ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪೂರ್ ಸಾಹಸಗಳು

Last Updated 8 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಸಿಂಗಪೂರ್‌ನಲ್ಲಿ ನಾವು ತಂಗಿದ್ದ ಹೋಟೆಲ್‌ನ ಎದುರಲ್ಲೇ ಕೋಮಲ್ ನಿವಾಸ್ ಎಂಬ ರೆಸ್ಟೋರೆಂಟ್ ಇತ್ತು. ಅಲ್ಲಿ ಅಂಬುಜಾ ತಾನೇ ಅಡುಗೆ ತಯಾರಿಸುತ್ತಿದ್ದಳು. ಅಲ್ಲೂ ನಮ್ಮ ತಂಡದವರಿಗೆ ಅವಳ ಕೈರುಚಿ ಸವಿಯುವ ಭಾಗ್ಯ.

`ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಚಿತ್ರದ ಹೈಲೈಟ್‌ಗಳಲ್ಲಿ ಎತ್ತರದ ಬಿಲ್ಡಿಂಗ್ ಮೇಲೆ ನಡೆಯುವ ಫೈಟಿಂಗ್ ಕೂಡ ಒಂದು. ಅದನ್ನು ನಾವು ಬಹಳ ಕಷ್ಟಪಟ್ಟು ಚಿತ್ರೀಕರಿಸಿದೆವು. ಶಾಮಸುಂದರ್ ಎಂಬ ಸ್ಟಂಟ್ ಮಾಸ್ಟರ್ ಆಗ ತಮಿಳಿನಲ್ಲಿ ಬಹಳ ಹೆಸರುವಾಸಿ.

ಎಂ.ಜಿ.ಆರ್. ನಟಿಸಿದ್ದ `ರಿಕ್ಷಾಕಾರನ್~ ಚಿತ್ರದಲ್ಲಿ ಅವರು ಸಂಯೋಜನೆ ಮಾಡಿದ್ದ ಸಾಹಸದ ದೃಶ್ಯಗಳನ್ನು ನೋಡಿ ರೋಮಾಂಚನಗೊಂಡಿದ್ದೆ. ಅವರಿಂದಲೇ ನನ್ನ ಕನ್ನಡ ಚಿತ್ರದಲ್ಲೂ ಸ್ಟಂಟ್‌ಗಳನ್ನು ಸಂಯೋಜಿಸಬೇಕು ಎಂದು ಆಗಲೇ ಯೋಚನೆ ಹುಟ್ಟಿತ್ತು. ಕನ್ನಡದಲ್ಲಿ `ವಿಜಯನಗರದ ವೀರಪುತ್ರ~ಕ್ಕೆ ಮಾತ್ರ ಅವರು ಸಾಹಸಗಳನ್ನು ಸಂಯೋಜಿಸಿದ್ದರು.

ಅದನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಅವರು ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡಿದ್ದು ನನ್ನ ಚಿತ್ರಗಳಿಗೇ. `ಕೌಬಾಯ್ ಕುಳ್ಳ~, `ಕುಳ್ಳ ಏಜೆಂಟ್ 000~, `ಕಿಟ್ಟು ಪುಟ್ಟು~, `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಚಿತ್ರಗಳ ಸಾಹಸ ದೃಶ್ಯಗಳನ್ನು ಈಗಲೂ ಕೆಲವರು ಇಷ್ಟಪಡಲು ಅವರೇ ಕಾರಣ.

`ಮದ್ರಾಸ್ ಸ್ಟಂಟ್ ಯೂನಿಯನ್~ ಅಧ್ಯಕ್ಷರಾಗಿದ್ದ ಅವರು ಮೂಲತಃ ಸೌಂಡ್ ಎಂಜಿನಿಯರ್. ತಮ್ಮ ಜೀವಿತದ ಕೊನೆಗಾಲದಲ್ಲಿ ಅವರು ಬೆಂಗಳೂರಿನಲ್ಲೇ ಇದ್ದರು. ಅವರಿಗೆ ನಾನೆಂದರೆ ತುಂಬಾ ಇಷ್ಟ. ಹಾಗಾಗಿ ನನಗೆ ಆಪ್ತರಾಗಿದ್ದರು.

ಪ್ರಸಾದ್ ಲ್ಯಾಬ್‌ನ ಮಾಲೀಕರಾದ ರಮೇಶ್ ಪ್ರಸಾದ್ ಅವರನ್ನು ನಾನು ನೆನೆಯಲೇಬೇಕು. ಸಾಮಾನ್ಯವಾಗಿ ಬೇರೆ ಸ್ಥಳಗಳಿಗೆ ಕ್ಯಾಮೆರಾ ಬಾಡಿಗೆಗೆ ಪಡೆದು ಹೋಗುವಾಗ ಲ್ಯಾಬ್‌ನ ಪ್ರತಿನಿಧಿಯಾಗಿ ಒಬ್ಬರು ಬರುತ್ತಾರೆ. ಕ್ಯಾಮೆರಾ ಫೋಕಸ್ ಮಾಡುವುದು ಅವರೇ.

ಪ್ರಸಾದ್ ಲ್ಯಾಬ್‌ನ ಆ `ಫೋಕಸ್‌ಮನ್~ಗೆ ಇನ್ನೂ ಪಾಸ್‌ಪೋರ್ಟ್ ಸಿಕ್ಕಿರಲಿಲ್ಲ. ಉಳಿದವರ ಪಾಸ್‌ಪೋರ್ಟ್, ವೀಸಾ ಸಿದ್ಧವಾಗಿತ್ತು. ನಾನು ರಮೇಶ್ ಪ್ರಸಾದ್ ಅವರಿಗೆ ಪರಿಸ್ಥಿತಿಯನ್ನು ತಿಳಿಸಿದೆ.
 
ನಮ್ಮ ಚಿತ್ರದ ಸಿನಿಮಾಟೋಗ್ರಫರ್ ರಾಜಾರಾಂ ಹಾಗೂ ನನ್ನ ಮೇಲೆ ನಂಬಿಕೆ ಇಟ್ಟು ಅವರು ಕ್ಯಾಮೆರಾ ಕೊಟ್ಟರು. ಆ ಕಾಲದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದ್ದ ಕ್ಯಾಮೆರಾಗಳನ್ನು ಯಾರೂ ನಿರ್ಮಾಪಕರನ್ನು ನಂಬಿ ಸುಮ್ಮನೆ ಕೊಡುತ್ತಿರಲಿಲ್ಲ.
 
ನಾವು ಸಿಂಗಪೂರ್‌ಗೆ ಹೋಗಿ ಎರಡು ದಿನಗಳ ನಂತರ ಫೋಕಸ್ ಮಾಡುವ ಕ್ಯಾಮೆರಾ ಸಹಾಯಕ ನಮ್ಮ ತಂಡ ಸೇರಿಕೊಂಡ. ಅದುವರೆಗೆ ರಾಜಾರಾಂ ಅವರೇ ಫೋಕಸ್ ಮಾಡಿಕೊಳ್ಳುತ್ತಿದ್ದರು.

ಸಿಂಗಪೂರ್‌ನಿಂದ ಬಸ್ ಮಾಡಿಕೊಂಡು ಮಲೇಷ್ಯಾಗೆ ಹೋದೆವು. ಅಲ್ಲಿ ಹೆಲಿಕಾಪ್ಟರನ್ನು ಬಾಡಿಗೆಗೆ ಪಡೆದೆ. ಜೆಂಟಿಂಗ್ ಐಲ್ಯಾಂಡ್ ಎಂಬ ಜಾಗ ಅದು. ಚಿತ್ರೀಕರಣದ ವೇಳೆಯಾದರೂ ನಿರ್ದೇಶಕ ರಾಜೇಂದ್ರನ್ ಪತ್ತೆ ಇಲ್ಲ. ಅವರಿಗೆ ಕ್ಲಬ್‌ಗಳಲ್ಲಿ ಸ್ಕಿಲ್ ಗೇಮ್‌ಗಳನ್ನು ಆಡುವ, ಬಾಕ್ಸಿಂಗ್ ಸ್ಪರ್ಧೆಗಳನ್ನು ನೋಡುವ ಶೋಕಿ.
 
ಆ ದಿನ ಕ್ಲಬ್ ಒಂದರ ಟೀವಿಯಲ್ಲಿ ಮೊಹಮ್ಮದ್ ಅಲಿ ಬಾಕ್ಸಿಂಗ್ ಪ್ರಸಾರವಾಗುತ್ತಿತ್ತು. ಅದನ್ನು ನೋಡುತ್ತಾ ಮೈಮರೆತ ಅವರು ಚಿತ್ರೀಕರಣದ ಹೊತ್ತಾದರೂ ಬರಲೇ ಇಲ್ಲ. ನನಗೆ ಕೋಪ ನೆತ್ತಿಗೇರಿತು. ಅವರಿಲ್ಲದೆಯೇ ಚಿತ್ರೀಕರಣವನ್ನು ನಾನೇ ಪ್ರಾರಂಭಿಸಿದೆ.

ಯಾರೋ ರಾಜೇಂದ್ರನ್‌ಗೆ ವಿಷಯ ಮುಟ್ಟಿಸಿದರು. ಅವನು ಓಡೋಡಿ ಬಂದ. ನನಗೆ ಮೊದಲೇ ಕೋಪವಿದ್ದಿದ್ದರಿಂದ ಚೆನ್ನಾಗಿ ತರಾಟೆಗೆ ತೆಗೆದುಕೊಂಡೆ. ಅವನು ಅಂಬುಜಾ ಹತ್ತಿರ ಹೋಗಿ ತನ್ನ ಅಳಲು ತೋಡಿಕೊಂಡ. ತನ್ನನ್ನು ಬಿಟ್ಟು ನಾನೇ ಚಿತ್ರೀಕರಣ ನಡೆಸಿದ್ದರಿಂದ ಅವನೊಳಗಿನ ನಿರ್ದೇಶಕನಿಗೆ ಪೆಟ್ಟು ಬಿದ್ದಂತಾಗಿತ್ತು.

ಅದನ್ನೆಲ್ಲಾ ಅಂಬುಜಾ ಹತ್ತಿರ ಹೇಳಿಕೊಂಡು ಅತ್ತ. ಆಮೇಲೆ ಅವನನ್ನು ಸಮಾಧಾನ ಪಡಿಸಲು ರಾತ್ರಿ `ಗುಂಡಿನ ಪಾರ್ಟಿ~ ಏರ್ಪಾಟು ಮಾಡಿದೆ. ಮತ್ತೆ ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ನಡೆಯಿತು.

ಚಿತ್ರೀಕರಣದ ವಿಷಯದಲ್ಲಿ ನಾನು ತುಂಬಾ ಕಟ್ಟುನಿಟ್ಟಿನ ಮನುಷ್ಯ. ಎಷ್ಟೊಂದು ಜನರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದೆ. ಒಬ್ಬರ ಆರೋಗ್ಯ ಕೈಕೊಟ್ಟರೂ ಅಂದುಕೊಂಡ ಕೆಲಸ ಅವಧಿಯಲ್ಲಿ ನಡೆಯುವುದಿಲ್ಲವೆಂಬುದು ನನ್ನ ಆತಂಕ.

ಹೆಲಿಕಾಪ್ಟರನ್ನು ಬೇರೆ ಬಾಡಿಗೆಗೆ ಪಡೆದಿದ್ದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯಬೇಕೆಂಬುದು ನನ್ನ ಉದ್ದೇಶವಾಗಿತ್ತು. ಹಾಗಾಗಿ ರಾಜೇಂದ್ರನ್ ಮೇಲೆ ಕೂಗಾಡಿದೆ. ನನಗೆ ಮುಂಗೋಪ ಎಂದು ಅನೇಕರು ದೂರುತ್ತಾರೆ. ಆ ಕೋಪಕ್ಕೆ ಸಿನಿಮಾ ಮೇಲಿನ ನನ್ನ ಪ್ರೀತಿಯಷ್ಟೆ ಕಾರಣ.

ಮೂವತ್ತು ದಿನಗಳಲ್ಲೇ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಇಡೀ ಚಿತ್ರವನ್ನು ಮುಗಿಸಿದೆ. ವಾಪಸ್ ನಮ್ಮ ದೇಶಕ್ಕೆ ಬಂದಮೇಲೆ `ಪ್ಯಾಚ್ ಶಾಟ್~ ಚಿತ್ರೀಕರಿಸುವುದಾಗಲೀ ರೀಶೂಟ್ ಮಾಡುವುದಾಗಲೀ ಏನೂ ಇರಲಿಲ್ಲ. ಸಾಮಾನ್ಯವಾಗಿ ನಾನು ಅಂಥ ಕೆಲಸದ ವಿರೋಧಿ. ರಾತ್ರೋರಾತ್ರಿ ರೀರೆಕಾರ್ಡಿಂಗ್ ಮಾಡಿಸಿ ಚಿತ್ರವನ್ನು ಅಂದುಕೊಂಡ ಅವಧಿಗೇ ಸಿದ್ಧಪಡಿಸಿದೆ.

ಪಲ್ಲವಿ ಚಿತ್ರಮಂದಿರದಲ್ಲಿ ಒಂದು `ಪ್ರೀಮಿಯರ್ ಶೋ~ ಹಾಕಿದೆ. ಮಯೂರ ಮೂವೀಸ್ ಎಂಬ ಹೆಸರಾಂತ ಚಿತ್ರ ವಿತರಕ ಸಂಸ್ಥೆಯ ಬಾಳಿಗಾ ಬ್ರದರ್ಸ್‌ ಆ ಸಿನಿಮಾ ನೋಡಲು ಬಂದಿದ್ದರು. ಸಿನಿಮಾ ಮುಗಿಯುವ ಮೊದಲೇ ಅವರು ನನ್ನನ್ನು ಹೊರಗೆ ಕರೆದರು. ನಾನು ಪೂರ್ತಿ ಸಿನಿಮಾ ನೋಡುವಂತೆ ವಿನಂತಿಸಿಕೊಂಡರೂ ಅವರು ಕಾಯಲಿಲ್ಲ. ಕಾರಿನಲ್ಲಿ ನನ್ನನ್ನೂ ಹತ್ತಿಸಿಕೊಂಡು ಕಬ್ಬನ್‌ಪಾರ್ಕ್ ಕಡೆಗೆ ಹೊರಟರು.

ಅಲ್ಲಿ ಕಾರು ನಿಲ್ಲಿಸಿ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಚಿತ್ರದ ವಿತರಣೆ ಹಕ್ಕನ್ನು ತಮಗೇ ನೀಡುವಂತೆ ದುಂಬಾಲುಬಿದ್ದರು. ಒಳ್ಳೆಯ ಹಣ ಕೊಡುವುದಾಗಿಯೂ ಮಾತನಾಡಿದರು.
 
ನನ್ನ ಮನಸ್ಸು ಆ ಕ್ಷಣಕ್ಕೆ ಅವರ ಕಡೆ ವಾಲಿತೇನೋ? ಯಾವುದಕ್ಕೂ ಒಂದು ಮಾತು ಕೇಳೋಣ ಎಂದು ಆಮೇಲೆ ವೀರಾಸ್ವಾಮಿಯವರಿಗೆ ಫೋನ್ ಮಾಡಿದೆ. ಅವರು ಸಿಟ್ಟಿನಿಂದ ನನ್ನ ಮೇಲೆ ಕೂಗಾಡಿದರು. `ಒದ್ದುಬಿಡುತ್ತೇನೆ ಮಗನೇ~ ಎಂದರು.
 
ತಾವು ಹಣಕಾಸು ನೆರವು ನೀಡಿದ ಚಿತ್ರವನ್ನು ಬೇರೆಯವರಿಗೆ ಯಾಕೆ ಕೊಡುತ್ತೀಯಾ ಎಂದು ಬೆವರಿಳಿಸಿದರು. ಅದು ಚೆನ್ನಾಗಿಯೇ ದುಡ್ಡು ಮಾಡುತ್ತದೆಂಬ ಭರವಸೆಯನ್ನೂ ಕೊಟ್ಟರು. ನಾನು ಬಾಳಿಗಾ ಬ್ರದರ್ಸ್‌ಗೆ ಸಿನಿಮಾ ವಿತರಣೆಯ ಹಕ್ಕನ್ನು ಕೊಡಲಿಲ್ಲ.
ನಾವೇ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಬಿಡುಗಡೆ ಮಾಡಿದೆವು.

ಅದು ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ಡಬ್ ಆಯಿತು. ಶಿವಾಜಿ ಗಣೇಶನ್ ತರಹದ ಸೂಪರ್‌ಸ್ಟಾರ್‌ಗಳಿಗೆ ಪ್ರೊಜೆಕ್ಷನ್ ಹಾಕಿ ಡಬ್ ಮಾಡಿದ ಚಿತ್ರವನ್ನು ತೋರಿಸಿದ್ದೆವು. ಅವರು ಕೂಡ ಮೆಚ್ಚಿಕೊಂಡರು. ಸಿನಿಮಾ ವೀರಾಸ್ವಾಮಿಯವರು ಹೇಳಿದಂತೆಯೇ ಚೆನ್ನಾಗಿ ಓಡಿತು.

ಸಿಂಗಪೂರ್‌ಗೆ ನಾವು ಹೋದಾಗ ನಮ್ಮ ಜೊತೆ ರವಿಚಂದ್ರನ್ ಕೂಡ ಬಂದಿದ್ದ. ಅವನು ಆಗಿನ್ನೂ ಹದಿನೈದು ಹದಿನಾರು ವರ್ಷದ ಹುಡುಗ. ಅವನು ಮುಂದೆ ಸೂಪರ್‌ಸ್ಟಾರ್ ಆಗುತ್ತಾನೆ, ಕನ್ನಡ ಚಿತ್ರರಂಗಕ್ಕೆ ಅದ್ದೂರಿತನವನ್ನು, ಸ್ಟೈಲನ್ನು ತರುತ್ತಾನೆ ಎಂಬ ಕಲ್ಪನೆ ನನಗಿರಲಿಲ್ಲ. ಒಂದು ವೇಳೆ ಹಾಗೆ ಅನ್ನಿಸಿದ್ದರೆ ಅವನನ್ನು ನಾನೇ ಅಡ್ವಾನ್ಸ್ ಬುಕ್ ಮಾಡಿಕೊಳ್ಳುತ್ತಿದ್ದೆನೋ ಏನೋ?

ಸಿಂಗಪೂರ್‌ನಲ್ಲಿ ನಾವು ಚಿತ್ರೀಕರಣ ಮುಗಿಸಿ ಹೊರಟಾಗ ಅಲ್ಲಿನ ಕೆಲವರೆಲ್ಲಾ ಸೇರಿ ನಮಗೆ ಪ್ರೀತಿಯಿಂದ ಸನ್ಮಾನ ಮಾಡಿದರು. ಹಾರ ಹಾಕಿ ಖುಷಿಪಟ್ಟರು, ಖುಷಿ ಕೊಟ್ಟರು. ಆದರೆ, ಬೆಂಗಳೂರಿಗೆ ಬಂದಮೇಲೆ ನಮ್ಮನ್ನು ಯಾರೂ ಗುರುತಿಸಲೇ ಇಲ್ಲ.
ಆಗಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತು. ಸುಮ್ಮನೆ ಅಮೆರಿಕ ಪ್ರವಾಸಕ್ಕೆ ಹೋಗಿಬಂದ ಕೆಲವರನ್ನು ಸನ್ಮಾನಿಸಿದ ಮಂಡಳಿ ನಮ್ಮ ಹೊಸ ಯತ್ನಕ್ಕೆ ಬೆನ್ನುತಟ್ಟಲೇ ಇಲ್ಲ. `ದ್ವಾರಕೀಶ್, ವಿಷ್ಣುವರ್ಧನ್‌ನನ್ನು ಫಾರಿನ್‌ಗೆ ಕರೆದುಕೊಂಡು ಹೋಗಿ ಬಂದನಂತೆ~ ಎಂದು ಕೆಲವರು ಗೇಲಿ ಮಾಡುವ ದನಿಯಲ್ಲಿ ಮಾತನಾಡಿದರು.

ಹೊಟ್ಟೆಕಿಚ್ಚು ಪಟ್ಟವರೂ ಇದ್ದರು. ಸಿನಿಮಾ ಬಿಡುಗಡೆಯಾಗಿ ಅದು ಚೆನ್ನಾಗಿ ಹೋದಮೇಲೆ ನಾನು ಮಾಡಿದ ಕೆಲಸ ಅನೇಕರಿಗೆ ಹಿಡಿಸಿತು. ಆಗ ಶಹಬ್ಬಾಸ್ ಎಂದು ಅನೇಕರು ಹೇಳಿದ ಮೇಲೆ ನನಗೆ ತುಸು ಸಮಾಧಾನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT