ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹನೀಯ ಬದುಕಿಗೆ ಬೇಕಾದ ಎಚ್ಚರ

Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದಾಗ ನನ್ನ ಪ್ರಾಧ್ಯಾಪಕರೂ ಮತ್ತು ಹಿತೈಷಿಗಳೂ ಆಗಿದ್ದ ಪ್ರೊ. ಕೆ. ರಾಮದಾಸ್ ಅವರು ಒಮ್ಮೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವೊಂದನ್ನು ಸಂಘಟಿಸುವಂತೆ ಸೂಚಿಸಿದರು. ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕನಸಿನ ಭಾರತದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಸಂವಾದದಲ್ಲಿ ಭಾಗವಹಿಸುತ್ತಿದ್ದ ವಿದ್ಯಾರ್ಥಿ ಮಿತ್ರರಿಗೆ ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ವಿಶೇಷವಾಗಿ ಚರ್ಚಿಸುವಂತೆ ಕಾರ್ಯಕ್ರಮವನ್ನು ಸಂಘಟಿಸುತ್ತಿದ್ದ  ನಾವು ಕೆಲವರು ಹೇಳಿದೆವು. ಅದರಂತೆ ಇಪ್ಪತ್ತೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಪತ್ರಿಕೋದ್ಯಮ, ಪ್ರದರ್ಶನಕಲೆ, ಸಾಹಿತ್ಯ, ಅಧ್ಯಾಪಕ ವೃತ್ತಿ, ರಾಜಕಾರಣ ಹೀಗೆ ಹತ್ತಾರು ವಿಷಯಗಳ ಬಗ್ಗೆ ಅಂದು ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡರು.

ನೂರಾರು ವಿದ್ಯಾರ್ಥಿಗಳು ಹಾಜರಿದ್ದು, 3 ಗಂಟೆ ಕಾಲ ನಡೆದ ಸುದೀರ್ಘ ಚರ್ಚೆಯ ನಂತರ ಪ್ರೊ. ರಾಮದಾಸ್ ಅವರು ಮಾತನಾಡುತ್ತ, ಸರಳವಾದ ಒಂದು ಅಂಶವನ್ನು  ವಿದ್ಯಾರ್ಥಿಗಳಿಗೆ ತಿಳಿಹೇಳಿದರು: ಬೇರೆ ಬೇರೆ ಕ್ಷೇತ್ರಗಳಲ್ಲಿ ನಮ್ಮ ದೇಶ, ಸಮಾಜ ಹೇಗಿರಬೇಕು ಎನ್ನುವುದರ ಬಗ್ಗೆ ಕಲ್ಪನೆಗಳು ನಮ್ಮೊಳಗಿರುವುದು ಸರಿ. ಆದರೆ ಅವು ಯೋಜನೆಗಳ ರೂಪದಲ್ಲಿ, ಭಾಷೆಯಲ್ಲಿ ಮಾತ್ರ ಉಳಿಯಬಾರದು.

ಕನಸುಗಳಿಗೆ ಅವಾಸ್ತವಿಕ ಹುಚ್ಚುತನವಿರುತ್ತದೆ, ರೋಮಾಂಚನವಿರುತ್ತದೆ ಮತ್ತು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಕೆಚ್ಚೆದೆಯಿರುತ್ತದೆ. ಅವುಗಳೊಳಗೆ ಖಾಸಗಿ ಬದುಕಿನ ಆಶಯಗಳಿಗೂ ಜಾಗವಿರುತ್ತದೆ. ಸಾಂಘಿಕ, ಸಾಮಾಜಿಕ ಬದುಕಿನ ಸಾಧ್ಯತೆಗಳ ಬಗ್ಗೆಯೂ ಕಾಳಜಿ, ಬದ್ಧತೆಗಳಿರುತ್ತವೆ. ಭವಿಷ್ಯದ ಬಗ್ಗೆ ಯೋಚಿಸುವಾಗ ಅಂತಹ ಸಾಧ್ಯತೆಗಳನ್ನು ನಾವು ಮರೆಯಬಾರದು, ಬದಲಿಗೆ ಪ್ರಧಾನವಾಗಿ ಮಾಡಿಕೊಳ್ಳಬೇಕು.

ಸುಮಾರು ಎರಡೂವರೆ ದಶಕಗಳಿಗೂ ಹಿಂದೆ ರಾಮದಾಸ್  ನಮಗೆ ಹೇಳಿದ ಮೇಲಿನ ತಿಳಿವಳಿಕೆಯ ಮಾತುಗಳು ನನಗೆ ಮತ್ತೆ ಮತ್ತೆ ನೆನಪಾದುದು ‘ಕರ್ನಾಟಕದ ನಾಳೆಗಳು’ ಸರಣಿ ಲೇಖನಗಳನ್ನು ಅವಲೋಕಿಸುವಾಗ. ಈ ಸರಣಿಯ ಉದ್ದೇಶ ಭಿನ್ನವಾದುದು ಮತ್ತು ವಿಶಿಷ್ಟವಾದುದು ಎನ್ನುವ ಅರಿವು ನನಗಿದೆ.

ಹೊಸದೊಂದು ಕರ್ನಾಟಕವನ್ನು ಕಟ್ಟಲು ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ವಿನೂತನ ಸಾರ್ವಜನಿಕ ನೀತಿಯೇನಿರಬೇಕು ಎನ್ನುವುದನ್ನು ಸಾರ್ವಜನಿಕವಾಗಿ ಚರ್ಚಿಸುವ ಅಪರೂಪದ ಪ್ರಯತ್ನವಿದು. ಬಹುಶಃ ಸಾರ್ವಜನಿಕ ನೀತಿಯ ಮೇಲೆ ಹೆಚ್ಚು ಗಮನವಿರಿಸಿದ್ದರಿಂದಲೇ, ಕನಸುಗಾರಿಕೆಗೆ ಸೀಮಿತ ಅವಕಾಶವಿತ್ತು ಎಂದು ಕಾಣಿಸುತ್ತದೆ. ಈ ಸರಣಿಯಲ್ಲಿ ಉನ್ನತ ಶಿಕ್ಷಣದ ಮೇಲಿನ ಲೇಖನವನ್ನು ಬರೆಯುವಾಗ ನಾನೂ ಸಹ ಪ್ರಜ್ಞಾಪೂರ್ವಕವಾಗಿ ಅನುಭವಿಸಿದ ಅಂಶವಿದು.

ಆದರೂ ಮೇಲಿನ ಪ್ರಸಂಗವನ್ನು ಇಂದು ಪ್ರಸ್ತಾಪಿಸಲು ಒಂದು ನಿರ್ದಿಷ್ಟ ಕಾರಣವಿದೆ. ನನ್ನನ್ನು ಕೆಣಕುತ್ತಿರುವ ಪ್ರಶ್ನೆಯಿದು: ನಮ್ಮ ನಾಳೆಗಳ ಬಗ್ಗೆ ಯೋಚಿಸುವಾಗ ನಮ್ಮ ಚಿಂತನೆಯ ಕೇಂದ್ರದಲ್ಲಿ ಸರ್ಕಾರ, ಪ್ರಭುತ್ವ, ಸಾರ್ವಜನಿಕ ನೀತಿಗಳೇ ಏಕೆ ಪ್ರಧಾನವಾಗಿರುತ್ತವೆ? ಅಂದರೆ ನಮ್ಮ ಭವಿಷ್ನು ರೂಪಿಸುವ ಮುಖ್ಯ ಹೊಣೆಗಾರಿಕೆಯನ್ನು ನಾವು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದೇವೆಯೇ? ಸರಿಯಾದ ಸಾರ್ವಜನಿಕ ನೀತಿಯೊಂದು ರೂಪುಗೊಂಡರೆ, ಸಮೃದ್ಧಿಯ, ನೆಮ್ಮದಿಯ, ಭದ್ರತೆಯ ಬದುಕು ನಮ್ಮದಾಗುತ್ತದೆಯೇ?

ಈ ಪ್ರಶ್ನೆಗಳು ಯಾಕೆ ಮುಖ್ಯವಾಗುತ್ತವೆ ಎಂದರೆ ನಮ್ಮ ಮುಂದಿರುವ ತುರ್ತುಗಳನ್ನು ಹೇಗೆ ಎದುರಿಸಲು ಬಯಸುತ್ತೇವೆ ಎನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳಲು. ಇಂದು ಸರ್ಕಾರ ಹಾಗೂ ಪ್ರಭುತ್ವ ಕೇಂದ್ರಿತ ವ್ಯವಸ್ಥೆಯೊಂದನ್ನು ನಾವು ರೂಪಿಸಿಕೊಂಡಿದ್ದೇವೆ.

ಮೂಢನಂಬಿಕೆಗಳಂತಹ ಸಾಮಾಜಿಕ ಸಮಸ್ಯೆಗಳು, ಉದ್ಯೋಗ ಸೃಷ್ಟಿ ಅಥವಾ ಮೂಲಸೌಕರ್ಯಗಳನ್ನು ಸೃಷ್ಟಿಸುವಂತಹ ಆರ್ಥಿಕ ಸವಾಲುಗಳು, ಸಮಾನತೆ, ಸ್ವಾತಂತ್ರ್ಯಗಳಂತಹ ಸಾಂವಿಧಾನಿಕ ಮೌಲ್ಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ, ಸಮಾಜದ ವಿಭಿನ್ನ ಸಮುದಾಯಗಳ ಸಾಂಸ್ಕೃತಿಕ ನಾಯಕರ ಜನ್ಮದಿನಾಚರಣೆ,  ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಅಭಿವೃದ್ಢಿ ಹಾಗೂ ನಮ್ಮ ಸಾಂಸ್ಕೃತಿಕ ವೈವಿಧ್ಯವನ್ನು ಪೋಷಿಸುವ ಹೊಣೆಗಾರಿಕೆ –  ಈ ಎಲ್ಲ ಗುರಿಗಳನ್ನೂ ಸರ್ಕಾರದ ಸಾರ್ವಜನಿಕ ನೀತಿ ಮೂಲಕವೇ ನಿರ್ವಹಿಸಲು ಬಯಸುತ್ತೇವೆ.

ಹೀಗೆ ಪ್ರಭುತ್ವ ಮತ್ತು ಸರ್ಕಾರ ಕೇಂದ್ರಿತ ವ್ಯವಸ್ಥೆಯೊಂದನ್ನು ನಾವು ಕಟ್ಟಿಕೊಂಡಿರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಅವುಗಳನ್ನು ಮತ್ತೆಂದಾದರೂ ಚರ್ಚಿಸಬಹುದು. ಆದರೆ ಇಂತಹದೊಂದು ವ್ಯವಸ್ಥೆ ನಮ್ಮ ಇಂದಿನ ವಾಸ್ತವ ಎನ್ನುವುದಂತೂ ಖಚಿತ.  ಸಾರ್ವಜನಿಕ ನೀತಿಯೆನ್ನುವುದು ನಮ್ಮ ಭವಿಷ್ಯವನ್ನು ರೂಪಿಸುವ ಬಹುಮುಖ್ಯ ಸಾಧನ ಎನ್ನುವುದನ್ನು ಒಪ್ಪುತ್ತಲೇ ಮತ್ತೆ ಎರಡು ವಿಚಾರಗಳನ್ನು ನಾವು ಗುರುತಿಸಬೇಕು.

ಇವುಗಳಲ್ಲಿ ಮೊದಲನೆಯದು, ಸಾರ್ವಜನಿಕ ನೀತಿ ಕೇಂದ್ರಿತ ವಾಸ್ತವದಿಂದ ಆಗುತ್ತಿರುವ ಅಪಚಾರ, ವಿರೂಪಗಳು(ಡಿಸ್ಟಾರ್ಶನ್)ಯಾವುವು? ಎರಡನೆಯದಾಗಿ, ಸಾರ್ವಜನಿಕ ನೀತಿಯಲ್ಲದೆ, ಭವಿಷ್ಯದ ಕರ್ನಾಟಕವನ್ನು ಕಟ್ಟಿಕೊಳ್ಳಲು ನಮಗೆ ಬೇಕಾಗಿರುವುದೇನು? ಮೊದಲನೆಯ ಪ್ರಶ್ನೆಯನ್ನು ಸ್ವಲ್ಪ ಚರ್ಚಿಸೋಣ.

ಪ್ರಭುತ್ವ ಮತ್ತು ಸರ್ಕಾರಗಳೇ ನಮ್ಮ ಸಾರ್ವಜನಿಕ ಜೀವನದ ಎಲ್ಲ ಆಯಾಮಗಳನ್ನು ಪ್ರಭಾವಿಸುತ್ತಿರುವುದರಿಂದ, ಅವುಗಳ ನಿಯಂತ್ರಣ ಪಡೆಯುವ ಚುನಾವಣಾ ರಾಜಕೀಯ ಪ್ರಕ್ರಿಯೆಗಳೇ ಬಹುಮುಖ್ಯವಾಗಿಬಿಟ್ಟಿವೆ. ಇದರ ಫಲವಾಗಿ, ಕರ್ನಾಟಕದಲ್ಲಿಯೇ ವ್ಯಾಪಕವಾಗಿ ಬೇರುಬಿಟ್ಟಿದ್ದ ಸಾಮಾಜಿಕ ಚಳವಳಿಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ.

ರೈತ ಚಳವಳಿ, ದಲಿತ ಸಂಘಟನೆಗಳು, ಭಾಷಾ ಮತ್ತು ಮಹಿಳಾ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದವರು ಇಂದು ರಾಜಕೀಯ ಅಧಿಕಾರ ಗಳಿಸುವುದು ಹೆಚ್ಚು ಮೌಲಿಕವಾದುದು ಎಂದು ನಂಬುತ್ತಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಭರವಸೆ ಮೂಡಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ವಿಚಾರದಲ್ಲಿಯೂ ಸತ್ಯ.

ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದರಿಂದ ಮಾತ್ರ ನಮ್ಮ ಭವಿಷ್ಯವನ್ನು ರೂಪುಗೊಳಿಸಿಕೊಳ್ಳುವ ಸಾಮರ್ಥ್ಯ ಲಭ್ಯವಾಗುತ್ತದೆ ಎಂಬ ನಂಬಿಕೆ ಆಳವಾಗಿ ಬೇರುಬಿಟ್ಟಿದೆ.ಇದು ಒಂದು ಬಗೆಯ ವಿರೂಪವೆಂದು ಗುರುತಿಸಲೇಬೇಕು. ನಾವು ನಿರೀಕ್ಷಿಸುವ ಬದಲಾವಣೆಗಳನ್ನು ಸಾಮಾಜಿಕ ಚಳವಳಿಗಳ ಮೂಲಕ, ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಾಧಿಸುವುದು ಸಾಧ್ಯ ಮತ್ತು ಅರ್ಥಪೂರ್ಣ ಎನ್ನುವುದನ್ನು ಮರೆಯಬಾರದು. ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಾಗಿರುವ ಬಹುತೇಕ ಬದಲಾವಣೆಗಳನ್ನು ಸಾಮಾಜಿಕ ಚಳವಳಿಗಳು ಸಾಧಿಸಿವೆ ಎನ್ನುವ ಐತಿಹಾಸಿಕ ಎಚ್ಚರವನ್ನು ಕಳೆದುಕೊಳ್ಳಬಾರದು.

ನಾನು ಮೇಲೆ ಎತ್ತಿದ ಎರಡನೆಯ ಪ್ರಶ್ನೆಯು ಸಾರ್ವಜನಿಕ ನೀತಿಯ ಜೊತೆಗೆ ಭವಿಷ್ಯದ ಕರ್ನಾಟಕವನ್ನು ಕಟ್ಟಲು ನಮಗೇನು ಬೇಕು ಎನ್ನುವುದಾಗಿತ್ತು. ಈ ಪ್ರಶ್ನೆಯನ್ನು ಕೇಳಿಕೊಳ್ಳಲು ಕಾರಣವೊಂದಿದೆ. ಸಾಮಾನ್ಯವಾಗಿ ನಮ್ಮ ಚರ್ಚೆಗಳಲ್ಲಿ ಉತ್ತಮ ನೀತಿಯನ್ನು ರೂಪಿಸಿ, ಅದನ್ನು ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿಯಿದ್ದರೆ ಸಾಕು ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ ಎನ್ನುವ ನಂಬಿಕೆಯೊಂದಿದೆ. ನನ್ನ ದೃಷ್ಟಿಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೆಂಬ ವಿವರಣೆ ಅರ್ಥಹೀನವಾದುದು. ಯಾಕೆಂದರೆ ನಮ್ಮ ಭವಿಷ್ಯವನ್ನು ರೂಪಿಸುವ ಸವಾಲುಗಳು ಸಂಕೀರ್ಣವಾದವುಗಳು ಮತ್ತು ಇಚ್ಛಾಶಕ್ತಿಗಿಂತ ಮಹತ್ತರವಾದ ಪರಿಹಾರಗಳನ್ನು ನಿರೀಕ್ಷಿಸುತ್ತವೆ.  

ಹಾಗಾದರೆ ನಮಗೇನು ಬೇಕು ಎನ್ನುವ ಪ್ರಶ್ನೆಗೆ ಸ್ವಲ್ಪ ಮಟ್ಟಿಗಿನ ಅವಾಸ್ತವಿಕವಾದ ಕನಸುಗಾರಿಕೆಯ ಪ್ರಯೋಗ ಮಾಡಿದರೆ, ಕೆಳಗಿನ ಮೂರು ಅಂಶಗಳು ನನ್ನ ಮನಸ್ಸಿಗೆ ಗೋಚರಿಸುತ್ತವೆ. ಮೊದಲಿಗೆ, ಹೊಸಬಗೆಯ ಸಾರ್ವಜನಿಕ ಸಂಸ್ಕೃತಿಯೊಂದು ನಮ್ಮ ಮೊದಲ ತುರ್ತು ಅಗತ್ಯವೆಂದರೆ ತಪ್ಪಾಗಲಾರದು. ಇಂತಹ ಸಂಸ್ಕೃತಿ ನಮ್ಮೆಲ್ಲರೊಳಗಿರುವ ಭ್ರಷ್ಟತೆಯನ್ನು ತೊಡೆಯುವ ನೈತಿಕತೆಯನ್ನು ಹೊಂದಿರಬೇಕು. ಇದು ನಮ್ಮ ಪ್ರತಿದಿನದ ಬದುಕಿನ ಎಲ್ಲ ಆಯಾಮಗಳಲ್ಲಿ ಜನಸಾಮಾನ್ಯರಿಂದ ಅಧಿಕಾರಸ್ಥರವರಗೆ ಎಲ್ಲರಿಂದ ಆಗುತ್ತಿರುವ ಉಲ್ಲಂಘನೆಗಳು ನಾವೆಲ್ಲರೂ ಈ ನಾಡಿನಲ್ಲಿ ಜೊತೆಗೆ ಬದುಕುವ ಪಾಲುದಾರರು ಎನ್ನುವ ಭಾವನೆಯನ್ನೇ ತೊಡೆದುಹಾಕುತ್ತಿವೆ.

ಒಂದೆರಡು ಸರಳ ಉದಾಹರಣೆಗಳಿಗೆ, ರಸ್ತೆ ಸಂಚಾರದ ನಿಯಮಗಳನ್ನು ಉಲ್ಲಂಘಿಸುವವರನ್ನು ಅಥವಾ ಮನಬಂದಂತೆ ನಮ್ಮ ನಗರಗಳಲ್ಲಿ ಖಾಸಗಿ ಬಳಕೆಗೆ ಬೋರ್‌ವೆಲ್ ತೋಡಿಸುವವರನ್ನು ಅಥವಾ ಜಾತಿಕೇಂದ್ರಿತ ಬದುಕು ಕಟ್ಟಿಕೊಳ್ಳುವವರನ್ನು ಪರಿಗಣಿಸಿ. ಹೀಗಾದಾಗ, ಕರ್ನಾಟಕದ ಸಮುದಾಯವೆಂಬ ಪರಿಕಲ್ಪನೆಯೊಂದು ಕುಸಿಯುತ್ತದೆಯಲ್ಲದೆ ಅದಕ್ಕೆ ಅಡಿಪಾಯವಾಗಿರುವ ನೈತಿಕತೆಯೂ ನಶಿಸುತ್ತದೆ.

ಎರಡನೆಯದಾಗಿ, ಎಲ್ಲ ಬಗೆಯ ವಿರೂಪಗಳನ್ನೂ ಸಹಿಸಿಕೊಳ್ಳುವ ನಮ್ಮ ತಾಳ್ಮೆಯನ್ನು ಕೊನೆಗೊಳಿಸುವ ಕಾಲ ಬಂದಿದೆ. ನಮಗಿಂದು ಯಾವ ಬಗೆಯ ವಿರೂಪವೂ, ಅಪಚಾರವೂ ಕೋಪ ಬರಿಸುತ್ತಿಲ್ಲ. ನಮ್ಮ ನೈಸರ್ಗಿಕ ಸಂಪನ್ಮೂಲಗಳ ಲೂಟಿಯಾಗಲಿ, ನೇಮಕಾತಿಗಳಲ್ಲಿನ ಭ್ರಷ್ಟತೆಯಾಗಲಿ, ಮೂಲಭೂತ ಸರ್ಕಾರಿ ಸೌಕರ್ಯಗಳು ಸರಿಯಾಗಿ ದೊರಕದಿರುವುದು, ಬೆಳೆಯುತ್ತಿರುವ ಅಸಮಾನತೆಯಾಗಲಿ ಇವು ಯಾವೂ ನಮಗೆ ಅಸಹನೀಯವೆನಿಸುತ್ತಿಲ್ಲ.

ಈ ತಾಳ್ಮೆಯೆನ್ನುವುದು ಕಳೆದ ಎರಡು ದಶಕಗಳಲ್ಲಿ, ಸಾಮಾಜಿಕ ಚಳವಳಿಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಂತೆ, ನಾವು ಬೆಳೆಸಿಕೊಂಡಿರುವ ಹೊಸ ಗುಣ. ನಾನು ಮೇಲೆ ಉಲ್ಲೇಖಿಸಿದ ಪ್ರೊ. ರಾಮದಾಸ್ ಅವರು ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ ಬಹುಮುಖ್ಯ ಪಾಠವೆಂದರೆ ಯಾವುದನ್ನು ಸಹಿಸಬಾರದು ಎನ್ನುವುದು.

ಇಂದು ಕರ್ನಾಟಕದಲ್ಲಿ ಪ್ರತಿಭಟನೆ, ಹೋರಾಟಗಳು ತಮಿಳರಿಗೆ ನೀರು ಬಿಡಲು ಹೇಳಿದಾಗ ಮಾತ್ರ ಎನ್ನುವಂತಾಗಿದೆ. ಯಾವುದನ್ನು ಸಹಿಸಬಾರದು ಎನ್ನುವ ಎಚ್ಚರ ಸಹನೀಯವಾದ ಬದುಕುಗಳನ್ನು ನಮ್ಮ ನಗರ, ಹಳ್ಳಿಗಳಲ್ಲಿ ಕಟ್ಟಿಕೊಳ್ಳಲು ಅಗತ್ಯವಿರುವ ಹೊಸಬಗೆಯ ಸಾಮಾಜಿಕ ಚಳವಳಿಗಳಿಗೆ ದಾರಿ ಮಾಡಿಕೊಡಬಲ್ಲದು.

ಕಡೆಯದಾಗಿ, ಹೊರಗಿನ ಪ್ರಪಂಚದ ಜೊತೆಗಿನ ನಮ್ಮ ಅನುಸಂಧಾನವು ಹೆಚ್ಚು ಚುರುಕು ಮತ್ತು ರಚನಾತ್ಮಕವಾದುದಾಗಬೇಕಿದೆ. ಅಂದರೆ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಉಪಯುಕ್ತವಾಗಬಲ್ಲ ಸಂಪನ್ಮೂಲಗಳು, ತಂತ್ರಜ್ಞಾನಗಳನ್ನು ಚುರುಕಾಗಿ ಗುರುತಿಸಿ ಬಳಸಿಕೊಳ್ಳಬೇಕಿದೆ. ನೀರಿನ ಸಮರ್ಪಕ ಬಳಕೆ, ಸುಗಮವಾದ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ, ನಗರೀಕರಣ - ಹೀಗೆ ಯಾವುದೇ ವಲಯದಲ್ಲಾಗಲಿ ಜಾಗತಿಕವಾಗಿ ಯಾವ ಬಗೆಯ ಪ್ರಯೋಗಗಳು ನಡೆಯುತ್ತಿವೆ ಎನ್ನುವುದು ತಕ್ಷಣದಲ್ಲಿಯೇ ನಮ್ಮ ಸಾರ್ವಜನಿಕ ಪ್ರಜ್ಞೆಯ ಅಂಗವಾಗಬೇಕು.

ನೈಸರ್ಗಿಕ ಸಂಪನ್ಮೂಲಗಳಲ್ಲಿ ಹಾಗೂ ಸಾಂಸ್ಕೃತಿಕ ಪರಂಪರೆಗಳೆರಡರಲ್ಲೂ ಶ್ರೀಮಂತವಾಗಿರುವ ಕರ್ನಾಟಕದಲ್ಲಿ ಎದ್ದುಕಾಣುವುದು ಸಮೃದ್ಧಿ ಸಾಧ್ಯತೆಗಳು. ಆ ಸಾಧ್ಯತೆಗಳನ್ನು ಸಾಕಾರಗೊಳಿಸಿಕೊಳ್ಳಲು ಸಾರ್ವಜನಿಕ ನೀತಿಯೊಂದೇ ಸಾಲದು. ರಾಜ್ಯದ ನಾಗರಿಕ ಸಮಾಜವು ಸಹ ಹೊಸದಾದ ಸಾರ್ವಜನಿಕ ಸಂಸ್ಕೃತಿ, ನೈತಿಕತೆಗಳನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಎದ್ದುಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT