ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ, ಹೀರೋಗಳ ಜನಪ್ರಿಯತೆ ಆಯಸ್ಸು ಕಡಿಮೆ!

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ
‘ಮುಂದೆ ಏನಾಗುತ್ತದೆ ಎಂಬುದನ್ನು ಹೇಳುವುದು ಕಷ್ಟ.’ ಅಮೆರಿಕದ ಬೇಸ್‌ಬಾಲ್‌ ಆಟಗಾರ ಯೋಗಿ ಬೆರ್ರಾ ಹೇಳಿದ ಮಾತು ಇದು ಎನ್ನುತ್ತಾರೆ. ಅವರ ನಿಜ ಹೆಸರು ಲಾರೆಂಜೊ ಎಂದು. ಆದರೆ ಅವರು ಭಾರತೀಯರಂತೆ ಚಕ್ಕಳಮಕ್ಕಳ ಹಾಕಿ ಆರಾಮವಾಗಿ ಕುಳಿತುಕೊಳ್ಳುತ್ತಿದ್ದ ಕಾರಣ ಅವರಿಗೆ ‘ಯೋಗಿ’ ಎಂಬ ಅಡ್ಡಹೆಸರು ಬಂತು.

ನಾವು ಯೋಗಿ ಅಥವಾ ಅನುಭಾವಿಗಳಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಲಿದೆ ಎಂಬುದನ್ನು ಹೇಳುವುದರಿಂದ ದೂರವಿರೋಣ. ಆದರೆ, 2014ರ ಚುನಾವಣಾ ಫಲಿತಾಂಶದ ಅಂಕಿ–ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವುಗಳ ಆಧಾರದಲ್ಲಿ 2019ರಲ್ಲಿ ಏನಾಗಬಹುದು ಎಂಬ ವಿಶ್ಲೇಷಣೆ ನಡೆಸಬಹುದು.
 
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಗೆಲುವು 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಅಧಿಕಾರ ಉಳಿಸಿಕೊಳ್ಳುವುದನ್ನು ಖಚಿತಪಡಿಸಿದೆ ಎನ್ನಲಾಗುತ್ತಿದೆ.
 
2014ರ ಲೋಕಸಭಾ ಚುನಾವಣೆಯ ಮತಗಳ ಎಣಿಕೆ ಆರಂಭವಾಗುವುದಕ್ಕೆ ಮೊದಲು ಮೋದಿ ಅವರು ಭವಿಷ್ಯ ಹೇಳಿದ್ದರು. ಬಿಜೆಪಿಗೆ ಬಹುಮತ ಸಿಗುತ್ತದೆ ಎಂದು ಚುನಾವಣಾ ರ್‌್ಯಾಲಿಗಳಲ್ಲಿ ಪಾಲ್ಗೊಂಡ ಜನ ಹೇಳುತ್ತಿದ್ದರು ಎಂದು ಮೋದಿ ಅವರು ಹೇಳಿದರು. ಲೋಕಸಭೆಯಲ್ಲಿ ರಾಜಕೀಯ ಪಕ್ಷವೊಂದಕ್ಕೆ 1984ರ ನಂತರ ಬಹುಮತ ಸಿಕ್ಕಿರಲಿಲ್ಲ. ಆದರೆ ಮೋದಿ ಅವರು ಹೇಳಿದ ಭವಿಷ್ಯ ನಿಜವಾಯಿತು, ಅವರ ಪಕ್ಷಕ್ಕೆ 282 ಸ್ಥಾನಗಳು ದೊರೆತವು.
 
ಮೋದಿ ಅವರಿಗೆ ಹೆಚ್ಚಿನ ಸ್ಥಾನಗಳು ಸಿಕ್ಕಿದ್ದು ಉತ್ತರ ಭಾರತದ ರಾಜ್ಯಗಳಿಂದ. ಮೋದಿ ಅವರು ಪ್ರಾಬಲ್ಯ ಮೆರೆದಿದ್ದು ಬಿಜೆಪಿ ಆಡಳಿತ ಇದ್ದ ರಾಜ್ಯಗಳಲ್ಲಿ ಅಥವಾ ಬಿಜೆಪಿ ಶಕ್ತಿಯುತವಾಗಿದ್ದ ರಾಜ್ಯಗಳಲ್ಲಿ. ಅವು ಮೋದಿ ಅವರ ತವರು ರಾಜ್ಯ ಗುಜರಾತ್‌ (26 ಲೋಕಸಭಾ ಸ್ಥಾನಗಳ ಪೈಕಿ 26ರಲ್ಲಿ ಬಿಜೆಪಿ ಗೆಲುವು), ರಾಜಸ್ತಾನ (25ರಲ್ಲಿ 25), ಮಧ್ಯಪ್ರದೇಶ (29ರಲ್ಲಿ 27), ಜಾರ್ಖಂಡ್ (14ರಲ್ಲಿ 12), ಹಿಮಾಚಲ ಪ್ರದೇಶ (4ರಲ್ಲಿ 4), ಹರಿಯಾಣ (10ರಲ್ಲಿ 7), ದೆಹಲಿ (7ರಲ್ಲಿ 7), ಛತ್ತೀಸಗಡ (11ರಲ್ಲಿ 10), ಉತ್ತರಾಖಂಡ (5ರಲ್ಲಿ 5) ಮತ್ತು ಉತ್ತರ ಪ್ರದೇಶ (80ರಲ್ಲಿ 71).
 
ಉತ್ತರ ಭಾರತದ ರಾಜ್ಯಗಳಲ್ಲಿ ಸಾಧಿಸಿದ ಭಾರಿ ವಿಜಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ದೊರೆತ ಕೆಲವು ಸ್ಥಾನಗಳು ಬಿಜೆಪಿ ಸಂಖ್ಯಾಬಲವನ್ನು 200ರ ಗಡಿ ದಾಟಿಸಿದವು. ಮೂವತ್ತು ವರ್ಷಗಳ ಅವಧಿಯಲ್ಲಿ ಅಷ್ಟೊಂದು ಸ್ಥಾನ ಸಿಕ್ಕಿದ್ದು ಅದೇ ಮೊದಲು.
 
ಈ ಭಾಗಗಳಲ್ಲಿ ಇಷ್ಟೊಂದು ಪ್ರಮಾಣದ ಗೆಲುವು ಸಿಕ್ಕ ನಂತರ ಮೋದಿ ಅವರಿಗೆ ಇತರ ಭಾಗಗಳಲ್ಲಿ ಗೆಲುವು ಸಾಧಿಸಲು ಸಾಮಾನ್ಯ ಮಟ್ಟದ ಸಾಧನೆಗೈದರೆ ಸಾಕಿತ್ತು. ಹಾಗಾಗಿ, ಮತ್ತೆ ಇದೇ ರೀತಿಯ ಚುನಾವಣಾ ಸಾಧನೆ ತೋರುವುದು ಮೋದಿ ಅವರ ಎದುರಿರುವ ಸರಳ ಮಾರ್ಗ.
 
ಆದರೆ, ಈ ಸಾಧನೆಯನ್ನು 2019ರಲ್ಲಿ ಉತ್ತರ ಭಾರತದಲ್ಲಿ ಪುನರಾವರ್ತಿಸುವುದು ಮೋದಿ ಅವರಿಗೆ ಸವಾಲಿನ ಕೆಲಸವಾಗಲಿದೆ. ರಾಜಸ್ತಾನ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಈಗ ಹೊಂದಿರುವ ಪ್ರಾಬಲ್ಯವನ್ನು 2019ರಲ್ಲೂ ಉಳಿಸಿಕೊಳ್ಳುವುದು ಪಕ್ಷಕ್ಕೆ ಕಷ್ಟ. ಈ ಮಾತು ಉತ್ತರ ಪ್ರದೇಶಕ್ಕೂ ಅನ್ವಯವಾಗಬಹುದು.

ಪರಿಪೂರ್ಣತೆಗಿಂತ ಹೆಚ್ಚಿನ ಸಾಧನೆ ಇಲ್ಲ. ಗುಜರಾತ್, ಉತ್ತರಾಖಂಡ, ರಾಜಸ್ತಾನ ಮತ್ತು ದೆಹಲಿಯಲ್ಲಿ ಮೋದಿ ಅವರು ಪರಿಪೂರ್ಣತೆ ಸಾಧಿಸಿದ್ದಾರೆ. ಗುಜರಾತಿನಲ್ಲಿ ಬಿಜೆಪಿಯ ನಂಬಿಕಸ್ಥ ಮತದಾರರಾದ ಪಟೇಲರು ತಿರುಗಿಬಿದ್ದಿದ್ದಾರೆ. ರಾಜಸ್ತಾನದಲ್ಲಿ ಅಲ್ಲಿನ ನಾಯಕ ಸಚಿನ್ ಪೈಲಟ್ ಅವರ ಸವಾಲು ಎದುರಿಸಬೇಕು. ಸ್ಥಳೀಯ ಮಟ್ಟದ ಗಟ್ಟಿ ನಾಯಕರಿರುವ ಪಂಜಾಬ್‌ನಲ್ಲಿ ಆಗಿರುವಂತೆ ರಾಜಸ್ತಾನದಲ್ಲಿ ಕೂಡ ಕ್ಷೇತ್ರವಾರು ಸ್ಪರ್ಧೆ ಇರಲಿದೆ.
 
ಆದರೆ ಮೋದಿ ಅವರಿಗೆ ಕೆಲವು ದೊಡ್ಡ ರಾಜ್ಯಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ತೋರುವ ಅವಕಾಶಗಳಿವೆ. ಮಹಾರಾಷ್ಟ್ರ (2014ರಲ್ಲಿ 48 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 23ರಲ್ಲಿ ಗೆಲುವು ಸಾಧಿಸಿತು), ಬಿಹಾರ (40ರಲ್ಲಿ 22 ಸ್ಥಾನ), ಒಡಿಶಾ (21ರಲ್ಲಿ 1) ಮತ್ತು ಪಶ್ಚಿಮ ಬಂಗಾಳದಲ್ಲಿ (42ರಲ್ಲಿ 2 ಸ್ಥಾನ)  ಮೋದಿ ಅವರು ಇನ್ನಷ್ಟು ಹೆಚ್ಚಿನ ಸ್ಥಾನ ಗೆಲ್ಲಲು ಅವಕಾಶ ಇದೆ. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಶರದ್ ಪವಾರ್ ಅವರ ಎನ್‌ಸಿಪಿ, ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಕಾಂಗ್ರೆಸ್ಸನ್ನು ಬದಿಗೆ ಸರಿಸಿದೆ.
 
ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಬಿಜೆಪಿ ಸರ್ಕಾರವನ್ನು ಯಾವತ್ತೂ ಕಂಡಿಲ್ಲ. ಆದರೆ ಈಚೆಗೆ ನಡೆದ ಸ್ಥಳೀಯ ಚುನಾವಣಾ ಫಲಿತಾಂಶ ಗಮನಿಸಿದರೆ, ಒಡಿಶಾದಲ್ಲಿ ಕಾಂಗ್ರೆಸ್ ಹೊಂದಿದ್ದ ವಿರೋಧ ಪಕ್ಷದ ಸ್ಥಾನವನ್ನು ಬಿಜೆಪಿ ಕಸಿದುಕೊಂಡಿದೆ, ಬಂಗಾಳದಲ್ಲಿ ಬಿಜೆಪಿ ಕಾಲೂರಿದೆ ಎಂಬುದು ಗೊತ್ತಾಗುತ್ತದೆ. ಒಂದು ಹಂತದ ಮಟ್ಟಿಗೆ, ಇದಕ್ಕೆ ಕಾರಣ ಮೋದಿ ಅವರ ಜನಪ್ರಿಯತೆ. ಈ ಜನಪ್ರಿಯತೆಯು ಪಕ್ಷದ ಅಭ್ಯರ್ಥಿಗಳಿಗೆ 2019ರಲ್ಲಿ ನೆರವಿಗೆ ಬರುತ್ತದೆ.
 
ಈ ನಾಲ್ಕು ರಾಜ್ಯಗಳಲ್ಲಿ ಹೆಚ್ಚಿನ ಸಾಧನೆ ತೋರಲು ಅವಕಾಶ ಇರುವ ಕಾರಣ, ದಕ್ಷಿಣದ ರಾಜ್ಯಗಳು ಮೋದಿ ಅವರ ಪಾಲಿಗೆ ಕಡಿಮೆ ಪ್ರಮುಖ ಆಗಲಿವೆ. ಆದರೆ ದಕ್ಷಿಣದಲ್ಲಿ ಕೂಡ ಮೋದಿ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ.
 
2019ರಲ್ಲಿ ಮೋದಿ ಅವರು ಕರ್ನಾಟಕದಲ್ಲಿ (2014ರಲ್ಲಿ 28 ಸ್ಥಾನಗಳ ಪೈಕಿ 17ರಲ್ಲಿ ಬಿಜೆಪಿ ಗೆದ್ದಿತ್ತು), ಆಂಧ್ರಪ್ರದೇಶ (25ರಲ್ಲಿ 2), ಕೇರಳ (20ರಲ್ಲಿ ಒಂದೂ ಗೆಲುವು ಇಲ್ಲ), ತಮಿಳುನಾಡು (39ರಲ್ಲಿ 1) ಮತ್ತು ತೆಲಂಗಾಣ (17ರಲ್ಲಿ 1) ರಾಜ್ಯಗಳಲ್ಲಿ ಹಳೆಯ ಸಾಧನೆ ಪುನರಾವರ್ತಿಸಬಹುದು ಅಥವಾ ಅದಕ್ಕಿಂತ ಉತ್ತಮ ಸಾಧನೆ ತೋರಬಹುದು. ಕೆಲವು ರಾಜ್ಯಗಳಲ್ಲಿ ಬಿಜೆಪಿ ಸೋತಿದ್ದರೂ, ಅಲ್ಲಿ ಮತಗಳಿಕೆ ಪ್ರಮಾಣ ಚೆನ್ನಾಗಿದೆ. (ಕೇರಳದಲ್ಲಿ ಬಿಜೆಪಿ ಶೇಕಡ 10ರಷ್ಟು ಮತ ಪಡೆದಿತ್ತು.) ಅಲ್ಲಿ ಬಿಜೆಪಿ ಶಾಶ್ವತ ಅಸ್ತಿತ್ವ ಹೊಂದುವ ಸಾಧ್ಯತೆ ಇದೆ.
 
ಇದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಾಲೂ ಒಂದಿಷ್ಟು ಇದೆ (ಮೋದಿ ಅವರು ಸ್ಥಳೀಯ ಚುನಾವಣೆಗಳ ಗೆಲುವಿನ ಬಗ್ಗೆ ಮಾತನಾಡುವಾಗ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸುತ್ತಾರೆ). ಕಾರ್ಯಕರ್ತರು ದಶಕಗಳಿಂದ ಮಾಡಿದ ಸ್ವಾರ್ಥರಹಿತ ಕೆಲಸವು ಫಲ ನೀಡುತ್ತಿದೆ. ಅಲ್ಲದೆ, ಕಾಂಗ್ರೆಸ್‌ನ ಕೊಳೆಯುವಿಕೆಯೂ ಇದಕ್ಕೆ ಒಂದು ಕಾರಣ. ಈ ರಾಜ್ಯಗಳಲ್ಲೆಲ್ಲ ಕಾಂಗ್ರೆಸ್ ದುರ್ಬಲವಾಗಿದೆ.
 
2004ರ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬಹುಮತ ಪಡೆಯುತ್ತಾರೆ ಎಂದು ನಮ್ಮಲ್ಲಿ ಬಹುತೇಕರು ಭಾವಿಸಿದ್ದರು. ಅವರಲ್ಲೂ ಅಂಥದ್ದೊಂದು ಭರವಸೆ ಇತ್ತು. ಹಾಗಾಗಿ ಅವಧಿಗಿಂತ ಆರು ತಿಂಗಳು ಮೊದಲೇ ಅವರು ಚುನಾವಣೆಗೆ ಮುಂದಾದರು, ಆದರೆ ಸೋತರು.
 
ಎರಡು ವರ್ಷಗಳ ನಂತರ ಏನಾಗುತ್ತದೆ ಎಂಬುದನ್ನು ಈಗಲೇ ಊಹಿಸುವುದು ವಿವೇಕಯುತ ಆಗುವುದಿಲ್ಲ. ಸರ್ಕಾರಗಳು ಮತ್ತು ಹೀರೋಗಳು ತೀರಾ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದಾರೆ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ) 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT