ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಬದುಕಿನ ನಡುವಿನ ಗೆರೆ

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ಇದು ಒಬ್ಬ ಪ್ರವಾಸಿ ಬರೆದ ಕಥೆ.
ಒಂದು ಪರಿವಾರದ ಜನ ರಜೆ ಕಳೆಯಲೆಂದು ಗೋವಾಕ್ಕೆ ಹೋದರು. ಪ್ರತಿದಿನದಂತೆ ಅಂದೆಯೂ ಬೆಳಿಗ್ಗೆ ಸಮುದ್ರತೀರಕ್ಕೆ ಬಂದು ನಿಂತರು. ಪರಿವಾರದವರೆಲ್ಲ ದಂಡೆಯ ಮೇಲೆ ಕುಳಿತು ಸುಂದರ ದೃಶ್ಯವನ್ನು ಆಸ್ವಾದಿಸುತ್ತಿರುವಾಗ ಮನೆಯ ಹಿರಿಯರು ಸಮುದ್ರದ ನೀರಿಗಿಳಿದರು. ನಿಧಾನಕ್ಕೆ ಮುಂದೆ ಸಾಗುತ್ತ ಎದೆ ಮಟ್ಟ ನೀರು ಬರುವವರೆಗೆ ನಡೆದು ನಿಂತರು. ದಂಡೆಯ ಮೇಲಿದ್ದ ಪರಿವಾರದವರು ಅವರನ್ನೇ ನೋಡುತ್ತಿದ್ದರು.

ಆ ಕ್ಷಣದಲ್ಲಿ ಘಟನೆ ನಡೆದೇ ಹೋಯಿತು. ಒಳತೆರೆಯೊಂದು ನುಗ್ಗಿ ಬಂದು ಇವರನ್ನು ಒಳಗೆ ಎಳೆದುಕೊಂಡು ಬಿಟ್ಟಿತು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಅವರನ್ನು ನೀರಿನ ಸೆಳೆತ ದೂರದೂರಕ್ಕೆ ಎಳೆದುಕೊಂಡು ಹೋಗುತ್ತಿತ್ತು. ಕೆಳಗೆ ನೆಲ ಸಿಕ್ಕುತ್ತದೆಯೋ ಎಂದು ನೋಡಿದರೆ ತಾವು ವಿಪರೀತ ಆಳಕ್ಕೆ ಬಂದಿದ್ದರ ಅರಿವಾಯಿತು. ತೀರದ ಕಡೆಗೆ ನೋಡಿದರೆ ಅಲ್ಲಿದ್ದ ಜನ ಚಿಕ್ಕಚಿಕ್ಕ ಬೊಂಬೆಗಳ ಹಾಗೆ ಕಾಣುತ್ತಿದ್ದಾರೆ. ಯಜಮಾನರು ಜೋರಾಗಿ ಅರಚಿದರು, ಹತ್ತಾರು ಬಾರಿ ಶಕ್ತಿ ಹಾಕಿ ಕಿರುಚಿದರು. ಯಾವ ಪ್ರಯೋಜನವೂ ಆಗಲಿಲ್ಲ. ಇನ್ನು ಕಿರುಚಿಕೊಂಡರೆ ಇರುವಷ್ಟು ಶಕ್ತಿಯೂ ಕಳೆದುಹೋಗುತ್ತದೆ ಎಂದು ತಿಳಿದು ಸುಮ್ಮನಾದರು. ಆ ಕ್ಷಣದ ಭಯಂಕರತೆ ಅವರನ್ನು ಮರಗಟ್ಟಿಸಿಬಿಟ್ಟಿತ್ತು.

ತೀರದಲ್ಲಿದ್ದ ಯಾರೂ ಇವರ ಬಳಿಗೆ ಈಜಿ ಬರುವಂತಿರಲಿಲ್ಲ. ಹತ್ತಿರ ಯಾವ ನಾವೆಗಳೂ ಇರಲಿಲ್ಲ. ಮುಂಜಾವು ಆಗಿದ್ದರಿಂದ ಹೆಚ್ಚು ಜನರೂ ತೀರದ ಮೇಲಿಲ್ಲ. ಪ್ರಯತ್ನ ಮಾಡದ ಹೊರತು ಗತಿಯಿಲ್ಲವೆಂದು ಭಾವಿಸಿ ತೀರದೆಡೆಗೆ ಈಜತೊಡಗಿದರು. ಒಂದೆರಡು ಕ್ಷಣಗಳ ನಂತರ ಅವರಿಗೆ ಅರಿವಾಯಿತು ತಾವು ಪ್ರತಿ ಪ್ರಯತ್ನದೊಂದಿಗೆ ಹಿಂದೆ ಹಿಂದೆ ಹೋಗುತ್ತಿದ್ದೇನೆ ಎಂದು. ನೀರಿನ ಒಳಸೆಳೆತ ಹೆಚ್ಚಾಗಿತ್ತು. ಪ್ರಚಂಡ ಶಕ್ತಿಯ ವಿರುದ್ಧ ತಮ್ಮ ದೇಹಶಕ್ತಿ ಯಾವ ಸಾಟಿಯೂ ಅಲ್ಲವೆಂಬ ಅರಿವಾಯಿತು.

ಆ ಕ್ಷಣದಲ್ಲಿ ಅವರ ಕಣ್ಣಮುಂದೆ ತಮ್ಮ ಪ್ರೀತಿಯ ಹೆಂಡತಿ, ಮಕ್ಕಳ ಚಿತ್ರ ತೇಲಿಬಂತು. ತೀರದ ಮೇಲಿದ್ದ ಅವರು ಎಷ್ಟು ಗಾಬರಿಯಾಗಿದ್ದಾರೋ, ದುಃಖಿತರಾಗಿದ್ದಾರೋ? ಅವರೂ ಏನಾದರೂ ಪ್ರಯತ್ನ ಮಾಡುತ್ತಿರಬಹುದು. ಯಜಮಾನರ ಕಣ್ಣ ಮುಂದೆ ತಾವು ಇನ್ನು ಕೆಲವೇ ಕ್ಷಣಗಳಲ್ಲಿ ಹೆಣವಾಗಿಬಿಡುವ ಚಿತ್ರ ಬಂತು. ಮೀನುಗಳಿಂದ ಕಚ್ಚಿ ಕಚ್ಚಿ ಉಳಿದ ದೇಹ ತೀರವನ್ನು ತಲುಪಿದಾಗ ತಮ್ಮ ಪರಿವಾರದವರಿಗೆ ಎಷ್ಟು ಆಘಾತವಾಗಬಹುದು ಎಂದು ಕಲ್ಪಸಿದಾಗ ಅವರ ಕಣ್ಣು ತುಂಬಿ ಬಂದವು. ಆ ಕಣ್ಣೀರು ಉಪ್ಪಿನ ನೀರಿನಲ್ಲಿ ಕರಗಿಹೋದವು.

ಆದರೆ ಪರಿವಾರದವರ ವಿಚಾರ ಬಂದೊಡನೆ ದೇಹಕ್ಕೆ ಸ್ವಲ್ಪ ಹೆಚ್ಚಿ ಶಕ್ತಿ ಬಂದಂತೆನಿಸಿತು. ದೇಹದಲ್ಲಿದ್ದ ಉಳಿದ ಚೂರು ಶಕ್ತಿಯನ್ನು ಹಾಕಿ ಮತ್ತೆ ತೀರದೆಡೆಗೆ ಈಜಲು ಪ್ರಯತ್ನಿಸಿದರು. ಬಾಯಿಯಲ್ಲಿ ಬಂದ ಪ್ರತಿ ಹನಿ ಉಪ್ಪು ನೀರಿಗೆ ಸಾವಿನ ರುಚಿ ಬಂದಿತ್ತು.
ಅದೊಂದು ಯೋಚನೆ ಬಂತು. ಇದುವರೆಗೂ ಸಮುದ್ರತೀರಕ್ಕೆ ತಲುಪಲು ನೇರವಾಗಿ ಈಜುತ್ತಿದ್ದರು. ಈಗ ಸ್ವಲ್ಪ ನಿಧಾನವಾಗಿ ತೆರೆಗಳನ್ನು ಗಮನಿಸಿ ದೇಹವನ್ನು ಅಡ್ಡವಾಗಿ ತಿರುಗಿಸಿದರು. ಅಂದರೆ ಈಗ ದೇಹ ತೆರೆಗಳಿಗೆ  ವಿರುದ್ಧವಾಗಿರದೇ ಸಮಾಂತರವಾಗಿತ್ತು. ಜೋರಾಗಿ ಈಜುವುದು ಬೇಕಿರಲಿಲ್ಲ. ಕೇವಲ ಉಸಿರು ಬಿಗಿ ಹಿಡಿದು ತೇಲಿದರೆ ಸಾಕು. ಹತ್ತು ನಿಮಿಷಗಳಲ್ಲಿ ತೀರದ ಮೇಲಿನ ಜನ ಸ್ಪಷ್ಟವಾಗಿ ಕಾಣತೊಡಗಿದರು. ಮತ್ತೈದು ನಿಮಿಷಗಳಲ್ಲಿ ಅವರಿಗೂ ತಾವು ಕಂಡಿರಬೇಕು. ಅಷ್ಟರಲ್ಲಿ ನೆಲಕ್ಕೆ ಕಾಲು ಹತ್ತಿತು. ಒಂದಷ್ಟು ಬಲಿಷ್ಠ ಹುಡುಗರು ಬಂದು ಇವರನ್ನು ನಿಧಾನಕ್ಕೆ ಎಳೆದುಕೊಂಡು ದಡಕ್ಕೆ ಬಂದರು. ಕಣ್ಣೀರು ಸುರಿಸುತ್ತಿದ್ದ ಪತ್ನಿ, ಪುತ್ರರು ಬಂದು ತಬ್ಬಿಕೊಂಡರು. ವೈದ್ಯರು ಬಂದು ಪರೀಕ್ಷೆ ಮಾಡಿದರು ಇವರು ಮೃತ್ಯುವಿನ ದವಡೆಯಿಂದ ಹೊರಬಂದು ಮೃತ್ಯುಂಜಯರಾಗಿದ್ದರು.

ಅಂದಿನಿಂದ ಅವರು ಪೂರ್ತಿಯಾಗಿ ಬದಲಾದ ವ್ಯಕ್ತಿಯಾಗಿದ್ದರು. ಅವರಿಗೆ ಸಾವು ಮತ್ತು ಬದುಕಿನ ನಡುವಿನ ಅತ್ಯಂತ ತೆಳುವಾದ ಗೆರೆಯ ದರ್ಶನವಾಗಿತ್ತು. ಆದ್ದರಿಂದ ಅವರು ಜೀವನವನ್ನು ಹಿಂದೆಂದಿಗಿಂತಲೂ ಹೆಚ್ಚು ಪ್ರೀತಿಸಿದರು. ದ್ವೇಷಕ್ಕೆ ಅರ್ಥವಿಲ್ಲವೆಂಬುದು ತಿಳಿದಿತ್ತು, ಕೋಪವೆಂಬುದು ನಮ್ಮ ಅಶಕ್ತತೆ ಎಂಬ ಅರಿವಾಗಿತ್ತು, ಪ್ರೀತಿಯೇ ಅತ್ಯಂತ ಬಲಿಷ್ಠ ಶಕ್ತಿ ಎಂಬ ತಿಳುವಳಿಕೆ ಮೂಡಿತ್ತು.
ನಮಗೂ ಆ ತಿಳಿವು ಬರಲು ಅಂಥದೇ ಘಟನೆಯ ಅವಶ್ಯಕತೆಯಿಲ್ಲ. ಮತ್ತೊಬ್ಬರ ಜೀವನದಿಂದ ಪಾಠ ಕಲಿತರೆ ಸಾಕು, ಮಧುರತೆ ಬಂದೀತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT