ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿ ಸುಗಮವಲ್ಲ

Last Updated 23 ಮೇ 2011, 19:30 IST
ಅಕ್ಷರ ಗಾತ್ರ

ಎರಡು ವಾರಗಳ ಹಿಂದೆಯಷ್ಟೇ ಪ್ರಕಟಗೊಂಡ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷಾ ಫಲಿತಾಂಶಗಳು ಕರ್ನಾಟಕದ ಪಾಲಿಗೆ ಅತ್ಯಂತ ಹರ್ಷದಾಯಕವಾದ ಸಂದರ್ಭವನ್ನು ಸೃಷ್ಟಿಸಿವೆ. 2010-11ನೇ ಸಾಲಿನಲ್ಲಿ ಐಎಎಸ್ (ಭಾರತೀಯ ಆಡಳಿತ ಸೇವೆ), ಐಎಫ್‌ಎಸ್ (ಭಾರತೀಯ ವಿದೇಶಿ ಸೇವೆ)

ಮತ್ತು `ಎ~ ಮತ್ತು `ಬಿ~ ಗುಂಪಿನ ಇತರ ಕೇಂದ್ರೀಯ ಸೇವೆಗಳಿಗೆ ನೇಮಕಾತಿಗಾಗಿ ಶಿಫಾರಸು ಮಾಡಲಾಗಿರುವ 920 ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜ್ಯದ 32 ಮಂದಿ ಸ್ಥಾನ ಗಳಿಸಿದ್ದಾರೆ. ಮೊದಲ 100 ರ‌್ಯಾಂಕುಗಳಲ್ಲಿ 4 ಕರ್ನಾಟಕದ ಪಾಲಾಗಿರುವುದು ಮತ್ತಷ್ಟು ಹೆಮ್ಮೆಯ ವಿಷಯ.

ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಇಡೀ ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ಹಾಗೂ ಕ್ಲಿಷ್ಟ ಪರೀಕ್ಷೆಗಳಲ್ಲಿ ಒಂದು ಎನಿಸಿಕೊಂಡಿರುವ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಸಂಭ್ರಮಿಸುವಂಥ ವಿಚಾರವೇ ಸರಿ.

ಈ ಪರೀಕ್ಷೆಗಳಲ್ಲಿ ಸಫಲವಾಗುವವರಲ್ಲಿ ಕರ್ನಾಟಕದ ಪ್ರಾತಿನಿಧ್ಯ ತೀರಾ ಗೌಣ ಎನ್ನುವ ಮಟ್ಟಕ್ಕೆ ತಲುಪಿದೆ ಎಂಬ ಬೇಸರ ಅನೇಕರ ಮನಸ್ಸಿನಲ್ಲಿದ್ದು, ಈ ಬಾರಿಯ ಫಲಿತಾಂಶಗಳು ಆ ಭಾವನೆಯಿಂದ ಸ್ವಲ್ಪ ಮಟ್ಟಿಗಾದರೂ ಹೊರಬರಲು ಕಾರಣವಾಗಿವೆ ಎನ್ನುವುದೂ ನಿಜ.

ಆದರೆ ಈ ಸಾಧನೆಗಳನ್ನು ಕುರಿತು ಕೆಲ ದಿನಗಳಿಗೆ ಸೀಮಿತವಾದ ಸಂಭ್ರಮಾಚರಣೆಗಳಾಗಲಿ, ಸಾಧಕರಿಗೆ ಸರ್ಕಾರ ಅಥವಾ ಇತರ ಸಂಸ್ಥೆಗಳು ಮಾಡುವ ಸನ್ಮಾನಗಳಾಗಲಿ, ಮಾಧ್ಯಮಗಳಲ್ಲಿ ಇವರಿಗೆ ದೊರೆಯುವ ಗೋಚರತೆಯಾಗಲಿ ಯುಪಿಎಸ್‌ಸಿ ಪರೀಕ್ಷೆಗಳನ್ನು ಸುತ್ತುವರೆದಿರುವ ಕೆಲ ಸತ್ಯ-ಮಿಥ್ಯಗಳನ್ನು ಸಂಪೂರ್ಣವಾಗಿ ಹೊರತರುವುದಿಲ್ಲ.

ಇಳಿಮುಖವಾಗುತ್ತಿರುವ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಸದಾ ಕಾಲ ಪ್ರಲಾಪಿಸುತ್ತಿರುವ ನಾವು ಈ ಸಾಧಕರ ಪ್ರತಿಫಲದ ಹಿಂದಿರುವ ಪರಿಶ್ರಮ ಹಾಗೂ ಅವರಲ್ಲಿ ಅನೇಕರ ಬದುಕಿನ ಪರಿಸ್ಥಿತಿಗಳ ಬಗ್ಗೆ ತಿಳಿಯ ಹೊರಟಾಗ ನಮಗೆ ಎದುರಾಗುವ ಸತ್ಯವೆಂದರೆ ಈ ತಲೆಮಾರಿನ ಸಾಮರ್ಥ್ಯಗಳ ಬಗ್ಗೆ ನಾವು ಅಷ್ಟೊಂದು ಹತಾಶರಾಗುವ ಅವಶ್ಯಕತೆಯಿಲ್ಲವೆನ್ನುವುದು.

ಮೊದಲಿಗೆ ಈ ಪರೀಕ್ಷೆಗಳನ್ನು ಕುರಿತ ಕೆಲ ಮೂಲಭೂತ ಸಂಗತಿಗಳನ್ನು ತಿಳಿಯುವುದು ಪ್ರಸ್ತುತ. ವರ್ಷದಿಂದ ವರ್ಷಕ್ಕೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳನ್ನು ತೆಗದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಬಾರಿಯ ಪರೀಕ್ಷಾ ಪ್ರಕ್ರಿಯೆ ಪ್ರಾರಂಭವಾದಾಗ 5,47,698 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದು, ಅವರಲ್ಲಿ `ಪೂರ್ವಭಾವಿ~ಯಾಗಿ (ಪ್ರಿಲಿಮಿನರಿ) ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಂಡವರು 2,69,036. ಇವರಲ್ಲಿ ಮುಂದಿನ ಹಂತಕ್ಕೆ ಹೋಗಲು ಅರ್ಹತೆ ಪಡೆದು `ಮುಖ್ಯ~ (ಮೇಯಿನ್) ಪರೀಕ್ಷೆಗಳನ್ನು ಬರೆದವರ ಸಂಖ್ಯೆ 12,491.
 

ಪೂರ್ವಭಾವಿ ಹಂತದಿಂದ ಮುಖ್ಯ ಅಥವಾ ಕೊನೆಯ ಹಂತಕ್ಕೆ ಹೋಗಲು ಅರ್ಹತೆಯನ್ನು ಪಡೆದವರು ಶೇಕಡ 5 ಕ್ಕೂ ಕಡಿಮೆ ಪ್ರಮಾಣದ ಅಭ್ಯರ್ಥಿಗಳು. ಮುಖ್ಯ ಪರೀಕ್ಷೆಗಳನ್ನು ಬರೆದ 12,491 ಅಭ್ಯರ್ಥಿಗಳಲ್ಲಿ ವಿವಿಧ ಸೇವೆಗಳಿಗೆ ಆಯ್ಕೆಯಾದವರು 920 (717 ಪುರುಷರು ಮತ್ತು 203 ಮಹಿಳೆಯರು), ಎಂದರೆ ಶೇಕಡ 7.4 ರಷ್ಟು.

ದೇಶದ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳೆಂದು ಪರಿಗಣಿಸಲಾದ ಐಎಎಸ್, ಐಎಫ್‌ಎಸ್ ಅಥವಾ ಆಯ್ದ ಕೇಂದ್ರೀಯ ಸೇವಾ ಹುದ್ದೆಗಳನ್ನು ಪಡೆಯಲು ಅರ್ಹತೆಯನ್ನು ನೀಡುವ ಈ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಿರುವವರಾದರೂ ಯಾರು ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಇಂದಿಗೂ ಅನೇಕರು ತಿಳಿದಿರುವುದೇನೆಂದರೆ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾದರೆ ನಗರಗಳಲ್ಲಿ ವಾಸಿಸಬೇಕು, ಸಾವಿರಾರು ರೂಪಾಯಿಗಳನ್ನು ತೆತ್ತು ಪರೀಕ್ಷಾ ಸಿದ್ಧತೆಯನ್ನು ನಡೆಸಲು ತರಬೇತಿ ನೀಡುವ ಕೋಚಿಂಗ್ ಕೇಂದ್ರಗಳಿಗೆ ಸೇರಬೇಕು.
 
ಕನಿಷ್ಠ ಮೇಲ್-ಮಧ್ಯಮ ವರ್ಗದ ಕುಟುಂಬ ಹಿನ್ನೆಲೆಯಾದರೂ ಇರಬೇಕು, ಪರೀಕ್ಷೆಗಳಲ್ಲಿ ತಾವು ಆಯ್ಕೆ ಮಾಡಿಕೊಳ್ಳಲಿಚ್ಛಿಸುವ ವಿಷಯಗಳ ಬಗ್ಗೆ ಪೂರ್ವಜ್ಞಾನವಿರಬೇಕು ಅಥವಾ ಪದವಿಮಟ್ಟದಲ್ಲಿ ಅವುಗಳನ್ನು ಅಧ್ಯಯನ ಮಾಡಿರಬೇಕು-ಹೀಗೆ ನಾನಾ ಭ್ರಮೆಗಳಲ್ಲಿ ಅನೇಕರು ಇಂದಿಗೂ ತೇಲುತ್ತಿದ್ದಾರೆ.

ಈ ಹಿಂದಿನ ಮೂರು-ನಾಲ್ಕು ವರ್ಷಗಳಿಂದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಪಡೆಯುತ್ತಿರುವ ಹಾಗೂ ವಿವಿಧ ಸೇವೆಗಳಲ್ಲಿ ಸೇರ್ಪಡೆಯಾಗಲು ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳ ಸಾಮಾಜಿಕ-ಆರ್ಥಿಕ-ಪ್ರಾದೇಶಿಕ ಹಿನ್ನೆಲೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಹೊರಬರುವ ಅಂಶವೆಂದರೆ ಅತ್ಯಂತ ಅನನುಕೂಲ
 

ಹಾಗೂ ಸಂಘರ್ಷಮಯ ಪರಿಸ್ಥಿತಿಗಳಲ್ಲಿ ಬದುಕುತ್ತಿರುವಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದಂಥ ಯುವಜನರೂ ಈ ಪರೀಕ್ಷೆಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ ಎನ್ನುವುದು. ಕಳೆದ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಷಾ ಫೈಸಲ್‌ಗಿಂತ ಇದಕ್ಕೆ ಬೇರೆ ಉದಾಹರಣೆ ಬೇಕೆ?

ವೃತಿಯಲ್ಲಿ ವೈದ್ಯರಾದ ಫೈಸಲ್, ಯುಪಿಎಸ್‌ಸಿ. ಪರೀಕ್ಷೆಗಳಲ್ಲಿ `ಪ್ರಥಮ~ ಸ್ಥಾನ ಗಳಿಸಿದ ಕಾಶ್ಮೀರದ `ಪ್ರಥಮ~ ನಾಗರಿಕ ಮತ್ತು ಸ್ವತಂತ್ರ ಭಾರತದಲ್ಲಿಯೇ ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಲ್ಕನೆಯವರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕಾಶ್ಮೀರದ ಕುಪ್ವಾರ ಜಿಲ್ಲೆಯ ಸಣ್ಣ ಗ್ರಾಮವೊಂದರಲ್ಲಿ, ಹಳ್ಳಿಯ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ಫೈಸಲ್ ಅವರ ತಂದೆ ಶಾಲಾ ಉಪಾಧ್ಯಾಯರು.

ತಮ್ಮ ಮನೆಯಲ್ಲಿ ಉಗ್ರಗಾಮಿಗಳಿಗೆ ರಕ್ಷಣೆ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕಾಗಿ ಅವರು ಹತ್ಯೆಗೊಳಗಾಗಬೇಕಾಯಿತು. ಫೈಸಲ್ ಅವರ ತಮ್ಮ ಕೂಡ ಕಾಶ್ಮೀರದಲ್ಲಿ ಆಗಾಗ್ಗೆ ಭಾರತ-ಪಾಕ್ ಸೇನೆಗಳ ನಡುವೆ ಸಂಭವಿಸುವ ಗುಂಡಿನ ಕಾಳಗಕ್ಕೆ ಬಲಿಯಾಗಿದ್ದ.

ತಮ್ಮ ಕುಟುಂಬಕ್ಕೆ ಬಂದೊದಗಿದ ಆಘಾತಗಳ ನಡುವೆಯೂ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ ಫೈಸಲ್ ತಮ್ಮ ಐಎಎಸ್‌ನ ಗುರಿಯನ್ನು ಸಾಧಿಸಿದ್ದು ನಿಜಕ್ಕೂ ಶ್ಲಾಘನೀಯ. ಆತನ ಯಶಸ್ಸಿನಿಂದ ಸ್ಫೂರ್ತಿ ಪಡೆದ ಅನೇಕ ಕಾಶ್ಮೀರಿ ಯುವಕ ಯುವತಿಯರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಲೇಬೇಕೆಂಬ ಛಲದಿಂದ ತಯಾರಿ ನಡೆಸಿದ್ದಾರೆ.

ಈ ಬಾರಿಯ ಪರೀಕ್ಷೆಗಳಲ್ಲಿ ಈ ರಾಜ್ಯದ 6 ಮಂದಿ ಆಯ್ಕೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದು, ಅವರಲ್ಲಿ ಒಬ್ಬರು ಇತ್ತೀಚಿಗಷ್ಟೇ ಪ್ರಾಕೃತಿಕ ವಿಕೋಪಕ್ಕೆ ತತ್ತರಿಸಿದ ಲಡಾಕ್ ಪ್ರದೇಶದ ಮಹಿಳೆ.

ಎಪ್ಪತ್ತು ಅಥವಾ ಎಂಬತ್ತರ ದಶಕಗಳವರೆಗೆ ಲೋಕಸೇವಾ ಆಯೋಗದ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದವರಲ್ಲಿ ಶೇಕಡ 70ರಷ್ಟು ಅಭ್ಯರ್ಥಿಗಳು ಬೃಹತ್ ನಗರವಾಸಿಗಳು ಅಥವಾ ಅನುಕೂಲಕರ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದವರಾಗಿರುತ್ತಿದ್ದರು.

ಆದರೆ ಕಳೆದ ಎರಡು ದಶಕಗಳಲ್ಲಿ ಸಣ್ಣ ನಗರಗಳು, ತಾಲ್ಲೂಕು ಕೇಂದ್ರಗಳು ಅಥವಾ ಗ್ರಾಮಗಳಿಂದ ಬರುವ ಅಭ್ಯರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಅರ್ಹರಾಗಿ,

ವಿವಿಧ ಮೇಲ್ದರ್ಜೆ ಹುದ್ದೆಗಳಿಗೆ ಆಯ್ಕೆಯಾದವರಿಗೆ ತರಬೇತಿ ನೀಡುವ ಮುಸ್ಸೋರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಆಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನ ಹಿಂದಿನ ನಿರ್ದೇಶಕರೊಬ್ಬರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಐಎಎಸ್, ಐಎಫ್‌ಎಸ್. ಮತ್ತು ಐಪಿಎಸ್ ಶ್ರೇಣಿಯ ಹುದ್ದೆಗಳಿಗೆ ಆಯ್ಕೆಯಾಗುತ್ತಿರುವವರಲ್ಲಿ ಸರ್ಕಾರಿ ಸೇವೆಯ ಕೆಳಸ್ತರದ ಉದ್ಯೋಗಗಳಲ್ಲಿರುವವರ ಮಕ್ಕಳು,

ಕೃಷಿಕ ಕುಟುಂಬಗಳ ಪ್ರಥಮ ತಲೆಮಾರಿನ ವಿದ್ಯಾರ್ಥಿಗಳು, ಹೆಣ್ಣು ಮಕ್ಕಳು ಹಾಗೂ ಅಸಂಘಟಿತ ಕಾರ್ಮಿಕರ ಮಕ್ಕಳು ಇವರ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳ ಕಂಡು ಬರುತ್ತಿದೆ.

2006ನೇ ವರ್ಷದ ಪರೀಕ್ಷೆಗಳಲ್ಲಿ 48ನೇ ರ‌್ಯಾಂಕ್ ಪಡೆದ ಗೋವಿಂದ್ ಜೈಸ್ವಾಲ್‌ರ ತಂದೆ ವಾರಾಣಸಿಯಲ್ಲಿ ಜೀವನ ನಿರ್ವಹಣೆಗಾಗಿ ಸೈಕಲ್ ರಿಕ್ಷಾ ಎಳೆಯುತ್ತಿದ್ದವರು. ಕಡು ಬಡತನದಲ್ಲಿ ಜೀವನ ನಡೆಸುತ್ತಿದ ಜೈಸ್ವಾಲ್ ಕುಟುಂಬ ವಾಸಿಸುತ್ತಿದ್ದ ಸಣ್ಣ ಓಣಿಯಲ್ಲಿ ಅಧ್ಯಯನವನ್ನು ಕೈಗೊಳ್ಳಲು ಪೂರಕವಾದ ವಾತಾವರಣವಿರಲಿಲ್ಲ.

ದೆಹಲಿಯಲ್ಲಿ ಕೋಚಿಂಗ್ ತರಗತಿಗಳಿಗೆ ಗೋವಿಂದನನ್ನು ಸೇರಿಸಲು ಈ ಬಡ ಕುಟುಂಬ ತನ್ನ ಏಕೈಕ ಆಸ್ತಿಯಾಗಿದ್ದ ಗೇಣುದ್ದದ ಭೂಮಿಯನ್ನೂ ಮಾರಾಟ ಮಾಡಿತು. ತಿಂಗಳ ಖರ್ಚಿಗಾಗಿ ಹಣ ಸಂಪಾದಿಸಲು ಗೋವಿಂದ್ ಗಣಿತ ಪಾಠ ಹೇಳುತ್ತಿದ್ದರಂತೆ. ಇಂಥ ಪರಿಸ್ಥಿತಿಗಳಲ್ಲಿ ತನ್ನ ಕನಸನ್ನು ಬೆಂಬತ್ತಿದ ಗೋವಿಂದ್ ಪ್ರಥಮ ಪ್ರಯತ್ನದಲ್ಲೇ 48ನೇ ಸ್ಥಾನ ಗಳಿಸಿದರು.

ಕೇವಲ ಯುಪಿಎಸ್‌ಸಿ ಪರೀಕ್ಷೆಗಳ ಫಲಿತಾಂಶಗಳೇ ಅಲ್ಲದೆ, ಅದೇ ಸಮಯದಲ್ಲಿ ಹೊರಬಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷಾ ಫಲಿತಾಂಶಗಳು ಕೂಡ ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲಿ ಬದುಕಿದ್ದೂ ಉತ್ತಮ ಸಾಧನೆ ಮಾಡಲು ಹೇಗೆ ಸಾಧ್ಯ ಎಂಬುದನ್ನು ತೋರಿಸಿದವು. ಬದುಕು ತಂದೊಡ್ಡುವ ಸವಾಲುಗಳು ಹಾಗೂ ಸಂಘರ್ಷಗಳೇ ಸಾಧನೆಗೆ ಪ್ರೋತ್ಸಾಹಿಸುವಂಥ ಪ್ರೇರಕಗಳಾಗುತ್ತವೆ.

ಲೌಕಿಕ ಸಂಪತ್ತು ತರುವ ಎಲ್ಲ ಅನುಕೂಲಗಳನ್ನೂ ಸುಲಭದಲ್ಲಿ ಪಡೆಯುಬಹುದಾದರೆ, ಪ್ರಕೃತಿ ಸಂಪತ್ತನ್ನು ಅನುಭವಿಸಿ ಐಷಾರಾಮಿ ಜೀವನ ನಡೆಸಬಹುದಾದರೆ, ಮನಬಯಸ್ಸಿದ್ದನ್ನು ಕಷ್ಟ ಪಡೆಯದೆಯೇ ಗಳಿಸಬಹುದಾದರೆ ಬದುಕು ಒಂದು ಬಗೆಯ `ಸ್ವಸಂತೃಪ್ತ~ ಸ್ಥಿತಿಗೆ ತಲುಪುತ್ತದೆ.

ಆದರೆ ತೀವ್ರ ಸ್ವರೂಪದ ಸಾಮಾಜಿಕ-ಆರ್ಥಿಕ-ಪ್ರಾದೇಶಿಕ ಅಸಮತೋಲನಕ್ಕೆ ಬಲಿಯಾದ ಅಥವಾ ಸದಾ ಕಾಲವೂ ಸಂಘರ್ಷಮಯ ವಾತಾವರಣದಿಂದ ಆವೃತ್ತವಾದ ಪರಿಸ್ಥಿತಿಗಳಲ್ಲಿ ಜೀವನವನ್ನು ನಡೆಸಬೇಕಾದಂಥವರನೇಕರು ಬದುಕಿನಲ್ಲಿ ಹೊಸದಾರಿಗಳನ್ನರಸಿ ಬಹುದೂರ ಸಾಗುತ್ತಾರೆ.
 

ಪ್ರಾಯಶಃ ಅನಿಶ್ಚಿತ-ಅತಂತ್ರ ಬದುಕಿನ ಸ್ಥಿತಿಗಳು ಅವರನ್ನು ಸದಾ ಕಾಲ ಕ್ರಿಯಾಶೀಲರಾಗಿರಲು, ದೊಡ್ಡ ಕನಸುಗಳನ್ನು ಕಟ್ಟಲು ಪ್ರೇರೇಪಿಸುವಂಥ ಅಂಶಗಳಾಗಿ ಪರಿವರ್ತಿತವಾಗಿರಬಹುದು.

ಬಳ್ಳಾರಿಯಿರಬಹುದು, ಬಿಹಾರವಿರಬಹುದು-ಹಿಂದುಳಿದ ಪ್ರದೇಶಗಳೆಂಬ ಹೆಸರು ಕಟ್ಟಿ ಅವುಗಳ ಮಾನವ ಸಾಮರ್ಥ್ಯವನ್ನು ನಾವು ಅಲ್ಲಗಳೆಯುತ್ತಾ ಬಂದಿದ್ದೆೀವೆ. ಆದರೆ ಹೀಗೆ `ಹಿಂದುಳಿದಿರುವಿಕೆ~  ಹಣೆಪಟ್ಟಿಯನ್ನು ಅಂಟಿಸಿಕೊಂಡ ಅನೇಕ ಪ್ರದೇಶಗಳು ನಿಧಾನವಾಗಿ ಉನ್ನತ ಶಿಕ್ಷಣ ಹಾಗೂ ಉನ್ನತ ಉದ್ಯೋಗ ಕ್ಷೇತ್ರಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂಬ ವಿಷಯವನ್ನು ನಾವು ಅಲಕ್ಷಿಸುವ ಹಾಗಿಲ್ಲ.
ಹಸಿವು, ಬಡತನ, ದಾರಿದ್ರ್ಯ, ಶೋಷಣೆ, ಪ್ರಾಕೃತಿಕ ವಿಕೋಪದ ಭಯ, ಯುದ್ಧದ ಭೀತಿ, ಅಸುರಕ್ಷಿತ ಭೌತಿಕ-ಸಾಮಾಜಿಕ ಪರಿಸರ-ಇವೇ ಮುಂತಾದ ಪರಿಸ್ಥಿಗಳು ಎಲ್ಲ ಸಂದರ್ಭಗಳಲ್ಲೂ ಸಾಧನೆಯನ್ನು ಹತ್ತಿಕ್ಕಲಾರವು ಎಂಬುದನ್ನು ಇತ್ತೀಚಿನ ಎಲ್ಲಾ ಪ್ರಮುಖ ಪರೀಕ್ಷೆಗಳ ಫಲಿತಾಂಶಗಳು ತೋರಿಸಿವೆ.

ಎಲ್ಲ ಅನುಕೂಲಗಳೂ ಇದ್ದು ಪರಿಶ್ರಮ ಹಾಗೂ ಹೊಸ ಅನುಭವಗಳನ್ನು ಅರಸಿ ಹೋಗುವ ಆಸಕ್ತಿಗಳಿಲ್ಲದಿದ್ದರೆ ಏನನ್ನೂ ಸಾಧಿಸಲಾಗದ ಸ್ಥಿತಿಯನ್ನು ನಾವು ತಲುಪುತ್ತೇವೆ.

ಮೊದಲು ನಾವು ಕಲಿಯಬೇಕಾದ ಪಾಠವೆಂದರೆ ಸಾಧನೆಯ ಹಾದಿಯಲ್ಲಿರುವುದು ಹೂವುಗಳಲ್ಲ, ಹೆಜ್ಜೆ-ಹೆಜ್ಜೆಗೂ ನಮ್ಮನ್ನು ಹಿಂದೆ ತಳ್ಳಬಹುದಾದ ಅಡೆತಡೆಗಳು ಎನ್ನುವುದು.

ನಮ್ಮ ಮುಂದಿರುವ ನೂರಾರು ಉದಾಹರಣೆಗಳಿಂದ ಈ ಅಡ್ಡಿಗಳನ್ನು ಮೆಟ್ಟಿ ಮುನ್ನುಗ್ಗುವುದೇ ಜೀವನ ಎಂಬುದನ್ನು ನಾವು ಮನಗಾಣದಿದ್ದಲ್ಲಿ ಇರುವ ಅನುಕೂಲಗಳನ್ನೂ ಕಳೆದುಕೊಳ್ಳುತ್ತೇವಷ್ಟೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT