ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲುಗಳ ಸರಮಾಲೆಯಲ್ಲಿ ಅಮೆರಿಕ!

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬಿಡುಗಡೆಯಾದ ಜನಗಣತಿ ಆಯೋಗದ ವರದಿಯೊಂದು ಅಮೆರಿಕಾ ದೇಶದ ಒಟ್ಟು 31 ಕೋಟಿ ಜನಸಂಖ್ಯೆಯ ಪ್ರತಿ ಆರು (6) ಜನರಲ್ಲಿ ಒಬ್ಬರು ಬಡತನದಲ್ಲಿ ಜೀವನವನ್ನು ಸವೆಸುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಹೊರ ಹಾಕಿತು.

ಎಂದರೆ, ಈ ದೇಶದಲ್ಲಿ ಶೇಕಡ 15-16 ರಷ್ಟು ಬಡವರೆಂದು ಗುರುತಿಸಲ್ಪಟ್ಟಿದ್ದಾರೆ. ಅಮೆರಿಕಾದ ಜನಗಣತಿ ಐದು ದಶಕಗಳ ಹಿಂದೆ ಬಡತನದ ಪ್ರಮಾಣವನ್ನು ಕುರಿತ ಅಂಕಿ-ಅಂಶಗಳನ್ನು ಕಲೆ ಹಾಕಲು ಪ್ರಾರಂಭ ಮಾಡಿದ್ದು,

ಅಂದಿನಿಂದ ಇಂದಿನವರೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಡವರ ಸಂಖ್ಯೆಯು ಈ ಹೊತ್ತು ವೃದ್ಧಿಸಿದೆ ಎನ್ನುವುದನ್ನೂ ಈ ವರದಿ ತಿಳಿಸಿದೆ. ಕಳೆದ ಎರಡು ವರ್ಷಗಳಿಂದೀಚೆಗೆ ಈ ದೇಶದಲ್ಲಿ ಬಡವರ ಸಂಖ್ಯೆಯು ಮೂವತ್ತು ಲಕ್ಷದಷ್ಟು ಹೆಚ್ಚಿದೆ.
 
ಬಡತನದ ಪ್ರಮಾಣ ಹೆಚ್ಚುತ್ತಾ ಹೋದ ಹಾಗೆಲ್ಲ ಆದಾಯಗಳು ಕುಸಿಯುತ್ತಾ ಹೋಗುತ್ತವೆ, ಆದಾಯಗಳು ಇಳಿಮುಖವಾದಾಗ ಜನರು ಸಾಲದ ವರ್ತುಲದಲ್ಲಿ ಸಿಲುಕಿ ಹಾಕಿಕೊಳ್ಳುವುದೂ ಹೆಚ್ಚುತ್ತದೆ.

ಇದರ ಜೊತೆ ಉದ್ಯೋಗರಹಿತತೆ ಅಥವಾ ಉದ್ಯೋಗವನ್ನೂ ಕಳೆದುಕೊಳ್ಳುವಂಥ ಪರಿಸ್ಥಿತಿಗಳು ಸೃಷ್ಟಿಯಾದಾಗ ಸಮಾಜದ ಅಂಚಿಗೆ ತಳ್ಳಲ್ಪಡುವಂಥ ಜನರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ.

ಕಳೆದ ಎರಡು-ಮೂರು ವಾರಗಳಿಂದ ನಿರಂತರವಾಗಿ ಮಾಧ್ಯಮಗಳಲ್ಲಿ ರಾಜಕೀಯ ಮುಖಂಡರ ಭಾಷಣಗಳಲ್ಲಿ ಹಾಗೂ ವಿವಿಧ ವೇದಿಕೆಗಳಲ್ಲಿ ನಡೆಯುತ್ತಿರುವ ಚರ್ಚೆ-ಸಂಭಾಷಣೆಗಳಲ್ಲಿ ಮೂಡಿ ಬರುತ್ತಿರುವ ಭಾವನೆಗಳ ಧಾಟಿಯನ್ನು ಗಮನಿಸಿದಾಗ `ದೊಡ್ಡಣ್ಣ~, `ಸಮೃದ್ಧಿ-ಸಂಪತ್ತುಗಳ ಧಾಮ~ ಎಂಬ ಹೆಸರುಗಳನ್ನು ಹೊತ್ತಿದ್ದ  ಅಮೆರಿಕಾ ಸಾಲದ ಸಂಕೋಲೆಯಲ್ಲಿ ಸಿಲುಕಿ ಹಾಕಿಕೊಂಡಿದೆಯೇ ಎಂಬ ಅನುಮಾ ಗಟ್ಟಿಯಾಗಿಯೇ ಮೂಡಿ ಬರುತ್ತಿದೆ.
 
ಅಮೆರಿಕಾ ಒಂದು `ಸಾಲದ ವಿಷವರ್ತುಲ~ದಲ್ಲಿ ಸಿಲುಕಿದೆ. ಈ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಹಿಂಜರಿಕೆ ಹೆಚ್ಚುತ್ತಿದೆ ಎಂದು ಸುಮಾರು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರೂ ಅಧಿಕಾರಾರೂಢ ವ್ಯವಸ್ಥೆ ಎಚ್ಚೆತ್ತುಕೊಳ್ಳಲಿಲ್ಲ ಎಂಬುದು ಒಂದು ಪಂಥದ ವಾದ.
 
ಈ ದೇಶದ ಸರ್ಕಾರವೇ ಒಪ್ಪಿಕೊಂಡಿರುವ ಹಾಗೆ ಈ ಹೊತ್ತಿನಲ್ಲಿ ಅಮೆರಿಕಾದ ತಲೆಯ ಮೇಲಿರುವ ಒಟ್ಟು ಸಾಲದ ಮೊತ್ತ ಹದಿನಾಲ್ಕು (14) ಟ್ರಿಲಿಯನ್ (ಒಂದರ ಮುಂದೆ 12 ಸೊನ್ನೆಗಳು) ಡಾಲರ್‌ಗಳಂತೆ.

ಇದರ ಜೊತೆ-ಜೊತೆಗೆ ಸರ್ಕಾರಕ್ಕೆ ಮರು ಪಾವತಿಯಾಗಬೇಕಾದ ಸಾಲದ ಹಣ ಹಾಗೂ ಸರ್ಕಾರದಿಂದ ಅನೇಕ ಪ್ರಜೆಗಳಿಗೆ ಸಲ್ಲಬೇಕಾದ ಸಾಮಾಜಿಕ ಭದ್ರತಾ ನಿಧಿಯ ಹಣ-ಇವುಗಳೆರಡೂ ಸೇರಿದರೆ ಈ ದೇಶದ ಒಟ್ಟು ಸಾಲ 60 ಟ್ರಿಲಿಯನ್ ಡಾಲರ್‌ಗಳಂತೆ! ಪ್ರತಿ ವರ್ಷವೂ ಸಾಲದ ಪ್ರಮಾಣ ಒಂದು ಟ್ರಿಲಿಯನ್ ಡಾಲರ್ ಲೆಕ್ಕದಲ್ಲಿ ಹೆಚ್ಚುತ್ತಿದೆ ಎಂಬುದು ಕೆಲ ಆರ್ಥಿಕ ತಜ್ಞರ ಅಂಬೋಣ.
 
ಮಿಲಿಯನ್-ಬಿಲಿಯನ್-ಟ್ರಿಲಿಯನ್‌ಗಳ ಲೆಕ್ಕಾಚಾರ ಹೇಗೆಯೇ ಇರಲಿ, ಅಮೆರಿಕಾದ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಷಯವಂತೂ ಸ್ಪಷ್ಟವಾಗಿ ವೇದ್ಯವಾಗುತ್ತದೆ.

ಅದೇನೆಂದರೆ, ಭಾರತ ದೇಶದಂತೆಯೇ ಇಲ್ಲಿಯೂ ಶ್ರೀಮಂತರು ಬಡವರ ನಡುವಣ ಅಂತರ ಹೆಚ್ಚುತ್ತಿದೆ ಎಂಬುದು. ಇದಿಷ್ಟೇ ಅಲ್ಲದೆ, ನಮ್ಮ ಸಮಾಜದಲ್ಲಿ ಹೇಗೆ ಜಾತಿ-ವರ್ಗ-ವಯಸ್ಸು ಮತ್ತು ಗ್ರಾಮೀಣ ಹಿನ್ನೆಲೆ ಜನರ ಆರ್ಥಿಕ ಸ್ಥಿತಿಗಳ ಮೇಲೆ ಪ್ರಭಾವ ಬೀರುತ್ತವೆಯೋ ಹಾಗೆಯೇ ಅಮೆರಿಕಾ ದೇಶದಲ್ಲೂ ಜನಾಂಗಿಯ ಹಿನ್ನೆಲೆ, ವಲಸೆ, ವಯಸ್ಸು ಹಾಗೂ ಉದ್ಯೋಗ ಪ್ರಮುಖವಾಗಿ ವ್ಯಕ್ತಿಗಳ ಜೀವನ ಸ್ಥಿತಿ ಪ್ರಭಾವಿಸುವಂಥ ಅಂಶಗಳು.
 
ಆಫ್ರಿಕನ್-ಅಮೆರಿಕನ್ ಸಮುದಾಯ, ವಿಶೇಷವಾಗಿ ಈ ಗುಂಪಿನ ಮಕ್ಕಳು, ಸ್ಪೇನ್ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ ಮೂಲದಿಂದ ವಲಸೆ ಬಂದವರು, ಪ್ರಪಂಚದ ವಿವಿಧ ಭಾಗಗಳಿಂದ ಯಾವುದೇ ವಿಶೇಷ ಕೌಶಲಗಳಿಲ್ಲದೆ ಕೇವಲ ಜೀವನ ನಿರ್ವಹಣೆಗಾಗಿ ಅಮೆರಿಕಾ ದೇಶಕ್ಕೆ ವಲಸೆ ಬಂದು ಕಡಿಮೆ ಆದಾಯ ತರುವಂಥ ಉದ್ಯೋಗಗಳಲ್ಲಿ ತೊಡಗಿರುವವರು ಆರ್ಥಿಕ ಹಿಂಜರಿತದ ಪರಿಣಾಮವನ್ನು ಅತ್ಯಂತ ತೀವ್ರ ಸ್ವರೂಪದಲ್ಲಿ ಎದುರಿಸುತ್ತಿರುವವರು.
 
ಇವರಲ್ಲನೇಕರು ನಿರಂತರವಾಗಿ `ಬಡತನ~ ಅಥವಾ `ಬಡತನದ ಹೊಸ್ತಿಲು~ ಎಂದು ಬಣ್ಣಿಸಲಾಗುವ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಅವರ ಆರ್ಥಿಕ `ಸೀಮಾಂತೀಕರಣ~ ಮುಂದುವರೆದುಕೊಂಡು ಬರುತ್ತಿದೆ.
 
ಇಂದಿಗೂ ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಅಮೆರಿಕಾ ಎಂದಾಕ್ಷಣ ಅದೊಂದು `ಅವಕಾಶಗಳ ಆಗ~ ಎಂಬ ಭಾವನೆಯಿದ್ದು, ಇಲ್ಲಿಗೆ ಬಂದು ಬಿಟ್ಟರೆ ಸಾಮಾಜಿಕ-ಆರ್ಥಿಕ ಮೇಲ್ಮುಖ ಚಲನೆ ತಾನೇ ತಾನಾಗಿ ಸಂಭವಿಸಿ ಬಿಡುತ್ತದೆ ಎಂಬ ಭ್ರಮೆ ಅನೇಕರಲ್ಲಿದೆ.

ಆದರೆ ಇಂಥ ಅವಕಾಶಗಳು ಎಲ್ಲರಿಗೂ ಏಕ ರೀತಿಯಲ್ಲಿ ಲಭ್ಯವಿಲ್ಲ ಎಂಬ ಸತ್ಯದ ಅರಿವು ನಮ್ಮಳಗಿರಬೇಕು.

ಹಾಗೆ ನೋಡಿದರೆ ಅನೇಕ ಸ್ಥಳೀಯರಿಗೇ ದೊರೆಯದ ಉನ್ನತ ಶಿಕ್ಷಣ ಹಾಗೂ ಉನ್ನತ ಉದ್ಯೋಗಾವಕಾಶಗಳು ಹೊರ ದೇಶಗಳಿಂದ ಬಂದವರಿಗೆ ಎಟುಕುತ್ತಿದ್ದು ಈ ಪರಿಸ್ಥಿತಿ ವಿಶೇಷವಾಗಿ ಆಫ್ರಿಕನ್-ಅಮೆರಿಕನ್ ಸಮುದಾಯದ ಯುವ ಜನತೆಯಲ್ಲಿ ಉದ್ವಿಗ್ನ ನಃಸ್ಥಿತಿಗಳನ್ನು ಸೃಷ್ಟಿಸಲು ಒಂದು ಪ್ರಮುಖ ಕಾರಣ.

ಉನ್ನತ ಶಿಕ್ಷಣವನ್ನು ಪಡೆಯದಿದ್ದರೆ ಒಳ್ಳೆಯ ಆದಾಯವನ್ನು ತರಬಲ್ಲಂಥ ಉದ್ಯೋಗಗಳನ್ನು ಪಡೆಯಲು ದಾರಿಯಿಲ್ಲ. ಉನ್ನತ ಶಿಕ್ಷಣವನ್ನು ಪಡೆಯಬೇಕಾದ ಆದಾಯ ಮೂಲಗಳು ಅವರ ಕುಟುಂಬಗಳಲ್ಲಿಲ್ಲ. 

ಇಂತಹದೊಂದು ವಿಷವರ್ತುಲದಲ್ಲಿ ಸಿಲುಕಿಕೊಂಡಿರುವ ಯುವಜನತೆ ಅನೇಕ ಬಾರಿ ಮದ್ಯ, ಮಾದಕ ವಸ್ತುಗಳ ದಾಸರಾಗಿ ಕಾನೂನು ಬಾಹಿರವಾದ ಮಾರ್ಗಗಳನ್ನು ಹಿಡಿಯುತ್ತಿರುವುದು ಅಮೆರಿಕನ್ ಸಮಾಜದ ಜ್ವಲಂತ ಸತ್ಯಗಳಲ್ಲೊಂದು.
 
ಉನ್ನತ ಶಿಕ್ಷಣಾವಕಾಶಗಳ ಬಗ್ಗೆ ಪ್ರಸ್ತಾಪ ಮಾಡುವಾಗ ಈ ದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ತಗಲುವ ಅಪಾರ ವೆಚ್ಚದ ಬಗ್ಗೆಯೂ ಗಮನ ಹರಿಸುವುದು ಅಗತ್ಯ.

ವಿದ್ಯಾರ್ಥಿಗಳನ್ನು ಆಕರ್ಷಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಇಲ್ಲಿನ ವಿಶ್ವವಿದ್ಯಾನಿಲಯಗಳು ಒಂದು ರೀತಿಯ ಸ್ಪರ್ಧೆಯಲ್ಲಿ ತೊಡಗಿದ್ದು ಇದರಿಂದ ಅತ್ಯುನ್ನತ ಸ್ವರೂಪದ ಶೈಕ್ಷಣಿಕ ಹಾಗೂ ಶಿಕ್ಷಣೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳೇನೋ ಇವೆ. ಆದರೆ ಇದಕ್ಕೆ ಅವರು ತೆರಬೇಕಾದ ಬೆಲೆ ಅಪಾರ. 
 
ಇತ್ತೀಚಿಗೆ ಬಿಡುಗಡೆಯಾದ ಅಧ್ಯಯನ ವರದಿಯೊಂದರ ಪ್ರಕಾರ ಒಬ್ಬ ವಿದ್ಯಾರ್ಥಿ ತನ್ನ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವಾಗಲೇ ಸರಾಸರಿ 24,000 ಡಾಲರ್‌ಗಳ (ಸುಮಾರು ಹನ್ನೊಂದು ಲಕ್ಷ ರೂಪಾಯಿಗಳು) ಸಾಲದ ಹೊರೆಯನ್ನು ತನ್ನ ತಲೆಯ ಮೇಲೆ ಹೊತ್ತಿರುತ್ತಾನೆ (ಳೆ).

ಈ ಮೊತ್ತ ಕಳೆದ ವರ್ಷದಿಂದ ಈ ವರ್ಷಕ್ಕೆ ಶೇಕಡ 6ರಷ್ಟು ಹೆಚ್ಚಳವನ್ನು ಕಂಡಿದೆ. ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು, ಕಾಲೇಜು ಹಾಗೂ ವಿ.ವಿಗಳು ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಉತ್ತೇಜಕ ಶೈಕ್ಷಣಿಕ ಧನಸಹಾಯ ಕಾರ್ಯಕ್ರಮಗಳನ್ನು ಹೆಚ್ಚಿಸುತ್ತಿದ್ದರೂ ಡಿಗ್ರಿ ಪಡೆಯುವ ವೇಳೆಗೆ ಅವರು ಪಡೆದಿರುವ ಸಾಲದ ಮೊತ್ತ ಹೆಚ್ಚುತ್ತಲೇ ಹೋಗುತ್ತದೆ.
 
ತಮ್ಮ ಶಿಕ್ಷಣಕ್ಕೆ ಪೂರಕವಾದ ಉದ್ಯೋಗವನ್ನು ಪಡೆದರೂ ವಿದ್ಯಾರ್ಥಿಗಳು ತಾವು ತೆಗೆದುಕೊಂಡ ಸಾಲದ ಅಸಲು ಹಾಗೂ ಬಡ್ಡಿ ಹಣವನ್ನು ಮರು ಪಾವತಿಸುವ ವೇಳೆಗೆ ಅನೇಕ ಬಾರಿ ಹತ್ತರಿಂದ ಇಪ್ಪತ್ತು ವರ್ಷಗಳೇ ಕಳೆದು ಹೋಗಿರುತ್ತವೆ.
 
ಇದರ ಜೊತೆಗೆ ವಾಸಿಸುವ ಮನೆಯಿಂದ ಹಿಡಿದು, ದೈನಂದಿನ ಜೀವನವನ್ನು ಅನುಕೂಲಕರವಾದ ರೀತಿಯಲ್ಲಿ ನಡೆಸಲು ಇಲ್ಲಿ ಅಗತ್ಯವೆನಿಸುವ ಸ್ವಂತ ವಾಹನ, ಇಂಧನ, ಉಡಿಗೆ-ತೊಡಿಗೆಗಳು ಒಟ್ಟಿನಲ್ಲಿ ತಾವು ಬಯಸಿದ ಜೀವನ ಶೈಲಿಯನ್ನು ಪಡೆದುಕೊಳ್ಳಲು ಮೇಲಿಂದ ಮೇಲೆ ಸಾಲವನ್ನು ಮಾಡಬೇಕಾದಂಥ ಈ ಸ್ಥಿತಿಯನ್ನು ಅನೇಕರು ತಲುಪಿದ್ದಾರೆ.

ಒಟ್ಟಿನಲ್ಲಿ ಬಹು ಮೂಲಗಳಿಂದ ಪಡೆದ ವಿವಿಧ ಬಗೆಯ ಸಾಲಗಳನ್ನು ತೀರಿಸುವಂಥ ಪರಿಸ್ಥಿತಿಯಿಂದ ಹೊರ ಬರಲು ಜೀವನದ ಬಹು ಭಾಗವನ್ನು ಅನೇಕರು ಕಳೆಯಬೇಕಾಗುತ್ತದೆ.
 
ಅಮೆರಿಕಾ ದೇಶದ ಹೆಚ್ಚುತ್ತಿರುವ ಸಾಲದ ಹೊರೆಯ ಭಾರ ಹೆಚ್ಚಾಗಿ ಬೀಳುತ್ತಿರುವುದು ರಾಜ್ಯ ಸರ್ಕಾರಗಳ ಮೇಲೆ.

ಕೇಂದ್ರ ಸರ್ಕಾರದಿಂದ ರಾಜ್ಯಗಳೆಡೆ ಹರಿಯುತ್ತಿರುವ ಅನುದಾನದ ಪ್ರಮಾಣದಲ್ಲಿ ಕಡಿತಗಳು ಉಂಟಾದ ಪರಿಣಾಮವಾಗಿ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ.

ಉದಾಹರಣೆಗೆ ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ ತಿಂಗಳ ಪ್ರಾರಂಭದಲ್ಲಿಯೇ 58,000 ಶಾಲಾ ಶಿಕ್ಷಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರೆಂದು ವರದಿಯಾಗಿದೆ. ಹೀಗೆ ಉದ್ಯೋಗಗಳಿಂದ ತೆಗೆದು ಹಾಕಲ್ಪಟ್ಟ ಹತ್ತು ಲಕ್ಷ ಜನ ಟೆಂಟುಗಳಿಗೆ ತಮ್ಮ ವಾಸಸ್ಥಾನಗಳನ್ನು ಬದಲಿಸುವಂಥ ಸ್ಥಿತಿ ಬಂದಿದೆಯಂತೆ.
 
ಈ `ವೇತನರಹಿತ ಸ್ಥಿತಿ~ ಮುಂದುವರೆದರೆ ಇನ್ನೆಷ್ಟು ಮಂದಿ ಬಡತನದ ರೇಖೆಯ ಒಳಗೆ ಸೇರಿಕೊಳ್ಳುತ್ತಾರೋ ಎಂಬ ಅನುಮಾನಗಳು ಇಂದು ವ್ಯಕ್ತವಾಗುತ್ತಿವೆ.
ಅಮೆರಿಕಾ ಇಂದು ಎದುರಿಸುತ್ತಿರುವ ಸಾಲದ ಪರಿಸ್ಥಿತಿಯಿಂದ ಭಯ ಪಡಬೇಕಾದಂಥ ಹಂತವೇನ್ನೇನೂ ತಲುಪಿಲ್ಲ.

ಒಬಾಮಾ ಈಗಾಗಲೇ ಹೊಸ ಉದ್ಯೋಗ ನೀತಿ ಘೋಷಿಸಿ ಅದಕ್ಕೆ ಸಂಸತ್ತಿನ ಒಪ್ಪಿಗೆ ಪಡೆಯುವ ದಾರಿಯಲ್ಲಿದ್ದಾರೆ ಎಂಬ ಅಭಿಪ್ರಾಯ ಕೆಲವು ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ಆದರೆ ಈ ದೇಶದ ಮುಂದೆ ಬಹು ದೊಡ್ಡ ಸವಾಲುಗಳಿದ್ದು ಅವುಗಳನ್ನು ಸಮರ್ಥವಾಗಿ ನಿರ್ವಹಿಸದಿದ್ದಲ್ಲಿ ಈಗ ಪ್ರಾರಂಭವಾಗಿರುವ ಆರ್ಥಿಕ ಹಿನ್ನಡೆಯಿಂದ ಸುಲಭದಲ್ಲಿ ಮುಕ್ತಿ ಸಾಧ್ಯವಿಲ್ಲ ಎನ್ನುವುದು ತಜ್ಞರ ದೃಷ್ಟಿಕೋನ.

ಬೆಲೆ ಏರಿಕೆ ಜೊತೆಜೊತೆಗೆ ಹೆಚ್ಚುತ್ತಿರುವ ತೆರಿಗೆಗಳು ಸೃಷ್ಟಿಸಿರುವ ಸಾಲದ ಭಯದಿಂದ ಜನರನ್ನು ಮುಕ್ತಗೊಳಿಸಿ, ಜೀವನಾವಶ್ಯಕತೆಗಳ ಪೂರೈಕೆಗೆ ಎಲ್ಲ ವರ್ಗಗಳಿಗೂ ಅವಕಾಶ ಮಾಡಿಕೊಡುವುದು ಅಮೆರಿಕಾದ ಮೊದಲ ಆದ್ಯತೆಯಾಗಬೇಕು. 
 
ಈಗಾಗಲೇ ಶೇಕಡ 10 ರಷ್ಟಿರುವ ನಿರುದ್ಯೋಗ ಸ್ಥಿತಿಯಾದ ಹೊರ ಬರಬೇಕಾದರೆ 25 ಲಕ್ಷ ಉದ್ಯೋಗಗಳ ಸೃಷ್ಟಿಯಾಗಬೇಕಿದೆ.

ವಿಶೇಷವಾಗಿ ದೇಶದ ಆರ್ಥಿಕ ಹಿನ್ನಡೆಯ ಹೊಡೆತವನ್ನು ಪ್ರಬಲವಾಗಿ ಎದುರಿಸುತ್ತಿರುವ ಯುವಜನತೆಗೆ ಸಮಾಧಾನಕರವಾದ ಆದಾಯಗಳನ್ನು ತರುವಂಥ ಉದ್ಯೋಗಗಳನ್ನು ವಿಶೇಷವಾಗಿ ಉತ್ಪಾದನೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಒದಗಿಸಬೇಕು ಎಂಬುದು ಒಂದು ಸಮೀಕ್ಷೆಯ ಅಭಿಪ್ರಾಯ.

ಈ ದೇಶದಲ್ಲಿ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಬೇಕಾಗಿರುವುದರಿಂದ, ಅನೇಕ ಕೆಲಸಗಳನ್ನು ಹೊರ ದೇಶಗಳಲ್ಲಿ ಮಾಡಿಸಲಾರಂಭಿಸಿದ್ದೇ ಅಮೆರಿಕಾದ ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣಗಳಲ್ಲೊಂದು ಎಂಬ ಧ್ವನಿ ಇಲ್ಲಿ ಪ್ರಬಲವಾಗಿ ಕೇಳಿ ಬರುತ್ತದೆ.

ಎಲ್ಲಿಯವರೆಗೂ ಸಾಮಾಜಿಕ-ಆರ್ಥಿಕ ಅಸಮಾನತೆಕಡಿಮೆ ಮಾಡದೆ ಸಾಮಾಜಿಕ ಕ್ಷೇತ್ರಕ್ಕೆ ಹೆಚ್ಚಿನ ಆಯವ್ಯಯವನ್ನು ನಿಗದಿ ಪಡಿಸದೆ ತನ್ನ ಪ್ರಾಬಲ್ಯವನ್ನು ಮೆರೆಸುವುದರತ್ತಲೇ ಈ ದೇಶ ಗಮನ ಹರಿಸುತ್ತದೆಯೋ ಅಲ್ಲಿಯವರೆಗೂ `ಅಮೆರಿಕನ್ ಕನಸು~ (ಅಮೆರಿಕನ್ ಡ್ರೀಮ್) ಎಂದು ಎಲ್ಲೆಡೆ ನಾವು ಕೇಳುತ್ತಿರುವ ಘೋಷಣೆ ಅನೇಕರ ಪಾಲಿಗೆ `ದುಃಸ್ವಪ್ನ~ವಾಗಿ ಪರಿಣಮಿಸುವುದರಲ್ಲಿ ಆಶ್ಚರ್ಯವಿಲ್ಲ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT