ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ಕೇಸುಗಳ ಪೀಕಲಾಟ...

Last Updated 2 ಜುಲೈ 2011, 19:30 IST
ಅಕ್ಷರ ಗಾತ್ರ

ಸುಶಿಕ್ಷಿತರೇ ಎಷ್ಟೋ ಸಲ ಬೇಜವಾಬ್ದಾರಿತನ ತೋರಿ ಪೇಚಿಗೆ ಸಿಲುಕುವ ಪ್ರಸಂಗಗಳು ನಡೆಯುತ್ತವೆ. ಅತಿಯಾದ ಆತ್ಮವಿಶ್ವಾಸದಿಂದ ಬ್ಲ್ಯಾಂಕ್ ಚೆಕ್ ಕೊಡುವುದು, ವಾಹನ ಮಾರುವಾಗ ವರ್ಗಾವಣೆ ನಿಯಮಾವಳಿ ಪತ್ರಗಳಲ್ಲಿ ವಿಳಾಸ- ನಗದನ್ನು ಬರೆಯದೆ ಸುಮ್ಮನೆ ಸಹಿ ಹಾಕಿ ಕೊಡುವುದು, ಅಪರಿಚಿತರಿಗೆ ಸಹಿ ಹಾಕಿದ ಖಾಲಿ ಪತ್ರ ಕೊಡುವುದು ಮೊದಲಾದ ತಪ್ಪುಗಳನ್ನು ಪದವೀಧರರು ಕೂಡ ಮಾಡುತ್ತಾರೆ. ಯಾವುದೇ ಪತ್ರ ಓದದೆ ಸಹಿ ಮಾಡುವುದು ಸರಿಯಲ್ಲ ಎಂದು ಮೊದಲಿನಿಂದಲೂ ಎಲ್ಲರೂ ಹೇಳುತ್ತಲೇ ಬಂದಿದ್ದಾರೆ. ಆದರೂ ಜನ ಟೋಪಿ ಬೀಳುವುದು ತಪ್ಪಿಲ್ಲ.

1997ರಲ್ಲಿ ಹೈದರಾಬಾದ್‌ನ ಜ್ಯೂಬಿಲಿಹಿಲ್‌ನಲ್ಲಿ ಕಾರ್ ಬಾಂಬ್ ಸ್ಫೋಟಿಸಿ 25 ಜನ ಮೃತಪಟ್ಟರು. ಪೆರಟಾಲ ರವಿ ಹಾಗೂ ಸೂರ್ಯನಾರಾಯಣ ರೆಡ್ಡಿ ಗುಂಪುಗಳ ನಡುವಿನ ವೈಷಮ್ಯವೇ ಕಾರ್‌ನಲ್ಲಿ ಬಾಂಬ್ ಇಡಲು ಕಾರಣ. ರಾಮಾನಾಯ್ಡು ಸ್ಟುಡಿಯೋ ಬಳಿ `ಶ್ರೀರಾಮುಲಯ್ಯ~ ಎಂಬ ಚಿತ್ರದ ಮುಹೂರ್ತ ನಡೆಯುತ್ತಿದ್ದ ಸಂದರ್ಭದಲ್ಲೇ ಕಾರ್ ಬಾಂಬ್ ಸ್ಫೋಟಗೊಂಡು ದೊಡ್ಡ ಸುದ್ದಿಯಾಗಿತ್ತು. ಬಾಂಬ್ ಇಟ್ಟಿದ್ದ ಹಳೆಯ ಫಿಯೆಟ್ ಕಾರ್ ಬೆಂಗಳೂರಿನ ಅಶೋಕನಗರ ವ್ಯಾಪ್ತಿಯ ಮಾರ್ಕಂ ರಸ್ತೆಯ ನಿವಾಸಿಯೊಬ್ಬ ಮಾರಾಟ ಮಾಡಿದ್ದು ಎಂಬುದು ಪೊಲೀಸರಿಗೆ ತನಿಖೆ ಸಂದರ್ಭದಲ್ಲಿ ಗೊತ್ತಾಯಿತು. ಆ ವ್ಯಕ್ತಿಯ ಮೇಲೂ ಮೊದಲು ಅನುಮಾನ ಪಟ್ಟರು. ಅವನು ನಕ್ಸಲೀಯ ಇರಬಹುದೆಂದು ಪ್ರಶ್ನೆಗೆ ಒಳಪಡಿಸಿದರು. ನಿಜಕ್ಕೂ ಅವನು ಅಮಾಯಕನಾಗಿದ್ದ. ವಾಹನ ಮಾರಿದ್ದಕ್ಕೆ ಸಾಕ್ಷಿಯಾಗಿ ಅವನಲ್ಲಿ ಒಂದು ರಶೀದಿ ಇತ್ತು. ಅದನ್ನೂ ಅವನು ಕಷ್ಟಪಟ್ಟೇ ಹುಡುಕಿ ತೆಗೆದಿದ್ದ. ಅದೇನಾದರೂ ಇಲ್ಲದಿದ್ದರೆ ಪ್ರಕರಣದ ಆರೋಪಿಗಳಲ್ಲಿ ಅವನೂ ಒಬ್ಬನಾಗುತ್ತಿದ್ದ. ವಾಹನ ಮಾರಾಟ ಮಾಡಿದ್ದ ಸಂದರ್ಭದಲ್ಲಿ ಅವನು `ಫಾರ್ಮ್ 29~ನ್ನು ಸಂಪೂರ್ಣವಾಗಿ ಭರ್ತಿ ಮಾಡಿರಲಿಲ್ಲ. ಸುಮ್ಮನೆ ಸಹಿ ಹಾಕಿ ಕೊಟ್ಟಿದ್ದ. ದಾಖಲೆಗಳ ಪ್ರಕಾರ ಸ್ಫೋಟಗೊಂಡಿದ್ದ ಆ ಕಾರು ಅವನ ಹೆಸರಲ್ಲೇ ಇತ್ತು.

ವಾಹನವನ್ನು ಮಾರುವಾಗ ಫಾರ್ಮ್‌ಗಳನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡದೇ ಇದ್ದರೆ ಬೇರೆ ರೀತಿಯ ತೊಂದರೆಗಳೂ ಎದುರಾಗಬಹುದು. ಒಂದು ವೇಳೆ ಮಾರಾಟಗೊಂಡ ವಾಹನ ಯಾವುದಾದರೂ ಅಪರಾಧದಲ್ಲಿ ಬಳಕೆಯಾದರೆ ಅಥವಾ ಅಪಘಾತದಿಂದ ಯಾರದ್ದಾದರೂ ಸಾವಿಗೆ ಕಾರಣವಾದರೆ ಆ ಪ್ರಕರಣ ವಾಹನದ ಮಾಲೀಕರ ತಲೆ ಮೇಲೇ ಬರುತ್ತದೆ. ವಾಹನ ಕೊಂಡವರು ಅದನ್ನು ತಮ್ಮ ಹೆಸರಿಗೆ ಬದಲಿಸಿಕೊಳ್ಳದೇ ಇದ್ದಲ್ಲಿ ಮಾರಿದವರು ಇಕ್ಕಟ್ಟಿಗೆ ಸಿಲುಕುತ್ತಾರೆ. ಮಾಧ್ಯಮದಲ್ಲಿ ಇಂಥ ಪ್ರಕರಣಗಳು ಪದೇಪದೇ ವರದಿಯಾಗುತ್ತಿದ್ದರೂ ಎಷ್ಟೋ ಜನ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದಾರೆ.

ಸಾಲದ ಅಗತ್ಯವಿರುವಾಗ ಖಾಸಗಿ ಬ್ಯಾಂಕ್‌ಗಳಿಗೆ ಅಥವಾ ಖಾಸಗಿ ಫೈನಾನ್ಶಿಯರ್‌ಗಳಿಗೆ ಖಾಲಿ ಪತ್ರ ಅಥವಾ ಖಾಲಿ ಚೆಕ್‌ಗಳನ್ನು ಧಾವಂತದಲ್ಲಿ ನೀಡಿ ಹಣ ಪಡೆಯುವವರೂ ಉಂಟು. ತಕ್ಷಣಕ್ಕೆ ಹಣ ಸಿಕ್ಕಿತಲ್ಲ ಎಂದು ನಿರಾಳರಾಗುವ ಜನ, ಮುಂದೆ ತಮಗೆ ಎಂಥ ಆತಂಕ ಎದುರಾಗಬಹುದು ಎಂದು ಅಂದಾಜು ಮಾಡುವುದೇ ಇಲ್ಲ. ಈ ರೀತಿಯ ಉಡಾಫೆಯಿಂದ ಆಸ್ತಿಪಾಸ್ತಿಯನ್ನೆಲ್ಲಾ ಕಳೆದುಕೊಂಡವರನ್ನೂ ನಾನು ಕಂಡಿದ್ದೇನೆ.

ಸಿರಿವಂತ ಕುಟುಂಬದ ಕೆಲವು ಮಹಿಳೆಯರಿಗೆ ಇಸ್ಪೀಟ್ ಚಟವಿದೆ. ಪ್ರತಿಷ್ಠಿತ ಮಹಿಳಾ ಕ್ಲಬ್‌ಗಳಲ್ಲಿ ಇದು ಅವ್ಯಾಹತವಾಗಿ ನಡೆಯುತ್ತದೆ. ಆಟದ ಗುಂಗಿನಲ್ಲಿ ಮೈಮರೆಯುವ ಕೆಲವರು  ತೆಗೆದುಕೊಂಡು ಹೋದ ಹಣವೆಲ್ಲಾ ಖಾಲಿಯಾದ ನಂತರ ಆತುರದ ಬುದ್ದಿಯಿಂದಾಗಿ `ಬ್ಲ್ಯಾಂಕ್ ಚೆಕ್~ ಕೊಟ್ಟು ಅಲ್ಲೇ ಇರುವವರ ಬಳಿ ಸಾಲ ಪಡೆದು ಆಡುತ್ತಾರೆ. ಒಂದು ವೇಳೆ ಸೋತರೆ ಬೇಸರದಿಂದ ಮನೆಗೆ ಮರಳುತ್ತಾರೆ. ಚೆಕ್ ಪಡೆದವರು `ವೀರಭದ್ರ~ರಾಗುತ್ತಾರೆ. ಕೊಟ್ಟವರು `ಕೋಡಂಗಿ~ಗಳು. ಖಾಲಿ ಚೆಕ್ ಪಡೆದು ಸಾಲ ಕೊಡುವ ಕೆಲವರು ಆ ಚೆಕ್ ಯಾವ ಬ್ಯಾಂಕ್‌ನದ್ದೆಂಬುದನ್ನು ಗಮನಿಸಿ, ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಖಾತರಿಪಡಿಸಿಕೊಂಡು, ಅದಕ್ಕಿಂತ ಹೆಚ್ಚು ಮೊತ್ತ ಬರೆದು `ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಆಕ್ಟ್~ ಪ್ರಕಾರ `ಚೆಕ್ ಬೌನ್ಸ್~ ಪ್ರಕರಣ ದಾಖಲಿಸುತ್ತಾರೆ. ಇಸ್ಪೀಟಾಟದ ಗುಂಗಿನಲ್ಲಿ ಮೈಮರೆತ ಕಾರಣಕ್ಕೆ ದಿನಗಟ್ಟಲೆ ಕೋರ್ಟಿಗೆ ಅಲೆಯುವ ಪ್ರಸಂಗ ಸೃಷ್ಟಿ ಯಾಗುತ್ತದೆ. ಕೆಲವು ಕಾಫಿ ಪ್ಲಾಂಟರ್‌ಗಳು, ಚಿತ್ರ ನಟಿಯರು ಹೀಗೆ ಇಕ್ಕಟ್ಟಿಗೆ ಸಿಲುಕಿ ಜೈಲಿಗೆ ಹೋದ ಅನೇಕ ಉದಾಹರಣೆಗಳಿವೆ.

ಜನರ ನಿರ್ಲಕ್ಷ್ಯದ ಕಥೆ ಇದಾದರೆ ಪೊಲೀಸರ ಬೇಜವಾಬ್ದಾರಿತನ ಇನ್ನೊಂದು ಬಗೆಯದ್ದು. ಕೆಲವು ಅಧಿಕಾರಿಗಳು ಸರಿಯಾಗಿ ಕೇಸುಗಳನ್ನೇ ದಾಖಲಿಸಿ ಕೊಂಡಿರುವುದಿಲ್ಲ. ಇನ್ಯಾವುದೋ ಪ್ರದೇಶದ ಠಾಣೆ ಯಲ್ಲಿ ಶ್ರದ್ಧೆ ಹಾಗೂ ನಿಷ್ಠೆಯಿಂದ  ಕರ್ತವ್ಯ ನಿರ್ವಹಿಸು ವವರು ಒಬ್ಬ ಕಳ್ಳನನ್ನು ಹಿಡಿಯುತ್ತಾರೆ. ಆ ಕಳ್ಳ ತಾನು ಕದ್ದ ಎಲ್ಲಾ ಮನೆಗಳನ್ನೂ ತೋರಿಸುತ್ತಾನೆ. ಅವುಗಳಲ್ಲಿ ಕೆಲವು ಬೇರೆ ಪ್ರದೇಶದಲ್ಲಿ ಇರುವಂಥವು. ಆ ಪ್ರದೇಶದ ಠಾಣೆಗೆ ಫೋನ್ ಮಾಡಿ, ಆ ಮನೆಯವರು ಕೊಟ್ಟ ದೂರು ಕೇಸಾಗಿದೆಯೇ ಎಂದು ಕೇಳಿದರೆ, ಇಲ್ಲವೆಂಬ ಉತ್ತರ ಬರುತ್ತದೆ.

ಸಾಮಾನ್ಯವಾಗಿ ಕಳ್ಳತನ, ದರೋಡೆ, ಸರಗಳ್ಳತನ, ವಂಚನೆ ಮೊದಲಾದ ಯಾವುದೇ ಪ್ರಕರಣಗಳಾಗಲೀ, ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಾಗಬೇಕು. ಅದರ ಪ್ರತಿಯನ್ನು ದೂರುದಾರರಿಗೂ ನೀಡಬೇಕು. ದೂರು ಕೊಡುವ ಜನರಿಗೂ ಇದರ ಅರಿವು ಇರುವುದಿಲ್ಲ. ಎಫ್‌ಐಆರ್ ಕಾಪಿ ಇಲ್ಲವೇ ಎಂದು ಕೇಳಿದರೆ ಎಷ್ಟೋ ಜನ, `ಅದನ್ನು ನಮಗೆ ಕೊಡುತ್ತಾರಾ?~ ಎಂದು ಪ್ರಶ್ನಿಸುತ್ತಾರೆ.

ಒಡವೆ-ವಸ್ತುಗಳನ್ನು ಕಳೆದುಕೊಂಡ ಅಮಾಯಕ ಜನರು, ಮುಂದೆಂದೋ ಅವು ಸಿಕ್ಕಾಗ ಪೊಲೀಸರು ತಮ್ಮನ್ನು ಕರೆದು ಕೊಡಬಹುದೆಂಬ ನಿರೀಕ್ಷೆಯಲ್ಲಿ ಇರುತ್ತಾರೆ. ಕೇಸೇ ದಾಖಲಾಗಿಲ್ಲ ಎಂದಮೇಲೆ ಸಿಕ್ಕ ಒಡವೆ-ವಸ್ತುಗಳನ್ನು ಕೊಡುವು ದೆಲ್ಲಿಂದ ಬಂತು? ಇಂಥವನ್ನು `ಕೆಬಿಎಚ್ ಕೇಸುಗಳು~ ಎಂದು ಪೊಲೀಸರೇ ಗೇಲಿ ಮಾಡುತ್ತಾರೆ.`ಕೈ ಬಿಟ್ಹಾಕ್~ ಎಂಬುದರ ಸಂಕುಚಿತ ರೂಪವೇ `ಕೆಬಿಎಚ್~! ಹೀಗೆ ಮಾಡುವುದರಿಂದ ಅಪರಾಧಿಗೆ ಪೊಲೀಸರೇ ಪರೋಕ್ಷ ವಾಗಿ ಸಹಾಯ ಮಾಡಿದ ಹಾಗಾಗುತ್ತದೆ. ಇಲಾಖೆಗೆ ಅಗೌರವ ತೋರಿದಂತಾಗುವುದರ ಜೊತೆಗೆ ಜನರಿಗೆ ಪೊಲೀಸ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹುಟ್ಟಲು ಕಾರಣವಾಗುತ್ತದೆ.
* * *
ಕಾನೂನಿನ ಪ್ರಕಾರ ಸಿವಿಲ್ ವ್ಯಾಜ್ಯ ಅಥವಾ ತಕರಾರುಗಳ ವಿಷಯದಲ್ಲಿ ಪೊಲೀಸರು ತಲೆಹಾಕುವ ಹಾಗಿಲ್ಲ. ಒಂದು ವೇಳೆ ಮಧ್ಯೆ ಪ್ರವೇಶಿಸಬೇಕಾದರೆ ಕೋರ್ಟ್‌ನ ಅನುಮತಿ ಪಡೆಯಬೇಕಾದದ್ದು ಕಡ್ಡಾಯ. ಇಂಥ ಪ್ರಕರಣಗಳನ್ನು `ನಾನ್ ಕಾಗ್ನೈಸಬಲ್~ ಎಂದೇ ಕರೆಯುತ್ತೇವೆ. ಇವುಗಳಲ್ಲಿ ಅನೇಕವು ಕೊಲೆ, ಕೊಲೆ ಯತ್ನ ಮೊದಲಾದ ಕ್ರಿಮಿನಲ್ ಸ್ವರೂಪದಲ್ಲಿ ಅಂತ್ಯಗೊಂಡಿರುವುದೇ ಹೆಚ್ಚು. ನನ್ನ ಪ್ರಕಾರ ಪೊಲೀಸರು ಸಮಯಪ್ರಜ್ಞೆಯಿಂದ ಸಿವಿಲ್ ವ್ಯಾಜ್ಯ ಗಳನ್ನೂ ಪರಿಹರಿಸಬಹುದು.

ವ್ಯಾಜ್ಯನಿರತರಾದ ಉಭಯ ಬಣದವರನ್ನೂ ಕರೆಸಿ ಎಚ್ಚರಿಸಿದರೆ, ಮುಂದೆ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದು.

ವ್ಯಾಜ್ಯದ ಗಂಭೀರತೆಯನ್ನು ಸ್ಥಳೀಯ ಪೊಲೀಸರು ಅರಿತುಕೊಂಡು, ಸಿಆರ್‌ಪಿಸಿ 107ರ ಪ್ರಕಾರ ಕ್ರಮ ತೆಗೆದುಕೊಳ್ಳಬಹುದು. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಲುವಾಗಿ ಸಿವಿಲ್ ವ್ಯಾಜ್ಯಗಳಿಗೆ ತಲೆಹಾಕುವ ಗೊಡವೆ ತಮಗೇಕೆ ಎಂದುಕೊಂಡು ಸುಮ್ಮನಾಗುವ ಪೊಲೀಸರೇ ಹೆಚ್ಚು.

ನಾನು ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಮೆರಿಕದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ವೈದ್ಯ ದಂಪತಿ ಭಾರತಕ್ಕೆ ಬಂದರು. ಅಲ್ಲಿ ವಿಶೇಷ ಪರಿಣತಿ ಪಡೆದಿದ್ದ ಇಬ್ಬರೂ ಜಯನಗರದ ಸಭ್ಯ ಕುಟುಂಬಕ್ಕೆ ಸೇರಿದವರು. ಬೆಂಗಳೂರಿನಲ್ಲೇ ಆಸ್ಪತ್ರೆ ತೆರೆಯುವುದು ಅವರ ಉದ್ದೇಶವಾಗಿತ್ತು. ಜಯನಗರ ಬಳಿಯೇ ಒಂದು ನಿವೇಶನ ಕೊಂಡುಕೊಂಡರು. ನೋಂದಣಿ ಪತ್ರ, ಖಾತೆ, ಕಂದಾಯ ಎಲ್ಲವೂ ಅವರಲ್ಲಿ ಸರಿಯಾಗಿಯೇ ಇತ್ತು. ಒಂದು ಪ್ಲಾನ್ ಮಾಡಿಸಿ, ಕಾರ್ಪೊರೇಷನ್‌ನಿಂದ ಅದಕ್ಕೆ ಅನುಮತಿಯೂ ಸಿಕ್ಕಿತು. ಗುದ್ದಲಿ ಪೂಜೆ ಮಾಡಲೆಂದು ಅಲ್ಲಿಗೆ ಹೋದರು. ನಾಲ್ಕೈದು ಜನ ಬಂದು, ಅದು ತಮ್ಮ ನಿವೇಶನ ಎಂದು ವಾದಿಸಿದರು. ಈ ದಂಪತಿ ತಮ್ಮಲ್ಲಿದ್ದ ದಾಖಲೆ ಪತ್ರಗಳನ್ನು ತೋರಿಸಿದರು. ಅವರೂ ಅದೇ ರೀತಿಯ ಪತ್ರಗಳನ್ನು ತೋರಿಸಿದಾಗ ವೈದ್ಯ ದಂಪತಿಗೆ ಆಘಾತವಾಯಿತು. ಒಂದೇ ನಿವೇಶನಕ್ಕೆ ಇಬ್ಬರೂ ಮಾಲೀಕರಾಗಿದ್ದರು.

ವೈದ್ಯ ದಂಪತಿ ಪೊಲೀಸ್ ಠಾಣೆಯ ಮೊರೆ ಹೋದರು. ಅವರಿಗೆ ನಿವೇಶನ ಮಾರಿದ್ದವರಿಗೆ ಭೂಗತ ಲೋಕದ ಸಂಬಂಧವಿತ್ತು. ಕಲಾಸಿಪಾಳ್ಯದ ರೌಡಿಪಟ್ಟಿ ಯಲ್ಲಿದ್ದ ವ್ಯಕ್ತಿ ಹಾಗೂ ಆತನ ಪಾಲುದಾರ  ಇವರಿಗೆ ನಿವೇಶನ ಮಾರಿದ್ದರು. ಪೊಲೀಸರು ಇದು ಸಿವಿಲ್ ವ್ಯಾಜ್ಯವಾದ್ದರಿಂದ ಏನೂ ಮಾಡಲಾಗದು ಎಂದು ಕೈಚೆಲ್ಲಿದರು. ಡಿ.ಜಿ ಅವರನ್ನು ಭೇಟಿ ಮಾಡಿದಾಗ, ಅವರು ಇನ್ನೊಬ್ಬ ಅಧಿಕಾರಿಯ ಬಳಿ ಕಳಿಸಿದರು. ಅವರೂ ಏನೂ ಮಾಡಲು ಸಾಧ್ಯವಿಲ್ಲವೆಂದರು.

ಆಗ ಐಜಿಪಿ ಆಗಿದ್ದ ಟಿ. ಜಯಪ್ರಕಾಶ್ ಆ ವೈದ್ಯ ದಂಪತಿಗೆ ನ್ಯಾಯ ಕೊಡಿಸುವಂತೆ ನನಗೆ ಆದೇಶಿಸಿದರು. ಸಿವಿಲ್ ವ್ಯಾಜ್ಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಿಚಾರವನ್ನು ನಾನೂ  ಅವರಿಗೆ ಹೇಳಿದೆ. `ಭೂಗತ ಲೋಕದವರು ಇದರಲ್ಲಿ ಭಾಗಿಯಾಗಿರುವುದರಿಂದ ಅವರನ್ನು ಕರೆಸಿ ಬುದ್ಧಿಹೇಳಬೇಕು. ಇಲ್ಲದಿದ್ದರೆ ವಿದೇಶದಿಂದ ಬಂದು ಇಲ್ಲಿ ನೆಲೆಸಲು ನಿರ್ಧರಿಸಿರು ವವರಿಗೆ ಇಲಾಖೆ, ವ್ಯವಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ~ ಎಂದರು. ನನಗೆ ಭೂಗತಲೋಕದ ಬಗ್ಗೆ ಅರಿವಿದ್ದ ಕಾರಣ ಅವರನ್ನು ಕರೆಸಿ ಮಾತನಾಡಿದೆ. ವಂಚನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಸುಮ್ಮನೆ ಹೆದರಿಸಿದೆ. ಅವರು ತಡಬಡಾಯಿಸಿದರು. ನಿವೇಶನಕ್ಕಾಗಿ ಪಡೆದಿದ್ದ 50 ಲಕ್ಷ ರೂಪಾಯಿಯನ್ನು ವೈದ್ಯ ದಂಪತಿಗೆ ಹಿಂದಿರುಗಿಸಿದರು. ಕೋರ್ಟ್‌ನಲ್ಲಿ ವ್ಯಾಜ್ಯ ಪ್ರಕರಣ ದಾಖಲಿಸುವುದಾಗಿ ಹೇಳಿ, ಅಲ್ಲಿ ನೋಂದಣಿ ವಿಷಯ ವನ್ನು ಇತ್ಯರ್ಥ ಮಾಡಿಕೊಳ್ಳುವ ಇನ್ನೊಂದು ತಂತ್ರವನ್ನೂ ಹೂಡಿದರು.
 
ನಾನು ಅದಕ್ಕೆ ಒಪ್ಪಲಿಲ್ಲ. ವೈದ್ಯರ ಹೆಸರಲ್ಲಿ ಆಗಿದ್ದ ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರದ್ದುಪಡಿಸಿಕೊಳ್ಳುವಂತೆ ಹೇಳಿದೆ. ಕೊನೆಗೆ ಅದಕ್ಕೂ ಮಣಿದರು. ಕನಿಷ್ಠ ಹಣವಾದರೂ ಬಂತಲ್ಲ ಎಂದು ವೈದ್ಯ ದಂಪತಿ ನೆಮ್ಮದಿಯ ನಿಟ್ಟುಸಿರಿಟ್ಟರು. ಡಿ.ಜಿ ಕೈಚೆಲ್ಲಿದ್ದ ಸಮಸ್ಯೆ ನನ್ನಿಂದ ಬಗೆಹರಿದದ್ದನ್ನು ಕಂಡು ಅವರಿಗೆ ಆಶ್ಚರ್ಯ ಕೂಡ ಆಗಿತ್ತು. ಇಂದಿಗೂ ಅವರು ನನ್ನನ್ನು ನೆನಪಿಸಿಕೊಳ್ಳುತ್ತಾರೆ.

ನ್ಯಾಯದ ಚೌಕಟ್ಟಿನಿಂದ ಆಚೆ ಬರದೇ ಇದ್ದರೆ ಯಾವುದೇ ತಪ್ಪು ಮಾಡದ ಆ ವೈದ್ಯ ದಂಪತಿಗೆ ನಿಜಕ್ಕೂ ಅನ್ಯಾಯವಾಗುತ್ತಿತ್ತು. ಅದನ್ನು ತಪ್ಪಿಸಿದ ಹೆಮ್ಮೆ ನನ್ನದಾಯಿತು.
ಮುಂದಿನ ವಾರ: ಕವಿಗೆ ಒದಗಿದ ನಿವೇಶನದ ಸಂಕಷ್ಟ.

ಶಿವರಾಂ ಅವರ ಮೊಬೈಲ್ ನಂಬರ್; 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT