ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಾಚೆ ಮೊಳಗಿದ ಸ್ವಾತಂತ್ರ್ಯಾಗ್ರಹ

Last Updated 12 ಆಗಸ್ಟ್ 2016, 6:58 IST
ಅಕ್ಷರ ಗಾತ್ರ

ಹರ್ ದಯಾಳ್! ಲಾಲಾ ಹರ್ ದಯಾಳ್. ಈ ಹೆಸರು ನೆನಪಿದೆಯೇ? ನಮ್ಮ ಶಾಲಾ ಕಾಲೇಜಿನ ಇತಿಹಾಸ ಪಠ್ಯಗಳಲ್ಲಿ ಈತನನ್ನು ಹುಡುಕುವುದು ತ್ರಾಸವೆ.

‘ಗದರ್ ಚಳವಳಿ’ಯ ಉಲ್ಲೇಖವಾದಾಗ, ‘ಗದರ್‌ ಪಕ್ಷ’ದ ಸ್ಥಾಪಕ ಎಂತಲೋ, ‘ಪಂಜಾಬಿನ ಕೇಸರಿ’ ಲಾಲಾ ಲಜಪತರಾಯರ ಅಪ್ರತಿಮ ಶಿಷ್ಯ ಎಂದೋ ಒಂದು ಸಾಲಿನಲ್ಲಿ ಈತ ಇಣುಕಿರಬಹುದು. ಅಷ್ಟರ ಹೊರತಾಗಿ ಹರ್ ದಯಾಳ್ ನಮ್ಮ ಪಠ್ಯಗಳಲ್ಲಿ ತೆರೆದುಕೊಂಡಿದ್ದು ಕಡಿಮೆಯೆ.

ಇತ್ತೀಚೆಗೆ ಎಮಿಲಿ ಬ್ರೌನ್ ಅವರು ಅಮೆರಿಕದ ಅರಿಜೋನ ಯೂನಿವರ್ಸಿಟಿಗೆ ತಮ್ಮ ಎಂಫಿಲ್ ಪದವಿಗಾಗಿ ಮಂಡಿಸಿದ್ದ ಮಹಾಪ್ರಬಂಧವನ್ನು ಓದುತ್ತಿದ್ದೆ. ಆಕೆ ತನ್ನ ಮಹಾಪ್ರಬಂಧಕ್ಕೆ ಆಯ್ದುಕೊಂಡದ್ದು ಲಾಲಾ ಹರ್ ದಯಾಳ್ ಬದುಕನ್ನು! ಎಲ್ಲಿಯ ಎಮಿಲಿ ಬ್ರೌನ್, ಅದೆಲ್ಲಿಯ ಹರ್ ದಯಾಳ್! ಆ ಮಹಾಪ್ರಬಂಧಕ್ಕೆ ಆಕೆ ಕೊಟ್ಟ ಒಕ್ಕಣೆ, ‘Har Dayal- A Portrait of an Indian Intellectual’.

ಹಾಗೆ ನೋಡಿದರೆ, ಹರ್ ದಯಾಳ್ ಬದುಕಿದ್ದು ಕೇವಲ 45 ವರ್ಷ. ಆದರೆ ಆತನ ಬದುಕು ಎಂದಿಗೂ ಜಡಗೊಂಡಿರಲಿಲ್ಲ.  ದೆಹಲಿಯ ಕೇಂಬ್ರಿಡ್ಜ್ ಮಿಷನ್ ಶಾಲೆಯಲ್ಲಿ ಸಂಸ್ಕೃತ ಕಲಿತು, ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿ, ಆಕ್ಸ್‌ಫರ್ಡ್‌ನತ್ತ ನಡೆದ. ಅಷ್ಟರ ಹೊತ್ತಿಗಾಗಲೇ ಸಮಾಜವಾದ ತಲೆ ತುಂಬಿಕೊಂಡಿತ್ತು.

ಪತ್ರಿಕೆಗಳಲ್ಲಿ ಮೊನಚಾದ ಲೇಖನ ಬರೆದ. ಆ ಕಾಲದ ಪ್ರತಿಭಾನ್ವಿತ ವಿದ್ಯಾರ್ಥಿಗಳೆಲ್ಲಾ ಬ್ಯಾರಿಸ್ಟರ್, ಐಸಿಎಸ್ ಬಾಲ ಹಿಡಿದು ಇಂಗ್ಲೆಂಡಿಗೆ ತೆರಳುತ್ತಿದ್ದರು. ‘To Hell with the ICS’, ಹರ್ ದಯಾಳ್ ಭಾರತದತ್ತ ಮುಖ ಮಾಡಿದ. ಭಾರತದಲ್ಲೂ ಲೇಖನ ಕೃಷಿ ಮುಂದುವರೆಯಿತು.

ಹರ್ ದಯಾಳ್ ಬರಹದ ಮೊನಚು ಸಹಿಸದೆ ಬ್ರಿಟಿಷರು ಆತನ ಬೆನ್ನುಬಿದ್ದರು. ಲಾಲಾ ಲಜಪತರಾಯ್, ಶಿಷ್ಯನಿಗೆ ದೇಶ ಬಿಡುವಂತೆ ಸೂಚಿಸಿದರು. ಹರ್ ದಯಾಳ್ ಪ್ಯಾರಿಸ್‌ನತ್ತ ಹೊರಟ. ‘ವಂದೇ ಮಾತರಂ’ ಎಂಬ ಪತ್ರಿಕೆಗೆ ಸಂಪಾದಕನಾದ.

ಅಲ್ಲೂ ಹೆಚ್ಚು ದಿನ ಉಳಿಯಲು ಸಾಧ್ಯವಾಗಲಿಲ್ಲ. ಅಲ್ಗೇರಿಯಾದಲ್ಲಿ ಕೊಂಚ ಸಮಯವಿದ್ದ. ಓದು ಬೆಳೆದಂತೆ ಆತನ ಸೈದ್ಧಾಂತಿಕ ನಿಲುವುಗಳೂ ಬದಲಾಗುತ್ತಾ ಸಾಗಿದವು. ನಿರೀಶ್ವರವಾದಿಯಾಗಿದ್ದ ತರುಣ, ಕಠಿಣ ಧಾರ್ಮಿಕ ಅನುಷ್ಠಾನಕ್ಕೆ ಇಳಿದ, ಬೇಯಿಸಿದ ಬೇಳೆಕಾಳು, ಗೆಣಸು ಬಿಟ್ಟು ಬೇರೇನನ್ನೂ ಸೇವಿಸುತ್ತಿರಲಿಲ್ಲ, ನೆಲದ ಮೇಲೆ ಮಲಗುತ್ತಿದ್ದ. ಸಮುದ್ರ ತೀರದಲ್ಲಿ ಧ್ಯಾನಕ್ಕೆ ಕೂತರೆ ಗಂಟೆಗಳು ಸರಿದು ಹೋಗುತ್ತಿದ್ದವು. ತಾರುಣ್ಯ ಪುಟಿಯುವ ಹೊತ್ತಿನಲ್ಲಿ ಭೈರಾಗಿಯ ಬದುಕು!

ನಂತರ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದ, ಕಾರ್ಲ್ ಮಾರ್ಕ್ಸ್ ವಿಚಾರ ಸರಣಿಯ ಒಳಹೊಕ್ಕ, ಆರ್ಯ ಸಮಾಜದ ಪ್ರಚಾರಕರಾಗಿದ್ದ ಪರಮಾನಂದ ಎಂಬ ಮತ್ತೊಬ್ಬ ಪಂಜಾಬಿ, ಹರ್ ದಯಾಳ್‌ನನ್ನು ಕ್ಯಾಲಿಫೋರ್ನಿಯಕ್ಕೆ ಬರಮಾಡಿಕೊಂಡರು.

ಅಲ್ಲಿಂದ ಹರ್ ದಯಾಳ್ ಬದುಕು ಹೋರಾಟದ ಬದುಕಾಗಿ ಮಗ್ಗುಲು ಬದಲಿಸಿತು. ಅಮೆರಿಕ ಕಾರ್ಯಕ್ಷೇತ್ರವಾಯಿತು. ಈತನ ಅರ್ಹತೆಗೆ ಬರ್ಕ್‌ಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ದೊರೆಯಿತು. ಭಾರತೀಯರನ್ನು ಸಂಘಟಿಸುವ ಹೊಣೆ ಹೆಗಲಿಗೆ ಬಿತ್ತು. ಅದಾಗ ಅಮೆರಿಕದಲ್ಲಿ ನೆಲೆಸಿದ್ದ ವಲಸಿಗರ ಸ್ಥಿತಿ ಹೇಳಿಕೊಳ್ಳುವಂತೆ ಇರಲಿಲ್ಲ. ವರ್ಣಭೇದ ನೀತಿ ಭಾರತೀಯರನ್ನೂ ಬಾಧಿಸಿತ್ತು.

ಹರ್‌ ದಯಾಳ್ ತನ್ನ  ಸಂಗಡಿಗರೊಂದಿಗೆ ಸಂಘಟನೆಯೊಂದನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದ. ‘ಹಿಂದೂಸ್ತಾನ್ ಅಸೋಸಿಯೇಷನ್’ ಅಸ್ತಿತ್ವಕ್ಕೆ ಬಂತು. ಜೊತೆಯಲ್ಲೇ ‘ಭಾರತ ಸ್ವತಂತ್ರಗೊಳ್ಳಬೇಕು’ ಎಂಬ ಕೂಗು ಅಮೆರಿಕದಲ್ಲಿ ಎದ್ದಿತು. ಆ ಕೂಗು ಎದ್ದಾಗ ಗಾಂಧೀಜಿ ಭಾರತಕ್ಕಿನ್ನೂ ಬಂದಿರಲಿಲ್ಲ.

ಮುಂದೆ ‘ಹಿಂದೂಸ್ತಾನ್ ಅಸೋಸಿಯೇಷನ್’, ‘ಗದರ್ ಪಕ್ಷ’ವಾಯಿತು. ಸೋಹಾನ್ ಸಿಂಗ್ ಬಕಾನ ಅಧ್ಯಕ್ಷರಾದರು. ಹರ್‌ ದಯಾಳ್ ಪ್ರಧಾನ ಕಾರ್ಯದರ್ಶಿಯಾದರೆ, ಕಾನ್ಷಿರಾಂ ಖಜಾಂಚಿಯಾದರು. ಗದರ್ ಪಕ್ಷದ ಬಹುತೇಕ ಕಾರ್ಯಕರ್ತರು ಬ್ರಿಟಿಷ್ ಸೇನೆಯಲ್ಲಿದ್ದವರು, ಪೊಲೀಸರಾಗಿ ಕಾರ್ಯ ನಿರ್ವಹಿಸಿದವರು. ಹಲವು ವರ್ಷ ಹಾಂಕಾಂಗ್ ಮತ್ತು ಶಾಂಘೈಗಳಲ್ಲಿ ಸೇವೆ ಸಲ್ಲಿಸಿ ಅಮೆರಿಕಕ್ಕೆ ವಲಸೆ ಬಂದು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದವರು.

ಅಮೆರಿಕದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಗದರ್ ಪಕ್ಷದ ಜೊತೆಯಾದರು. ‘ಗದರ್’ ಪತ್ರಿಕೆಯೂ ಆರಂಭವಾಯಿತು. ಹರ್ ದಯಾಳ್ ಲೇಖನಿಯಿಂದ ಮೊನಚಾದ ಲೇಖನಗಳು ಬಂದವು. ಯುರೋಪ್, ಮಲೇಷ್ಯಾ, ಹಾಂಕಾಂಗ್, ಕೆನಡಾ, ಈಜಿಪ್ಟ್‌ಗಳಿಗೂ ಪತ್ರಿಕೆ ತಲುಪಿತು. ಭಾರತದ ಕ್ರಾಂತಿಕಾರಿಗಳೂ ತುದಿಗಾಲಲ್ಲಿ ನಿಂತು ಹರ್ ದಯಾಳ್ ಲೇಖನ ಓದಿದರು. ಸಹಜವಾಗಿಯೇ ಬ್ರಿಟಿಷರು ಪತ್ರಿಕೆಗೆ ನಿರ್ಬಂಧ ಹೇರಿದರು.

ಅಮೆರಿಕ ಸರ್ಕಾರದ ಮೇಲೂ ಒತ್ತಡ ತಂದು, ಹರ್‌ ದಯಾಳ್‌ ಬಂಧನವಾಗುವಂತೆ ನೋಡಿಕೊಂಡರು. 1914ರ ಮಾರ್ಚ್ 24ರಂದು ಜಾಮೀನಿನ ಮೇಲೆ ಹೊರಬಂದ ಹರ್ ದಯಾಳ್, ಸ್ವಿಟ್ಜರ್‌ಲೆಂಡ್‌ಗೆ ತೆರಳಿದ, ಅಲ್ಲಿಂದ ಜರ್ಮನಿ ತಲುಪಿದ. ಗದರ್ ಚಟುವಟಿಕೆಗೆ ಜರ್ಮನಿಯಿಂದ ಹಣ ಬರುತ್ತಿದೆ ಎಂದು ಪ್ರಕರಣ ಹೂಡಲಾಯಿತು. ಅದು Hindu- German Conspiracy ಎಂದೇ ಇತಿಹಾಸದಲ್ಲಿ ದಾಖಲಾಯಿತು. ಗದರ್ ಪಕ್ಷದ ಹಲವು ಕಾರ್ಯಕರ್ತರು ಬಂಧನಕ್ಕೊಳಗಾದರು.

ನಂತರ ಹರ್ ದಯಾಳ್ ಹೆಚ್ಚು ಬರವಣಿಗೆಯಲ್ಲಿ ತೊಡಗಿದ. Thoughts on Education, Social Conquest of Hindu Race, Hints for Self-Cultureನಂತಹ ಹಲವು ಮಹತ್ವದ ಕೃತಿಗಳು ಬಂದವು. ಹರ್ ದಯಾಳ್ ತನ್ನ ಬರಹಗಳಲ್ಲಿ ಬ್ರಿಟಿಷ್ ಆಡಳಿತ ಭಾರತಕ್ಕೆ ಹೇಗೆ ಮಾರಕ ಎಂಬುದನ್ನು ಪ್ರತಿಪಾದಿಸಿದ. ಮೊದಲಿಗೆ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡರೂ ಬರಬರುತ್ತಾ ಹಿಂಸಾ ವಿರೋಧಿ ನಿಲುವು ತಳೆದ.

ಶಾಂತಿಯ ಮಹತ್ವ ಸಾರಿದ. 1939ರ ಮಾರ್ಚ್ 4ರಂದು ಸಂಜೆ ಉಪನ್ಯಾಸ ನೀಡಿದ್ದ ಹರ್ ದಯಾಳ್ ಮರುದಿನದ ಹೊತ್ತಿಗೆ ಶವವಾಗಿದ್ದ. ಹರ್ ದಯಾಳ್ ನಿಕಟವರ್ತಿಯಾಗಿದ್ದ, ‘ಭಾರತ್ ಮಾತಾ ಸೊಸೈಟಿ’ಯ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದ ಲಾಲಾ ಹನುಮಂತ ಸಹಾಯ್, ಹರ್ ದಯಾಳ್ ಸಾವನ್ನು ನೈಜ ಎಂದು ಒಪ್ಪಿಕೊಳ್ಳಲಿಲ್ಲ. ವಿಷ ಪ್ರಾಶನದಿಂದಾದ ಸಾವು ಎಂದರು.

ಆದರೆ ಆ ಬಗ್ಗೆ ಹೆಚ್ಚೇನೂ ತನಿಖೆ ನಡೆಯಲಿಲ್ಲ. ಹರ್ ದಯಾಳ್ ನಂತರ ಗದರ್ ಚಳವಳಿ ಮಂದವಾಯಿತು, ಆದರೆ ಅದಾಗಲೇ ರಾಷ್ಟ್ರಪ್ರಜ್ಞೆಯ ಯಜ್ಞ ಕುಂಡಕ್ಕೆ ಸಾಕಷ್ಟು ಹವಿಸ್ಸು ಬಿದ್ದಿತ್ತು.

ಅದು ಭಾರತ ಸ್ವಾತಂತ್ರ್ಯ ಚಳವಳಿಯ ಪರ್ವ ಕಾಲ. ದೇಶದಲ್ಲಷ್ಟೇ ಅಲ್ಲ, ಇತರ ದೇಶಗಳಿಗೆ ಹೊಟ್ಟೆ ಪಾಡಿಗೆಂದು, ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಭಾರತೀಯರು ಸಂಘಟಿತರಾಗಿ ಭಾರತದ ದಾಸ್ಯ ವಿಮೋಚನೆಗೆ ಆಗ್ರಹಿಸುತ್ತಿದ್ದರು. ಲಂಡನ್ನಿಗೆ ತೆರಳಿದ ವಿದ್ಯಾರ್ಥಿಗಳಿಗೆ ಶ್ಯಾಮ ಜೀ ಕೃಷ್ಣವರ್ಮರ ‘ಇಂಡಿಯಾ ಹೌಸ್’ ಆಶ್ರಯ ತಾಣವಾಗಿತ್ತು, ವಿದ್ಯಾರ್ಥಿಗಳಿಗೆ ನವಚೈತನ್ಯ ತುಂಬುತ್ತಿತ್ತು.

‘ಇಂಡಿಯಾ ಹೌಸ್’ನಿಂದ ಮದನ್ ಲಾಲ್ ಧ್ರಿಂಗ್ರಾರಂತಹ ಸಿಡಿಗುಂಡುಗಳೇ ಹೊರಬೀಳುತ್ತಿದ್ದವು. ಇಂಡಿಯಾ ಹೌಸ್ ಮಾದರಿಯಲ್ಲೇ, ಅಮೆರಿಕ ಮತ್ತು ಜಪಾನ್ ದೇಶಗಳಲ್ಲೂ ರಾಷ್ಟ್ರೀಯವಾದಿ ಸಂಸ್ಥೆಗಳು ಬೆಳೆದವು. ಅಮೆರಿಕದ ಮಟ್ಟಿಗೆ ವಿವೇಕಾನಂದರ ಷಿಕಾಗೊ ಪ್ರವಾಸ ಸಂಚಲನ ಮೂಡಿಸಿ, ಭಾರತೀಯ ಪ್ರಜ್ಞೆ ಜಾಗೃತಗೊಂಡಿತ್ತು. ಸ್ವಾಮಿ ಅಭೇದಾನಂದರ ಸಾರಥ್ಯದಲ್ಲಿ ‘ವೇದಾಂತ ಸೊಸೈಟಿ’ ನ್ಯೂಯಾರ್ಕ್ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ಮೇಡಮ್ ಕಾಮಾ, ಮ್ಯಾನ್‌ಹಟನ್‌ನಲ್ಲಿ ‘ಭಾರತ ಹೌಸ್’ಗೆ ಬುನಾದಿ ಹಾಕಿದರು. ಜಾಗತಿಕ ಭಾರತೀಯ ಆಂದೋಲನದ ಕೇಂದ್ರವಾಗಿ ನ್ಯೂಯಾರ್ಕ್ ಮಾರ್ಪಟ್ಟಿತ್ತು.


ಅಖಿಲ ಭಾರತ ಕಾಂಗ್ರೆಸ್ ಪ್ರತಿನಿಧಿಯಾಗಿ ಅಮೆರಿಕಕ್ಕೆ ಬಂದಿದ್ದ ಲಾಲಾ ಲಜಪತರಾಯ್ 5 ವರ್ಷಗಳ ಅವಧಿಯಲ್ಲಿ ಮಹತ್ವದ ಕೆಲಸ ಮಾಡಿದರು. ‘ಇಂಡಿಯಾ ಹೋಂ ರೂಲ್ ಲೀಗ್’ ಶಾಖೆಯನ್ನು ನ್ಯೂಯಾರ್ಕಿನಲ್ಲಿ ಆರಂಭಿಸಿದರು. 1919ರಲ್ಲಿ ‘ಯಂಗ್ ಇಂಡಿಯಾ’ ಪತ್ರಿಕೆ ಪ್ರಾರಂಭವಾಯಿತು. ಅದರ ಸಂಪಾದಕೀಯದ ಹೊಣೆಯನ್ನು ಸಂಡರ್ಲ್ಯಾಂಡ್ ವಹಿಸಿಕೊಂಡರು. ಅಮೆರಿಕದ ಪತ್ರಕರ್ತ ಅಗ್ನೇಸ್ ಸ್ಮೆಡ್ಲಿ ಮತ್ತು ಶೈಲೇಂದ್ರನಾಥ್ ಘೋಷ್ ಜೊತೆಗೂಡಿ, ‘ಫ್ರೆಂಡ್ಸ್ ಆಫ್ ಇಂಡಿಯಾ’ ಎಂಬ ಸಂಘಟನೆಗೆ ನಾಂದಿ ಹಾಡಿದರು.

ಈ ಎಲ್ಲ ಸಂಘಟನೆಗಳ ಏಕದನಿಯ ಆಗ್ರಹ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂಬುದೇ ಆಗಿತ್ತು. ಬ್ರಿಟಿಷರ ದಬ್ಬಾಳಿಕೆಯ ಬಗ್ಗೆ ಅಮೆರಿಕನ್ನರಿಗೆ ಅರಿವು ಮೂಡಿಸುವ, ಅಮೆರಿಕ ಸರ್ಕಾರದ ಮನವೊಲಿಸಿ ಬ್ರಿಟನ್ ಮೇಲೆ ಒತ್ತಡ ತರುವ ಕೆಲಸಕ್ಕೆ ಈ ಸಂಸ್ಥೆಗಳು ಮುಂದಾದವು. ಲಾಲಾ ಲಜಪತರಾಯ್, ನೀಗ್ರೊ ನಾಯಕ, ಶಿಕ್ಷಣ ತಜ್ಞ, ವಾಗ್ಮಿ ಬೂಕರ್ ಟಿ ವಾಷಿಂಗ್ಟನ್ ಜೊತೆ ನಿಕಟ ಸಂಪರ್ಕ ಹೊಂದಿದ್ದರು.

ಬೂಕರ್ ವಾಷಿಂಗ್ಟನ್ ಅಮೆರಿಕ ಅಧ್ಯಕ್ಷರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಮೆರಿಕದ ಪ್ರಸಿದ್ಧ ಪತ್ರಕರ್ತ ವಾಲ್ಟರ್ ಲಿಪ್‌ಮ್ಯಾನ್‌ ಭಾರತ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಅಮೆರಿಕ ಮಾಧ್ಯಮಗಳ ಗಮನ ಸೆಳೆಯಲು ರಾಯ್ ಅವರಿಗೆ ಕಿವಿಮಾತು ಹೇಳಿದರು.

ಪ್ರಥಮ ವಿಶ್ವಸಮರಕ್ಕೆ ಮೊದಲು ಭಾರತದ ವಿಷಯದಲ್ಲಿ ಅಮೆರಿಕ ತಟಸ್ಥ ನೀತಿ ಹೊಂದಿತ್ತು. ಆದರೆ ಪ್ರಥಮ ವಿಶ್ವ ಸಮರದ ನಂತರ ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ‘Fourteen Points Speech’ ಎಂಬ ಮಹತ್ವದ ಭಾಷಣ ಮಾಡಿದರು. ಅದರಲ್ಲಿ ಸಣ್ಣ ರಾಷ್ಟ್ರಗಳಿಗೆ ಸ್ವಾತಂತ್ರ್ಯ ನೀಡುವ ಬಗ್ಗೆ, ಸಾಮ್ರಾಜ್ಯಶಾಹಿ ಧೋರಣೆಗೆ ಅಂತ್ಯ ಹಾಡುವ ಬಗ್ಗೆ ವಿಲ್ಸನ್ ಮಾತನಾಡಿದ್ದರು.

ಹಾಗಂತ ಬ್ರಿಟನ್ ಆಡಳಿತದಿಂದ ಭಾರತ ಮುಕ್ತವಾಗಬೇಕು ಎಂಬ ಆಶಯ ವಿಲ್ಸನ್ ಅವರದ್ದಾಗಿರಲಿಲ್ಲ. ಆದರೆ ಭಾರತೀಯ ಸಮೂಹ ವಿಲ್ಸನ್ ಭಾಷಣವನ್ನೇ ಮುಂದಿಟ್ಟುಕೊಂಡು, ತಮ್ಮ ಆಗ್ರಹವನ್ನು ಬಲಪಡಿಸಿತು.

ಭಾರತ ಹೋಂ ರೂಲ್ ಲೀಗ್ ಅಧ್ಯಕ್ಷರಾಗಿದ್ದ ಮದ್ರಾಸಿನ ಸುಬ್ರಮಣಿಯನ್ ಅಯ್ಯರ್ ‘Message to President Wilson’ ಎಂಬ ಪತ್ರ ಬರೆದರು. ಅದು ‘ಯಂಗ್ ಇಂಡಿಯಾ’ ಪ್ರಥಮ ಸಂಚಿಕೆಯಲ್ಲಿ ಪ್ರಕಟವಾಯಿತು. ಹಲವು ಪತ್ರಿಕೆಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದ ವರದಿ ಹೊತ್ತು ಅಮೆರಿಕದಲ್ಲಿ ಅಚ್ಚಾದವು.

‘ಇಂಡಿಪೆಂಡೆಂಟ್ ಹಿಂದೂಸ್ತಾನ್’, ‘ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ ಪತ್ರಿಕೆಗಳು ಬಂದವು. ತಾರಕನಾಥ ದಾಸ್ ‘ಫ್ರೀ ಹಿಂದೂಸ್ತಾನ್’ ಎಂಬ ಕ್ರಾಂತಿಕಾರಿ ನಿಯತಕಾಲಿಕವನ್ನು ಹೊರತಂದರು. ಭಾರತದ ಬಗ್ಗೆ ಸದಭಿಪ್ರಾಯ ರೂಪಿಸುವ, ಬ್ರಿಟಿಷರ ದರ್ಪ, ದಬ್ಬಾಳಿಕೆಯನ್ನು ಅನಾವರಣಗೊಳಿಸುವ ಕೆಲಸವನ್ನು ಈ ಪತ್ರಿಕೆಗಳು ಮಾಡಿದವು.

ಆದರೆ ಇದಕ್ಕೆ ಪ್ರತಿಯಾಗಿ ಬ್ರಿಟನ್ ಆಡಳಿತ ಭಾರತದ ಉದ್ಧಾರಕ್ಕೆ ಅವಶ್ಯ ಎಂಬಂತೆ ಬಿಂಬಿಸುವ ಪ್ರಯತ್ನಗಳೂ ಆದವು. ಕ್ಯಾಥರೀನ್ ಮೇಯೊ ‘ಮದರ್ ಇಂಡಿಯಾ’ ಕೃತಿಯ ಮೂಲಕ ಭಾರತವನ್ನು ಕೀಳಾಗಿ ಚಿತ್ರಿಸಿದರು. ಆ ಕೃತಿಯ ಬಗ್ಗೆ ಗಾಂಧೀಜಿ ‘ಗಟಾರ ಪರೀಕ್ಷಕರ ವರದಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರೆ, ‘ಮದರ್ ಇಂಡಿಯಾ’ ಕೃತಿಗೆ ತಿರುಗೇಟು ನೀಡುವ ಹಲವು ಕೃತಿಗಳು ಅಮೆರಿಕದಲ್ಲಿ ಮುದ್ರಣಗೊಂಡವು. ಸಂಡರ್ಲ್ಯಾಂಡ್ ‘India in Bondage’ ಕೃತಿ ತಂದರು. ಸಿ.ಎಸ್. ಅಯ್ಯರ್ ‘ಫಾದರ್ ಇಂಡಿಯಾ’ ಪ್ರಕಟಿಸಿದರು.

ರವೀಂದ್ರನಾಥ ಟ್ಯಾಗೋರ್, ಕಮಲಾದೇವಿ ಚಟ್ಟೋಪಾಧ್ಯಾಯ, ಲೋಹಿಯಾ, ಸರೋಜಿನಿ ನಾಯ್ಡು, ಸಿ.ಎಫ್.ಆಂಡ್ರೀವ್ ಮುಂತಾದವರು ಅಮೆರಿಕಕ್ಕೆ ಬಂದು ಸರಣಿ ಉಪನ್ಯಾಸಗಳನ್ನು ನೀಡಿ ಭಾರತದ ಬಗ್ಗೆ ಅಮೆರಿಕನ್ನರಲ್ಲಿ ಸದಭಿಪ್ರಾಯ ರೂಪಿಸಲು ಶ್ರಮಿಸಿದರು. ಪತ್ರಕರ್ತ ಸೈಯದ್ ಹುಸೇನ್ ಅಮೆರಿಕದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಲೇಖನ ಬರೆದರು. 1930ರಲ್ಲಿ 20 ಕೃತಿಗಳು ಒಂದರ ಹಿಂದೊಂದು ಅಚ್ಚಾದವು.

ಒಂದೇ ವರ್ಷದ ಅವಧಿಯಲ್ಲಿ ಭಾರತ ಸ್ವಾತಂತ್ರ್ಯ ಚಳವಳಿ ಕುರಿತ ಸುಮಾರು 500 ಲೇಖನಗಳು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯೊಂದರಲ್ಲೇ ಪ್ರಕಟವಾದವು. ಹೀಗೆ ಪರನೆಲದಲ್ಲಿದ್ದರೂ ರಾಷ್ಟ್ರ ಪತಾಕೆಯನ್ನು ಎತ್ತಿ ಹಿಡಿಯಲು ಹಲವರು ಶ್ರಮಿಸಿದರು. ದೇಶದ ಹೊರಗಿದ್ದರೇನು ‘ಬ್ರಿಟಿಷರೇ, ಕ್ವಿಟ್ ಇಂಡಿಯಾ’ ಎಂದು ಕೂಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT