ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿಗೆ ಸವಾಲೊಡ್ಡಿದ ಮಗಳು

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ನಾನು ದೆಹಲಿಗೆ ಹೋದಾಗಲೆಲ್ಲಾ ನನ್ನ ಸಾಕು ಮಗಳು `ಎನ್‌ಟಿ' ಜೊತೆಗೆ ಉಳಿದುಕೊಳ್ಳುತ್ತೇನೆ. ಆಕೆಗೆ ಮೂವತ್ತು ವರ್ಷ. 9 ಮತ್ತು 7 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. ನನಗಿಂತ 24 ವರ್ಷ ಚಿಕ್ಕವಳಾಗಿದ್ದರೂ `ಎನ್‌ಟಿ'ಯೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ ಮಾತ್ರವಲ್ಲ, ಆಕೆಯ ಸಲಹೆಗಳನ್ನೂ ಪಡೆಯುತ್ತೇನೆ.

ಒಂದು ದಿನ, ಮಸಾಲಾ ಟೀ ಹೀರುತ್ತಾ ಮಾತಿಗೆ ವಿರಾಮವೇ ಇಲ್ಲದಂತೆ ಹರಟುತ್ತಿದ್ದೆವು. ಆಗಲೇ ಆಕೆ ಹೇಳಿದ್ದು- `ಆಂಟಿ ನನಗೆ `ಬೈಪೊಲಾರ್ ಡಿಸಾರ್ಡರ್ (ಉನ್ಮಾದ ಖಿನ್ನತೆ ಕಾಯಿಲೆ) ಇರುವುದು ನಿಮಗೆ ಗೊತ್ತೆ?'. ನಾನು ಸ್ತಂಭೀಭೂತಳಾದೆ, ಏನನ್ನೂ ಪ್ರತಿಕ್ರಿಯಿಸದಂತಾಗಿದ್ದೆ. ಎನ್‌ಟಿ ಐದು ವರ್ಷದ ಮಗು ಆಗಿದ್ದಾಗಿನಿಂದಲೂ ಆಕೆಯನ್ನು ಶಿಶುವೈದ್ಯೆಯಾಗಿ ನೋಡುತ್ತಿರುವವಳು ನಾನು.

ವೈದ್ಯಕೀಯ ಸಮಸ್ಯೆಗಳಿಂದಾಚೆ ಆಕೆ ಮನೋವೈಜ್ಞಾನಿಕ ಸಮಸ್ಯೆಗಳನ್ನೂ ಹೊಂದಿದ್ದಳು. 29 ವರ್ಷದವಳಿದ್ದ ನನಗೆ ಆಗ ಅನುಭವವೂ ಹೆಚ್ಚಿರಲಿಲ್ಲ. ಕೆ.ಆರ್. ರಸ್ತೆಯ ಎರಡು ಕೋಣೆಯುಳ್ಳ ಬಾಡಿಗೆ ಮನೆಯಲ್ಲಿ ನನ್ನ ವೃತ್ತಿ ಪ್ರಾರಂಭಿಸಿದ್ದೆ. ಈ ರೋಗಿ ಉತ್ತಮ ಆರ್ಥಿಕ ಪರಿಸ್ಥಿತಿಯುಳ್ಳ ಮತ್ತು ಉತ್ತಮ ಶಿಕ್ಷಣ ಪಡೆದ ಕುಟುಂಬದವಳಾಗಿದ್ದಳು.

ಅವರ ಮನೆಯಲ್ಲಿ ಎಲ್ಲರೂ ಡಾಕ್ಟರೇಟ್ ಪದವಿ ಪಡೆದವರೇ ಆಗಿದ್ದರು. ಇನ್ನೂ ಆಗಷ್ಟೇ ವೃತ್ತಿಜೀವನ ಪ್ರಾರಂಭಿಸಿದ್ದ ನನ್ನಂಥ ಅನನುಭವಿ ವೈದ್ಯೆಯ ಬಳಿ ಅವರು ಬಂದದ್ದಕ್ಕೂ ಕಾರಣವಿತ್ತು. ನನ್ನನ್ನು ಒಮ್ಮೆ ಖುದ್ದಾಗಿ ಭೇಟಿ ಮಾಡಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಬ್ಬರು ನಾನೇ ಈ ಕುಟುಂಬಕ್ಕೆ ಸೂಕ್ತ ಶಿಶುವೈದ್ಯೆ ಎಂದು ಪರಿಗಣಿಸಿದ್ದರು.

ಟೀ ಕುಡಿಯುವಾಗ ನನ್ನ ಕ್ಲಿನಿಕ್‌ಗೆ ಪೋಷಕರು ಕರೆತಂದ ಈ ರೋಗಿಯನ್ನು ನೆನಪಿಸಿಕೊಂಡೆ. ಮನೆಯಿಂದ ಹೊರಗೆ ಹೆಚ್ಚು ಇರುತ್ತಿದ್ದರಿಂದ ಆಕೆಯ ಚರ್ಮ ಶುಷ್ಕ ಮತ್ತು ನವೆಯ (ತುರಿಕೆ ದದ್ದು) ಶಾಶ್ವತ ಸಮಸ್ಯೆಗೆ ತುತ್ತಾಗಿದ್ದಳು.

ಆಕೆಯ ಬುದ್ಧಿವಂತ ಡಾಕ್ಟರೇಟ್ ಪದವೀಧರೆ ತಾಯಿ ತನ್ನ ಮಗುವಿನ ಕುರಿತು ಹೇಳಿದ್ದರು. ಮಗಳು ಗುಣಮುಖವಾಗಲು ಅವರು ಮಾಡದ ಪ್ರಯತ್ನವಿಲ್ಲ. ಮೂರು ವರ್ಷದ ಮಗುವಾಗಿದ್ದಾಗಿಂದಲೂ ಆಕೆಯದು ಸಿಡುಕಿನ ಸ್ವಭಾವ. ಕೋಪದ ಉರುಬನ್ನು ಕೈಗೆ ಸಿಕ್ಕ ವಸ್ತು ಎಸೆಯುವುದು ಅಥವಾ ಮುರಿದು ಹಾಕುವುದು ಮುಂತಾದವುಗಳ ಮೂಲಕ ತೀರಿಸಿಕೊಳ್ಳುತ್ತಿದ್ದಳು. ಇದು ಹಟದ ಲಕ್ಷಣ ಎಂದೇ ಪರಿಗಣಿಸಿದ್ದೆವು.

ತನ್ನ ಏಕೈಕ ಮಗುವಿನ ಜೊತೆಗಿರುವ ಸಲುವಾಗಿ ಅಮ್ಮ ತನ್ನ ಉದ್ಯೋಗವನ್ನೂ ತ್ಯಜಿಸಿದರು. ತನ್ನಂತೆ ಮಗಳೂ ಪಿಎಚ್.ಡಿ ಮಾಡಬೇಕೆನ್ನುವುದು ಆಕೆಯ ಬಯಕೆಯಾಗಿತ್ತು. ಅವರು ಪ್ರತಿಬಾರಿ  ಒಂದೊಂದು ವೈದ್ಯಕೀಯ ಸಮಸ್ಯೆಯೊಂದಿಗೆ ನನ್ನ ಬಳಿ ಬಂದಾಗಲೂ ಅದು ಮಗುವಿನ ಮಾನಸಿಕ ಸಮಸ್ಯೆಯೇ ಆಗಿರುತ್ತಿತ್ತು. ಆಕೆ `ಏಕೈಕ ಮತ್ತು ಏಕಾಂಗಿ ಮಗು' ಆಗಿರುವ ಕಾರಣಕ್ಕೇ ಹೀಗಾಗುತ್ತಿರುವುದು ಎಂಬ ನಿರ್ಧಾರಕ್ಕೆ ಬಂದೆವು.

ಹೀಗಾಗಿ ಮಗಳಿಗೆ ಜೊತೆಗಾರರು ಸಿಗಲಿ ಎಂಬ ಆಶಯದೊಂದಿಗೆ ತಾಯಿ ಪ್ಲೇ ಹೋಮ್ ಪ್ರಾರಂಭಿಸಿದರು. ಆ ಮಕ್ಕಳೊಂದಿಗೂ ಆಕೆ ಕಾದಾಟ ಪ್ರಾರಂಭಿಸಿದಳು. ತನ್ನ ಆಟಿಕೆಗಳನ್ನು ಬೇರೆಯವರು ಮುಟ್ಟಲೂ ಬಿಡುತ್ತಿರಲಿಲ್ಲ. ನಿರಂತರ ರಂಪಾಟದಿಂದ ಬೇಸತ್ತ ತಾಯಿ ಪ್ಲೇ ಹೋಮ್ ಮುಚ್ಚುವಂತಾಯಿತು.

ಶಾಲೆಯಲ್ಲೂ ಇದೇ ಸಮಸ್ಯೆ. ಆಕೆ ಓದಿನಲ್ಲಿ ಬುದ್ಧಿವಂತೆ ಆಗಿದ್ದರೂ ಓದಿದ್ದು ಮೊದಲನೇ ಪಿಯುಸಿವರೆಗೆ ಮಾತ್ರ. ಅದರ ಬಳಿಕ ಓದು ನಿಲ್ಲಿಸುತ್ತೇನೆ ಎಂದಳು. ಮಗಳು ಪಿಯುಸಿ ಪೂರ್ಣಗೊಳ್ಳುವ ಮೊದಲೇ ವಿದ್ಯಾಭ್ಯಾಸ ತ್ಯಜಿಸುವುದು ಡಾಕ್ಟರೇಟ್ ಪದವೀಧರ ಪೋಷಕರಿಗೆ ಯಾವ ಬಗೆಯಲ್ಲಿ ನೋವು ತಂದಿರಬಹುದು ಕಲ್ಪಿಸಿಕೊಳ್ಳಿ.

ಆಕೆ ಸುಮಾರು ಏಳು ವರ್ಷದವಳಿದ್ದಾಗ ಸಂಬಂಧಿ ಶಿಶುವೈದ್ಯರೊಬ್ಬರು ಮಗುವೊಂದನ್ನು ದತ್ತು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಏಕೆಂದರೆ ಆ ತಾಯಿ ಅಂಡಾಶಯದ ಸಮಸ್ಯೆಯಿಂದಾಗಿ ಮತ್ತೆ ಗರ್ಭ ಧರಿಸಲು ಸಾಧ್ಯವಿರಲಿಲ್ಲ. `ಎನ್‌ಟಿ' `ರೆಡಿಮೇಡ್' ತಮ್ಮನನ್ನು ಪಡೆದುಕೊಂಡಿದ್ದಳು. ಆ ಕುಟುಂಬವನ್ನು ಪ್ರವೇಶಿಸುವಾಗ ಆತ 30 ದಿನಗಳ ಕೂಸು. ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎನ್‌ಟಿ ಉತ್ಸಾಹದಿಂದ ತೊಡಗಿಕೊಂಡಿದ್ದಳು. ಆ

ದರೆ ತನ್ನ ಹೊಸ ದತ್ತು ತಮ್ಮನೊಂದಿಗೆ ಹೊಂದಿಕೊಳ್ಳಬೇಕಿದ್ದ ಮಗಳು, ಆತನನ್ನು ದ್ವೇಷಿಸತೊಡಗಿದಳು. ತಮ್ಮನ ಬಗ್ಗೆ ಅಸೂಯೆ ವ್ಯಕ್ತಪಡಿಸುವುದರ ಜೊತೆಗೆ ಹಿಂಸಿಸತೊಡಗಿದಳು. ಆಕೆಯ ನಡೆ ಪೋಷಕರು ಮತ್ತು ಈ ಸಣ್ಣ ಮಗುವಿನೊಂದಿಗಿನ ಜಗಳಕ್ಕೆ ತಿರುಗಿತು. ಇಂದಿಗೂ ಆಕೆಗೆ ಪೋಷಕರೇ ಅತಿ ದೊಡ್ಡ ಶತ್ರುಗಳು.

ಆಕೆಯನ್ನು ಖುಷಿಯಾಗಿಡಲು ಸೂಕ್ಷ್ಮಮತಿಯ ಪೋಷಕರು ಮಾಡದ ಪ್ರಯತ್ನವಿಲ್ಲ. ತಮ್ಮ ಮಗಳ ದೈಹಿಕ ಸಾಮರ್ಥ್ಯ ನೋಡಿ ಚಾರಣ ಸಂಸ್ಥೆಗೆ ಆಕೆಯನ್ನು ಸೇರಿಸಿದರು.

ಆದರೆ,  ಶಿಕ್ಷಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಆಕೆಯ ಚರ್ಮದ ಸಮಸ್ಯೆಗಳ ನಡುವೆ ನಿಭಾಯಿಸುವುದು ಕಷ್ಟವಾಗತೊಡಗಿತು. ಆಕೆಯ ವೈದ್ಯಕೀಯ ಸಮಸ್ಯೆಗಳು ಮತ್ತು ತಾರುಣ್ಯದ ಪ್ರವೇಶಕ್ಕೆ ಸಮಾನಾಂತರವಾಗಿ ಆಕೆಯ ಮಾನಸಿಕ ಸಮಸ್ಯೆಗಳು ಮತ್ತಷ್ಟು ಕೆಟ್ಟದಾಗತೊಡಗಿತು.

ನಾನು ಆಕೆಯನ್ನು ನಿಮ್ಹಾನ್ಸ್‌ನ ಡಾ. ಶೇಖರ್ ಶೇಷಾದ್ರಿ (ಎಸ್‌ಎಸ್) ಅವರ ಬಳಿ ತೋರಿಸುವಂತೆ ಸೂಚಿಸಿದೆ. ಎನ್‌ಟಿ ಅತಿ ಬೇಗನೇ ಅವರ ಮೆಚ್ಚುಗೆ ಗಳಿಸಿದಳು, ಅವರು ಆಕೆಯ ವಿಶ್ವಾಸವನ್ನೂ ಪಡೆದುಕೊಂಡರು. ಅಲ್ಲಿದ್ದ ಸಮಯವಷ್ಟೂ ಆಕೆ ತನ್ನೆಲ್ಲಾ ಕೋಪವನ್ನು ತ್ಯಜಿಸಿದ್ದಳು. ಆಕೆಗೆ ಮತ್ತೆ ಕೌನ್ಸೆಲಿಂಗ್ ಮಾಡುವಂತೆ ಎಸ್‌ಎಸ್‌ಗೆ ಪೋಷಕರು ಕೇಳಿಕೊಳ್ಳುವಂತಾಯಿತು.

ನಾನು ಈ ಮುದ್ದು ಹುಡುಗಿಯನ್ನು ತುಂಬಾ ಹಚ್ಚಿಕೊಂಡಿದ್ದೆ. ಆಕೆ `ಸಹಾನುಭೂತಿಯ ನಿಧಿ'ಯಾಗಿದ್ದಳು. ತನ್ನ ಮನೆಯ ಆಳುಕಾಳುಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಅವರಿಗೆ ಅಕ್ಷರ ಹೇಳಿಕೊಡುತ್ತಿದ್ದಳು. ಅವಳ ಹೋರಾಟಗಳು ಅವರ ಕಾರಣಕ್ಕಾಗಿ ಇರುತ್ತಿದ್ದವು. ನನ್ನ ಮಗ ಆದರ್ಶನ ಹುಟ್ಟುಹಬ್ಬದಂದು ಮಕ್ಕಳಿಗೆ ಪಾರ್ಟಿಯನ್ನು ಸಂಯೋಜಿಸುವ ಕೆಲಸದಲ್ಲಿ ನನಗೆ ನೆರವನ್ನೂ ನೀಡಿದ್ದಳು. ಅವಳು ಮಕ್ಕಳನ್ನು ಪ್ರೀತಿಸುತ್ತಿದ್ದಳು!

ಒಂದು ದಿನ ಆಕೆಯ ತಾಯಿ, ಎನ್‌ಟಿ ಮನೆಯನ್ನು ತೊರೆದು ಒಬ್ಬಳೇ ವಾಸಿಸಲು ಶುರುಮಾಡಿದ್ದಾಳೆ ಎಂದು ಹೇಳಿದರು. ನಮ್ಮ ಹೊಸ ಮನೆಯಲ್ಲಿ ಅವಳನ್ನು ಭೇಟಿಯಾದೆವು (ಆ ವೇಳೆಗೆ ನಾನು ನನ್ನ ಸ್ವಂತ ಮನೆಯನ್ನು ಹೊಂದಿದ್ದೆ). ಆಕೆ `ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ಬರೆಯುವ ಮೂಲಕ ತನ್ನ ಕಾಲಮೇಲೆ ನಿಲ್ಲುವಂತಾಗಿದ್ದಳು. ಈ ಅಸಾಧಾರಣ ಮಗುವಿಗೆ ನೆರವಾಗುವಂತೆ ನನ್ನ ಗೆಳತಿ ಪ್ರತಿಭಾ ನಂದಕುಮಾರ್‌ಗೆ ಮನವಿ ಮಾಡಿದ್ದೆ. ಆಕೆ ಭಾವಾತಿರೇಕದಿಂದ ಬಳಲುತ್ತಿದ್ದಳು ಮತ್ತು ಒಮ್ಮೆ ತನ್ನನ್ನು ತಾನೇ ಕೊಂದುಕೊಳ್ಳಲು ಪ್ರಯತ್ನಿಸಿದ್ದಳು.

ಮನೆಯ ಹೊರಗೇ ವಾಸಿಸುವುದನ್ನು ಇಷ್ಟಪಡುತ್ತಿದ್ದ ಹುಡುಗಿಯಾಗಿ ಆಕೆ, ತನ್ನನ್ನು ಶೋಷಿಸುತ್ತಿದ್ದ (ದೈಹಿಕವಾಗಿ ಅಲ್ಲ) ಚಾರಣಿಗರ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಆಕೆಯನ್ನು ಹೆಚ್ಚೂ ಕಡಿಮೆ ಮನೆಯ ಆಳಿನಂತೆಯೇ ನೋಡಲಾಗುತ್ತಿತ್ತು. ಆಕೆ ನನ್ನನ್ನು ಭೇಟಿ ಮಾಡಲು ಬಂದ ದಿನ ನನಗಿನ್ನೂ ನೆನಪಿದೆ. ನನ್ನ ಅನುಭವ ರಹಿತ ಕೌನ್ಸೆಲಿಂಗ್ ಜಗಳಗಳಿಗೆ ಎಡೆಮಾಡಿಟ್ಟಿತು. ಅಂತಿಮವಾಗಿ ಎರಡು ವರ್ಷದ ಒಂಟಿ ಜೀವನದ ಬಳಿಕ ತಂದೆತಾಯಿಯ ಬಳಿ ವಾಪಸ್ ಬರಲು ಒಪ್ಪಿಕೊಂಡಳು.
ನನ್ನ ಮಗಳು (ಸಾಕು ಮಗಳು) ಈಗ ಚಾರಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೀರ್ತಿವಂತೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಚಾರಣದ ಮುಂದಾಳು ಕೂಡ ಆಗಿದ್ದಳು. ರಕ್ಷಣಾ ಸಿಬ್ಬಂದಿಯನ್ನು ಚಾರಣ ಪ್ರವಾಸಕ್ಕೂ ಕರೆದೊಯ್ದಿದ್ದಳು. ಆಗಲೇ ಆಕೆ ಸೇನಾ ಮೇಜರ್ ಒಬ್ಬರನ್ನು ಭೇಟಿ ಮಾಡಿದ್ದು. ಅದು ಮೊದಲ ನೋಟದಲ್ಲೇ ಚಿಗುರಿದ ಪ್ರೀತಿ. ನಮ್ಮ ಮುದ್ದಿನ ಮಗಳು 19 ವರ್ಷದವಳಿದ್ದಾಗ ಮದುವೆಯಾಗಿ ದೆಹಲಿಯಲ್ಲಿ ನೆಲೆಯೂರಿದಳು. ಎಲ್ಲವೂ ಸರಿ ಹೋಯಿತೆಂದು ನಾವು ನಿರುಮ್ಮಳವಾಗುವ ಹೊತ್ತಿಗೆ, ತಾನು ಯಾವುದೇ ತೊಂದರೆಗಳಿಲ್ಲದೆ ತಾಯಿಯಾಗುತ್ತಿದ್ದೇನೆ ಎಂದು ಹೇಳಿಕೊಂಡಳು.

ಆಕೆಗೀಗ ಏಳು ಮತ್ತು ಒಂಬತ್ತು ವರ್ಷದ ಎರಡು ಗಂಡು ಮಕ್ಕಳು. ಆಕೆ ತನ್ನ ತಾಯ್ತನ ಹಾಗೂ ಇಬ್ಬರು ಮಕ್ಕಳೊಂದಿಗೆ ಖುಷಿಯಾಗಿರುವಂತೆ ಕಂಡುಬಂದಳು. ಎರಡು ವರ್ಷದ ಹಿಂದೆ ಹೊಸಹುಟ್ಟು ಪಡೆದವಳಂತೆ ಕಾಣಿಸಿದಳು. ಆಕೆಯನ್ನು ನೋಡಿ ನನಗೂ ತುಂಬಾ ಸಂತೋಷವಾಗಿತ್ತು. ತನ್ನೆರಡು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿರುವೆ ಎಂದಳು.

  ಪತಿ ಜೊತೆಗಿನ ಸಂಬಂಧದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಸಾಮಾನ್ಯ ವಿಷಯ ಎಂಬಂತೆ ಹೇಳಿದಳು. ಆಕೆಯ ಆಪ್ತಸಮಾಲೋಚಕರೊಬ್ಬರ ಸಲಹೆ ಪರಿಣಾಮವದು. ನನಗೆ ಅದನ್ನು ಸರಿಯಾಗಿ ಹೇಳುವಂತೆ ಕೇಳುವ ಅಧಿಕಾರವಿತ್ತು. ಆಕೆ ಪ್ರತಿಕ್ರಿಯಿಸಿದ್ದು, ತಾನು ವಿಚ್ಛೇದನಕ್ಕೆ ಮುಂದಾಗಿದ್ದು, ವಕೀಲರನ್ನು ಹುಡುಕುತ್ತಿದ್ದೇನೆ ಎಂದು.

ಎಂದಿನಂತೆ ಆಕೆಯ ಹೆತ್ತ ತಾಯಿ ನನಗೆ ಕರೆ ಮಾಡಿದರು. “ದಯವಿಟ್ಟು ನಿಮ್ಮ ಮಗಳಿಗೆ ಸಹಾಯ ಮಾಡಿ. ಆ ಕುಟುಂಬ ಮತ್ತು ಎಳೆಯ ಮಕ್ಕಳನ್ನು ಉಳಿಸಿ. ಆಕೆ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ನಾನು ಮುಂದಾದರೂ ಬಿಡುತ್ತಿಲ್ಲ” ಎಂದು ಅಲವತ್ತುಕೊಂಡರು.

ಆಕೆಯ ತಾಯಿ ಕರೆ ಮಾಡಿದಾಗ ನಾನು `ಎನ್‌ಟಿ'ಯ ಜೊತೆಗೇ ಇದ್ದೆ. ನಾನೂ ಆಕೆಗೆ ಬೆಂಬಲ ನೀಡುವ ಬದಲು ಪೋಷಕರೊಂದಿಗೆ ಸೇರಿಕೊಂಡು ಸಂಚು ನಡೆಸುತ್ತಿದ್ದೇನೆ ಎಂದು ಭಾವಿಸತೊಡಗಿದಳು. ನಾನು ಆಕೆಯ ವಿಶ್ವಾಸವನ್ನು ಬಹುತೇಕ ಕಳೆದುಕೊಂಡೆ. ವಿಚ್ಛೇದನ ಪ್ರಕ್ರಿಯೆಗೆ ಒಂದೆರಡು ವರ್ಷ ತಗುಲಿತು.

ತನ್ನ ಮಕ್ಕಳನ್ನು ನೋಡಲು (ನ್ಯಾಯಾಲಯದ ಅನುಮತಿ ಪಡೆದು) ಬಂದ ಆಕೆಯ ಪತಿ  ತಪಾಸಣೆಗೆಂದು ಅವರನ್ನು ನನ್ನ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದರು. ಅವರು, “ನಿಮ್ಮ ಮಂತ್ರದಂಡವನ್ನು ನನ್ನ ಪ್ರೀತಿಯ ಮಡದಿ ಮೇಲೆ ಹರಿಸಿದಾಗಲೆಲ್ಲಾ ಅದು ಯಶಸ್ವಿಯಾಗುತ್ತದೆ ಎಂದು ನನ್ನ ಅತ್ತೆ-ಮಾವ ಯಾವಾಗಲೂ ಹೇಳುತ್ತಿದ್ದರು. ಆಂಟಿ ನನ್ನ `ರಾಜಕುಮಾರಿ' ನನಗೆ ಮರಳಿ ಸಿಗಬೇಕು” ಎಂದು ನನ್ನನ್ನು ಕೇಳಿಕೊಂಡರು.

ನಾನು ಆಪ್ತಸಲಹೆಗಾರರ `ಸಂಬಂಧ ವೈಮನಸ್ಯ'ದ ರೋಗನಿರ್ಣಯ ಮುಂದಿಟ್ಟುಕೊಂಡು ಅವರನ್ನು ಒಂದುಗೂಡಿಸುವ ಪ್ರಯತ್ನ ಮಾಡಿದೆ ಮತ್ತು ಅದು ಯಶಸ್ವಿಯೂ ಆಯಿತು. ದೆಹಲಿಗೆ ಹೊರಡಲು ಸಿದ್ಧರಾಗಿದ್ದ ಆ ನಾಲ್ವರು ಸದಸ್ಯರ ಕುಟುಂಬವನ್ನು ನೋಡುವುದು ಮನಸ್ಸಿಗೆ ಸಂತೃಪ್ತಿ ನೀಡುತ್ತಿತ್ತು.

ಎಂದಿನಂತೆ ಡಿಸೆಂಬರ್ 2012ರಲ್ಲಿಯೂ ದೆಹಲಿಯಲ್ಲಿ ಆಕೆಯೊಂದಿಗೆ ಕಳೆಯಲು ನಿರ್ಧರಿಸಿದೆ. ಆಗಲೇ ಆಕೆ `ಬೈಪೊಲಾರ್ ಡಿಸಾರ್ಡರ್' ಬಗ್ಗೆ ಹೇಳಿದ್ದು. ದೆಹಲಿ ಮೂಲದ ಓರ್ವ ಮನೋವೈದ್ಯರು ಆಕೆಯ ಕಾಯಿಲೆಯ ಬಗ್ಗೆ ನಿಖರವಾಗಿ ತಿಳಿಸಿದ್ದರು.

ಆಕೆ ಕೆಲವೊಮ್ಮೆ ವಿಶ್ರಾಂತಿರಹಿತ ಉನ್ಮತ್ತ ಮಗು. ಇನ್ನು ಕೆಲವೊಮ್ಮೆ ಮೌನಿ, ಕೋಪಿಷ್ಟೆ ಹಾಗೂ ಆಗಾಗ್ಗೆ ಆತ್ಮಹತ್ಯಾಕಾರಕ ಮನೋಭಾವ ಪ್ರದರ್ಶಿಸುವವಳು. ಆದರೆ ಆಕೆ `ವಿಶಿಷ್ಟ ಸಾಧಕಿ'. ಎನ್‌ಸಿಇಆರ್‌ಟಿಗೆ ಪುಸ್ತಕಗಳನ್ನು ಬರೆದಳು, ಚಾರಣ ಗುಂಪುಗಳ ನೇತೃತ್ವ ವಹಿಸಿದಳು, ಯುಎಸ್‌ಎಯ `ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್' ಕೋರ್ಸ್ ಮಾಡಲು ವಿದ್ಯಾರ್ಥಿ ವೇತನವನ್ನೂ ಪಡೆದುಕೊಂಡಳು. ಈಗ ಆಕೆ `ಇಎಂಟಿ' ಅರ್ಹತೆ ಗಳಿಸಿದ್ದಾಳೆ. “ಆಂಟಿ `108' ಸಿಬ್ಬಂದಿಗೆ ನನ್ನ ಜ್ಞಾನವನ್ನು ತಲುಪಿಸಲು ಅಥವಾ ಅವರಿಗೆ ಬೋಧನೆ ಮಾಡಲು ನೀವು ಸಹಾಯ ಮಾಡಬೇಕು” ಎಂದು ಕೇಳಿಕೊಂಡಳು. `ತಥಾಸ್ತು' ಎಂದೆ.

`ಆಂಟಿ ನನ್ನ ದೇಶ ಹಾಗೂ ಸಮುದಾಯಕ್ಕೆ ನಾವು ಮಾಡಬೇಕಾಗಿರುವುದು ಸಾಕಷ್ಟಿದೆ' ಎಂದು ಹೇಳುತ್ತಾಳೆ. ಆಕೆಯ `ಬೈಪೊಲಾರ್ ಡಿಸಾರ್ಡರ್' ಅನ್ನು ಅರಿತುಕೊಳ್ಳದೆ ಆಕೆಯನ್ನು ಬಹುತೇಕ ಕಳೆದುಕೊಂಡಿದ್ದೆವು. ಆದರೆ ಆಕೆಯ ನಿರಂತರ ಪ್ರಯತ್ನದಿಂದ, ಆಕೆಯ ಪ್ರೀತಿಯ ಪೋಷಕರಿಂದ ಮತ್ತು ಆಕೆಯ ವೈದ್ಯೆಯಿಂದ (ಅದು ನಾನೇ) ಇದು  ಸಾಧ್ಯವಾಗಿದೆ ಎನಿಸುತ್ತದೆ.

ಎನ್‌ಟಿ ನನ್ನ ಮೊದಲ ರೋಗಿಯಾಗಿದ್ದರಿಂದ ಆಕೆಯ ಮದುವೆಯ ಕರೆಯೋಲೆಯನ್ನು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ತನ್ನ ಕಾಯಿಲೆಯ ಕುರಿತು ಪುಸ್ತಕವೊಂದನ್ನೂ ಅವಳು ಬರೆಯುತ್ತಿದ್ದಾಳೆ. ಅದರ ಮೊದಲ ಓದುಗಳು ನಾನಾಗಲಿದ್ದೇನೆ. ಅದೊಂದು ಅದ್ಭುತ ರಚನೆಯ ಜೀವನಚರಿತ್ರೆಯಾಗಿ ಓದುಗ ವಲಯದಲ್ಲಿ ಸ್ವೀಕೃತವಾಗುತ್ತದೆ ಎಂಬ ಭರವಸೆ ನನ್ನದು.

ವಿಕ್ಟೋರಿಯಾ ಆಸ್ಪತ್ರೆ ಮನೋವೈದ್ಯ ಡಾ. ಪ್ರಶಾಂತ್ ಅವರಿಂದ `ಬೈಪೊಲಾರ್ ಡಿಸಾರ್ಡರ್' ಕುರಿತ ಪುಸ್ತಕವೊಂದನ್ನು ಪಡೆದುಕೊಂಡೆ. ಈ ಪುಸ್ತಕ ಆ ಸಮಸ್ಯೆಯನ್ನು ಕಾಯಿಲೆ ಎಂದೇ ವ್ಯಾಖ್ಯಾನಿಸುತ್ತದೆ. ಇದು ವ್ಯಕ್ತಿಯನ್ನು ಒಮ್ಮಮ್ಮೆ ಉತ್ತಮ ಭಾವಸ್ಥಿತಿಯಿಂದ ಕಿರಿಕಿರಿ ಉಂಟುಮಾಡುವ ಮತ್ತು ಖಿನ್ನತೆಯ ಭಾವಕ್ಕೆ ನೂಕುತ್ತದೆ.

ಆಕೆಯ ರೋಗ ಸವಾಲಿನದು. ಇದರ ಫಲವಾಗಿ ನಮ್ಮ ಮಗಳು ಕೂಡ ಸವಾಲಿನವಳು. ಅವಳು ನನ್ನನ್ನು ಅಪ್ಪಿಕೊಂಡು ನಿಮ್ಮ ಮನದೊಳಗಿನ ಕೋಲಾಹಲ ಸರಿಹೋಗುತ್ತದೆ ಎಂದು ಸಂತೈಸುತ್ತಾಳೆ. ನನ್ನನ್ನು ಅವಳು ಸದಾ `ರಾಣಿ'ಯಂತೆ ನೋಡಿಕೊಳ್ಳುತ್ತಾಳೆ.

ನಾನು ಎನ್‌ಟಿ ಮತ್ತು ಆಕೆಯ ಸಮಸ್ಯೆಗಳೊಂದಿಗೆ ಮುಖಾಮುಖಿಯಾದಾಗ ನೆನಪಿಸಿಕೊಳ್ಳುವುದು- `ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ದೂಡುತ್ತದೆ, ಸವಾಲುಗಳು ನಿಮಗೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಸಮಸ್ಯೆಗಳನ್ನು ಸವಾಲುಗಳನ್ನಾಗಿ ಪರಿವರ್ತಿಸಿಕೊಳ್ಳಿ' ಎಂಬ ಜನರಲ್ ಕಾರ್ಯಪ್ಪ ಅವರ ಮಾತು.

ಇಷ್ಟೆಲ್ಲಾ ನಡೆದದ್ದು ಸಾಲದು ಎಂಬಂತೆ ಆಕೆಯ ಮಗ ಇನ್ನೂ ದೊಡ್ಡ ಸವಾಲಿನ ಸಮಸ್ಯೆ ಎದುರಿಸುತ್ತಿದ್ದಾನೆ. ಆಕೆಯ ಕಾಯಿಲೆಯ ನಕಲನ್ನೇ ಮಗ ಹೊಂದಿದ್ದಾನೆ. ಸಂಬಂಧಗಳ ಸಮಸ್ಯೆಗಳು ಮತ್ತು ತನ್ನ ಮಗನ ಸವಾಲಾಗಿರುವ ಕಾಯಿಲೆಯನ್ನು ಒಟ್ಟಿಗೆ ಎದುರಿಸುತ್ತಿರುವ ಈ ಧೈರ್ಯಶಾಲಿ ಹೃದಯದ ಬಗ್ಗೆ ನನ್ನ ಮನಸ್ಸು ಮಿಡಿಯುತ್ತಿದೆ. ನನ್ನ ಪ್ರಾರ್ಥನೆಯ ಮೊದಲ ಆದ್ಯತೆ ಸದಾ ಅವಳಿಗೆ.
ಐಸಾಕ್ ನ್ಯೂಟನ್, ಫ್ಲಾರೆನ್ಸ್ ನೈಟಿಂಗೇಲ್, ಕ್ಯಾಥರಿನ್ ಜೆಟಾ ಜೋನ್ಸ್ ಮುಂತಾದ ಅನೇಕ ಖ್ಯಾತನಾಮರು ಬೈಪೊಲಾರ್ ಡಿಸಾರ್ಡರ್‌ಗೆ ತುತ್ತಾದವರು.

ನಾನು ಡಾ. ಪ್ರಶಾಂತ್ ಅವರಿಂದ ಪಡೆದುಕೊಂಡ ಪುಸ್ತಕಕ್ಕಿಂತ `ಎನ್‌ಟಿ' ಮೂಲಕವೇ ಆ ಕಾಯಿಲೆ ಬಗ್ಗೆ ನಾನು ಹೆಚ್ಚು ತಿಳಿದುಕೊಂಡೆ. ಆಕೆ ನಿಜವಾದ ಜೀವನಾನುಭವಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT