ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾರನ್‌ಪುರದಲ್ಲಿ ಸೈರಣೆ ತಪ್ಪಿದ ಚಮ್ಮಾರರು

Last Updated 29 ಮೇ 2017, 5:55 IST
ಅಕ್ಷರ ಗಾತ್ರ

ಮೊನ್ನೆ ಉತ್ತರಪ್ರದೇಶದ ಸಹಾರನ್‌ಪುರ ಜಿಲ್ಲೆಯ 180 ದಲಿತ ಕುಟುಂಬಗಳು ಕಾಲುವೆಯೊಂದರ ಬಳಿ ಗುಂಪುಗೂಡಿ ಹಿಂದೂ ದೇವ ದೇವತೆಗಳ ಮೂರ್ತಿಗಳನ್ನು ನೀರಿಗೆ ವಿಸರ್ಜಿಸಿ ಕೈತೊಳೆದುಕೊಂಡರು. ತಮ್ಮನ್ನು ಘನತೆಯಿಂದ ನಡೆಸಿಕೊಳ್ಳದೆ ಗುಲಾಮರಂತೆ ಕಾಣುವ ಧರ್ಮ ಮತ್ತು ಅದರ ತಥಾಕಥಿತ ಮೇಲ್ಜಾತಿಗಳ ಸಹವಾಸ ಬೇಡವೆಂದು ಸಿಡಿದು ನಿಂತರು. ಸದ್ಯದಲ್ಲೇ ಬೌದ್ಧ ದೀಕ್ಷೆ ಸ್ವೀಕರಿಸುವ ಸಂಕಲ್ಪ ಅವರದು. ರಜಪೂತರ ಹಲ್ಲೆ, ಆಕ್ರಮಣಗಳು ನಿಲ್ಲದೆ ಹೋದರೆ ಮತ್ತು ಈ ದಬ್ಬಾಳಿಕೆಯನ್ನು ಎದುರಿಸಿ ನಿಂತ ‘ಭೀಮ್ ಆರ್ಮಿ’ಯ ಮೇಲೆ ಪೊಲೀಸರ ಏಕಪಕ್ಷೀಯ ಕ್ರಮ ಕೊನೆಗೊಳ್ಳದೆ ಹೋದರೆ ಹಿಂದೂ ಧರ್ಮ ತೊರೆಯದೆ ತಮಗೆ ಬೇರೆ ದಾರಿಯೇ ಇಲ್ಲ ಎನ್ನತೊಡಗಿದ್ದಾರೆ ದಲಿತರು.

ಸಣ್ಣಪುಟ್ಟ ಘಟನೆಗಳನ್ನೇ ದೊಡ್ಡದು ಮಾಡಿ ಜಾತಿಯ ಬಣ್ಣ ಬಳಿಯುವ ದಲಿತರ ಚಾಳಿ ಕೊನೆಯಾಗದೆ ಹೋದರೆ ತಾವು ಮುಸಲ್ಮಾನ್ ಧರ್ಮ ಸ್ವೀಕರಿಸುವುದಾಗಿ ರಜಪೂತರೂ ಬೆದರಿಕೆ ಹಾಕಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಇದೇ ರಜಪೂತ ಕುಲಕ್ಕೆ ಸೇರಿದವರು. ಹೀಗಾಗಿ ಎದೆಯುಬ್ಬಿಸಿರುವ ರಜಪೂತರು, ತೋಳೇರಿಸಿ ಕಾಲು ಕೆದರಿದ್ದಾರೆ. ಸಹಾರನ್‌ಪುರ ಜಿಲ್ಲೆಯ ಶಬ್ಬೀರಪುರ ಗ್ರಾಮದ ದಲಿತರ ಮೇಲೆ ರಜಪೂತರು ವ್ಯವಸ್ಥಿತ ದಾಳಿ ನಡೆಸಿದ್ದಾರೆ. ಪೊಲೀಸರ ಬೆಂಬಲದಿಂದ ನಡೆದಿರುವ ಈ ಕ್ರೂರ ಹಲ್ಲೆಗಳ ಸರಣಿಯು ದಲಿತ ಯುವಜನರನ್ನು ಬಲುವಾಗಿ ಕೆರಳಿಸಿದೆ.

ದಿಲ್ಲಿಯಿಂದ 180 ಕಿ.ಮೀ. ದೂರದ ಸಹಾರನ್‌ಪುರ ಸನಿಹದ ಶಬ್ಬೀರಪುರ ಗ್ರಾಮದ ರಜಪೂತರು ನೆರೆಹೊರೆಯ ಕುಲಬಾಂಧವರ ಜೊತೆಗೂಡಿ ರಾಣಾಪ್ರತಾಪ ಉತ್ಸವದ ಮೆರವಣಿಗೆ ತೆಗೆದಿದ್ದರು. ಡಾ.ಅಂಬೇಡ್ಕರ್ ಮತ್ತು ಸಂತ ರವಿದಾಸರ ಪ್ರತಿಮೆಗಳ ಮಂದಿರ ಉಳ್ಳ ದಲಿತ ವಸತಿಯ ಕಿಲೊಮೀಟರು ದೂರ ಕಿವಿಗಡಚಿಕ್ಕುವ ಅಬ್ಬರದ ಸಂಗೀತ ವ್ಯವಸ್ಥೆಯನ್ನು ಟ್ರ್ಯಾಕ್ಟರ್ ಅಥವಾ ಟ್ರಕ್ ಮೇಲೆ ಒಯ್ಯುವುದು ಉತ್ತರ ಭಾರತದ ಮೆರವಣಿಗೆಗಳ ರೂಢಿ. ಹಳ್ಳಿ ಪ್ರದೇಶಗಳಲ್ಲೂ ಡೀಜೆ (ಡಿಸ್ಕೊ ಜಾಕೀಯಿಂಗ್) ಎಂದೇ ಈ ಸಂಗೀತ ವ್ಯವಸ್ಥೆ ಜನಜನಿತ. ಅಂದು ಶಬ್ಬೀರಪುರದ ರಜಪೂತರ ಮೆರವಣಿಗೆ ನೆರೆಹೊರೆಯ ಗ್ರಾಮಗಳ ತಮ್ಮದೇ ಕುಲಬಾಂಧವರತ್ತ ಸಾಗಿತ್ತು. ಸಂಗೀತದ ಅಬ್ಬರವನ್ನು ತಗ್ಗಿಸುವಂತೆ ಮೆರವಣಿಗೆಕಾರರಿಗೆ ಮನವಿ ಮಾಡಿದರು ದಲಿತರು. ಪೊಲೀಸ್ ಹಸ್ತಕ್ಷೇಪದ ನಂತರ ಸಂಗೀತದ ಅಬ್ಬರ ಅಡಗಿತು.

ಇದನ್ನು ತಮ್ಮ ಕುಲಕ್ಕೆ ಮತ್ತು ರಾಣಾಪ್ರತಾಪ್‌ಗೆ ಆದ ಅವಮಾನವೆಂದು ಬಗೆದರು ರಜಪೂತರು. ಗುಂಪು ಸೇರಿಸಿ ತಲವಾರುಗಳು, ಬಂದೂಕುಗಳು, ಕಲ್ಲುಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿದರು. ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿದರು. ರವಿದಾಸರ ಪ್ರತಿಮೆ ಉರುಳಿಸಿ ಮೂತ್ರ ವಿಸರ್ಜಿಸಿದರು. ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು. ಅಂಬೇಡ್ಕರ್ ಪಟಗಳು, ಪುಸ್ತಕಗಳು, ಒಲೆ ಮೇಲಿನ ಅಡುಗೆ, ಕಾಳುಕಡ್ಡಿಗಳು, ಮೋಟಾರ್ ಸೈಕಲ್, ಟಿ.ವಿ ಸೆಟ್ಟುಗಳನ್ನು ಸುಟ್ಟು ಹಾಕಿದರು.  ಅಡ್ಡ ಬಂದವರ ಮೇಲೆ ತಲವಾರು ಬೀಸಿದರು. ಬಂದೂಕಿನ ಗುಂಡುಗಳು ಸಿಡಿದವು ಕೂಡ. ಮೂಕ ಜಾನುವಾರುಗಳನ್ನೂ ಬಿಡದೆ ಥಳಿಸಿದರು. ಹೆಣ್ಣುಮಕ್ಕಳ ಬಟ್ಟೆ ಹರಿದರು. ಸ್ತನ ಕತ್ತರಿಸುವ ಪ್ರಯತ್ನಗಳಲ್ಲಿ ಗಾಯಗೊಂಡವರ ಗಾಯಗಳು ಇನ್ನೂ ಹಸಿ ಹಸಿ. ಹಲ್ಲೆಕೋರರಿಂದ ರಕ್ಷಿಸಲು ಮಕ್ಕಳನ್ನು ಮಂಚಗಳೊಳಗೆ ಮುಚ್ಚಿಡಲಾಯಿತು. ತಲವಾರುಗಳಿಂದ ಕೊಯ್ದ ಮತ್ತು ಲಾಠಿ ಪೆಟ್ಟುಗಳು ಮೈ ಮೇಲೆ ಇಲ್ಲದ ಹೆಣ್ಣುಮಕ್ಕಳ್ಯಾರೂ ಆ ಗ್ರಾಮದಲ್ಲಿ ಉಳಿಯಲಿಲ್ಲ.

ಸತತ ನಾಲ್ಕು ತಾಸುಗಳ ಕಾಲ ನಡೆದ ರಕ್ತದಾಹದ ರಣಕುಣಿತಕ್ಕೆ ಪೊಲೀಸರ ಸಂಪೂರ್ಣ ‘ಸಹಕಾರ’ವಿತ್ತು. ಅಂಬೇಡ್ಕರ್‌ಗೆ ಧಿಕ್ಕಾರ, ಜೈ ಶ್ರೀರಾಮ್, ಜೈ ರಾಣಾ ಪ್ರತಾಪ್ ಘೋಷಣೆಗಳು ಗಡಚಿಕ್ಕಿದವು. ದಲಿತ ಹೆಣ್ಣುಮಕ್ಕಳನ್ನು ಬೆದರಿಸಿ ಅವರಿಂದ ‘ಜೈ ಬೋಲೋ ರಾಜಪುತಾನಾ’ ಘೋಷಣೆ ಕೂಗಿಸಲಾಯಿತು. ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳನ್ನು ಕಡಿದು ಹಾಕಲಾಯಿತು. ಹಲ್ಲೆಕೋರರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕೆಂಬ ದಲಿತರ ಆಗ್ರಹಕ್ಕೆ ಜಿಲ್ಲಾಡಳಿತ ಕಿವುಡಾಯಿತು.

‘ಭೀಮ್ ಆರ್ಮಿ’ ಎಂಬ ಯುವ ದಲಿತ ಸಂಘಟನೆಯ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಮಾಯಾವತಿಯವರ ರ‍್ಯಾಲಿಯಿಂದ ಹಿಂದಿರುಗತೊಡಗಿದ್ದ ದಲಿತರ ಮೇಲೆ ರಜಪೂತರು ನಡೆಸಿದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ದಲಿತರು ಮೇರಠ್‌ನ ಆಸ್ಪತ್ರೆಗಳಲ್ಲಿ ಮಲಗಿದ್ದಾರೆ. ರಜಪೂತ, ದಲಿತ ಯುವಕರಿಬ್ಬರು ಮಡಿದಿದ್ದಾರೆ. ಬಿಹಾರವನ್ನು ಜಂಗಲ್ ರಾಜ್ ಎಂದು ಹೀಗಳೆಯುವವರು ಉತ್ತರಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಮುರಿದುಬಿದ್ದಿದ್ದ ಈ ಘಟನೆ ಕುರಿತು ಬಾಯಿ ಹೊಲಿದುಕೊಂಡಿದ್ದಾರೆ.

ಶಬ್ಬೀರಪುರದ ದಲಿತರಿಗೆ ಬೇಕೆಂದೇ ರಕ್ಷಣೆ ನೀಡದೆ ದಲಿತರು ಮತ್ತು ಅವರ ರಕ್ಷಣೆಗೆ ನಿಂತ ಭೀಮ್ ಆರ್ಮಿಯ ಮೇಲೆ ಸೇಡಿನ ಏಕಪಕ್ಷೀಯ ಕ್ರಮ ಜರುಗಿದೆಯೆಂದು ವಿರೋಧಿಸಿ ದಿಲ್ಲಿಯ ಜಂತರ್ ಮಂತರ್ ಪ್ರದೇಶದಲ್ಲಿ ದಲಿತರ ಭಾರೀ ಪ್ರತಿಭಟನೆ ನಡೆಯಿತು. ಹಠಾತ್ತನೆ ಪ್ರಚಾರದ ಮುಂಬೆಳಕಿಗೆ ಬಂದಿರುವ ‘ಭೀಮ್ ಆರ್ಮಿ’ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್ ರಾವಣ್ ಬಂಧನಕ್ಕೆ ವಾರಂಟ್ ಹೊರಟಿತು. ‘ಜೈ ಗ್ರೇಟ್ ರಾಜಪುತಾನಾ’ ಘೋಷಣೆಗೆ ಪ್ರತಿಯಾಗಿ ‘ಜೈ ಗ್ರೇಟ್ ಚಮಾರ್’ ಪ್ರತಿರೋಧ ಎದ್ದಿದೆ ಪಶ್ಚಿಮೀ ಉತ್ತರಪ್ರದೇಶದಲ್ಲಿ. ಜೊತೆಗೆ ಗುಡುಗುಡಿಸುವ ರಾಯಲ್ ಎನ್ಫೀಲ್ಡ್ ಸವಾರಿ ಮಾಡುವ ಭೀಮ್ ಆರ್ಮಿ.

ದಿನ ಬೆಳಗಾಗುವುದರಲ್ಲಿ ಚಂದ್ರಶೇಖರ್ ಆಜಾದ್‌ ಎಂಬ ಹೊಸ ದಲಿತ ನಾಯಕ ಉದಯಿಸಿದ್ದಾರೆ. ಗುಜರಾತಿನ ಜಿಗ್ನೇಶ್ ಮೇವಾನಿ ಜೊತೆಗೆ ಹೊಮ್ಮಿ ಬಂದಿರುವ ಹೊಸ ತಲೆಮಾರಿನ ಮತ್ತೊಬ್ಬ ದಲಿತ ತಾರೆ ಎಂದು ಆಜಾದ್ ಅವರನ್ನು ಬಣ್ಣಿಸಲಾಗುತ್ತಿದೆ. ದಲಿತ ನಾಯಕತ್ವಕ್ಕೆ ಮಂಕು ಬಡಿದಿರುವ ಮೋದಿ ಯುಗದಲ್ಲಿ ಪರಂಪರಾಗತ ದಲಿತ ಪ್ರತಿರೋಧದ ರಾಜಕಾರಣ ತಳೆಯುತ್ತಿರುವ ಹೊಸ ರೂಪ ಗಮನಾರ್ಹ. ಮೇವಾನಿ ಮತ್ತು ಆಜಾದ್ ಚುನಾವಣಾ ರಾಜಕಾರಣಕ್ಕೆ ಧುಮುಕುವ ಕುರಿತು ತಮ್ಮ ನಿಲುವು ನಿಚ್ಚಳಗೊಳಿಸಿಲ್ಲ. ಆದರೆ ಭವಿಷ್ಯದ ದಿನಗಳಲ್ಲಿ ಅಂತಹ ರಾಜಕಾರಣ ಅಪಥ್ಯವೇನೂ ಅಲ್ಲ ಎಂದಿದ್ದಾರೆ ಆಜಾದ್.

ಮೂರು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಗಳು ನಡೆದಾಗ ಪಶ್ಚಿಮ ಉತ್ತರಪ್ರದೇಶದ ಈ ನೆಲದಲ್ಲಿ ಬಿಜೆಪಿಗೆ ನೆಲೆಯಿರಲಿಲ್ಲ. ಮೋದಿ ನಾಮಬಲ ಮತ್ತು ಹಿಂದೂ-ಮುಸ್ಲಿಂ ಧ್ರುವೀಕರಣದ ಬೀಜ ಬಿತ್ತಿ ಭರ್ಜರಿ ಫಸಲು ಕಟಾವು ಮಾಡಿತ್ತು. ದೆಹಲಿ ಗಡಿಯ ಘಾಜಿಯಾಬಾದಿನಿಂದ ಶುರುವಾಗುವ ಪಶ್ಚಿಮ ಉತ್ತರಪ್ರದೇಶದ  ತುತ್ತ ತುದಿಯ ಸಹಾರನ್‌ಪುರದ ಸೀಮೆಯಲ್ಲಿ ಆರಂಭ ಆದ ಬಿಜೆಪಿ ಜೈತ್ರಯಾತ್ರೆ ಉತ್ತರಪ್ರದೇಶದ ಇತರೆ ಭಾಗಗಳಿಗೂ ವ್ಯಾಪಿಸಿತ್ತು. ಮುಜಫ್ಫರನಗರ- ಶಾಮ್ಲಿಯ ಕೋಮುವಾದಿ ಕಾಳ್ಗಿಚ್ಚು ಒಂದಲ್ಲ ಒಂದು ಬಗೆಯಲ್ಲಿ ಇಡೀ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಉತ್ತರಪ್ರದೇಶವನ್ನು ಗೆದ್ದವರು ದಿಲ್ಲಿಯನ್ನು ಆಳುತ್ತಾರೆ ಎಂಬ ಪ್ರತೀತಿ ನಿರಾಧಾರ ಅಲ್ಲ. ಅಧಿಕಾರದ ಹಾವು-ಏಣಿಯಾಟದ ಸೋಲು ಗೆಲುವುಗಳನ್ನು ನಿರ್ಧರಿಸುವ ಹಾವು- ಏಣಿಗಳು ಇಲ್ಲಿ ಕಾಲ ಕಾಲಕ್ಕೆ ರೂಪ ತಳೆಯುತ್ತವೆ. ಕಮಂಡಲ, ಮಂಡಲ ಹಾಗೂ ದಲಿತ ಅಸ್ಮಿತೆಯ ರಾಜಕಾರಣ ಸ್ಫುಟಗೊಂಡು ಪಸರಿಸಿದ್ದು ಇಲ್ಲಿಂದಲೇ.

ಕಬ್ಬು ಬೆಳೆಯುವ ಬೆಲ್ಲ-ಸಕ್ಕರೆಯ ಸಿಹಿ ಸೀಮೆ ಪಶ್ಚಿಮೀ ಉತ್ತರಪ್ರದೇಶ. ಕಣ್ಣು ಹರಿದಷ್ಟು ದೂರಕ್ಕೆ ಚಾಚಿ ಹಬ್ಬಿದ ಕಬ್ಬಿನ ಗದ್ದೆಗಳು. ನಡು ನಡುವೆ ಸಣ್ಣ ಪುಟ್ಟ ಸಾಸಿವೆ ಹೊಲಗಳು.  ತಲಾದಾಯದ ವಿಚಾರದಲ್ಲಿ ನೆರೆಯ ಹರಿಯಾಣ- ಪಂಜಾಬನ್ನೂ ಮೀರಿಸಿದ ಹಸಿರು ಕ್ರಾಂತಿ. ಉತ್ತರಪ್ರದೇಶದ ಉಳಿದ ಸೀಮೆಗಳನ್ನು ಕಾಡುವ ಬಡತನ ಇಲ್ಲಿ ಕಾಣುವುದಿಲ್ಲ. ದಾರಿದ್ರ್ಯದಲ್ಲಿ ಮುಳುಗಿದ ಪೂರ್ವ ಉತ್ತರಪ್ರದೇಶಕ್ಕೆ ತದ್ವಿರುದ್ಧ ಚಿತ್ರ ಇಲ್ಲಿಯದು. ದಶಕಗಳ ಹಿಂದೆಯೇ ಪ್ರತ್ಯೇಕ ರಾಜ್ಯದ ಬೇಡಿಕೆ ಇರಿಸಿದ್ದರು ಇಲ್ಲಿಯ ಜನ. ಪಶ್ಚಿಮ ಉತ್ತರಪ್ರದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ದಲಿತರು ಮತ್ತು ಮುಸಲ್ಮಾನರ ಆರ್ಥಿಕ ಸ್ಥಿತಿಗತಿ ರಾಜ್ಯದ ಇತರೆ ಭಾಗಗಳಿಗಿಂತ ಉತ್ತಮ. ಹಿಂದುತ್ವವಾದಿ ರಾಜಕಾರಣದ ಪಾಲಿಗೆ ಈ ಎರಡೂ ಜನಸಮುದಾಯಗಳು ಪರಂಪರಾಗತ ಹಗೆಗಳು.

ಕೋಮುವಾದಿ ರಾಜಕಾರಣದ ಈ ಪ್ರಯೋಗಶಾಲೆಯಲ್ಲಿ ಇದೀಗ ಸವರ್ಣೀಯರು-ದಲಿತರ ನಡುವಣ ಕದನ ಕಾಲು ಕೆದರಿದೆ. ಹೊಲ ಮನೆ ಎರಡೂ ಉಳ್ಳ ದಲಿತರು ಶೈಕ್ಷಣಿಕವಾಗಿಯೂ ಹಿಂದೆ ಬಿದ್ದಿಲ್ಲ. ಶಬ್ಬೀರಪುರದ ಸನಿಹದ ಘರ್ಕೋಲಿ ಗ್ರಾಮದ ಉದಾಹರಣೆಯನ್ನು ನೋಡಬಹುದು. ಇಪ್ಪತ್ತು ವರ್ಷಗಳ ಹಿಂದೆ ಈ ಹಳ್ಳಿಯ ದಲಿತರ ಬಳಿ ಇದ್ದದ್ದು ಒಂದೆರಡು ಮೋಟರ್ ಸೈಕಲ್‌ಗಳು ಮಾತ್ರ. ಈಗ ಕನಿಷ್ಠ ಐದು ಕಾರುಗಳು, ಐದು ಟ್ರ್ಯಾಕ್ಟರುಗಳು, 75 ಮೋಟರ್ ಸೈಕಲ್‌ಗಳಿವೆ. ತಮ್ಮ ವಿಮೋಚನೆಯ ಹರಿಕಾರ ಅಂಬೇಡ್ಕರ್ ಅವರಿಗಾಗಲಿ, ಬಹು ಕಾಲದ ನಂತರ ಆತ್ಮಸ್ಥೈರ್ಯ ತುಂಬಿದ ಮಾಯಾವತಿ ಅವರಿಗಾಗಲಿ ಆಗುವ ಅವಮಾನಗಳನ್ನು ತಮ್ಮ ಅವಹೇಳನವೆಂದೇ ಭಾವಿಸಿ ಕಾದಾಡುವವರು ಪಶ್ಚಿಮ ಉತ್ತರಪ್ರದೇಶದ ದಲಿತರು. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರು.

ಮುಂಬರುವ ದಿನಗಳಲ್ಲಿ ಈ ಭೂಭಾಗ ದೇಶದ ದಲಿತ ರಾಜಕಾರಣದ ಕೇಂದ್ರಬಿಂದುವಾಗಿ ಹೊಮ್ಮಿದರೆ ಆಶ್ಚರ್ಯವಿಲ್ಲ ಎನ್ನುತ್ತಾರೆ ಸಮಾಜ ಶಾಸ್ತ್ರಜ್ಞರು. ಜನಸಂಖ್ಯೆಯ ಶೇ 21ರಷ್ಟಿರುವ ದಲಿತ ಮತಗಳು ಮಾಯಾವತಿಯವರ ಭದ್ರ ಬ್ಯಾಂಕ್ ಠೇವಣಿಯಿಂತಿದ್ದವು. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚೆದುರಿ ಹೋಗಿವೆ. ಬಿಜೆಪಿಗೂ ದೊಡ್ಡ ಪ್ರಮಾಣದಲ್ಲಿ ಹರಿದಿವೆ. ಈ ಹರಿವನ್ನು ಸದಾ ಕಾಲಕ್ಕೂ ಸೆರೆಹಿಡಿದು ಇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಬಿಜೆಪಿ ಹೊಂದಿದ್ದರೆ ಅದು ಸ್ವಾಭಾವಿಕ.

ಆದರೆ ಬಿಜೆಪಿಯ ವಿಜಯದಿಂದ ಗರಿಗೆದರಿರುವ ಮೇಲ್ಜಾತಿಗಳ ಅಹಮಿಕೆ ಕೇಸರಿ ಪಕ್ಷದ ಕನಸಿಗೆ ಅಡ್ಡಿಯಾಗತೊಡಗಿದೆ. ದಲಿತ ಹೆಣ್ಣುಮಕ್ಕಳೊಂದಿಗೆ ದುರ್ವರ್ತನೆ, ಅಂಬೇಡ್ಕರ್- ಸಂತ ರವಿದಾಸ ಪ್ರತಿಮೆಗಳನ್ನು ಅವಮಾನಿಸುವ ಪ್ರವೃತ್ತಿ ಬಲಿಯತೊಡಗಿದೆ. ಚಮ್ಮಾರರನ್ನು ಜಾತಿ ಹೆಸರಿಡಿದು ಕೀಳಾಗಿ ಕರೆಯುವ ರೂಢಿ ಹಠಾತ್ತನೆ ಪುನಃ ತಲೆಯೆತ್ತತೊಡಗಿದೆ. ಕಳೆದ ಎರಡು ದಶಕಗಳ ಮಾಯಾವತಿ-ಮುಲಾಯಂ ರಾಜಕಾರಣದಲ್ಲಿ ತಲೆಯೆತ್ತಿದ್ದ ದಲಿತ ಸ್ವಾಭಿಮಾನ, ಮೇಲ್ಜಾತಿಗಳೆಂದು ಕರೆಯಿಸಿಕೊಳ್ಳುವವರ ಕಣ್ಣು ಕುಕ್ಕಿತ್ತು. ಇದೀಗ ದಲಿತರಿಗೆ ತಮ್ಮ ಜಾಗ ಎಲ್ಲೆಂದು ತೋರಿಸಿಕೊಡುವ ಕಾಲ ಬಂದಿದೆ ಎಂಬುದು ಈ ಜಾತಿಗಳ ಬಲವಾದ ಭಾವನೆ. ‘ಜೈ ಭೀಮ್’ ಘೋಷಣೆಗಳನ್ನು ಅಡಗಿಸಲು ‘ಜೈ ಶ್ರೀರಾಮ್- ಜೈ ರಾಣಾ ಪ್ರತಾಪ್’ ಘೋಷಣೆಗಳು ಹೊಸ ರೊಚ್ಚಿನಿಂದ ಸಿಡಿಯತೊಡಗಿವೆ.

ಮೇಲ್ಜಾತಿಗಳು ತಮ್ಮನ್ನು ಕುರಿತು ರಚಿಸಿರುವ ಹೀಯಾಳಿಕೆ, ಮೂದಲಿಕೆಯ ಮಿಥಕಗಳು ಮತ್ತು ಗಾದೆಗಳು ಬಿಹಾರ ಮತ್ತು ಉತ್ತರಪ್ರದೇಶದ ಅತಿ ದಲಿತ ಜಾತಿಗೆ ಸೇರಿದ ಮುಸಹರರ ಸುಪ್ತಪ್ರಜ್ಞೆಯಲ್ಲಿ ಅಂತರ್ಗತವಾಗಿವೆ. ತಮ್ಮ ಮಕ್ಕಳಿಗೆ ಅಛೂತ್‌ (ಅಸ್ಪೃಶ್ಯ), ಸುವ್ವರ್ ಕೆ ಬಚ್ಚೇ (ಹಂದಿಮಗ), ದುಃಖಾನ್ (ದುಃಖಿ), ಸುಖಾಲಿ (ಒಣಕಲ), ಮರ್ನಿಛಿಯಾ (ಸತ್ತಂತವನು), ಬುದ್ಧೂ (ಮುಠ್ಠಾಳ), ಸಡಾಲಿ (ಕೊಳೆತವನು), ಫೆಂಕಿ ಇಲ್ಲವೇ ಫೇಕು (ಬಿಸಾಡಿದವನು) ಎಂದು ಹೆಸರಿಟ್ಟು ಕರೆಯುವುದನ್ನು ಈಗಲೂ ಕಾಣಬಹುದು. ಆದರೆ ಬಹುಸಂಖ್ಯಾತ ‘ಅಸ್ಪೃಶ್ಯ’ ಒಳಪಂಗಡಕ್ಕೆ ಸೇರಿರುವ ಚಮ್ಮಾರರು ಅಸ್ಮಿತೆಯ ಪ್ರಬಲ ಸಮರ್ಥನೆಗೆ ಇಳಿದು ವರ್ಷಗಳೇ ಉರುಳಿವೆ. ‘ಗ್ರೇಟ್ ರಾಜಪೂತ್’ ಎಂದು ಹೇಳಿಕೊಳ್ಳುವಂತೆ ‘ಗ್ರೇಟ್ ಚಮಾರ್’ ಎಂದು ತಿರುಗಿ ನಿಲ್ಲುವ ಪ್ರತಿಕ್ರಿಯೆ ಅವಹೇಳನದ ಪ್ರಕ್ರಿಯೆಯ ಜೊತೆಗೇ ಪ್ರಕಟವಾಗತೊಡಗಿದೆ.

ಮಹಾನಗರಗಳಲ್ಲಿ ದಲಿತರ ವಿರುದ್ಧದ ಕ್ರೌರ್ಯ, ದೈಹಿಕ ಹಿಂಸಾಚಾರದ ರೂಪವನ್ನು ಕಳಚಿ ಹಲವು ಹತ್ತು ಬಗೆಯ ಸೂಕ್ಷ್ಮರೂಪೀ ಸಾಂಸ್ಕೃತಿಕ ಮತ್ತು ಪ್ರತಿಮಾತ್ಮಕ ಹಿಂಸಾಚಾರದ ವೇಷ ಧರಿಸಿದೆ. ಭೂಮಾಲೀಕ ಮತ್ತು ಸಾಮಂತವಾದಿ ಗ್ರಾಮೀಣ ಸಮಾಜದಲ್ಲಿ ಇಂತಹ ವೇಷ ಬದಲಾವಣೆಯ ಅಗತ್ಯ ಇನ್ನೂ ಕಂಡು ಬಂದಿಲ್ಲ. ಅಲ್ಲಿ ಸಂಪ್ರದಾಯವಾದಿ ಪರಂಪರಾಗತ ಹಿಡಿತ ಇನ್ನೂ ಬಲು ಭದ್ರ. ಅಲ್ಲಿನ ಕ್ರೌರ್ಯ- ನಿರ್ದಯತೆಗೆ ನಯವಂಚಕತೆಯ ಹಂಗಿಲ್ಲ. ಅದು ನೇರಾನೇರ ದೈಹಿಕ-ಮೌಖಿಕ. ಥೇಟು ಅರಣ್ಯನ್ಯಾಯದಷ್ಟೇ ಹಸಿ ಹಸಿ... ರೌದ್ರ ರೂಕ್ಷ.

‘ಕಣ್ಣನೀರಿನಲಿ ಮಣ್ಣದೂಳಿನಲಿ ಹೊರಳುವವರು’ ಎದ್ದು ನಿಂತು ಅಸ್ಮಿತೆಯ ಸಮರ್ಥನೆಗೆ ಎದೆ ಸೆಟೆಸುವುದನ್ನು ಸಾಮಂತವಾದ ಸಹಿಸುವುದಿಲ್ಲ ಎಂಬುದನ್ನು ಈ ದೇಶದ ಇತಿಹಾಸ ದಲಿತ ನರಮೇಧಗಳ ಮೂಲಕ ಮತ್ತೆ ಮತ್ತೆ ಸಾರಿ ಹೇಳಿದೆ. ಬಿಹಾರದ ಲಕ್ಷ್ಮಣಪುರ ಬಾಥೆ, ಆಂಧ್ರದ ಕಾರಂಚೇಡು, ಚುಂಡೂರು, ಕೋಲಾರದ ಕಂಬಾಲಪಲ್ಲಿ, ಮಹಾರಾಷ್ಟ್ರದ ಖೈರ್ಲಾಂಜೆಗಳು ಈ ನರಮೇಧ ಸರಣಿಯ ಹೆಗ್ಗಲ್ಲುಗಳು. ಪಾತಕಿಗಳನ್ನು ಕಾನೂನಿನ ತಥಾಕಥಿತ ದೀರ್ಘ ಬಾಹುಗಳು ಈವರೆಗೆ ಮುಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT