ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿಲ್ಲದ ಸ್ವರ ಸಂಯೋಜಕ: ಜಿ.ಕೆ.ವೆಂಕಟೇಶ್

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮೆಲ್ಲರ ಬಾಲ್ಯ ಕಾಲದಲ್ಲಿ ಕನ್ನಡದ ಕೆಲವು ಚಿತ್ರಗೀತೆಗಳು ಭಾವಕೋಶವನ್ನು ಆವರಿಸಿಕೊಂಡು ಗುಂಗು ಹಿಡಿಸಿದ್ದವು. ಅವುಗಳ ಸಾಹಿತ್ಯದ ಅರ್ಥ ವಿಸ್ತಾರ ತಿಳಿಯದಿದ್ದರೂ ಸುಮ್ಮನೆ ಗುನುಗುತ್ತಾ ಆನಂದಿಸುತ್ತಿದ್ದೆವು.

ಅನೇಕ ಪ್ರತಿಭಾವಂತರು ರಂಗಭೂಮಿಯನ್ನು ತೊರೆದು ಸಿನಿಮಾ ಸೇರಿದ್ದರು. ನಾಟಕದ ರಂಗಮಂಚಗಳ ಮೇಲೆ ಗರಿಕೆಹುಲ್ಲು ಬೆಳೆಯಲಾರಂಭಿಸಿದ್ದ, ಟೆಲಿವಿಷನ್ ಇನ್ನೂ ಅಪರಿಚಿತವಾಗಿದ್ದ, ಸಿನಿಮಾ ಒಂದೇ ಪ್ರಬಲ ಆಕರ್ಷಣೆಯಾಗಿದ್ದ ಸ್ಥಿತ್ಯಂತರದ ಕಾಲ ಅದು. ಗ್ರಾಮೀಣ ಕನ್ನಡಿಗರಿಗೆ ಟೆಂಟು ಸಿನಿಮಾಗಳು ರಸದೌತಣ ಉಣಬಡಿಸುತ್ತಿದ್ದವು. ಹಲವು ಕಾರಣಕ್ಕೆ ಹಲವು ಇಂಟರ್‌ವಲ್‌ಗಳಿರುತ್ತಿದ್ದ ಟೆಂಟುಗಳಲ್ಲಿ, ಚಿತ್ರಗೀತೆಗಳನ್ನು ಅಚ್ಚುಹಾಕಿದ ಕಿರು ಪುಸ್ತಕಗಳನ್ನು ಮಾರುತ್ತಿದ್ದರು. ಇಷ್ಟವಾದ ಗೀತೆಗಳನ್ನು ಶ್ರದ್ಧಾಭಕ್ತಿಯಿಂದ ಕಲಿಯುತ್ತಿದ್ದೆವು.

‘ಈ ದೇಹದಿಂದ ದೂರನಾದೆ ಏಕೆ ಆತ್ಮವೆ, ಈ ಸಾವು ನ್ಯಾಯವೆ’ ಎಂಬ ಸೀನಿಯರ್ ಹಾಡೊಂದು ನನಗಿಂತ ಮುಂಚೆ ಹುಟ್ಟಿ ಅಣ್ಣಂದಿರ ಬಾಯಲ್ಲಿ ನಲಿಯುತ್ತಿತ್ತು. ‘ಓಹಿಲೇಶ್ವರ’ ಸಿನಿಮಾಕ್ಕೆಂದು ಘಂಟಸಾಲ ಹಾಡಿದ್ದ ಗೀತೆ ಅದು. ಆ ಹಾಡನ್ನು ಗಟ್ಟಿ ಮಾಡಿದ್ದೆ. ಗಟ್ಟಿ ಮಾಡುವುದು ಎಂದರೆ ಕಂಠಪಾಠ ಮಾಡುವುದು. ಆ ಹಾಡಿನಲ್ಲಿ ದೇವರಿಗೆ ಕೆಲವು direct questionಗಳಿದ್ದವು! ತಾಯ ಹಾಲು ವಿಷವಾದಾಗ ನ್ಯಾಯ ವೆಲ್ಲಿದೆ? ಕಾವ ದೇವ ಸಾವು ತರಲು ಎಲ್ಲಿ ರಕ್ಷಣೆ? ಏನು ತಪ್ಪಿದೆ ಹೇಳಬಾರದೆ? ಪರಮೇಶಾ ಪ್ರಾಣ ಜ್ಯೋತಿ ಮರಳಿ ತಾರೆಯಾ? ಇತ್ಯಾದಿ. ತರುವಾಯ ನಮ್ಮ ವಾರಿಗೆಯ ಹುಡುಗ ಹುಡುಗಿಯರು ತಲೆಗೆ ಹರಳೆಣ್ಣೆ ಹಚ್ಚಿ, ಗೊಣ್ಣೆ ಸುರಿಸಿಕೊಂಡು ಅಳುತ್ತಾ, ಸ್ಲೇಟು ಬಳಪ ಹಿಡಿದು, ಗುಂಪು ಗುಂಪಾಗಿ ಶಾಲೆಗೆ ಹೊರಟಿದ್ದಕ್ಕೆ ಹೊಂದಿಕೆಯಾಗುವಂತೆ ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಎಂಬ ಹಾಡು ಬಂದೇಬಿಟ್ಟಿತು.

ಈ ಗೀತೆಗಳ ಸಂಯೋಜಕ ಜಿ.ಕೆ.ವೆಂಕಟೇಶ್. ತಮ್ಮ ವಿಶಿಷ್ಟ ಕಂಠದಿಂದ ಹಾಡಿ ‘ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ’ ಎಂದು ಕರೆ ಕೊಟ್ಟಿದ್ದರು. ಈಗ ಚಾರಿತ್ರಿಕವಾಗಿ ಹೊಸ ಅರ್ಥಗಳು ಹೊಳೆಯುತ್ತಿವೆ. ಕನ್ನಡದ ಮಕ್ಕಳೆಲ್ಲ ಆಗಷ್ಟೇ ಒಂದಾಗಿದ್ದರು. ವಿಶಾಲ ಕರ್ನಾಟಕ ರಚನೆಯಾಗಿತ್ತು. ವೈಣಿಕರಾಗಿದ್ದ ಜಿ.ಕೆ.ವೆಂಕಟೇಶ್‌ರ ದೈತ್ಯ ಪ್ರತಿಭೆ ಸಂಗೀತ ಸಂಯೋಜನೆಯಲ್ಲಿ ಹೊಸ ಪ್ರಯೋಗ ಮಾಡತೊಡಗಿತ್ತು. ಚಿತ್ರರಂಗದ ಇತಿಹಾಸ ಬರೆಯುವವರು ಜಿ.ಕೆ.ವಿ. ಅವರ ಇತಿಹಾಸವನ್ನು ಬರೆಯಬೇಕು ಎಂಬಷ್ಟು ಅನಿವಾರ್ಯವಾಗಿ ಅವರು ಬೆಳೆದು ನಿಂತರು. ಸಾವಿಲ್ಲದ ಅವರ ಸ್ವರ ಸಂಯೋಜನೆಗಳಲ್ಲಿ ಕೆಲವನ್ನು ಉಲ್ಲೇಖಿಸಬಯಸುತ್ತೇನೆ. ‘ತಾಯಿ ಕರುಳು’ ಚಿತ್ರದ ಭಾವಗೀತಾತ್ಮಕವಾದ ‘ಬಾ ತಾಯಿ ಭಾರತಿಯೆ, ಭಾವ ಭಾಗೀರತಿಯೆ’ ಅಂಥ ಒಂದು ಸಂಯೋಜನೆ. ಮಂದ್ರದಲ್ಲಿ ಆರಂಭವಾಗುವ ಪಲ್ಲವಿ, ಚರಣಕ್ಕೆ ಪ್ರವೇಶಿಸಿದೊಡನೆ ‘ಕಾವೇರಿ ಕಾಲ್ತೊಳೆಯೆ ಕಾದಿಹಳು, ಗೋದಾವರಿ ದೇವಿ ಹೂ ಮುಡಿವಳು, ಒಡಲೆಲ್ಲ ಶೃಂಗರಿಸೆ ತುಂಗೆ ಇಹಳು, ಒಡನಾಡಿ ಭದ್ರೆ ತಾ ಜೊತೆಗಿರುವಳು’ ಎಂದು ಉಚ್ಚ ಸ್ಥಾಯಿಗೆ ತಲುಪುತ್ತದೆ. ಅವರು ಸಂಯೋಜಿಸಿದ ನಾಡ ಪ್ರೀತಿಯ, ಪ್ರಕೃತಿ ವರ್ಣನೆಯ, ಭಾಷಾ ಪ್ರೇಮದ ಗೀತೆಗಳು ಹಲವು.

‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ’, ‘ಕನ್ನಡದ ಕುಲ ತಿಲಕ ಪರಮೇಶ್ವರ’ ಸದಾ ನೆನಪಿನಲ್ಲಿ ಉಳಿಯುವಂಥವು. ಪ್ರೇಮಗೀತೆಗಳಲ್ಲಿ ಜಿ.ಕೆ.ವಿ. ಅದ್ವಿತೀಯರು. ‘ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು’, ‘ಇವಳು ಯಾರು ಬಲ್ಲೆ ಏನು?’ ‘ಒಲವಿನ ಪ್ರಿಯಲತೆ ಅವಳದೇ ಚಿಂತೆ’, ‘ಬಿಂಕದ ಸಿಂಗಾರಿ’, ‘ನೀ ಬಂದು ನಿಂತಾಗ’, ‘ಪ್ರೀತೀನೆ ಆ ದ್ಯಾವ್ರು ತಂದ’, ‘ಬಾಳ ಬಂಗಾರ ನೀನು’ ಮತ್ತು ‘ಆಹಾ ಮೈಸೂರು ಮಲ್ಲಿಗೆ’, ‘ಹಾಲು ಜೇನು ಒಂದಾದ ಹಾಗೆ’, ‘ನೂರು ಕಣ್ಣು ಸಾಲದು’, ‘ರವಿವರ್ಮನಾ ಕುಂಚದಾ ಕಲೆ ಬಲೆ ಸಾಕಾರವೋ’, ‘ಸುಖದಾ ಸ್ವಪ್ನಗಾನ’, ‘ಕರೆದರು ಕೇಳದೆ’ ಮತ್ತು ‘ರಾಗ ಅನುರಾಗ ಶುಭ ಯೋಗ ಸೇರಿದೆ’ -ಇಂಥವುಗಳು ಅಸಂಖ್ಯ. ಭಕ್ತಿರಸ ತುಂಬಿದವುಗಳಲ್ಲಿ ಸಂಧ್ಯಾರಾಗದಿಂದ ಭಕ್ತಕುಂಬಾರದವರೆಗೆ ಲೆಕ್ಕವಿಲ್ಲದಷ್ಟು ಗೀತೆಗಳಿವೆ.

ರಾಜಕುಮಾರ್ ನಾಯಕರಾಗಿ ರೂಪುಗೊಳ್ಳಲು ಹಲವಾರು ಕಾರಣಗಳಿರಬಹುದು. ಆದರೆ ಗಾಯಕರಾಗಲು ಇದ್ದ ಮುಖ್ಯ ಕಾರಣ ಜಿ.ಕೆ.ವೆಂಕಟೇಶ್. ಜಗತ್ತು ರಾಜ್ ಅವರನ್ನು ಅಣ್ಣಾವ್ರು ಎಂದು ಕರೆದರೆ ಜಿ.ಕೆ.ವೆಂಕಟೇಶ್, ರಾಜ್ ಅವರನ್ನು ತಮ್ಮಯ್ಯ ಎನ್ನುತ್ತಿದ್ದರಂತೆ. ಈ ಚಿತ್ರದಲ್ಲಿ ಅಣ್ಣಯ್ಯ ಜಿ.ಕೆ.ವೆಂಕಟೇಶ್, ಇಬ್ಬರು ತಮ್ಮಯ್ಯಗಳ ನಡುವೆ ನಿಂತಿರುವುದು ಸ್ವಾರಸ್ಯಕರವಾಗಿದೆ. ‘ಓಹಿಲೇಶ್ವರ’ ಚಿತ್ರದಲ್ಲಿ ಜಿ.ಕೆ.ವಿ. ಮೊದಲಿಗೆ ರಾಜ್‌ರಿಂದ ‘ಸೋಮನಾಥ ಶರಣು ಶಂಭೋ’ ಎಂದು ಹಾಡಿಸಿದ್ದರು. ಮತ್ತೆ ಮಹಿಷಾಸುರ ಮರ್ದಿನಿಯಲ್ಲಿ ‘ತುಂಬಿದ ಮನವಾ ತಂದಿತು ಸುಖವಾ’ ಎನ್ನುವ ಹಾಡು. ಮತ್ತೆ ಸಂಪತ್ತಿಗೆ ಸವಾಲ್‌ನ ಎಮ್ಮೆ ಹಾಡಿನವರೆಗೆ ರಾಜ್ ಕಂಠಕ್ಕೆ ವಿಶ್ರಾಂತಿ.
‘ಯಾರೇ ಕೂಗಾಡಲಿ’ಯಿಂದ ಶುರುವಾದ ರಾಜ್ ಗಾನಪರ್ವ ಅವ್ಯಾಹತವಾಗಿ ಸಾಗಿ ಶಾಸ್ತ್ರೀಯ, ಅರೆ ಶಾಸ್ತ್ರೀಯ ಸಂಯೋಜನೆಗಳನ್ನೆಲ್ಲ ಹಾಡುತ್ತಾ ಮುಂದುವರಿಯಿತು. ರಂಗಭೂಮಿ ಕಲಿಸಿಕೊಟ್ಟಿದ್ದ ಗಾಯನ ಪ್ರತಿಭೆಯನ್ನು ಯಶಸ್ವಿ ನಟರಾಗಿಯೂ ಹದಿನೈದು ವರ್ಷಗಳ ಕಾಲ ಅದುಮಿಟ್ಟಿದ್ದ ರಾಜ್ ಅವರ ತಾಳ್ಮೆ ಕುತೂಹಲಕರ.

ಕನ್ನಡವನ್ನು ತೀವ್ರವಾಗಿ ಅನುಭವಿಸಿ, ಅದರ ಸ್ವರ ಸಂಚಾರದ ಸೂಕ್ಷ್ಮಾತಿಸೂಕ್ಷ್ಮ ಪಲುಕುಗಳನ್ನು ಅನುರಣಿಸುತ್ತಿದ್ದ ಇಬ್ಬರು ಭಿನ್ನ ಶೈಲಿಯ ಗಾಯಕರುಗಳೆಂದರೆ ಡಾ. ರಾಜಕುಮಾರ್ ಮತ್ತು ಸಿ.ಅಶ್ವತ್ಥ್. ರಾಜ್ ಅವರ ಅಂದಾಜು ಐವತ್ತು ಚಿತ್ರಗಳಿಗೆ ಜಿ.ಕೆ.ವೆಂಕಟೇಶ್ ಸಂಗೀತ ಒದಗಿಸಿದ್ದಾರೆ ಎಂಬುದು ಗಮನಾರ್ಹ. ಅದರಲ್ಲಿ ಕಸ್ತೂರಿ ನಿವಾಸ, ಸಂಧ್ಯಾರಾಗ, ಹುಲಿಯ ಹಾಲಿನ ಮೇವು, ಮಯೂರ, ಭಕ್ತ ಕುಂಬಾರ, ಜೇಡರ ಬಲೆ, ತಾಯಿ ದೇವರು, ದೂರದ ಬೆಟ್ಟ, ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಹಾಲು ಜೇನು, ರಾಜ ನನ್ನ ರಾಜ, ಸನಾದಿ ಅಪ್ಪಣ್ಣ-ದಂತಹ ಕೆಲವು ಚಿತ್ರಗಳ ಎಲ್ಲ ಹಾಡುಗಳೂ ಹಿಟ್ ಅನಿಸಿವೆ.

ಕೆಲವು ಗೀತೆಗಳನ್ನು ಹೆಕ್ಕಿ ಗಮನಿಸುವುದಾದರೆ, ಬಂಗಾರದ ಮನುಷ್ಯ ಚಿತ್ರದ ‘ನಗುನಗುತಾ ನಲೀ’ ಗೀತೆಯು ಬಾಲ್ಯ, ತಾರುಣ್ಯ, ಮುಪ್ಪು ಮತ್ತು ಸಾವನ್ನು ವಿವರಿಸುವ ಜೀವನ ಚಕ್ರವನ್ನು ಒಳಗೊಂಡಿದೆ. ಶೈಶವದ ಲವಲವಿಕೆ, ಜೀವನೋಲ್ಲಾಸದಿಂದ ಶುರುವಾಗುವ ಸಂಯೋಜನೆ ವೃದ್ಧಾಪ್ಯಕ್ಕೆ ಬಂದೊಡನೆ, ಏರುಪೇರಿನಾ ಗತಿಯಲ್ಲಿ ಜೀವನ, ಸಾಗಿ ಮಾಗಿ ಹಿರಿತನ, ತಂದಿತಯ್ಯ ಮುದಿತನ ಎಂಬಲ್ಲಿ ನಿಧಾನವಾಗಿ ಸಾಗಿ, ಆದರೆ ಆರಂಭದ ಲವಲವಿಕೆಯನ್ನು ಕಳೆದುಕೊಳ್ಳದೆ ಮುಪ್ಪಿನ ಸೊಗಸನ್ನು ಅನುಭವಕ್ಕೆ ತಂದು ಕೊಡುತ್ತದೆ. ಕುಲುಮೆಯ ಸದ್ದಿನಿಂದ ಶುರುವಾಗುವ ದೂರದ ಬೆಟ್ಟ ಚಿತ್ರದ ‘ಪ್ರೀತಿನೇ ಆ ದ್ಯಾವ್ರು ತಂದ’ ಗೀತೆ ಮತ್ತು ಖರಪುಟದ ಸದ್ದಿನೊಂದಿಗೆ ಶುರುವಾಗುವ ಮಯೂರ ಚಿತ್ರದ ‘ಈ ಮೌನವಾ ತಾಳೆನು’ ಗೀತೆ ಗಮನಿಸಬೇಕಾದ ಸಂಯೋಜನೆಗಳು.

ರಾಜ್‌ಕುಮಾರ್ ಗಾಯಕರಾಗಿ ಎತ್ತರಕ್ಕೇರಲು ತೆರೆಯ ಹಿಂದೆ ದುಡಿದ ಜಿ.ಕೆ.ವೆಂಕಟೇಶ್‌ರಂಥ ಪ್ರತಿಭಾಶಾಲಿಗಳ ಕೊಡುಗೆ ಮರೆಯಲಾಗದ್ದು. ಜಿ.ಕೆ.ವೆಂಕಟೇಶ್ ಹಾಡಿದ ಕೆಲ ಗೀತೆಗಳು ಅವರ ಗಾಯನ ಪ್ರತಿಭೆಯನ್ನು ತೋರುತ್ತವೆ. ‘ಆಡಿಸಿದಾತಾ ಬೇಸರ ಮೂಡಿ’, ‘ವಿರಸವೆಂಬ ವಿಷಕೆ’ ಗೀತೆ ಗಳಲ್ಲಿ ದಟ್ಟವಾದ ವಿಷಾದವಿದೆ. ಮುಖೇಶ್ ನೆನಪಾಗುತ್ತಾರೆ.

ಜಿ.ಕೆ.ವಿ ತಮಗೆ ಲೇಖನಿ ಬಳಸಿದ ಪಿ.ಗುಂಡೂರಾವ್, ಜಿ.ವಿ.ಅಯ್ಯರ್, ಕುರಾಸೀ, ಸೋರಟ್ ಅಶ್ವತ್ಥ್, ಎಂ.ನರೇಂದ್ರ ಬಾಬು, ಗೀತಪ್ರಿಯ, ಕಣಗಾಲ್ ಪ್ರಭಾಕರ ಶಾಸ್ತ್ರಿ, ವಿಜಯ ನಾರಸಿಂಹ, ಆರ್.ಎನ್.ಜಯಗೋಪಾಲ್, ಚಿ.ಸದಾಶಿವಯ್ಯ, ಹುಣಸೂರು ಕೃಷ್ಣಮೂರ್ತಿ, ಚಿ.ಉದಯ ಶಂಕರ್ ಅವರಂತಹ ಚಿತ್ರಸಾಹಿತಿಗಳಲ್ಲದೆ ಬೇಂದ್ರೆ, ಕೆಎಸ್‌ನ, ಕುವೆಂಪು, ಗೋವಿಂದ ಪೈ, ಆನಂದ ಕಂದರ ರಚನೆಗಳಿಗೂ ರಾಗ ಸಂಯೋಜನೆ ಮಾಡಿದ್ದಾರೆ.

ಬೇಂದ್ರೆ ಅವರ ‘ಯುಗಯುಗಾದಿ ಕಳೆದರೂ’, ಕೆಎಸ್‌ನ ಅವರ ‘ಅಂತಿಂಥ ಹೆಣ್ಣು ನೀನಲ್ಲ’, ಕುವೆಂಪು ಅವರ ‘ಕುಹುಕುಹೂ ಎನ್ನುತ ಹಾಡುವ ಕೋಗಿಲೆಯೇ’ ಚಿರಸ್ಥಾಯಿ ಚಿತ್ರಗೀತೆಗಳು. ಪುರಂದರದಾಸರ ಹೆಸರಾಂತ ಕೀರ್ತನೆಗಳಾದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಕಲ್ಲುಸಕ್ಕರೆ ಕೊಳ್ಳಿರೋ’ ರಚನೆಗಳನ್ನು ಅವರು ಅರವತ್ತರ ದಶಕದಲ್ಲೇ ಸಂಯೋಜಿಸಿದ್ದರು. ಚಿತ್ರದ ಕಥಾಭಿತ್ತಿಯ ಆವರಣಕ್ಕೆ ಅಚ್ಚುಕಟ್ಟಾಗಿ ಹಾಡುಗಳನ್ನು ಕೂರಿಸುತ್ತಿದ್ದ ಕಲೆ ವೆಂಕಟೇಶ್ ಅವರಿಗೆ ಒಲಿದಿತ್ತು. ಆದ್ದರಿಂದಲೇ ಅವರ ಗೀತೆಗಳು ಸಿನಿಮಾದ ಒಳಗೂ ಹೊರಗೂ ಸಲ್ಲುತ್ತಿದ್ದವು. ಆದ್ದರಿಂದಲೇ ನೂರಾರು ಗೀತೆಗಳು ಜನರ ನಾಲಗೆಯ ಮೇಲೆ ಶಾಶ್ವತವಾಗಿ ನಿಂತುಬಿಟ್ಟವು.

ಗಾಯಕ- ಗಾಯಕಿಯರೂ ಮತ್ತೊಂದು ವರದಾನ. ಪಿ.ಬಿ.ಎಸ್, ಎಸ್.ಪಿ.ಬಿ, ಪೀತಾಪುರಂ ನಾಗೇಶ್ವರ ರಾವ್, ಘಂಟಸಾಲ, ಮನ್ನಾಡೇ, ಪಿ.ಕಾಳಿಂಗರಾವ್, ಆರ್.ಸುದರ್ಶನ್, ಬಿ.ವಿ.ಕಾರಂತ, ಡಾ. ರಾಜ್‌ಕುಮಾರ್, ಸಿ.ಅಶ್ವತ್ಥ್, ಆಶಾ ಭೋಂಸ್ಲೆ, ಬಿ.ಕೆ.ಸುಮಿತ್ರ, ಬೆಂಗಳೂರು ಲತಾ, ಎಸ್.ಜಾನಕಿ, ಪಿ.ಸುಶೀಲ, ವಾಣಿ ಜಯರಾಂ ಮುಂತಾದ ದೊಡ್ಡ ಪಡೆಯೇ ಇತ್ತು. ಅಂದಿನ ಐಟಂ ಸಾಂಗ್ ಖ್ಯಾತಿಯ ಎಲ್.ಆರ್.ಈಶ್ವರಿ ಅವರನ್ನು ಕನ್ನಡಕ್ಕೆ ಪರಿಚಯಿಸಿದವರು ಜಿ.ಕೆ.ವೆಂಕಟೇಶ್. ಸ್ವರ ಸಂಯೋಜಕನೊಬ್ಬ ತನ್ನ ಗಾಯಕ, -ಗಾಯಕಿ, ಗೀತರಚನೆಕಾರ, ತನ್ನೊಡನೆ ವಾದ್ಯ ನುಡಿಸುವ ಸಂಗೀತಗಾರ, ಗೀತೆಯನ್ನು ಚಿತ್ರಿಸುವ ನಿರ್ದೇಶಕ, ಅಭಿನಯಿಸುವ ಕಲಾವಿದರು ಮತ್ತು ಹಣ ಹೂಡುವ ನಿರ್ಮಾಪಕ ಎಲ್ಲರನ್ನೂ ಒಳಗೊಂಡಿರುತ್ತಾನೆ. ದೊಡ್ಡ ಶಿಷ್ಯ ಪರಂಪರೆಯನ್ನೇ ಹೊಂದಿದ್ದವರು ವೆಂಕಟೇಶ್. ಅವರ ದಾರಿಯಲ್ಲೇ ಸಾಗಿದವರು ಶಂಕರ್- ಗಣೇಶ್, ಇಳಯರಾಜ, ವೈದಿ.

ನಾನು ಚಿತ್ರರಂಗಕ್ಕೆ ಕಾಲಿಟ್ಟ ನಂತರ ವೈದಿ ಮತ್ತು ಇಳಯರಾಜ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಅವರಿಬ್ಬರೂ ಜಿ.ಕೆ.ವಿ. ಅವರ ಮುಂದುವರಿದ ರೂಪಗಳಂತಿದ್ದರು. ವೆಂಕಟೇಶ್ ಅವರನ್ನು ಕುರಿತು ಅವರ ಪುತ್ರಿ ಕಲ್ಪನಾ ಮಂಜುನಾಥ್ ಮತ್ತು ಅಳಿಯ ಕೆ.ಮಂಜುನಾಥ್ ‘ತುಂಬಿದ ಕೊಡ’ ಎಂಬ ಸ್ಮರಣಗ್ರಂಥವನ್ನು ಆಚಾರ್ಯ ರಾಮಚಂದ್ರ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ. ಹಿರಿಯ ನಿರ್ದೇಶಕರ, ಪತ್ರಕರ್ತರ ಮತ್ತು ಶಕುಂತಲಾ ವೆಂಕಟೇಶ್ ಅವರ ನೆನಪಿನ ಸಂಗ್ರಹವನ್ನು ಒಳಗೊಂಡ ಉಪಯುಕ್ತ ಕೃತಿ ಇದು. ‘ತುಂಬಿದ ಕೊಡ’ ಜಿ.ಕೆ.ವಿ. ಅವರು ನಿರ್ಮಿಸಿದ ಚಿತ್ರದ ಹೆಸರೂ ಹೌದು. ಅದು ಅವರ ವ್ಯಕ್ತಿತ್ವವೂ ಹೌದು.

ಸಾಹಿತ್ಯ ಲೋಕ, ಅಕಡೆಮಿಕ್ ಆವರಣ ಏಕೆ ಚಿತ್ರಗೀತೆಗಳನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ? ಅವು ಜನಸಾಮಾನ್ಯರ ಖುಷಿಗೆ ಮೀಸಲಾದವು ಎಂದೆ? ಇದು ಸಲ್ಲದ ಉಪೇಕ್ಷೆ. ಶಾಲಾ ಕಾರ್ಯಕ್ರಮಗಳಾಗಲೀ, ಸಾರ್ವಜನಿಕ ಸಭೆಗಳಾಗಲೀ, ಮದುವೆ, ಆರತಕ್ಷತೆ ಮುಂತಾದ ಖಾಸಗಿ ಸಮಾರಂಭಗಳಾಗಲೀ ಚಿತ್ರಗೀತೆಗಳು ಬೇಕೇಬೇಕು. ಕೂಲಿಯವನೂ, ಧನಿಕನೂ ಚಿತ್ರಗೀತೆಗಳನ್ನು ಗಂಟಲಲ್ಲಿ ಧರಿಸಿರುತ್ತಾನೆ. ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಓದುವ ಎಷ್ಟೋ ಕವಿತೆಗಳು ರಸಹೀನವೂ  ಸಂವಹನಹೀನವೂ ಆಗಿರುತ್ತವೆ. ಬಡವ ಬಲ್ಲಿದರಾದಿಯಾಗಿ ಎಲ್ಲರ ಹೃದಯ ಹೊಕ್ಕು ತಣಿಸುವ ಚಲನಚಿತ್ರ ಗೀತಸಾಹಿತ್ಯವನ್ನು ಹುಸಿ ಗಾಂಭೀರ್ಯದಿಂದ ಕಡೆಗಣಿಸಲಾಗಿದೆ. ವರ್ತಮಾನದ ಹಲವು ಗೀತೆಗಳಲ್ಲಿ ಅಧ್ವಾನಗಳಿರಬಹುದು. ಆದರೆ ಚೇತೋಹಾರಿ, ಅರ್ಥಪೂರ್ಣ ಗೀತೆಗಳು ಮತ್ತು ರಾಗ ಸಂಯೋಜನೆಗಳು ಈಗ ಬರುತ್ತಿರುವ ಕಳೆಯ ಪ್ರವಾಹದ ನಡುವೆಯೂ ಇವೆ. ಅಂಥವುಗಳನ್ನು ಆಯ್ದು ಸಾಹಿತ್ಯ, ಸ್ವರ ಸಂಯೋಜನೆ ಕುರಿತು ಚರ್ಚಿಸಿ ಬೆಲೆ ಕಟ್ಟುವುದು ಅಗತ್ಯ. ಇದು ಅನೇಕ ಪ್ರತಿಭಾವಂತ ಚಿತ್ರ ಸಾಹಿತಿಗಳು ಮತ್ತು ಜಿ.ಕೆ.ವೆಂಕಟೇಶ್‌ರಂಥ ಸ್ವರ ಸಂಯೋಜಕರಿಗೆ ಗೌರವ ಸಲ್ಲಿಸಿದಂತೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT