ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕನೇ ಆಗಬೇಕು ಭಾರತ ರತ್ನ

Last Updated 31 ಜುಲೈ 2011, 19:30 IST
ಅಕ್ಷರ ಗಾತ್ರ

ಭಾರತ ರತ್ನ. ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಮೂರು ವರ್ಷಗಳ ಹಿಂದೆ, ಗಾನ ಗಾರುಡಿಗ ಭೀಮಸೇನ ಜೋಶಿ ಅವರಿಗೆ ಕೊಟ್ಟ ನಂತರ ಯಾರೂ `ಭಾರತ ರತ್ನ~ ಆಗಿಲ್ಲ. ಈ ತಿಂಗಳೇ ಇದರ ಪ್ರಕಟನೆ ಆಗಬೇಕು.

ಕ್ರಿಕೆಟ್ ಗಾರುಡಿಗ ಸಚಿನ್ ತೆಂಡೂಲ್ಕರ್ ಹೆಸರು ಮತ್ತೆ ಚಾಲ್ತಿಯಲ್ಲಿದೆ. `ಅವರಿಗೇನು ಕೊಡ್ತೀರಿ ಬಿಡ್ರಿ, ಪಾಪ ನೋಬೆಲ್ ಪ್ರಶಸ್ತಿ ಸಿಗಬೇಕಿತ್ತು ಎಂದು ಹೇಳುತ್ತಿರುವ ಯಡಿಯೂರಪ್ಪ ಅವರಿಗೆ ಕೊಡಬೇಕ್ರಿ~ ಎಂದು ಕೀಟಲೆ ಮನಸ್ಸು ಹೇಳುತ್ತಿದೆ.

ಯಡಿಯೂರಪ್ಪನವರಿಗೂ ಭಾರತ ರತ್ನ ಪ್ರಶಸ್ತಿಗೂ ಸಂಬಂಧವೇ ಇಲ್ಲವಾದರೂ ನಮ್ಮ ದೇಶದಲ್ಲಿ ಪ್ರತಿಯೊಂದು ಪ್ರಶಸ್ತಿಯಲ್ಲೂ ರಾಜಕೀಯ ಬಣ್ಣ ಕಾಣುವುದರಿಂದ ಸುಮ್ಮನೇ ಚೇಷ್ಟೆಗಾಗಿ ಹೇಳಿದೆ.

ಕ್ರೀಡಾಂಕಣದಲ್ಲಿ ರಾಜಕೀಯ ಬರಬಾರದು ಎಂದುಕೊಂಡರೂ ಅದಿಲ್ಲದ ಕ್ಷೇತ್ರವೇ ಇಲ್ಲ. ಭಾರತ ರತ್ನ ಪ್ರಶಸ್ತಿಗಾಗಿ ಕ್ರೀಡಾಪಟುಗಳನ್ನೂ ಪರಿಗಣಿಸಬೇಕೆಂಬ ಸೂಚನೆಗೆ ಸಂಬಂಧಪಟ್ಟ ಕೇಂದ್ರ ಇಲಾಖೆ ಒಪ್ಪಿರುವುದರಿಂದ ಮುಂದೆ ಕ್ರೀಡಾಪಟುಗಳು ಪೈಪೋಟಿಗಿಳಿಯುವುದು ಖಂಡಿತ.

ಸಚಿನ್ ತೆಂಡೂಲ್ಕರ್ ಅವರ ಹೆಸರು ಈ ಪ್ರಶಸ್ತಿಗೆ ಪ್ರಸ್ತಾಪವಾಗಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷವೂ ಆಗಿತ್ತು. ಈ ವರ್ಷ ಸಚಿನ್ ಕಪಾಟಿನಲ್ಲಿ ವಿಶ್ವ ಕಪ್ ಸೇರಿಕೊಂಡಿದೆ.

 ಅಂತರರಾಷ್ಟ್ರೀಯ ರಂಗದಲ್ಲಿ (ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳು ಸೇರಿ) ನೂರನೇ ಶತಕ ಹೊಡೆಯುವ ಹುಮ್ಮಸ್ಸಿನಲ್ಲಿ ಅವರಿದ್ದಾರೆ. ಕಳೆದ ವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ಮೊದಲ ಟೆಸ್ಟ್‌ನಲ್ಲಿ ಅವರಿಗೆ ಆ ಸಾಧನೆ ಮಾಡಲಾಗಲಿಲ್ಲ.

ರಾಹುಲ್ ದ್ರಾವಿಡ್ ಶತಕ ಗಳಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ `ಗೋಡೆ~ ಮೇಲೆ ಬರೆದರಾದರೂ ಭಾರತ ಸೋಲಿನಿಂದ ಪಾರಾಗಲಿಲ್ಲ. ಒಂದು ವೇಳೆ ಲಾರ್ಡ್ಸ್‌ನಲ್ಲಿ ಸಚಿನ್ ನೂರನೇ ಶತಕ ಗಳಿಸಿಬಿಟ್ಟಿದ್ದರೆ `ಭಾರತ ರತ್ನ~ ವಿಷಯದಲ್ಲಿ ಬಹುಶಃ ಯಾವ ತಕರಾರೂ ಬರುತ್ತಲೇ ಇರಲಿಲ್ಲ.

ಸಚಿನ್ ಬದಲು ಹಾಕಿ ಮಾಂತ್ರಿಕ ಎಂದೇ ಹೆಸರು ಮಾಡಿದ್ದ ಧ್ಯಾನಚಂದ್ ಅಥವಾ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮರ್ಯಾದೆ ತಂದುಕೊಟ್ಟ ಪ್ರಕಾಶ್ ಪಡುಕೋಣೆ ಅವರ ಹೆಸರನ್ನು ಯಾರೂ ಸೂಚಿಸುತ್ತಲೇ ಇರಲಿಲ್ಲ. ಚದುರಂಗ ಚತುರ ವಿಶ್ವನಾಥನ್ ಆನಂದ್ ಅಥವಾ ರಾಹುಲ್ ದ್ರಾವಿಡ್ ಅವರೂ ನೆನಪಾಗುತ್ತಿರಲಿಲ್ಲ.

ಈ ಸಲ ಪ್ರಶಸ್ತಿಯನ್ನು ಒಬ್ಬ ಕ್ರೀಡಾಪಟುವಿಗೇ ಕೊಡಬೇಕೆಂದೇನೂ ನಿಗದಿಯಾಗಿಲ್ಲ. ಒಂದು ವೇಳೆ ಕೊಟ್ಟರೆ ಸಚಿನ್ ಜೊತೆ ಉಳಿದವರ ಹೆಸರನ್ನೂ ಪರಿಗಣಿಸುವುದು ಸೂಕ್ತ ಎಂದೆನಿಸುತ್ತದೆ. ಸಚಿನ್ ಈ ದೇಶದ `ಶ್ರೀಮಂತ~ ಕ್ರಿಕೆಟ್ ಆಟಗಾರನೆಂಬುದರಲ್ಲಿ ಎರಡು ಮಾತಿಲ್ಲ.
 
ರಾಹುಲ್ ದ್ರಾವಿಡ್ ಆಧುನಿಕ ಕ್ರಿಕೆಟ್‌ನ ಹಜಾರೆ (ರಾಮಚಂದ್ರ ಗುಹಾ ಅವರು ತಮ್ಮ ಅಂಕಣದಲ್ಲಿ ಹೀಗೆ ಬರೆದಿದ್ದು ಸಕಾಲಿಕವೂ ಸೂಕ್ತವೂ ಆಗಿದೆ.) ಎನಿಸಿಕೊಂಡರೂ ಸಚಿನ್ ಜೊತೆಗಿನ ಪೈಪೋಟಿಯಲ್ಲಿ ಅವರು ಸ್ವಲ್ಪ ಹಿಂದೆ ಬೀಳಬಹುದು.
 
ಪ್ರತಿವರ್ಷ ಆಗಸ್ಟ್ 29ರಂದು ಮಾತ್ರ ಧ್ಯಾನಚಂದ್ ನೆನಪಾಗುತ್ತಾರೆ. ಅಂದು ಅವರ ಜನ್ಮದಿನ ಹಾಗೂ ಅದನ್ನು ರಾಷ್ಟ್ರೀಯ ಕ್ರೀಡಾ ದಿನ ಎಂದು ಆಚರಿಸಲಾಗುತ್ತದೆ. ನಂತರ 364 ದಿನ ಅವರು ಯಾರಿಗೂ ನೆನಪಾಗುವುದೇ ಇಲ್ಲ.
 
ಅವರ ಮಗ ಅಶೋಕಕುಮಾರ್ ಕೂಡ ಅಂತರರಾಷ್ಟ್ರೀಯ ಹಾಕಿ ಆಟಗಾರ. ಸಚಿನ್ ತೆಂಡೂಲ್ಕರ್‌ಗೆ `ಭಾರತ ರತ್ನ~ ಕೊಡಬೇಕೆಂಬ ಸುದ್ದಿ ಬಂದ ಕೂಡಲೇ ಧ್ಯಾನಚಂದರ ಹೆಸರನ್ನೂ ಪರಿಗಣಿಸಬೇಕೆಂದು ಮೊದಲು ಹೇಳಿದವರು ಅಶೋಕಕುಮಾರ್.

ಹಾಕಿಗೆ ಸಂಬಂಧಪಟ್ಟ ಬೇರೆ ಯಾರೂ ಹಾಕಿ ಮಾಂತ್ರಿಕನ ಹೆಸರೂ ಹೇಳಲಿಲ್ಲ. ಒಲಿಂಪಿಕ್ ಹಾಕಿಯಲ್ಲಿ ಭಾರತದ ಸುವರ್ಣ ಅಧ್ಯಾಯವನ್ನು ಬರೆದವರೇ    ಧ್ಯಾನಚಂದ್. ಆಗಿನ ಹಾಕಿ ಆಟಕ್ಕೂ ಈಗಿನ ಕೃತಕ ಮೈದಾನದ ಮೇಲಿನ ಆಧುನಿಕ ಆಟಕ್ಕೂ ಬಹಳ ವ್ಯತ್ಯಾಸ ಇದೆ.

ಧ್ಯಾನಚಂದರು ಆಡುತ್ತಿದ್ದುದು ಕೌಶಲಪೂರ್ಣ ಆಟ. ಚೆಂಡನ್ನು ನಿಯಂತ್ರಿಸುವಲ್ಲಿ ಅವರು ತೋರುತ್ತಿದ್ದ ಕೈಚಳಕವನ್ನು ನೋಡಿ ಹಿಟ್ಲರ್ ಕೂಡ ದಂಗಾಗಿಹೋಗಿದ್ದ. ಇಂದಿನ ಹಾಕಿಯಲ್ಲಿ ಕೌಶಲಕ್ಕಿಂತ ದೈಹಿಕ ಅರ್ಹತೆ ಹೆಚ್ಚು ಮುಖ್ಯ. ಭಾರತೀಯರು ಇದರಲ್ಲಿ ಬಹಳ ಹಿಂದೆ ಬಿದ್ದಿದ್ದಾರೆ.

ಹಾಕಿಯಲ್ಲಿ ಧ್ಯಾನಚಂದರು ತೋರಿದ ಸಾಧನೆಯಂತೆಯೇ ಬ್ಯಾಡ್ಮಿಂಟನ್‌ನಲ್ಲಿ ಪ್ರಕಾಶ್ ಪಡುಕೋಣೆ ತೋರಿದ್ದಾರೆ. ಅವರಂಥ ಸಭ್ಯ ಕ್ರೀಡಾಪಟು ಬಹುಶಃ ಭಾರತದ ಕ್ರೀಡಾರಂಗದಲ್ಲಿ ಬೇರೆ ಯಾರೂ ಇಲ್ಲ. ಬ್ಯಾಡ್ಮಿಂಟನ್‌ನ ವಿಶ್ವ ಕಪ್ ಎಂದೇ ಹೆಸರಾದ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಗೆದ್ದ ಮೊದಲ ಭಾರತೀಯ ಪ್ರಕಾಶ್.

ಅವರಿಗೂ `ಭಾರತ ರತ್ನ~ ಪಡೆಯುವ ಅರ್ಹತೆ ಇದೆ ಎಂದು ಅವರ ಪುತ್ರಿ, ಬಾಲಿವುಡ್ ಬೆಡಗಿ ದೀಪಿಕಾ ಹೇಳಬೇಕಾಯಿತು. ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಬಗ್ಗೆ ಇನ್ನೂ ಯಾರೂ ಏನೂ ಹೇಳಿಲ್ಲ. ಧ್ಯಾನಚಂದ್ ಬದುಕಿರುವಷ್ಟು ದಿನ ಏನನ್ನೂ ಅಪೇಕ್ಷಿಸಿದವರಲ್ಲ. ಪ್ರಕಾಶ್ ಕೂಡ ಅದೇ ಮಾದರಿಯವರು.
 
ಹಾಗೆಂದು ಸಚಿನ್ ಪ್ರಶಸ್ತಿಯ ಬೆನ್ನು ಹತ್ತುತ್ತಾರೆ ಎಂದಲ್ಲ. ಆದರೆ ಕ್ರಿಕೆಟ್‌ನ ಭರಾಟೆಯಲ್ಲಿ ಉಳಿದವರ ಹೆಸರು ನೆನಪಾಗದೇ ಹೋದರೆ ಆಶ್ಚರ್ಯವಿಲ್ಲ. ಎಲ್ಲ ರಾಜಕೀಯ ಮುಖಂಡರಿಗೂ ಕ್ರಿಕೆಟ್ ಮೇಲೆ ಪ್ರೀತಿ ಹೆಚ್ಚು.

ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ 1954ರಲ್ಲಿ `ಭಾರತ ರತ್ನ~ ಪ್ರಶಸ್ತಿಯನ್ನು ಸ್ಥಾಪಿಸಿದರು. ಬದುಕಿದ್ದವರಿಗೆ ಮಾತ್ರ ಇದನ್ನು ಕೊಡಬೇಕೆಂಬ ನಿಯಮ ಇತ್ತು.

ಆದರೆ ನಂತರ ಅದನ್ನು ಬದಲಿಸಲಾಯಿತು. 1992ರಲ್ಲಿ ನೇತಾಜಿ ಸುಭಾಸಚಂದ್ರ ಬೋಸ್ ಅವರ ಹೆಸರನ್ನು ಸೂಚಿಸಲಾಗಿತ್ತಾದರೂ ಅವರು ಬದುಕಿದ್ದಾರೋ ಸತ್ತಿದ್ದಾರೋ ಎಂಬ ಗೊಂದಲ ಮತ್ತು ವಿವಾದದಲ್ಲಿ ಹಿಂದಕ್ಕೆ ಪಡೆಯಲಾಯಿತು. ದೇಶದ ಅತಿ ದೊಡ್ಡ ಗೌರವವನ್ನು ಬದುಕಿದ್ದವರಿಗೆ ಕೊಡುವುದೇ ಸರಿಯಾದ ನಿಯಮವಾಗಿತ್ತು. ಇದರಿಂದ ಸತ್ತವರ ಸಾಧನೆಯನ್ನು ಅಲಕ್ಷಿಸಿದಂತಾಗುತ್ತದೆ ಎಂಬ ವಾದವಿದೆ.
 
ಆದರೆ, ಯಾವುದೇ ಪ್ರಶಸ್ತಿಯಾದರೂ ಅದನ್ನು ಪಡೆಯುವ ವ್ಯಕ್ತಿಗೆ ಅದೊಂದು ಹೆಮ್ಮೆಯ ವಿಷಯವಾಗಿರುತ್ತದೆ. ಪ್ರಶಸ್ತಿಯ ಗೌರವ ಮತ್ತು ಆನಂದವನ್ನು ಅನುಭವಿಸಿದಾಗಲೇ ಪ್ರಶಸ್ತಿ ಸಾರ್ಥಕವಾಗುತ್ತದೆ.

ಪ್ರಶಸ್ತಿ ಪುರಸ್ಕೃತರ ಜೀವನ ಮತ್ತು ಸಾಧನೆ ದೇಶಕ್ಕೆ ಮಾದರಿಯಾಗುತ್ತದೆ. ಅಬ್ದುಲ್ ಕಲಾಮ್, ಲತಾ ಮಂಗೇಶ್ಕರ್, ರವಿಶಂಕರ್, ಅಮರ್ತ್ಯ ಸೇನ್ ನಿಜಕ್ಕೂ ನಮ್ಮ ಮಧ್ಯೆ ಇರುವ `ರತ್ನ~ಗಳು.

ಜವಾಹರಲಾಲ್ ನೆಹರೂ, ಇಂದಿರಾ ಗಾಂಧೀ ಜೀವಂತ ಇದ್ದಾಗಲೇ ಈ ಪ್ರಶಸ್ತಿಗೆ ಪಾತ್ರರಾಗಿದ್ದರು. ಆದರೆ ರಾಜೀವ್ ಗಾಂಧೀ ಅವರಿಗೆ ಮರಣೋತ್ತರವಾಗಿ ನೀಡಲಾಗಿತ್ತು. ರಾಹುಲ್ ಗಾಂಧೀ ಇನ್ನೂ ಪ್ರಧಾನಿ ಆಗಿಲ್ಲವಾದ್ದರಿಂದ ಅವರ ಹೆಸರು ಪ್ರಸ್ತಾಪವಾಗಲು ಇನ್ನೂ ಬಹಳ ವರ್ಷ ಇದೆ!

ಅಲ್ಲದೇ ಪ್ರಶಸ್ತಿಗೆ ಪಾತ್ರರಾಗುವಂಥ ರಾಜಕಾರಣಿ ಈಗ ಯಾರೂ ಇಲ್ಲ. ಆದರೆ ಸಂಗೀತ ಕ್ಷೇತ್ರದಲ್ಲಿ, ವಿಜ್ಞಾನ ವಿಷಯಗಳಲ್ಲಿ ರಾಷ್ಟ್ರಕ್ಕೆ ಹಿರಿಮೆ ತಂದವರು ಖಂಡಿತವಾಗಿಯೂ ಇದ್ದಾರೆ.

ಅದರಂತೆಯೇ ಕ್ರೀಡೆಯಲ್ಲೂ ಇದ್ದಾರೆ. ಕ್ರೀಡಾಪಟುಗಳನ್ನು ಪರಿಗಣಿಸುವ ನಿರ್ಧಾರ ಸ್ವಾಗತಾರ್ಹ. ಇಲ್ಲಿ ತಾರತಮ್ಯ ಬೇಡ. ಒಬ್ಬ ಆಟಗಾರನ ಜನಪ್ರಿಯತೆಗಿಂತ ಆತನ ಸಾಧನೆ ಮುಖ್ಯವಾಗಬೇಕು.
 
ಬಿಲಿಯರ್ಡ್ಸ್, ಸ್ನೂಕರ್, ಷೂಟಿಂಗ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ವಿಶ್ವ ಚಾಂಪಿಯನ್ನರಾಗಿದ್ದರೂ `ಭಾರತ ರತ್ನ~ ಪ್ರಶಸ್ತಿಯ ವಿಷಯದಲ್ಲಿ ವಿಶ್ವನಾಥನ್ ಆನಂದ್ ಮತ್ತು ಪ್ರಕಾಶ್ ಪಡುಕೋಣೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
 
ರನ್ನುಗಳು ಹಾಗೂ ಶತಕಗಳ ವಿಷಯದಲ್ಲಿ ಸಚಿನ್ ಅವರಿಗಿಂತ ರಾಹುಲ್ ದ್ರಾವಿಡ್ ಹಿಂದಿದ್ದರೂ, ಕಳೆದ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅವರು ತೋರಿರುವ ಹೋರಾಟ ಅದ್ಭುತ.

ಪಟ್ಟಿಯನ್ನು ಕಡಿಮೆ ಮಾಡುತ್ತ ಹೋದರೆ ಸಚಿನ್ ಮತ್ತು ಆನಂದ್ ನಡುವೆಯೇ ನೇರ ಸ್ಪರ್ಧೆ ಎದುರಾಗಬಹುದು. ಇಬ್ಬರೂ ಪದ್ಮವಿಭೂಷಣರು. ಚೆಸ್ ಆಟವನ್ನು ಜಗತ್ತಿಗೆ ಪರಿಚಯಿಸಿದ್ದೇ ಭಾರತ.

ಆದರೆ ನಮ್ಮಲ್ಲಿರುವ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮಾತ್ರ. ಕ್ರಿಕೆಟ್ ಬ್ರಿಟಿಷರು ಬೆಳೆಸಿದ ಕಡೆ ಮಾತ್ರ ಇರುವ ಆಟ. ಸಚಿನ್ ದಾಖಲೆಗಳ ವೀರನಾದರೂ ಹಲವು ಮಂದಿ ಆಟಗಾರರು ಅತ್ಯುತ್ತಮ ಸಾಧನೆಗಳನ್ನು ತೋರಿದ್ದಾರೆ.
 
ಆದರೆ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಆಟಗಾರರು ಸ್ವಾರ್ಥಿಗಳು, ದುಡ್ಡಿನ ಬಗ್ಗೆ ವಿಪರೀತ ಮೋಹ ಇರುವವರು ಹಾಗೂ ಅದಕ್ಕಾಗಿ ಮೋಸದಾಟದಲ್ಲೂ ಭಾಗಿಯಾಗುವವರು ಎಂಬ ಟೀಕೆಗೆ ಒಳಗಾಗಿದ್ದಾರೆ. ಆದರೂ ಕ್ರಿಕೆಟ್ ಈ ದೇಶದಲ್ಲಿ ಹುಚ್ಚು ಹಿಡಿಸಿಬಿಟ್ಟಿದೆ.

ನಮ್ಮ ದೇಶದ 42ನೇ `ಭಾರತ ರತ್ನ~ ಒಬ್ಬ ಕ್ರೀಡಾಪಟು ಆದರೆ ಅದು ರಾಷ್ಟ್ರದ ಕ್ರೀಡಾರಂಗಕ್ಕೆ ಸಿಕ್ಕ ದೊಡ್ಡ ಗೌರವವಾಗುತ್ತದೆ. ಪದ್ಮ ಪ್ರಶಸ್ತಿಗಳಲ್ಲಿ ಸಾಕಷ್ಟು ವಶೀಲಿ, ಶಿಫಾರಸು ನಡೆಯುತ್ತವೆ.
 
ಕ್ರೀಡೆ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳಂತಾಗಿದ್ದರೂ ಇದೊಂದು ವಿಷಯದಲ್ಲಿ ರಾಜಕೀಯವನ್ನು ದೂರ ಇಟ್ಟರೆ ನಿಜವಾದ `ಭಾರತ ರತ್ನ~ ಸಿಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT