ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ ನಿತೀಶ್‌ ನಡೆ

Last Updated 29 ಜುಲೈ 2017, 19:30 IST
ಅಕ್ಷರ ಗಾತ್ರ

ನಿತೀಶ್‌ ಕುಮಾರ್‌ ಅವರ ಹಠಾತ್ತಾಗಿ ಬದಲಾದ ರಾಜಕೀಯ ನಡೆಯಲ್ಲಿ ದೀರ್ಘಾವಧಿ ಹಿತಾಸಕ್ತಿ ಬದಿಗಿಟ್ಟು, ಅಲ್ಪಾವಧಿಯಲ್ಲಿನ ಪರಿಣಾಮಗಳ ಬಗ್ಗೆಯೇ  ಅವರು ಹೆಚ್ಚು ಒತ್ತು ಕೊಟ್ಟಿರುವುದು ವೇದ್ಯವಾಗುತ್ತದೆ. ದೇಶ ಬಾಂಧವರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಪ್ರತಿಯಾಗಿ ನಾನೂ ಅವರಿಗೆ ಏನನ್ನಾದರೂ  ನೀಡಬೇಕೆಂಬ ಮನಸ್ಥಿತಿಯೇ ಇಲ್ಲದಿರುವುದು ಅವರ ಧೋರಣೆಯಲ್ಲಿ ಕಂಡು ಬರುತ್ತಿದೆ.’

ನಿತೀಶ್‌ ಕುಮಾರ್‌ ಮತ್ತು ಅವರ ಪಕ್ಷ ಸಾಮೂಹಿಕವಾಗಿ ಪಕ್ಷಾಂತರ ಮಾಡಿರುವುದರಿಂದ 2019ರ ಸಾರ್ವತ್ರಿಕ ಚುನಾವಣಾ ಫಲಿತಾಂಶದ ಮೇಲೆ ನರೇಂದ್ರ ಮತ್ತು ಅಮಿತ್ ಷಾ ತಮ್ಮ  ಮುದ್ರೆಯನ್ನು ಒತ್ತಿದಂತಾಗಿದೆ.  ಈ ಪ್ರತಿಪಾದನೆ ವಿರೋಧಿಸಿ ಮಾತನಾಡುವುದಾದರೆ, ಭಂಡ ಧೈರ್ಯ ಪ್ರದರ್ಶಿಸಬೇಕು ಇಲ್ಲವೆ ಬಿಹಾರದಲ್ಲಿ ಅಕ್ರಮವಾಗಿ ಮಾರಾಟವಾಗುವ  ಕಳ್ಳಬಟ್ಟಿ ಸೇವನೆ ಮಾಡಬೇಕಷ್ಟೆ.‌

ಸೈದ್ಧಾಂತಿಕವಾಗಿ ಭಿನ್ನವಾದ ಪಕ್ಷವೊಂದಕ್ಕೆ  ಇಡೀ ಪಕ್ಷವನ್ನೇ ತೆಗೆದುಕೊಂಡು ಹೋಗಿರುವ ನಿತೀಶ್‌ ಪಕ್ಷಾಂತರದ ನಿಜವಾದ ಪರಿಣಾಮಗಳು 2019ರ ಆಚೆಯೂ ಗೋಚರಿಸಲಿವೆ.

ದೇಶಿ ರಾಜಕಾರಣ ಮತ್ತು ಸಮಾಜದಲ್ಲಿನ ಬದಲಾವಣೆ ಮತ್ತು ಜನಾಭಿಪ್ರಾಯವನ್ನೂ ಈ ಪಕ್ಷಾಂತರವು ಸೂಚಿಸುತ್ತದೆ.   ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಮೇಲೆ ಹೊಂದಿದ ಹಿಡಿತ ಮತ್ತು  ಅಧಿಕಾರದ ಪ್ರಭಾವಳಿಗಿಂತ ಮಿಗಿಲಾದ ಅಧಿಕಾರಯುತ ಮತ್ತು ಯಶಸ್ವಿ ಹೊಸ ದೈತ್ಯ ರಾಜಕೀಯ ಶಕ್ತಿಯೊಂದರ ಉಗಮವಾಗಿದೆ ಎಂದೂ ಈ ಬೆಳವಣಿಗೆಯನ್ನು ಅರ್ಥೈಸಬಹುದು.

ಇಂದಿರಾ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಸತತ ಗೆಲುವು ಸಾಧಿಸಿತ್ತು.  ಪ್ರಬಲ ವಿರೋಧ ಪಕ್ಷಗಳು ಇಲ್ಲದ ಕಾರಣಕ್ಕೆ ಕಾಂಗ್ರೆಸ್‌ ಪಕ್ಷದ ಅಧಿಕಾರದ ಬೇರುಗಳು  ಆಳವಾಗಿ ಬೇರೂರಿದ್ದವು.
ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವಾಗ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು.  

ಪ್ರತಿಪಕ್ಷಗಳನ್ನು ಎದುರು ಹಾಕಿಕೊಳ್ಳುವುದರ ಜತೆಗೆ, ಪಕ್ಷದ ಒಳಗಿನ ವಿರೋಧಿಗಳ ವಿರುದ್ಧವೂ ಅವರು  ಸೆಣಸಬೇಕಾಗಿತ್ತು. ಈ ಸವಾಲಿನ ಜತೆಗೆ, ಬಹುದೊಡ್ಡ ಸಂಖ್ಯೆಯ ವೋಟ್‌ ಬ್ಯಾಂಕ್‌ನಲ್ಲಿನ ಸೈದ್ಧಾಂತಿಕ ಪ್ರತಿಕೂಲತೆಗಳನ್ನೂ ಎದುರಿಸಬೇಕಾಗಿತ್ತು.

ಈಗ ನರೇಂದ್ರ ಮೋದಿ ಮತ್ತು ಅವರ ಪಕ್ಷದ ಅಧ್ಯಕ್ಷ ಅಮಿತ್‌ ಷಾ ಅವರು ಇಂದಿರಾ ಗಾಂಧಿ ಅವರು ಕಾಂಗ್ರೆಸ್‌ ಪಕ್ಷದ ಮೇಲೆ ಹೊಂದಿದ್ದ ಹಿಡಿತಕ್ಕಿಂತ ಹೆಚ್ಚಿನ ನಿಯಂತ್ರಣ ಹೊಂದಿದ್ದಾರೆ.   1952ರ ನಂತರ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳ ಬಲವೂ ಗಮನಾರ್ಹವಾಗಿ ಕಡಿಮೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ರಾಜೀವ್‌ ಗಾಂಧಿ ಅವರ  ಅಧಿಕಾರಾವಧಿಯಲ್ಲಿ (1984–89ರಲ್ಲಿ ) ವಿರೋಧಿಗಳ ದನಿ ಗಮನಾರ್ಹವಾಗಿ ಕುಗ್ಗಿತ್ತು.

ಈಗ ಮಾಧ್ಯಮಗಳೂ ಪ್ರಭಾವಶಾಲಿ ಪಕ್ಷದ ಎದುರು ಸಂತಸದಿಂದಲೇ ಮೊಣಕಾಲೂರಿ ಕುಳಿತಿವೆ. ನೇಪಥ್ಯದಲ್ಲಿ ನಿಂತುಕೊಂಡು ಪಕ್ಷದ ಪರವಾಗಿ ಉಘೇ ಉಘೇ ಎನ್ನುತ್ತಿವೆ. ಗರಿಷ್ಠ ಮುಖಬೆಲೆಯ ನೋಟುಗಳು  ರದ್ದಾಗಿ ಒಂಬತ್ತು ತಿಂಗಳು ಕಳೆದರೂ ಬ್ಯಾಂಕ್‌ಗಳಲ್ಲಿ ಠೇವಣಿಯಾದ ನೋಟುಗಳನ್ನು ಎಣಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಇದುವರೆಗೂ ಸಾಧ್ಯವಾಗದಿರುವುದನ್ನು ಪ್ರಶ್ನಿಸಲೂ ಪ್ರತಿಪಕ್ಷಗಳು ಹೆದರುತ್ತಿವೆ.

ದೇಶಿ ಕ್ರಿಕೆಟ್‌ ಅನ್ನು ಸಮರ್ಥವಾಗಿ ನಿಭಾಯಿಸಲಿಕ್ಕಾಗದ ನ್ಯಾಯಾಂಗವು– ರಾಷ್ಟ್ರಗೀತೆ ಗೌರವಿಸುವ, ರಾಷ್ಟ್ರೀಯ ಹಾಡು ವಂದೇ ಮಾತರಂ ಹಾಡುವ ಬಗ್ಗೆ, ಯಮುನಾ ನದಿ ದಂಡೆಗುಂಟ ಬಹಿರ್ದೆಸೆ ಮಾಡಿದರೆ ₹5 ಸಾವಿರ ದಂಡ ವಿಧಿಸುವಂತಹ ತೀರ್ಪು ನೀಡುವುದರಲ್ಲಿ ಮುಳುಗಿದೆ.  ತನ್ನದೇ ಆದ ಸ್ವಾತಂತ್ರ್ಯ ರಕ್ಷಿಸಿಕೊಳ್ಳಲು ಸುಪ್ರೀಂಕೋರ್ಟ್‌, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ನಿರ್ಧಾರವನ್ನು ತಳ್ಳಿ ಹಾಕಿರುವುದು ಸಂವಿಧಾನ ಉಲ್ಲಂಘಿಸಿದ ಏಕೈಕ ನಿದರ್ಶನವಾಗಿದೆಯಷ್ಟೆ.

ನಿತೀಶ್‌ ಅವರ ಈ ಹಠಾತ್‌ ಪಕ್ಷಾಂತರ ಮತ್ತು ನರೇಂದ್ರ – ಅಮಿತ್‌ ಷಾ ಅವರ ಮೂರು ವರ್ಷಗಳ ಅಧಿಕಾರಾವಧಿಯ ನಂತರದ ದಿನಗಳಲ್ಲಿನ ರಾಜಕೀಯದ ಬಗ್ಗೆ ನಾವೀಗ ಹೆಚ್ಚು ಗಮನ ಹರಿಸಬೇಕಾಗಿದೆ. ಸದ್ಯಕ್ಕೆ ದೇಶದಲ್ಲಿ ಹೊಸ ಬಗೆಯ ರಾಜಕೀಯ ಹೊಂದಾಣಿಕೆ ಪ್ರವೃತ್ತಿ ಕಂಡು ಬರುತ್ತಿದೆ. ಕೆಲ ಉತ್ತಮ, ಕೆಲವು ಅಷ್ಟೇನೂ ಉತ್ತಮವಲ್ಲದ   ಚಿಂತನೆ, ಮೌಲ್ಯ, ನೈತಿಕತೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳು ಈಗ ಸತ್ತು ಹೋಗಿವೆ ಮತ್ತು ಅವುಗಳನ್ನು ಮಣ್ಣು ಮಾಡಲಾಗಿದೆ.

ದೇಶಿ ಮತದಾರರಲ್ಲಿ ಬಹುಸಂಖ್ಯಾತರಾಗಿರುವ ಹೊಸ ತಲೆಮಾರಿನವರಲ್ಲಿ ಜಾತ್ಯತೀತತೆಯ ಶ್ರೇಷ್ಠತೆ ಬಗ್ಗೆ ಮನವರಿಕೆ ಮಾಡಿಕೊಡುವುದು ತುಂಬ ಕಠಿಣ ಸವಾಲಾಗಿದೆ. ಧರ್ಮನಿರಪೇಕ್ಷತೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದವರಿಗೆ  ಈಗ ಭ್ರಷ್ಟತೆಯ ಕಳಂಕ ಮೆತ್ತಿಕೊಂಡಿದೆ.  ಅನೇಕರು ವಂಶಪರಂಪರೆಯ ವಿವಾದ ಬೆನ್ನಗಟ್ಟಿಕೊಂಡಿದ್ದಾರೆ.  ಇನ್ನೊಂದೆಡೆ ಎಡಪಂಥೀಯರು  ಜಾತ್ಯತೀತದ ಬಗ್ಗೆ ಕಪಟ ಧೋರಣೆ ತಳೆದಿರುವುದರ ಜತೆಗೆ, ಅವರು ಪ್ರತಿಪಾದಿಸುತ್ತಿರುವ ಆರ್ಥಿಕ ಸಿದ್ಧಾಂತವು ಜಾಗತಿಕವಾಗಿ ವಿಫಲಗೊಂಡಿದೆ.

ಉದಾರವಾದ ರಾಷ್ಟ್ರೀಯತೆ ಬಗ್ಗೆ ಬಲವಾಗಿ ಪ್ರತಿಪಾದಿಸುವುದೂ ಈಗ ಅಸಾಧ್ಯವಾಗಿ ಪರಿಣಮಿಸಿದೆ. ಮುಂಬೈ ಮೇಲಿನ 26/11ರ ಭಯೋತ್ಪಾದಕರ ದಾಳಿ ಬಗ್ಗೆ ಕೆಲ ಮುಖಂಡರು ಹಲವು ಪ್ರಶ್ನೆಗಳನ್ನು ಎತ್ತುತ್ತಾರೆ.  ಭಯೋತ್ಪಾದಕರಿಗೆ ಸುಪ್ರೀಂಕೋರ್ಟ್‌ ವಿಧಿಸಿದ ಮರಣದಂಡನೆ ವಿರುದ್ಧ ಮಾತನಾಡುತ್ತಾರೆ.  ತಮ್ಮದೇ ಸರ್ಕಾರದ ಮೂಗಿನಡಿಯಲ್ಲಿಯೇ ನಡೆದ, ಘಟನೆಯಲ್ಲಿ ಮೃತಪಟ್ಟ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ನೀಡಲು ಕಾರಣವಾದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ನಕಲಿ ಎಂದೂ ಹುಯಿಲೆಬ್ಬಿಸುತ್ತಾರೆ.

ಈ ಬಗ್ಗೆ ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದರಿಂದ ಯಾರು ಏನನ್ನಾದರೂ ಹೇಳಬಹುದಲ್ಲ ಎಂದೂ ವಾದಿಸಬಹುದು.  ಹಾಗಿದ್ದರೆ, ಈ ಸ್ವಾತಂತ್ರ್ಯದ ನೆಪದಲ್ಲಿ ಪಕ್ಷದ ಮುಖಂಡರ ಬಗ್ಗೆ ಸತ್ಯವನ್ನೂ ನುಡಿಯಬಹುದಲ್ಲ.  ಬಡವರ ಪರ ಎಂದು ಹೇಳಿಕೊಳ್ಳುತ್ತಿದ್ದ ಇವರ ಸರ್ಕಾರ, ಜನಪ್ರಿಯ, ವೋಟುಗಳನ್ನು ಬುಟ್ಟಿಗೆ ಹಾಕಿಕೊಳ್ಳುವ  ಯೋಜನೆಗಳಿಗೆ ಪಕ್ಷದ ಮುಖಂಡರ ಹೆಸರುಗಳನ್ನೇ ನಾಮಕರಣ ಮಾಡುತ್ತಿದ್ದಾಗ  ಅದರ ಔಚಿತ್ಯ ಪ್ರಶ್ನಿಸುವ ಧೈರ್ಯವೂ ಇದ್ದಿರಲಿಲ್ಲ.

ಬಿಹಾರದಲ್ಲಿ ಮಹಾಮೈತ್ರಿ ಹೆಸರಿನಲ್ಲಿ ಸಾಮಾಜಿಕ ಸಮಾನತೆಯ ಸಾಧಿಸುವುದಾಗಿ ನೀಡಿದ್ದ ಭರವಸೆ ಎಲ್ಲಿ ಹೋಯಿತು. ಒಬ್ಬನೇ ಒಬ್ಬ ಮುಸ್ಲಿಂ, ದಲಿತ ಅಥವಾ ಆದಿವಾಸಿ ಮುಖಂಡನು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆಯೇ. ಅಂತಹ ನಿದರ್ಶನಗಳು ಹುಡುಕಿದರೂ ಸಿಗುವುದಿಲ್ಲ.

ರಾಜಕೀಯ ಸದ್ಗುಣಗಳ ಬಗೆಗಿನ ಮೂಲಭೂತ ಮನೋಭಾವಕ್ಕೆ ಎರಡು ತಲೆಮಾರಿನ ಮತದಾರರು ಹೊಸ ವ್ಯಾಖ್ಯಾನ ನೀಡಿದ್ದಾರೆ. ಸ್ವಾತಂತ್ರ್ಯ ಚಳವಳಿ ವೇಳೆಯಲ್ಲಿ  ಆತ್ಮಸಾಕ್ಷಿಗೆ ಬದ್ಧವಾದ ರಾಜಕೀಯ , ತ್ಯಾಗ ಮನೋಭಾವ ಮತ್ತು ಸ್ವಯಂ ನಿರಾಕರಣೆಯ ತತ್ವಾದರ್ಶಗಳ  ಪ್ರಭಾವ ಎದ್ದು ಕಾಣುವಂತಿತ್ತು.

ಸದ್ಯದ ದಿನಗಳಲ್ಲಿ ಹಣದ ಪ್ರಭಾವ ಹೆಚ್ಚಿದೆ. ಕರೆನ್ಸಿಯೇ ಅಧಿಕಾರವಾಗಿದೆ. ಉದ್ದೇಶ ಸಾಧನೆಗೆ ಹಣವನ್ನು ಯಾವುದೇ ಎಗ್ಗಿಲ್ಲದೇ  ಬಳಸಲಾಗುತ್ತಿದೆ.  ಸದ್ಯದ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪರೀಕ್ಷೆಗಳನ್ನು ನಿರಾಯಾಸವಾಗಿ ಗೆಲ್ಲುತ್ತಿದ್ದಾರೆ.  2002ರಲ್ಲಿ ನಡೆದ ಗುಜರಾತ್‌ ಗಲಭೆಗಳ ಹೊಣೆ ಹೊತ್ತು ಅವರು ಯಾವತ್ತೂ ಮುಖ್ಯಮಂತ್ರಿ ಹುದ್ದೆ ತ್ಯಜಿಸಲು ಮುಂದಾಗಿರಲಿಲ್ಲ. ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಒತ್ತಡ ಬಂದರೂ ಅವರು  ಅದಕ್ಕೆ ಮಣಿದಿರಲಿಲ್ಲ. ಲಲಿತ್‌ ಮೋದಿ ಮತ್ತು ವ್ಯಾಪಂ ಹಗರಣಗಳನ್ನೂ ಅವರು ಉದ್ದಕ್ಕೂ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಅವರನ್ನು ಕಡಿಮೆ ಮಹತ್ವದ ಖಾತೆಗೆ ವರ್ಗಾಯಿಸುವ ಬದಲಿಗೆ ಅವರ ಪುನರ್ವಸತಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.  ಚಲನಚಿತ್ರ ಪ್ರಮಾಣ ಪತ್ರ  ಕೇಂದ್ರೀಯ ಮಂಡಳಿ (ಸೆನ್ಸಾರ್‌ ಮಂಡಳಿ– ಸಿಬಿಎಫ್‌ಸಿ) ಅಧ್ಯಕ್ಷ ಪಹ್ಲಜ್‌ ನಿಹಲಾನಿ ಅವರು ತಮ್ಮ ಸರ್ಕಾರಕ್ಕೆ ಹಲವಾರು ಬಾರಿ ಮುಜುಗರಕ್ಕೆ ಗುರಿ ಮಾಡಿದ್ದರೂ ಅವರನ್ನು ಹುದ್ದೆಯಿಂದ ತೆರವುಗೊಳಿಸುವ ಗೋಜಿಗೇ ಹೋಗಿಲ್ಲ.

2014ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ, ನನ್ನ ಮೊದಲ ಪ್ರತಿಕ್ರಿಯೆಯಲ್ಲಿ, ‘ಭಾರತದ ಹೊಸ ಮತದಾರರಲ್ಲಿ ರಾಜಕೀಯ ಬದ್ಧತೆಯೇನೂ ಕಂಡು ಬಂದಿಲ್ಲ. ದೇಶಕ್ಕೆ ಕೊಡುಗೆ ನೀಡುವ ಯಾವುದೇ ಹಂಗಿನಲ್ಲಿ ನಾನು ಇಲ್ಲ ಎನ್ನುವ ಮನಸ್ಥಿತಿ ಅವರಲ್ಲಿ ಇರುವಂತೆ ಭಾಸವಾಗುತ್ತದೆ’  ಎಂದು ನಾನು ಪ್ರತಿಕ್ರಿಯಿಸಿದ್ದೆ.

ಅದೆಲ್ಲ ಇರಲಿ, ಬಿಜೆಪಿಯ ನಿರಂತರ ಯಶಸ್ಸಿನಿಂದ ಭಾರತದ ಜಾತ್ಯತೀತ ಸ್ವರೂಪ ಮತ್ತು ಉದಾರವಾದ ಧೋರಣೆ ಕೊನೆಗೊಂಡಿದೆ ಎಂದು ಯಾರೊಬ್ಬರೂ ಸದ್ಯಕ್ಕೆ ಭಾವಿಸಬಾರದು. ಆದರೆ, ಇಲ್ಲಿ ಒಂದು ಪ್ರಶ್ನೆಯೂ ಉದ್ಭವವಾಗುತ್ತದೆ. ಮೊದಲಿನಿಂದಲೂ ನಂಬಿಕೊಂಡು ಬಂದಿದ್ದ ತತ್ವಾದರ್ಶಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ.  ಇದಕ್ಕೆ ಹಳೆಯ ತಲೆಮಾರಿನವರ ನೈತಿಕತೆ, ರಾಜಕೀಯ ಧೋರಣೆ ಅಥವಾ ಢಾಂಬಿಕತನ ಕಾರಣ ಇರಬಹುದು. ಮೋದಿ – ಷಾ ಅವರ ಬಿಜೆಪಿಯು ಹಳೆಯ ಭಾವನೆಗಳನ್ನು ಕೈಬಿಟ್ಟು ಹೊಸ ಚಿಂತನೆಗಳ  ನವ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿದೆ. ಭಾರತೀಯರು ಅದನ್ನು ತುಂಬು ಹೃದಯದಿಂದ ಅನುಸರಿಸಲು ಮುಂದಾಗಿದ್ದಾರೆ.

ಈ ಹಂತದಲ್ಲಿ ಪ್ರತಿಪಕ್ಷಗಳ ಯಾವುದೇ ಮುಖಂಡನಾಗಲಿ ಅಥವಾ ಗುಂಪಾಗಲಿ ಇದನ್ನು ತಡೆಗಟ್ಟಲು ಮುಂದಾಗುತ್ತಿಲ್ಲ. ಒಂದು ವೇಳೆ ಕರ್ನಾಟದಲ್ಲಿ ಸೋಲು ಕಂಡರೆ ಕಾಂಗ್ರೆಸ್‌ನ ಕತೆ ಮುಗಿದಂತೆಯೇ ಸರಿ.  ಆಗ ಪಂಜಾಬ್‌ನ ಅಮರಿಂದರ್‌ ಸಿಂಗ್‌, ನಿತೀಶ್‌ ಕುಮಾರ್‌ ಅವರಂತೆ ಕಾಂಗ್ರೆಸ್‌ಗೆ ಕಾಡಲಿದ್ದಾರೆ.  ಇವರ ನಡೆಯನ್ನು ಕಾಂಗ್ರೆಸ್‌ ಅನುಮಾನದಿಂದಲೇ ನೋಡಲು ಆರಂಭಿಸಲಿದೆ.

ನವೀನ್‌ ಪಟ್ನಾಯಕ್‌, ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್‌ ಅವರು ಕೆಲ ದಿನಗಳವರೆಗೆ ಬಿಜೆಪಿಗೆ ಸಡ್ಡು ಹೊಡೆದರೂ, ದೈತ್ಯ ಬಿಜೆಪಿಯನ್ನು ಪಕ್ಕಕ್ಕೆ ಜರುಗಿಸಲು ಅವರಿಂದ ಸಾಧ್ಯವಾಗಲಾರದು. ಕೇರಳದಲ್ಲಿ ಕಾಂಗ್ರೆಸ್‌ನ ಪ್ರಭಾವ ಇನ್ನೂ ಸ್ವಲ್ಪ ದಿನಗಳವರೆಗೆ ಮುಂದುವರೆಯಲಿದೆ.  ಆದರೆ, ಬಿಜೆಪಿಗೆ ಕೆಲ ಮಟ್ಟಿಗೆ ಸ್ಥಳಾವಕಾಶ ಬಿಟ್ಟುಕೊಡಬೇಕಾದ ಅನಿವಾರ್ಯತೆಯೂ ಅಲ್ಲಿ ಉದ್ಭವಿಸಬಹುದು. 

ಸರಿಯೋ, ತಪ್ಪೊ, ನಿತೀಶ್‌ ಅವರನ್ನು ಪಕ್ಷ ಭ್ರಷ್ಟ ಎಂದು ಜರೆಯುವುದು  ಅಷ್ಟು ಸಮರ್ಪಕ ಎಂದು ನನಗೆ ಅನಿಸುತ್ತಿಲ್ಲ.  ಇದುವರೆಗೆ  ಬಿಜೆಪಿ ವಿರುದ್ಧ   ಹೋರಾಟ ನಡೆಸುತ್ತಿದ್ದ ಅವರು ಈಗ ಅದೇ ಪಕ್ಷದ ಆಶ್ರಯ ಬಯಸಿದ್ದಾರೆ.  ಬಿಜೆಪಿ ವಿರುದ್ಧದ ಹೋರಾಟ ವ್ಯರ್ಥ, ಅದೊಂದು ಏಕಪಕ್ಷೀಯವಾಗಿರಲಿದೆ ಎನ್ನುವುದನ್ನು ಅವರು ಸದ್ಯಕ್ಕೆ ಮನಗಂಡಿರುವಂತೆ ಕಾಣುತ್ತದೆ.

ನಿತೀಶ್‌ ಅವರು ಸದ್ಯಕ್ಕೆ ಭಾರತದ ಮತದಾರರ ಮನಸ್ಸಿನ ತುಂಬ ಆವರಿಸಿರುವ ನಾನು, ನನ್ನದು ಎಂಬ ಭಾವನೆಯ ಪ್ರತೀಕವಾಗಿರುವಂತೆ ಭಾಸವಾಗುತ್ತಿದೆ.  ಇದುವರೆಗೆ ಅವರು ಬಳಸುತ್ತಿದ್ದ ಅದರಲ್ಲೂ ವಿಶೇಷವಾಗಿ ಸಮಾಜವಾದ ಮತ್ತು ಜಾತ್ಯತೀತವಾದವು ದೇಶದ ಮತದಾರರ ಮೇಲೆ ಯಾವುದೇ ಪ್ರಭಾವ ಬೀರಿದಂತೆಯೂ ಕಾಣುತ್ತಿಲ್ಲ. ಅವರಲ್ಲಿ ಹೊಸ ಚಿಂತನೆಗಳ ಬರವೂ ಇರುವಂತೆ ಕಾಣುತ್ತಿದೆ.

ಬ್ರಿಟಿಷರ ವಸಾಹತು ಸಮಯದಲ್ಲಿನ ರಾಜರು ತಮ್ಮ ಸಾರ್ವಭೌಮತ್ವವನ್ನು  ಪರಕೀಯರಿಗೆ ಬಿಟ್ಟುಕೊಟ್ಟಂತೆ, ಇಂದಲ್ಲ ನಾಳೆ ಬಹುತೇಕ ಪ್ರತಿಪಕ್ಷಗಳ ಮುಖಂಡರಿಗೂ ಇದೇ ಬಗೆಯ ತ್ಯಜಿಸು ಇಲ್ಲ ಅಂತ್ಯ ಕಾಣು ಎನ್ನುವ ಎರಡೇ  ಆಯ್ಕೆಗಳು ಎದುರಾಗಬಹುದು. 
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT