ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು

Last Updated 1 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಸಾವು ಬದುಕಿಗಿಂತ ವಿಸ್ಮಯ. ಆ ವಿಸ್ಮಯವನ್ನು ಹಂಚಿಕೊಳ್ಳುವುದು ಕಷ್ಟ. ಅದನ್ನು ಬಿಟ್ಟು ಬೇರೆ ಏನಾದರೂ ಮಾತನಾಡು ಎನ್ನುತ್ತಾರೆ. ಕೆಲವರಿಗೆ ಅದು ಅಪಶಕುನ. ಕೆಲವರಿಗೆ ಅದು ಬಂದಾಗ ನೋಡಿಕೊಳ್ಳೋಣ ಎಂಬ ಉಪೇಕ್ಷೆ. ಸಾವಿನ ಬಗೆಗಿನ ಚರ್ಚೆಯನ್ನು ಮುಂದೂಡಿದಾಕ್ಷಣ, ಸಾವು ಮುಂದೂಡಲ್ಪಡುವುದಿಲ್ಲ. ಆದ್ದರಿಂದ ಅದನ್ನು ಊಟ, ತಿಂಡಿ, ವೇತನ, ಪೆಟ್ರೋಲ್ ಬೆಲೆ, ಆಧಾರ್ ಕಾರ್ಡ್, ಅನ್ನಭಾಗ್ಯ, ಅತ್ಯಾಚಾರದ ವಿಷಯಗಳನ್ನು ಮಾತನಾಡುವಷ್ಟೇ ಸಹಜವಾಗಿ ಮತ್ತು ವಿಶದವಾಗಿ ಮಾತನಾಡುವುದು ಸರಿ. ಸಾವಿನ ಬಗ್ಗೆ ಮಾತನಾಡುವುದು, ಯೋಚಿಸುವುದು ವಿರಕ್ತಿಯಲ್ಲ.

ಜೀವನವಿಮುಖತೆಯೂ ಅಲ್ಲ. ಅದು ಎದೆಯ ಬಾಗಿಲಿಗೆ ಬಂದಾಗ ಯೋಚಿಸಲು ಪುರುಸೊತ್ತು ಇರುವುದಿಲ್ಲ. ಕೈಕಾಲು ಗಟ್ಟಿಯಿದ್ದಾಗ, ದುಡಿಯುವ ಶಕ್ತಿ ಇದ್ದಾಗ ಆ ಬಗ್ಗೆ ಆಳವಾಗಿ ಚಿಂತಿಸಿ ಒಂದು ನಿರ್ಧಾರಕ್ಕೆ ಬರುವುದು ಉತ್ತಮ. ಅದರಿಂದ ಏನು ಲಾಭ ಎನ್ನುವುದು ಸಿನಿಕತನ. ಎಲ್ಲ ಚಿಂತನೆಗಳೂ ಲಾಭದಾಯಕವಾಗಬೇಕಿಲ್ಲ. ನಾನು ತಿಳಿದಂತೆ “ನನ್ನ ಸಾವು” ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನಿಟ್ಟು ಯಾವ ಗಣ್ಯರೂ ಪ್ರಬಂಧ ಮಂಡಿಸಿಲ್ಲ. ಸಾವಿನ ಬಗ್ಗೆ ಯೋಚಿಸಿದರೆ ಬದುಕಿನ ಉತ್ಸಾಹ, ಪ್ರೀತಿ ಕಡಿಮೆಯಾಗುತ್ತದೆ ಎಂಬುದು ಸುಳ್ಳು. ಜೀವನ ಪ್ರೀತಿಗೆ, ಸಾವಿನ ನೆನಪು ಚಿಮ್ಮುಗೋಲಾಗಬಹುದು. ನಾವು ಸತ್ತು ಹೋಗುತ್ತೇವೆ, ತಿರುಗಿ ಬರುವುದಿಲ್ಲ ಎಂದು ಖಚಿತವಾಗು ವುದರಿಂದಲೇ ಬದುಕಿನ ಮೌಲ್ಯ ಹೆಚ್ಚುತ್ತದೆ. ಇಲ್ಲಿ ಒಳ್ಳೆಯ ಯೋಚನೆ, ಒಳ್ಳೆಯ ಕೆಲಸ ಮಾಡಲೇ ಸಮಯ ಸಾಕಾಗುವುದಿಲ್ಲ-– ಇನ್ನು ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡುವುದಕ್ಕೆ ಸಮಯವೆಲ್ಲಿದೆ ಎಂಬ ನೈತಿಕ ಸಮಯಪ್ರಜ್ಞೆ ಮೂಡಿಸುವ ಶಕ್ತಿ ಸಾವಿಗಿದೆ.

ಪುನರ್ಜನ್ಮದ ಪರಿಕಲ್ಪನೆ ತೀವ್ರ ದುರಾಶೆಯಿಂದ ಹುಟ್ಟಿದ್ದಿರಬೇಕು. ಇದು ನೆಲದ ಮೋಹ ಬಿಡಲಾಗದ ಮನಸ್ಸು ಕಟ್ಟಿಕೊಂಡ ಭರವಸೆಯ ಕತೆಗಳಂತೆ ತೋರುತ್ತದೆ. ಸಾವಿನ ನಂತರದ ಸ್ಥಿತಿ ಏನು ಎಂದರೆ ಅದು ಹುಟ್ಟಿನ ಮುನ್ನಾ ಸ್ಥಿತಿಯೇ. ಸಾವೆಂಬುದು ಒಂದು ಕಾನೂನೇ ಹೊರತು ಶಿಕ್ಷೆಯಲ್ಲ. ಆದರೆ ಯಾರೂ ತಪ್ಪಿಸಿಕೊಳ್ಳಲಾಗದ ಕಾನೂನು. ಸಾವನ್ನು ಅರ್ಥೈಸಲು ಅಸಂಖ್ಯ ವಾದಗಳು, ಮೀಮಾಂಸೆಗಳು, ಜಿಜ್ಞಾಸೆಗಳು, ವ್ಯಾಖ್ಯೆಗಳು ಇವೆ.

ಭಾವುಕತೆ, ನಿರ್ಭಾವುಕತೆ, ಧಾರ್ಮಿಕತೆ, ವೈಜ್ಞಾನಿಕತೆ, ಕಡುವೈಚಾರಿಕತೆ, ಅಥವಾ ಹಾಸ್ಯ ಪ್ರಜ್ಞೆಯಿಂದ ಕೂಡಿದ ಒಂದು ತಮಾಷೆಯ ನೋಟ- ಯಾವ ಮಾರ್ಗದಲ್ಲೇ ಪ್ರಯತ್ನಿಸಿದರೂ, ಯಾವ ಪಟ್ಟು ಹಾಕಿದರೂ ಸಾವು ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ. ಮನುಷ್ಯ ತನ್ನ ಜೀವಿತದಲ್ಲಿ ತಣಿಸಿಕೊಳ್ಳಲಾಗದ ಕುತೂಹಲ ಎಂದರೆ ಸಾವು. ಅದು ಏಕಮುಖ ಸಂಚಾರದ ಮಾರ್ಗ. ಹೊರಗೆ ನಿಂತು ಒಳಗೇನಿದೆ ಎಂದು ಊಹಿಸಿದಂತೆ. ಹೀಗೆ ತಿಳಿದಂಥ, ಹೊಳೆದಂಥ ಮಾತುಗಳಿಂದ ಸಾವನ್ನು ಗೆಲ್ಲುವ ಕತೆಗಳು ಹುಟ್ಟಿಕೊಂಡಿವೆ. ಯಮನೊಂದಿಗೆ ಚತುರ ವಾದ ಮಂಡಿಸಿ ಸಾವಿತ್ರಿ ಗಂಡನ ಸಾವನ್ನು ಗೆದ್ದಳು ಎನ್ನುತ್ತೇವೆ.

ಆದರೆ ಅವಳು ಗಿಟ್ಟಿಸಿದ್ದು ಆಯುಷ್ಯದ ವಿಸ್ತರಣೆ ಮಾತ್ರ. ಆಕಾಶದಲ್ಲಿ ನಕ್ಷತ್ರವಾಗಿ ಶಾಶ್ವತವಾಗಿ ಫಳಫಳನೆ ಹೊಳೆಯಬೇಕಾದವರೂ ಮೊದಲು ಸತ್ತುಹೋಗಬೇಕು. ಸತ್ತ ಮೇಲೆ ನಕ್ಷತ್ರವಾಗಿ ಹೊಳೆದರೇನು? ಗೊಬ್ಬರವಾಗಿ ಬಿದ್ದುಕೊಂಡಿದ್ದರೇನು? ಆಯ್ಕೆಯ ಅವಕಾಶ ಬಂದಲ್ಲಿ ನಾನು ಗೊಬ್ಬರವಾಗುವ ಅವಕಾಶಕ್ಕೇ ಅರ್ಜಿ ಸಲ್ಲಿಸುತ್ತೇನೆ. ಅದರಿಂದ ಒಂದು ಗಿಡವಾದರೂ ಹುಟ್ಟೀತು. ಹೂ ಹಣ್ಣು ಬಿಟ್ಟೀತು. ನಕ್ಷತ್ರಗಳು ಏನು ಕಿಸಿಯುತ್ತವೆ ?
*
ಇತ್ತೀಚೆಗೆ ಐರ್ಲೆಂಡ್‌ಗೆ ಹೋಗಿದ್ದೆ. ಅಲ್ಲಿನ ಡಬ್ಲಿನ್ ನಗರದಲ್ಲಿ ಆಸ್ಕರ್ ವೈಲ್ಡ್‌ನ ಮನೆ ಇದೆ. ಕುಹಕ, ಕುಚೋದ್ಯ, ವಕ್ರದೃಷ್ಟಿ, ವ್ಯಂಗ್ಯ ಈ ಗುಣಗಳಿಗೆಲ್ಲ ಖ್ಯಾತನಾಗಿದ್ದ ಆಸ್ಕರ್ ವೈಲ್ಡ್‌ನ ಮನೆಯನ್ನು ನೋಡಬೇಕೆನಿಸಿತು. ಮನೆ ಎದುರು ಅವನ ಪ್ರತಿಮೆಯೂ ವಕ್ರನೋಟ ಬೀರುತ್ತಿತ್ತು. ಆದರೆ ಈ ಕಿಡಿಗೇಡಿ ಸಾವಿನ ಬಗ್ಗೆ ಹೇಳಿದ್ದ ಒಂದು ಅಮೂಲ್ಯ ಮಾತನ್ನು ಅಲ್ಲಿ ಓದಿದೆ: Death must be so beautiful, to lie on the soft brown earth, with the grasses waving above one’s head, and listen to the silence. To have an yesterday, and no tomorrow. To forget time, to forgive life, to be at peace. ಬದುಕನ್ನು ಅಪಾರ ಗೇಲಿ ಮಾಡುತ್ತಿದ್ದ ಆಸ್ಕರ್ ವೈಲ್ಡ್, ಸಾವಿನ ಶೂನ್ಯತೆಯಲ್ಲಿ, ಕಾಲಾತೀತವಾದ ಶಾಂತ ಸ್ಥಿತಿಯಲ್ಲಿ ಸೌಂದರ್ಯವನ್ನು ಶೋಧಿಸುತ್ತಾನೆ.

ಸಾವು ಜೀವವನ್ನು ನೋಯಿಸುವುದಿಲ್ಲ. ಬದುಕಷ್ಟೇ ಜೀವವನ್ನು ಅಪಾರ ಯಾತನೆಗೆ ಒಳಪಡಿಸುವಂಥದ್ದು. ಯಾತನೆಯಿಂದ ಬಿಡುಗಡೆಗೊಳ್ಳುವ ನಿರಾಳತೆಯೇ ಸಾವು. ಸಾವಿಗೆ ಹೆದರುವುದು ಅಸಮರ್ಥನೀಯ. ಉತ್ಕಟವಾದ ನೋವಿನಿಂದ ಬಿಡುಗಡೆ ಕೊಡುವ ಮರಣವು ನಿರಂತರ, ನಿಶ್ಶಬ್ದ ಜೋಗುಳ ಹಾಡುತ್ತಾ ತೊಡೆಯ ಮೇಲೆ ಮಲಗಿಸಿಕೊಳ್ಳುವ ತಾಯಿಯಂತೆ. ಯಾವ ಸಾವೂ ಅಕಾಲಿಕವಲ್ಲ. ಅಂದಂದೆ ಹುಟ್ಟಿತ್ತು-, ಅಂದಂದೆ ಹೊಂದಿತ್ತು ಅನ್ನುತ್ತಾರೆ ಬಸವಣ್ಣ. ಸಾವನ್ನು ತುಂಬಲಾರದ ನಷ್ಟ ಎಂದು ಉಲ್ಲೇಖಿಸುವುದು ತಪ್ಪು. ಬದುಕಿದ್ದಾಗ ನಮ್ಮ ಚೈತನ್ಯದೊಳಗೆ ಒಂದೊಂದೇ ಕಳೆದುಹೋಗುವುದು ನಿಜವಾದ ನಷ್ಟ. ಅದನ್ನೇ ಚಾಪ್ಲಿನ್ ಬೇರೊಂದು ಅರ್ಥದಲ್ಲಿ ನೀವು ನಗದೆ ಇದ್ದ ದಿನ ವ್ಯರ್ಥ ಅನ್ನುತ್ತಾನೆ. ಕತ್ತೆತ್ತಿ ನೋಡಲಾರದವನಿಗೆ ಕಾಮನ ಬಿಲ್ಲು ಕಾಣುವುದಿಲ್ಲ ಎನ್ನುತ್ತಾನೆ.

ಭಾರತೀಯ ಲೇಖಕರಲ್ಲಿ ಸಾವನ್ನು ಕುರಿತು ವೈನೋದಿಕ ಪ್ರಜ್ಞೆಯಿಂದ ಬರೆದವರಲ್ಲಿ ಖುಷವಂತ್ ಸಿಂಗ್ ಮುಖ್ಯರು. ತಮ್ಮ ಶ್ರದ್ಧಾಂಜಲಿಯನ್ನು ತಾವೇ ಬರೆದುಕೊಂಡವರು. ತಮ್ಮ ಇಪ್ಪತ್ತನೇ ವಯಸ್ಸಿಗೆ ಬರೆದ Posthumous ನಲ್ಲಿ ತಮ್ಮ ಸಾವನ್ನು, ಅದರ ಸುತ್ತ ಜನರಾಡುವ ಕೃತಕ ಡಂಭಾಚಾರಗಳನ್ನು ವಿಡಂಬಿಸಿದ್ದಾರೆ. ಸಾವಿನೆದುರು ನಡೆಯುವ ಬದುಕಿನ ಒಳವ್ಯಾಪಾರಗಳು ತುಂಬಾ ಸ್ವಾರಸ್ಯಕರವಾಗಿವೆ. ಎಂಥ ಗಂಭೀರ ಸನ್ನಿವೇಶವನ್ನೂ ತಮ್ಮ ವಿಟ್‌ನಿಂದ ಡಿಫ್ಯೂಸ್ ಮಾಡಬಲ್ಲ ಕೀಟಲೆ ಪ್ರವೃತ್ತಿ. ಈ ಸರದಾರಜಿ ಸಾವನ್ನೂ ಸುಮ್ಮನೆ ಇರಗೊಟ್ಟಿಲ್ಲ.

ಸಾವಿನ ವಿಸ್ಮಯದ ಹುಡುಕಾಟದಲ್ಲಿದ್ದಾಗ ಖುಷವಂತ್ ಸಿಂಗ್‌ರ Death at my doorstep ಎಂಬ ಪುಸ್ತಕ ಕಣ್ಣಿಗೆ ಬಿತ್ತು. ಪ್ರಥಮಾರ್ಧದಲ್ಲಿ ಸಾವನ್ನು ಕುರಿತ ವಿಶ್ಲೇಷಣೆಗಳಿವೆ. ಉತ್ತರಾರ್ಧದಲ್ಲಿ ಜಗತ್ತಿನ ಮುಖ್ಯ ವ್ಯಕ್ತಿಗಳ ಶ್ರದ್ಧಾಂಜಲಿಗಳಿವೆ. ಅವರ ಪ್ರೀತಿಯ ನಾಯಿ ಸಿಂಬಾ ಬಗ್ಗೆ ಕೂಡಾ. ಸಾವಿನ ಸುತ್ತ ಗಸ್ತು ಹೊಡೆಯುತ್ತ ಪಕಪಕನೆ ನಗಿಸುತ್ತ ಗಾಢ ಮೌನಕ್ಕೆಳಸುವ ಅನೇಕ ಹೃದಯಸ್ಪರ್ಶಿ ಘಟನೆಗಳಿವೆ. ದಲೈಲಾಮ, ಆಚಾರ್ಯ ರಜನೀಶ್, ಬಿರ್ಲಾ, ವಿ.ಪಿ.ಸಿಂಗ್ ಇಂಥವರನ್ನು ಇಕ್ಕಟ್ಟಿಗೆ ಸಿಕ್ಕಿಸಿ, ಛೇಡಿಸಿ, ತನಗೆ ಬೇಕಾದ ಉತ್ತರವನ್ನೇ ಅವರ ಬಾಯಿಂದ ಹೇಳಿಸುವುದರಲ್ಲಿ ನಿಪುಣ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿ.ಪಿ.ಸಿಂಗ್ ಅವರನ್ನು ಕೊನೆಯ ದಿನಗಳಲ್ಲಿ ಭೇಟಿ ಮಾಡುತ್ತಾರೆ. ನೀವು ದೇವರನ್ನು ನಂಬುತ್ತೀರಾ? ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ಬರುತ್ತದೆ. ನೀವು ಪ್ರಾರ್ಥನೆ ಮಾಡುತ್ತೀರಾ? ಎಂಬ ಪ್ರಶ್ನೆಗೂ ಅದೇ ಉತ್ತರ. ಆದರೆ ನಿಮ್ಮ ಬೆರಳಲ್ಲಿ ಪವಿತ್ರ ಹರಳಿನ ಉಂಗುರ, ಕೊರಳಲ್ಲಿ ರುದ್ರಾಕ್ಷ ಇದೆಯಲ್ಲ? ಎಂದು ಕೇಳಿದಾಗ ವಿ.ಪಿ.ಸಿಂಗ್ ತಡವರಿಸುತ್ತಾ ನನ್ನ ಮಗ ತಂದುಕೊಟ್ಟಿದ್ದಾನೆ, ಅವನಿಗಾಗಿ ಹಾಕಿಕೊಂಡಿದ್ದೇನೆ ಎನ್ನುತ್ತಾರೆ! ಸಾವು ಇರುವುದರಿಂದಲೇ ದೇವರಿಗೆ ಅಸ್ತಿತ್ವ, ಬೆಲೆ. ಸಾವೇ ಇಲ್ಲದಿದ್ದರೆ ದೇವರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ದೇವರಿಲ್ಲ ಎಂದು ವಾದಿಸಬಹುದು. ಆದರೆ ಸಾವಿಲ್ಲ ಎಂದು ಯಾರೂ ವಾದಿಸಲಾರರು. ಸಾವು ಇರುವುದರಿಂದಲೇ ದೇವರು, ಧರ್ಮ ಇತ್ಯಾದಿ ರಗಳೆಗಳು ಮನುಕುಲಕ್ಕೆ ಅಮರಿಕೊಂಡಿವೆ.

ತಟಕ್ಕನೆ ಬರುವ ಸಾವನ್ನು ಎಲ್ಲರೂ ಬಯಸುತ್ತಾರೆ. ಕೆಲವರಿಗೆ ಮಾತ್ರ ಸಾವು ಎದುರಿಗೆ ಬಂದು ನಿಂತು ಯೋಚಿಸಲು ಸಮಯ ಕೊಡುತ್ತದೆ. ಗಲ್ಲಿಗೇರುವವನ ಮನಸ್ಥಿತಿಯೇನು? ಭುಟ್ಟೋ ಕೊನೆಯ ಕ್ಷಣಗಳನ್ನು ಖುಷವಂತ್‌ಸಿಂಗ್ ಹಿಡಿದಿಟ್ಟಿದ್ದಾರೆ. ಕೊನೆಯದಾಗಿ ತಂದೆಯನ್ನು ಒಮ್ಮೆ ಅಪ್ಪಿಕೊಳ್ಳಲು, ಅವನ ಪಾದಸ್ಪರ್ಶಿಸಲೂ ಸಹ ಜೈಲಿನ ಅಧಿಕಾರಿಗಳು ಬೆನಜೀರ್ ಭುಟ್ಟೋಗೆ ಅವಕಾಶ ನೀಡುವುದಿಲ್ಲ.

ನಾನು ಮುಲ್ಲಾನಂತೆ ಸಾಯಲಾರೆ. ಗಡ್ಡ ಬೋಳಿಸಲು ಬಿಸಿನೀರು ಮತ್ತು ಶೇವಿಂಗ್ ಕಿಟ್ ಕೊಡಿ ಎನ್ನುತ್ತಾನೆ ಭುಟ್ಟೋ. ಶೇವಿಂಗ್ ಮುಗಿಸಿ ಕನ್ನಡಿ ನೋಡಿಕೊಳ್ಳುತ್ತಾ ತನ್ನನ್ನು ತಾನು ಅಣಕಿಸಿಕೊಳ್ಳುತ್ತಾ ನಾನೀಗ ತೃತೀಯ ಜಗತ್ತಿನ ನಾಯಕನಂತೆ ಕಾಣುತ್ತಿದ್ದೇನೆ ಎಂದು ವ್ಯಂಗ್ಯವಾಗಿ ಹೇಳುತ್ತಾನೆ. ಮಗಳ ಆರ್ತನಾದ, ಹೆಂಡತಿಯ ಕಣ್ಣೀರು, ಪಕ್ಷದ ಕಾರ್ಯಕರ್ತರ ಬೇಡಿಕೆ, ವಕೀಲ ಯಾಹ್ಯಾ ಭಕ್ತಿಯಾರ್‌ನ ವಕಾಲತ್ತು ಯಾವುದೂ ಭುಟ್ಟೋನ ಜೀವ ಉಳಿಸುವುದಿಲ್ಲ. ಒಮ್ಮೆ ಪಾಕಿಸ್ತಾನದ ಅಧ್ಯಕ್ಷನಾಗಿದ್ದವನು ಸಾಮಾನ್ಯ ಖೈದಿಯಂತೆ ಅಸಹಾಯಕನಾಗಿ ನೇಣುಗಂಬವೇರುತ್ತಾನೆ. ಕೊಂದವರುಳಿದರೆ ಕೂಡಲ ಸಂಗಮದೇವ?

ದುರಂತ ಕೃತಿಗಳಿಗೆ ಖ್ಯಾತನಾದ ಶೇಕ್ಸ್‌ಪಿಯರ್ ಸಾವನ್ನೂ ಪ್ರೇಮವನ್ನೂ ಸಮೀಕರಿಸುತ್ತಾನೆ. ಪ್ರಸಿದ್ಧ ನಾಟಕ ರೋಮಿಯೋ ಜೂಲಿಯೆಟ್‌ನ ನಾಲ್ಕನೆಯ ಅಂಕದ ಐದನೆಯ ದೃಶ್ಯದಲ್ಲಿರುವ Death lies on her, like an untimely frost opon the sweetest flower of all the field ಎಂಬ ಉದ್ಗಾರವೇ ಇದಕ್ಕೆ ಸಾಕ್ಷಿ. ಸಾವಿನ ನಂತರ ಏನು ಉಳಿಯುತ್ತದೆ ಎಂಬುದು ಒಂದು ಪ್ರಶ್ನೆಯಾದರೆ, ಏನಾದರೂ ಉಳಿಯಬೇಕೇಕೆ ಎನ್ನುವುದು ಅಷ್ಟೇ ಮುಖ್ಯವಾದ ಇನ್ನೊಂದು ಪ್ರಶ್ನೆ.
*
ಅದು ಹುಡುಗುತನವೋ, ಸಾವಿನ ಭಯವೋ, ಅವಿವೇಕವೋ ಗೊತ್ತಿಲ್ಲ. ಪ್ರಿಯಾ ಎಂಬ ನನ್ನ ಸುಂದರ ಸ್ಕೂಟರ್‌ನ ಸ್ಟೆಪ್ನಿಯ ಕವರ್ ಮೇಲೆ ಸಾವು ಎಂದು ಬರೆದುಕೊಂಡಿದ್ದೆ. ಬೆಂಗಳೂರಿಗೆ ಬಂದ ಹೊಸತು. ಹಿಂದಿನಿಂದ ವೇಗವಾಗಿ ಅಟ್ಟಿಸಿಕೊಂಡು ಬರುವ ಟ್ರಾಫಿಕ್‌ಗೆ ಅದು ಎಚ್ಚರಿಕೆಯಂತಿತ್ತು. ನಮ್ಮ ಬೆನ್ನ ಹಿಂದಿರುವ ಸಾವಿನ ಸಂಕೇತದಂತಿತ್ತು. ಜನರ ಪ್ರಶ್ನೆಗಳಿಂದ ರೋಸಿ ಹೋಗಿ, ಸಾವಿನ ಮುದ್ರೆಯನ್ನು ಮನಸ್ಸಿನಲ್ಲಿ ಉಳಿಸಿಕೊಂಡು ಸ್ಟೆಪ್ನಿಯ ಮೇಲಿಂದ ಅಳಿಸಿದೆ.

ತನ್ನ ಸಮಾಧಿಯ ಮೇಲಿನ ಬರಹವನ್ನು ಖುಷವಂತ್ ಸಿಂಗ್ ತಾವೇ ಹೀಗೆ ಬರೆದುಕೊಂಡಿದ್ದಾರೆ :
Here lies one who spared neither man or God. Waste not your tears on him. he was sod. Writing nasty things he regarded as great fun. Thank the Lord he is dead, this son of a gun.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT