ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ದಾರ್‌ ಪಟೇಲ್‌ ಕೋಮುವಾದಿಯಂತೂ ಅಲ್ಲ

Last Updated 12 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಒಂದು ವೇಳೆ ಜವಾಹರಲಾಲ್ ನೆಹರೂ ಬದಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇನಾದರೂ ಪ್ರಧಾನಿಯಾಗಿದ್ದರೆ ಈ ದೇಶದ ಚರಿತ್ರೆಯೇ ಬದಲಾಗುತ್ತಿತ್ತು, ಒಳ್ಳೆಯದಾಗುತ್ತಿತ್ತು ಎಂಬ ಮಾತು ಕೇಳಿಬರುತ್ತಲೇ ಇರುತ್ತದೆ. ಬಿಜೆಪಿ ಪ್ರಧಾನಿ ಹುದ್ದೆಯ ಅಭ್ಯರ್ಥಿಯೂ ಆದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಈಗ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಸುತ್ತಿರುವ ಪ್ರಚಾರ ಸಭೆಗಳಲ್ಲಿ ಇದೇ ಮಾತನ್ನೇ ಹೇಳುತ್ತಿದ್ದಾರೆ. 

ಆ ಕಾಲದ ಧುರೀಣರಲ್ಲೊಬ್ಬರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನೆಹರೂ ಅವರ ಪ್ರಾಣಸ್ನೇಹಿತ, ಮಾರ್ಗದರ್ಶಕ, ಚಿಂತಕರೂ ಆಗಿದ್ದವರು. ನೆಹರೂ ಸಂಪುಟದಲ್ಲಿ ಸಚಿವರಾಗಿದ್ದು ತೀರಾ ಹತ್ತಿರದಿಂದ ಬಲ್ಲವರು. ನೆಹರೂ ಆಡಳಿತ ಮತ್ತು ಕಾರ್ಯವೈಖರಿಯನ್ನು ನೋಡಿದ ನಂತರ ಅವರೂ ಸಹ ಇಂಥದೇ ಅಭಿಪ್ರಾಯ ತಳೆದಿದ್ದರು.

ನೆಹರೂ ಅವರನ್ನು ರಾಷ್ಟ್ರಪತಿಯಾಗಿ ಮತ್ತು ಪಟೇಲರನ್ನು ಪ್ರಧಾನಿ ಯಾಗಿ ಮಾಡಿದ್ದರೆ ಒಳಿತಾಗುತ್ತಿತ್ತು ಎಂದು ಆಜಾದ್‌ ತಮ್ಮ ಕಾರ್ಯದರ್ಶಿಯಾಗಿದ್ದ ಹುಮಾಯೂನ್ ಕಬೀರ್ ಹತ್ತಿರ ಹೇಳಿದ್ದರಂತೆ. ನಾನು ಮತ್ತು ಕಬೀರ್ ಪರಮಾಪ್ತ ಮಿತ್ರರು. ಮುಂದೆ ನೆಹರೂ ಸಂಪುಟದಲ್ಲಿ ಶಿಕ್ಷಣ ಮಂತ್ರಿ ಯಾದ ಕಬೀರ್ ನನ್ನೊಂದಿಗೆ ಮಾತನಾಡು ವಾಗ ಆಜಾದ್ ಹೇಳಿದ್ದನ್ನು ನೆನಪಿಸಿ ಕೊಂಡಿದ್ದರು.

ಪಟೇಲ್ ಮತ್ತು ಅವರ ಧೋರಣೆಗೂ ಆಜಾದ್‌ಗೂ ಯಾವ ದೃಷ್ಟಿಯಿಂದಲೂ ಹೋಲಿಕೆಯೇ ಇರಲಿಲ್ಲ. ಸ್ವಾತಂತ್ರ್ಯ ಚಳವಳಿ ಯಲ್ಲಿ ಇಬ್ಬರೂ ಸಕ್ರಿಯವಾಗಿ ಭಾಗವಹಿಸಿ ದ್ದವರು. ಆದರೆ ಇಬ್ಬರಲ್ಲೂ ತೀವ್ರ ಸ್ವರೂಪದ ತಾತ್ವಿಕ ಭಿನ್ನಾಭಿಪ್ರಾಯ ಇತ್ತು. ಅದನ್ನು ಅವರು ಮುಚ್ಚಿಟ್ಟುಕೊಂಡಿರಲಿಲ್ಲ. ಪಟೇಲರು ಹಿಂದೂ ಪಕ್ಷಪಾತಿಯೇನೋ ನಿಜ, ಆದರೆ ಸರ್ವಧರ್ಮ ಸಮಭಾವದಲ್ಲಿ ಅಪಾರ ವಿಶ್ವಾಸ ಇಟ್ಟುಕೊಂಡಿದ್ದವರು.

ಆಜಾದ್ ಅಪ್ಪಟ ಧರ್ಮನಿರಪೇಕ್ಷ ವ್ಯಕ್ತಿ. ಮುಸ್ಲಿಂ ಲೀಗ್ ತಮ್ಮನ್ನು ‘ಹಿಂದೂ ಮುಖವಾಡದ ಪ್ರಹಸನಕಾರ’ ಎಂದು ಲೇವಡಿ ಮಾಡಿದ್ದರೂ ಧೈರ್ಯವಾಗಿ ತಮ್ಮ ಜಾತ್ಯತೀತ ನಿಲುವಿಗೆ ಅಂಟಿಕೊಂಡಿದ್ದವರು. ಪಾಕಿಸ್ತಾನದ ರಚನೆ ಮುಸ್ಲಿಮರ ದೃಷ್ಟಿಯಿಂದ ತೀರಾ ಅನಾಹುತಕಾರಿ ಎಂದು ಘಂಟಾಘೋಷವಾಗಿ ಹೇಳಲು ಅವರು ಒಂದು ಕ್ಷಣವೂ ಹಿಂದೆ ಮುಂದೆ ನೋಡಿರಲಿಲ್ಲ.

‘ಸಂಖ್ಯಾಬಾಹುಳ್ಯ ಕಡಿಮೆ ಇದ್ದರೂ ನಾವೆಲ್ಲ ಸಮಾನರು ಎಂದು ಮುಸ್ಲಿಮರು ಅವಿಭಜಿತ ಭಾರತದಲ್ಲಿ ಹೆಮ್ಮೆ ಯಿಂದ ತಲೆಯೆತ್ತಿ ಓಡಾಡಬಹುದು. ಆದರೆ ಒಮ್ಮೆ ಧರ್ಮದ ಹೆಸರಲ್ಲಿ ಪಾಕಿಸ್ತಾನ ರಚನೆ ಯಾದರೆ ಪರಿಸ್ಥಿತಿಯೇ ಬೇರೆಯಾಗುತ್ತದೆ. ನಿಮ್ಮ ಪಾಲು ತೆಗೆದುಕೊಂಡಿರುವುದರಿಂದ ನೀವು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ ಎಂಬ ಮಾತನ್ನು ಹಿಂದೂಗಳಿಂದ ಕೇಳಬೇಕಾಗುತ್ತದೆ’ ಎಂದು ನಿರ್ಭಿಡೆಯಿಂದ ಹೇಳಿದ್ದರು.

ಬಹುಧರ್ಮೀಯತೆ ಬಗ್ಗೆ ಪಟೇಲ್ ಅವರು ಆಜಾದ್‌ರಂತೆ ನಿರ್ದಾಕ್ಷಿಣ್ಯವಾಗಿ ಮಾತನಾ ಡಿದ್ದು ಕಡಿಮೆ. ದೇಶ ವಿಭಜನೆ ನಂತರ ನಾನು ನನ್ನ ಹುಟ್ಟೂರು ಪಾಕಿಸ್ತಾನದ ಸಿಯಾಲ್‌ ಕೋಟ್ ತೊರೆದು ದೆಹಲಿಯಲ್ಲಿ ಆಶ್ರಯ ಪಡೆದ ಸಂದರ್ಭದಲ್ಲಿ, ಹಿಂದೂಗಳನ್ನು ಬಲವಂತವಾಗಿ ಹೊರಹಾಕುತ್ತಿದ್ದ ಪಾಕಿಸ್ತಾನಕ್ಕೆ ಅವರು ಕೊಟ್ಟ ಖಡಕ್ ಎಚ್ಚರಿಕೆ ನನಗಿನ್ನೂ ನೆನಪಿದೆ. ‘ನಿಮ್ಮಲ್ಲಿಂದ ಎಷ್ಟು ಹಿಂದೂಗಳನ್ನು ಹೊರಹಾಕುತ್ತೀರೋ ಅಷ್ಟೇ ಸಂಖ್ಯೆಯ ಮುಸ್ಲಿಮರನ್ನು ನಾವೂ ಇಲ್ಲಿಂದ ಹೊರ ಹಾಕುತ್ತೇವೆ’ ಎಂದು ಪಟೇಲ್ ಗುಡುಗಿದ್ದರು.

ಪಾಕಿಸ್ತಾನಿ ಮುಸ್ಲಿಮರ ಅಕೃತ್ಯಗಳಿಗೆ ಪ್ರತೀಕಾರವಾಗಿ ಇಲ್ಲಿಯ ಅಮಾಯಕ ಮುಸ್ಲಿಮರನ್ನು ಓಡಿಸಬೇಕು ಎನ್ನುವುದು ಸರಿಯಾದ ತರ್ಕ ಅಲ್ಲ. ದೇಶ ವಿಭಜನೆಯಾಗಿ ೬೭ ವರ್ಷಗಳು ಕಳೆದರೂ ಎರಡೂ ದೇಶಗಳಲ್ಲಿ ಇಂಥ ಮನೋಭಾವ ಇನ್ನೂ ಪೂರ್ತಿ ಹೋಗಿಲ್ಲ. ಪಾಕಿಸ್ತಾನವಂತೂ ತನ್ನಲ್ಲಿನ ಬಹುತೇಕ ಹಿಂದೂ ಗಳನ್ನು ಓಡಿಸಿಯಾಗಿದೆ. ಆದರೆ ಭಾರತದಲ್ಲಿ ಈಗಲೂ ೧೮ ಕೋಟಿ ಮುಸ್ಲಿಮರಿದ್ದಾರೆ. ಉಭಯ ದೇಶಗಳ ಮಧ್ಯೆ ಸಂಘರ್ಷ ತಲೆದೋರಿ ದಾಗ ಇಲ್ಲಿನ ಮುಸ್ಲಿಮರನ್ನು ‘ನೀವು ಪಾಕಿಸ್ತಾನಿ ಗಳು’ ಎಂದು ನಿಂದಿಸುವ ಹಿಂದೂಗಳಿದ್ದಾರೆ.

ಆದರೆ ಹೀಗೆ ಕರೆಯುವುದು ಅರ್ಥಹೀನ. ಏಕೆಂದರೆ ವಿಭಜನೆಯ ಗಾಯ ಇನ್ನೂ ಪೂರ್ಣ ಕಡಿಮೆಯಾಗಿಲ್ಲ. ಅಲ್ಲದೆ ಎರಡೂ ಸಮುದಾಯ ಗಳು ಧರ್ಮದ ಹೆಸರಿನಲ್ಲಿ ಈಗಲೂ ಶೋಷಣೆಗೆ ಗುರಿಯಾಗುತ್ತಲೇ ಇವೆ. ಪಟೇಲರಿಗೇ ನಿರ್ಧಾರದ ಅವಕಾಶ ಬಿಟ್ಟು ಕೊಟ್ಟಿದ್ದರೆ ಎರಡೂ ದೇಶಗಳ ಮಧ್ಯೆ ಜನರನ್ನು ಹಂಚಿಕೆ ಮಾಡಿದ ನಂತರವೇ ವಿಭಜನೆಗೆ ಒಪ್ಪುತ್ತಿದ್ದರೇನೊ.

ಆದರೆ ನೆಹರೂ ಹಾಗಲ್ಲ. ಅವರೆಂದೂ ದೇಶ ಮತ್ತು ರಾಜಕಾರಣದ ಜತೆಗೆ ಧರ್ಮವನ್ನು ಬೆರೆಸಿದವರಲ್ಲ. ದೇಶ ವಿಭಜನೆ ಕುರಿತಂತೆ ನೆಹರೂ ಮತ್ತು ಪಟೇಲರ ಧೋರಣೆ ಯಲ್ಲಿನ ವ್ಯತ್ಯಾಸ ಗಮನದಲ್ಲಿ ಇಟ್ಟುಕೊಂಡೇ ಮಹಾತ್ಮ ಗಾಂಧೀಜಿ ಅವರು ತಮ್ಮ ಉತ್ತರಾಧಿ ಕಾರಿಯಾಗಿ ನೆಹರೂರನ್ನೇ ಆರಿಸಿದ್ದರು. ಗಾಂಧೀಜಿ ಪಾಲಿಗೆ ಹಿಂದೂ–- ಮುಸ್ಲಿಂ ಏಕತೆ ಎನ್ನುವುದು ನಂಬಿಕೆಯ ವಿಚಾರವಾಗಿತ್ತು.

ಗಾಂಧೀಜಿ ಮತ್ತು ಪಟೇಲ್ ಇಬ್ಬರೂ ಗುಜರಾತ್‌ನವರು, ಅಲ್ಲಿಯದೇ ಅನ್ನ, ನೀರು ಸೇವಿಸಿದವರು, ಅಲ್ಲಿಯದೇ ಪರಂಪರೆಗಳನ್ನು ಪ್ರತಿನಿಧಿಸುತ್ತ ಬಂದವರು. ಆದರೂ ಪಟೇಲ್‌ ಗಿಂತ ನೆಹರೂ ಅವರೇ ಸೂಕ್ತ ಎಂದು ಗಾಂಧೀಜಿ ಆಯ್ಕೆ ಮಾಡಿದರು. ನೆಹರೂಗೆ ಇಂಗ್ಲಿಷ್‌ದೇ ಕನವರಿಕೆ, ವಿಶ್ವ ವ್ಯವಹಾರದಲ್ಲಿ ಅತಿಯಾದ ವ್ಯಾಮೋಹ ಎಂಬುದು ಗಾಂಧೀಜಿಗೂ ಗೊತ್ತಿತ್ತು. ಆದರೆ ಹಿಂದೂ– ಮುಸ್ಲಿಂ ಏಕತೆಯ ತಮ್ಮ ಧ್ಯೇಯವನ್ನು ನೆಹರೂ ಹೆಚ್ಚು ನಿಷ್ಠೆಯಿಂದ ಅನುಸರಿಸುತ್ತಾರೆ, ಅಹಿಂಸೆ ಮೂಲಕ ನ್ಯಾಯ ಯುತ ಮಾರ್ಗದಲ್ಲಿ ಅದನ್ನು ಅನುಷ್ಠಾನಕ್ಕೆ ತರುತ್ತಾರೆ ಎಂಬ ನಂಬಿಕೆ ಇತ್ತು.

೫೪೦ಕ್ಕೂ ಹೆಚ್ಚು ರಾಜ ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಳ್ಳುವಂತೆ ಮಾಡಿದ್ದು ಪಟೇಲರ ಮಹಾ ಸಾಧನೆ. ಅದಕ್ಕಾಗಿ ಅವರು ಅಭಿನಂದನೆಗೆ ಅರ್ಹರು. ಆದರೆ ಅವರಿಗೆ ಫಲಿತಾಂಶ ಮುಖ್ಯವಾಗಿತ್ತೇ ಹೊರತು ಅನುಸರಿಸುವ ವಿಧಾನ ಅಲ್ಲ. ಏಕೆಂದರೆ ಆಗ ಕೆಲ ಸಂಸ್ಥಾನಗಳು ಭಾರತದಲ್ಲಿ ಸ್ವಯಂ ಸ್ಫೂರ್ತಿಯಿಂದಲೇ ವಿಲೀನಗೊಂಡರೆ, ಇನ್ನು ಕೆಲವು ಕ್ಯಾತೆ ತೆಗೆದಿದ್ದವು. ಅವನ್ನೆಲ್ಲ ಬಲ ಪ್ರಯೋಗದಿಂದ ಮಣಿಸಿ ವಿಲೀನಕ್ಕೆ ಒಪ್ಪುವಂತೆ ಮಾಡಲಾಯಿತು ಎಂಬುದನ್ನು ಪಟೇಲರ ಕಾರ್ಯದರ್ಶಿಯಾಗಿದ್ದ ವಿ.ಪಿ. ಮೆನನ್ ನೆನಪಿಸಿಕೊಂಡಿದ್ದಾರೆ.

ಅದಕ್ಕೊಂದು ಉದಾಹರಣೆ ಕೇರಳದ ತಿರುವಾಂಕೂರು ಸಂಸ್ಥಾನ. ಭಾರತದಲ್ಲಿ ಸೇರು ವುದಿಲ್ಲ, ತನ್ನದು ಸ್ವತಂತ್ರ ದೇಶ ಎಂದು ಅಲ್ಲಿನ ಮಹಾರಾಜರು ಘೋಷಿಸಿಕೊಂಡಿದ್ದರು. ಮೆನನ್ ಖಾಕಿ ಬೆಂಗಾವಲಿನೊಡನೆ ಹೋದರು. ವಿಲೀನ ಷರತ್ತಿಗೆ ಮಹಾರಾಜರು ಸುಮ್ಮನೆ ಸಹಿ ಹಾಕಿದರು. ‘ನನ್ನ ಕುಟುಂಬ ಕಷ್ಟಪಡುವುದು, ಜೈಲಿನಲ್ಲಿ ಕೊಳೆಯುವುದು ನನಗಿಷ್ಟ ಇರಲಿಲ್ಲ; ಅದಕ್ಕಾಗಿ ಸಹಿ ಮಾಡಿದೆ’ ಎಂದು ಮಹಾರಾಜರು ಹೇಳಿದ್ದರಂತೆ.

ತಮ್ಮ ಜಾತ್ಯತೀತ ಧೋರಣೆ ನೆಹರೂ ಕೈಯಲ್ಲಿ ಸುರಕ್ಷಿತ ಎಂಬ ವಿಶ್ವಾಸ ಗಾಂಧೀಜಿಗೆ ಇತ್ತು. ವಿಭಜನೆ ಕಾಲದಲ್ಲಾದ ಒಪ್ಪಂದದಂತೆ ಪಾಕಿಸ್ತಾನಕ್ಕೆ ೬೪ ಕೋಟಿ ರೂಪಾಯಿ ಕೊಡ ಬೇಕಾಗಿದ್ದರೂ, ಅದರ ಬಿಡುಗಡೆಗೆ ಪಟೇಲರು ನಿರಾಕರಿಸಿದಾಗಲೇ ಇದು ಸಾಬೀತಾಯಿತು. ಕಾಶ್ಮೀರ ವಿಷಯದಲ್ಲಿ ಎರಡೂ ದೇಶಗಳು ಯುದ್ಧ ಮಾಡುತ್ತಿರುವಾಗ ಹಣ ಬಿಡುಗಡೆ ಹೇಗೆ ಸಾಧ್ಯ ಎಂಬುದು ಪಟೇಲರ ವಾದವಾಗಿತ್ತು.

  ಕೊನೆಗೆ ಗಾಂಧೀಜಿಯ ಆಮರಣ ನಿರಶನ ಎದುರು ಪಟೇಲರು ಮಣಿಯಲೇ ಬೇಕಾಯಿತು. ಈ ೬೪ ಕೋಟಿ ರೂಪಾಯಿ ಹಸ್ತಾಂತರ ವಿಷಯ ಮುಂದಿಟ್ಟುಕೊಂಡು ಉಗ್ರವಾದಿ ಹಿಂದೂಗಳು ಕೋಮು ಸೌಹಾರ್ದಕ್ಕೆ ಹುಳಿ ಹಿಂಡಲು ಶಕ್ತರಾದರು. ಸಮಾಜವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಉದ್ದೇಶ ಅವರದಾಗಿತ್ತು. ಗಾಂಧೀಜಿಯನ್ನಂತೂ ದೇಶವಿರೋಧಿ, ಹಿಂದೂ ವಿರೋಧಿ ಎಂದು ಪದೇ ಪದೇ ಜರಿದರು. ಹಿಂದುತ್ವದ ಪ್ರತಿಪಾದನೆ ಮಾಡುತ್ತಿದ್ದ ಆರ್‌ಎಸ್‌ಎಸ್‌ಗೆ ಇದರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು, ಗಾಂಧೀಜಿಯ ಕಗ್ಗೊಲೆಯಾಯಿತು.

ಇದರ ಬೆನ್ನಲ್ಲೇ, ಕೋಮು ಸೌಹಾರ್ದ ಕೆಡಿಸುತ್ತಿದೆ ಎಂದು ದೂಷಿಸಿ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಿದ ಪಟೇಲರ ನಿರ್ಧಾರ ಸರಿಯಾಗಿಯೇ ಇತ್ತು. ಆದರೂ ಅದರ ಬಗ್ಗೆ ಸಹಾನುಭೂತಿಯೂ ಇತ್ತು. ಯಾವಾಗ ಅದು ಸಾಂಸ್ಕೃತಿಕ ಸಂಘಟನೆಯ ಮುಖವಾಡ ತೊಟ್ಟುಕೊಂಡಿತೊ ವಿಳಂಬ ಮಾಡದೆ ಅದರ ಮೇಲಿನ ನಿಷೇಧ ವಾಪಸ್ ಪಡೆದದ್ದೇ ಇದಕ್ಕೆ ಸಾಕ್ಷಿ.

ಆರ್‌ಎಸ್‌ಎಸ್ ಈಗಲೂ ತನ್ನ ರಾಜಕೀಯ ಗುರಿ ಸಾಧನೆಗೆ ತೆರೆ ಮರೆಯಿಂದ ಬಿಜೆಪಿಯನ್ನು ಬಳಸಿಕೊಳ್ಳುತ್ತಿದೆ. ಮೋದಿ ಅದರ ಅಭ್ಯರ್ಥಿ. ರಾಜಕಾರಣದಲ್ಲಿ ಆರ್‌ಎಸ್‌ಎಸ್ ಪಾಲ್ಗೊಳ್ಳುತ್ತದೆ ಎಂದು ಅದರ ಮುಖ್ಯಸ್ಥ ಮೋಹನ ಭಾಗವತ್ ಈಗ ನೇರವಾಗಿಯೇ ಹೇಳಿದ್ದಾರೆ. ಅದರ ಇಂಥ ದ್ವಿಮುಖ ನೀತಿಯನ್ನು ನೆಹರೂ ಅನೇಕ ಸಲ ಬಯಲಿಗೆ ಎಳೆದಿದ್ದರು.

ನೆಹರೂ ರಾಷ್ಟ್ರಪತಿಯಾಗಲು ಸೂಕ್ತ ಎಂಬ ತೀರ್ಮಾನಕ್ಕೆ ಬರುವಾಗ  ‘ಕೋಮು ಶಕ್ತಿಗಳೆಲ್ಲ ಮೂಲೆಗುಂಪಾಗಿವೆ’ ಎಂದೇ  ಆಜಾದ್‌ ನಂಬಿ ಕೊಂಡಿದ್ದರು.  ಪಟೇಲರಲ್ಲಿ ವ್ಯಾವಹಾರಿಕ ಕೌಶಲ ಇದೆ ಎಂದು ಹೊಗಳಿದ್ದರು. ಪಟೇಲರ ಜಾತ್ಯತೀತ ಮನೋಭಾವದ ಬಗ್ಗೆ ಅಚಲ ವಿಶ್ವಾಸ ಇಟ್ಟುಕೊಂಡಿದ್ದರು. ಹೀಗಿರುವಾಗ, ಸಮಾಜವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ನರೇಂದ್ರ ಮೋದಿ ಅವರು ಪಟೇಲರನ್ನು ಬಳಸುತ್ತಿರುವುದು ದುರದೃಷ್ಟಕರ.

ಅವರೂ ಪಟೇಲರಂತೆ ಇದ್ದಿದ್ದರೆ, ಜನತಂತ್ರ ಮತ್ತು ಜಾತ್ಯತೀತ ತತ್ವಗಳಲ್ಲಿಯೇ ಭಾರತದ ಭವಿಷ್ಯ ಅಡಗಿದೆ ಎಂಬುದನ್ನು ಅರ್ಥಮಾಡಿ ಕೊಳ್ಳುತ್ತಿದ್ದರು. ಪಟೇಲರೇ ಒಂದು ವೇಳೆ ಪ್ರಧಾನಿಯಾಗಿದ್ದರೂ ಈ ಎರಡೂ ವಿಷಯದಲ್ಲಿ ನೆಹರೂಗಿಂತ ಹೆಚ್ಚು ಭದ್ರ ಬುನಾದಿ ಹಾಕುತ್ತಿದ್ದರು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT