ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವಿನಿಮಯದ ಸಂದಿಗ್ಧಗಳು: ಅಂದು-ಇಂದು

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

`ಸಾಂಸ್ಕೃತಿಕ ವಿನಿಮಯ ನಾಗರೀಕತೆಗಳ ಉಸಿರು. ಅದಿಲ್ಲದಿದ್ದರೆ ಜನಾಂಗಗಳು ಅಳಿದು ಹೋಗುತ್ತವೆ. ಹೊರ ಸಂಸ್ಕೃತಿಗಳ ಜೊತೆಗಿನ ಕೊಡುಕೊಳ್ಳುಗಳಿಲ್ಲದ ಕಾರಣ ದಕ್ಷಿಣ ಅಮೆರಿಕಾದ ಭವ್ಯ ನಾಗರೀಕತೆಗಳು ನಶಿಸಿಹೋದವು~ -  ಹೀಗೆನ್ನುತ್ತಾನೆ ಆಫ್ರಿಕಾದ ಪ್ರಖ್ಯಾತ ಫ್ರೆಂಚ್ ಕವಿ ಆಮಿ ಸಿಜೇರ್. ಜೊತೆಗೆ ಅವನು ಸಾಂಸ್ಕೃತಿಕ ವಿನಿಮಯಗಳ ಬಗ್ಗೆ ಒಂದು ಎಚ್ಚರಿಕೆಯನ್ನೂ ನೀಡುತ್ತಾನೆ: `...

ಆದರೆ ಈ ವಿನಿಮಯ ಸಂಬಂಧಪಟ್ಟ ಎರಡೂ ಸಂಸ್ಕೃತಿಗಳ ನಡುವಿನ ಸಮಾನತೆಯ ಮೇಲೆ ನಿಂತಿರಬೇಕು. ವಸಾಹತುಶಾಹಿ ಪದ್ಧತಿಯಲ್ಲಿ ಹೀಗಾಗಲಿಲ್ಲ. ಅದು ಸಂಸ್ಕೃತಿ ಸಂಸ್ಕೃತಿಗಳ ನಡುವಿನ ಅಸಮಾನ ಹೇರಿಕೆ. 

ಆಫ್ರಿಕಾದ ಹಾಗೆ ಭಾರತವೂ ನಿಡುಗಾಲ ವಸಾಹತು ಏರ್ಪಾಡಿಗೆ ತುತ್ತಾಗಿತ್ತು. ಈ ಸಂದರ್ಭದಲ್ಲಿ ವಿನಿಮಯದ ನಿಯಮಗಳನ್ನು ತೀರ್ಮಾನಿಸುತ್ತಿದ್ದವರು ವಸಾಹತುದಾರರಾದ ಬ್ರಿಟಿಷರು. ವಸಾಹತುದಾರರು ತಮ್ಮ ವಸಾಹತುಗಳ ಬಗ್ಗೆ ತಳೆದ ನಿಲವನ್ನೇ ಇಂದು ವಸಾಹತು ವಿರೋಧಿ ಪಂಡಿತರು `ಪೌರ್ವಾತ್ಯವಾದ~ ಎಂದು ಕರೆಯುವುದು.

ಆ ದೃಷ್ಟಿಯ ಪ್ರಕಾರ ಭಾರತವೆಂದರೆ `ಲೋಕಪರಾಙ್ಮುಖ ದಾರ್ಶನಿಕರ ಬೀಡು~. ಪುರಾತನ ಭಾರತ ದಾರ್ಶನಿಕ ಕ್ಷೇತ್ರದಲ್ಲಿ ಬಹಳ ಮುಂದುವರಿದಿತ್ತು. ಆದರೆ ನಂತರ ಅದು ಹದಗೆಟ್ಟು ದಿಕ್ಕುದೆಸೆ ಇಲ್ಲದಾಯಿತು. ಹೀಗೆ ಅವನತಿ ಹೊಂದಿದ ಭಾರತವನ್ನು ಉಳಿಸುವ ಕರ್ತವ್ಯ ಜನಾಂಗೀಯವಾಗಿ ಹೆಚ್ಚಿನ ಅಭಿವೃದ್ಧಿ ಹೊಂದಿದ ಬಿಳಿಯರ ಚಾರಿತ್ರಿಕ ಜವಾಬ್ದಾರಿ.

ಸನಾತನ ಭಾರತ ದಾರ್ಶನಿಕವಾಗಿ ಹಿರಿಮೆ ಪಡೆದಿದ್ದುದು ನಿಜವಾದರೂ ಆ ಸಾಧನೆ ಬಿಳಿಯರ ಗರಿಮೆಗೆ ಹೋಲಿಸಿದರೆ ಅಷ್ಟೇನೂ ಹೇಳಿಕೊಳ್ಳುವಂಥದಲ್ಲ. ಆದ್ದರಿಂದ ಭಾರತದ ಏಳಿಗೆಯಾಗಬೇಕಾದರೆ ಅದು ಬಿಳಿಯರ ಧರ್ಮ, ದರ್ಶನಗಳನ್ನೂ ವಿಜ್ಞಾನ-ವೈಚಾರಿಕತೆಗಳನ್ನೂ ಅನುಸರಿಸಿ ಆ ಹಾದಿಯಲ್ಲಿ ಮುನ್ನಡೆಯಬೇಕು. ಈ ರೀತಿಯ ಗ್ರಹಿಕೆಗಳು ವಸಾಹತುದಾರರು ನಮ್ಮಂಥ ದೇಶದವರನ್ನು ಖುಲ್ಲಾಖುಲ್ಲಾ ಲೂಟಿ ಹೊಡೆಯಲು ತಕ್ಕ ವೈಚಾರಿಕ ಪಾತಳಿಯನ್ನು ನೀಡಿದವು.

ಸತ್ಯದೂರವಾದ ಈ ವಾದ ಅದೆಷ್ಟು ಸರ್ವವ್ಯಾಪಿಯಾಯಿತೆಂದರೆ ವಸಾಹತುಶಾಹಿ ಏರ್ಪಾಟಿನ ವಿಷಮ ಪರಿಸ್ಥಿತಿಯಲ್ಲಿ ಬಿಳಿಯರ ಶಿಕ್ಷಣಕ್ಕೆ ಪಕ್ಕಾದ ವಸಾಹತಿನ ಜನಗಳೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ನಂಬುಗೆಗೆ ಕಟ್ಟುಬಿದ್ದರು.

ಇಂಥಾ ನಂಬುಗೆಯ ಚೌಕಟ್ಟಿನಲ್ಲಿ ನಡೆದ ಆದಾನಪ್ರದಾನಗಳೂ ಈ ಅಪಥ್ಯ ದೃಷ್ಟಿಯ ಪ್ರಭಾವಕ್ಕೊಳಗಾದವು. ಹತ್ತೊಂಬತ್ತನೆ ಶತಮಾನದ ಹಲವು ವಿಚಾರವಾದಿ ಸುಧಾರಕರು ಸಂಸ್ಕೃತದಲ್ಲಿನ ಸನಾತನ ಜ್ಞಾನವನ್ನು ಯೂರೋಪಿಯನ್ ಭಾಷೆಗಳಲ್ಲಿ -ವಿಶೇಷವಾಗಿ ಇಂಗ್ಲಿಷ್‌ನಲ್ಲಿದ್ದ ವೈಚಾರಿಕತೆಯ ಜೊತೆ ಬೆಸೆಯಲು ಪ್ರಯತ್ನಿಸಿದರು.

ವಸಾಹತುವಾದಕ್ಕೆ ಸೆಡ್ಡುಹೊಡೆದು ನಿಂತ ಕೆಲವು ದೇಶಭಕ್ತರೂ ಭಾರತವೆಂದರೆ ಆಧ್ಯಾತ್ಮಿಕತೆಯ ತವರೆಂದು ಮಾತ್ರ ಬಗೆದರು. ವಿವೇಕಾನಂದರಂಥ ಪ್ರಾಮಾಣಿಕ ದೇಶಭಕ್ತರೂ ಒಂದು ಮಟ್ಟದಲ್ಲಿ ಇದನ್ನು ನಂಬಿಬಿಟ್ಟಿದ್ದರು. ತಮ್ಮ ಕಾಲದ ಭಾರತೀಯರ ಅತಿ ಆಧ್ಯಾತ್ಮಿಕತೆಯನ್ನು ಕಂಡು ರೋಸಿ ಇಂದಿನ ಯುವಕರು ಫುಟ್ಬಾಲ್ ಮೈದಾನಗಳಿಗಿಳಿದು ಕಬ್ಬಿಣದ ಮಾಂಸಖಂಡಗಳನ್ನೂ, ಉಕ್ಕಿನ ನರಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಆಲ್ಬರ್ತ್ ಮೆಮಿ ಹೇಳುವಂತೆ ವಸಾಹತುಶಾಹಿ ಮನೋಧರ್ಮ ನಾವು ನಮ್ಮನ್ನು ನಮ್ಮನ್ನಾಳುವವರ ದೃಷ್ಟಿಯಿಂದಲೇ ನೋಡುವಂತೆ ಪ್ರೇರೇಪಿಸುತ್ತದೆ. ಆತನ ಪ್ರಕಾರ, ಅದು ಒಂದು ಸಾಮಾಜಿಕ ಏರ್ಪಾಟನ್ನು ನಮ್ಮ ಮೇಲೆ ಹೇರುವುದರ ಜೊತೆಗೆ ಒಂದು ಮನೋಧರ್ಮವನ್ನೂ ಸೂಕ್ಷ್ಮವಾಗಿ ಕಟ್ಟುತ್ತದೆ.

ಶೊಯಿಂಕಾನ ಕಾದಂಬರಿಯೊಂದರ ಘಟನೆಯೊಂದು ಈ ಮಾತನ್ನು ಗಾಢವಾಗಿ ಚಿತ್ರಿಸುತ್ತದೆ. ಒಬ್ಬ ಕರಿಯ ತನ್ನ ಹೆಂಡತಿಯ ಜೊತೆ ಬಿಳಿಯರ ಮನೆಯಲ್ಲಿ ಔತಣಕ್ಕಾಗಿ ಆಮಂತ್ರಣ ಪಡೆಯುತ್ತಾನೆ. ಆದರೆ ಆ ಸಂಜೆ ಅಲ್ಲಿಗೆ ಹೋಗುವ ಸಡಗರದಲ್ಲಿ ಅವನ ಹೆಂಡತಿ ಕೈಚೀಲ ತೊಡುವುದನ್ನು ಮರೆತುಬಿಡುತ್ತಾಳೆ.

ಬಿಳಿಯರ ಮನೆ ಸೇರಿದಾಗ ಇದನ್ನು ಗಮನಿಸಿದ ಕರಿಯ ಗಂಡ ಉರಿದುಬೀಳ ತೊಡಗುತ್ತಾನೆ. ಯಾಕೆಂದರೆ ಕೈಚೀಲವಿಲ್ಲದೆ ಔತಣಕ್ಕೆ ಬರುವುದು ಬಿಳಿಯರ ಮೌಲ್ಯಗಳನುಸಾರ ಅನಾಗರಿಕ. ಆತನ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಹೆಂಡತಿಯನ್ನು ಆಥಿತೇಯರ ಸಮಕ್ಷಮದಲ್ಲಿ  ಖುಲ್ಲಾ ಬೈಯುವ ಹಾಗೂ ಇಲ್ಲ.
 
ಸುಮ್ಮನಿರಲಾಗುವುದೂ ಇಲ್ಲ. ತನ್ನ ಹೆಂಡತಿ ಕೈಚೀಲರಹಿತಳಾಗಿ ಬಂದಿರುವುದನ್ನು ಬಿಳಿಯರ ಬೆಕ್ಕಿನ ಕಣ್ಣುಗಳು ಗಮನಿಸುತ್ತಿರುವುದನ್ನು ಖೇದದಿಂದ, ಅವಮಾನದಿಂದ ಗ್ರಹಿಸತೊಡಗುತ್ತಾನೆ. ಔತಣದಲ್ಲಿ ಹೆಂಗಸರು ಕೈಚೀಲ ತೊಡಬೇಕೆಂಬ ಬಿಳಿಯರ ನಂಬುಗೆಯನ್ನು ಅವನು ತನಗರಿವಿಲ್ಲದಂತೆ ಸ್ವೀಕರಿಸಿಬಿಟ್ಟಿರುತ್ತಾನೆ.

ಕೇವಲ ವಸಾಹತುಶಾಹಿ ಸಂದರ್ಭದಲ್ಲಿ ಮಾತ್ರವಲ್ಲ, ಮೇಲು-ಕೀಳು ಭಾವನೆಗಳ ಮೇಲೆ ನಿಂತ ಶೋಷಣಾತ್ಮಕ ಸನ್ನಿವೇಶಗಳಲ್ಲಿ ನಮ್ಮೆಲ್ಲರಿಗೂ ಇಂಥ ಇರಿಸುಮುರಿಸಿನ ಅನುಭವಗಳಾಗಿರುತ್ತವೆ. ಪೂರ್ಣಯ್ಯನ ಛತ್ರದ ಸ್ಕೂಲು, ಆಮೇಲೆ ರಂಗಸ್ವಾಮಿ ಬೀದಿಯ ಕೋಳಿಮೊಟ್ಟೆ ಸ್ಕೂಲು, ಆಮೇಲೆ ಬಳೇಪೇಟೆಯ ಸುಂದರ‌್ಬನ್ ಸ್ಕೂಲು, ಆಮೇಲೆ ರೌಡಿಗಳ ಆಗರವಾಗಿದ್ದ ಸೆಂಟ್ರಲ್ ಹೈಸ್ಕೂಲುಗಳ ಕನ್ನಡ ಮಾಧ್ಯಮದ ಹಿನ್ನೆಲೆಯ ನಾನು ಬರೀ ಕಾನ್ವೆಂಟು ಇಂಗ್ಲಿಷ್‌ನಲ್ಲಿ ಸದಾ ಕುಕಿಲುವ ಹೆಣ್ಣುಮಕ್ಕಳಿಂದ ಕಿಕ್ಕಿರಿದ ಸೆಂಟ್ರಲ್ ಕಾಲೇಜಿನ ಬಿ. ಎ. ಆನರ್ಸ್ ತರಗತಿಗೆ ಹೋದಾಗ ಇಂಥದೇ ಸಂದಿಗ್ಧವನ್ನು ಎದುರಿಸಿದ್ದೆ.

ಕನ್ನಡದಲ್ಲಿ ಮಾತಾಡುವುದು ಸಾಧ್ಯವಿರಲಿಲ್ಲ. ಇಂಗ್ಲಿಷ್ ಮಾತಾಡಲು ಬರುತ್ತಿರಲಿಲ್ಲ. ಬರುವುದಿಲ್ಲವೆಂದು ಒಪ್ಪಿಕೊಂಡರೂ ಅಪಮಾನ. ಹೀಗಾಗಿ ಚೂರುಪಾರು ಇಂಗ್ಲಿಷ್ ಮಾತು ಕಲಿಯುವತನಕ ಕ್ಲಾಸಿಗೆ ಚಕ್ಕರ್ ಹೊಡೆಯತೊಡಗಿದೆ. ಇಂಗ್ಲಿಷ್‌ನಲ್ಲಿ ಮಾತಾಡುವುದು ಅನಿವಾರ್ಯವೆಂದು ನನಗೇ ಗೊತ್ತಿಲ್ಲದಂತೆ ನಾನೂ ಒಪ್ಪಿಕೊಂಡುಬಿಟ್ಟಿದ್ದೆ.

ಮೇಲಿನ ಎರಡು ಸಣ್ಣ ಉದಾಹರಣೆಗಳು ಸೂಚಿಸುವ ಘಟನೆಗಳ ವಿರಾಟ್‌ರೂಪ, ವಸಾಹತುಶಾಹಿ ಸಂದರ್ಭದ ಕೊಡುಕೊಳೆ. ಆಲ್ಬರ್ತ್ ಮೆಮಿಯ ಪ್ರಕಾರ ಈ ವಿಷಮ ಸಂಬಂಧಕ್ಕೆ ಕೊನೆ ಇಲ್ಲ. ವಸಾಹತುಶಾಹಿ ಏರ್ಪಾಟು ರಾಜಕೀಯವಾಗಿ ಕೊನೆಗೊಂಡರೂ ಮಾನಸಿಕವಾಗಿ ಮುಂದುವರಿಯುತ್ತದೆ.

ಇಂಗ್ಲಿಷ್‌ನಲ್ಲಿ ಮಾತಾಡುವ ಬ್ರಿಟಿಷರು ನಮ್ಮನ್ನು ತೊರೆದು ಹೋದ ಎಷ್ಟೋ ದಶಕಗಳ ನಂತರವೂ ನಮ್ಮಲ್ಲಿ `ಗುಡ್ ಇಂಗ್ಲಿಷ್~ ಮಾತಾಡುವವರಿಗೆ ವಿಶೇಷ ಗೌರವ ಮತ್ತು ಭಯ. ಬಲ್ಲವರು ಹಿಂದೆ ಸಂಸ್ಕೃತದ ಮೂಲಕ ದಿಗಿಲು ಹುಟ್ಟಿಸುತ್ತಿದ್ದರು; ಇವತ್ತು ಇಂಗ್ಲಿಷ್‌ನ ಮೂಲಕ ಹೆದರಿಕೆ ಹುಟ್ಟಿಸುವುದು ಸುಲಭ.

ನಾನು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ  ಕೆಲಸ ಮಾಡುತ್ತಿದ್ದ ದಿನಗಳಲ್ಲಿ ನೆಲಮಂಗಲದ ಒಬ್ಬ ವಿದ್ಯಾರ್ಥಿ ಕನ್ನಡ ಬಾರದ ಇಂಗ್ಲಿಷ್ ಮೇಡಂ ಒಬ್ಬರ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಹೀಗೆ ದೂರು ನೀಡುತ್ತಿರುವುದನ್ನು ಕೇಳಿದ್ದೆ: `ಸಾ, ಮೇಡಂ ಗುರುಗುಳು. ಎಂಗ್ ಬೇಕಾದ್ರೂ ಬೈಲಿ, ಒಪ್ಕಂತೀವಿ. ಆದ್ರೆ ಬೈಯದಾದ್ರೆ ಕನ್ನಡ್ದಳ್ಗೆ ಬೈಕಳ್ಳಿ. ಇಂಗ್ಲಿಷ್ನಗೆ ಬೈದ್ರೆ ಮಾತ್ರ ನಾವು ಸುಮ್ನೆ ಇರಕಿಲ್ಲ.~  ಏಕೆಂದರೆ ಅವನ ಪ್ರಕಾರ ಇಂಗ್ಲಿಷ್ ಬೈಗುಳ ಕನ್ನಡ ಬೈಗುಳಕ್ಕಿಂತಾ ಭಯಾನಕವಾದದ್ದು.

ಒಟ್ಟಿನಲ್ಲಿ  ವಸಾಹತುಶಾಹಿ ವ್ಯವಸ್ಥೆ ಭೌತಿಕವಾಗಿ ಮಾಯವಾದ ಮೇಲೂ ಅದರ ಗಾಯಗಳು ಮಾಗಿರುವುದಿಲ್ಲ. ಅದನ್ನು ಪೂರ್ತಿ ದಾಟುವವರೆಗೆ ನಾವು ನಾವಾಗಿರಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಒಂದು ಪರಿಹಾರವೆಂದರೆ ನಮ್ಮ ಜೊತೆ ಅಂಥ ವಸಾಹತುಶಾಹಿ ಸಂಬಂಧ ಇರದಿದ್ದ ದೇಶ-ಭಾಷೆಗಳ ಜೊತೆ ವಿನಿಮಯ ಮಾಡಿಕೊಳ್ಳುವುದು.

ಉದಾಹರಣೆಗೆ ಭಾರತ ಮತ್ತು ಜರ್ಮನಿಯ ಸಂಸ್ಕೃತಿ ವ್ಯವಹಾರ ಈ ತೆರನದು. ನಾವೆಂದೂ ಜರ್ಮನಿಯ ವಸಾಹತಾಗಿರಲಿಲ್ಲ. ಜರ್ಮನಿಯ ವಿದ್ವಾಂಸರು, ಧರ್ಮ ಪ್ರಚಾರಕರು ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಿಗೆ ಅಪೂರ್ವವಾದ ಕೊಡುಗೆ ನೀಡಿದರು. ನಮ್ಮ ಚರಿತ್ರೆಗಳನ್ನು ಬರೆದರು, ನಮ್ಮ ನಿಘಂಟುಗಳನ್ನು ನಿರ್ಮಿಸಿದರು, ನಮ್ಮ ಹಳೆಯ ಗ್ರಂಥಗಳನ್ನು ಸಂಪಾದಿಸಿ ಅಚ್ಚುಹಾಕಿಸಿದರು.

ಈ ಎಲ್ಲ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದು ನಿಜವಾದರೂ ಜರ್ಮನರ ಭಾರತದ ಮೊದಲ ಗ್ರಹಿಕೆ ವಸಾಹತುಶಾಹಿ ಗ್ರಹಿಕೆಗಳಿಂದ ಪ್ರಭಾವಗೊಂಡಿತೆಂದು ಈ ಬಗ್ಗೆ ತಜ್ಞರಾದ ಆಲೋಕ ರಂಜನ ದಾಸಗುಪ್ತ ಹೇಳುತ್ತಾರೆ. ಯಾಕೆಂದರೆ ಅವರು ಭಾರತದ ಬಗ್ಗೆ ಮೊದಲು ತಿಳಿಯತೊಡಗಿದ್ದು ಬ್ರಿಟಿಷ್ ವಸಾಹತು ದೃಷ್ಟಿಕೋನದ ಚರಿತ್ರೆಗಳಿಂದ. ಆದರೆ ಅದಾಗಿ ಬಹಳ ಕಾಲ ಕಳೆದಿದೆ.

ಇಂದು ಬಹುತೇಕ ಜರ್ಮನರು ಭೇದಭಾವವಿಲ್ಲದೆ ಭಾರತವನ್ನು ನೋಡುತ್ತಾರೆ. ಭಾರತ ಇನ್ನೇನು `ಸೂಪರ್ ಪವರ್~ ಆಗೇಬಿಟ್ಟಿತೆಂದು ನಂಬುತ್ತಾರೆ. ಹಿಂದೆ ಜರ್ಮನರು ಭಾರತವನ್ನು ಒಂದು ಪಾರಲೌಕಿಕ ನಾಗರಿಕತೆಯೆಂದು ಗೌರವಿಸುತ್ತಿದ್ದರೆಂದು ಕೇಳಿದ್ದೆವು. ಇದೂ ವಸಾಹತುಶಾಹಿ ದೃಷ್ಟಿಕೋನದ ಒಂದು ಭಾಗವೇ.

ಆದರೆ ಇವತ್ತು ಜರ್ಮನರು ಪ್ರೀತಿಸುವುದು ಬಾಲಿವುಡ್ ಸಿನಿಮಾವನ್ನು. ಅವರಲ್ಲಿ ಬಹುತೇಕರಿಗೆ ಭಾರತವೆಂದರೆ ಬಾಲಿವುಡ್. ಬಾಲಿವುಡ್ ನಟ-ನಟಿಯರಂತೆ ವೇಷ ಧರಿಸಿ ತಮಗರ್ಥವಾಗದ ಹಿಂದಿ ಸಿನಿಮಾಹಾಡುಗಳಿಗನುಗುಣವಾಗಿ ಖುಷಿಯಿಂದ ಕುಣಿಯುವುದನ್ನು ಹಲವು ಕಡೆ ನೋಡಬಹುದು.

ವಸಾಹತುಶಾಹಿ ಯುಗದಲ್ಲಿ ಭಾರತವೆಂದರೆ ಪ್ರಾಚೀನ ಭಾರತ ಮಾತ್ರ ಎಂಬ ನಂಬಿಕೆ ಇಂದಿನ ವಸಾಹತೋತ್ತರ ಯುಗದಲ್ಲಿ ತಿರುವುಮುರುವಾಗಿದೆ. ಇಂದು ಜರ್ಮನಿಯ ಬಹುತೇಕರಿಗೆ ಅದರಲ್ಲೂ ತರುಣ-ತರುಣಿಯರಿಗೆ ಭಾರತವೆಂದರೆ ಬಾಲಿವುಡ್. ರವಿಶಂಕರ್ ಅವರಂಥ ಯೋಗಗುರುಗಳು ತುಂಬಾ ಜನಪ್ರಿಯರಾದರೂ ಅದನ್ನು ಬಾಲಿವುಡ್‌ನ ಅಭೂತಪೂರ್ವ ಜನಪ್ರಿಯತೆಗೆ ಹೋಲಿಸಲಾಗದು.

ಆದರೆ ಭಾರತವೆಂದರೆ ಬರೀ ಸಂಸ್ಕೃತವೆಂಬ ನಿಲವು ಅದೆಷ್ಟು ಸರಳೀಕೃತವೋ ಅಷ್ಟೇ ಸರಳೀಕೃತವಾದುದು ಬಾಲಿವುಡ್ಡೇ ಭಾರತವೆಂಬ ನಿಲವು. ಭಾರತವೆಂಬ ಸಂಕೀರ್ಣ ಸತ್ಯವನ್ನು ಕೇವಲ ಸಂಸ್ಕೃತವಾಗಲಿ ಯೋಗವಾಗಲಿ ಬಾಲಿವುಡ್ಡಾಗಲಿ ಸಮಗ್ರವಾಗಿ ಹಿಡಿದಿಡಲಾರದು. ಇದು ಜರ್ಮನಿಯ ಗಂಭೀರ ಭಾರತ ತಜ್ಞರಿಗೂ ಗೊತ್ತಿದೆ. ಆದರೆ ಅಂಥವರ ಸಂಖ್ಯೆ ಬಹು ಕಡಿಮೆ.

ಸರಳೀಕೃತ ಸ್ಟೀರಿಯೋಟೈಪ್‌ಗಳಲ್ಲಿ ಪರಸಂಸ್ಕೃತಿಗಳನ್ನು ಗ್ರಹಿಸುವ ವಸಾಹತುಶಾಹಿ ಪ್ರವೃತ್ತಿ ಇನ್ನೊಂದು ಬಗೆಯಲ್ಲಿ ವಸಾಹತೋತ್ತರ ಜಗತ್ತನ್ನು ಪೀಡಿಸುತ್ತಿದೆ. ಇಂಥ ಸನ್ನಿವೇಶಗಳಲ್ಲಿ ಸಂಸ್ಕೃತಿಗಳು ಪರಸ್ಪರ ಅರ್ಥ ಮಾಡಿಕೊಳ್ಳುತ್ತಿವೆ ಎಂಬುದರ ಬಗ್ಗೆಯೇ ಸಂದೇಹ ಬರತೊಡಗುತ್ತದೆ.

ಅಂತಿಮವಾಗಿ ನಾವು ಪರಸಂಸ್ಕೃತಿಗಳನ್ನು ಯಾಕೆ ಅರ್ಥ ಮಾಡಿಕೊಳ್ಳಬಯಸುತ್ತೇವೆ? ನಮ್ಮ ಸೀಮಿತ ಅರಿವಿನ ಪರಿಧಿಗಳನ್ನು ಹಿಗ್ಗಿಸಿಕೊಳ್ಳಲೆಂದೆ ಅಥವಾ ನಮ್ಮಲ್ಲಿರುವ ಯಾವುದೋ ಕೊರೆಯನ್ನು ತುಂಬಿಕೊಳ್ಳಲೆಂದೆ?

ಭಿನ್ನಭಿನ್ನ ದೇಶ-ಭಾಷೆಗಳ ನಡುವೆ ಅಸಮಾನ ಮತ್ತು ಅಸಮಗ್ರ ಸಾಂಸ್ಕೃತಿಕ ವಿನಿಮಯಗಳನ್ನು ಕೊನೆಗೊಳಿಸಬೇಕಾದರೆ ಈ ಪ್ರಶ್ನೆಗಳ ಬಗ್ಗೆ ಚಿಂತಿಸಬೇಕಾಗಿದೆ. ಯಾಕೆಂದರೆ ಆಮಿ ಸೀಜರ್ ಹೇಳಿದ ಹಾಗೆ ಪರಸಂಸ್ಕೃತಿಗಳೊಂದಿಗೆ ಸರಿಸಮಾನವಾಗಿ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳದ ನಾಗರೀಕತೆಗಳಿಗೆ ಉಳಿಗಾಲವಿಲ್ಲ.
(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT