ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಅಸಾಮಾನ್ಯವಾಗುವ ಬಗೆ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಿಲಿಯಂ ವೊಲ್ಕೋಟ್, ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಇಂಗ್ಲೆಂಡಿನ ಪ್ರಮುಖ ಚಿತ್ರಗಾರರಲ್ಲಿ ಒಬ್ಬನಾಗಿದ್ದ. ಅವನ ವರ್ಣಚಿತ್ರಗಳಿಗೆ ಬಹುದೊಡ್ಡ ಬೇಡಿಕೆ. ಆ ದಿನಗಳಲ್ಲಿ ಎಷ್ಟೋ ಬಾರಿ ಜನರು ಅವನಿಗೆ ಚಿತ್ರ ಬಿಡಿಸಲು ದುಡ್ಡು ಕೊಟ್ಟು ವರ್ಷಗಟ್ಟಲೇ ಕಾದಿದ್ದುಂಟು. ಚಿತ್ರ ಬಿಡಿಸುವುದೆಂದರೆ ಲೆಕ್ಕ ಬರೆದ ಹಾಗೆಯೇ. ಅದಕ್ಕೆ ಒಂದು ಸರಿಯಾದ ವಸ್ತು ದೊರೆಯಬೇಕು ಮತ್ತು ಆಗಲೇ ಸ್ಫೂರ್ತಿ ಬರಬೇಕು. ಎಲ್ಲವೂ ಸರಿಯಿದ್ದಾಗ ವೊಲ್ಕೋಟ್ ಒಂದೊಂದು ಬಾರಿ ದಿನಕ್ಕೆ ಎರಡೆರಡು ಚಿತ್ರ ಬಿಡಿಸಿ ಬಿಡುತ್ತಿದ್ದ. ಕೆಲವೊಮ್ಮೆ ತಿಂಗಳುಗಟ್ಟಲೇ ಏನನ್ನೂ ಬಿಡಿಸದೇ ಕಳೆದದ್ದೂ ಉಂಟು.

ವಿಲಿಯಂ ವೊಲ್ಕೋಟ್, ಒಮ್ಮೆ ಅಮೆರಿಕೆಯ ನ್ಯೂಯಾರ್ಕ್ ನಗರಕ್ಕೆ ಬಂದ. ಇಲ್ಲಿಯ ಗಗನಚುಂಬಿ ಕಟ್ಟಡಗಳ ಚಿತ್ರಗಳನ್ನು ಬಿಡಿಸುವುದು ಉದ್ದೇಶ. ಊರೆಲ್ಲ ಸುತ್ತಾಡಿ ಕಟ್ಟಡ, ತೋಟ, ಸಮುದ್ರ  ನೋಡಿ ಕಣ್ಣು ತುಂಬಿಕೊಂಡ. ಆದರೆ ಯಾವ ಚಿತ್ರವನ್ನೂ ಬರೆಯಲಾಗಲಿಲ್ಲ. ಮರುದಿನ ಸ್ನೇಹಿತರ ಜೊತೆಗೆ ವಾಸ್ತುಶಿಲ್ಪಿಯ ಕಚೇರಿಗೆ ಹೋದ. ವೊಲ್ಕೋಟ್‌ನಿಗೆ ಈ ವಾಸ್ತುಶಿಲ್ಪಿಯ ಪರಿಚಯ ಚೆನ್ನಾಗಿತ್ತು.

ಅವನೊಂದಿಗೆ ಇಂಗ್ಲೆಂಡಿನಲ್ಲಿ ಹತ್ತಾರು ವರ್ಷ ಕೆಲಸ ಮಾಡಿದ್ದ. ಇಂದು ಅವನ ಕಚೇರಿಯಲ್ಲಿ ತುಂಬ ಜನ. ಯಾರು ಯಾರೋ ಬಂದು ಬೇರೆ ಬೇರೆ ಕಟ್ಟಡಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈತ ಏನು ಮಾಡುವುದೆಂದು ತಿಳಿಯದೇ ಹತ್ತಿರದ ದೊಡ್ಡ ಕಿಟಕಿಯ ಬಳಿಗೆ ಹೋಗಿ ಹೊರಗೆ ನೋಡುತ್ತ ನಿಂತ. ಥಟ್ಟನೇ ಏನಾಯಿತೋ, ಸರಸರನೇ ತಿರುಗಿ ವಾಸ್ತುಶಿಲ್ಪಿಯ ಮೇಜಿನ ಬಳಿ ಬಂದು,  ಗೆಳೆಯಾ ತಕ್ಷಣ ಒಂದಿಷ್ಟು ಕಾಗದ ಕೊಡು  ಎಂದು ಕೇಳಿದ. ಗೆಳೆಯ ಕಾಗದ ಏಕೆ ಎಂದು ಕೇಳುವುದರೊಳಗೆ ಮೇಜಿನ ಮೇಲೆ ಬಿದ್ದಿದ್ದ ದೊಡ್ಡ ಹಾಳೆಗಳನ್ನೇ ಎತ್ತಿಕೊಂಡ.

ಆಗ ಗೆಳೆಯ ಕೂಗಿದ, `ಹೇ, ಅವು ಚಿತ್ರ ಬರೆಯಲು ಬಳಸುವ ಕಾಗದಗಳಲ್ಲ. ನನ್ನ ಡ್ರಾಯಿಂಗ್‌ಗಳ ಮೇಲೆ ಸುತ್ತಲು ಬಳಸಿದ ಸಾಮಾನ್ಯ ಕಾಗದಗಳು. ಇರು, ಒಳ್ಳೆಯ ಕಾಗದ ತರಿಸಿಕೊಡುತ್ತೇನೆ. ಆ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ವೊಲ್ಕೋಟ್‌ನಿಗಿರಲಿಲ್ಲ, ಆಗಲೇ ಅವನು ಕಿಟಕಿಯ ಹತ್ತಿರ ಹೋಗಿಬಿಟ್ಟಿದ್ದ. ಅಲ್ಲಿದ್ದ ಚಿತ್ರಬಿಡಿಸುವ ಹಲಗೆಯ ಮೇಲೆ ಈ ಸಾಮಾನ್ಯ ಕಾಗದವನ್ನೇ ಜೋಡಿಸಿ ತನ್ನ ಜೇಬಿನಲ್ಲಿದ್ದ ಸೀಸದ ಕಡ್ಡಿಗಳಿಂದ ಚಿತ್ರದ ರೂಪುರೇಷೆ  ಬಿಡಿಸತೊಡಗಿದ. ಮುಂದೆ ಎರಡು ತಾಸು ಅವನಿಗೆ ಪ್ರಪಂಚದ ಅರಿವೇ ಇದ್ದಂತಿರಲಿಲ್ಲ. ನಂತರ ತಲೆ ಎತ್ತಿ ನೋಡಿದರೆ ಹತ್ತಾರು ಜನ ಅವನು ಚಿತ್ರ ಬಿಡಿಸುವುದನ್ನೇ ನೋಡುತ್ತಿದ್ದಾರೆ!

ಮಹಾನ್ ಕಲಾವಿದನೊಬ್ಬ ಚಿತ್ರ ಬಿಡಿಸುವುದನ್ನು ನೋಡುವುದೆ ಭಾಗ್ಯವಲ್ಲವೇ? ವೊಲ್ಕೋಟ್, ನ್ಯೂಯಾರ್ಕ್ ನಗರದ ಎರಡು ರಸ್ತೆಗಳ ಚಿತ್ರಗಳನ್ನು ಬಿಡಿಸಿದ್ದ. ಅವನ ಗೆಳೆಯ ವಾಸ್ತುಶಿಲ್ಪಿ ಈ ಎರಡು ಚಿತ್ರಗಳನ್ನು ಮೆಚ್ಚಿಕೊಂಡು ಹೇಳಿದ,  `ವಾಹ್, ಅದ್ಭುತ! ಆದರೆ, ನೀನು ಇಂತಹ ಸಾಧಾರಣ ಕಾಗದದ ಮೇಲೆ ಇದನ್ನು ಬಿಡಿಸದೇ ಚೆನ್ನಾಗಿರುವ ಕಾಗದ  ಬಳಸಬೇಕಿತ್ತು. ತಕ್ಷಣ ವೊಲ್ಕೋಟ್,  `ಗೆಳೆಯಾ ಯಾವ ವಸ್ತುವೂ ಸಾಧಾರಣವಲ್ಲ, ಬಳಸುವ ರೀತಿ ಗೊತ್ತಿದ್ದರೆ'  ಎಂದ. ಆ ಚಿತ್ರಗಳು ತಲಾ ಸಾವಿರ ಡಾಲರುಗಳಿಗೆ ಮಾರಾಟವಾದವು! ಆಗಿನ ಕಾಲಕ್ಕೆ ಸಾವಿರ ಡಾಲರ್ ಎಂದರೆ ಬಹುದೊಡ್ಡ ಮೊತ್ತ.

ವೊಲ್ಕೋಟ್, ಹೇಳಿದ್ದು ಎಷ್ಟು ಸರಿ ಅಲ್ಲವೇ. ಸರಿಯಾಗಿ ಬಳಸುವ ಶಕ್ತಿ ಇದ್ದರೆ ಯಾವ ವಸ್ತುವೂ, ಚಿಂತನೆಯೂ, ವ್ಯಕ್ತಿಯೂ ಸಾಧಾರಣವಲ್ಲ. ತುಂಬ ಸಾಧಾರಣವಾದ ವಸ್ತು ಅತ್ಯಂತ ಪ್ರಯೋಜನಕಾರಿಯಾದದ್ದನ್ನು, ತೋರಿಕೆಗೆ ಸಾಮಾನ್ಯ ಎನಿಸಿದ ಚಿಂತನೆ ಪ್ರಪಂಚದ ನಕ್ಷೆಯನ್ನೇ ಬದಲಿಸಿದ್ದನ್ನು, ಅತ್ಯಂತ ಸಾಮಾನ್ಯ ವ್ಯಕ್ತಿ ಎಂದು ಪರಿಗಣಿತರಾದವರು ಪ್ರಪಂಚದ ನಾಯಕರ ಮುಂಚೂಣಿಯಲ್ಲಿ ನಿಂತದ್ದನ್ನು ಇತಿಹಾಸ ದಾಖಲಿಸಿದೆ. ಆದ್ದರಿಂದ ಬಳಸುವ ಕೈ, ಬುದ್ಧಿಗಳು ಸಾಮಾನ್ಯವಾದದ್ದನ್ನು ಅಸಾಮಾನ್ಯವನ್ನಾಗಿ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT