ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋವರ ಯಾತ್ರೆ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಮೂರು ನಾಲ್ಕು ವರ್ಷಗಳ ಕೆಳಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಊಟಿಗೆ ಹೋಗಿದ್ದೆ. ಆಗ ತಾನೇ ಚಳಿಗಾಲ ಮುಗಿದು ಬೇಸಿಗೆ ತನ್ನ ಪುಟ್ಟ ಪಾದಗಳನ್ನಿಟ್ಟು ಬರುತ್ತಿತ್ತು.

ನಾನು ಎದ್ದಾಗ ಇನ್ನೂ ಕತ್ತಲು ಕತ್ತಲು. ಬೆಳಗು ಆಗಲು ಇನ್ನೂ ಸಮಯವಿತ್ತು. ಕೋಣೆಯಿಂದ ಹೊರಬಂದಾಗ ಹಿತವಾದ ತಂಪುಗಾಳಿ. ತಿರುಗಾಡಿ ಬರೋಣವೆಂದು ಸ್ಪೆಟರ್ ಹಾಕಿಕೊಂಡು ಹೊರಟೆ. ರಸ್ತೆಯಲ್ಲಿ ಜನಸಂಚಾರ ತುಂಬ ವಿರಳವಾಗಿತ್ತು.

ನನ್ನ ಹಾಗೆಯೇ ತಿರುಗಾಡಲು ಹೊರಟ ಒಂದಿಬ್ಬರು ಕಂಡರು. ಊಟಿಯ ಮುಖ್ಯ ಆಕರ್ಷಣೆ ಅಲ್ಲಿಯ ದೊಡ್ಡ ಸರೋವರ ತಾನೇ? ಆ ಕಡೆಗೇ ಹೊರಟೆ. ಸರೋವರದ ದಂಡೆಯಲ್ಲಿ ಸ್ವಲ್ಪ ಚಳಿ ಹೆಚ್ಚು ಎನ್ನಿಸಿತು. ಅಲ್ಲಿ ನಿಂತು ನೋಡಿದಾಗ ನೂರಾರು ನಾವೆಗಳನ್ನು ದಡಕ್ಕೆ ಕಟ್ಟಿ ಹಾಕಿ ನಿಲ್ಲಿಸಿದ್ದಾರೆ. ಬೆಳಗಿನ ಬಿಸಿಲು ಚಿಮ್ಮಿದ ಮೇಲೆ ರಾತ್ರಿಯಾಗುವವರೆಗೂ ನಾವೆಗಳಿಗೆ ಪ್ರವಾಸಿಗಳನ್ನು ಸರೋವರದಲ್ಲಿ ಸುತ್ತಾಡಿಸುವ ಬಿಡುವಿಲ್ಲದ ಕೆಲಸ.

ಅಲ್ಲೊಬ್ಬ ಮುದುಕ ಬೀಡಿ ಸೇದುತ್ತ ಕುಳಿತಿದ್ದ. ನನ್ನನ್ನು ಕಂಡೊಡನೆ, `ಬನ್ನಿ ಸರೋವರದಲ್ಲಿ ಸುತ್ತು ಹಾಕಿ ಬರೋಣ, ಈಗ ಚೆನ್ನಾಗಿರುತ್ತೆ~ ಎಂದ. ನಾನು ಒಂದು ಕ್ಷಣ ಹಿಂದು ಮುಂದು ನೋಡಿದೆ. ಸರೋವರದ ಸುತ್ತಮುತ್ತ ಯಾರೂ ಕಾಣುತ್ತಿಲ್ಲ. ಒಬ್ಬನೇ ಇವನೊಂದಿಗೆ ಸರೋವರದೊಳಗೆ ಹೋಗುವುದು ಕ್ಷೇಮವೇ? ಅವನ ಉದ್ದೇಶವೇನೋ? ಅವನು ಎಂಥವನೋ? ಹೀಗೆಲ್ಲ ಚಿಂತಿಸಿ ಅವನ ಮುಖ ನೋಡಿದೆ.

ಅವನು ಸಂಭಾವಿತನಂತೆ ಕಂಡ. ಹಿಂದೆ ನಾನು ಎಂದೂ ಹೀಗೆ ಒಬ್ಬನೇ ಅಷ್ಟು ಬೆಳಿಗ್ಗೆ ನಾವೆಯಲ್ಲಿ ಹೋದದ್ದಿಲ್ಲ, ಇದೊಂದು ಹೊಸ ಅನುಭವ. ಆಗಲಿ ಎಂದು ಅವನಿಗೆ ಹೇಳಿದಾಗ ಅವನು ತನ್ನ ನಾವೆಯನ್ನು ಬಿಚ್ಚಿ ಅದರ ಎಂಜಿನ್ ಪ್ರಾರಂಭಿಸಿದ. ಠರ್ರ‌್‌, ಠರ್ರ‌್‌ ಎಂದು ಸದ್ದು ಮಾಡುತ್ತ ಸುತ್ತಲಿನ ಶಾಂತತೆಯನ್ನು ಸೀಳಿಬಿಟ್ಟಿತು.

ಅದೊಂದು ಬಹುದೊಡ್ಡ ಸರೋವರ. ನೀರಿನ ಮೇಲೆಲ್ಲ ಮಂಜು ಕವಿದದ್ದರಿಂದ ಸ್ವಲ್ಪ ದೂರ ಕೂಡ ಕಾಣುತ್ತಿರಲಿಲ್ಲ, ನೀರ ಮೇಲಿನ ತಂಪುಗಾಳಿ ಮುಖದ ಚರ್ಮವನ್ನು ಮರಗಟ್ಟಿಸುತ್ತಿತ್ತು. ಆಗ ದೋಣಿ ನಡೆಸುವವನು ತಕ್ಷಣ ಎಂಜಿನ್ ಬಂದು ಮಾಡಿಬಿಟ್ಟ. ನಾವೀಗ ಸರಿಯಾಗಿ ಸರೋವರದ ಮಧ್ಯದಲ್ಲಿದ್ದೆವು. ಸುತ್ತಲೂ ಯಾರೂ ಇಲ್ಲ. ಇವನು ಯಾಕೆ ನಿಲ್ಲಿಸಿಬಿಟ್ಟ, ಏನು ಅವನ ಉದ್ದೇಶ ಎಂದು ಒಂದು ಕ್ಷಣ ಭಯವಾಯಿತು.

`ಯಾಕಪ್ಪಾ ಏನಾದರೂ ತೊಂದರೆಯಾಯಿತೇ?~ ಎಂದು ಕೇಳಿದೆ. ಅವನು, `ಇಲ್ಲ ಸಾರ್, ನಾನೇ ನಿಲ್ಲಿಸಿದ್ದೇನೆ. ನಿಜವಾಗಿಯೂ ನಿಮಗೆ ಈ ಸರೋವರದ ಸೌಂದರ್ಯವನ್ನು ನೋಡಬೇಕಾದರೆ ಈ ಶಾಂತತೆಯ ಶಬ್ದವನ್ನು ಕೇಳಬೇಕು~ ಎಂದ.

ಆತ ಕಣ್ಣು ಮುಚ್ಚಿ ಕುಳಿತ. ನಾನೂ ನಿಧಾನವಾಗಿ ಕಣ್ಣು ಮುಚ್ಚಿ ಅದನ್ನು ಅನುಭವಿಸತೊಡಗಿದೆ. ಯಾವ ಸದ್ದೂ ಇಲ್ಲ. ತೆರೆಗಳು ನಾವೆಯ ಶರೀರಕ್ಕೆ ಬಡಿದಾಗ ಬರುವ ಲಪ್, ಲಪ್, ಶಬ್ದವನ್ನೂ ಬಿಟ್ಟರೆ ಸಂಪೂರ್ಣ ನಿಶ್ಯಬ್ದ. ಸಹಸ್ರಾರು ಶತಮಾನಗಳ ಮೌನ ಮಡುಗಟ್ಟಿ ನಿಂತಿದೆ! ಆ ನಿಶ್ಯಬ್ದದೊಳಗಿನ ಅದ್ಭುತ ಶಬ್ದ ನನ್ನ ಮನಸ್ಸಿನ ತುಮುಲಗಳನ್ನು ಆತಂಕದ ತೆರೆಗಳನ್ನು ಮೆಟ್ಟಿ ನಿಂತಿತು. ಆಗ ನಾವಿಕ ನಿಧಾನವಾಗಿ ಹೇಳಿದ, `ಸಾರ್, ಒಂದು ವರ್ಷದ ಹಿಂದೆ ನನ್ನ ಮನೆಗೆ ಬೆಂಕಿ ಹತ್ತಿ ನನ್ನ ಹೆಂಡತಿ, ಮಗಳು ಇಬ್ಬರೂ ಸತ್ತು ಹೋದರು.
 
ನನಗೆ ಈಗ ಯಾರೂ ಇಲ್ಲ. ಏನು ಮಾಡಿದರೂ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ. ನಮಾಜು ಮಾಡಲು ಹೋದಾಗಲೂ ದೊರೆಯದ ಶಾಂತಿ ನನಗೆ ಹೀಗೆ ಇಲ್ಲಿ ಬಂದು ಕುಳಿತಾಗ ದೊರೆಯುತ್ತದೆ. ಅದಕ್ಕೆ ದಿನಾಲೂ ಬೆಳಿಗ್ಗೆ ಹೀಗೆ ಬಂದು ಅರ್ಧಗಂಟೆ ಕುಳಿತು ಹೋಗುತ್ತೇನೆ. ನಿಜ ಹೇಳಬೇಕೆಂದರೆ ನನಗಿಲ್ಲಿ ಅಲ್ಲಾನ ದರ್ಶನವಾಗುತ್ತದೆ.~ ಮಂಜಿನಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಆದರೆ ಅವನ ಧ್ವನಿ ನಡುಗುತ್ತಿದ್ದಂತೆ ಕೇಳಿಸಿತು.

ನನಗೂ ನಿಜವೆನ್ನಿಸಿತು. ಗಂಟೆಗಳ ಶಬ್ದಗಳಲ್ಲಿ, ಜನರ ಕಿರಿಚಾಟದಲ್ಲಿ ದೊರೆಯದ ಭಗವಂತನ ದರ್ಶನ ಈ ನಿಸರ್ಗದ ಪ್ರಶಾಂತತೆಯಲ್ಲಿ ತಾನೇ ಮೈದಳೆಯುತ್ತದೆ. ಅಲ್ಲಿ ನೀವು ಮತ್ತು ಭಗವಂತ ಇಬ್ಬರೇ ಮುಖಾಮುಖಿಯಾಗುವ ಅವಕಾಶ.
 
ದಿನನಿತ್ಯದ ಜಂಜಾಟದಲ್ಲಿ ಬರೀ ಶಬ್ದಾಡಂಬರದ ಮಾತುಗಳಲ್ಲಿ, ಯಾವುದೋ ಜಾತಿಯ, ತತ್ವಗಳ ಹಣೆಪಟ್ಟಿ ಕಟ್ಟಿಕೊಂಡು ನಿಜವಾದ ಅಸ್ತಿತ್ವವನ್ನೇ ಮರೆಯುತ್ತೇವೆ. ತಿಳಿದಿದ್ದೇವೆ ಎಂಬ ಭ್ರಮೆಯಲ್ಲಿ ಮೆರೆಯುತ್ತೇವೆ. ಇದು ಕೆಲಕಾಲವಾದರೂ ತಪ್ಪಿ ನಮ್ಮ ಹೃದಯದೊಂದಿಗೇ ಸಂವಾದ ಮಾಡಬೇಕಾದರೆ ಜೀವನ ಸರೋವರದ ಯಾತ್ರೆಯಲ್ಲಿ ನಡೆದಾಗ ತಲೆಯಲ್ಲಿ ಭೋರಿಡುವ ಚಿಂತೆಗಳ, ಭ್ರಮೆಗಳ ಇಂಜಿನ್ ಕೆಲಕಾಲ ಬಂದು ಮಾಡಿ ಕಣ್ಣು ಮುಚ್ಚಬೇಕು. ಆಗ ನಮ್ಮ ಜನರ ಸ್ವರೂಪದ ಅರಿವಾದೀತು, ಜೀವನದ ಪಥವನ್ನು ಸ್ವಲ್ಪವಾದರೂ ತಿಳಿಗೊಳಿಸಲು ಅನುವಾದೀತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT