ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಒಳಿತಿಗಾಗಿದ್ದರೆ ಹೀಗೆಲ್ಲ ಆಗುತ್ತಿತ್ತೇ?...

Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಪ್ರಶ್ನೆಗಳು ಇಲ್ಲದೆ ಈ ಅಂಕಣ ಆರಂಭಿಸಬೇಕು ಎಂದುಕೊಂಡೆ. ಆದರೆ, ಹೇಗೆ ಆರಂಭಿಸಬೇಕು ಎಂದು ತಿಳಿಯಲಿಲ್ಲ. ಪ್ರಶ್ನೆಗಳು ಮತ್ತೆ ಮತ್ತೆ ಎದ್ದು ನಿಂತು ಕಾಡತೊಡಗಿದುವು. ಆಡಳಿತಗಾರರು ಏಕೆ ಹೀಗೆ ಮಾಡುತ್ತಾರೆ ಎಂದು ಅರ್ಥ ಮಾಡಿಕೊಳ್ಳಲು ಹೆಣಗಿದೆ. ಅವರ ಹತ್ತಿರದವರ ಜೊತೆಗೆ  ವಿಚಾರಿಸಿದೆ. ಸಮಾಧಾನಕರ ಉತ್ತರ ಸಿಗಲಿಲ್ಲ. ಜನರಿಗೆ ನಿಜಕ್ಕೂ ಒಳ್ಳೆಯದು ಮಾಡಬೇಕು ಎಂಬ ಇರಾದೆ ಆಡಳಿತಗಾರರಿಗೆ ಇರುತ್ತದೆಯೇ ಹೇಗೆ ಎಂದೂ ಯೋಚಿಸಿದೆ. ಅವರು ಒಂದು ದಿನ ಅಧಿಕಾರ ಬಿಟ್ಟು ಹೋಗಬೇಕು. ಬಿಟ್ಟು ಹೋಗುವಾಗ ಅವರಿಗೆ ನೆಮ್ಮದಿ ಇರುತ್ತದೆಯೇ, ‘ನಾನು ಕಳೆದ ಐದು ವರ್ಷಗಳಲ್ಲಿ ಮಾಡಿದ ಕೆಲಸವನ್ನು ಹೀಗೆಯೇ ಮಾಡಬೇಕಿತ್ತೇ, ಭಿನ್ನವಾಗಿ ಮಾಡಲು ಸಾಧ್ಯ ಇರಲಿಲ್ಲವೇ’ ಎಂದು ಅವರು ಯೋಚಿಸುವುದಿಲ್ಲವೇ ಎಂದು ಅಂದುಕೊಂಡೆ.

ಒಂದು ಸಾರಿ ಅಧಿಕಾರಕ್ಕೆ ಬಂದ ಮೇಲೆ ಅವರು ಹೀಗೆಲ್ಲ ಯೋಚನೆ ಮಾಡುವುದನ್ನೇ ಬಿಟ್ಟು ಬಿಡಬಹುದೇ? ಹಾಗೆಯೇ ಅನಿಸುತ್ತದೆ. ಅವರು ಆ ಗಳಿಗೆ ಮತ್ತು ಆ ಸಂದರ್ಭ ಮಾತ್ರ ನೋಡಿಕೊಂಡು ತೀರ್ಮಾನ ಮಾಡುವಂತೆ ಕಾಣುತ್ತದೆ. ಅದರ ದೂರಗಾಮಿ ಪರಿಣಾಮಗಳನ್ನು ಅವರು ವಿಚಾರ ಮಾಡುವುದಿಲ್ಲ. ಹಾಗೆ ಮಾಡುತ್ತಿದ್ದರೆ ಹೀಗೆಲ್ಲ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಮೂರು ವರ್ಷಗಳು ಕಳೆದು ಹೋದುವು. ಮೂರು ವರ್ಷ ಸಣ್ಣ ಅವಧಿಯೇನೂ ಅಲ್ಲ. ಆದರೂ ಲೋಕಾಯುಕ್ತವನ್ನು ಮತ್ತು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವನ್ನು ಸರಿದಾರಿಗೆ ತರಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಎರಡಕ್ಕೂ ಅಂತರ್‌ ಸಂಬಂಧ ಇದೆ. ಮತ್ತು ಎರಡೂ ಸಂಸ್ಥೆಗಳಿಗೂ ಹಾಗೂ ಜನರಿಗೂ ನೇರ ಸಂಬಂಧ ಇದೆ.

ಲೋಕಾಯುಕ್ತ ಸಂಸ್ಥೆ ನಿಜಾರ್ಥದಲ್ಲಿ ಒಂದು ಬೆದರು ಬೊಂಬೆಯೇ ಇರಬಹುದು. ಆದರೆ, ಅದು ಇದ್ದರೆ ಎಷ್ಟು ಜನರು ಹೆದರುತ್ತಿದ್ದರು! ಆ ಹೆದರಿಕೆಯಿಂದ ಎಷ್ಟು ಜನರಿಗೆ ಅನುಕೂಲ ಆಗುತ್ತಿತ್ತು. ಈಗ ಭ್ರಷ್ಟ ಅಧಿಕಾರಿಗೆ ಯಾರ ಹೆದರಿಕೆಯೂ ಇಲ್ಲ. ಏಕೆಂದರೆ ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿಯೇ ಇಲ್ಲ. ಅದು ಒಟ್ಟು ಮೂರು ರೀತಿಯಿಂದ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು, ಅದು ತನ್ನ ಒಳಗಿನ ತಪ್ಪುಗಳಿಂದ ಕೊಳೆಯುತ್ತಿದೆ. ಎರಡು, ಅದನ್ನು ಸರಿ ಮಾಡಬೇಕು ಎನ್ನುವಂಥ ಪ್ರಾಮಾಣಿಕ ಕಾಳಜಿ ಸರ್ಕಾರಕ್ಕೆ ಇರುವಂತೆ ಕಾಣುತ್ತಿಲ್ಲ. ಮೂರು, ಅಷ್ಟೇ ಸಾಲದು ಎಂದು ಅದರ ಅಧಿಕಾರವನ್ನು ಕಿತ್ತುಕೊಳ್ಳುವ ಮತ್ತು ಅಲ್ಲಿ ಇದ್ದುಕೊಂಡು ಅಧಿಕಾರ ಚಲಾಯಿಸಬಲ್ಲರು ಎನ್ನುವವರನ್ನು ಧೃತಿಗೆಡಿಸುವ ಕೆಲಸವನ್ನೂ ಆಡಳಿತದಲ್ಲಿ ಇರುವವರು ಮಾಡುತ್ತಿದ್ದಾರೆ.

ಸಂಸ್ಥೆಯ ಮುಖ್ಯಸ್ಥರಾಗಿದ್ದ ಮತ್ತು ಹಾಗೆ ಒಳಗಿನಿಂದ ಅದು ಕೊಳೆಯಲು ಪರೋಕ್ಷವಾಗಿ ಕಾರಣರಾಗಿದ್ದ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್‌ ರಾಜೀನಾಮೆ ನೀಡಿದ್ದಾರೆ. ಅವರ ಮಗ ಹಾಗೂ ಭ್ರಷ್ಟಾಚಾರದಲ್ಲಿ ನೇರವಾಗಿ ಪಾಲುದಾರರಾಗಿದ್ದರು ಎನ್ನಲಾದ ಅಧಿಕಾರಿ ಮತ್ತು ಅವರ ಹಸ್ತಕರು ಈಗ ಜೈಲಿನಲ್ಲಿ ಇದ್ದಾರೆ. ಅಂದರೆ, ಮೊದಲಿನ ಸಮಸ್ಯೆಗೆ ಒಂದು ರೀತಿಯಲ್ಲಿ ಪರಿಹಾರ ಸಿಕ್ಕಂತೆ ಆಗಿದೆ. ಈಗ ಸರ್ಕಾರ ನೂತನ ಲೋಕಾಯುಕ್ತರನ್ನು ನೇಮಕ ಮಾಡಬೇಕು. ರಾಜ್ಯ ಸರ್ಕಾರ ಒಂದು ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿಯೂ ಕೊಟ್ಟಿತ್ತು. ಆದರೆ, ಆದುದು ಏನು? ಆ ಹೆಸರು ವಾಪಸು ಬಂತು. ಉಪ ಲೋಕಾಯುಕ್ತರಾಗಿ ಆನಂದ್‌ ಅವರ ಹೆಸರನ್ನು ಒಂದು ಕ್ಷಣದಲ್ಲಿ ಅಂಗೀಕರಿಸಿ ಕಳುಹಿಸಿಕೊಟ್ಟಿದ್ದ ರಾಜ್ಯಪಾಲರು ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್‌.ಆರ್‌.ನಾಯಕರ ಹೆಸರನ್ನು ಅಂಗೀಕರಿಸಲು ಒಪ್ಪಲಿಲ್ಲ.

ರಾಜ್ಯಪಾಲರು ಆ ಹೆಸರನ್ನು ಒಪ್ಪುವುದಿಲ್ಲ ಎಂದು ಸಾರ್ವಜನಿಕರಿಗೆಲ್ಲ ಗೊತ್ತಿತ್ತು. ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲ ಎಂದರೆ ಸೋಜಿಗ. ಆದರೂ ಅವರು ಪಟ್ಟು ಹಿಡಿದರು. ಅಂತಿಮವಾಗಿ ರಾಜಭವನವೇ ಗೆದ್ದಿತು. ಈಗ ಮತ್ತೆ ಹುದ್ದೆ ಖಾಲಿ ಬಿದ್ದಿದೆ. ಅದನ್ನು ಯಾವಾಗ ತುಂಬಲಾಗುವುದು ಎಂದು ಗೊತ್ತಿಲ್ಲ. ಮುಖ್ಯಮಂತ್ರಿಗಳು ಮತ್ತೆ ಯಾವ ಹೆಸರು ಕಳುಹಿಸುತ್ತಾರೆಯೋ ಎಂಬುದೂ ತಿಳಿದಿಲ್ಲ. ಅಂದರೆ ಆ ಹೆಸರು ಕೂಡ ವಿವಾದಾಸ್ಪದವಾಗಿರುವುದಿಲ್ಲ ಎಂದು ಹೇಗೆ ನಂಬುವುದು? ಆದರೆ, ಇಂಥ ಮಹತ್ವದ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವಾಗ ವಿವಾದ ಆಗದಂತೆ ನೋಡಿಕೊಳ್ಳುವುದು ಎರಡು ದೃಷ್ಟಿಯಿಂದ ಒಳ್ಳೆಯದು. ಒಂದು, ಆ ಸಂಸ್ಥೆಯ ದೃಷ್ಟಿಯಿಂದ. ಎರಡು, ಆ ಹುದ್ದೆಯಲ್ಲಿ ಬಂದು ಕುಳಿತುಕೊಳ್ಳುವ ವ್ಯಕ್ತಿಯ ದೃಷ್ಟಿಯಿಂದ.

ಈಗ ಏನಾಗಿದೆ ಎಂದರೆ ಯಾವುದಾದರೂ ಒಂದು ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಸರ್ಕಾರ ನೇಮಿಸುತ್ತದೆ ಎಂದ ಕೂಡಲೇ ಅವರ  ಇಡೀ ‘ಚರಿತ್ರೆ’ ಹಿಡಿದುಕೊಂಡು ಬರುವವರ ಸಂಖ್ಯೆ ಅಷ್ಟೇ ದೊಡ್ಡದಾಗಿದೆ. ಸರ್ಕಾರ ಅಂಥವರ ಕೆಲಸವನ್ನು ತಾನೇ ಸುಲಭ ಮಾಡುತ್ತಿದೆ! ನ್ಯಾಯಮೂರ್ತಿ ನಾಯಕ ಅವರ ಹೆಸರು ಲೋಕಾಯುಕ್ತ ಹುದ್ದೆಗೆ  ಶಿಫಾರಸು ಆಗಿ ಅವರಿಗೂ ಒಳ್ಳೆಯದಾಗಲಿಲ್ಲ, ಸಂಸ್ಥೆಗೂ ಒಳ್ಳೆಯದಾಗಲಿಲ್ಲ. ಲೋಕಾಯುಕ್ತರನ್ನು ಆಯ್ಕೆ ಮಾಡುವ ಉನ್ನತ ಮಟ್ಟದ ಸಭೆಯಲ್ಲಿ ನಾಯಕ ಅವರ ಹೆಸರಿಗೆ ಬಹುಮತದ ಸಹಮತಿಯೇ ಇರಲಿಲ್ಲ. ಆದರೂ ಮುಖ್ಯಮಂತ್ರಿಗಳು, ‘ಆ ಸಭೆಯಲ್ಲಿ ಸರ್ವಸಮ್ಮತಿ ಬರಬೇಕು ಎಂದೇನೂ ಇಲ್ಲ; ಅದು ಸಲಹಾ ಸಮಿತಿ ಅಷ್ಟೇ’ ಎಂದು ಹಟ ಮಾಡಿದರು. ಅಂತಿಮವಾಗಿ ಅವರ ಹಟ ಗೆಲ್ಲಲಿಲ್ಲ.

ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ಅವರ ಹೆಸರನ್ನು ಒಪ್ಪಿಕೊಂಡಿದ್ದರೆ ಒಂದೇ ಕ್ಷಣದಲ್ಲಿ ಅವರ ಹೆಸರು ಅಂಗೀಕಾರವಾಗಿ ಬರುತ್ತಿತ್ತು. ಮತ್ತು ಒಬ್ಬ ನಿಷ್ಕಳಂಕ ವ್ಯಕ್ತಿಯನ್ನು ಲೋಕಾಯುಕ್ತ ಹುದ್ದೆಗೆ ನೇಮಿಸಿದ ಕೀರ್ತಿಯೂ ಅವರಿಗೆ ಬರುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಈಗ ನಿಷ್ಕ್ರಿಯವಾಗಿರುವ ಸಂಸ್ಥೆ ಮತ್ತೆ ಸರಿಯಾದ ದಾರಿಯಲ್ಲಿ ನಡೆಯಲು ಅನುವು ಮಾಡಿಕೊಟ್ಟಂತೆ ಆಗುತ್ತಿತ್ತು. ಸರ್ಕಾರ ಹೀಗೆ ಎಡವಟ್ಟು ನಿರ್ಣಯಗಳನ್ನು ಮಾಡುತ್ತಿರುವುದನ್ನು ನೋಡಿದರೆ ಲೋಕಾಯುಕ್ತ ಸಂಸ್ಥೆ ಸರಿಯಾಗಿ ನಡೆಯುವುದು ಅದಕ್ಕೆ ಎಲ್ಲಿ ಬೇಕಾಗಿದೆ  ಎಂದು ಯಾರಾದರೂ ಕೇಳಿದರೆ ಅದು ತಪ್ಪು ಎಂದು ಹೇಳುವುದು ಕಷ್ಟ! ಸಾರ್ವಜನಿಕ ಅಭಿಪ್ರಾಯ ತಿಳಿದುಕೊಳ್ಳಲು ಹಿಂದೆ ರಾಜ ಮಹಾರಾಜರು ವೇಷ ಬದಲಿಸಿಕೊಂಡು ಸಂಚರಿಸುತ್ತಿದ್ದರಂತೆ.

ಅದು ಗುಪ್ತಚರ ಇಲಾಖೆ ಮಾಡುವ ಕೆಲಸ. ಅದನ್ನು ಅವರೇ ಮಾಡುತ್ತಿದ್ದರು. ಈಗ ತಮ್ಮ ನಿರ್ಧಾರಗಳ ಬಗೆಗೆ ಸಾರ್ವಜನಿಕರ ಅಭಿಪ್ರಾಯ ತಿಳಿದುಕೊಳ್ಳಲು ಮುಖ್ಯಮಂತ್ರಿಗಳು ಅಷ್ಟೇನೂ ಕಷ್ಟ ಪಡಬೇಕಿಲ್ಲ. ಅವರು ಲೋಕಾಯುಕ್ತ ಹುದ್ದೆಗೆ ನಾಯಕರ ಹೆಸರನ್ನು ಶಿಫಾರಸು ಮಾಡುತ್ತಿದ್ದಂತೆಯೇ ಅವರದೇ ಪಕ್ಷದ ಜನಾರ್ದನ ಪೂಜಾರಿ ಸೇರಿದಂತೆ ಅನೇಕರು, ‘ಇದು ಸರಿಯಾದ ತೀರ್ಮಾನವಲ್ಲ’ ಎಂದು ಬಹಿರಂಗವಾಗಿಯೇ ಹೇಳಿದರು. ಆದರೂ ಮುಖ್ಯಮಂತ್ರಿಗಳು ಅದೇ ಹೆಸರನ್ನು ರಾಜಭವನಕ್ಕೆ ಶಿಫಾರಸು ಮಾಡಿದರು. ಹಾಗಾದರೆ, ಸಾರ್ವಜನಿಕ ವಲಯದಲ್ಲಿ ಇರುವ ಅಭಿಪ್ರಾಯವನ್ನು ಸರ್ಕಾರ ಗೌರವಿಸುವುದು ಬೇಡವೇ? ಅಂತಿಮವಾಗಿ ಸರ್ಕಾರ ಮಾಡಬೇಕಾದ ಕೆಲಸ ಸಾರ್ವಜನಿಕರ ಒಳಿತಿಗಾಗಿಯೇ ಅಲ್ಲವೇ?

ಹಾಗಾದರೆ, ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ಪದಚ್ಯುತಿಗೆ ಸರ್ಕಾರ ಮುಂದಡಿ ಇಟ್ಟಾಗ ಯಾವ ಸಾರ್ವಜನಿಕ ಒಳಿತಿನ ಉದ್ದೇಶ ಇತ್ತು? ಅದು ತಿರುಗುಬಾಣ ಆಗಬಹುದು ಎಂದು ಅನೇಕರಿಗೆ ಗೊತ್ತಿತ್ತು. ಆದರೂ ಸರ್ಕಾರ ಹಟ ಮಾಡಿತು. ಯಾರೋ ಕೆಲವರು ಹುಡುಗಾಟದ ಶಾಸಕರನ್ನು ಮುಂದೆ ಇಟ್ಟುಕೊಂಡು ಪದಚ್ಯುತಿಯ ನಿರ್ಣಯ ಅಂಗೀಕರಿಸಿತು. ಈಗ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ವಿರುದ್ಧ ಬಿಜೆಪಿಯ ಸುಬ್ರಮಣಿಯನ್‌ಸ್ವಾಮಿಯವರು ಆಡುತ್ತಿರುವ ಹಗುರ ಮಾತುಗಳ ಹಾಗೆಯೇ ಅಡಿ ಅವರ ವಿರುದ್ಧವೂ ಕೆಲವರು ಹೋದಬಂದಲ್ಲೆಲ್ಲ ಪತ್ರಿಕಾಗೋಷ್ಠಿ ಮಾಡಿ ಆರೋಪ ಮಾಡಿದರು. ಈಗ ಏನಾಯಿತು? ಅಡಿ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದು ಅದೇ ಜಾಗದಲ್ಲಿ ಕುಳಿತರು.

ಯಾರಿಗೆ ಮುಖಭಂಗ ಆಯಿತು? ಅವರ ವಿರುದ್ಧ ಆರೋಪ ಮಾಡಿದವರೆಲ್ಲ ಈಗ ಬಾಯಿ ಮುಚ್ಚಿಕೊಂಡು ಏಕೆ ಸುಮ್ಮನಿದ್ದಾರೆ? ಇದೇನು ಹುಡುಗಾಟವೇ? ಅವರು ಏನು ಮಾಡಲು ಹೊರಟಿದ್ದಾರೆ ಎನ್ನುವುದು ಅವರಿಗೆ ತಿಳಿದಿದೆಯೇ? ಅವರು ಒಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿದ್ದಾರೆಯೇ ಅಥವಾ ಸಂಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆಯೇ? ಅಧಿಕಾರವೇ ಹಾಗೆ, ಅದು ನಮ್ಮ ಕಣ್ಣು ಮುಚ್ಚಿಸುತ್ತದೆ. ಕಣ್ಣಿಗೆ ವಿವೇಕ ಎಂದೂ ಹೆಸರು ಇದೆ! ಈಗ ಮತ್ತೆ ಅದೇ ಹಾಡು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಐ.ಎ.ಎಸ್‌ ಅಧಿಕಾರಿ ಶಾಂ ಭಟ್‌ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿದೆ. ರಾಜಭವನ ಕೊಕ್ಕೆ ಹಾಕಿ ವಾಪಸು ಕಳುಹಿಸಿದೆ. ಭಟ್ ಅವರ ಜೊತೆಗೆ ಕಳುಹಿಸಿದ್ದ ಎರಡು ಹೆಸರುಗಳಿಗೆ ಯಾವ ಕೊಕ್ಕೆಯೂ ಇಲ್ಲದೇ ಅಂಗೀಕಾರ ಸಿಕ್ಕಿದೆ!

ಅಧ್ಯಕ್ಷ ಹುದ್ದೆಗೂ ಹೀಗೆ ಕೊಕ್ಕೆ ಹಾಕಿಸಿಕೊಳ್ಳದ ಒಂದು ಹೆಸರು ಸರ್ಕಾರದ ಬಳಿ ಇರಲಿಲ್ಲವೇ? ಇದ್ದಿದ್ದರೆ ಆ ಸಂಸ್ಥೆಗೂ ಒಳ್ಳೆಯದಾಗುತ್ತಿತ್ತು, ಶಿಫಾರಸುಗೊಂಡ ವ್ಯಕ್ತಿಗೂ ಮುಜುಗರ ಆಗುತ್ತಿರಲಿಲ್ಲ. ಈಗ ಸಾರ್ವಜನಿಕ ವಲಯದಲ್ಲಿ ಶಾಂ ಭಟ್ಟರ ಬಗೆಗೆ ಅನುಮಾನ ಇದೆ. ಅಂಥ ಅನುಮಾನಗಳನ್ನು ವಿವಿಧ ಸಂಘಟನೆಗಳು, ರಾಜಕೀಯ ನಾಯಕರು ಹುಟ್ಟು ಹಾಕುತ್ತಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ನಾಯಕರೇ ಆದ ಕಾಗೋಡು ತಿಮ್ಮಪ್ಪನವರು ಮತ್ತು ಜನಾರ್ದನ ಪೂಜಾರಿಯವರು, ‘ಶಾಂ ಭಟ್ಟರ ಹೆಸರು ಆ ಹುದ್ದೆಗೆ ಸರಿಯಾದುದು ಅಲ್ಲ’ ಎಂದಿದ್ದಾರೆ. ಲೋಕಾಯುಕ್ತದ ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗವೂ ಕಳೆದ ಅನೇಕ ವರ್ಷಗಳಿಂದ ಕಳಂಕಿತವಾಗಿದೆ ಮತ್ತು ವಿವಾದಗ್ರಸ್ತವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಬ್ಬನೇ ಒಬ್ಬ ಕೆ.ಎ.ಎಸ್‌ ಅಧಿಕಾರಿ ಆಯೋಗದಿಂದ ಆಯ್ಕೆಯಾಗಿ ಹೊರಗೆ ಬಂದಿಲ್ಲ.

ಕರ್ನಾಟಕ  ಲೋಕಸೇವಾ ಆಯೋಗವನ್ನು ಸರಿದಾರಿಗೆ ತರಬೇಕು ಎಂದೇ ಈಗಿನ ರಾಜ್ಯ ಸರ್ಕಾರವೇ ಕೇಂದ್ರ ಲೋಕಸೇವಾ ಆಯೋಗದ ಹಿಂದಿನ ಅಧ್ಯಕ್ಷ ಪಿ.ಸಿ.ಹೋಟಾ ಅವರ ನೇತೃತ್ವದ ಏಕಸದಸ್ಯ ಸಮಿತಿ ರಚಿಸಿತ್ತು. ಆ ಸಮಿತಿ ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಹೆಸರು ಶಿಫಾರಸು ಮಾಡಲು ಒಂದು ಆಯ್ಕೆ ಸಮಿತಿ ಮಾಡಬೇಕು ಎಂದು ಸೂಚಿಸಿತ್ತು. ಸರ್ಕಾರ ಆ ಸಲಹೆಯನ್ನು ಒಪ್ಪಿಕೊಳ್ಳಲಿಲ್ಲ. ಆಯ್ಕೆ ಸಮಿತಿ ರಚಿಸಿದರೆ ತನಗೆ ಬೇಕಾದ ವ್ಯಕ್ತಿಯನ್ನು ಆ ಹುದ್ದೆಯಲ್ಲಿ ನೇಮಿಸಲು ಆಗುವುದಿಲ್ಲ ಎಂದು ಸರ್ಕಾರಕ್ಕೆ ಅನಿಸಿರಬೇಕು. ಈಗ ಶಿಫಾರಸುಗೊಂಡಿರುವ ಹೆಸರು ನೋಡಿದರೆ ಆ ಅನಿಸಿಕೆ ನಿಜ ಎಂದು ಅನಿಸುತ್ತದೆ. ‘ಶಾಂ ಭಟ್ಟರ ಹೆಸರು ಶಿಫಾರಸು ಮಾಡಲು ಅವರು ಕನ್ನಡಿಗರು ಮತ್ತು ಅವರಷ್ಟು ಹಿರಿಯರಾದ ಕನ್ನಡಿಗ ಐ.ಎ.ಎಸ್‌ ಅಧಿಕಾರಿಗಳು ಯಾರೂ ಇಲ್ಲ’ ಎಂದು ಸರ್ಕಾರ ಅಭಿಪ್ರಾಯ ಪಡುತ್ತಿದೆ.

ಲೋಕಾಯುಕ್ತ ಹುದ್ದೆಗೆ ನಾಯಕರ ಹೆಸರು ಶಿಫಾರಸು ಮಾಡುವಾಗಲೂ, ‘ಅವರು ಕನ್ನಡಿಗರು’ ಎಂಬ ಮಾನದಂಡ ಇತ್ತು. ಇಂಥ ಹುದ್ದೆಗಳಿಗೆ ನೇಮಕ ಮಾಡುವಾಗ ಅವರು ಕನ್ನಡಿಗರೇ, ತೆಲುಗರೇ ಅಥವಾ ಹಿಂದಿಯವರೇ ಎಂಬುದೆಲ್ಲ ಮುಖ್ಯವೇ? ಹಾಗಿದ್ದರೆ ಅನ್ಯ ಭಾಷೆಯ ಯಾವ ಐ.ಎ.ಎಸ್‌ ಅಧಿಕಾರಿಯೂ ರಾಜ್ಯದ ಸೇವೆಯಲ್ಲಿ ಇರಲು ಸಾಧ್ಯವಿಲ್ಲ. ಕನ್ನಡಿಗ ಐ.ಎ.ಎಸ್‌ ಅಧಿಕಾರಿಗಳು ಹೊರ ರಾಜ್ಯಗಳಲ್ಲಿ ಹೋಗಿ ಕೆಲಸ ಮಾಡಲೂ ಆಗುವುದಿಲ್ಲ. ಇದೆಲ್ಲ ಸಂಕುಚಿತ ಮತ್ತು ಅನುಕೂಲಸಿಂಧು ವಾದ ಎಂದು ಮೇಲುನೋಟಕ್ಕೇ ಅನಿಸುತ್ತದೆ. ಅಂತಿಮವಾಗಿ ಶಾಂ ಭಟ್ಟರ ಹೆಸರನ್ನು ರಾಜ್ಯಪಾಲರು ಅಂಗೀಕರಿಸುತ್ತಾರೆಯೇ ಅಥವಾ ತಿರಸ್ಕರಿಸುತ್ತಾರೆಯೇ ಎಂಬುದು ಗೊತ್ತಿಲ್ಲ. ತಿರಸ್ಕರಿಸಿದರೆ ಸರ್ಕಾರಕ್ಕೆ ಮತ್ತೆ ಮುಖಭಂಗವಾಗುತ್ತದೆ.

‘ರಾಜ್ಯಪಾಲರ ಕಚೇರಿಗೆ ಕಳಿಸುವುದಷ್ಟೇ ನಮ್ಮ ಕೆಲಸ. ಉಳಿದುದು ನಮ್ಮ ಹೊಣೆಯಲ್ಲ’ ಎಂದು ನಿಗೂಢವಾಗಿ ಮಾತನಾಡುವವರೂ ಇದ್ದಾರೆ.ಶಾಂ ಭಟ್ಟರ ಹೆಸರಿಗೆ ಬಿಜೆಪಿಯವರು ಅತ್ತ ವಿರೋಧಿಸಿದಂತೆಯೂ ಆಗಬೇಕು, ಇತ್ತ ಬೆಂಬಲಿಸಿದಂತೆಯೂ ಆಗಬೇಕು ಎಂದು ವರ್ತಿಸುತ್ತಿರುವುದೂ ಅಷ್ಟೇ ನಿಗೂಢವಾಗಿದೆ. ರಾಜಕಾರಣಿಗಳು ಏನು ಮಾಡಿದರೂ ಪ್ರಾಮಾಣಿಕವಾಗಿ ಮಾಡುವುದಿಲ್ಲ. ಈಗ ಕೆಪಿಎಸ್‌ಸಿಯಲ್ಲಿ ಇರುವವರ ಪೈಕಿ ಐವರು ‘ಕಳಂಕಿತ’ ಸದಸ್ಯರನ್ನು ಅಮಾನತು ಮಾಡಬೇಕು ಎಂದು ರಾಜ್ಯ ಸಚಿವ ಸಂಪುಟ ರಾಜ್ಯಪಾಲರಿಗೆ ಕಳುಹಿಸಿಕೊಟ್ಟು ಅನೇಕ ತಿಂಗಳುಗಳೇ ಆದುವು. ರಾಜ್ಯಪಾಲರು ಇದುವರೆಗೆ ಆ ಕುರಿತು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಅವರೆಲ್ಲ ಬಿಜೆಪಿ ಅವಧಿಯಲ್ಲಿ ನೇಮಕವಾದ ಸದಸ್ಯರು ಎಂಬುದು ಅದಕ್ಕೆ ಕಾರಣ ಆಗಿರಬಹುದೇ?

ಶಾಂ ಭಟ್ಟರ ವಿಚಾರದಲ್ಲಿ ರಾಜ್ಯಪಾಲರು ಕಠಿಣ ನಿಲುವು ತೆಗೆದುಕೊಳ್ಳುವುದು ಸಂಸ್ಥೆಯ ಹಿತದೃಷ್ಟಿಯಿಂದ ಸರಿಯಾದ ತೀರ್ಮಾನವೇ ಆಗಿರಬಹುದು. ಅದರ ಜೊತೆಗೆ ಐವರು ‘ಕಳಂಕಿತ’ ಸದಸ್ಯರನ್ನು ಅಮಾನತು ಮಾಡಬೇಕು ಎಂಬ ಶಿಫಾರಸಿನ ಕಡತದ ಮೇಲಿನ ದೂಳನ್ನೂ ಅವರು ಕೊಡವಬೇಕು. ರಾಜಭವನ ತಾನು ಪ್ರಾಮಾಣಿಕ ಎಂದು ಮಾತ್ರ ತೋರಿಸಿಕೊಳ್ಳುವುದಲ್ಲ, ನಡವಳಿಕೆಯಲ್ಲಿಯೂ ಅದನ್ನು ಸಾಬೀತು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT