ್ತದೆ.

ಇದನ್ನು ನಿರ್ಮಿಸಿದ ಕೆಲವೇ ದಿನಗಳಲ್ಲಿ ನಿಗೂಢವಾಗಿ ಪೊಸೊಲಿನಿಯ ಕೊಲೆ ಜರುಗಿತು. ಈ ಹೊತ್ತಿಗೆ ಸಾಂಪ್ರದಾಯಿಕ ಕಮ್ಯುನಿಸ್ಟ್ ಪಕ್ಷ ತೊರೆದು ಮುಕ್ತ ವಾಮಪಂಥೀಯ ಪಕ್ಷಕ್ಕೆ ಸೇರಿದ್ದ ಅವನ ಫ್ಯಾಸಿಸ್ಟ್ ಹಂತಕರು ‘ಕೊಳಕು ಕಮ್ಯು­ನಿಸ್ಟ್’ ಎಂದು ಜರೆಯುತ್ತಾ ಅವನನ್ನು ಕೊಲೆ ಮಾಡಿದರೆಂದು ಒಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT