ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ಏಳ್ಗೆಗೆ ಬೇಕು ಪ್ರೀತಿ–ಸೇವೆಗಳ ‘ಇಂಧನ’!

Last Updated 20 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ, ಸ್ಥಾಪನೆಯಾದ ಮೊದಲ  3–4 ವರ್ಷಗಳನ್ನು ಬಿಟ್ಟರೆ ಉಳಿದಂತೆ ನಷ್ಟದಲ್ಲಿಯೇ ನಡೆಯುತ್ತಿದೆ. ಸಂಸ್ಥೆಯು ನಷ್ಟಕ್ಕೆ ಸಿಲುಕಲು ಅನೇಕ ಕಾರಣಗಳಿವೆ. ಇದರಲ್ಲಿ ಸರ್ಕಾರದ ಪಾತ್ರ, ಸಂಸ್ಥೆಯ ಅವೈಜ್ಞಾನಿಕ ಕಾರ್ಯಾಚರಣೆ, ಕಳಪೆ ಸಾಮಗ್ರಿಗಳ ಖರೀದಿ, ಭ್ರಷ್ಟಾಚಾರ, ಖಾಸಗಿ ಸಾರಿಗೆಯವರೊಂದಿಗೆ ವಿವಿಧ ಇಲಾಖೆಗಳ ಶಾಮೀಲು... ಹೀಗೆ ಹತ್ತು ಹಲವು ಕಾರಣಗಳ ಕಡೆಗೆ ಬೊಟ್ಟು ಹೊರಳುತ್ತದೆ.

ವರ್ಷದಿಂದ ವರ್ಷಕ್ಕೆ ಸಂಸ್ಥೆಯ ಕ್ರೋಡೀಕೃತ ನಷ್ಟ ಹೆಚ್ಚಾಗುತ್ತಲೇ ಇದ್ದು ಈಗ ರೂ 300 ಕೋಟಿ ಮೀರಿದೆ. ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ಸಂಬಳವನ್ನೂ ಕೊಡಲಾಗದಂತಹ ಸ್ಥಿತಿ ಇದೆ. ಆಡಳಿತ ಮಂಡಳಿ ಕೂಡ ಎಲ್ಲಕ್ಕೂ ನಷ್ಟದ ನೆಪವನ್ನೇ ಮುಂದಿಡುತ್ತಿದೆ. ಆದರೆ ಹಠಾತ್ತಾಗಿ 3–4 ತಿಂಗಳಿನಿಂದ ಈಚೆಗೆ ಸಂಸ್ಥೆಯ ನಷ್ಟದ ಪ್ರಮಾಣ ಕಡಿಮೆಯಾಗತೊಡಗಿದೆ.

ಇದೊಂದು ಉತ್ತಮ ಬೆಳವಣಿಗೆ. ಹಲವು ವರ್ಷಗಳಿಂದ ನಷ್ಟದ ಮಾತು ಕೇಳಿ ಕೇಳಿ ರೋಸಿಹೋಗಿದ್ದ ಸಂಸ್ಥೆಯ ನೌಕರರು ಕೆಎಸ್ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ನೇತೃತ್ವದಲ್ಲಿ ಖಾಸಗಿ ಸಾರಿಗೆ ವಿರುದ್ಧ ಹೋರಾಟಕ್ಕೆ ಇಳಿದು ಅವರ ಅನಧಿಕೃತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಪರಿಣಾಮ ಸಂಸ್ಥೆ ಚೇತರಿಕೆಯ ಹಾದಿಗೆ ಹೊರಳಿದೆ.

ಇದೇ ಕೆಲಸವನ್ನು ನೌಕರ ವರ್ಗದವರು 10–12 ವರ್ಷದ ಹಿಂದೆಯೇ ಮಾಡಬಹುದಿತ್ತಲ್ಲ? ಏಕೆ ಆಗಿನಿಂದ ಸುಮ್ಮನಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ಆಡಳಿತ ಮಂಡಳಿಯ ವರ್ತನೆ, ದೂರವಾದ ಸೌಲಭ್ಯಗಳು, ನಾನಾ ಕಾರಣ ಒಡ್ಡಿ ಸಂಬಳದಲ್ಲಿ ಕಡಿತ ಮೊದಲಾದ ವ್ಯತಿರಿಕ್ತ ಅಂಶಗಳನ್ನು ಕಂಡು ನೌಕರರು ಇನ್ನು ಮುಂದೆ ಸಂಸ್ಥೆಗೆ ಉಳಿಗಾಲವಿಲ್ಲ ಎಂದು ಭಾವಿಸಿದರು.

ಸಂಸ್ಥೆ ಮುಚ್ಚಿ ಹೋಗಬಹುದು ಎಂಬ ಆತಂಕವೂ ಅವರಿಗೆ ಎದುರಾಯಿತು. ಅದೇ ವೇಳೆಗೆ ರಾಜ್ಯ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಆ ಅವಧಿಯಲ್ಲಿ ಯಾವ ಪ್ರಮುಖ ತೀರ್ಮಾನಗಳನ್ನು ಸರ್ಕಾರ­ವಾಗಲೀ ಅಥವಾ ಆಡಳಿತ ಮಂಡಳಿಯಾಗಲೀ ತೆಗೆದುಕೊಳ್ಳುವಂತಿರಲಿಲ್ಲ. ಇದರ ಲಾಭ ಪಡೆದುಕೊಂಡ ಸಿಬ್ಬಂದಿ ವರ್ಗದವರು ಖಾಸಗಿ ಸಾರಿಗೆ ವಿರುದ್ಧ ಪ್ರತಿಭಟನೆ ಹಾದಿ ಹಿಡಿದು ಯಶ ಸಾಧಿಸಿದರು.

ಖಾಸಗಿಯವರು ನಡೆಸುತ್ತಿದ್ದ ಅವ್ಯವಹಾರ ಸಂಸ್ಥೆಯ ಅಧಿಕಾರಿ ವರ್ಗದವರು, ಪೊಲೀಸರು, ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳೆಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೆ ಬೆಕ್ಕಿಗೆ ಗಂಟೆ ಕಟ್ಟಲು ಯಾರೂ ಮುಂದಾಗಿರಲಿಲ್ಲ ಅಷ್ಟೇ. ಸಂಸ್ಥೆ ಮುಚ್ಚಿದರೆ ಎಂಬ ಹೆದರಿಕೆ ಕೊನೆಗೆ ನೌಕರರನ್ನು ಖಾಸಗಿ ಸಾರಿಗೆ ವಿರುದ್ಧ ಹೋರಾಟ­ಕ್ಕೆ ಇಳಿಸಿತು. ಇದರ ಫಲವಾಗಿ ಖಾಸಗಿ ಸಾರಿಗೆಯವರ ಅನಧಿಕೃತ ಕಾರ್ಯಾ­ಚರಣೆ ಈಗ ಬಹುತೇಕ ಸ್ಥಗಿತಗೊಂಡಿದೆ.

ಹಾಗಾಗಿ ಸಂಸ್ಥೆ ಆರ್ಥಿಕವಾಗಿ ಸುಧಾರಣೆ ಕಾಣುತ್ತಿದೆ. ಮೂರು ತಿಂಗಳಿನಿಂದ ಈಚೆಗೆ ದಿನನಿತ್ಯದ ವರಮಾನದಲ್ಲಿ ಸುಮಾರು ₨ 15 ಲಕ್ಷದಷ್ಟು ಹೆಚ್ಚಾಗಿದೆ! ಬರೀ ಖಾಸಗಿ ಸಾರಿಗೆ ಕಾರ್ಯಾಚರಣೆ ಸ್ಥಗಿತದಿಂದಲೇ ದಿನನಿತ್ಯ ವರಮಾನ ಇಷ್ಟು ಪ್ರಮಾಣದಲ್ಲಿ ಹೆಚ್ಚಾದರೆ ಎಲ್ಲ ಸ್ತರದಲ್ಲೂ ಸುಧಾರಣೆಯಾದರೆ ಎಷ್ಟು ಆಭ ಮಾಡಬಹುದು ಎಂಬುದನ್ನು ಸಂಸ್ಥೆಯ ಆಡಳಿತ ಮಂಡಳಿ ಆಲೋಚಿಸಬೇಕು.

ಸಾಮಾನ್ಯವಾಗಿ ಸಾರಿಗೆ ಸಂಸ್ಥೆ ನೌಕರರ ಚಳವಳಿ, ಹೋರಾಟ, ಮುಷ್ಕರ ಎಂದರೆ ಅವರ ಹತ್ತಾರು ಬೇಡಿಕೆಗಳ ಈಡೇರಿಕೆಗೆ ಹಿಡಿಯುವ ಮಾರ್ಗಗಳು ಎಂದೇ ಜನರ ಭಾವನೆ. ಆದರೆ ಈ ಬಾರಿ ಮಾತ್ರ ಪೂರ್ಣವಾಗಿ ನೌಕರರು ಸಂಸ್ಥೆ ­ಯನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸಿದರು. ಅದು ಅವರ ಉಳಿವಿನ ಹೋರಾಟ­ವೂ ಆಗಿತ್ತು ಎನ್ನುವುದು ಬೇರೆ ಮಾತು.

ಈ ಹಿಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿ­ಸುವ ಸಂದರ್ಭದಲ್ಲಿ ಅಂಥದೊಂದು ಹೋರಾಟ ನಡೆದಿತ್ತು; ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯು ಖಾಸಗಿಯವರ ಬಸ್‌ಗಳನ್ನು ಬಾಡಿಗೆಗೆ ಪಡೆದು­ಕೊಂಡು ಕಾರ್ಯಾಚರಣೆ ನಡೆಸಲು ಮುಂದಾ­ದಾಗಲೂ ನೌಕರರು ತೀವ್ರ ಪ್ರತಿಭಟನೆ ನಡೆಸಿದ್ದರು. ಈಗ ಖಾಸಗಿ ಸಾರಿಗೆ ವಿರುದ್ಧ ಹೋರಾಟಕ್ಕಿಳಿದು ಸಂಸ್ಥೆಯ ವರಮಾನ ವೃದ್ಧಿಗೆ  ಕಾರಣಕರ್ತರಾಗಿದ್ದಾರೆ.

ಕಾಂಟ್ರಾಕ್ಟ್ ಕ್ಯಾರೇಜಿಗೆ ಪರವಾನಗಿ ಪಡೆದ ಖಾಸಗಿ ಬಸ್‌ಗಳು ಸ್ಟೇಜ್ ಕ್ಯಾರೇಜ್‌ನಂತೆ ಕಾರ್ಯಾಚರಣೆ ನಡೆಸುತ್ತಿದ್ದವು. ಉತ್ತರ ಕರ್ನಾಟಕದಲ್ಲಂತೂ ಈ ಹಾವಳಿ ವ್ಯಾಪಕ­ವಾಗಿತ್ತು. ಪರ್ಮಿಟ್‌ ದುರುಪಯೋಗ ಆಗುತ್ತಿ­ದ್ದರೂ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲ! ಸರ್ಕಾರಿ ಸ್ವಾಮ್ಯದ ಬಸ್‌ ನಿಲ್ದಾಣಗಳ ಸುತ್ತ 300 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿ­ಕೊಳ್ಳುವಂತಿಲ್ಲ.

ಅದರ ಉಲ್ಲಂಘನೆಯಾಗಿ ಬಸ್ ನಿಲ್ದಾಣದ ಸಮೀಪವೇ ಖಾಸಗಿ ಬಸ್‌ಗಳು ನಿಂತರೂ ಪೊಲೀಸರಿಗೆ ಮಾತ್ರ ಅವುಗಳು ಕಾಣಿಸುವುದಿಲ್ಲ! ಪೊಲೀಸ್ ಕಮಿಷನರ್ ಹಿಂದೆ ಹೊರಡಿಸಿರುವ ಆದೇಶವನ್ನೇ ಪೊಲೀಸರು ಪಾಲಿ­ಸುತ್ತಿಲ್ಲ. ಈಗಲೂ ಟೂರಿಸ್ಟ್‌ ಕ್ಯಾರೇಜ್‌ ಪರ್ಮಿಟ್‌ ಪಡೆದಿರುವ ಖಾಸಗಿಯವರು ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಬಳಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ.

ಪೊಲೀಸ­­ರಿದ್ದರೂ ರಾಜಾರೋಷವಾಗಿ ಇದು ಎಗ್ಗಿಲ್ಲದೆ ಸಾಗಿದೆ. ಇನ್ನು ಸಾರಿಗೆ ಸಂಸ್ಥೆಯಲ್ಲಿ ಕೆಲ ಅಧಿಕಾರಿಗಳು ಸಂಸ್ಥೆ ಹಿತ ಕಾಯುವುದಕ್ಕಿಂತ ಖಾಸಗಿಯವರ ಹಿತ ಕಾಯುವುದಕ್ಕೇ ಹೆಚ್ಚು ಗಮನಹರಿಸಿದ ಪರಿಣಾಮ, ಸಂಸ್ಥೆಯು ಪ್ರಗತಿ ಸಾಧಿಸುವ ಬದಲಿಗೆ ನಷ್ಟದತ್ತ ಮುಖಮಾಡಿದೆ. ಇದರ ಜತೆಗೆ ಸಾರ್ವಜನಿಕರೊಂದಿಗೆ ಪ್ರತಿನಿತ್ಯ ವ್ಯವಹರಿಸುವ ಚಾಲಕರು ಮತ್ತು ನಿರ್ವಾಹಕರ ಧೋರಣೆಯೂ ಸಂಸ್ಥೆಗೆ ಸಾಕಷ್ಟು ಹೊಡೆತ ನೀಡಿದೆ ಎನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಇಂತಹ ಸಂಕಷ್ಟಗಳನ್ನು ಎದುರಿಸುತ್ತಿರುವ ಸಂಸ್ಥೆ ಮುಳುಗುವ ಹಡಗು ಆಗದೇ ಇನ್ನೇನು ಆಗಲು ಸಾಧ್ಯ?

ಸಾರಿಗೆ ಸಂಸ್ಥೆ ನೌಕರರು ಪ್ರಯಾಣಿಕನೇ ತಮ್ಮ ಪಾಲಿನ ಅನ್ನದಾತ ಎಂದು ಭಾವಿಸಿ, ಪ್ರಾಮಾಣಿಕತೆ ಮತ್ತು ಸೌಜನ್ಯದಿಂದ ವರ್ತಿಸಿ, ಉತ್ತಮ ಸೇವೆ ನೀಡಲು ಎಲ್ಲಿಯವರೆಗೆ ಮನಸ್ಸು ಮಾಡುವುದಿಲ್ಲವೋ ಅಲ್ಲಿಯವರೆಗೆ ಅವರ ಆತಂಕ ಕೂಡ ದೂರವಾಗುವುದಿಲ್ಲ. ಪ್ರಮುಖ­ವಾಗಿ ಪ್ರತಿನಿತ್ಯ ಸಾರ್ವಜನಿಕರೊಂದಿಗೆ ವ್ಯವಹರಿಸುವ ಚಾಲಕ ಮತ್ತು ನಿರ್ವಾಹಕರ ಮನಃಸ್ಥಿತಿ ಬದಲಾಗಬೇಕು.

ಪ್ರಯಾಣಿಕರನ್ನು ಪ್ರೀತಿಯಿಂದ ಕಾಣಬೇಕು. ವಯಸ್ಸಾದವರು ಬಸ್  ಹತ್ತುವಾಗ ಅಥವಾ ಇಳಿಯುವಾಗ ತಾಳ್ಮೆ ತೋರಬೇಕು. ಬಸ್ ಖಾಲಿ ಇದ್ದರೂ ನಿಲ್ಲಿಸದೇ ಭರ್ ಎಂದು ಸಾಗುವ ಬದಲಿಗೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಪ್ರಯಾ­ಣಿಕ­ರಿಂದ ಪಡೆದ  ಪ್ರತಿ ದುಡ್ಡಿಗೂ ಟಿಕೆಟ್ ನೀಡಬೇಕು. ಹುಬ್ಬಳ್ಳಿ–ಧಾರವಾಡ ನಡುವೆ ಸಂಚರಿಸುವ ಬೇಂದ್ರೆ ಸಾರಿಗೆ ಸೇವೆಯನ್ನು ಕಂಡ ಮೇಲಾದರೂ ವಾಯವ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕಿತ್ತು.

ಆ ಬಸ್‌ ಕೈತೋರಿದ ಕಡೆ ನಿಲ್ಲಿಸಿದರೆ, ವಾಯವ್ಯ ಸಾರಿಗೆ ಸಂಸ್ಥೆ ಬಸ್ಸುಗಳು ಬಸ್‌ ನಿಲುಗಡೆ ತಾಣದಲ್ಲೂ ನಿಲ್ಲುವುದಿಲ್ಲ. ಇನ್ನು ಸಂಸ್ಥೆ ಉದ್ಧಾರವಾಗಬೇಕು ಎಂದರೆ ಹೇಗೆ ಸಾಧ್ಯ? ಏಕಸ್ವಾಮ್ಯ ಇದ್ದರೂ ಕಷ್ಟ. ಖಾಸಗಿಯವರು ಇರಲೇಬಾರದು ಎನ್ನುವುದೂ ಸರಿಯಲ್ಲ. ಆದರೆ ಖಾಸಗಿಯವರು ಸರ್ಕಾರಕ್ಕೆ ವಂಚಿಸುವ ಕೆಲಸಕ್ಕೆ ಕೈಹಾಕಬಾರದು. ಪಡೆದಿರುವ ಪರ್ಮಿಟ್‌ಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಬೇಕು.

ಖಾಸಗಿ ಬಸ್‌ಗಳಿಗೆ ಅನುಮತಿ ನೀಡುವ ಮೊದಲು, ಸಾರಿಗೆ ಸಂಸ್ಥೆ ಆ ಮಾರ್ಗದಲ್ಲಿ ಬಸ್ ಸಂಚಾರ ಕಲ್ಪಿಸುವ ಉದ್ದೇಶ ಹೊಂದಿದೆಯೇ ಎಂಬುದನ್ನು ಅನುಮತಿ ನೀಡುವ ಅಧಿಕಾರಿಗಳು ಪರಿಶೀಲಿಸಿಕೊಳ್ಳಬೇಕು. ಸಾರಿಗೆ ಸಂಸ್ಥೆಯ ಆಕ್ಷೇಪವಿದ್ದರೂ ಅದನ್ನು ಪರಿಗಣಿಸದೇ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಖಾಸಗಿ­ಯವರಿಗೆ ಅನುಮತಿ ನೀಡಿರುವ ನಿದರ್ಶನಗಳಿವೆ. ಅಧಿಕಾರಿಗಳು ಖಾಸಗಿಯವರ ಜತೆ ಕೈಜೋಡಿಸದ್ದಿದರೆ ಇವೆಲ್ಲ ಸಾಧ್ಯವಾಗುವುದಿಲ್ಲ.

ಹಿಂದೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯು ಖಾಸಗಿಯವರಿಂದ ಬಸ್‌ಗಳನ್ನು ಬಾಡಿಗೆಗೆ ಪಡೆದು ಓಡಿಸಲು ಮುಂದಾದ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು, ಮಾಜಿ ಸಚಿವರು ಕೂಡ ಬಸ್‌ಗಳನ್ನು ಒದಗಿಸಿದ್ದರು. ಅದರಿಂದ ಬರುವ ಲಾಭದ ಅರಿವಿಲ್ಲದಿದ್ದರೆ ಈ ರೀತಿ ಬಸ್‌ಗಳನ್ನು ಇಂತಹ ಗಣ್ಯರು ಸಂಸ್ಥೆಗೆ ಒದಗಿಸುತ್ತಿದ್ದರೇ? ಸಂಸ್ಥೆಗೆ ಹೆಚ್ಚು ನಷ್ಟವಾದುದು ಆ ದಿನಗಳಲ್ಲಿಯೇ ಎಂಬ ಆರೋಪ ವ್ಯಾಪಕವಾಗಿದೆ. ಈ ಭಾಗದ ಜಿಲ್ಲೆಗಳು ಹಿಂದಿನಿಂದಲೂ ರಾಷ್ಟ್ರೀಕೃತ ಮಾರ್ಗ­ಗಳಿರುವ ಜಿಲ್ಲೆಗಳು ಎಂಬುದನ್ನು ಅಧಿಕಾರಿಗಳು ಮರೆಯಬಾರದು.

ಲಾಭ ತರುವ ಮಾರ್ಗಗಳಲ್ಲಿ ಖಾಸಗಿ­ಯವರಿಗೆ ಅವಕಾಶ ನೀಡಿ, ಹಳ್ಳಿಗಳಿಗೆ ಮಾತ್ರ ಸರ್ಕಾರಿ ಸ್ವಾಮ್ಯದ ಬಸ್‌ಗಳು ಸಂಚರಿಸಬೇಕು ಎಂದರೆ ಯಾವ ನ್ಯಾಯ? ಕೊನೆಗೆ ಸಂಸ್ಥೆಗಳ ನಷ್ಟದ ಹೊರೆಯನ್ನು ನೋಡಿ, ‘ಭರಿಸಲಾಗದು’ ಎಂದು ಸರ್ಕಾರ ಕೈಚೆಲ್ಲಿ ಸಾರಿಗೆ ಸಂಸ್ಥೆಗಳನ್ನು ಮುಚ್ಚಿದರೆ? ಆಮೇಲೆ ಖಾಸಗಿಯವರು ಆಡುವ ಆಟದ ಎದುರು ಯಾರಾದರೂ ನಿಲ್ಲಲು ಸಾಧ್ಯವೇ?

ಅದೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ನಂಬಿರುವ ನಮ್ಮಂತಹ ದೇಶದಲ್ಲಿ? ಸರ್ಕಾರಿ ಸ್ವಾಮ್ಯದ ಸಾರಿಗೆ ವ್ಯವಸ್ಥೆ ಸಶಕ್ತವಾಗಿರುವಾಗಲೇ ಒಂದು ಬಸ್‌ಗೆ ಪರ್ಮಿಟ್  ಪಡೆದು ನಕಲಿ ಪರ್ಮಿಟ್‌ನಲ್ಲಿ ಹೆಚ್ಚು ಬಸ್‌ಗಳನ್ನು ಓಡಿಸುತ್ತಿದ್ದಾರೆ; ಇನ್ನು ಸರ್ಕಾರಿ ಬಸ್‌ಗಳೇ ಇಲ್ಲ ಎಂದರೆ ಅವರು ಆಡಿದ್ದೇ ಆಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಖಾಸಗಿ ಸಾರಿಗೆ ಕಾರ್ಯಾಚರಣೆ ಸ್ಥಗಿತ­ಗೊಂಡ ಮಾರ್ಗಗಳಲ್ಲಿ ಸಂಸ್ಥೆ ಹೊಸ ಬಸ್‌­ಗಳನ್ನು ಓಡಿಸಬೇಕು. ವಾಹನಗಳು ಸ್ವಚ್ಛವಾಗಿರ­ಬೇಕು.

ಅವು ಪ್ರಯಾಣಿಕರನ್ನು ಆಕರ್ಷಿಸುವಂತಿರ­ಬೇಕು. ಮಾರ್ಗ ಮಧ್ಯದಲ್ಲಿ ಕೆಟ್ಟು ನಿಲ್ಲುವಂತೆ ಇರಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರಿ­ಗಳು ನೌಕರರನ್ನು ನಿಕೃಷ್ಟವಾಗಿ ಕಾಣದೇ ಉತ್ತಮ ಮಾನವ ಸಂಬಂಧ ಇಟ್ಟುಕೊಳ್ಳಬೇಕು. ಕಾನೂನು ಪ್ರಕಾರ ಅವರಿಗೆ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲದೇ, ಈಗ ನೌಕರರ ಹೋರಾಟದ ಫಲವಾಗಿ ಬರುತ್ತಿರುವ ವರಮಾನ­ದಲ್ಲಿ ಕನಿಷ್ಠ ಶೇ 25 ರಷ್ಟರನ್ನಾದರೂ ನೌಕರರ ವಿವಿಧ ಸೌಲಭ್ಯಗಳ ಬಾಕಿ ಪಾವತಿಸಲು ಬಳಸಬೇಕು. ಆಗ ನೌಕರರ ಮನಃಸ್ಥಿತಿಯೂ ಬದಲಾಗಿ ಉತ್ತಮ ಸೇವೆ ನೀಡಲು ಅವಕಾಶ­ವಾಗಬಹುದು. ಸಂಸ್ಥೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು.

ಇನ್ನು ಸರ್ಕಾರ ಕೂಡ ದ್ವಂದ್ವ ನೀತಿ ಅನುಸರಿಸುವುದನ್ನು ಕೈಬಿಡಬೇಕು. ತೊಟ್ಟಿಲು ತೂಗುವ ಹಾಗೂ ಮಗುವನ್ನೂ ಚಿವುಟುವ ಕೆಲಸವನ್ನು ಮಾಡಬಾರದು. ವಿದ್ಯಾರ್ಥಿ ಪಾಸ್  ಸೇರಿದಂತೆ ನಾನಾ ರಿಯಾಯಿತಿಗಳನ್ನು ಘೋಷಿ­ಸಿರುವ ಸರ್ಕಾರ ಆ ಪ್ರಕಾರ ಸಂಸ್ಥೆಗೆ ಹಣ ಮರು­ಪಾವತಿ ಮಾಡಬೇಕು.

ರಿಯಾಯಿತಿ ಘೋಷಿಸಿದ ನಂತರ ಹೊರೆಯನ್ನು ಸಾರಿಗೆ ಸಂಸ್ಥೆಗಳ ಹೆಗಲಿಗೆ ಕಟ್ಟುವುದು ಸರಿಯಲ್ಲ. ಲಾಭ ಬರದಿದ್ದರೂ ಕೆಲ ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಅನಿವಾರ್ಯ. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡಲು ಆಗದು. ಹಾಗೆಂದು ನಷ್ಟದಲ್ಲೂ ನಡೆಸಲು ಸಾಧ್ಯವಿಲ್ಲ. ಸಂಸ್ಥೆ ಸಮತೋಲನ ಕಾಪಾಡಿಕೊಳ್ಳಲು ಸರ್ಕಾರದ ನೆರವು ಅತ್ಯಗತ್ಯ.
ನಿಮ್ಮ ಅನಿಸಿಕೆ ತಿಳಿಸಿ editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT