ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಸಮ್ಮುಖದಲ್ಲಿ...

Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಸಭೆಯೊಂದರಲ್ಲಿ, ನಾನು ವೈದ್ಯೆಯೆಂಬುದನ್ನು ತಿಳಿದುಕೊಂಡ ಮಹಿಳೆಯೊಬ್ಬರು ವೈದ್ಯಕೀಯ ವೃತ್ತಿಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ‘‘ಹೆಚ್ಚೂಕಡಿಮೆ ದಿನವೂ ಮಕ್ಕಳ ಸಾವಿಗೆ ಎದುರಾಗುವ ನೀವು ವೈದ್ಯರು ಸಾವಿಗೆ ಅಸಂವೇದಿಯಾಗಿರುತ್ತೀರಿ’’ ಎಂದವರು ಹೇಳಿದರು. ನಾನದಕ್ಕೆ ಪ್ರತಿಕ್ರಿಯಿಸಲು ಇಷ್ಟಪಡಲಿಲ್ಲ.
ಅವರ ಮಾತು ನನ್ನ ನೆಮ್ಮದಿಗೆಡಿಸಿತು. ತುಂಬಾ ಭಾವುಕತೆ ಮತ್ತು ಮತ್ತು ವ್ಯಾಕುಲತೆ ನನ್ನನ್ನು ಆವರಿಸಿತು.

ಸಮಾಜ ನಮ್ಮಂಥವರ ಬಗ್ಗೆ ಯೋಚಿಸುವುದು ಇದೇ ಏನು? ನಾವೂ ಅವರಂತೆ ಸಾಮಾನ್ಯ ಮನುಷ್ಯರು. ಕಣ್ಣೆದುರೇ ಸಾಯುತ್ತಿರುವ ಮಕ್ಕಳೊಂದಿಗೆ, ಅವರ ಪೋಷಕರು ಮತ್ತು ಸಂಬಂಧಿಗಳೊಂದಿಗೆ ಹೆಚ್ಚೂ ಕಡಿಮೆ ದಿನವೂ ಸಂವಾದ ನಡೆಸುವುದರ ಜೊತೆಗೆ ನಮ್ಮದೇ ಕುಟುಂಬದ ಜವಾಬ್ದಾರಿಯನ್ನೂ ನಿರ್ವಹಿಸುವ ನಾವು ಅವರಿಗಿಂತಲೂ ಹೆಚ್ಚೇ ಭಾವುಕರಾಗಿರುತ್ತೇವೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬಲ್ಲರೇ?

ಪಿಐಸಿಯು ಕೋರ್ಸಿನ ಸನ್ನಿವೇಶದಲ್ಲಿ, ಯಾವಾಗ ಮಗುವಿನ ಜೀವ ಅಕಾಲಿಕ ಅಂತ್ಯದ ಸನಿಹ ಬರುತ್ತದೆಯೋ, ಅದರ ಪಿಐಸಿಯುದ ಪ್ರವೇಶದೊಂದಿಗೆ ನಮ್ಮ ಭರವಸೆ ಮತ್ತು ನಿರೀಕ್ಷೆಗಳೂ ಕೊನೆಗೊಳ್ಳುತ್ತದೆ. ಮತ್ತು ಆ ಸಮಯಕ್ಕೆ ಮಗುವಿನ ಕುಟುಂಬ ಮತ್ತು ಸಮುದಾಯ ಹಾಗೂ ಪಿಐಸಿಯು ಸಿಬ್ಬಂದಿಯಲ್ಲಿನ ಜೀವನ ಚೈತನ್ಯ ಮರಳುತ್ತದೆ ಎಂದು ಊಹಿಸಲೂ ಆಗುವುದಿಲ್ಲ.

ಮಗುವಿನ ಮೂಲಕ ತಮ್ಮ ಭರವಸೆ ಮತ್ತು ಶಕ್ತಿಯನ್ನು ಹಂಚಿಕೊಳ್ಳುವ ಪೋಷಕರು ಮತ್ತು ಸಿಬ್ಬಂದಿ ಕುಟುಂಬದ ಭಾಗವಾಗಿಬಿಡುತ್ತಾರೆ. ಕುಟುಂಬದ ಸದಸ್ಯರು ಮತ್ತು ಸಿಬ್ಬಂದಿ ಕೊನೆಯುಸಿರು ಎಳೆಯುತ್ತಿರುವ ಮಗುವಿನ ಹಾಸಿಗೆ ಸುತ್ತ ನಿಂತಾಗ ಆ ಕುಟುಂಬದೊಳಗೆ ನಾವೂ ಬೆರೆತುಹೋದ ಭಾವ ಆವರಿಸುತ್ತದೆ.

ಕುಟುಂಬದ ಮುದ್ದಿನ ಹುಡುಗ ಐದೂವರೆ ಅಡಿ ಎತ್ತರದ 16 ವರ್ಷದ ಅಕ್ಷಯ್‌ನನ್ನು ಪಿಐಸಿಯುಗೆ ಕರೆತರುವಾಗ ಆತನ ಮಿದುಳು ಮೃತಪಟ್ಟಿತ್ತು. ಮಿದುಳು ಜ್ವರ ಆತನ ಮಿದುಳು ಸಾವಿಗೆ ಕಾರಣವಾಗಿದ್ದು ಕಂಡು ನಮ್ಮೆಲ್ಲಾ ಸಿಬ್ಬಂದಿ, ದಾದಿಯರು ಮತ್ತು ವೈದ್ಯರ ಕಣ್ಣಲ್ಲಿ ಸಹಜವಾಗಿಯೇ ನೀರುಕ್ಕಿತ್ತು. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ತಮ್ಮ ಏಕೈಕ ಪುತ್ರನನ್ನು ಉಳಿಸಲು ಲಕ್ಷಾಂತರ ರೂಪಾಯಿ ವ್ಯಯಿಸಿದ್ದ ಪೋಷಕರು ಕೊನೆಗೆ ಆತನನ್ನು ವಾಣಿ ವಿಲಾಸ ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದರು.

ಆ ಕುಟುಂಬದ ಸದಸ್ಯರೊಂದಿಗೆ ಹಲವಾರು ಬಾರಿ ಚರ್ಚಿಸಿದರೂ ಉಸಿರಾಡುತ್ತಿರುವ ಮಗ ‘ಮೃತಪಟ್ಟ ಮಿದುಳಿನ ಮಗು’ ಎಂದು ಒಪ್ಪಿಕೊಳ್ಳುವ ಧೈರ್ಯ ಅವರು ತೋರಲಿಲ್ಲ. “ಈಗ ನಾವು ದಿವಾಳಿಯಾಗಿದ್ದೇವೆ. ಒಮ್ಮೆ ನಮ್ಮ ಮಗ ಚೇತರಿಸಿಕೊಂಡರೆ ಸಾಕು, ನಾವು ಖಂಡಿತವಾಗಿಯೂ ಹಿಂದಿರುಗಿ ಬಂದು ಆಸ್ಪತ್ರೆಯ ವೆಚ್ಚವನ್ನು ಭರಿಸುತ್ತೇವೆ” ಎಂದು ಮಾತು ಮುಂದುವರಿಸುವ ಮಟ್ಟಕ್ಕೆ ತಲುಪಿದರು.

ವೃತ್ತಿಪರರಾಗಿ ನಾವು ಸಾವನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಮೊದಲೇ ಮಧ್ಯಪ್ರವೇಶಿಸಿ ಸಾವನ್ನು ನಿರೋಧಿಸುವುದಷ್ಟೇ ನಮ್ಮಿಂದ ಸಾಧ್ಯ. ಆದರೆ ಕೆಲವು ನಿರ್ದಿಷ್ಟ ಕಾಯಿಲೆಗಳು ನಮಗೆ ಒಂದು ಅವಕಾಶವನ್ನೂ ನೀಡುವುದಿಲ್ಲ. ಅಪಘಾತ ಅಥವಾ ವಿಷ ಸೇವನೆ ಅಥವಾ ದೀರ್ಘಾವಧಿ ಕಾಯಿಲೆಯಿಂದ ಮಗು ಹಠಾತ್ತಾಗಿ ಅಥವಾ ಅನಿರೀಕ್ಷಿವಾಗಿ ಸಾವಿಗೀಡಾದರೆ- ಯಾರಾದರೂ ಅದನ್ನು ಎದುರಿಸಲು ಸಿದ್ಧರಾಗಿರಲು ಸಾಧ್ಯವೆ?

ದಾಖಲಾದ ಕೆಲವೇ ಸಮಯದ ಬಳಿಕ ಸಾವು ಸಂಭವಿಸಿದಾಗ ಆತಂಕದಲ್ಲಿರುವ ಕುಟುಂಬಕ್ಕೆ ಆಘಾತಕಾರಿ ವಿಷಯ ತಿಳಿಸುವುದು ನಮಗೆ ಅತ್ಯಂತ ಕಷ್ಟದ ಕೆಲಸ. ನಮ್ಮ ಮತ್ತು ಕುಟುಂಬದ ನಡುವೆ ಆತ್ಮೀಯತೆ ಏರ್ಪಡುವ ಮೊದಲೇ ಮಗುವಿನ ಜೀವದ ಅಂತ್ಯವಾಗುವುದು ಆ ಕುಟುಂಬದೊಂದಿಗಿನ ನಮ್ಮ ಮೊದಲ ಭೇಟಿ ಅವರ ಬದುಕಿನ ಅತ್ಯಂತ ದುರಂತದ ಕ್ಷಣದೊಂದಿಗೆ ನಡೆದಂತೆ. ಕೆಲವು ಪೋಷಕರು ಅದನ್ನು ತಣ್ಣನೆ ಒಪ್ಪಿಕೊಂಡರೆ, ಇನ್ನು ಹಲವರು ವೈದ್ಯರು–ಸಿಬ್ಬಂದಿ ಮೇಲೆ ದಾಳಿ ಮಾಡುವ, ಉಪಕರಣಗಳನ್ನು ಧ್ವಂಸಗೊಳಿಸುವ ಹಿಂಸಾತ್ಮಕ ಕೃತ್ಯಗಳಿಗೆ ಮುಂದಾಗುತ್ತಾರೆ.

ಈ ಕುರಿತು ಕರ್ನಾಟಕ ಸರ್ಕಾರ ಬಂಧನ ಮತ್ತು ಜೈಲುಶಿಕ್ಷೆಗೆ ಒಳಪಡಿಸುವಂಥ ಕಾನೂನನ್ನು ಜಾರಿಗೊಳಿಸಿದೆ. ಆದರೂ ನಾವು ವೈದ್ಯರು ನಮ್ಮ ಜೀವವನ್ನು ಪಣಕ್ಕಿಟ್ಟು ಕುಟುಂಬದವರನ್ನು ಸಮಾಧಾನಪಡಿಸಬೇಕಾಗುತ್ತದೆ. ಅದಕ್ಕಾಗಿ ನಾನು ದೂರು ನೀಡುವುದೂ ಇಲ್ಲ, ಏಕೆಂದರೆ ಅವರು ಕಳೆದುಕೊಂಡ ಸಂಪತ್ತಿನ ಅರಿವು ನಮಗೆ ಅರ್ಥವಾಗುತ್ತದೆ. ಸಾವು ತನ್ನ ಅಂತ್ಯದೊಂದಿಗೆ ಭಾವನೆಗಳನ್ನು ದಾರಿತಪ್ಪಿಸುತ್ತದೆ.

ಅಪಘಾತ, ವಿಷಸೇವನೆ ಅಥವಾ ಆತ್ಮಹತ್ಯೆಗಳಿಂದ ಸಾವಿಗೀಡಾಗುವ ಮಕ್ಕಳ ಪ್ರಕರಣಗಳನ್ನು ಕಾನೂನಿನ ಅಡಿಯಲ್ಲಿ ಮೆಡಿಕೊ ಲೀಗಲ್ (ಎಂಎಲ್‌ಸಿ) ಪ್ರಕರಣವೆಂದು ದಾಖಲಿಸಲಾಗುತ್ತದೆ. ಅದರ ಪ್ರಕ್ರಿಯೆ ಹಲವು. ಸಾವಿಗೆ ಸಂಬಂಧಿಸಿದ ಶಿಷ್ಟಾಚಾರಗಳು ಮಾತ್ರವಲ್ಲ, ಅದೀಗ ಪೊಲೀಸ್ ತನಿಖೆಯ ಒಂದು ಭಾಗ. ‘ಎಂಎಲ್‌ಸಿ’ ಪ್ರಕರಣದ ಮರಣ ಸಂಬಂಧಿ ಶಿಷ್ಟಾಚಾರಗಳನ್ನು ಪೂರ್ಣಗೊಳಿಸುವ ಸಲುವಾಗಿ ಅಂತ್ಯಸಂಸ್ಕಾರದ ಕ್ರಿಯಾವಿಧಿಗಳನ್ನು ನಡೆಸಲು ದೀರ್ಘಕಾಲ ಕಾಯಬೇಕಾಗುತ್ತದೆ. ಹಲವು ಬಾರಿ ಈ ‘ಎಂಎಲ್‌ಸಿ’ ಯಾಕೆ? ಎಂದು ನನಗೆ ಅನಿಸಿದ್ದಿದೆ.

ಉದಾಹರಣೆಗೆ, ನಾಲ್ಕು ವರ್ಷದ ಮಗುವೊಂದು ಮನೆಯಲ್ಲಿ ಇಲಿಗಳಿಗಾಗಿ ಇಲಿ ಪಾಷಾಣ ಹಾಕಿಟ್ಟ ಪಕೋಡಾವನ್ನು ತಿಂದು ಸಾಯುತ್ತದೆ. ನಾಲ್ಕರ ಹರೆಯಕ್ಕೆ ಕಾಲಿಟ್ಟ ಮಕ್ಕಳು ಅತೀವ ಕುತೂಹಲ, ಅನ್ವೇಷಣಾಶೀಲ ಮನಸ್ಥಿತಿ ಹೊಂದಿರುತ್ತಾರೆ. ಹಾಗೆಯೇ ಈ ಮಗು ಪಕೋಡಾ ಸೇವಿಸಿದೆ. ಇದಕ್ಕೆ ಯಾರನ್ನು ದೂಷಿಸುವುದು? ಮನೆಯಲ್ಲಿನ ಇಲಿ ಹಾವಳಿಯಿಂದ ಮುಕ್ತಿ ಪಡೆಯಲು ಬಯಸಿದ ಪೋಷಕರೇ ಅಥವಾ ಆ ತುಂಟ ಮಗುವೇ? ಆದರೆ ಕಾನೂನಿನ ಕಣ್ಣಲ್ಲಿ ಅದು ತಪ್ಪು ಮತ್ತು ಶಿಕ್ಷಾರ್ಹ. ಇಂಥ ಯಾವುದೇ ಅಸಹಜ ಸಾವು ಪೊಲೀಸ್‌ ತನಿಖೆಗೆ ಆಹ್ವಾನ ನೀಡುತ್ತದೆ. ಅವರ ವಾದ ಪೋಷಕರು ಉದ್ದೇಶಪೂರ್ವಕವಾಗಿಯೇ ಮಗುವಿಗೆ ವಿಷ ನೀಡಿದ್ದಾರೆ ಎಂದು. ಇಂಥ ಸನ್ನಿವೇಶದಲ್ಲಿ ನಾವು ನಿಜಕ್ಕೂ ಅಸಹಾಯಕರಾಗಿಬಿಡುತ್ತೇವೆ.

ಕೆಲವು ಸಂದರ್ಭಗಳಲ್ಲಿ ನಾವು ಜೀವ ರಕ್ಷಕ ಔಷಧಗಳನ್ನು ನೀಡಲು, ವೆಂಟಿಲೇಟರ್‌ ಮುಂತಾದ ಗ್ಯಾಜೆಟ್‌ಗಳ ಸಹಾಯವನ್ನು ಪಡೆಯುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವಿಫಲಗೊಳ್ಳುವ ಪ್ರತಿ ಅಂಗವೂ (ಶ್ವಾಸಕೋಶ, ಹೃದಯ, ಮೂತ್ರಪಿಂಡ) ಒಂದಿಲ್ಲೊಂದು ಗ್ಯಾಜೆಟ್‌ನ ಸಹಾಯ ಪಡೆದುಕೊಳ್ಳುತ್ತದೆ. ಜೀವರಕ್ಷಕ ವ್ಯವಸ್ಥೆಯಲ್ಲಿರುವ ಮಕ್ಕಳನ್ನು, ನಾಶಪಡಿಸಬಹುದಾದ ಟ್ಯೂಬ್‌ಗಳನ್ನು ಬಳಸಿ, ಅರ್ಧಗಂಟೆಯಿಂದ ಎರಡು ಗಂಟೆಯವರೆಗೆ ನಿರಂತರವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.

ಈ ಮಕ್ಕಳ ಆರೈಕೆಯೂ ಅತಿ ವೆಚ್ಚದಾಯಕ. ಇಂಥ ವೇಳೆಗಳಲ್ಲಿ ಪೋಷಕರ ಜೇಬು ಖಾಲಿಯಾಗಿ, ಜೀವರಕ್ಷಕಗಳನ್ನು ತೆಗೆಯುವಂತೆ ಮನವಿ ಮಾಡುತ್ತಾರೆ. ಕೆಲವು ನಿಮಿಷ ಅಥವಾ ಗಂಟೆಗಳಲ್ಲಿ ಸಾಯುವ ಮಕ್ಕಳ ಚಿಕಿತ್ಸೆಯ ಬಗ್ಗೆ ಅವರ ತೀರ್ಮಾನ ಸರಿ ಎಂದು ನಮಗೂ ಅನಿಸುತ್ತದೆ. ಆದರೆ ಯಾವಾಗಲೂ ಇದೇ ರೀತಿ ಇರುವುದಿಲ್ಲ. ಹಾಸನ ಜಿಲ್ಲೆಯ ರೈತರೊಬ್ಬರ ಘಟನೆ ನನಗೆ ಸ್ಪಷ್ಟವಾಗಿ ನೆನಪಿದೆ. ಮಗು ಉಳಿಯುವ ಯಾವುದೇ ಭರವಸೆ ಇಲ್ಲವೆಂಬ ವೈದ್ಯಕೀಯ ಸಲಹೆಯ ಹೊರತಾಗಿಯೂ ಅವರು ಮಗುವನ್ನು ಕರೆತಂದಿದ್ದರು.

ಅರ್ಧದಾರಿಯವರೆಗೂ ಈ ಮಗು ವೈದ್ಯಕೀಯ ಭಾಷೆಯಲ್ಲಿ ‘ಡೆತ್‌ ರ್‍ಯಾಟಲ್‌’ (ಗಂಟಲಿನಲ್ಲಿ ಗೊರಗೊರ ಸದ್ದು) ಎಂದು ಕರೆಯಲಾಗುವ  ಉಸಿರಾಟ ಹೊಂದುವಷ್ಟು ಶಕ್ತವಾಗಿತ್ತು. ಈ ಸ್ಥಿತಿ ಸಾವಿನ ಆಗಮನವನ್ನು ಸೂಚಿಸುವಂಥದ್ದು. ಆದರೂ ಅವರು ತಮ್ಮ ಮಗುವನ್ನು ವಾಪಸ್‌ ಕರೆತಂದರು. ಪಿಐಸಿಯು ತಲುವುವ ಮೊದಲೇ ಮಗು ಕೊನೆಯುಸಿರೆಳೆದಿತ್ತು. ಇದು ಮೊದಲೇ ಭರವಸೆರಹಿತ ಪ್ರಕರಣವಾಗಿದ್ದರಿಂದ ನಾವು ಬೇಸರಪಟ್ಟುಕೊಳ್ಳಲಿಲ್ಲ.

ಆದರೆ ಕೆಲವು ಸಂದರ್ಭಗಳಲ್ಲಿ, ಹಣಕಾಸಿನ ತೊಂದರೆಯ ಕಾರಣಕ್ಕಾಗಿಯೇ ಮಗುವಿನ ಜೀವರಕ್ಷಕವನ್ನು ತೆಗೆದುಹಾಕುವಾಗ ನನಗೆ ತುಂಬಾ ಖೇದವಾಗುತ್ತದೆ. ಒಂದು ವೇಳೆ ನಾನು ಕೋಟ್ಯಧೀಶಳಾಗಿದ್ದರೆ ಸಹಾಯ ಮಾಡಬಹುದಾಗಿತ್ತು, ಬದುಕುಳಿಯುವ ಸಾಧ್ಯತೆಯುಳ್ಳ ಮಕ್ಕಳನ್ನು ರಕ್ಷಿಸಬಹುದಿತ್ತು. ವೆಂಟೆಲೇಟರ್‌ಗಾಗಿ ವಾಣಿವಿಲಾಸ ಆಸ್ಪತ್ರೆಯಿಂದ ನಮ್ಮ ರೋಗಿಯೊಬ್ಬರು ಕಾರ್ಪೊರೇಟ್‌ ಆಸ್ಪತ್ರೆಯೊಂದಕ್ಕೆ ವರ್ಗಾವಣೆಯಾದರು (ಆ ದಿನಗಳಲ್ಲಿ ನಮ್ಮಲ್ಲಿ ವೆಂಟಿಲೇಟರ್‌ ಸೌಲಭ್ಯವಿರಲಿಲ್ಲ).

ಮೃತಮಗುವಿನ ಪೋಷಕರನ್ನು ಆಸ್ಪತ್ರೆ ವೆಚ್ಚ ಭರಿಸದೆ ಹಾಗೆಯೇ ಕಳಿಸುವುದನ್ನು ನಾನು ಯೋಚಿಸಲೂ ಸಾಧ್ಯವಿಲ್ಲ. ಹೀಗಾಗಿ, ನಾನು ಮತ್ತು ಸಲಹೆಗಾರರ ನೆರವಿನಿಂದ ಬಿಲ್‌ ಪಾವತಿಸಿದೆವು. ಆಸ್ಪತ್ರೆಯ ಸಿಇಓ ‘ಮೇಡಂ, ನಾವು ಅಸಹಾಯಕರು. ಏಕೆಂದರೆ ಸಂಬಳ, ವಿದ್ಯುತ್‌ ಬಿಲ್‌, ನೀರಿನ್‌ ಬಿಲ್‌ ಇತ್ಯಾದಿಗಳನ್ನು ಭರಿಸಲು ದಿನಕ್ಕೆ ಆರು ಲಕ್ಷ ರೂಪಾಯಿ ಸಂಪಾದಿಸಲೇಬೇಕು...’ ಎಂದವರು ಹೇಳಿದ ಮಾತು ನನಗೆ ಅರ್ಥವಾಗಿತ್ತು.

ಪಿಐಸಿಯುನಲ್ಲಿರುವ ಮಗುವಿನ ಸುತ್ತಮುತ್ತ ಉದ್ವೇಗಕಾರಿ ಚಟುವಟಿಕೆಗಳು ನಡೆಯುತ್ತಿರುತ್ತದೆ. ಪೋಷಕರು ಆತಂಕದಿಂದ ಎದುರಾಗುವ ಅವಧಿಯ ಪ್ರಾರಂಭವಿದು. ದಾದಿಯರು, ವೈದ್ಯರು ಮತ್ತು ಗ್ಯಾಜೆಟ್‌ಗಳು ಆಗಾಗ್ಗೆ ಮಗುವನ್ನು ಪರೀಕ್ಷಿಸುತ್ತಿರುತ್ತಾರೆ ಮತ್ತು ಪೋಷಕರು ಹಾಗೂ ಕೆಲವೊಮ್ಮೆ ರೋಗಿಗಳೊಂದಿಗೆ ಸಂವಾದಿಸುತ್ತಿರುತ್ತಾರೆ. ಈ ಮಕ್ಕಳನ್ನು ನಾವು ‘ರೋಗದ ಕಠಿಣ ಸಂಯೋಜನೆಯ ವ್ಯವಸ್ಥೆ’ಯಲ್ಲಿ ನಿರ್ಣಯಿಸುತ್ತೇವೆ.

ಇದು ಹೆಚ್ಚೂ ಕಡಿಮೆ ಸುವರ್ಣಮಾನ ಮತ್ತು ವಸ್ತುನಿಷ್ಠ ನಿರ್ಧಾರದ ಆಧಾರದಲ್ಲಿರುತ್ತದೆ. ಇಲ್ಲಿ ಮಗು ಬದುಕುಳಿಯುವುದು ಅಸಾಧ್ಯ ಎನ್ನುವುದು ಸಂಪೂರ್ಣ ಖಚಿತಗೊಂಡ ನಂತರ, ನಾವು ನಮ್ಮ ‘ನಂಬಿಕೆಯ ವ್ಯವಸ್ಥೆಯನ್ನು ನಂಬುತ್ತೇವೆ, ಮಗು ಅದನ್ನು ಬಳಸಿಕೊಳ್ಳುತ್ತದೆ ಎಂಬ ಸಣ್ಣ ಭರವಸೆಯೊಂದಿಗೆ. ಅದನ್ನು ವ್ಯಕ್ತಿನಿಷ್ಠ ಪ್ರಮಾಣ ಎನ್ನಲಾಗುತ್ತದೆ. ನಿಜ, ನಮ್ಮ ವ್ಯಕ್ತಿನಿಷ್ಠ ಪ್ರಮಾಣವೂ ಹಲವು ಬಾರಿ ನಮ್ಮನ್ನು ಸೋಲಿಸುತ್ತದೆ.

ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಮಗು ಸಾಯುವುದು ನಿಶ್ಚಿತ ಎಂದು ತಿಳಿದ ಮೇಲೆ, ನಾವು ಪೋಷಕರೊಂದಿಗೆ ಸಮಾಲೋಚನೆ ನಡೆಸುವುದು ಹೇಗೆ? ನಿಮ್ಮ ಮಗು ಸಾಯುತ್ತದೆ ಎನ್ನುವುದನ್ನು ನೇರವಾಗಿ ಹೇಳಬೇಕೆ? ಅಥವಾ ಭರವಸೆಗಳನ್ನು ತುಂಬಬೇಕೆ? ಅಥವಾ ನಮಗೆ ಗೊತ್ತಿಲ್ಲ ಎಂದು ಹೇಳಬೇಕೆ? ‘ಉಳಿದರೂ ಉಳಿಯಬಹುದು, ಉಳಿದೆಯೂ ಇರಬಹುದು’ ಎನ್ನಬೇಕೆ? ಸಾಯುತ್ತಿರುವ ಅಥವಾ ಸತ್ತ ಮಗುವಿನ ಬಗ್ಗೆ ಪೋಷಕರಿಗೆ ಮನವರಿಕೆ ಮಾಡುವುದು ಸುಲಭವಲ್ಲ.

ತೀವ್ರವಾಗಿ ಅಸ್ವಸ್ಥಗೊಂಡಿರುವ ಮಗುವನ್ನು ಪಿಐಸಿಯುಗೆ ದಾಖಲಿಸಿದಾಗ ನಾವು ಆ ಕೂಸನ್ನು ಜೀವರಕ್ಷಕ ವ್ಯವಸ್ಥೆಯೊಳಗೆ ಇರಿಸುತ್ತೇವೆ. ಮಗು ಮೃತಪಟ್ಟೊಡನೆ ಶ್ರಮಿಸಿ ಸೋತ ವೆಂಟಿಲೇಟರ್‌, ಮಿಟುಕುವ ಮಾನಿಟರ್‌ಗಳು ಮತ್ತು ಬೀಪ್‌ ಶಬ್ದ ಹೊರಡಿಸುವ ಅಲಾರಂಗಳು ಸುಮ್ಮನಾಗುತ್ತವೆ. ಅಲ್ಲಿ ಕೇವಲ ಮೌನ ಮತ್ತು ಕೆಲಸ ನಿಲ್ಲಿಸಿದ ತಂತ್ರಜ್ಞಾನ ಉಪಕರಣಗಳು ಮಾತ್ರ ಉಳಿಯುತ್ತವೆ. ಕೆಲವು ನಿಮಿಷದ ಬಳಿಕ ನಾವು ಟ್ಯೂಬ್‌ಗಳು ಮತ್ತು ನಳಿಗೆಗಳನ್ನು (ಅಂತರ್‌ ಅಭಿದಮನಿ/ಅಂತರ್‌ಅಪದಮನಿ) ತೆಗೆದುಹಾಕುತ್ತೇವೆ. ತಲೆವರೆಗೂ ಹೊದಿಕೆಯನ್ನು ಎಳೆದು ಮೃತಶರೀರದ ಸುತ್ತ ಪರದೆಯನ್ನು ನಿಲ್ಲಿಸುತ್ತೇವೆ. ಆ ಸಾವಿನ ಸಂಗತಿಯನ್ನು ಪೋಷಕರಿಗೆ ತಿಳಿಸುವ ಮೊದಲು ನಮಗೆ ಧೈರ್ಯ ತುಂಬಿಕೊಳ್ಳಲು, ನಿಂತು ಸದ್ದಿಲ್ಲದೆ ಮೃತರ ಆತ್ಮಕ್ಕಾಗಿ ಪ್ರಾರ್ಥಿಸುತ್ತೇವೆ.

ಕಡೇಪಕ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ, ಯಾವುದೇ ಯೋಜನೆ ಅಡಿಗೆ ಒಳಪಡದ ಮಕ್ಕಳಿಗೂ ನಾವು ಕೆಲವು ಶುಲ್ಕ ವಿನಾಯಿತಿಯ ಅವಕಾಶವನ್ನು ಕಲ್ಪಿಸಿಕೊಡುವಂತಾಗಬೇಕು ಎನ್ನುವುದು ನನ್ನ ಆಶಯ. ಹಲವು ಸಂದರ್ಭಗಳಲ್ಲಿ ನಾವು ಕೊನೆಯ ಪಯಣ ಮತ್ತು ಕ್ರಿಯಾವಿಧಿಗಳಿಗೆ ಹಣ ಸಹಾಯ ಮಾಡಿದ್ದಿದೆ. ಅಲ್ಲದೆ, ಸಂತಾಪ ವ್ಯಕ್ತಪಡಿಸಲು ನಮಗೊಂದು ಖಾಸಗಿ ಜಾಗವಾದರೂ ಬೇಕು.

ಪಿಐಸಿಯುನಲ್ಲಿನ ಮಗುವಿನ ಸಾವು ವಾರ್ಡ್‌ನಲ್ಲಿರುವ ಇತರೆ ಕುಟುಂಬದವರನ್ನೂ ವ್ಯಾಕುಲಗೊಳಿಸುತ್ತದೆ ಎನ್ನುವುದನ್ನು ನೆನಪಿಡಬೇಕು. ಅವರನ್ನು ಅದು ತೀವ್ರವಾಗಿ ಕಲಕುತ್ತದೆ. ಹಾಗಾದಾಗ ಅವರನ್ನು ಸಮಾಧಾನಪಡಿಸುವುದು ನಮಗೆ ಎದುರಾಗುವ ಮತ್ತೊಂದು ಸವಾಲು!

ಮರಣಶಯ್ಯೆಯಲ್ಲಿರುವ ಮಗುವಿನ ಆರೈಕೆಯಲ್ಲಿ ತೊಡಗುವಾಗ ಆಸ್ಪತ್ರೆ ಸಿಬ್ಬಂದಿ ತೀವ್ರ ಭಾವುಕರಾಗುವುದಿದೆ. ಅದರಲ್ಲೂ ಮಗು ದೀರ್ಘಕಾಲದಿಂದ ಆಸ್ಪತ್ರೆಯಲ್ಲಿದ್ದು ಮರಣಹೊಂದಿದರೆ, ಮಗುವಿನ ಪೋಷಕರಂತೆಯೇ ನಾವೂ ಭಾವನೆಗಳ ಬಂಧಕ್ಕೊಳಗಾಗುತ್ತೇವೆ. ನಮ್ಮ ದುಃಖ ಆ ಕುಟುಂಬದ ನೋವಿನ ಭಾವೋದ್ವಿಗ್ನತೆಯಲ್ಲಿ ಬೆರೆತು ಹೋಗುತ್ತದೆ. ವರ್ಷಗಳ ಅನುಭವದಲ್ಲಿ, ನಾವು ನಮ್ಮ ದುಃಖವನ್ನು ನಿಯಂತ್ರಿಸಿಕೊಳ್ಳುವ ಮತ್ತು ಮಗುವಿನ ಸಾವಿನಿನೊಂದಿಗೆ ಆ ಕುಟುಂಬದ ಜೊತೆಗಿನ ನಮ್ಮ ಸಂಬಂಧವನ್ನು ಅಂತ್ಯಗೊಳಿಸುವುದನ್ನು ಕಲಿತಿದ್ದೇವೆ. ಆ ಶೂನ್ಯತೆಯನ್ನು ನಾವು ಸುದೀರ್ಘ ಕಾಲ ಅನುಭವಿಸುತ್ತೇವೆ. ವೈದ್ಯಕೀಯ ವೃತ್ತಿಯು ಸಾವನ್ನು ಮಾರ್ಪಡಿಸಲಾಗದ ಜೈವಿಕ ಘಟನೆ, ಕೊನೆಯ ನಿಲುಗಡೆ ಎಂದು ವಿಶ್ಲೇಷಿಸುತ್ತದೆ.

The glories of our blood and state
Are shadows, not substantial things;
There is no armour against fate;
Death lays his icy hand on kings.
Sceptre and crown
Must tumble down,
And in the dust be equal made
With the poor crooked scythe and spade.

ಪ್ರತಿಕ್ರಿಯೆಗೆ : ashabenakappa@yahoo.com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT