ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಚೇತನಕ್ಕಿರುವ ಅಸಮಾಧಾನಕ್ಕೆ ಅಭಿವ್ಯಕ್ತಿ

Last Updated 8 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಮೊನ್ನೆ ಕನ್ನಡದ ಹೆಸರಾಂತ ನಾಟಕಕಾರರಾದ ಗಿರೀಶ್ ಕಾರ್ನಾಡರು, ನೊಬೆಲ್ ಪ್ರಶಸ್ತಿ ವಿಜೇತರೂ ಈಚೆಗೆ ಟಾಟಾ ಸಾಹಿತ್ಯ ಪ್ರಶಸ್ತಿ ವಿಜೇತರೂ ಆದ ಇಂಗ್ಲಿಷ್ ಲೇಖಕ ವಿ. ಎಸ್. ನೈಪಾಲ್ ಅವರ ಕೆಲವು ಬೇಜವಾಬ್ದಾರಿಯುತ ವಿಚಾರಗಳು ಮತ್ತು ಹೇಳಿಕೆಗಳ ಕುರಿತು ಹರಿಹಾಯ್ದದ್ದು ಸಮಯೋಚಿತವಾಗಿದೆ. ತಮ್ಮ ನಿರ್ಭಿಡೆಯ ಮಾತುಗಳಿಂದ, ಇಡೀ ಭಾರತದ ಸಾಮೂಹಿಕ ಚೇತನಕ್ಕಿರುವ ಒಂದು ದೊಡ್ಡ ಅಸಮಾಧಾನವನ್ನು ಕಾರ್ನಾಡರು ಅಭಿವ್ಯಕ್ತಿಸಿದ್ದಾರೆ.
 
ಭಾರತೀಯರೂ ಅಲ್ಲದ ನೈಪಾಲರಿಗೆ ಭಾರತದ ಒಂದು ದೊಡ್ಡ ಸಾಹಿತ್ಯಕ ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ ಇತರ ಹಿರಿಯ ಲೇಖಕರಂತೆ ಜಾಣ ಮೌನ ವಹಿಸದೆ ಅಂತರರಾಷ್ಟ್ರೀಯ ವಲಯದಲ್ಲಿ  ಬಹು ದೊಡ್ಡ ಹೆಸರಾಗಿರುವ ನೈಪಾಲರನ್ನು ಬಿಚ್ಚುಮಾತುಗಳಿಂದ ಟೀಕಿಸಿ ಭಾರತೀಯ ವಿವೇಚನಾಶಕ್ತಿಯ ವಕ್ತಾರರಾಗಿ ಮಾತಾಡಿರುವ ಕಾರಣ ಕಾರ್ನಾಡರು ನಿಜಕ್ಕೂ ಅಭಿನಂದನಾರ್ಹರು.
 
ಕಾರ್ನಾಡರು ಮುಖ್ಯವಾಗಿ ಹೇಗೆ ನೈಪಾಲರು ಭಾರತೀಯ ಮುಸಲ್ಮಾನ ಭಾಂಧವರ ಬಗ್ಗೆ ಅಯಥಾರ್ತವಾದ, ಸತ್ಯದೂರವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಕಾರ್ನಾಡರು ತೆರೆದಿರುವ ದಾರಿಯಲ್ಲಿ ಇನ್ನೂ ಮುಂದೆ ಹೋಗಿ ಚರ್ಚೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಜರೂರಿದೆ.

ಇಂಗ್ಲಿಷ್ ಬಲ್ಲೆವೆಂಬ ಅಹಂಕಾರಕ್ಕೊಳಗಾಗಿ ಭಾರತದ ಮತ್ತು ಭಾರತ ಮೂಲದ ಪ್ರಶಸ್ತಿ ವಿಜೇತ ಇಂಗ್ಲಿಷ್ ಬರಹಗಾರರು ತಮ್ಮ ಅತ್ಯಲ್ಪ ಅರಿವಿನ ಆಧಾರದ ಮೇಲೆ ಬಾಯಿಗೆ ಬಂದಂತೆ ಮಾತಾಡುವುದು ವಾಡಿಕೆಯಾಗಿದೆ. ಸುದ್ದಿಸಿಂಹ ಸಾಹಿತಿ ಸಲ್ಮಾನ್ ರಶ್ದಿ ಅವರು ಈ ಹಿಂದೆ ಇಂದು ಇಂಗ್ಲಿಷ್‌ನಲ್ಲಿ ಬರುತ್ತಿರುವ ಸಾಹಿತ್ಯವೇ ಭಾರತದ ಮುಖ್ಯ ಸಾಹಿತ್ಯಧಾರೆಯೆಂದು ಅಪ್ಪಣೆ ಕೊಡಿಸಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
 
ಇತ್ತೀಚಿನ ಇನ್ನೊಂದು ಉದಾಹರಣೆಯೆಂದರೆ ಇನ್ನೊಬ್ಬ ಪ್ರಶಸ್ತಿವಿಜೇತ ಭಾರತೀಯ ಇಂಗ್ಲಿಷ್ ಸಾಹಿತಿ ಅರವಿಂದ ಅಡಿಗ ಅವರು ತಾವು ಇಂಗ್ಲಿಷ್ ಅನುವಾದದಲ್ಲಿ ಓದಿದ ಒಬ್ಬಿಬ್ಬಿರು ಕನ್ನಡ ಸಾಹಿತಿಗಳನ್ನು ಹಿಡಿದುಕೊಂಡು ಇವರೇ ಭಾರತದ ಶ್ರೇಷ್ಠಾತಿಶ್ರೇಷ್ಠ ಸಾಹಿತಿಗಳೆಂದು ಮಾಧ್ಯಮಗಳಲ್ಲಿ ಉದ್ಘೋಷಿಸುತ್ತಿರುವುದು.

ತಮ್ಮ ತಾಯಿನುಡಿಗಳನ್ನು ಮರೆತ ಅಥವಾ ಅವುಗಳಿಂದ ವಂಚಿತರಾದ ಇಂಗ್ಲಿಷಮ್ಮನ ಮಕ್ಕಳಾದ ಬುದ್ಧಿಜೀವಿಗಳು `ಭಾರತೀಯ ಭಾಷಾಸಾಹಿತ್ಯಗಳ ಭವಿಷ್ಯದ ಜೀವನ ಇಂಗ್ಲಿಷ್ ಅನುವಾದದ ಮೂಲಕವೇ~ ಎಂದು ಆಂಗ್ಲಾಹಂಕಾರದಿಂದ ಆಹ್ಲಾದಿತರಾಗಿ ಫರ್ಮಾನು ಹೊರಡಿಸುವುದನ್ನು ಅನೇಕ ಸಲ ಕೇಳಿಕೇಳಿ ರೋಸಿಹೋಗಿದ್ದೇನೆ.

ಇಂಥಹ ಬುಡವಿಲ್ಲದ ಮಾತುಗಳನ್ನು ಕೇಳಿದಾಗ `ಮಂದಮತಿಯೊಬ್ಬ ನಿಂದನೆಯ ಮಾಡಿದರೆ ಕಿವಿಗೆ ತಂದುಕೊಳ್ಳದವನೆ ಜಾಣ~ ಎಂದುಕೊಂಡು ಸುಮ್ಮನಿರುವುದು ಸುಲಭ. ಅಥವಾ ಅಷ್ಟೇ ಸಿನಿಕತನದಿಂದ ಅವರ ಮಾತುಗಳನ್ನು ತಿಪ್ಪೆಗೆ ಬಿಸಾಕುವುದು ಇನ್ನೂ ಸುಲಭ. ನೈಪಾಲರ ಭಾರತದ ಬಗೆಗಿನ ಮೊದಲ ಪುಸ್ತಕ ` ವೂಂಡೆಡ್ ಸಿವಿಲೈೇಷನ್~  ಭಾರತದ ಬಗ್ಗೆ ಅತ್ಯಂತ ನೇತ್ಯಾತ್ಮಕವಾದದ್ದು.

ಅದರ ಬಗ್ಗೆಯೂ ತುಂಬಾ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ಪತ್ರಕಾರರು ಹಿಂದಿ ರಂಗನಿರ್ದೇಶಕರಾದ ಸತ್ಯದೇವ್ ದುಬೇ ಅವರ ಅಭಿಪ್ರಾಯ ಕೇಳಿದಾಗ ಅವರು,  `ಹು ಇಸ್ ದಿಸ್ ನೈಪಾಲ್?~  ಎಂದು ಪ್ರತಿಪ್ರಶ್ನೆ ಕೇಳಿದ್ದರು.
 
ದುಬೇ ಅವರ ಸಿನಿಕ ಪ್ರತಿಕ್ರಿಯೆ ನೈಪಾಲರ ಸಿನಿಕ ಚಿತ್ರಣಕ್ಕೆ ತಕ್ಕ ಜವಾಬೆನ್ನುವುದು ನಿಜವಾದರೂ ಮಾಧ್ಯಮದವರು, ಮಹಾನ್ ಪ್ರಜೆಗಳು ಕಿವಿ ತೆರೆದಿಟ್ಟುಕೊಳ್ಳುವುದು ರಶ್ದಿ, ಅಡಿಗಗಳಂಥವರಿಗೇ ಹೊರತು ದುಬೇ ಅಂಥವರಿಗಲ್ಲ.

ಕಾರ್ನಾಡರ ಜವಾಬ್ದಾರಿಯುತ ಪ್ರತಿಕ್ರಿಯೆಯ ಮಹತ್ವವಿರುವುದು ಇಲ್ಲಿಯೇ.
ಭಾರತದ ಆಗುಹೋಗುಗಳ ಕುರಿತು ವಿದೇಶೀಯರು-ಅದರಲ್ಲೂ ಇಂಗ್ಲಿಷ್ ಭಾಷಿಕರು ನೀಡಿರುವ ಉವಾಚಗಳ ಇತಿಹಾಸ ಅತ್ಯಂತ ಕುತೂಹಲಕಾರಿ.

ವಸಾಹತುಶಾಹಿ ಯುಗದಲ್ಲಿ ಇಂಗ್ಲಿಷ್‌ನಲ್ಲಿ ರಚಿಸಿದ ಭಾರತದ ಬಗೆಗಿನ ಬರಹಗಳು ವಸಾಹತುಶಾಹಿ ಪರವಾಗಿರದ ವಿದೇಶೀಯರನ್ನೂ ಭಾರತೀಯರನ್ನೂ ಪ್ರಭಾವಿಸಿದವು. ಉದಾಹರಣೆಗೆ `ಸಿಪಾಯಿ ದಂಗೆ~ಯ ಬಗ್ಗೆ ಸುದೀರ್ಘ ಅಧ್ಯಯನವೊಂದನ್ನು ಬರೆದ ಕಾರ್ಲ್‌ಮಾರ್ಕ್ಸ್ ಬ್ರಿಟಿಷ್ ವಸಾಹತುಶಾಹಿಗಳ ಪಕ್ಷಪಾತಿಯೇನೂ ಅಲ್ಲ.

ಆದರೆ ಆತನೂ ಬ್ರಿಟಿಷ್ ವಸಾಹತುಶಾಹಿ ವಿದ್ವಾಂಸರು ನೀಡಿದ ಮಾಹಿತಿಯನ್ನೇ ಅನುಸರಿಸಿ ಬ್ರಿಟಿಷ್‌ಪೂರ್ವ ಭಾರತವನ್ನು ಒಂದು `ಸ್ಥಗಿತ ಸಮಾಜ~ವೆಂದು ಬಗೆದಿದ್ದ. ಶತಮಾನಗಳ ಕಾಲ ಯಾವ ಬದಲಾವಣೆಗಳೂ ಜರುಗದ ಭಾರತಕ್ಕೆ ಬ್ರಿಟಿಷರ  ಆಗಮನವು ಹೊಸದೊಂದು ತಿರುವನ್ನು ಚಾಲನೆಯನ್ನು ನೀಡಿತೆಂದು ಬರೆದ.

ಪಾಪ, ಆತನಿಗೆ ಭಾರತದ ಬಗೆಗೆ ಬೇರೆ ಮಾಹಿತಿ ನೀಡುವ ಮೂಲಗಳು ಆಗ ಉಪಲಬ್ಧವಿರಲಿಲ್ಲ. ವಿಚಿತ್ರವೆಂದರೆ ವಸಾಹತು ಯುಗದಲ್ಲಿ ಭಾರತದ ಇತಿಹಾಸದ ಬಗ್ಗೆ ಚಿಂತಿಸಿದವರಲ್ಲಿ ಬಹಳ ಮಂದಿ - ಅವರ ಸೈದ್ಧಾಂತಿಕ ನೆಲೆಗಳೇನೇ ಇರಲಿ - ಸನಾತನ ಕಾಲದ ಭಾರತೀಯ ಸಂಸ್ಕೃತಿಗೆ ಎಂಥಹದೋ ಲಕ್ವ ಹೊಡೆಯಿತೆಂದು ತಿಳಿದುಬಿಟ್ಟರು.

ಆರ್ಯ ಸಮಾಜಿಗರು ಶುದ್ಧ, ವೈದಿಕ ಧರ್ಮವನ್ನು ಪುನರುತ್ಥಾನಗೊಳಿಸಲು ಹೊರಟರು; ಬ್ರಹ್ಮಸಮಾಜಿಗರು ಪಶ್ಚಿಮದ ವಿಚಾರಶಕ್ತಿಯ ದ್ವಾರಾ ಹಿಂದೂಧರ್ಮವನ್ನು ಪುನರುಜ್ಜೀವಗೊಳಿಸಲು ನಿಂತರು; ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ ಮುಂತಾದವರು ಆರ್ಷೇಯ ವೇದಾಂತ, ಆಧುನಿಕ ವಿಜ್ಞಾನಗಳನ್ನು ಬೆಸೆದು ಧರ್ಮವನ್ನು ಹೊಸತಾಗಿಸಲು ಪ್ರಯತ್ನಿಸಿದರು.

ಹಿಂದುತ್ವವಾದಿಗಳೂ ಪರಮ ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯ ಪತನದ ಕಾರಣವನ್ನು ಮುಸ್ಲಿಂ ದಾಳಿಕೋರರ ಮೇಲೆ ಹೇರಿದರು. ಮಧ್ಯಯುಗದ ಕೊಳಕಿನಿಂದ ಬಿಡುಗಡೆ ಪಡೆದ ಶುದ್ಧ ಭಾರತೀಯ ಸಂಸ್ಕೃತಿಯ ಹುಡುಕಾಟ ಇವರೆಲ್ಲರಿಗೆ ಸಮಾನವಾಗಿತ್ತು.

ಆದರೆ ಅವರು ಕಂಡುಕೊಂಡ ಕೊಳಕಿನ ಕಾರಣಗಳು ಮಾತ್ರ ಬೇರೆಬೇರೆಯಾಗಿದ್ದವು. ಮಧ್ಯಯುಗದಲ್ಲಿ ಮತ್ತೆ ಮತ್ತೆ ಭಕ್ತಿ ಮತ್ತು ಸಿದ್ಧ ಪರಂಪರೆಗಳ ಮುಸುಕಿನಲ್ಲಿ ಜರುಗಿದ ವೈಚಾರಿಕ ಆಂದೋಲನಗಳ ಬಗ್ಗೆ ಅವರಿಗೆ ತಿಳಿವಳಿಕೆ ಇರಲಿಲ್ಲ.

ಯಾಕೆಂದರೆ ಅವರ ಇತಿಹಾಸದ ಗುರುಗಳಾದ ವಸಾಹತುಯುಗದ ಪಂಡಿತವರೇಣ್ಯರು ಭಾರತದ ಅಸಲು ಸಂಸ್ಕೃತಿಯೆಂದರೆ ಸಂಸ್ಕೃತವೊಂದೇ ಎನ್ನುವ ಪೂರ್ವಗ್ರಹದಿಂದ ಆಲೋಚಿಸಿದ್ದರು.

ಇದೇ ಸಮಯದಲ್ಲಿ ಮಿಷನರಿ ಪಂಡಿತರು ದೇಶಭಾಷೆಗಳನ್ನು ಇಂಡೋ ಆರ್ಯನ್ ಮಾದರಿಯಲ್ಲಿ ಪುನಾರಚಿಸತೊಡಗಿದರು. ಇಪ್ಪತ್ತನೆ ಶತಮಾನದಲ್ಲಿ ನಡೆದ ಪ್ರಾದೇಶಿಕ ಭಾಷೆಗಳ ಪುನರುತ್ಥಾನವೂ ಇದೇ ಮಾದರಿಯನ್ನನುಸರಿಸಿ, ಆ ಸಂದರ್ಭದಲ್ಲಿ ರಚಿತವಾದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಆಖ್ಯಾಯಿಕೆಗಳಲ್ಲಿ ಆಡುಪರಂಪರೆಗಳನ್ನು ಮೂಲೆಗೆ ತಳ್ಳಲಾಯಿತು.

ವಸಾಹತುಯುಗದಲ್ಲಿ ನಮಗೆ ಬಂದದ್ದು ಕೇವಲ ಇಂಗ್ಲಿಷ್ ಎಂಬ ಭಾಷೆಯೊಂದೇ ಅಲ್ಲ; ಇಂಗ್ಲಿಷ್‌ಕೇಂದ್ರಿತ ಲೋಕದೃಷ್ಟಿಯೂ ನಮ್ಮನ್ನು ಕವಿದುಕೊಂಡಿತು. ಭಾರತಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಎರಡನೆ ಮಹಾಯುದ್ಧದ ಭರ್ಜರಿ ಹೊಡೆತದಿಂದ ಇಂಗ್ಲಿಷ್‌ನ ತವರುಮನೆಯಾದ ಇಂಗ್ಲೆಂಡಿಗೆ ಸರಿಯಾದ ಏಟು ಬಿತ್ತಾದರೂ ಇಂಗ್ಲಿಷ್ ಭಾಷೆಗೆ ಬಾಧೆ ಬರಲಿಲ್ಲ.

ಅಷ್ಟು ಹೊತ್ತಿಗೆ ಸರಿಯಾಗಿ ನೋಮ್ ಚೋಮ್ಸ್ಕಿ ಹೇಳಿದ ಹಾಗೆ ಅಮೆರಿಕಕೇಂದ್ರಿತ ನವವಸಾಹತುಶಾಹಿ ತಲೆಯೆತ್ತಿದ ಕಾರಣ ಅಲ್ಲಿನ ಭಾಷೆಯಾಗಿದ್ದ ಇಂಗ್ಲಿಷ್‌ನ ಯಜಮಾನಿಕೆ ಮುಂದುವರಿಯಿತು. ವಸಾಹತೋತ್ತರ ಭಾರತದಲ್ಲಿ ಇಡೀ ರಾಷ್ಟ್ರದ ಸಂಪರ್ಕಭಾಷೆಯಾಗುವ ಅರ್ಹತೆ ಮತ್ತು ಅನುಕೂಲ ಇನ್ಯಾವ ದೇಶಭಾಷೆಗೂ ಇಲ್ಲದೆ ಹೋಗಿ ಇಂಗ್ಲಿಷ್ ರಾಷ್ಟ್ರೀಯ ಸಂಪರ್ಕ ಭಾಷೆಯಾಗಿ, ಹಲವು ಮಟ್ಟಿಗೆ ಶಿಕ್ಷಣ, ವಿಜ್ಞಾನ ಮತ್ತು ಆಡಳಿತಗಳ ಭಾಷೆಯಾಗಿ ಬೆಳೆಯಿತು.

ಗೋಳಿಕರಣದ ಪ್ರಕ್ರಿಯೆ ಇಂಗ್ಲಿಷ್‌ನ ಪ್ರಭಾವ ಮತ್ತು ಪ್ರಚಾರಕ್ಕೆ ಇನ್ನೂ ಹೆಚ್ಚಿನ ಚಾಲನೆ ನೀಡಿದೆ. ಇಂಗ್ಲಿಷ್ ಮಾಧ್ಯಮ ಹೆಚ್ಚುಹೆಚ್ಚು ಜನಪ್ರಿಯವಾಗುತ್ತಿರುವ ಸಂದರ್ಭದಲ್ಲಿ ಆ ಭಾಷಾಮೂಲದ ಸಾಂಸ್ಕೃತಿಕ ಪ್ರಕ್ರಿಯೆಗಳು ಅಭೂತಪೂರ್ವವಾದ ಅವಧಾರಣೆಯನ್ನು ಪಡೆಯುತ್ತಿರುವುದು ಸಹಜವೇ ಆಗಿದೆ.

ಈ ಬೆಳವಣಿಗೆಯ ಪರಿಣಾಮಗಳು ಹಲವು- ಇಂಗ್ಲಿಷ್‌ನಲ್ಲಿ ಮಾತಾಡುವವರೇ ವಿದ್ಯಾವಂತರು; ಇಂಗ್ಲಿಷ್‌ನಲ್ಲಿ ರೆಯುವವರೇ ಬರಹಗಾರರು; ಇಂಗ್ಲಿಷ್‌ನವರಿಂದ ಹೊಗಳಿಸಿಕೊಂಡವರೇ ಅರ್ಹರು; ಇಂಗ್ಲಿಷ್‌ನಲ್ಲಿ ಪ್ರಚಾರಗೊಳ್ಳುತ್ತಿರುವ ವಿಚಾರಗಳ ವಕ್ತಾರರೇ ನಮ್ಮ ಶ್ರೇಷ್ಠ ಚಿಂತಕರು; ಇಂಗ್ಲಿಷ್ ಮಾದರಿಗಳನ್ನು ಬಳಸುವವರೇ ನಮ್ಮ ಘನತೆವೆತ್ತ ಸಂಶೋಧಕರು. ಈ ತೆರನ ಹಲವು ಗ್ರಹೀತಗಳು ನಮ್ಮ ಮನದಾಳದೊಳಗಿಳಿದು ನಮ್ಮ ಚಿಂತನೆ-ವರ್ತನೆಗಳನ್ನು ಸೂಕ್ಷ್ಮಾತಿಸೂಕ್ಷ್ಮ ಬಗೆಗಳಲ್ಲಿ ನಿರ್ಧರಿಸುತ್ತಿವೆ.

ಇದೇ ಗೊಡವೆಯ ಇನ್ನೊಂದು ತುದಿ ಕುರುಡು ಭಾಷಾಂಧತೆ, ಕುರುಡು ಸ್ವದೇಶೀವಾದ. ಇಂಗ್ಲಿಷ್ ಮತಾಂಧತೆಗೆ ಇದೊಂದು ಪರ್ಯಾಯವಾಗಿ ಇಂಗ್ಲಿಷ್ ಬಾರದವರಿಗೆ ಆಕರ್ಷಕವಾಗಿ ಕಂಡರೂ ಇದು ಅದೇ ವಿಷಮ ಪರಿಸ್ಥಿತಿಯ ಇನ್ನೊಂದು ಮೋರೆ. `ಅರಿತು ಮರೆತವನೇ ಜ್ಞಾನಿ~ಯೆಂದ ಅಲ್ಲಮಪ್ರಭು.

ಇಂಗ್ಲಿಷ್ ಈಗ ಎಷ್ಟು ಸರ್ವವ್ಯಾಪಿಯಾಗುತ್ತಿದೆಯೆಂದರೆ ಅದನ್ನು ಪೂರ್ತಿ ಬಿಡುವಂತೆಯೂ ಇಲ್ಲ, ಅದನ್ನೇ ಪೂರ್ತಿ ಅವಲಂಬಿಸುವಂತೆಯೂ ಇಲ್ಲ. ಇಂಗ್ಲಿಷ್ ಮೂಲದ ಲೋಕದೃಷ್ಟಿಯನ್ನು ಎಷ್ಟು ವಿಮರ್ಶಾತ್ಮಕವಾಗಿ ನೋಡಬೇಕೋ ಅಷ್ಟೇ ವಿಮರ್ಶಾತ್ಮಕವಾಗಿ ಸ್ವಭಾಷಾಂಧತೆಯನ್ನೂ ನೋಡಬೇಕಾಗಿದೆ.
 
ವಸಾಹತುಶಾಹಿ ಸಂದರ್ಭದಲ್ಲಿ ಕುರುಡುಅನುಕರಣೆ, ಕುರುಡು ಬಂಡಾಯಪರಸ್ಪರಾವಲಂಬಿಯಾಗಿ ಸೃಷ್ಟಿಯಾಗುತ್ತದೆಂಬುದನ್ನು ಫ್ರೆಂಚ್ ಚಿಂತಕ ಆಲ್ಬರ್ತ್ ಮೆಮಿ ಚರ್ಚಿಸಿದ್ದಾನೆ. ಮೇಲರಿಮೆ-ಕೀಳರಿಮೆಗಳೆರಡರಿಂದಲೂ ಬಿಡುಗಡೆ ಹೊಂದಿ ಪರಭಾಷೆಯನ್ನೂ ಸ್ವಂತಭಾಷೆಯನ್ನೂ ಎದಿರುಗೊಳ್ಳುವುದು ಅಗತ್ಯ.

ಅಮಿ ಸಿಜರ್ ತೋರಿಸಿರುವ ಹಾಗೆ ಸಂಸ್ಕೃತಿ ಮತ್ತು ಭಾಷೆಗಳ ಪರಸ್ಪರ ಕೊಡುಕೊಳೆ ಇತಿಹಾಸದಲ್ಲಿ ಸದಾ ಸೃಜನಶೀಲವಾಗಿ ಕೆಲಸಮಾಡಿದೆ. ಯಾವ ಭಾಷೆ ಸಂಸ್ಕೃತಿಗಳು ಹೊರಭಾಷೆ ಸಂಸ್ಕೃತಿಗಳ ಜೊತೆಗೆ ಆದಾನಪ್ರದಾನಗಳನ್ನು ನಡೆಸಿಲ್ಲ, ಅಂಥವು ನಶಿಸಿಹೋಗಿವೆ.
 
ಆಧುನಿಕಪೂರ್ವ ಭಾರತದ ಸಂದರ್ಭದಲ್ಲಿ ಭಾಷೆಗಳು, ಸಾಹಿತ್ಯಗಳು, ಸಂಸ್ಕೃತಿಗಳು, ಧರ್ಮಗಳು, ವಿಚಾರಗಳು ಸೃಜನಶೀಲ ವಿಕಾಸವನ್ನ ಪಡೆದದ್ದು ಸಮಾನತೆಯ ಆಧಾರದ ಮೇಲೆ ಜರುಗಿದ ವಿನಿಮಯಗಳ ಮೂಲಕವೆ.

ಆದರೆ ವಸಾಹತು ಹಾಗೂ ನವವಸಾಹತುಶಾಹಿ ಚೌಕಟ್ಟಿನಲ್ಲಿ ನಡೆಯುವ ಭಾಷಿಕ, ಸಾಂಸ್ಕೃತಿಕ ಆದಾನ-ಪ್ರದಾನಗಳು ಶೋಷಣಾಧಾರಿತ ಅಸಮಾನತೆಯಿಂದ  ನಿಯಂತ್ರಿತವಾಗುವುದರಿಂದ ದೊಡ್ಡಮೀನು ಸಣ್ಣಮೀನನ್ನು ನುಂಗಿಹಾಕುವಂಥ ಪ್ರಸಂಗವನ್ನು ನಿರ್ಮಾಣ ಮಾಡುತ್ತದೆ. ಇಂಥಹ ವೈಷಮ್ಯಪೂರ್ಣ ಕೊಡುಕೊಳೆ ನಮ್ಮ ಮತ್ತು ಇಂಗ್ಲಿಷ್‌ಪ್ರಧಾನ ಯಜಮಾನ ಸಂಸ್ಕೃತಿಯ ತಳಪಾಯ.

ಇಂಗ್ಲಿಷ್‌ನ ವಲಯಗಳಲ್ಲಿ ಬರೆದವರೂ, ಮಾತಾಡಿದವರು ಅದೆಷ್ಟೇ ದೊಡ್ಡ ಪುರಸ್ಕಾರಗಳನ್ನು ಪಡೆದವರಾಗಿರಲಿ, ಅದೆಷ್ಟೇ ಪ್ರತಿಭಾವಂತರಾಗಿರಲಿ ಅಂಥವರ ವಿಚಾರಗಳನ್ನು, ಅನಗತ್ಯ ಪೂಜ್ಯಭಾವನೆಯಿಂದ ಸಾರಾಸಗಟಾಗಿ ನುಂಗುವ ಪರಾಕುಭಟ್ಟರು ನಾವಾಗಬೇಕಿಲ್ಲ.
 
ನಮ್ಮ ತಥ್ಯಗಳ, ಸತ್ಯಗಳ,ಅಗತ್ಯಗಳ ನಿಕಷಕ್ಕೊಡ್ಡಿಯೇ ಎಷ್ಟರಮಟ್ಟಿಗೆ ಸ್ವೀಕರಿಸಬೇಕು, ತಿರಸ್ಕರಿಸಬೇಕು ಎಂಬುದಕ್ಕೆ ಕಾರ್ನಾಡರು ನೈಪಾಲರಿಗೆ ನೀಡಿರುವ ಪ್ರತಿಕ್ರಿಯೆ ಉತ್ತಮ ಮಾದರಿಯಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT