ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ರಶ್ದಿ ಧ್ಯಾನ ಸೃಷ್ಟಿಸಿದ ಕಿರಿಕಿರಿ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಈ ಬಾರಿಯ ಜೈಪುರ ಸಾಹಿತ್ಯೋತ್ಸವಕ್ಕೆ ಭದ್ರತಾ ವ್ಯವಸ್ಥೆ ಹಿಂದೆಂದಿಗಿಂತಲೂ ಬಿಗಿಯಾಗಿತ್ತೆಂದು ಪ್ರತಿ ವರ್ಷ ಅಲ್ಲಿಗೆ ಬರುವ ಬರಹಗಾರರು ನನಗೆ ತಿಳಿಸಿದರು. ಕಾರಣ: ಸಲ್ಮಾನ್ ರಶ್ದಿ.

ಒಂದು ಧಾರ್ಮಿಕ ಗುಂಪಿನ ವಿರೋಧ ಎದುರಿಸುತ್ತಿರುವ ರಶ್ದಿ ಸದರಿ ಉತ್ಸವಕ್ಕೆ ಹಿಂದೆ ಬಂದಿದ್ದು ಉಂಟಂತೆ. ಆದರೆ ಆಗ ಅವರ ಪಾಲುಗೊಳ್ಳುವಿಕೆಯನ್ನು ಆಯೋಜಕರು ಗುಟ್ಟಾಗಿಟ್ಟಿದ್ದರು. ರಶ್ದಿ ವಿರೋಧಿಗಳಿಗೆ ವಿರೋಧಿಸಲು ತಯಾರಿ ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿರಲಿಲ್ಲ. ಅಷ್ಟರಲ್ಲಿ ರಶ್ದಿ ಭಾಗವಹಿಸಿ ವಾಪಸ್ ಹೋಗಿಬಿಟ್ಟಿದ್ದರು. ಈ ಸಲ ಹಾಗಾಗಲಿಲ್ಲ. ರಶ್ದಿ ಅವರ ಅಪೇಕ್ಷೆಯ ಮೇರೆಗೆ ಅವರ ಪಾಲುಗೊಳ್ಳುವಿಕೆಯನ್ನು ಬಹಿರಂಗಗೊಳಿಸಲಾಗಿತ್ತು. ಹಾಗೆ ಮಾಡಿದ್ದೆೀ ತಡ, ಒಂದು ಧಾರ್ಮಿಕ ಗುಂಪು ತನ್ನ ಕಟು ವಿರೋಧವನ್ನು ವ್ಯಕ್ತಗೊಳಿಸಿತು. ರಶ್ದಿ ಅವರ ಮೇಲೆ ಹಲ್ಲೆ ಮಾಡಲು ಸಜ್ಜಾದ ಗುಂಪುಗಳು ಜೈಪುರಕ್ಕೆ ಬರಲಿವೆ ಎಂಬ ವದಂತಿ ಹಬ್ಬಿತು. ಈ ಬಗ್ಗೆ ಕಳವಳಗೊಂಡ ರಶ್ದಿ ತಮ್ಮ ಮತ್ತು ಇತರ ಬರಹಗಾರರು ಪಾಲ್ಗೊಳ್ಳುವ ಸಾಹಿತ್ಯಾಸಕ್ತರ ಹಿತದ ದೃಷ್ಟಿಯಿಂದ ಉತ್ಸವಕ್ಕೆ ಬರದಿರುವುದೇ ಲೇಸೆಂದು ತೀರ್ಮಾನಿಸಿದರು.

ಘಟನೆ ಅಲ್ಲಿಗೆ ಮುಗಿಯಲಿಲ್ಲ. ದೇಶವಿದೇಶಗಳಿಂದ ಈ ಉತ್ಸವದಲ್ಲಿ ಪಾಲುಗೊಳ್ಳಲು ಆಗಮಿಸಿದ್ದ ಬರಹಗಾರರು ಈ ಬಗ್ಗೆ ಆತಂಕಿತರಾಗಿ ರಶ್ದಿ ಅವರ ಮೇಲೆ ಹಾಕಲಾದ ಬೆದರಿಕೆಯನ್ನು ಖಂಡಿಸತೊಡಗಿದರು. ಒಂದಿಬ್ಬರು ಸಾಹಿತಿಗಳು ಇನ್ನೂ ಮುಂದೆ ಹೋಗಿ ಭಾರತದಲ್ಲಿ ನಿಷೇಧಕ್ಕೆ ಗುರಿಯಾದ ರಶ್ದಿ ಅವರ `ಸೆಟಾನಿಕ್ ವರ್ಸಸ್~ ಕೃತಿಯ ಆಯ್ದ ಭಾಗಗಳನ್ನು ತಮ್ಮ ಗೋಷ್ಠಿಗಳಲ್ಲಿ ಓದಿಬಿಟ್ಟರು. ಪರಿಸ್ಥಿತಿ ಬಿಗಡಾಯಿಸಿತು.

ಬಹಿಷ್ಕೃತವಾದ ಪುಸ್ತಕವನ್ನು ಹೀಗೆ ಬಹಿರಂಗವಾಗಿ ದೇಶದಲ್ಲಿ ಓದುವುದು, ಸಜೆಗೆ ಅರ್ಹವಾದ ಕೃತ್ಯವಾಗಿರುವುದರಿಂದ, ಈ ಕಾನೂನು ಉಲ್ಲಂಘನೆ ಮಾಡಿದ ಬರಹಗಾರರಿಗೆ ಕೂಡಲೇ ದೇಶದ ಗಡಿಯನ್ನು ಬಿಟ್ಟು ಹೋಗಬೇಕೆಂದು ಸೂಚಿಸಲಾಯಿತು. ಬರಹಗಾರರ ಸ್ವಾತಂತ್ರ್ಯ ಸರ್ವೋಚ್ಚವೆಂದು ಬಗೆದ ಹಲವು ಮಂದಿ ಈ ಬಗ್ಗೆ ಕ್ರುದ್ಧರಾದರು. ಉತ್ಸವವನ್ನು ಏರ್ಪಡಿಸಿದವರು ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆಂಬ ಶಂಕೆ ಅವರನ್ನು ಕಾಡತೊಡಗಿತು. ಆಯೋಜಕರು ಮತ್ತೆ ಮತ್ತೆ ಹೇಗೆ ತಮ್ಮ ಸ್ವಾತಂತ್ರ್ಯಪರತೆ ರಾಷ್ಟ್ರದ ಕಾನೂನಿನ ಚೌಕಟ್ಟಿನಿಂದ ಬದ್ಧವಾಗಿದೆಯೆಂದು ಸ್ಪಷ್ಟೀಕರಣ ನೀಡಬೇಕಾಗಿ ಬಂತು.

ಉತ್ಸವದ ಮೂರನೇ ದಿನ ರಶ್ದಿ ಅವರಿಗೆ ಒಡ್ಡಲಾದ ಬೆದರಿಕೆ ಹುಸಿಯೆಂದು ಅಧಿಕೃತವಾಗಿ ತಿಳಿದುಬಂತು. ಇನ್ನಾದರೂ ರಶ್ದಿ ಬರಬಹುದೆಂದು ರಶ್ದಿ ಪ್ರಿಯರು ಸಮಾಧಾನದ ನಿಟ್ಟುಸಿರು ಬಿಡುವುದರಲ್ಲಿ ರಶ್ದಿ, ರಾಜಸ್ತಾನ ಸರ್ಕಾರ ತಮಗೆ ಧೋಕಾ ಮಾಡಿತೆಂದು ಹೇಳಿಕೆ ಕೊಟ್ಟರು. ಆಯೋಜಕರಿಗೆ ಒಂದು ಕಡೆ ಕಾನೂನಿನ ಒತ್ತಡ. ಇನ್ನೊಂದು ಕಡೆ ಸ್ವಾತಂತ್ರ್ಯಪರ ಬರಹಗಾರರ ಒತ್ತಡ. ಆದ್ದರಿಂದ, ವೀಡಿಯೊ ಕಾನ್‌ಫರೆನ್ಸ್ ಮೂಲಕ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆಂದು ತಿಳಿಸಿದರು.

ರಶ್ದಿ ಅವರ ವೀಡಿಯೊ ಭಾಷಣ ಉತ್ಸವದ ಕೊನೆಯ ದಿನ ಆಯೋಜಿತವಾಗಿತ್ತು. ಮತ್ತೆ ರಶ್ದಿ ವಿರೋಧಿಗಳು ಬೆದರಿಕೆ ಒಡ್ಡಿದರು. ರಶ್ದಿಯವರ ಯಾವುದೇ ತರಹದ ಪಾಲ್ಗೊಳ್ಳುವಿಕೆಯನ್ನು ಖಂಡಿಸಿ, ಅದೇನಾದರೂ ಆದರೆ, ಅತ್ಯುಗ್ರ ರೀತಿಯಲ್ಲಿ ಪ್ರತಿಭಟಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಉತ್ಸವಕ್ಕಾಗಿ ತಮ್ಮ ಅರಮನೆಯನ್ನು ಬಿಟ್ಟುಕೊಟ್ಟಿದ್ದ ಮಹನೀಯರು ಈ ಅಪಾಯವನ್ನು ಎದುರಿಸಲಾಗಲೀ, ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸುವ ಸ್ಥಿತಿಯ್ಲ್ಲಲಿ ಇರಲಿಲ್ಲ. ಅಲ್ಲದೆ, ಅಲ್ಲೇನಾದರೂ ಹಿಂಸೆ ಸ್ಫೋಟವಾದರೆ ಅಪಾರ ಸಂಖ್ಯೆಯಲ್ಲಿ ಅಲ್ಲಿ ನೆರೆದವರ ಪ್ರಾಣಕ್ಕೆ ವಿಪತ್ತೂ ಇತ್ತು. ಈ ಎಲ್ಲ ಕಾರಣಗಳಿಂದ ರಶ್ದಿ ಅವರ ವೀಡಿಯೊ ಪಾಲ್ಗೊಳ್ಳುವಿಕೆಯನ್ನೂ ರದ್ದುಗೊಳಿಸಲಾಯಿತು.

ಬರಹಗಾರರ ಸ್ವಾತಂತ್ರ್ಯಪರರು ಮತ್ತೆ ನಿರಾಶರಾದರು. ಮಾಧ್ಯಮಗಳು ಈ ವಿವಾದವನ್ನು ಸಾಹಿತ್ಯೋತ್ಸವದ ಸರ್ವಸ್ವ ಎಂಬಂತೆ  ವೈಭವೀಕರಿಸಿದರು. ಆದರೆ ಅಲ್ಲಿ ನೆರೆದಿದ್ದ ಎಲ್ಲ ಬರಹಗಾರರೂ ರಶ್ದಿ ಪರವಾಗಿರಲಿಲ್ಲ. ಪಶ್ಚಿಮದ ಭಾಷೆಗಳಲ್ಲಿ ಬರೆಯುವ ಬಹುತೇಕ ಬರಹಗಾರರು, ಅದರಲ್ಲೂ ಬಿಳಿಯರು ವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿದ ಅಪಾಯದ ಬಗ್ಗೆ ಎಗರಾಡತೊಡಗಿದರು.

ಮಿಕ್ಕವರಿಗೆ ಈ ಅವಿರತ ರಶ್ದಿ `ಧ್ಯಾನ~ ತುಂಬಾ ಕಿರಿಕಿರಿ ಉಂಟುಮಾಡಿತು. ತಮಿಳು ಬರಹಗಾರ ಚಾರು ನಿವೇದಿತಾ ಅಂದರು: `ಈ ಜಗತ್ತಿನಲ್ಲಿ ಗಡಿ ಪಾರಾಗಿರುವ ಬರಹಗಾರ ಆತನೊಬ್ಬನೇ ಅಲ್ಲ. ನಾನು ನನ್ನ ತಮಿಳುನಾಡಿನೊಳಗೇ ಗಡಿ ಪಾರಾಗಿ ಬಾಳುತ್ತಿದ್ದೇನೆ.

ಕರುಣಾನಿಧಿಗಳು ಮಹಾನ್ ಲೇಖಕರಾಗಿ ಮೆರೆಯುತ್ತಿರುವ ತಮಿಳುನಾಡಿನಲ್ಲಿ ನನ್ನಂಥ ಬರಹಗಾರರಿಗೆ ಜಾಗ ಎಲ್ಲಿದೆ? ಆತನ ಕೃತಿಗಳ ಕುರಿತ ಸಂಶೋಧನೆಗೆ ರಾಜ್ಯದ ವಿಶ್ವವಿದ್ಯಾಲಯವೊಂದು ಕೋಟ್ಯಂತರ ರೂಗಳನ್ನು ಮೀಸಲಾಗಿಟ್ಟಿದೆ. `ನನ್ನ ಮಗಳಿಗೆ ತಮಿಳೇ ಬರುವುದಿಲ್ಲ~ ಎಂದು ಕೊಚ್ಚಿಕೊಳ್ಳುವ ಕಮಲಹಾಸನ್ ತಮಿಳರ ಕಣ್ಮಣಿಯಾಗಿದ್ದಾನೆ. ನಾನು ಬರೆದ ಪುಸ್ತಕಗಳನ್ನು ಕೊಂಡು ಓದುವ ಜನಗಳೇ ಇಲ್ಲ. ನನ್ನ ಕಾಸನ್ನು ಸುರಿದು ತಮಿಳಿನಲ್ಲಿ ಪುಸ್ತಕ ಪ್ರಕಟಿಸುತ್ತಾ ಬಂದಿದ್ದೇನೆ. ಆದರೆ ತಮಿಳರು ಕಳಪೆ ಬರಹಗಳನ್ನು ಬಿಟ್ಟು ಬೇರೆ ಏನನ್ನೂ ಓದುವುದಿಲ್ಲ. ನನ್ನ ಬರಹಗಳ ಮಲಯಾಳಿ ತರ್ಜುಮೆಗೆ ದೊಡ್ಡ ಓದುಗ ಸಮುದಾಯವಿದೆ. ನನಗೆ ಗೊತ್ತಿಲ್ಲದ ಮಲಯಾಳಿ ಭಾಷೆಯ ಓದುಗರು ನನ್ನ ಸೃಜನಶೀಲತೆಯನ್ನು ಜೀವಂತವಾಗಿರಿಸಿದ್ದಾರೆ. ನನ್ನಂಥವರ ಗೋಳು ಯಾರಿಗೆ ಬೇಕು? ನಾನು ವಿಶ್ವಮಟ್ಟದಲ್ಲಿ ಅಲ್ಪಸಂಖ್ಯಾತ ಭಾಷೆಯಾದ ತಮಿಳಿನಲ್ಲಿ ಬರೆಯುತ್ತೇನಲ್ಲ, ಆದ್ದರಿಂದ ಯಾರಿಗೂ ಆಸಕ್ತಿಯಿಲ್ಲ. ಈ ರಶ್ದಿಯನ್ನು ನೋಡಿ. ಆತ ಇಂದು ಗೋಳೀಕರಣದ ತಾಯ್ನುಡಿಯಾದ ಇಂಗ್ಲಿಷಿನಲ್ಲಿ ಬರೆಯುತ್ತಾನೆ. ಆದ್ದರಿಂದಲೇ ಅವನ ಬಗ್ಗೆ ಇಷ್ಟೊಂದು ಅನಗತ್ಯ ಚರ್ಚೆ. ಆತನಿಗಿಂತ ಉತ್ತಮರಾದ ಕಡೇ ಪಕ್ಷ ಇಪ್ಪತ್ತು ಬರಹಗಾರರು ತಮಿಳಿನಲ್ಲಿದ್ದಾರೆ. ಅವರಲ್ಲಿ ಕೆಲವರು ಕವಿ ಆತ್ಮಾನಾಮ್‌ನ ಹಾಗೆ ತಮ್ಮ ಓದುಗ ಸಮುದಾಯದ ಉದಾಸೀನದಿಂದ ಕಂಗೆಟ್ಟು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇಂಥವರು ಇತರ ಭಾಷೆಗಳಲ್ಲೂ ಇರಬಹುದು. ಅವರ ಬಗ್ಗೆ ಇಲ್ಲಿ ಚಕಾರ ಎತ್ತುವವರಿಲ್ಲ. ಎಲ್ಲೆಲ್ಲೂ ರಶ್ದಿ, ರಶ್ದಿ, ರಶ್ದಿ?~

ನಾವು ಚಾರು ಅವರ ರಶ್ದಿ ಮೌಲ್ಯಮಾಪನವನ್ನು ಒಪ್ಪುತ್ತೇವೋ ಬಿಡುತ್ತೇವೋ, ಅದು ಬೇರೆ ಮಾತು. ಆದರೆ ರಶ್ದಿಯ ಬಗ್ಗೆ ಯಾಕಿಷ್ಟು ಚರ್ಚೆ? ನನಗೂ ಅರ್ಥವಾಗಲಿಲ್ಲ.

ತನ್ನ ತಾಯ್ನಾಡು ಶ್ರೀಲಂಕಾದ ಜಾಫ್ನಾದಿಂದ ಗಡೀಪಾರಾಗಿ ಮುವ್ವತ್ತು ವರ್ಷಗಳಿಂದ ಕೆನಡಾದಲ್ಲಿ ಆಶ್ರಯ ಪಡೆದಿರುವ ವಿಂಡ್ಸರ್ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ ಚೇರನ್ ರುದ್ರಮೂರ್ತಿ ತಮಿಳಿನ ಅದ್ಭುತ ಕವಿ. ಅವರು ಹೇಳಿದ್ದು: `ಪುಸ್ತಕಗಳನ್ನು ಬಹಿಷ್ಕರಿಸುವ, ಸುಟ್ಟು ಹಾಕುವ ಸಂಸ್ಕೃತಿ ಒಳ್ಳೆಯದಲ್ಲ, ನಿಜ. ಇದರ ಬಗ್ಗೆ ಚರ್ಚೆಮಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆಂಬುದೂ ನಿಜ. ಆದರೆ ಜನಾಂಗ ದ್ವೇಷ ಮತ್ತು ಸೈದ್ಧಾಂತಿಕ ವಿರೋಧಗಳು ಇಷ್ಟೊಂದು ಹಿಂಸ್ರ ಸ್ವರೂಪಗಳನ್ನು ಪಡೆದುಕೊಳ್ಳುತ್ತಿರುವ ಇಂದಿನ ವಿಶ್ವದಲ್ಲಿ, ಸಮಸ್ಯೆಯನ್ನು ಇಷ್ಟೊಂದು ರಶ್ದಿಕೇಂದ್ರಿತಗೊಳಿಸುವುದರ ಹಿಂದೆ ಅಡಗಿರುವ ರಾಜಕಾರಣವಾದರೂ ಏನು? ಇವತ್ತು ನನ್ನಂಥ ಎಷ್ಟೋ ಮಂದಿ ಜನಸಾಮಾನ್ಯರು, ಬರಹಗಾರರು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಶ್ರೀಲಂಕಾದಿಂದ ಓಡಿ ಬಂದು ಪಶ್ಚಿಮ ಯೂರೋಪು ಮತ್ತು ಉತ್ತರ ಅಮೆರಿಕಾಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅವರು ಅನುಭವಿಸಿದ ದುರಂತಗಳಿಗೆ ಕೊನೆಯಿಲ್ಲ. ನನ್ನ ತಾಯಿನಾಡಿನಲ್ಲಿ ಜನಾಂಗ ದ್ವೇಷ ಶುರುವಾದಾಗ ಜಾಫ್ನಾದಲ್ಲಿ ಅಮೂಲ್ಯವಾದ ತಮಿಳು ಪುಸ್ತಕಗಳ ಲೈಬ್ರರಿಯನ್ನು ಸುಟ್ಟುಹಾಕಿದರು. ಆಗ ನನಗನಿಸಿತು, `ಇವತ್ತು ಪುಸ್ತಕಗಳನ್ನು ಸುಟ್ಟವರು ನಾಳೆ ಜನರನ್ನೂ ಸುಡುತ್ತಾರೆ~. ನನ್ನ ಅನಿಸಿಕೆ ನಿಜವಾಯಿತು. ಇಂದು ನಾನು ದೂರದ ಕೆನಡಾದಲ್ಲಿ ಸುರಕ್ಷಿತವಾಗಿ ಜೀವಿಸುತ್ತಿದ್ದೆೀನೆ. ಆದರೂ ನನ್ನ ಹೃದಯ ತಾಯಿನಾಡಿಗಾಗಿ ಹಂಬಲಿಸಿ ಹಂಬಲಿಸಿ ಒಡೆದುಹೋಗಿದೆ. ನಾನು ಮುವ್ವತ್ತು ವರ್ಷಗಳಲ್ಲಿ ಜಗತ್ತಿನ ಹಲವಾರು ಸುಂದರ ನಗರಗಳಲ್ಲಿ ಬದುಕಿ ಬಾಳಿದ್ದೇನೆ. ಬರ್ಲಿನ್, ಆಮ್ಸಟರ್ಡಮ್, ಲಂಡನ್, ಓಸ್ಲೊ ಇತ್ಯಾದಿಯಾಗಿ. ಇಷ್ಟಾದರೂ ಪ್ರತಿ ರಾತ್ರಿ ನನ್ನ ಕನಸಿನಲ್ಲಿ ಬಂದು ಕಾಡುವುವು ನನ್ನ ತಾಯಿನಾಡಿನ ದೃಶ್ಯಗಳು ಮಾತ್ರ. ಅಲ್ಲಿನ ಹೊಲಗದ್ದೆ, ಮರಗಿಡಗಳು, ಕಡಲತೀರ ನನ್ನ ಜೀವದ ತುಣುಕುಗಳು. ರಶ್ದಿ ಎಂಬ ಒಬ್ಬ ಬರಹಗಾರನ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುವ ಈ ಬುದ್ಧಿಜೀವಿಗಳು ಅನಿವಾಸಿ ತಮಿಳು ಶ್ರೀಲಂಕನ್ನರ ಬೃಹತ್ ಮಾನವೀಯ ದುರಂತದ ಬಗ್ಗೆ ಯಾಕೆ ಮೌನ ತಾಳುತ್ತಾರೆ? ಆದರೆ ಜೀವಿಸುವ ಹಕ್ಕಿನಿಂದಲೇ ವಂಚಿತವಾಗಿರುವ ಸಮುದಾಯಗಳ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ?~
ಅಮೆರಿಕಾದ ನಾರ್ತ್ ಕ್ಯಾರಿಲೋನಾ ವಿಶ್ವವಿದ್ಯಾಲಯದ ಇಸ್ಲಾಮಿಕ್ ಅಧ್ಯಯನ ತಜ್ಞರಾದ ಪ್ರೊ. ಕಾರ್ಲ್ ಅವರು ಸಮಸ್ಯೆಯನ್ನು ಇನ್ನೊಂದು ದೃಷ್ಟಿಯಿಂದ ನೋಡುತ್ತಾರೆ:
`ನನಗನಿಸುತ್ತದೆ, ಈ ಸಮಸ್ಯೆಯನ್ನು ಕೇವಲ ಒಂದು ಧರ್ಮದ ತೀವ್ರವಾದಿಗಳ ದೃಷ್ಟಿಗೆ ಸೀಮಿತಗೊಳಿಸಲಾಗುತ್ತಿದೆ. ಭಿನ್ನಮತದ ದಮನ ಎಲ್ಲ ಧರ್ಮಗಳ ಇತಿಹಾಸದಲ್ಲಿಯೂ ಸಾಮಾನ್ಯವಾದುದು. ಅಷ್ಟೇ ಅಲ್ಲ, ಧರ್ಮ ನಿರಪೇಕ್ಷ ಆಧುನಿಕ ಸಿದ್ಧಾಂತಗಳೂ ಈ ಪ್ರವೃತ್ತಿಗೆ ಹೊರತಲ್ಲ. ಹಿಟ್ಲರನ ಜರ್ಮನಿಯಿಂದ, ಸ್ಟಾಲಿನ್ನನ ರಷ್ಯಾದಿಂದ, ಪೂರ್ವ ಯೂರೋಪಿನ ಎಷ್ಟು ರಾಷ್ಟ್ರಗಳಿಂದ ಭಿನ್ನಮತೀಯ ಚಿಂತಕರನ್ನು, ಕಲಾವಿದರನ್ನು ಹೊರಹಾಕಲಾಯಿತು, ಹೊಸಕಿಹಾಕಲಾಯಿತು?~

`ಈ ಪ್ರವೃತ್ತಿಗೆ ಆಧುನಿಕಪೂರ್ವ ಜಗತ್ತಿನಲ್ಲಿ ಅಸಂಖ್ಯಾತ ಉದಾಹರಣೆಗಳಿವೆ. ನಾನೀಗ ಭಿನ್ನಮತೀಯ ಸೂಫಿ ಸಂತ ಅಲ್ ಹಲಾಜ್ ಮನ್ಸೂರನ ಕಾವ್ಯವನ್ನು ಇಂಗ್ಲಿಷಿಗೆ ತರ್ಜುಮೆ ಮಾಡುತ್ತಿದ್ದೇನೆ. ಅವನ ಅದ್ವೈತವಾದಿ ನಿಲುವು ಆ ಕಾಲದ ನಂಬಿಕೆಗಳ ಬುಡ ಅಲ್ಲಾಡಿಸಿತು. ವ್ಯವಸ್ಥೆ ಅವನಿಗೆ ಮೃತ್ಯುದಂಡವನ್ನು ವಿಧಿಸಿತು. ತನ್ನ ಆಧ್ಯಾತ್ಮಿಕ ಮೌಲ್ಯಗಳಲ್ಲಿ ಪೂರ್ಣ ವಿಶ್ವಾಸ ಹೊಂದಿದ್ದ ಆತ ಮೃತ್ಯುದಂಡವನ್ನು ಗೊಣಗದೆ ಆಲಂಗಿಸಿಕೊಂಡ, ಪ್ರಾಚೀನ ಗ್ರೀಸಿನಲ್ಲಿ ಸಾಕ್ರಟೀಸ್ ಮಾಡಿದ ಹಾಗೆ. ಆದರೆ ಇಂದು ರಶ್ದಿಯವರಂಥ ಸೆಕ್ಯುಲರ್ ಬುದ್ಧಿಜೀವಿಗಳ ವಿಚಾರಕ್ಕೆ ಆ ರೀತಿಯ ಸ್ಥಿರ ವಿಶ್ವಾಸದ ಬುನಾದಿಯಿಲ್ಲ. ಬಲಿಷ್ಠ ವ್ಯವಸ್ಥೆಯನ್ನು ಕೆಣಕುವ ಅಂಥವರು ಸುಮ್ಮನೆಯೂ ಇರಲಾರರು, ಹುತಾತ್ಮರೂ ಆಗಲಾರರು. ಸಂಪೂರ್ಣವಾಗಿ ಸೆಕ್ಯುಲರ್‌ಗೊಳ್ಳದ ಇಂದಿನ ಜಗತ್ತಿನಲ್ಲಿ ಎರಡು ದೃಷ್ಟಿಕೋನಗಳ ನಡುವೆ ಇಷ್ಟೊಂದು ಕಠೋರ ವೈರುಧ್ಯಗಳಿರುವಾಗ ಸುಲಭ ಪರಿಹಾರ ಹೇಗೆ ಸಿಗಬಲ್ಲುದು..?~

ಒಟ್ಟಿನಲ್ಲಿ ಅಸಹನೆಯ ಸಂಸ್ಕೃತಿಗೆ ಆಧುನಿಕ ಜಗತ್ತಿನಲ್ಲಿ ಹಲವು ಮುಖಗಳಿವೆ. ಮಗ್ಗುಲುಗಳಿವೆ. ಇದು ಕೇವಲ ಬರಹಗಾರನ ಸ್ವಾತಂತ್ರ್ಯದ ಸಮಸ್ಯೆಯಲ್ಲ. ಈ ಸಮಸ್ಯೆ, ಇನ್ನೊಂದು ದೊಡ್ಡ ಚಿತ್ರದ ಒಂದು ಸಣ್ಣಭಾಗ. ಎಲ್ಲರೂ ಏನನ್ನು ಬೇಕಾದರೂ ನುಡಿದು, ಬರೆದು ಬಚಾವಾಗುವ ಯುಟೋಪಿಯಾವನ್ನು ಇತಿಹಾಸ ಇನ್ನೂ ಸೃಷ್ಟಿಸಿಲ್ಲ. ಅಂಥ ಪರಿಸ್ಥಿತಿ  ಈ ಪೃಥ್ವಿ ಮಂಡಲದಲ್ಲಿ ಉದ್ಭವಿಸುವ ಸೂಚನೆಗಳೂ ಕಾಣುತ್ತಿಲ್ಲ. ಈ ಸನ್ನಿವೇಶದಲ್ಲಿ ಮೌಲ್ಯಗಳ, ವಿಚಾರಗಳ ಘೋರವಿರೋಧವನ್ನು ನಾವು ಹೇಗೆ ಎದುರುಗೊಳ್ಳಬೇಕು?

ಹಲವು ವರ್ಷಗಳ ಹಿಂದೆ ನನ್ನ `ಮಹಾಚೈತ್ರ~ ನಾಟಕದ ಬಗೆಗಿನ ವಿವಾದದ ರೌರವ ಅನುಭವವನ್ನು ಹಾದು ಬರುತ್ತಿರುವಾಗ ಅಸಹನೆಯ ಸಂಸ್ಕೃತಿಯ ಬಗ್ಗೆ ದೀರ್ಘ ಕಾಲ ಅಂತರ್‌ನಿರೀಕ್ಷೆ ಮಾಡಬೇಕಾಗಿ ಬಂತು. ನೆಲ ಹೊತ್ತಿ ಉರಿಯುವಂತೆ ನನಗೆ ಕಂಡ ಆ ಸಂದರ್ಭದಲ್ಲಿ ನನ್ನ ಮನದಲ್ಲಿ ರೂಪುತಾಳಿದ ಕೆಲವು ವಿಚಾರಗಳು ಆಗ ನಾನು ಕುಸಿದುಹೋಗದಂತೆ ಕಾಪಾಡಿದವು.

ಈ ಸಮಸ್ಯೆಯನ್ನು ಕಲೆಯ ಸ್ವಾತಂತ್ರ್ಯದ ಪ್ರಶ್ನೆಯನ್ನಾಗಿ ನೋಡದೆ, ಕಲೆಯ ಜವಾಬುದಾರಿಯ ಪ್ರಶ್ನೆಯಾಗಿ ಯಾಕೆ ನೋಡಬಾರದು? ನಾನು ಕಂಡುಕೊಂಡ ದರ್ಶನ ಯಥಾಸ್ಥಿತಿವಾದಿಗಳ ದರ್ಶನಕ್ಕೆ ಮಾರಕವಾಗಿದ್ದರೆ ನಾನು ನನ್ನ ಜವಾಬುದಾರಿಯನ್ನೂ ಒಪ್ಪಿಕೊಂಡು ಸಾಕ್ರಟೀಸನಂತೆ, ಅಲ್ ಹಲಾಜನಂತೆ ನನ್ನ ನಂಬಿಕೆಗಳಿಗಾಗಿ ಸಾಯಲೂ ತಯಾರಿರಬೇಕು. ಅಸಹನೆಯ ವಕ್ತಾರರು ನನ್ನ ವಿರೋಧಿಗಳು ಮಾತ್ರವಲ್ಲ, ಅವರ ಅಸಹನೆಯನ್ನು ಆ ಮಟ್ಟಿಗೆ ಕೆಣಕದೆ ಸತ್ಯವನ್ನು ವ್ಯಕ್ತಪಡಿಸುವ ಕ್ರಮಗಳನ್ನು ನಾನಿನ್ನೂ ಕಲಿಯಬೇಕಾಗಿದೆ. ಅದಕ್ಕಾಗಿ ನನ್ನ ಅಸಹನೆಯನ್ನೂ ನಾನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಅಸಹನೆಯ ಸಂಸ್ಕೃತಿಗೆ ಸವಾಲು ಹಾಕಿ ಹುತಾತ್ಮರಾದ ಸಾಕ್ರಟೀಸ್, ಬ್ರೂನೋ, ಬೆಂಜಮಿನ್ ಮಲಾಯಿಸ್ ಮುಂತಾದವರ ಮಾದರಿ ನಮ್ಮನ್ನು ಯಾಕೆ ಈ ಮಟ್ಟಿಗೆ ಆಕರ್ಷಿಸುತ್ತಿದೆ? ಸಹನೆಯ ಸಂಸ್ಕೃತಿಯ ಜೊತೆಗೆ ಶಾಂತಿಯಿಂದ ಸಂವಾದ ಮಾಡಿ ಅದನ್ನು ತಮ್ಮ ಮೌಲ್ಯಗಳನುಸಾರ ಪರಿವರ್ತಿಸಿದ ಬುದ್ಧ, ನಾಗಾರ್ಜುನ, ಅಸಿಸ್ಸಿಯ ಸಂತ ಫ್ರಾನ್ಸಿಸ್ ಮುಂತಾದವರ ಮಾದರಿಗಳು ನಮ್ಮನ್ನೇಕೆ ಆಕರ್ಷಿಸುತ್ತಿಲ್ಲ?

ಅಂತಿಮವಾಗಿ- ವಿಚಾರಗಳು, ಸಾಹಿತ್ಯ ಕಲೆಗಳು ಕೇವಲ ಪ್ರತಿಭಟನೆಗಳಲ್ಲ. ಅವು ತನ್ನನ್ನೂ ಒಳಗೊಳ್ಳುವ ಚಿಕಿತ್ಸಾಕ್ರಮಗಳು. ಗ್ರೀಕರ ಪ್ರತಿಭಟನಾ ದೇವತೆಯಾದ ಪ್ರೊಮೀಥ್ಯುಸ್ ಕೊನೆವರೆಗೂ ಪ್ರತಿಭಟನಾಕಾರನಾಗಿ ಉಳಿಯಲಿಲ್ಲ. ಅವನೂ ತನ್ನ ಪ್ರತಿರೋಧಿ ಜಯಸ್‌ನಂತೆ ಆ ವಿಷಮ ಪರಿಸ್ಥಿತಿಯ ಭಾಗವಾಗಿದ್ದ.

ಕೊನೆಗೆ ಜಯಸ್ ಬದಲಾದ. ಪ್ರೊಮೀಥ್ಯುಸ್‌ನೂ ಬದಲಾಗಬೇಕಾಯಿತು. ಅದಕ್ಕಾಗಿ ಇಬ್ಬರೂ ಮಾಗಬೇಕಾಯಿತು, ಕಾಯಬೇಕಾಯಿತು. ಅದಕ್ಕಾಗಿ ಬಹಳ ಸಮಯವೂ ಬೇಕಾಯಿತು.

(ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT