ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಸಮನ್ವಯದ ಬಾಬಾ ಫರೀದ್

Last Updated 24 ಡಿಸೆಂಬರ್ 2014, 19:39 IST
ಅಕ್ಷರ ಗಾತ್ರ

ಮುಲ್ತಾನ್ ಬಳಿಯ ಕೊತ್ವಾಲ್‍ದಲ್ಲಿ 1173 ರಲ್ಲಿ ಜನಿಸಿದ ಬಾಬಾ ಶೇಖ್ ಫರೀದ್ ಸಂತತ್ವಕ್ಕೆ ಆದರ್ಶಪ್ರಾಯವಾಗಿ ಬದುಕಿದವರು. ಆತ ಸಂತರಾಗಿ, ಕವಿ­ಯಾಗಿ ತಮ್ಮ ತೊಂಬತ್ತೈದು ವರ್ಷದ ತುಂಬು ಜೀವನದಲ್ಲಿ ಪ್ರಪಂಚಕ್ಕೆ ಹಂಚಿದ್ದು ಕೇವಲ ಪ್ರೀತಿ, ಶಾಂತಿ ಹಾಗೂ ಸಮಾನತೆಗಳನ್ನು. 

ಬಾಲ್ಯದಲ್ಲಿ ತಾಯಿಯ ಪ್ರಭಾವ ಹೆಚ್ಚಾಗಿತ್ತು. ಮಗ ತಪ್ಪದೇ ನಮಾಜಿಗೆ ಹೋಗಲಿ ಎಂದು ನಮಾಜಿನ ಚಾಪೆಯ ಕೆಳಗೆ ಪುಟ್ಟ ಸಕ್ಕರೆಯ ಪೊಟ್ಟಣವನ್ನು ಇಡುತ್ತಿ­ದ್ದರಂತೆ. ನಿಯಮಿತವಾಗಿ ಪ್ರಾರ್ಥನೆ ಮಾಡುವವರಿಗೆ ಭಗವಂತ ಸಕ್ಕರೆಯನ್ನು ಕೊಡುತ್ತಾನೆ ಎಂದು ಹೇಳುತ್ತಿದ್ದರಂತೆ. ಬಾಲ್ಯದಲ್ಲೇ ಅಭ್ಯಾಸವಾದ ಭಕ್ತಿಯ ಅನುಷ್ಠಾನ ಅವರ ಬದುಕಿನ ಒಂದು ಉದ್ದೇಶವೇ ಆಗಿ ಹೋಯಿತು. ಧ್ಯಾನ­ದಲ್ಲಿ ಕುಳಿತರೆ ಎಚ್ಚರವೇ ಇರುತ್ತಿರಲಿ­ಲ್ಲವಂತೆ. ಒಂದು ಬಾರಿಯಂತೂ ನಲವತ್ತು ದಿನ ನಿದ್ರೆ, ಆಹಾರವಿಲ್ಲದೆ ಧ್ಯಾನದಲ್ಲಿ ಮೈಮರೆತರಂತೆ.

ಅವರ ಸಾಧನೆಯ, ಪವಾಡಗಳ ರಮ್ಯ ಕಥೆಗಳೇ ಇವೆ.  ಒಮ್ಮೆ ಪ್ರಾರ್ಥನೆ ಮಾಡುತ್ತ ದಿನಗಳು ಕಳೆದ ಮೇಲೆ ಎಚ್ಚರವಾದಾಗ ಹಸಿವೆ ಎನ್ನಿಸಿತಂತೆ. ತಕ್ಷಣ ತಮ್ಮ ಸುತ್ತಮುತ್ತ ಬಿದ್ದಿದ್ದ ಸಣ್ಣ ಕಲ್ಲುಗಳನ್ನು ಬಾಯಿಗೆ ಹಾಕಿಕೊಂಡಾಗ ಅವು ಕಲ್ಲುಸಕ್ಕರೆ ಹರಳುಗಳಾಗಿದ್ದವಂತೆ. ಭಕ್ತಿಯ ಪಾರಮ್ಯದಲ್ಲಿ ಮಿಂದವರಿಗೆ ಕಲ್ಲು, ಸಕ್ಕರೆಯಂತೆ ತೋರಿದ್ದು ಆಶ್ಚ­ರ್ಯ­ವೇನಲ್ಲ.

ಮತ್ತೊಮ್ಮೆ ಕೆಲ ವ್ಯಾಪಾ­ರಿ­ಗಳು ಒಂಟೆಯ ಮೇಲೆ ಸಕ್ಕರೆಯ ಮೂಟೆಗಳನ್ನು ಹೊರಿಸಿಕೊಂಡು ಪಟ್ಟ­ಣಕ್ಕೆ ವ್ಯಾಪಾರಕ್ಕೆ ಹೊರಟಿದ್ದರು. ಕುತೂಹಲಕ್ಕೆ ಮೂಟೆಯಲ್ಲೇನಿದೆ ಎಂದು ಬಾಬಾ ಫರೀದ್ ಕೇಳಿದಾಗ, ಇವರೆಲ್ಲಿ ಸಕ್ಕರೆ ಕೇಳಿಬಿಡುತ್ತಾರೋ ಎಂದು ಯೋಚಿಸಿ ಮೂಟೆಯಲ್ಲಿ ಉಪ್ಪು ಇದೆ ಎಂದರಂತೆ. ಅವರು ಪಟ್ಟಣ ಮುಟ್ಟುವ ಹೊತ್ತಿಗೆ ಮೂಟೆಗಳಲ್ಲಿ ಉಪ್ಪು ಮಾತ್ರ ಇತ್ತಂತೆ.

ಅವರು ಮರಳಿ ಬಂದು ಕ್ಷಮೆ ಕೇಳಿದಾಗ ಮತ್ತೆ ಸಕ್ಕರೆಯಾಯಿತಂತೆ.  ಜನ­ಸಾಮಾನ್ಯ­ರೊಡನೆ ಸದಾಕಾಲ ಬೆರೆತು, ಜಾತಿ, ಮತಗಳ ಭೇದವಿಲ್ಲದೆ ಬದುಕುತ್ತಿದ್ದ ಫರೀದ್‌ ಅವರ ಕಾವ್ಯ ಎಲ್ಲರ ನಾಲಿಗೆಯ ಮೇಲೆ ನಲಿದಾಡಿತು. ಪಂಜಾಬಿ ಭಾಷೆಯಲ್ಲಿಯ ಸರಳ, ಸುಂದರ ಕವನಗಳು ಎಷ್ಟು ಜನಪ್ರಿಯ­ವಾದುವೆಂದರೆ ಸಿಖ್ ಧರ್ಮದ ಸಂಸ್ಥಾ­ಪಕ ಗುರು ನಾನಕದೇವರು ಫರೀದ್‌ ಅವರ ಅನೇಕ ಕೀರ್ತನೆಗಳನ್ನು ಗುರು­ಗ್ರಂಥ ಸಾಹೇಬ್‌­ದಲ್ಲಿ ಅಳವಡಿಸಿದ್ದಾರೆ. ಇಂದಿಗೂ, ಸಿಖ್ ಹಾಗೂ ಹಿಂದೂ ಜನರು ಫರೀದ್‌ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅವರಿಗೆ ಗುರುಸ್ಥಾನ ನೀಡಿದ್ದಾರೆ.

ಫರೀದ್‌ ಅವರ ಭಕ್ತಿಯ ಆರ್ತತೆ ತುಂಬ ಎತ್ತರದ ಮಟ್ಟದ್ದು. ಅವರ ಕೆಲವು ಕವನಗಳಲ್ಲಿ ಭಗವಂತನನ್ನು ಕಾಣುವ ಉತ್ಕಟತೆ ಉಕ್ಕಿ ಬರುತ್ತದೆ. ಅವರದೇ ಕಾವ್ಯದ ಕೆಲವು ಸಾಲುಗಳು ಹೀಗಿವೆ.
ಓ ಕ್ರೂರ ಕಾಗೆಗಳೇ, ನನ್ನ ಎಲುಬಿನ ಗೂಡನ್ನು ತಿಂದುಬಿಡಿ,
ನನ್ನ ದೇಹದ ಮಾಂಸವನ್ನೆಲ್ಲ ತಿಂದು ತೇಗಿಬಿಡಿ,
ದಯವಿಟ್ಟು ನನ್ನ ಎರಡು ಕಣ್ಣುಗಳನ್ನು ಮಾತ್ರ ಬಿಟ್ಟುಬಿಡಿ,
ಯಾಕೆಂದರೆ ನನ್ನ ಪ್ರಿಯಕರನಾದ ಭಗವಂತನನ್ನು ನೋಡುವ ಆಸೆ ಮಾತ್ರ ಇನ್ನೂ ಉಳಿದಿದೆ. 

ಈ ಸೂಫೀ ಸಂತರಿಗೆ ಮೂಲಭೂತ­ವಾದಿಗಳು ಬಳಸುತ್ತಿದ್ದ ‘ಕಾಫಿರ್’ ಪದ ಇಷ್ಟವಿರಲಿಲ್ಲ. ಎಲ್ಲ ಧರ್ಮಗ್ರಂಥಗಳು ಭಗವಂತನ ವಾಣಿಯೇ ಎಂದು ನಂಬಿದ್ದ ಫರೀದ್, ಸರ್ವಧರ್ಮ ಸೌಹಾರ್ದ  ತಿಳಿಸುವುದು ಮಾತ್ರವಲ್ಲ, ಅದನ್ನು ಸಾಧಿಸಲೆಂದೇ ಬದುಕಿದರು. ಸಮಾಜ ಜೀವನದ ತಾರತಮ್ಯಗಳನ್ನು, ವೈರುಧ್ಯ­ಗಳನ್ನು ಬಲವಾಗಿ ಟೀಕಿಸಿದರು.

ದೊಡ್ಡಬಂಗಲೆ, ಮಹಡಿಮನೆಯ ಯಜ­ಮಾನರು,
ಅರಮನೆಯವಾಸಿಗಳು, ಎಲ್ಲರೂ,
ಹೋಗಿಯೇ ಬಿಟ್ಟರು,
ಬದುಕಿದಾಗ, ಸುಳ್ಳು, ಮೋಸದ ಜೀವನ ಮಾಡಿ
ಈಗ ಮಲಗಿದ್ದಾರೆ ಗೋರಿಯಲ್ಲಿ ಮಣ್ಣಿನಲ್ಲಿ ಒಂದಾಗಿ.

ಭಕ್ತರ ಆರಾಧ್ಯ ದೈವವಾಗಿದ್ದ ಫರೀದ್ ಎಂದಿಗೂ ಏನನ್ನು ಬಯಸದೆ ದಾರಿದ್ರ್ಯವನ್ನೇ ಬಲವಾಗಿ ಅಪ್ಪಿ­ಕೊಂಡರು. ರಾಜರುಗಳು ನೀಡಿದ ಜಹಗೀರುಗಳ ಕಡೆಗೆ ತಿರುಗಿ ನೋಡದೇ ಕೇವಲ ಮಾನವತೆಯನ್ನು ನೋಡಿದರು. ಇಂದು ನಮ್ಮನ್ನು ಆವರಿಸುವ ಧರ್ಮಾಂಧತೆಯ ಕಾರ್ಗತ್ತಲನ್ನು, ಮನದಲ್ಲಿ ದ್ವೇಷ, ಹಿಂಸೆಗಳು ಕಟ್ಟಿರುವ ಜಿಡ್ಡನ್ನು ಸ್ವಲ್ಪವಾದರೂ ತಿಳಿಮಾಡಲು ನೂರಾರು ಫರೀದ್‌ ಇಂದು ಬೇಕಾಗಿದೆ­ಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT