ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಗಾಯಗಳ ಚತುರ ಸಮರ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಹಬ್ಬದ ಖರೀದಿಗೆಂದು ದಿಲ್ಲಿಯ ಸದರ್ ಬಜಾರ್‌ಗೆ ಬಂದಿದ್ದ ಹದಿನಾರರ ಬಾಲಕ ಜುನೈದ್, ಹರಿಯಾಣದ ಹೆತ್ತವರ ಮಡಿಲಿಗೆ ಹಿಂದಿರುಗಿದ್ದು ಹೆಣವಾಗಿ. ಆ ರೈಲು ಪ್ರಯಾಣ ಅವನ ಬದುಕಿನ ಕೊನೆಯ ಪಯಣವಾಗಿತ್ತು. ದನದ ಮಾಂಸ ತಿಂಬುವನು, ಬುರುಡೆಗಂಟಿದ ಟೋಪಿಯವನು ಎಂದೆಲ್ಲ ಹಂಗಿಸಿದ ಜನರ ಗುಂಪು ರೈಲು ಹತ್ತಿದ್ದ ಹುಡುಗನನ್ನು ಜಜ್ಜಿ ಕೊಂದಿತು. ಬುರುಡೆಗಂಟುವ ಮುಸ್ಲಿಂ ಟೋಪಿ ಜುನೈದ್‌ಗೆ ಮುಳುವಾಗಿತ್ತು.

ಇಂತಹುದೇ ಟೋಪಿ ತೊಟ್ಟ ಜುನೈದನ ಅಣ್ಣ ಶಾಕಿರ್ ಮತ್ತಿತರರನ್ನೂ ಜಜ್ಜಿತು ಗುಂಪು. ಪಾಕಿಸ್ತಾನಿಗಳು, ಸುನ್ನತಿ ಮಾಡಿಸಿಕೊಂಡವರು ಎಂದೆಲ್ಲ ಹಂಗಿಸಿತು. ಟೋಪಿಗಳನ್ನು ಕಿತ್ತೆಸೆದು ದೊಡ್ಡವರ ಗಡ್ಡಗಳ ಜಗ್ಗಾಡಿತು. ಊರು ಬಂದರೂ ರೈಲಿನಿಂದ ಇಳಿಯಲು ಬಿಡದೆ ಹಲ್ಲೆ ನಡೆಸಿತು. ಬಿಡಿಸಿಕೊಳ್ಳಲು ಬಂದವರನ್ನೂ ಒಳಗೆಳೆದುಕೊಂಡು ಬಡಿಯಿತು. ರೈಲಿನಲ್ಲಿದ್ದ ಯಾರೊಬ್ಬರೂ ಗುಂಪನ್ನು ತಡೆಯಲಿಲ್ಲ. ಬದಲಿಗೆ ಇನ್ನಷ್ಟು ಹುರುಪು ನೀಡುತ್ತಿದ್ದರು.
ಹೀಗೆ ಹಲ್ಲೆಕೋರ ಗುಂಪಿಗೆ ಶಹಬಾಸ್‌ಗಿರಿ ನೀಡುತ್ತಿದ್ದವರ ಪೈಕಿ ಒಬ್ಬ ವೃದ್ಧನೂ ಇದ್ದ. ಪ್ರಯಾಣದ ಆರಂಭದಲ್ಲಿ ಇದೇ ವೃದ್ಧನಿಗೆ ಜುನೈದ್‌ ತನ್ನ ಸೀಟನ್ನು ಬಿಟ್ಟುಕೊಟ್ಟಿದ್ದ.  ರೈಲ್ವೆ ಪೊಲೀಸರು, ಸಿಬ್ಬಂದಿ, ಅಂಗಡಿಯವರು ಯಾರೆಂದರೆ ಯಾರೂ ನೆರವಿಗೆ ಬರಲಿಲ್ಲ. ತಾವು ಏನನ್ನೂ ನೋಡಿಲ್ಲ ಎಂಬುದೇ ಇವರೆಲ್ಲರ ಹೇಳಿಕೆಗಳು.

ಜುನೈದ್ ರಕ್ತಸ್ರಾವದಿಂದಲೇ ಪ್ರಾಣಬಿಟ್ಟ. ಸ್ಟೇಷನ್ನಿನಿಂದ ಫೋನ್ ಮಾಡಿದರೆ ಆಂಬುಲೆನ್ಸ್ ಬಂದದ್ದು 45 ನಿಮಿಷಗಳ ನಂತರ. ಶಾಕಿರ್, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಮಲಗಿದ್ದಾನೆ. ಹಬ್ಬದ ದಿನ ಜುನೈದ-ಶಾಕಿರರು ಜನಿಸಿದ ಖಂಡಾವಾಲಿ ಗ್ರಾಮದ ಒಲೆಗಳು ಬೆಂಕಿ ಕಾಣಲಿಲ್ಲ. ಸಾವಿನ ಸಂತಾಪ ಮಡುಗಟ್ಟಿದ್ದ ಹಳ್ಳಿಯ ಜನ ಹೊಸ ಬಟ್ಟೆಯನ್ನೂ ಧರಿಸಲಿಲ್ಲ.

ಜುನೈದ್ ಖಾನ್, ಮೊಹಮ್ಮದ್ ಅಖ್ಲಾಕ್, ಪೆಹ್ಲೂ ಖಾನ್, ಝಾಹಿದ್ ರಸೂಲ್ ಭಟ್, ಅಬು ಹನೀಫಾ, ರಿಯಾಜುದ್ದೀನ್ ಅಲಿ, ಜಫರ್ ಹುಸೇನ್, ಅಯೂಬ್ ಪಂಡಿತ್ ಇತ್ಯಾದಿಯ ಪಟ್ಟಿಗೆ ಪೂರ್ಣವಿರಾಮ ಬೀಳುವ ಸೂಚನೆಗಳಿಲ್ಲ. 2014ರಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಈವರೆಗೆ ಹನ್ನೆರಡು ರಾಜ್ಯಗಳಿಂದ ವರದಿಯಾಗಿರುವ ಪ್ರಕರಣಗಳು ಕನಿಷ್ಠ 32.

ಉಸಿರು ಉಡುಗಿ ಬಿಳುಚಿಕೊಂಡ ಅಸಹಾಯಕ ಪ್ರತಿಭಟನೆಗಳು. ಹೊಸ ರಕ್ತಪಿಪಾಸು ನೈತಿಕತೆಯೊಂದು ಭಾರತ ಗಣರಾಜ್ಯವನ್ನು ಆವರಿಸತೊಡಗಿದೆ. ಈ ನೈತಿಕತೆಗೆ ಭಾರೀ ಕೋಮುದಂಗೆಗಳಲ್ಲಿ ರುಚಿಯಿಲ್ಲ. ಯಾಕೆಂದರೆ ಅವುಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದೀತು ಮತ್ತು ಅರ್ಥಸ್ಥಿತಿಗೆ ಹಾನಿ ತಟ್ಟೀತು ಎಂಬ ಆತಂಕ. 2014ರ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡಿದ ನಾಲ್ಕನೆಯ ಒಂದರಷ್ಟು ಮತದಾರರು ಹಿಂದೂ ರಾಷ್ಟ್ರವಾದದ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಕೋಮುದಂಗೆಗಳು ಈ ಮತದಾರರನ್ನು ದೂರ ಮಾಡಿಯಾವು. ಹೀಗಾಗಿ ಈಗ ನಡೆದಿರುವುದು ಸಾವಿರ ಗಾಯಗಳ ದುಷ್ಟ ಮತ್ತು ಚತುರ ಸಮರ. ಸಮೂಹ ಸಂವೇದನೆಯನ್ನು ದಡ್ಡುಗಟ್ಟಿಸಿ ದಿನವೂ ಸಾಯುವವರಿಗೆ ಅಳುವವರು ಯಾರು ಎಂಬ ಅಪಾಯಕಾರಿ ಸ್ಥಿತಿಗೆ ನೂಕುವ ಹುನ್ನಾರ. ಜನಜಂಗುಳಿಗೆ ಚಹರೆ ಇರುವುದಿಲ್ಲ. ಚಹರೆ ಇಲ್ಲದ ಜಂಗುಳಿಯನ್ನು ಹಿಡಿದು ಬಂಧಿಸಿ ಕಾನೂನು ಕ್ರಮ ಜರುಗಿಸುವುದಾದರೂ ಹೇಗೆ ಎನ್ನುವ ನೆಪ. ಪ್ರತಿಭಟನೆಗಳು ಒಂದರ ಬಳಿಕ ಮತ್ತೊಂದು ಪೇಲವಗೊಳ್ಳುತ್ತ ಸಾಗಿದ್ದರೆ ಮತ್ತೊಂದೆಡೆ ದೊಂಬಿ ಹತ್ಯೆಗಳು ಒಂದಕ್ಕೊಂದು ಕುಮ್ಮಕ್ಕಿನ ಕೋ ಕೊಡುತ್ತ ಸರಪಳಿಯಾಗಿ ಬಿಗಿಯತೊಡಗಿವೆ. ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಜನಜಂಗುಳಿಯ ಬಾಹುಗಳು ಜಜ್ಜಿ ಕೊಲ್ಲಲು ಚಾಚಲಿವೆ ಎಂಬ ಭಯ ಹುಟ್ಟಿಸುವ ತಂತ್ರ. ಕಾಯಬೇಕಾದ ಕೊತ್ವಾಲರಿಗೆ, ನ್ಯಾಯದ ಕಟಕಟೆಗೆ ಎಳೆಯಬೇಕಾದ ಕಾನೂನು ಕಾಯ್ದೆಗಳಿಗೆ ಕೆಲಸವಿಲ್ಲ. ಸಂವಿಧಾನ ಎಂಬುದು ಗಾಜಿನ ಕರಂಡಕದಲ್ಲಿ ಬಂದಿಯಾದ ಅಲಂಕಾರದ ಸರಕು.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸರಿಯಾಗಿ ಹೇಳಿದ್ದಾರೆ. ಜನಜಂಗುಳಿಗಳು ವ್ಯಕ್ತಿಗಳನ್ನು ಹಿಡಿದು ಜಜ್ಜಿ ಕೊಲ್ಲುವುದು ಹೊಸತೇನಲ್ಲ. ಹೌದು. ಮಾಟಮಂತ್ರಗಾರರು, ಮಕ್ಕಳ ಕಳ್ಳರು, ಅತ್ಯಾಚಾರಿಗಳನ್ನು, ಅಸಹಾಯಕ ದಲಿತರನ್ನು ಗುಂಪುಗಳೇ ಹಿಡಿದು ಜಜ್ಜಿ ಕೊಲ್ಲುತ್ತಿದ್ದ ಪ್ರಕರಣಗಳು ನಡೆಯುತ್ತಿದ್ದವು. 2006ರಲ್ಲಿ ಮಹಾರಾಷ್ಟ್ರದ ಖೈರ್ಲಂಜೆ ಯಲ್ಲಿ ಇಡೀ ದಲಿತ ಕುಟುಂಬವನ್ನು ಬರ್ಬರವಾಗಿ ಹೊಸಕಿ ಹಾಕಿದಂತಹ ಪ್ರಕರಣಗಳು ಸ್ವತಂತ್ರ ಭಾರತದ ಇತಿಹಾಸದ ಉದ್ದಗಲಕ್ಕೆ ಹರಡಿಕೊಂಡಿರುವುದು ನಿಜ. ಆದರೆ ಇವುಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಹೊಸ ಕಾರಣ ಮುಂದಿಟ್ಟುಕೊಂಡು ಜನಜಂಗುಳಿ ಹೆಸರಿನಲ್ಲಿ ಹತ್ಯೆಗಳು ಜರುಗತೊಡಗಿವೆ. ಜನಾಂಗೀಯ ಅದರಲ್ಲೂ ಬಹು ಸಂಖ್ಯಾತ ಜನಾಂಗೀಯ ಧಾರ್ಮಿಕ- ರಾಜಕೀಯ ವ್ಯವಸ್ಥೆಯ ಸ್ಥಾಪನೆ ಇವುಗಳ ಹಿಂದಿನ ಉದ್ದೇಶ.

ಆಕಳು ಹೆಸರಲ್ಲಿ, ಆಜಾದಿಯ ನೆಪದಲ್ಲಿ ಮನುಷ್ಯರೇ ಮನುಷ್ಯರ ನೆತ್ತರು ಹರಿಸತೊಡಗಿದ್ದಾರೆ. ಹೊಸ ರೂಪದ ದೊಂಬಿ ಹತ್ಯೆಗಳು ಖಂಡಿತವಾಗಿಯೂ ನಿರ್ವಾತದಿಂದ ಹುಟ್ಟಿ ಬಂದಿಲ್ಲ. ಪ್ರಭುತ್ವವೇ ರೊಚ್ಚಿಗೆಬ್ಬಿಸಿ ಹರಿಯಬಿಟ್ಟಿ ರುವ ಹಾಲಾಹಲವಿದು. ಧಮನಿ ಧಮನಿಗಳಿಗೆ ಇಳಿಸತೊಡಗಿರುವ ಕಟ್ಟರ್ ರಾಷ್ಟ್ರವಾದ ಮತ್ತು ಕೋಮುವಾದ ಮಿಶ್ರಣದ ನಿಧಾನ ನಂಜು. ಕಾಲಾನುಕ್ರಮದಲ್ಲಿ ಸಮುದಾಯ ಶರೀರವನ್ನು ವ್ಯಾಪಿಸಿ ವಿಭಜಿಸುವ ಅಪಾಯಗಳನ್ನು ನೆನೆದರೂ ನಡುಕ ಹುಟ್ಟೀತು. ಇದು ನನ್ನ ದೇಶವಲ್ಲವೇ ಎಂಬ ವೇದನೆಯನ್ನು ಸಂದೇಹಗಳನ್ನು ಸುಸಜ್ಜಿತವಾಗಿ ಬಿತ್ತುವ ಕೃತ್ಯಗಳು ಒಂದು ಜನಾಂಗದ ಯುವಜನರನ್ನು ಯಾವ ಅಂಚಿಗೆ ನೂಕುತ್ತವೆ ಎಂಬುದರ ಪರಿವೆ ಇದ್ದವರೇ ಮಾಡುತ್ತಿರುವ ಕೆಲಸವಿದು.
ಇತ್ತೀಚಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕ್ ತಂಡದ ಗೆಲುವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರೆಂದು ದೇಶದ್ರೋಹದ ಆಪಾದನೆ ಹೊತ್ತು ಮಧ್ಯಪ್ರದೇಶದಲ್ಲಿ ಜೈಲು ಸೇರಿದ ಮುಸ್ಲಿಂ ಯುವಕರನ್ನು ಸಾಕ್ಷ್ಯಾಧಾರ ಇಲ್ಲವೆಂದು ಬಿಡುಗಡೆ ಮಾಡ ಲಾಯಿತು. ತಾವು ಅಮಾಯಕರೆಂಬುದು ಈ ಯುವಕರ ಅಹವಾಲು. ಹತ್ತು ದಿನಗಳ ಜೈಲು ವಾಸದಲ್ಲಿ ಇತರೆ ಕೈದಿಗಳ ಗುಂಪು ಇವರನ್ನು ದೇಶದ್ರೋಹಿಗಳೆಂದು ಕರೆಯಿತು. ಥಳಿಸಿತು. ಪಾಯಿಖಾನೆ ತೊಳೆಯಲು ಹಚ್ಚಿತು.

2016ರಲ್ಲಿ ಜನಜಂಗುಳಿ ಜಜ್ಜಿ ಕೊಂದ ಪ್ರಕರಣವೊಂದು ಬರ್ಬರತೆಯ ನಿದರ್ಶನ ಆಗಬಲ್ಲದು. ದನದ ವ್ಯಾಪಾರ ಮಾಡುತ್ತಿದ್ದಾನೆಂಬ ಕೇವಲ ಸಂಶಯದ ಮೇರೆಗೆ ಮಹಮ್ಮದ್ ಮಜ್ಲೂಂ ಮತ್ತು ಆತನ ಹನ್ನೆರಡು ವರ್ಷ ಪ್ರಾಯದ ಮಗ ಇನಾಯುತ್‌ ಉಲ್ಲಾನನ್ನು ಜನಜಂಗುಳಿ ಸಾರ್ವಜನಿಕವಾಗಿ ಮರಕ್ಕೆ ನೇಣು ಹಾಕಿತ್ತು. ದನದ ಮಾಂಸ ತಿನ್ನುವ ಅಪರಾಧಕ್ಕೆ ಶಿಕ್ಷೆಯೆಂದು 14 ವರ್ಷ ಮತ್ತು 20 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೇಲೆ ಮನೆಗೆ ನುಗ್ಗಿ ಅತ್ಯಾಚಾರ ಮಾಡಲಾಗಿತ್ತು.

ಕೇಂದ್ರ ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2015 ಮತ್ತು 2016ರಲ್ಲಿ ದೇಶದಾದ್ಯಂತ ವರದಿಯಾಗಿರುವ ಕೋಮು ಗಲಭೆಗಳ ಸಂಖ್ಯೆ 1,454. ಈ ಪ್ರಕರಣಗಳಲ್ಲಿ ಸತ್ತವರು 183 ಮಂದಿ. ಗಾಯಗೊಂಡವರು 1,485 ಮಂದಿ. ರಾಜ್ಯ ಸರ್ಕಾರಗಳು ಖುದ್ದು ಕೋಮು ಗಲಭೆಗಳು ಎಂದು ಮಾಡಿರುವ ವರದಿಗಳಿಂದ ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾಹಿತಿಯಿದು. ಗಲಭೆಗಳು ಕೋಮು ಸ್ವರೂಪದವೇ ಅಲ್ಲವೇ ಎಂಬ ತೀರ್ಮಾನ ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು.

ದಲಿತರು ಮತ್ತು ಮುಸಲ್ಮಾನರನ್ನು ‘ರಾಷ್ಟ್ರವಿರೋಧಿಗಳು’ ಎಂದು ಕಳೆದ ವರ್ಷ ನಿಂದಿಸಿದ್ದ ಪ್ರೊ.ಅಮಿತಾ ಸಿಂಗ್ ಅವರನ್ನು ಭಾರತೀಯ ಸಾಮಾಜಿಕ ವಿಜ್ಞಾನಗಳ ಸಂಶೋಧನಾ ಮಂಡಳಿಯ (ಐಸಿಎಸ್ಎಸ್ಆರ್) ಸದಸ್ಯೆ ಯನ್ನಾಗಿ ನೇಮಕ ಮಾಡಿದ ಆದೇಶ ಹತ್ತು ದಿನಗಳ ಹಿಂದೆ ಹೊರಬಿದ್ದಿದೆ. ಇಂತಹ ನಿದರ್ಶನಗಳು ಅನೇಕ.

ವಿಷ ಉಣಿಸುತ್ತಿರುವವರು ಖಂಡಿಸುವರೆಂಬ ನಿರೀಕ್ಷೆಯೇ ತಪ್ಪು. ವಿರಳಾತಿವಿರಳ ಖಂಡನೆ ಹೊರಬಿದ್ದೀತು. ಆದರೆ ಕಾನೂನು ಸುವ್ಯವಸ್ಥೆಯಲ್ಲಿ ಪ್ರತಿಫಲಿಸುವುದೇ ಇಲ್ಲ. ಯಾಕೆಂದರೆ ಅದು ಕೇವಲ ಮತ್ತು ಕೇವಲ ತುಟಿ ತುದಿಯ ಖಂಡನೆ. ಮಾತು ಮತ್ತು ಕೃತಿಯ ನಡುವೆ ಕಂದಕವಿರುವ ಖಂಡನೆ. ಅನುಯಾಯಿಗಳೇ ಅಲಕ್ಷಿಸುವ ಸ್ವರೂಪದ ಖಂಡನೆ. ಎಳೆಯ ಜುನೈದ ಹಬ್ಬದ ಖರೀದಿಯ ನಂತರ ಕ್ಷೇಮವಾಗಿ ಮನೆ ತಲುಪಿದ್ದರೆ, ಸಮುದಾಯಕ್ಕೆ ಸಮುದಾಯವೇ ಕಪ್ಪುಪಟ್ಟಿ ತೊಟ್ಟು ಪ್ರತಿಭಟಿಸುತ್ತಿರಲಿಲ್ಲ ಅಲ್ಲವೇ? ಈ ಹಿಂದೆ ಗುಜರಾತಿನ ಊನಾದಲ್ಲಿ ಸತ್ತ ಆಕಳ ಚರ್ಮವನ್ನು ಸುಲಿಯುತ್ತಿದ್ದ ದಲಿತರ ಮೇಲೆ ನಡೆದ ದೌರ್ಜನ್ಯ ದೇಶದಾದ್ಯಂತ ಹೇವರಿಕೆಯ ಅಲೆಗಳನ್ನು ಎಬ್ಬಿಸಿತ್ತು. ಪ್ರಧಾನಿಯವರು ತಡವಾಗಿಯಾದರೂ ಬಾಯಿ ಬಿಟ್ಟರು. ಸಲ್ಲದ ಕೃತ್ಯವೆಂದು ಖಂಡಿಸಿದರು. ಆದರೆ ಆ ಖಂಡನೆಯನ್ನು ಕೃತಿಯಲ್ಲಿ ನಡೆಸಿಕೊಡಲಿಲ್ಲ. ನಡೆಸಿಕೊಟ್ಟಿದ್ದರೆ ಹಲ್ಲೆಗಳು ನಿಲ್ಲುತ್ತಿದ್ದವು ಎಂದು ಹೇಳಲು ಬರುತ್ತಿರಲಿಲ್ಲ. ಆದರೆ ನಿಶ್ಚಿತವಾಗಿಯೂ ತಗ್ಗುತ್ತಿದ್ದವು. ನೆಲಮಟ್ಟದ ವಾಸ್ತವದಲ್ಲಿ ಬದಲಾವಣೆ ಕಾಣಬೇಕಿತ್ತು. ಇಂಥ ಗಂಭೀರ ವಿಷಯ ಈವರೆಗೆ ಪ್ರಧಾನಿಯವರ ‘ಮನ್ ಕೀ ಬಾತ್’ ಆಗಿಲ್ಲದಿರುವುದು ಕೂತೂಹಲಕರ. ತಾವು ಅಡಿಗಡಿಗೆ ಪ್ರತಿಪಾದಿಸುತ್ತ ಬಂದಿರುವ ‘ಅಭಿವೃದ್ಧಿಯ ಅಜೆಂಡಾ’ವನ್ನು ಗೋರಕ್ಷಕರು ಅಪಹರಿಸತೊಡಗಿರುವ ಅನಾಹುತ ಮೋದಿಯವರ ಬರಿಗಣ್ಣಿಗಾಗಲೀ ಒಳಗಣ್ಣಿ ಗಾಗಲೀ ಈವರೆಗೆ ಬೀಳದೆ ಇರುವುದು ಕೌತುಕವೇ ಸರಿ.
ಮತ್ತೊಂದು ಮಾತು. ದಂಡನೆಯ ಭಯವಿಲ್ಲದವರು ಖಂಡಿಸಲು ಬಾಯಿ ತೆರೆವುದಾದರೂ ಹೇಗೆ? ಚುನಾವಣೆ ಸೋಲಿನ ದಂಡನೆ ಆಳುವವರನ್ನು ಹದ್ದುಬಸ್ತಿನಲ್ಲಿ ಇರಿಸೀತು. ಆದರೆ ಸಾಲು ಸಾಲಾಗಿ ಚುನಾವಣೆ ಗೆಲ್ಲುತ್ತಿರುವವರಿಗೆ ದಂಡನೆಯ ದರಕಾರು ಯಾಕಿರಬೇಕು? ದೊಂಬಿ ಹತ್ಯೆಗಳು ಚುನಾವಣೆ ಗೆಲುವಿಗೆ ಹೊಳಪು ನೀಡುತ್ತಿರುವ ನಿಚ್ಚಳ ಸೂಚನೆಗಳು ಹೊರಬಿದ್ದಿರುವುದು ಕಟುವಾಸ್ತವ. ಜುನೈದನ ಹತ್ಯೆ ಹರಿಯಾಣದ ಮುಂಬರುವ ಚುನಾವಣೆಗಳಲ್ಲಿ ಮನೋಹರಲಾಲ್‌ ಖಟ್ಟರ್ ಗೆಲುವಿಗೆ ಗರಿ ತೊಡಿಸಿದರೆ ಅಚ್ಚರಿಪಡಬೇಕಿಲ್ಲ. ಮುಸಲ್ಮಾನರ ಮತಗಳಿಲ್ಲದೆಯೂ ಗೆಲ್ಲಬಲ್ಲೆವೆಂದು ಸಿದ್ಧ ಮಾಡಿ ಆಯಿತು. ತನಗೆ ಮತ ನೀಡದವರ ಬದುಕುಗಳು ಉಳಿದರೆಷ್ಟು ಅಳಿದರೆಷ್ಟು? ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಹದ್ದುಬಸ್ತಿನಲ್ಲಿ ಇರಿಸಿ ವರ್ಣವ್ಯವಸ್ಥೆಯಲ್ಲಿ ಅವರ ಪರಂಪರಾಗತ ಜಾಗವನ್ನು ಬೆರಳು ಮಾಡಿ ತೋರಿಸಿ ಆಜ್ಞಾಪಿಸುವ ಹಂಚಿಕೆಯಿದು. ಆ ಕಾಲದಲ್ಲಿ ಆದ ಹತ್ಯೆಗಳನ್ನು ಪ್ರತಿಭಟಿಸದೆ ಇದ್ದವರಿಗೆ ಈ ಹತ್ಯೆಗಳನ್ನೂ ಪ್ರತಿಭಟಿಸುವ ಹಕ್ಕಿಲ್ಲವೆಂಬ ಅರ್ಥಶೂನ್ಯ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ದನಿ ತೆರೆಯುವ ಕೊರಳುಗಳನ್ನು ಅದುಮಲಾಗುತ್ತಿದೆ.

ರಾಮರಥ ಯಾತ್ರೆ, ಬಾಬರಿ ಮಸೀದಿ ನೆಲಸಮ, ಮುಂಬೈ ಮತ್ತಿತರ ಪೇಟೆ ಪಟ್ಟಣಗಳ ಸರಣಿ ಕೋಮು ಗಲಭೆಗಳ ನಂತರ ಸಹಿಷ್ಣುತೆಯ ಭಾರತದ ಚಿತ್ರ ಸದಾ ಕಾಲಕ್ಕೂ ಬದಲಾಗಿ ಹೋಯಿತು. ಭಯೋತ್ಪಾದಕರಿರಲಿ, ಅಮಾಯಕ ಮುಸಲ್ಮಾನ ಜನಸಮೂಹಗಳನ್ನು ಕಾಣುವ ಕಣ್ಣುಗಳಿಗೂ ಕಾಮಾಲೆ ಹೊಕ್ಕಿಬಿಟ್ಟಿತು.
ಕಾನೂನು ಸುವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದೆ ಹೋದರೆ ಪೊಲೀಸ್ ವ್ಯವಸ್ಥೆ ಅಪರಾಧಗಳನ್ನು ತಹಬಂದಿಗೆ ತರಬಲ್ಲದು ಎಂಬ ಮಾತು ಬಹುಮಟ್ಟಿಗೆ ನಿಜ. ಮೊನ್ನೆ ಮೊನ್ನೆ ಜಾರ್ಖಂಡದಲ್ಲಿ ನಡೆದ ಘಟನೆಯೇ ಈ ಮಾತಿಗೆ ಸಾಕ್ಷಿ. ಗೋ ಹತ್ಯೆ ಮಾಡಿದ್ದಾನೆಂಬ ಶಂಕೆಯ ಮೇರೆಗೆ ಜಜ್ಜಿ ಕೊಲ್ಲಲು ಸಿದ್ಧವಾಗಿ ಸುತ್ತುವರೆದಿದ್ದ ಸಾವಿರ ಜನರ ಗುಂಪನ್ನು ಕೇವಲ 15 ಮಂದಿ ಪೊಲೀಸರು ಹಿಮ್ಮೆಟ್ಟಿಸಿದ್ದುಂಟು. ಕಾನೂನು ಮತ್ತು ಸುವ್ಯವಸ್ಥೆಯ ಆಡಳಿತ ಯಂತ್ರವು ಗುಂಪು ಖೂನಿ ಪ್ರಕರಣಗಳ ಕುರಿತು ಶೂನ್ಯ ಸಹನೆ ತೋರಬೇಕೆಂಬ ಮಾತನ್ನು ಆಳುವವರು ನಿಜ ಅರ್ಥದಲ್ಲಿ ಹೇಳಿದರೆ ಇಲ್ಲವೆನ್ನುವ ಧೈರ್ಯ ಅಧಿಕಾರಶಾಹಿಗೆ ಎಲ್ಲಿಂದ ಬಂದೀತು?\

ನಿಘಂಟು ಅರ್ಥದ ಪ್ರಕಾರ ‘ರಾಜಕೀಯ ಉದ್ದೇಶಗಳಿಗಾಗಿ ನಾಗರಿಕರನ್ನು ಕಾನೂನುಬಾಹಿರ ಹಿಂಸಿಸುವುದು ಮತ್ತು ಭಯಪಡಿಸುವುದೇ ಭಯೋತ್ಪಾದನೆ’. ಆಡಳಿತಾರೂಢರು ಭಯೋತ್ಪಾದನೆಯ ನಿಗ್ರಹ ಕುರಿತು ನಿತ್ಯ ಮಾತಾಡುತ್ತಾರೆ. ನಿಘಂಟಿನ ಅರ್ಥದ ಪ್ರಕಾರ ದನದ ಮಾಂಸದ ಹೆಸರಿನಲ್ಲಿ ಜನರನ್ನು ಜಜ್ಜಿ ಕೊಲ್ಲುವವರು ಕೂಡ ಭಯೋತ್ಪಾದಕರು. ಕಾಶ್ಮೀರದಲ್ಲಿ ಪೊಲೀಸರನ್ನು ಜನಜಂಗುಳಿಯ ರೂಪ ಧರಿಸಿ ಜಜ್ಜಿ ಕೊಲ್ಲುವ ಆಜಾದೀವಾದಿಗಳು ಕೂಡ ಭಯೋತ್ಪಾದಕರೇ ಎನ್ನುತ್ತಾರೆ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ಸ್ವಾಮಿನಾಥನ್ ಅಂಕ್ಲೆಸಾರಿಯಾ ಅಯ್ಯರ್. ಈ ಭಯೋತ್ಪಾದನೆಯನ್ನು ಚುರುಕಾಗಿ ಮೆಟ್ಟದೆ ಹೋದರೆ ಪ್ರತಿಭಯೋತ್ಪಾದನೆ ತಲೆಯೆತ್ತೀತು... ದೇಶ ಹೊತ್ತಿ ಉರಿದೀತು ಎಂಬ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT