ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕೃತ್ಯಾಯನ ಕನ್ನಡಿಯಲ್ಲಿ ಸಮಕಾಲೀನ ಭಾರತ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಏಪ್ರಿಲ್ 14, ಮೇರು ಪ್ರತಿಭೆ ರಾಹುಲ ಸಾಂಕೃತ್ಯಾಯನ (ಕೇದಾರನಾಥ ಪಾಂಡೆ) ಅಸುನೀಗಿದ ದಿನ. ಜನಸಮೂಹಗಳ ಒಳಿತಿಗಾಗಿ ಬರೆದು ಬದುಕಿದವರು. ಲೆಕ್ಕವಿಲ್ಲದಷ್ಟು ಜನಾಂದೋಲನಗಳಲ್ಲಿ ಪಾಲುಗೊಂಡವರು. ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯ ಬದುಕಿಗಾಗಿ ಬಡಿದಾಡಿದವರು. ಉತ್ತರಪ್ರದೇಶದ ಅಜಂಗಡದಲ್ಲಿ ಹುಟ್ಟಿದ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡು ದೇಶವಿದೇಶಗಳ ತಿರುಗಿದವರು. ತಾಯಿಭಾಷೆ ಹಿಂದಿಯಾದರೂ ಕನ್ನಡವೂ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಗಳ ಕಲಿತಿದ್ದವರು. ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದವರು.

ಆರಂಭದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಅನುಯಾಯಿ. ನಂತರ ಸ್ವೀಕರಿಸಿದ ಬೌದ್ಧಧರ್ಮ ಅವರ ಬದುಕನ್ನು ಬದಲಿಸಿತು. ದೈವದಲ್ಲಿ ನಂಬಿಕೆ ಕಳೆದುಕೊಂಡು ಮಾರ್ಕ್ಸ್ ವಾದಿ ಸಮಾಜವಾದದೆಡೆ ಚಲಿಸಿದರು. ‘ವೋಲ್ಗಾ ಸೇ ಗಂಗಾ ತಕ್’ ಅವರ ಪ್ರಮುಖ ಕೃತಿಗಳಲ್ಲಿ ಒಂದು. ಬಿ.ಎನ್.ಶರ್ಮ ‘ವೋಲ್ಗಾ-ಗಂಗಾ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಸಿಂಹ ಸೇನಾಪತಿ’ಯೂ ಕನ್ನಡಕ್ಕೆ ಬಂದಿದೆ.

‘ನಿನ್ನ ಕ್ಷಯ’ (ತುಮ್ಹಾರೀ ಕ್ಷಯ್) ಎಂಬ ಅವರ ಕೃತಿ ಆರು ದಶಕಗಳ ಹಿಂದೆ ಬರೆದದ್ದು. ಅದರಲ್ಲಿನ ‘ನಿನ್ನ ಧರ್ಮದ ಕ್ಷಯ’ (ತುಮ್ಹಾರೀ ಧರಮ್ ಕೀ ಕ್ಷಯ್) ಎಂಬ ಅಧ್ಯಾಯ ಹಿಂದೆಂದಿಗಿಂತಲೂ ಇಂದು ಪ್ರಖರ ಪ್ರಸ್ತುತ. ಈ ಅಧ್ಯಾಯದ ಮುಖ್ಯಾಂಶಗಳ ಕನ್ನಡ ಅನುವಾದವೇ ಇಂದು ಈ ಅಂಕಣದ ಸಾರಸರ್ವಸ್ವ:
ಧರ್ಮಗಳ ನಡುವೆ ಪರಸ್ಪರ ಮತಭೇದ ಇದ್ದದ್ದೇ. ಪೂರ್ವಕ್ಕೆ ಮುಖ ಮಾಡಿ ಪೂಜಿಸಬೇಕೆಂದು ಒಂದು ಧರ್ಮ ತಾಕೀತು ಮಾಡಿದರೆ, ಪಶ್ಚಿಮಕ್ಕೆ ತಿರುಗಬೇಕೆಂದು ಮತ್ತೊಂದು ಹೇಳುತ್ತದೆ. ಉದ್ದುದ್ದ ತಲೆಗೂದಲ ಪರ ಒಂದು ಧರ್ಮ ವಾದಿಸಿದರೆ, ನೀಳ ಗಡ್ಡ ಬೆಳೆಸೆಂದು ಇನ್ನೊಂದು ಹೇಳುತ್ತದೆ. ಒಂದು ಹೇಳುವಂತೆ ಮೀಸೆ ಕತ್ತರಿಸಬೇಕು, ಮತ್ತೊಂದರ ಮಾತು ಕೇಳಬೇಕಿದ್ದರೆ ಮೀಸೆ ಬೆಳೆಸಬೇಕು. ಪಶುವಧೆಗೆ ಮಂದಗತಿಯನ್ನು ಒಂದು ಧರ್ಮ ಬೋಧಿಸಿದರೆ, ಒಂದೇ ಹೊಡೆತಕ್ಕೆ ಕಡಿಯಬೇಕೆನ್ನುತ್ತದೆ ಮತ್ತೊಂದು. ಖುದಾನ ಹೆಸರು ಬಿಟ್ಟರೆ ಇಳೆಯಲ್ಲಿ ಇನ್ಯಾವುದೂ ಇರುವಂತಿಲ್ಲವೆಂದು ಒಂದು ಹೇಳಿದರೆ, ಇನ್ನೊಂದರಲ್ಲಿರುವ ದೇವತೆಗಳಿಗೆ ಲೆಕ್ಕವೇ ಇಲ್ಲ. ಗೋವಿನ ರಕ್ಷಣೆಗೆ ಪ್ರಾಣವನ್ನೇ ಪಣವಿಡು ಎಂದು ಒಂದು ಬೋಧಿಸಿದರೆ, ಅದರ ವಧೆ ಪಾವನವೆಂದು ಬಗೆವುದು ಇನ್ನೊಂದು ಧರ್ಮ.

ಹೀಗೆ ಜಗತ್ತಿನ ಎಲ್ಲ ಮತಧರ್ಮಗಳ ನಡುವೆ ಭಾರೀ ಮತಭೇದ ಉಂಟು. ಈ ಮತಭೇದಗಳು ವಿಚಾರಗಳಿಗಷ್ಟೇ ಸೀಮಿತ ಅಲ್ಲ. ಈ ಮತಭೇದಗಳ ಕಾರಣ ಧರ್ಮಗಳು ಒಂದು ಮತ್ತೊಂದರ ಮೇಲೆ ಜುಲುಮೆಯ ಬೆಟ್ಟಗಳನ್ನೇ ಹೇರಿರುವ ಸಂಗತಿಯನ್ನು ಕಳೆದ ಎರಡು ಸಾವಿರ ವರ್ಷಗಳ ಇತಿಹಾಸ ಬಿಡಿಸಿಡುತ್ತದೆ. ಗ್ರೀಸ್ ಮತ್ತು ರೋಮ್‌ನ ಅಮರ ಕಲಾವಿದರು ಇಂದು ಕಳೆದು ಹೋಗಿರುವುದು ಯಾಕಾಗಿ?  ಯಾಕೆಂದರೆ ಆ ದೇಶಗಳನ್ನು ಹೊಕ್ಕ ಧರ್ಮ ಅಲ್ಲಿನ ಮೂರ್ತಿಗಳಿಂದ ತನ್ನ ಅಸ್ತಿತ್ವಕ್ಕೆ ಅಪಾಯ ಎಂದು ಭಾವಿಸಿತು. ಇರಾನಿನ ಜನಾಂಗೀಯ ಕಲೆ, ಸಾಹಿತ್ಯ, ಸಂಸ್ಕೃತಿ ಯಾಕೆ ನಾಮಾವಶೇಷ ಆಗಬೇಕಾಯಿತು? ಯಾಕೆಂದರೆ ಮಾನವೀಯತೆಯನ್ನು ಇಳೆಯಿಂದ ಅಳಿಸಿ ಹಾಕಲು ಹಟ ತೊಟ್ಟಿದ್ದ ಧರ್ಮವೊಂದು ಆ ದೇಶದ ಸಂಪರ್ಕಕ್ಕೆ ಬಂದಿತು.

ಮೆಕ್ಸಿಕೊ, ಪೆರು, ತುರ್ಕಿಸ್ತಾನ, ಆಫ್ಘಾನಿಸ್ತಾನ, ಈಜಿಪ್ಟ್ ಹಾಗೂ ಜಾವಾ ಎಲ್ಲೇ ಆಗಲಿ, ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಹಗೆಯೆಂದು ಬಗೆದವು ಧರ್ಮಗಳು. ತಮ್ಮ ತಮ್ಮ ಖುದಾ ಮತ್ತು ಭಗವಂತನ ಹೆಸರಲ್ಲಿ ತಮ್ಮ ತಮ್ಮ ಪುಸ್ತಕಗಳು ಮತ್ತು ಧೂರ್ತತನದ ಹೆಸರಲ್ಲಿ ಮಾನವ ರಕ್ತವನ್ನು ನೀರಿಗಿಂತ ಅಗ್ಗವಾಗಿ ಹರಿಸಿದರು. ಅಮಾಯಕ ಕ್ರೈಸ್ತ ಪುರುಷರು-ಮಹಿಳೆಯರು-ಮಕ್ಕಳನ್ನು ಸಿಂಹಗಳ ಬಾಯಿಗಿಕ್ಕುವುದು ಮತ್ತು ಖಡ್ಗ ಬೀಸಿ ವಧಿಸುವುದು ಪವಿತ್ರವೆಂದು ಪ್ರಾಚೀನ ಗ್ರೀಕರು ಪರಿಗಣಿಸಿದ್ದರು. ಅಧಿಕಾರ ತಮ್ಮ ಕೈಗೆ ಬಂದ ನಂತರ ಕ್ರೈಸ್ತರೇನು ಕಡಿಮೆ ಕ್ರೌರ್ಯ ತೋರಿದರೇ?

ಏಸುಕ್ರಿಸ್ತನ ಹೆಸರಿನಲ್ಲಿ ಅವರು ಖುಲ್ಲಂ ಖುಲ್ಲಾ ಖಡ್ಗ ಪ್ರಯೋಗಿಸಿದರು. ಜನರನ್ನು ಕ್ರೈಸ್ತ ಮತದ ತೆಕ್ಕೆಗೆ ತರಲು ಜರ್ಮನಿಯಲ್ಲಿ ಮಾರಣಹೋಮವೇ ನಡೆದು ಹೋಯಿತು. ಪ್ರಾಚೀನ ಜರ್ಮನ್ನರು ಓಕ್ ಮರವನ್ನು ಪೂಜಿಸುತ್ತಿದ್ದರು. ಈ ಹಳೆಯ ಪೂಜೆಗೆ ಮರಳುವುದನ್ನು ತಪ್ಪಿಸಲು ಒಂದನ್ನೂ ಬಿಡದಂತೆ ಎಲ್ಲ ಓಕ್ ಮರಗಳನ್ನು ಬೇರು ಸಹಿತ ಕಿತ್ತೆಸೆಯಲಾಯಿತು. ಪೋಪ್ ಮತ್ತು ಪೇತ್ರಿಯಾರ್ಕ್, ಇಂಜೀಲ್ ಮತ್ತು ಏಸುವಿನ ಹೆಸರಲ್ಲಿ ಪ್ರತಿಭಾಶಾಲಿ ವ್ಯಕ್ತಿಗಳ ವಿಚಾರ ಸ್ವಾತಂತ್ರ್ಯಕ್ಕೆ ಬೆಂಕಿ ಇಕ್ಕಲಾಯಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಾಗಿ ಹಲವರು ಲೋಹಚಕ್ರಗಳಡಿ ನಜ್ಜುಗುಜ್ಜಾದರೆ ಲೆಕ್ಕವಿಲ್ಲದಷ್ಟು ಜನರನ್ನು ಜೀವಂತ ಸುಡಲಾಯಿತು.

ಹಿಂದುಸ್ತಾನದ ನೆಲವೂ ಇಂತಹ ಗಾಢ ಮತಾಂಧತೆಯ ಶಿಕಾರಿಯಾಯಿತಲ್ಲ. ಇಸ್ಲಾಮಿನ ಆಗಮನಕ್ಕೆ ಮುನ್ನ, ಕೇಳಿಸಿಕೊಂಡವರು ಮತ್ತು ಆಡಿದವರ ಕಿವಿ ಬಾಯಿಗಳಿಗೆ ಕಾದ ಸೀಸ ಮತ್ತು ಅರಗನ್ನು ಸುರಿಯಲಿಲ್ಲವೇ? ಸರ್ವಾಂತರ್ಯಾಮಿ ಬ್ರಹ್ಮವೊಂದೇ ಸತ್ಯ ಉಳಿದದ್ದೆಲ್ಲ ಮಿಥ್ಯ ಎಂದು ತಮ್ಮ ಎಲ್ಲ ಶಕ್ತಿ ಸಂಚಯನ ಮಾಡಿ ಗಟ್ಟಿಸಿ ಹೇಳಿದವರು ಶಂಕರಾಚಾರ್ಯ. ಮತ್ತಿತರರೂ ಬೋಧನೆ ಬಿಟ್ಟು ಹೆಚ್ಚೇನನ್ನೂ ಮಾಡದೆ ಹೋದರು. ಶೂದ್ರರು ಮತ್ತು ದಲಿತರನ್ನು ಮತ್ತಷ್ಟು ಕೆಳಗೆ ತುಳಿದಿಡಲು ಸಹಕರಿಸಿದರು. ಇಸ್ಲಾಂ ಬಂದ ನಂತರ ಹಿಂದೂ ಧರ್ಮ ಮತ್ತು ಇಸ್ಲಾಂ ನಡುವೆ ರಕ್ತಪಾತದ ಜಗಳಗಳು ಇಂದಿಗೂ ನಿಂತಿಲ್ಲ. ಈ ಕದನಗಳು ನಮ್ಮ ದೇಶವನ್ನು ನರಕ ಮಾಡಿಟ್ಟಿವೆ.

ಇಸ್ಲಾಂ ಶಕ್ತಿ ಮತ್ತು ವಿಶ್ವಸೋದರತೆಯ ಧರ್ಮ ಮತ್ತು ಬ್ರಹ್ಮಜ್ಞಾನ- ಸಹಿಷ್ಣುತೆಯ ಧರ್ಮ ಹಿಂದೂ ಧರ್ಮ ಎಂಬುದು ಹೆಸರಿಗೆ ಮಾತ್ರ. ಈ ಎರಡೂ ಧರ್ಮಗಳು ತಮ್ಮ ತಮ್ಮ ದಾವೆಯನ್ನು ಕಾರ್ಯರೂಪಕ್ಕೆ ತಂದು ತೋರಿಸಿವೆಯೇ? ಮುಸಲ್ಮಾನರು ನಿರ್ದೋಷಿಗಳನ್ನು ಕೊಲ್ಲುತ್ತಾರೆ, ನಮ್ಮ ಮಂದಿರಗಳು- ಪವಿತ್ರ ತೀರ್ಥಗಳನ್ನು ಭ್ರಷ್ಟಗೊಳಿಸುತ್ತಾರೆ, ನಮ್ಮ ಹೆಣ್ಣುಮಕ್ಕಳನ್ನು ಓಡಿಸಿಕೊಂಡು ಹೋಗುತ್ತಾರೆಂದು ಮುಸಲ್ಮಾನನ ಮೇಲೆ ದೋಷ ಹೊರಿಸುತ್ತಾನೆ ಹಿಂದೂ. ಆದರೆ ಹಗೆ ತೀರಿಸುವ ಕಲಹ ಕಚ್ಚಾಟಗಳಲ್ಲಿ ಅಮಾಯಕರ ರಕ್ತ ಹರಿಸುವುದನ್ನು ಹಿಂದೂಗಳು ನಿಲ್ಲಿಸಿದ್ದಾರೇನು?

ಅಮಾಯಕ, ಉಪೇಕ್ಷಿತರೇ ಹಿಂದೂ- ಮುಸಲ್ಮಾನ ಕಲಹದ ಶಿಕಾರಿಗಳು. ಎಲ್ಲ ಧರ್ಮಗಳು ದಯೆಯನ್ನು ಬೋಧಿಸುತ್ತವೆ. ಆದರೆ ಹಿಂದುಸ್ತಾನದ ಈ ಕಲಹಗಳನ್ನು ನೋಡಿ. ಧರ್ಮದ ಹೆಸರಿನಲ್ಲಿ ಜರುಗುವ ಹಿಂಸೆಯಲ್ಲಿ ನಿಜವಾಗಿ ಹತವಾಗುವುದು ಮಾನವೀಯತೆ.

ಒಂದು ದೇಶ ಮತ್ತು ಒಂದು ರಕ್ತ ಮನುಷ್ಯರನ್ನು ಅಣ್ಣ ತಮ್ಮಂದಿರ ಮಾಡುತ್ತದೆ. ರಕ್ತ ಸಂಬಂಧ ಕಡಿದುಕೊಳ್ಳುವುದು ಸುಲಭ ಅಲ್ಲ. ಶುರುವಿನಲ್ಲಿ ಏನು ಬೇಕಾದರೂ ಇದ್ದಿರಲಿ, ಈಗ ಹಿಂದುಸ್ತಾನಿಗಳ ಮೈಯಲ್ಲಿ ಸಂಚರಿಸುತ್ತಿರುವುದು ಒಂದೇ ರಕ್ತ. ಮುಖ ನೋಡಿ ಈತ ಬ್ರಾಹ್ಮಣ, ಈತ ಶೂದ್ರನೆಂದು ಯಾರ ಜಾತಿಯನ್ನಾದರೂ ನೀವು ಹೇಳಬಲ್ಲಿರಾ? ಕಲ್ಲಿದ್ದಿಲಿಗಿಂತ ಕಪ್ಪು ಮೈಬಣ್ಣದ ಬ್ರಾಹ್ಮಣರು ಲಕ್ಷ ಮಂದಿ ಸಿಕ್ಕಾರು. ಗೋಧಿ ಮೈಬಣ್ಣದ ಶೂದ್ರರರಿಗೇನೂ ಅಭಾವ ಇಲ್ಲ. ಸಮೀಪ ಪರಿಸರದಲ್ಲಿರುವ ಹೆಣ್ಣು– ಗಂಡುಗಳು ಜಾತಿ ಭೇದವೂ ಸೇರಿದಂತೆ ಸಾವಿರ ಅಡೆತಡೆಗಳ ಹಾದು ಲೈಂಗಿಕ ಸಂಬಂಧ ಹೊಂದುವುದು ಸಾಧಾರಣ ಸಂಗತಿ.

ರಾಜ ಪಟ್ಟಕ್ಕೇರಿದ ದಾಸಪುತ್ರ ಇಲ್ಲವೇ ದಾಸಿಯ ಮಗ ರಾಜಪುತ್ರನಾದ ಪ್ರಕರಣಗಳ ಹಲವು ವಂಶಾವಳಿಗಳು ನಮ್ಮಲ್ಲಿ ಜನಜನಿತ. ಆದರೂ ಹಿಂದೂ ಧರ್ಮವು ಜನರನ್ನು ಸಾವಿರಾರು ಜಾತಿಗಳಲ್ಲಿ ಹರಿದು ಹಂಚಿ ಇರಿಸಿದೆ. ಹಿಂದೂಗಳನ್ನು ಒಂದು ಜನಾಂಗ ಅಥವಾ ಒಂದು ಕುಲವೆಂದು ಒಟ್ಟುಗೂಡಿಸಿ ಇಡಲು ಬಯಸುವವರು ಹಲವರಿದ್ದಾರೆ. ಆದರೆ ಆ ಕುಲ ಅಥವಾ ಜನಾಂಗವಾದರೂ ಎಲ್ಲಿದೆ? ಹಿಂದೂ ಜನಾಂಗ ಎಂಬುದು ಕಾಲ್ಪನಿಕ ಶಬ್ದ. ವಸ್ತುಸ್ಥಿತಿಯ ಪ್ರಕಾರ ಅದು ಬ್ರಾಹ್ಮಣ, ಬ್ರಾಹ್ಮಣವೂ ಅಲ್ಲ, ಶಾಕದ್ವೀಪೀ, ಸನಾಢ್ಯ, ಜುಝೌತಿಯಾ, ರಾಜಪೂತ, ಖತ್ರೀ, ಭೂಮಿಹಾರ, ಕಾಯಸ್ಥ, ಚಮ್ಮಾರ ಇತ್ಯಾದಿ ಇತ್ಯಾದಿ.‌

ಜಾತಿ ಭೇದ ಮಾಡುವರೆಂದು ಹಿಂದೂಗಳನ್ನು ಹಂಗಿಸುವ ಇಸ್ಲಾಂ ತಾನು ಜಾತಿ ಪಂಥಗಳ ಬಂಧಗಳನ್ನು ಹರಿದೊಗೆದಿದ್ದೇನೆ ಎಂದು ಕೊಚ್ಚಿಕೊಳ್ಳುತ್ತದೆ. ಆದರೆ ಈ ಮಾತು ಸತ್ಯವೇ? ಸತ್ಯವಾಗಿದ್ದರೆ ಜುಲಾಹ, ಕುಂಜ್ರಾ, ಧುನಿಯಾಗಳ ಮಾತೆಲ್ಲಿಂದ ಬರುತ್ತಿತ್ತು? ಕುಲಜ- ಕುಲೀನರು ಮತ್ತು ಕೆಳಜಾತಿಗಳ ಪ್ರಸ್ತಾಪವನ್ನು ಯಾರೂ ಮಾಡಬಾರದಿತ್ತು. ಹಿಂದೂಗಳ ಪೈಕಿ ದೊಡ್ಡ ಜಾತಿಗಳು ಸಣ್ಣ ಜಾತಿಗಳ ಕುರಿತು ತಳೆದಿರುವ ಅದೇ ಧೋರಣೆಯನ್ನು ಸೈಯದ್-ಶೇಖ್-ಪಠಾನ್‌ಗಳು ಮುಸಲ್ಮಾನ ಕೆಳಜಾತಿಗಳ ಕುರಿತು ತಳೆದಿದ್ದಾರೆ. ಕೆಳವರ್ಗಗಳ ತಮ್ಮ ಸೋದರರು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಂದೆ ಬರಲು ಮುಸಲ್ಮಾನ ಕುಲೀನರು ಬಿಟ್ಟಿದ್ದಾರೆಯೇ?

ಹಿಂದೂಗಳ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಅತ್ಯಾಚಾರಗಳಿಂದ ಪಾರಾಗಲು ನಾಲ್ಕೈದು ಕೋಟಿ ಹಿಂದುಸ್ತಾನಿಗಳು ಇಸ್ಲಾಮಿಗೆ ಶರಣು ಹೋದರು. ಆದರೆ ಇಸ್ಲಾಮಿನ ದೊಡ್ಡ ಜಾತಿಗಳು ಅವರು ಉದ್ಧಾರವಾಗಲು ಬಿಟ್ಟವೇ? ಏಳುನೂರು ವರ್ಷಗಳೇ ಉರುಳಿ ಹೋಗಿವೆ. ಆದರೆ ಕೆಳಜಾತಿಯ ಮುಸಲ್ಮಾನರು ತಮ್ಮದೇ ಧರ್ಮದ ದೊಡ್ಡ ಜಾತಿಯ ಜಮೀನ್ದಾರರ ಜುಲುಮೆಗೆ ಈಗಲೂ ಶಿಕಾರಿಗಳು. ಸರ್ಕಾರಿ ಮೀಸಲಾತಿಯನ್ನೂ ಸೈಯದ್- ಶೇಖ್ ಕುಲೀನ ಜಾತಿಗಳೇ ಕಬಳಿಸುತ್ತವೆ. ಕೆಳ ಜಾತಿಗಳು ಓದಿಕೊಂಡಿಲ್ಲವೆಂದು ನೆವ ಹೇಳುತ್ತಾರೆ. ಆದರೆ 700 ವರ್ಷಗಳ ನಂತರವೂ ಕೆಳಜಾತಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದರೆ ಅದು ಯಾರ ತಪ್ಪು? ಓದುವ ಅವಕಾಶವನ್ನು ಅವರಿಗೆ ಕೊಡಲೇ ಇಲ್ಲವಲ್ಲ. ವಿದ್ಯಾರ್ಥಿ ವೇತನಗಳನ್ನು ಅವರಿಂದ ಕಸಿಯಲಾಯಿತಲ್ಲ. ಮೋಮಿನ್‌ಗಳು, ಅನ್ಸಾರಿಗಳು ಅಡುಗೆಯವರು, ಸೇವಕರು, ಛಪರಾಸಿ ಕೆಲಸ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ.

ಧರ್ಮಗಳು ಬೇರೆ ಬೇರೆ ಆದಾಕ್ಷಣ ಹಿಂದೂ-ಮುಸಲ್ಮಾನರು ಬೇರೆ ಬೇರೆ ಹೇಗಾದಾರು? ಅವರ ಧಮನಿಗಳಲ್ಲಿ ಇದೇ ದೇಶದಲ್ಲಿ ಹುಟ್ಟಿ ಬೆಳೆದ ಸಮಾನ ಪೂರ್ವಜರ ರಕ್ತ ಹರಿಯುತ್ತಿದೆ. ಮತ್ತೆ ಗಡ್ಡ-ಜುಟ್ಟು, ಪೂರ್ವ-ಪಶ್ಚಿಮದ ನಮಾಜುಗಳು ಇವರನ್ನು ಬೇರೆ ಬೇರೆ ಎಂದು ಸಾಬೀತು ಮಾಡುವುದು ಸಾಧ್ಯವೇ? ನೀರಿಗಿಂತ ನೆತ್ತರು ಗಾಢ ಎಂಬ ಮಾತು ಸುಳ್ಳೇನು?

ಜನರನ್ನು ಒಡೆಯುವ ಧರ್ಮಕ್ಕೆ, ಸೋದರ ಮತ್ತೊಬ್ಬ ಸೋದರನನ್ನು ಕೊಲ್ಲಲು ಕುಮ್ಮಕ್ಕು ನೀಡುವ ಧರ್ಮಕ್ಕೆ ಧಿಕ್ಕಾರ! ಜುಟ್ಟು ಕತ್ತರಿಸಿ ದಾಡಿ ಬಿಟ್ಟವನು ಮುಸಲ್ಮಾನ ಮತ್ತು ಗಡ್ಡ- ಜುಟ್ಟು ಇಟ್ಟುಕೊಂಡ ಮಾತ್ರಕ್ಕೆ ಹಿಂದೂ ಎಂದು ತಿಳಿಯುವುದಾದರೆ ಭೇದ ಕೇವಲ ಬಾಹ್ಯದ್ದು ಮತ್ತು ಕೃತ್ರಿಮದ್ದು.

ಧರ್ಮ ದ್ವೇಷವನ್ನು ಬಿತ್ತುವುದಿಲ್ಲ (‘ಮಜಹಬ ನಹೀ ಸಿಖಾತಾ... ಆಪಸ ಮೇಂ ಬೈರ ರಖನಾ...’) ಎಂಬ ಮಾತು ಬಿಳಿ ಸುಳ್ಳು. ಧರ್ಮ ದ್ವೇಷವನ್ನು ಹೇಳಿಕೊಡುವುದಿಲ್ಲ ಎಂದಾದರೆ ನಮ್ಮ ದೇಶ ಜುಟ್ಟು- ಗಡ್ಡದ ಲಡಾಯಿಯಲ್ಲಿ ಸಾವಿರ ವರ್ಷಗಳಿಂದ ಯಾಕೆ ಬರಬಾದಾಗುತ್ತಿದೆ. ಹಳೆಯ ಚರಿತ್ರೆ ಬದಿಗಿಡಿ, ಈಗಲೂ ಹಿಂದುಸ್ತಾನದ ಶಹರಗಳು ಮತ್ತು ಹಳ್ಳಿಗಳಲ್ಲಿ ಒಂದು ಧರ್ಮದವರ ನೆತ್ತರಿಗಾಗಿ ಮತ್ತೊಂದು ಧರ್ಮದವರನ್ನು ಯಾರು ಯಾಕೆ ಎತ್ತಿಕಟ್ಟುತ್ತಿದ್ದಾರೆ? ಗೊಬ್ಬರ ತಿನ್ನುವವರನ್ನು ಹಸುವನ್ನು ತಿನ್ನುವವರೊಂದಿಗೆ ಕಲಹಕ್ಕೆ ಇಳಿಸುತ್ತಿರುವವರು ಯಾರು?

ಧರ್ಮವೇ ದ್ವೇಷವನ್ನು ಕಲಿಸುತ್ತಿದೆ ಎಂಬುದೇ ಅಸಲಿ ಮಾತು. ಅಣ್ಣ ತಮ್ಮಂದಿರಿಗೆ ಪರಸ್ಪರರ ರಕ್ತ ಕುಡಿಯುವುದನ್ನು ಕಲಿಸಲಾಗುತ್ತಿದೆ. ಧರ್ಮಗಳ ಪರಸ್ಪರ ಸಾಮರಸ್ಯದ ತಳಹದಿಯ ಮೇಲೆ ಹಿಂದುಸ್ತಾನಿಗಳು ಒಗ್ಗಟ್ಟಾಗುತ್ತಿಲ್ಲ. ಬದಲಾಗಿ ಧರ್ಮಗಳ ಚಿತೆಗಳ ಮೇಲೆ ಏಕತೆಯನ್ನು ಸಾಧಿಸಲಾಗುತ್ತಿದೆ. ಕಾಗೆಯನ್ನು ತೊಳೆದು ಹಂಸವನ್ನಾಗಿಸಲು ಬರುವುದಿಲ್ಲ. ಧರ್ಮವೆಂಬುದು ಸ್ವಾಭಾವಿಕವಾಗಿ ಬರುವ ರೋಗವಿದ್ದಂತೆ. ಮರಣದ ವಿನಾ ಅದಕ್ಕೆ ಬೇರೆ ಚಿಕಿತ್ಸೆ ಇಲ್ಲ.

ಉಂಡು ಉಡುವಲ್ಲಿ, ಆಚಾರ ವ್ಯವಹಾರಗಳಲ್ಲಿ, ನೇಮ ನಿಷೇಧಗಳಲ್ಲಿ ಜನರನ್ನು ಪರಸ್ಪರ ಎತ್ತಿಕಟ್ಟುವ ಧರ್ಮಗಳು ಗರೀಬರ ರಕ್ತ ಹೀರುವ ಮತ್ತು ಧನಿಕರ ಸ್ವಾರ್ಥ ರಕ್ಷಿಸುವ ಪ್ರಶ್ನೆ ಬಂದಾಗ ಒಂದೇ ದನಿಯಲ್ಲಿ ಮಾತಾಡಲು ಆರಂಭಿಸಿಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT