ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ ಕ್ರೀಕ್ ಕೊಲ್ಲಿ ಕಥೆ

Last Updated 25 ಜನವರಿ 2014, 19:30 IST
ಅಕ್ಷರ ಗಾತ್ರ

ಆಳ ಕಡಲಿಗೆ ಅವನು ತನ್ನ ಗುಂಪಿನೊಡನೆ ಮೀನು ಹಿಡಿಯಲು ಹೋಗುತ್ತಾನೆ. ನೀರಿನ ಮೇಲೆ ಸರಹದ್ದು ಇರುವುದಿಲ್ಲ. ನಮ್ಮ ದೇಶದ ನೀರಿನ ಮೇಲೆ ಬಂದು ಮೀನು ಹಿಡಿಯುತ್ತಿದ್ದಿ ಎಂದು ಅವನನ್ನೂ ಅವನ ಗೆಳೆಯರನ್ನೂ ಆ ದೇಶದ ನೌಕಾಪಡೆಯವರು ಬಂಧಿಸುತ್ತಾರೆ. ನಿಮ್ಮದು ಬೇಹುಗಾರಿಕೆ, ಭಯೋತ್ಪಾದನೆ ಅಂತ ಆರೋಪಿಸುತ್ತಾರೆ. ಆರೋಪ ಸುಳ್ಳು ಎಂದು ಸಾಬೀತಾಗಲು ಬೇಕಾಗುವುದು ಬರಿಯ ಇಪ್ಪತ್ತೈದು ವರ್ಷ. ಮೀನಿನ ಬಲೆಯನ್ನಷ್ಟೇ ಬದುಕಾಗಿಸಿಕೊಂಡಿದ್ದವನಿಗೆ ಅದೇ ಬಲೆ ಬಲಿಪಶುವನ್ನಾಗಿಸುತ್ತದೆ. ಎಂದೂ ಗನ್ ಹಿಡಿಯದವನನ್ನು ಭಯೋತ್ಪಾದಕನೆಂದು ಹೆಸರಿಸಲಾಗುತ್ತದೆ. ಇದು ಸಿನಿಮಾ ಕಥೆ ಇರಲೂಬಹುದು. ಆದರೆ ಕಚ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ನಿತ್ಯ ಸಂಭವಿಸುತ್ತಿರುವ ಘಟನೆ.

ರಾಜನೀತಿಯಲ್ಲಿ ಖಾಚಿತ್ಯ, ಸ್ಪಷ್ಟತೆ ಮತ್ತು ನಂಬಿಕೆಗಳು ನಾಪತ್ತೆಯಾಗಿ ಬರಿಯ ಹುನ್ನಾರ, ಮತ್ಸರ, ಅರ್ಥಹೀನ ಹಠಮಾರಿತನ ತುಂಬಿಕೊಂಡರೆ ಅಂಥ ದೇಶಗಳು ಹಳ್ಳ ಹಿಡಿಯುತ್ತವೆ. ಇದರಿಂದ ಎರಡು ದೇಶಗಳ ನಡುವೆ ಗಡಿಭಾಗದಲ್ಲಿ ಓಡಾಡುವ ಜನಸಾಮಾನ್ಯರಿಗೆ ನರಕ ಯಾತನೆ. ವಿಶೇಷವಾಗಿ ಭಾರತ-–ಪಾಕಿಸ್ತಾನಗಳ ನಡುವೆ ಅದೆಷ್ಟು ವಿವಾದಗಳಿವೆ ಎಂದರೆ ಸುಸೂತ್ರವಾಗಿ ಬಗೆಹರಿಯುವ ವ್ಯಾಜ್ಯವೇ ಇಲ್ಲ. ಒಂದಕ್ಕೊಂದು ಹೆಣಿಗೆ ಹಾಕಿಕೊಂಡು ದಿನೇ ದಿನೇ ಕಗ್ಗಂಟಾಗುತ್ತಿವೆ. ಹಿಂದಿನ ತಲೆಮಾರಿನಲ್ಲಿದ್ದ ಸಮಸ್ಯೆಗಳು ಈಗ ದ್ವಿಗುಣವಾಗಿವೆ. ಮುಂದಿನ ತಲೆಮಾರಿಗೆ ಅವು ಇನ್ನಷ್ಟು ಉಲ್ಬಣವಾಗಲಿವೆ. ನೆರೆಯ ರಾಷ್ಟ್ರವೊಂದು ಶಾಶ್ವತ ತಲೆನೋವಿನಂತಾಗಿದೆ.

ಇದಕ್ಕೆ ಮುಖ್ಯ ಕಾರಣ ನಮ್ಮ ನೇತಾರರು ವ್ಯಾಜ್ಯವೊಂದು ಎದುರಾದಾಗ ತಿಪ್ಪೆ ಸಾರಿಸಿ ಅದನ್ನು ಜೀವಂತವಾಗಿರಿಸುವುದು. ಇಬ್ಬರು ನಾಯಕರು ಮತ್ತು ಅವರ ಜೊತೆಗಿನ ತಂಡಗಳು ಒಂದು ನ್ಯಾಯಸಮ್ಮತ ಮಾರ್ಗವನ್ನು ಕಂಡುಕೊಳ್ಳುವ ಉತ್ಸಾಹವನ್ನೇ ತೋರಿಲ್ಲ. ಇದು ಕೊಡುಕೊಳ್ಳುವ ಉದಾರ ಬಗೆಯಿಂದ ಮಾತ್ರ ಸಾಧ್ಯ. ನೆಹರು ಮನಸ್ಸು ಮಾಡಿದ್ದರೆ ಕಾಶ್ಮೀರ ಸಮಸ್ಯೆಯನ್ನು ಎಂದೋ ಬಗೆಹರಿಸಬಹುದಿತ್ತು. ಅನಂತರ ಬಂದವರು ಸಮಸ್ಯೆಗಳನ್ನು ಪೇರಿಸಿಟ್ಟು ಜಟಿಲಗೊಳಿಸಿದರು. ಈಗ ಭಯೋತ್ಪಾದನೆ ನಮ್ಮ ನಡುವೆ ಶಾಶ್ವತ ಕಂದರ ಉಂಟು ಮಾಡಿದೆ. ತಂತಮ್ಮ ಮೂಗಿನ ನೇರಕ್ಕೇ ವಾದಿಸಿಕೊಳ್ಳುವ ದೇಶಗಳು ಎಂದೂ ಮೂರನೆಯ ವ್ಯಕ್ತಿಯ ತೀರ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ. ೬೭ ವರ್ಷಗಳಲ್ಲಿ ಇಬ್ಬರೂ ಒಂದಿಂಚು ಬದಲಾಗಿಲ್ಲ. ಮುಂದೆಯೂ ಬದಲಾಗುತ್ತಾರೆಂಬ ನಂಬಿಕೆ ಇಲ್ಲ.

ಈಗ ಸಾಮಾನ್ಯವೆನಿಸಿರುವ ದೈನಂದಿನ ಸುದ್ದಿ. ಅದೇನೆಂದರೆ ಮೀನು ಹಿಡಿಯಲು ಹೋದ ಮೀನುಗಾರರನ್ನು ತಮ್ಮ ಗಡಿಉಲ್ಲಂಘನೆ ಆರೋಪ ಹೊರಿಸಿ ಬಂಧಿಸಿ ಎಳೆದೊಯ್ಯುವುದು. ಇವರಿಗೆ ವಿಚಾರಣೆಯೂ ಇಲ್ಲ. ತನಿಖೆಯೂ ಇಲ್ಲ. ಇಪ್ಪತ್ತು ಮುವ್ವತ್ತು ವರ್ಷ ಪಶುಗಳಂತೆ ಕೂಡಿ ಹಾಕುವುದು. ಮೀನು ಹಿಡಿಯಲು ಹೋದ ತಂದೆ, ಅಣ್ಣ, ತಮ್ಮ ಮುವ್ವತ್ತು ವರ್ಷಗಳ ನಂತರ ಮಾತೃಭೂಮಿಗೆ ಮರಳುವುದು. ಎರಡು ದೇಶಗಳ ರಾಜನೀತಿಯಲ್ಲಿನ ಎಡವಟ್ಟುಗಳಿಗೆ ಬಲಿಯಾಗುವವನು ಬಡ ಮೀನುಗಾರ. ಒಂದು ಕೋಟಿಗೂ ಹೆಚ್ಚು ಮೀನುಗಾರರು ಭಾರತದಲ್ಲಿದ್ದಾರೆ. ಇವರೇಕೆ ಅವರ ನೀರಿನ ಮೇಲೆ ಹೋಗಬೇಕು ? ಬೇರೆಯವರ ಸರಹದ್ದಿನಲ್ಲಿ ಪ್ರವೇಶ ಮಾಡುವುದು ಸರಿಯೆ ? ಅಥವಾ ಅಲ್ಲಿ ಗಡಿರೇಖೆಯ ಯಾವುದೂ ಗುರುತುಗಳಿಲ್ಲವೆ ? ನೌಕಾಪಡೆಗಳು ನಿರಂತರವಾಗಿ ಕಾಯುವುದಿಲ್ಲವೆ ?

ಯಾಂತ್ರೀಕೃತ ಬೋಟ್‌ಗಳಲ್ಲಿ ಜಿ.ಪಿ.ಎಸ್ ಇರುವುದಿಲ್ಲವೆ ? ವಿಶಾಲ ಕಡಲಿನ ಮೇಲೆ ಜಲಸರಹದ್ದು ಸಾಮಾನ್ಯ ಮೀನುಗಾರನ ಕಣ್ಣಿಗೆ ಕಾಣಿಸುವುದಿಲ್ಲವೆ ? ಅಥವಾ ಈ ಜಲಸರಹದ್ದು ಎಂಬುದೇ ಕಾಲ್ಪನಿಕವೆ ? ಇಂಥ ಸಮಸ್ಯೆ ಭಾರತಕ್ಕೆ ಶ್ರೀಲಂಕಾ, ಬಾಂಗ್ಲಾಗಳ ಜತೆಗೂ ಇದೆ. ಅಲ್ಲಿಯೂ ಆಗಾಗ ವಿವಾದಗಳು ಏರ್ಪಡುತ್ತವೆ. ಆದರೆ ಪಾಕಿಸ್ತಾನದ ಸಮಸ್ಯೆ ಮಾತ್ರ ಬಿಡಿಸಲಾಗದ ಕಗ್ಗಂಟು- ಏಕೆ ?

ಈ ಕಗ್ಗಂಟಿನ ಮೂಲ ಸರ್ ಕ್ರೀಕ್ ಎಂಬ ಸಣ್ಣ ಕೊಲ್ಲಿ. ೯೬ ಕಿ.ಮೀ ಉದ್ದದ ಈ ಕೊಲ್ಲಿಯ ದೆಸೆಯಿಂದ ಭಾರತ ಪಾಕಿಸ್ತಾನಗಳ ಕಿತ್ತಾಟ ಶುರುವಾದದ್ದು. ಮೊಸಳೆಯಂತೆ ಬಾಯಿ ತೆರೆದಿರುವ ಗುಜರಾತ್ ರಾಜ್ಯದ ಪಶ್ಚಿಮ ತುದಿಯಲ್ಲಿದೆ ಸರ್ ಕ್ರೀಕ್. ಅಂತಾರಾಷ್ಟ್ರೀಯ ನಿಯಮದಂತೆ ಸರ್ ಕ್ರೀಕ್‌ನ ಅರ್ಧ ಭಾಗ ನಮ್ಮದು ಎನ್ನುತ್ತದೆ ಭಾರತ. ಅದು ಪೂರ್ತಿ ನಮ್ಮದು, ಪೂರ್ವದ ಭೂಭಾಗದಿಂದ ಮಾತ್ರ ಭಾರತ ಎನ್ನುತ್ತದೆ ಪಾಕಿಸ್ತಾನ. ಭೂಪಟದಲ್ಲಿ ಭಾರತ ಸರ್ ಕ್ರೀಕ್‌ನ ಅರ್ಧಭಾಗಕ್ಕೆ ಕೆಂಪುಗೆರೆ ಹಾಕಿಕೊಂಡರೆ ಪಾಕಿಸ್ತಾನವು ಸರ್ ಕ್ರೀಕ್‌ನ ಪಶ್ಚಿಮದ ಅಂಚಿಗೆ ಹಸಿರು ಗೆರೆ ಹಾಕಿಕೊಂಡಿದೆ. ಈ ಕೆಂಪುಗೆರೆಯನ್ನು ಆಧರಿಸಿ ದಕ್ಷಿಣ ದಿಕ್ಕಿಗಿರುವ ಕಡಲನ್ನು ಸೀಳಿಕೊಂಡರೆ ಭಾರತಕ್ಕೆ ನೈಸರ್ಗಿಕ ಸಂಪನ್ಮೂಲ, ಮೀನುಗಾರಿಕೆ ಮುಂತಾದ ವಿಷಯಗಳಲ್ಲಿ ಬಹಳ ಪ್ರಯೋಜನವಾಗಬಲ್ಲ ಕಡಲಾವರಣ ಲಭಿಸಲಿದೆ.

ಇದು ಬ್ರಿಟಿಷ್ ಕಾಲದ ವಿವಾದ. ಆಗಿನ ಕಚ್ ಮತ್ತು ಸಿಂಧ್ ಪ್ರಾಂತ್ಯದ ನಡುವಿನದು. ಭಾರತ ಸ್ವತಂತ್ರವಾದ ಮೇಲೆ ಕಚ್ ನಮಗೆ ಬಂತು. ಸಿಂಧ್ ಪಾಕಿಸ್ತಾನಕ್ಕೆ ಹೋಯ್ತು. ವಿವಾದ ಮಾತ್ರ ಇಬ್ಬರ ನಡುವೆ ಹಾಗೆಯೇ ಉಳಿಯಿತು. ಒಂದಲ್ಲ -ಎರಡಲ್ಲ- ಹನ್ನೆರಡು ಸುತ್ತಿನ ಮಾತುಕತೆಗಳಾಗಿವೆ. ತಲೆ ರೋಸಿ ಹೋಗಿ ಈ ಸರ್ ಕ್ರೀಕ್‌ ಅನ್ನು ಕ್ರೀಪಿ ಕ್ರೀಕ್ ಅನ್ನುತ್ತಾರೆ. ಈ ಸಲ ಪರಿಹಾರ ಸಿಕ್ಕಿತು ಅಂದುಕೊಳ್ಳುವುದರೊಳಗೆ ಮುಂಬೈ ದಾಳಿಯಾಗುತ್ತದೆ. ಸಿಯಾಚಿನ್ ಬಿಚ್ಚಿಕೊಳ್ಳುತ್ತದೆ. ಮಾತುಕತೆ ಮುರಿದುಬೀಳುತ್ತದೆ. ಏನಾದರೊಂದು ಪ್ರಕೃತಿ ವಿಕೋಪವಾಗಿ ಸರ್ ಕ್ರೀಕ್ ನಾಮಾವಶೇಷವಾದರೆ ಎರಡೂ ದೇಶಗಳು ತಣ್ಣಗಾಗಬಹುದೇನೋ.

            *
ವಿವಾದಾಸ್ಪದವಾದ ಈ ಕಡಲಭಾಗದಲ್ಲಿ ಎರಡೂ ಕಡೆಯ ಮೀನುಗಾರರು ಮೀನು ಹಿಡಿಯಲು ಹೋಗುತ್ತಾರೆ. ಅವರನ್ನು ಇವರು, ಇವರನ್ನು ಅವರು ಶಕ್ತ್ಯಾನುಸಾರ ಬಂಧಿಸುತ್ತಾರೆ. ಬಡಮೀನುಗಾರರು ಜೈಲಿನಲ್ಲಿ ವರ್ಷಗಟ್ಟಳೆ ಕೊಳೆಯುತ್ತಾರೆ. ಇದಕ್ಕೊಂದು ನಾಗರಿಕ ಪ್ರಜ್ಞೆಯ ಪರಿಹಾರ ಬೇಡವೆ ? ಗುಜರಾತಿನ ಮೀನುಗಾರರಿಗೆ ಕೊಂಚ ಮೋದಿಸ್ಪಿರಿಟ್ ಹೆಚ್ಚು. ಭಾರತದಲ್ಲಿ ಅತಿ ಹೆಚ್ಚು ಮೀನು ಹಿಡಿಯುವವರು ಅವರೇ. ಇವರು ವರ್ಷಕ್ಕೆ ಒಂಬತ್ತು ಲಕ್ಷ ಟನ್ ಮೀನು ಹಿಡಿಯುತ್ತಾರೆ ಎಂಬುದೊಂದು ಅಂದಾಜು.

ಭಾರತ–-ಪಾಕಿಸ್ತಾನಗಳ ನಡುವೆ ಸರ್ ಕ್ರೀಕ್ ವಿವಾದವಿರುವಂತೆ, ಅಂತಹುದೇ ಒಂದು ವಿವಾದ ಭಾರತ-–ಬಾಂಗ್ಲಾಗಳ ನಡುವೆ ಇರಬೇಕಿತ್ತು. ಆ ಜಾಗವನ್ನು ಭಾರತ ನ್ಯೂ ಮೋರ್ ಎಂತಲೂ ಬಾಂಗ್ಲಾ ಸೌತ್ ತಲಪಟ್ಟಿ ಎಂತಲೂ ಕರೆಯುತ್ತವೆ. ಅದೊಂದು ನಿರ್ವಸತಿಯ ಪುಟ್ಟ ದ್ವೀಪ. ಹರಿಯಭಂಗ ನದಿಯ ಮುಖದಿಂದ ಎರಡು ಕಿಲೋ ಮೀಟರ್ ಉದ್ದವಾಗಿತ್ತು. ಹರಿಯಭಂಗ ನದಿ ಭಾರತ –ಬಾಂಗ್ಲಾ ಗಡಿಯಲ್ಲಿದೆ. ೧೯೮೧ ರಲ್ಲಿ ಭಾರತ ಈ ದ್ವೀಪದ ಮೇಲೆ ಧ್ವಜ ಹಾರಿಸಿತು.

ಬಾಂಗ್ಲಾ ಅದು ತನಗೆ ಸೇರಬೇಕಾದ್ದು ಎಂದು ಗೊಣಗಲು ಆರಂಭಿಸಿತ್ತು. ಆದರೆ ಜಾಗತಿಕ ತಾಪಮಾನದ ಹೆಚ್ಚಳದ ಕಾರಣ ಪ್ರವಾಹಗಳು ಹೆಚ್ಚಿ ಸಮುದ್ರ ಮಟ್ಟವೂ ಹೆಚ್ಚಿ ಈ ಸೌತ್ ಪಟ್ಟಿ ನಾಪತ್ತೆಯಾಗಿದೆ. ನೀರಲ್ಲಿ ಮುಳುಗಿದೆ. ಈ ವೈಪರೀತ್ಯವು ಹೀಗೇ ಮುಂದುವರಿದರೆ ೨೦೫೦ರ ವೇಳೆಗೆ ಬಾಂಗ್ಲಾದೇಶದ ಶೇಕಡಾ ೧೭ರಷ್ಟು ಭೂಮಿ ಬಂಗಾಳಕೊಲ್ಲಿಯಲ್ಲಿ ಮುಳುಗಲಿದೆ. ಒಂದು ಕಡೆ ದೇಶದೇಶಗಳ ಕಿತ್ತಾಟ. ಮತ್ತೊಂದು ಕಡೆ ಎಲ್ಲವನ್ನೂ ಸಮಗೊಳಿಸುವ ಪ್ರಕೃತಿಯ ಅನಿರೀಕ್ಷಿತ ದಾಳಿ.
*

ನಮ್ಮಲ್ಲಿ ಮೀನುಗಾರಿಕೆ ಒಂದು ಧ್ಯಾನದಂತಿತ್ತು. ಒಬ್ಬ ಗಾಳ ಹಾಕಿ ತಪಸ್ವಿಯಂತೆ ಕುಳಿತುಬಿಡುತ್ತಿದ್ದ. ರಾತ್ರಿ ಬಿಡುಬಲೆ ಎಸೆದು ಹೋದರೆ ಬೆಳಿಗ್ಗೆ ಬಂದು ಮೀನುಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದ. ಈ ಸಾಂಪ್ರದಾಯಿಕ ಶೈಲಿ ಐವತ್ತರ ದಶಕದಲ್ಲಿ ಭಾರೀ ಬದಲಾವಣೆ ಕಂಡಿತು. ಇಂಡೋ-ನಾರ್ವೇಜಿಯನ್ಸ್ ಯೋಜನೆಗಳು ಅವತರಿಸುತ್ತಿದ್ದಂತೆ ಯಾಂತ್ರೀಕೃತ ದೋಣಿಗಳು ಬಂದು ಟ್ರಾಲಿಂಗ್ ಫಿಶಿಂಗ್ ಆರಂಭವಾಯಿತು. ಈ ಟ್ರಾಲಿಂಗ್ ಫಿಶಿಂಗ್ ಎಂದರೆ ಸಮುದ್ರದ ತಳ ಭಾಗದಲ್ಲಿ ಎಲ್ಲ ಜಲಚರಗಳನ್ನೂ ಗುಡಿಸಿಕೊಂಡು ಬರುವ ಬೃಹತ್ ಮೀನುಗಾರಿಕೆ. ಇಸ್ರೋ ಸಂಸ್ಥೆ ಸ್ಯಾಟಲೈಟ್ ಮೂಲಕ ಸಮುದ್ರದ ನೀರಿನ ಉಷ್ಣತೆಯನ್ನು ಗ್ರಹಿಸಿ ಮೀನುಗಳ ಇರುವಿಕೆಯನ್ನೂ ಸೂಚಿಸುವುದರಿಂದ ಟ್ರಾಲಿಂಗ್ ಫಿಶಿಂಗ್ ಈಗ ಶೀಘ್ರ ಮತ್ತು ಲಾಭದಾಯಕ. ಆದರೆ ಇದರಿಂದ ಮತ್ಸ್ಯ ಸಂಪತ್ತು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಕೆನಡಾದ ತಂತ್ರಜ್ಞರು ಭವಿಷ್ಯ ನುಡಿದಿದ್ದಾರೆ.

ನಾನು ಫ್ರಾನ್ಸ್‌ಗೆ ಹೋಗಿದ್ದಾಗ ಅಟ್ಲಾಂಟಿಕ್ ತೀರದ ಒಂದು ಮೀನುಗಾರಿಕೆಯ ಶಾಲೆಗೆ ಹೋಗಿದ್ದೆ. ವಿದ್ಯಾರ್ಥಿಗಳು I’am a fisherman ಎಂದು ಹೆಮ್ಮೆಯಿಂದ ಪರಿಚಯಿಸಿಕೊಳ್ಳುತ್ತಿದ್ದರು. ಅವರಿಗೆ ವೃತ್ತಿಯ ಬಗ್ಗೆ ಬಹಳ ಅಭಿಮಾನ. ಚಿಕ್ಕ ದೇಶವಾದ ಫ್ರಾನ್ಸ್‌ನ ಅಟ್ಲಾಂಟಿಕ್ ಕಡಲ ತೀರದಲ್ಲಿ ೧೭ ಶಾಲೆಗಳಿವೆಯಂತೆ. ಇಲ್ಲಿ ಬಂಗಡೆ, ಬೂತಾಯಿ ಇದ್ದಂತೆ ಅಲ್ಲಿ ಟೂನಾ ಮೀನು ಪ್ರಸಿದ್ಧವಾದದ್ದು. ಫ್ರಾನ್ಸ್ ಸುಮಾರು ೧೬ ದೇಶಗಳೊಂದಿಗೆ ತನ್ನ ಕಡಲು ನೀತಿ ಸಂಹಿತೆಯನ್ನು ಹಂಚಿಕೊಂಡಿದೆ. ಯಾವ ವಿವಾದವೂ ಇಲ್ಲ. ಆದರೆ ನಾವು ಹಂಚಿಕೊಂಡಿರುವ ೭ ದೇಶಗಳಲ್ಲಿ ೪ ದೇಶಗಳೊಂದಿಗೆ ವಿವಾದ.

ಇದೆಲ್ಲ ಬದಿಗಿಟ್ಟು ಈ ಬಹುರತ್ನ ವಸುಂಧರೆಯ ಬಗ್ಗೆ ಚಿಂತಿಸೋಣ. ಅವಳು ಎಲ್ಲರೂ ನೆಮ್ಮದಿಯಾಗಿ ಬಾಳುವಷ್ಟು ಸಮೃದ್ಧಿಯನ್ನಿಲ್ಲಿ ಕೊಟ್ಟಿದ್ದಾಳೆ. ಇಲ್ಲಿ ಅಸಂಖ್ಯ ಪರ್ವತ, ಕಾಡು, ನದಿ, ಸಮುದ್ರಗಳಿವೆ. ಇಲ್ಲಿ ಎಲ್ಲ ಮೀನುಗಾರರೂ, ಮೀನುಗಾರ­ರಲ್ಲ­ದವರೂ ಸುಖವಾಗಿರಲು ಸಾಧ್ಯ. ೧೨,೪೭೨ ಕಿ.ಮೀ. ನಷ್ಟು ಡಯಾಮೀಟರ್ ಉಳ್ಳ ಈ ತಾಯಿಯ ಮೇಲ್ಕವಚದಲ್ಲಿ ಮುಕ್ಕಾಲು ಭಾಗ ಸಮುದ್ರವೇ ಇದೆ.

ನಮಗೆ ಅದ್ಭುತವಾಗಿ ಕಾಣುವ ಈ ಸಮುದ್ರ­ರಾಶಿ ಭೂಮಿಯ ಗಾತ್ರದೊಂದಿಗೆ ಹೋಲಿಸಿದಾಗ ಏನೇನೂ ಅಲ್ಲ. ಭೂಮಿಯನ್ನು ಒಂದು ಟೊಮಾಟೋ ಹಣ್ಣಿಗೆ ಹೋಲಿಸುವುದಾದರೆ ಈ ಸಮುದ್ರಗಳೆಲ್ಲ ಹಣ್ಣಿನ ಮೇಲ್‌ಪದರದಲ್ಲಿರುವ ಸಿಪ್ಪೆಯಂತೆ. ಈ ಸಿಪ್ಪೆ ಜೀವಸಂಕುಲಕ್ಕೆ ಬೇಕಾದ ಅಸಾಧಾರಣವಾದ ರಕ್ಷಾಕವಚ. ಆದರೆ ನಾವು ಈ ಅದ್ಭುತವಾದ ಸಿಪ್ಪೆಯನ್ನು ತಿಪ್ಪೆ ಮಾಡಿಕೊಳ್ಳುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT