ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಇನ್ನೂ ರಾಗಿ ಬೀಸಬೇಕು

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಸಕಲೇಶಪುರದಿಂದ ಬೆಂಗಳೂರಿಗೆ ಬರುತ್ತಿದ್ದೆ. ನೆಲಮಂಗಲ-–ಬೆಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ ಎಡಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗುಮುಖದ ದೊಡ್ಡ ಚಿತ್ರವಿರುವ ಹೋರ್ಡಿಂಗ್ ನೋಡಿದೆ. ಅದರಲ್ಲಿ ‘ಜನಮೆಚ್ಚಿದ ಮುಖ್ಯಮಂತ್ರಿ’ ಎಂಬ ತಲೆಬರಹವೂ ಇದೆ.

ಜೊತೆಯಲ್ಲಿದ್ದ ನನ್ನ ಮಗ ಶ್ರೀರಾಮ್‌ಗೆ ಸಿದ್ದ ರಾಮಯ್ಯನವರ ಚಿತ್ರ ತೋರಿಸಿ ‘ನಿನಗೆ ಏನನಿ ಸುತ್ತದೆ?’ ಎಂದೆ. ಅವನೊಬ್ಬ ಹವ್ಯಾಸಿ ಛಾಯಾ ಗ್ರಾಹಕ. ಹಾಗಾಗಿ ಆ ಫೋಟೋ ಕುರಿತು ಅವನ ಅಭಿಪ್ರಾಯ ಕೇಳಿದ್ದೆ. ಆದರೆ ಅವನು ಹೇಳಿದ ಉತ್ತರವೇ ಬೇರೆಯಾಗಿತ್ತು. ‘ಅಪ್ಪ, Be happy, we have a chief minister who can laugh heartily’ ಎಂದ.

‘ಹೌದಲ್ಲವೆ’ ಎಂದು ಈವರೆಗಿನ, ನನ್ನ ಸೇವಾ ಅವಧಿಯಲ್ಲಿ ಪರಿಚಿತರಿದ್ದ ಎಲ್ಲ ಮುಖ್ಯಮಂತ್ರಿಗಳನ್ನು ನೆನಪಿಸಿಕೊಂಡೆ. ಅದರಲ್ಲೂ ಎಚ್.ಡಿ. ದೇವೇಗೌಡ ಮತ್ತು ಬಿ.ಎಸ್. ಯಡಿಯೂರಪ್ಪ ಅವರಂತೂ ನಕ್ಕಿದ್ದೇ ವಿರಳ. ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ ನಗುತ್ತಿದ್ದರೂ ಅದು ಹಿತಮಿತವಾದ ಆಕರ್ಷಕ ನಗು, ಸಂದರ್ಭೋಚಿತ ನಗು. ಒಮ್ಮೊಮ್ಮೆ ಛಾಯಾಗ್ರಾಹಕರಿಗೆ ಮಾತ್ರ ಅದು ಸೀಮಿತವಾಗಿರುತ್ತಿತ್ತು. ಅದೇ ಜೆ.ಎಚ್. ಪಟೇಲರ ನಗುವಿನಲ್ಲಿ ಸದಾ ಒಂದು ತುಂಟತನ ಇರುತ್ತಿತ್ತು. ಆರ್. ಗುಂಡೂರಾವ್ ಸಾಮಾನ್ಯವಾಗಿ ತಮ್ಮ ಮೇಲೆ ತಾವೇ ಜೋಕ್ ಮಾಡಿಕೊಂಡು ನಗುತ್ತಿದ್ದರು.

ವೀರಪ್ಪ ಮೊಯಿಲಿ ಮತ್ತು ಸದಾನಂದಗೌಡ ಅವರದು ದಕ್ಷಿಣ ಕನ್ನಡದ ದೇಶಾವರಿ ನಗು. ಎಚ್.ಡಿ. ಕುಮಾರಸ್ವಾಮಿ ‘ಏನ್ ಬ್ರದರ್, ಹೇಗಿದ್ದೀರಾ ಬ್ರದರ್’ ಎಂದು ನಗುತ್ತಾ ಸಂಕೋಚವಿಲ್ಲದೆ ಜನರೊಂದಿಗೆ ಬೆರೆಯುತ್ತಿದ್ದರು. ದೇವರಾಜ ಅರಸು ಅವರದು  ರಾಜಗಾಂಭೀರ್ಯ. ನಕ್ಕರೂ ಅವರ ಆತ್ಮೀಯ ಗೆಳೆಯರಿಗೆ ಮಾತ್ರ ಅದು ಸೀಮಿತ.

ಕರ್ನಾಟಕದ ಇದುವರೆಗಿನ ಮುಖ್ಯಮಂತ್ರಿಗಳು ತಮ್ಮ ವಿಶೇಷ ಕಾರ್ಯಕ್ರಮಗಳಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಉದಾಹರಣೆಗೆ ಅರಸು, ಭೂ ಸುಧಾರಣೆ ಕಾಯ್ದೆ ಜಾರಿ, ಮಲ ಹೊರುವ ಪದ್ಧತಿ ನಿಷೇಧ, ಸಾಲ ವಿಮುಕ್ತಿಯಂತಹ ಕಾರ್ಯಕ್ರಮಗಳಿಂದ ಹೆಸರುವಾಸಿಯಾದರು. ಗುಂಡೂರಾವ್, ಆಡಳಿತದಲ್ಲಿ ನಿಯಂತ್ರಣ ತಂದರು. ರಾಜ್ಯದಲ್ಲಿ ಹಲವಾರು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೂ ಕಾರಣರಾದರು.

ಹೆಗಡೆ, ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಆಡಳಿತ ವಿಕೇಂದ್ರೀಕರಣ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಹಂತದಲ್ಲಿ ಭದ್ರಗೊಳಿಸಿದರು. ಬಂಗಾರಪ್ಪ ಅವರ ಆಶ್ರಯ ಯೋಜನೆ, ಮೊಯಿಲಿ ಅವರ ಶಿಕ್ಷಣ ಕ್ಷೇತ್ರದ ಬದಲಾವಣೆಗಳು, ವೀರೇಂದ್ರ ಪಾಟೀಲರ ಅಬಕಾರಿ ಇಲಾಖೆ ಸುಧಾರಣಾ ಕ್ರಮ, ದೇವೇಗೌಡರ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮತ್ತು ಉಳಿದ ನೀರಾವರಿ ಯೋಜನೆ ಗಳ ಅನುಷ್ಠಾನ, ಕೃಷ್ಣ ಅವರ ಬೆಂಗಳೂರು ಮೂಲಸೌಕರ್ಯ ವೃದ್ಧಿ, ಐಟಿ–-ಬಿಟಿಗೆ ಪ್ರೋತ್ಸಾಹ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಯೂಟ, ‘ಯಶಸ್ವಿನಿ’ ಭೂಮಿ ಯೋಜನೆ ಸದಾ ನೆನಪಿನಲ್ಲಿ ಉಳಿಯುವಂಥವು.

ಕುಮಾರಸ್ವಾಮಿ, ಲಾಟರಿ-–ಸಾರಾಯಿ ನಿಷೇಧ, ರೈತರ ಸಾಲ ಮನ್ನಾ, ಜಾನಪದ ಜಾತ್ರೆ, ಗ್ರಾಮ ವಾಸ್ತವ್ಯ ದಿಂದ ಹೆಸರು ಪಡೆದರು. ಯಡಿಯೂರಪ್ಪ ಭಾಗ್ಯಲಕ್ಷ್ಮಿ ಬಾಂಡ್, ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವ ಮೂಲಕ ಜನಪ್ರಿಯವಾದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಜಾರಿಗೆ ತಂದ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನೆಗಳು ಕಡುಬಡವರಿಗೆ ಪೌಷ್ಟಿಕ ಆಹಾರದ ಕೊರತೆ ನೀಗಿಸಿದವು.

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಕೆಲವರು ದೇವರಾಜ ಅರಸು ಅವರಿಗೆ ಹೋಲಿಸುತ್ತಿರುವುದನ್ನು ಗಮನಿಸಿದ್ದೇನೆ. ಅವರಿಗೆ ಆ ರೀತಿ ಮಾಡಲು ಸಕಾರಣಗಳು ಇರಬಹುದು. ಸಿದ್ದರಾಮಯ್ಯ ಅವರ ಕಿವಿಗೆ ಈ ಹೋಲಿಕೆ ಹಿತಾನುಭವ ನೀಡಿರಬಹುದು. ಆದರೆ, ನನ್ನ ಅಭಿಪ್ರಾಯದಲ್ಲಿ ಆ ಹೋಲಿಕೆ ಸಮಂಜಸವಲ್ಲ. ಅರಸು ಅವರನ್ನು ನಾನು ಕಾಲೇಜು ದಿನಗಳಿಂದ ನೋಡಿದ್ದೆ.

ಅವರು ಸಿದ್ದರಾಮಯ್ಯ ಅವರಂತೆ ಕಡು ಬಡತನದಲ್ಲಿ ಬಂದವರಲ್ಲ. ಹೆಸರೇ ಸೂಚಿಸುವಂತೆ ಅವರು ಆಳುವ ಮನೆತನದವರು. ಅರಸು ಅವರಿಗಿದ್ದ ತುಂಬು ಮುಖ, ರಾಜ ಗಾಂಭೀರ್ಯ, ಠೀವಿ, ದರ್ಪವನ್ನು ಸಿದ್ದರಾಮಯ್ಯ ಅವರಲ್ಲಿ ಕಾಣಲು ಸಾಧ್ಯವಿಲ್ಲ. ಅರಸು ಅವರ ಬಾಯಲ್ಲಿ ಸದಾ ಹೊಗೆ ಸೂಸುತ್ತಿದ್ದ ಪೈಪ್ ಮತ್ತು ಅವರ ಆಪ್ತವಲಯದಲ್ಲಿದ್ದ ಕೆ.ಕೆ. ಮೂರ್ತಿ ಅವರಂತಹ ಗೆಳೆಯರ ಭಾಗ್ಯ ಸಿದ್ದರಾಮಯ್ಯ ಅವರಿಗಿಲ್ಲ.

ಅರಸು ಹಿಂದಿರುತ್ತಿದ್ದ ದ್ವಾರಕಾನಾಥ್ ಅವರಂತಹ ಭವಿಷ್ಯ ನುಡಿಯುವ ಜ್ಯೋತಿಷಿ ಗಳನ್ನು ಸಿದ್ದರಾಮಯ್ಯ ಹತ್ತಿರಕ್ಕೂ ಸೇರಿಸು ವುದಿಲ್ಲ. ಸ್ಕಾಟ್‌ಲ್ಯಾಂಡ್‌ನ ‘ರಾಯಲ್ ಸೆಲ್ಯೂಟ್’ ವಿಸ್ಕಿಯ ರಾಯಭಾರಿಯಂತಿದ್ದ ಅರಸು, ಅದನ್ನು ರಾಜ್ಯದ ಮನೆಮಾತಾಗುವಂತೆ ಮಾಡಿದ್ದರು. ಸಿದ್ದರಾಮಯ್ಯ ಏನಿದ್ದರೂ ನಾಟಿಕೋಳಿ ಸಾರು, ಉಪ್ಸಾರು ಮತ್ತು ರಾಗಿಮುದ್ದೆ ಪ್ರಿಯರು. ಅರಸು ಅವರು ರಾಜಕೀಯ ಚದುರಂಗದಾಟಕ್ಕೆ ಪ್ರಮುಖ ಜಾತಿಗಳನ್ನು ಒಡೆದು ಆಳಿದರೆಂಬ ರಾಜಕೀಯ ವಿಶ್ಲೇಷಣೆಗಳನ್ನು ಕೇಳಿದ್ದೇವೆ.

ಅವರು ಹಿಂದುಳಿದ ವರ್ಗಗಳ ಮೇಲೆ ಪ್ರೀತಿಯ ಮಳೆ ಸುರಿಸಿ ರಾಜಕೀಯ ಚಾತುರ್ಯ ಮೆರೆದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅರಸು ರಾಷ್ಟ್ರಮಟ್ಟದ ರಾಜಕಾರಣದ ಕನಸು ಕಂಡವರು. ಕಾಂಗ್ರೆಸ್ ಪಕ್ಷದ ಮನೆಯ ಮಗ. ಪಕ್ಷದ ಒಳ-ಹೊರಗುಗಳ ಸಂಪೂರ್ಣ ಪರಿಚಯವಿತ್ತು. ಹೈಕಮಾಂಡ್‌ನ ಹಲವು ನಾಯಕರು ಅರಸು ಅವರ ಮರ್ಜಿಯಲ್ಲಿದ್ದರು.

ಸ್ವತಃ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಹುಟ್ಟು ನೀಡಿದ ಚಿಕ್ಕಮಗಳೂರಿನ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲ್ಲಿಸುವಷ್ಟು ಸಾಮರ್ಥ್ಯ ಅವರಿಗಿತ್ತು. ಅಂದಿನ ಕಾಲದ ಎಲ್ಲ ಹಿರಿಯ ನಾಯಕರ ಸ್ನೇಹವೂ ಅವರಿಗಿತ್ತು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಮನೆ ಅಳಿಯ. ಅರಸು ಮನೆಯ ಮಗ. ಅಳಿಯನನ್ನು ಮನೆಯ ಮಗನಿಗೆ ಹೋಲಿಸುವುದು ಯಾವ ನ್ಯಾಯ?
ಅರಸು ಅವರ ಕಾಲದ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಮತ್ತು ತಲ್ಲಣ ಬೇರೆ ಬಗೆಯವು.

ಸಿದ್ದರಾಮಯ್ಯ ಅವರ ಅಧಿಕಾರದ ಕಾಲಘಟ್ಟವೇ ಬೇರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಜನರಲ್ಲಿ ಆಗ ಅಪರೂಪವಾಗಿದ್ದ ರಾಜಕೀಯ ಪ್ರಜ್ಞೆ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಜಾಗತೀಕರಣದ ಅಲೆ ಎಲ್ಲ ವರ್ಗಗಳಲ್ಲೂ ಬಡವರನ್ನು ಸೃಷ್ಟಿಸಿದೆ, ಎಲ್ಲ ವರ್ಗಗಳಲ್ಲೂ ಅವಕಾಶವಂಚಿತರಿದ್ದಾರೆ. ಆಗಿನಂತೆ ಈಗ ಒಡೆದು ಆಳುವ ರಾಜಕೀಯದ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯನವರು ಅರಸು ಅವರಾಗಲು ಇನ್ನೂ ಸಾಕಷ್ಟು ರಾಗಿ ಬೀಸಬೇಕು.

ಹಿಂದುಳಿದ ವರ್ಗದಿಂದ ಬಂದ ಸಿದ್ದರಾಮಯ್ಯ ಪರಿಶ್ರಮ ಮತ್ತು ರಾಜಕೀಯ ಹೋರಾಟದ ಮೂಲಕ ನಿಜನೆಲದ ನಾಯಕನಾಗಿ ಹೊರಹೊಮ್ಮಿದವರು. ಮುಖ್ಯಮಂತ್ರಿಯಾದ ತಕ್ಷಣ ಅವರು ಜಾರಿಗೆ ತಂದ ಯೋಜನೆಗಳು ಜನಪರವಾದವು.  ಒಂದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯಮಂತ್ರಿಗೆ ಸಲಹೆ ನೀಡಲು, ಹೊಸ, ಹೊಸ ಐಡಿಯಾ ಕೊಡಲು ಸಲಹೆಗಾರರ ತಂಡವೇ ಸೃಷ್ಟಿಯಾಗುತ್ತದೆ. ಸ್ವಜಾತಿ ನಾಯಕರು, ಮಠಾಧೀಶರು, ಸಾಹಿತಿಗಳು... ಹೀಗೆ ಪಟ್ಟಿ ಉದ್ದವಾಗಿ ಬೆಳೆಯುತ್ತದೆ.

ಹೊಸ ಸರ್ಕಾರ ಮಾಡಲೇಬೇಕಾದ ಕಾರ್ಯಕ್ರಮಗಳ ಬಗ್ಗೆ ಪುಂಖಾನುಪುಂಖವಾಗಿ ಹರಿಯುವ ಪುಕ್ಕಟೆ ಸಲಹೆಗಳಿಗೆ ಕೊನೆಯೇ ಇಲ್ಲ. ಕೇಳಲು ಇರುವುದು ಎರಡೇ ಕಿವಿಗಳು. ಹೇಳುವ ಬಾಯಿ ಗಳು ಸಾವಿರಾರು. ಯಾವ ಮುಖ್ಯಮಂತ್ರಿಗೂ ತಲೆಕೆಟ್ಟು ಹೋಗುವಷ್ಟು ಸಲಹೆಗಳು. ಹಲ ವಾರು ಬಾರಿ ಸ್ವತಃ ಮುಖ್ಯಮಂತ್ರಿಗಳು ಮಾಡ ಬೇಕು ಎಂದುಕೊಳ್ಳುವ ಕಾರ್ಯಕ್ರಮಗಳನ್ನೇ ಮಾಡಲು ಸಾಧ್ಯವಾಗುವುದಿಲ್ಲ.

ಎಲ್ಲ ಮುಖ್ಯಮಂತ್ರಿಗಳಿಗೆ ‘ರಾಜಗುರು’ಗಳಾಗಲು ಬಹಳಷ್ಟು ಜನ ಹಾತೊರೆಯುತ್ತಾರೆ. ನನ್ನ ಅನುಭವದಲ್ಲಿ ಹೇಳುವುದಾದರೆ ಇಂತಹ ‘ರಾಜಗುರು’ ಆಕಾಂಕ್ಷಿಗಳನ್ನು ಸಮರ್ಥವಾಗಿ ನಿಭಾಯಿಸಿದವರು ಕೃಷ್ಣ ಮತ್ತು ಪಟೇಲರು. ಯಾರಾದರೂ ಮಿತಿಯಿಲ್ಲದ ಸಲಹೆ ಕೊಡಲು ಪ್ರಾರಂಭಿಸಿದರೆ ಕೃಷ್ಣ, ಮುಳ್ಳಿನ ಕುರ್ಚಿ ಮೇಲೆ ಕುಳಿತಂತೆ ಗಾಬರಿಯಿಂದ ಎದ್ದು ಶೇಕ್ ಹ್ಯಾಂಡ್ ಕೊಟ್ಟು ಒಂದು ಮುಗುಳ್ನಗೆ ಬೀರುತ್ತಿದ್ದರು. ಬಂದವರು ಜಾಗ ಖಾಲಿ ಮಾಡದಿದ್ದರೆ ‘ಮತ್ತೆ ಭೇಟಿಯಾಗೋಣ’ ಎಂದು ಬೀಳ್ಕೊಟ್ಟು, ಸ್ವತಃ ಜಾಗ ಖಾಲಿ ಮಾಡುತ್ತಿದ್ದರು.

ಪಟೇಲರು ‘ರಾಜಗುರು’ಗಳ ಆಗಮನ ಆಗುತ್ತಿದ್ದಂತೆ ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು, ಮಗ ಮಹಿಮಾ ತಂದುಕೊಟ್ಟ ಅತ್ಯಾಧುನಿಕ ಸಲಕರಣೆಯಿಂದ ಸಂಗೀತ ಆಲಿಸುತ್ತಿದ್ದರು. ಬಂದವರಿಗೆ ಸನ್ನೆ ಮೂಲಕ ಕುಳಿತುಕೊಳ್ಳಲು ಹೇಳಿ ಮಾತನಾಡಲು ಬಿಡುತ್ತಿದ್ದರು. ಆಗಾಗ ‘ಹಾಂ ಊಂ’ ಎನ್ನುತ್ತಿದ್ದರು. ಇಂತಹ ಪ್ರಸಂಗಗಳಿಗೆ ನಾನು ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಕುತೂಹಲ ತಾಳಲಾರದೆ ‘ಏನ್ ಸರ್, ಅಷ್ಟೊಂದು ಜನ ಬಂದು ಮಾತಾಡಿ ಹೋಗ್ತಾರೆ. ಏನೂ ಹೇಳುವುದಿಲ್ಲ’ ಎಂದೆ.

‘ಅವರ ಮಾತು ಯಾರು ಕೇಳ್ತಾರೆ, ಕೇಳಿದರೆ ತಲೆಕೆಟ್ಟು ಹೋಗುತ್ತೆ. ಭೀಮಸೇನ್ ಜೋಶಿ ಸಂಗೀತ ಕೇಳ್ತಾ ಇದ್ದೆ’ ಎಂದು ಉತ್ತರಿಸಿದ್ದರು. ಒಮ್ಮೆ ಇಂತಹ ‘ಆತಿಥ್ಯ’ ಸ್ವೀಕರಿಸಿದವರು ಅವರ ಬಳಿಗೆ ಮತ್ತೆ ಸಲಹೆ ಕೊಡಲು ಬರುತ್ತಿರಲಿಲ್ಲ. ಮೊಯಿಲಿ, ಬಂದವರು ಹೇಳುತ್ತಿದ್ದನ್ನೆಲ್ಲ ತಮ್ಮ ಜೇಬಿನಲ್ಲಿ ಇರುತ್ತಿದ್ದ ಚಿಕ್ಕ ಪುಸ್ತಕ ತೆಗೆದು ನೋಟ್ ಮಾಡಿಕೊಳ್ಳುತ್ತಿದ್ದರು. ಅಂತಹ ಸಾವಿರಾರು ಪುಸ್ತಕಗಳು ಅವರ ಸಂಗ್ರಹದಲ್ಲಿ ಇರಬಹುದು. ಈಗ ಸಿದ್ದರಾಮಯ್ಯನವರ ಸರದಿ. ಅವರಿಗೂ ಸಲಹೆಗಳು ಬರುತ್ತಿವೆ. ನೌಕರರ ಸಮವಸ್ತ್ರ ಸಂಹಿತೆ, ಶಾಶ್ವತ ಸಾಂಸ್ಕೃತಿಕ ನೀತಿ, ಕಡು ಬಡವರಿಗೆ ಅಗ್ಗದ ಮದ್ಯ ಮೊದಲಾದವು.

ಸಿದ್ದರಾಮಯ್ಯನವರ ನಗುಮುಖದ ದೊಡ್ಡ ಭಿತ್ತಿಚಿತ್ರದ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಅವರು ಮುಖ್ಯಮಂತ್ರಿ ಆಕಾಂಕ್ಷಿಯಾಗಿ ಬಹಳ ದಿನ ಕಳೆದವರು. ಆ ಹುದ್ದೆಗೆ ಅವರು ಅರ್ಹರು ಮತ್ತು ಸಮರ್ಥರು. ಹೋರಾಟದಿಂದ ಅದನ್ನೀಗ ತಮ್ಮದಾಗಿಸಿಕೊಂಡಿದ್ದಾರೆ. ಈ ಪುಕ್ಕಟೆ ಸಲಹೆ ಮತ್ತು ‘ರಾಜಗುರು’ ಆಕಾಂಕ್ಷಿಗಳ ಬಗ್ಗೆ ಸರಿಯಾದ ತೀರ್ಮಾನ ಮಾಡುವಷ್ಟು ಸಮರ್ಥರು.

ನನ್ನ ಅನುಭವದಲ್ಲಿ ಮುಖ್ಯಮಂತ್ರಿಗಳ ಕಾರ್ಯ ನಿರ್ವಹಣೆಯಲ್ಲಿ ಅವರ ಕಚೇರಿ ಮತ್ತು ಸಚಿವಾಲಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಅರಸು ಅವಧಿಯಲ್ಲಿ ಜೆ.ಸಿ. ಲಿನ್–ಚಿರಂಜೀವಿ ಸಿಂಗ್ ಜೋಡಿ, ಹೆಗಡೆ ಅವಧಿಯಲ್ಲಿ -ವಿ. ಬಾಲಸುಬ್ರಮಣಿಯನ್–ಎಸ್.ವಿ. ರಂಗನಾಥ್ ಜೋಡಿ, ವೀರೇಂದ್ರ ಪಾಟೀಲರ ಅವಧಿಯಲ್ಲಿ ಪಿ.ಪಿ. ಪ್ರಭು, ಕೃಷ್ಣ ಅವರ ಅವಧಿಯಲ್ಲಿ ಎಸ್.ವಿ. ರಂಗನಾಥ್–-ಚಿರಂಜೀವಿ ಸಿಂಗ್ ಜೋಡಿ, ದೇವೇಗೌಡರ ಅವಧಿಯಲ್ಲಿ ಎಸ್. ಮೀನಾಕ್ಷಿ ಸುಂದರಂ ಅವರು ಮುಖ್ಯಮಂತ್ರಿ ಕಚೇರಿಯನ್ನು ದಕ್ಷತೆಯಿಂದ ನಿರ್ವಹಿಸಿದರು.

ಮುಖ್ಯಮಂತ್ರಿಗಳಿಗೆ ನಿಷ್ಪಕ್ಷಪಾತ ಸಲಹೆ ನೀಡಿ ಯಾವುದೇ ಅವಾಂತರ ಆಗದಂತೆ ನೋಡಿಕೊಂಡರು. ರಾಜ್ಯದಲ್ಲಿನ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯಮಂತ್ರಿ ಕಚೇರಿಗೆ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮತ್ತು ಸ್ವಾತಂತ್ರ್ಯ ಮುಖ್ಯಮಂತ್ರಿಗೆ ಇದೆ. ‘ಹೌದಪ್ಪ’ಗಳಿದ್ದರೆ ಮೊನ್ನೆ ಅದಂತೆ ಜಯದೇವ ಆಸ್ಪತ್ರೆ ನೇಮಕಾತಿ ಆದೇಶ ಹಿಂಪಡೆದ ಅವಾಂತರ, ಸಮವಸ್ತ್ರ ಸಂಹಿತೆ ಆದೇಶ ವಾಪಸು ಪಡೆಯುವ ಮುಜುಗರ ಆಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ಕಚೇರಿ ವಿಧಾನಸೌಧದಲ್ಲಿ ಉಳಿದ ಇಲಾಖೆಗಳಿಗೆ ಮಾದರಿಯಾಗಿರಬೇಕು. ಮಾರ್ಗದರ್ಶನ ಮಾಡುವ ನೈತಿಕತೆ ಇರಬೇಕು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೈಸೂರು ದಸರಾ ಆಚರಿಸುತ್ತಾರೆ. ರಾಜ ಮಹಾರಾಜರ ಗತ ವೈಭವ ನೆನಪಿಗೆ ತರುವ ಮಹೋತ್ಸವ ಅದು. ಆಗಿನ ಸಮೃದ್ಧಿ ಮತ್ತೆ ರಾಜ್ಯದಲ್ಲಿ ಮರುಕಳಿಸುವಂತಹ ಕೆಲಸಗಳನ್ನು ಅವರು ಮಾಡಬೇಕು.
ಸಿದ್ದರಾಮಯ್ಯನವರಿಗೆ ಮನತುಂಬಿ, ಬಾಯಿತುಂಬಾ ನಗಲು ಸಾಧ್ಯವಾಗಿದೆ. ಮುಖ್ಯಮಂತ್ರಿಯಾಗಿ ಗೆದ್ದ ಖುಷಿ ಅದರಲ್ಲಿದೆ. ಆ ನಗು ಅವರೊಬ್ಬರದಾಗದೆ ರಾಜ್ಯದ ಆರೂವರೆ ಕೋಟಿ ಜನರ ಮುಖದಲ್ಲಿ ಸ್ವಲ್ಪವಾದರೂ ಕಾಣುವಂತಾದರೆ ಅವರು ಹೋರಾಟ ಮಾಡಿ ಮುಖ್ಯಮಂತ್ರಿಯಾಗಿದ್ದು ಸಾರ್ಥಕವಾಗುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT