ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕ್ಕುಗಟ್ಟಿದ ಮುಖದ ಅಜ್ಜಿ ನಮ್ಮವರೇ ಆದದ್ದು...

Last Updated 31 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ನಾನು ಮೂರು ವರ್ಷ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದೆ. 1980-83ರ ಅವಧಿ. ಲಿಂಗರಾಜಪುರ, ಕಾಚರಕನಹಳ್ಳಿ ಕೂಡ ಆಗ ಅದೇ ಠಾಣೆಯ ವ್ಯಾಪ್ತಿಗೆ ಸೇರಿದ್ದವು. ಅವು ಆಗ ಸಂಪೂರ್ಣ ಹಳ್ಳಿಗಳ ಸ್ವರೂಪದಲ್ಲಿಯೇ ಇದ್ದವು.

ಕಾಚರಕನಹಳ್ಳಿಯಲ್ಲಿ ನರಸಿಂಹಯ್ಯ ಎಂಬುವರಿದ್ದರು. ದಲಿತ ಕುಟುಂಬಕ್ಕೆ ಸೇರಿದ ಅವರು ಅಲ್ಲಿ ಉಳುಮೆ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದರು. ಅವರಿದ್ದ ಜಾಗ ಅವರ ಹೆಂಡತಿಯ ತವರು ಮನೆಯವರು ತಲತಲಾಂತರದಿಂದ ಕೆಲಸ ಮಾಡಿಕೊಂಡು ಬಂದಂಥದ್ದು.
 
ಜೀತಪದ್ಧತಿಯ ಕಾರಣದಿಂದಾಗಿ ನರಸಿಂಹಯ್ಯನವರ ಪತ್ನಿಯ ತಂದೆ, ತಾತ, ಮುತ್ತಾತಂದಿರು ಅಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರು. ಈಗ ಆ ಕೆಲಸವನ್ನು ನರಸಿಂಹಯ್ಯ ಮಾಡುತ್ತಿದ್ದರು. ಅಷ್ಟರಲ್ಲಿ ಜೀತಪದ್ಧತಿ ನಿವಾರಣೆಗೆ ಸರ್ಕಾರ `ಉಳುವವನಿಗೇ ಭೂಮಿ~ ಎಂಬ ಯೋಜನೆ ತಂದಿತು. ತಾವು ಉಳುಮೆ ಮಾಡುತ್ತಿದ್ದ ಜಾಗಕ್ಕಾಗಿ ನರಸಿಂಹಯ್ಯ ಹಾಗೂ ಅವರ ಪತ್ನಿ `ಫಾರ್ಮ್ ನಂಬರ್ 7~ ಅರ್ಜಿ ಹಾಕಿ, ಕೇಸು ನಡೆಸುತ್ತಿದ್ದರು.

ವಯಸ್ಸು ಎಂಬತ್ತು ದಾಟಿದ ಇಳಿಜೀವಗಳವು. ಒಬ್ಬ ಹೆಣ್ಣುಮಗಳಿಗೆ ಮದುವೆ ಮಾಡಿದ್ದರೂ ಆಕೆಗೆ ತನ್ನದೇ ಆದ ಕಷ್ಟವಿತ್ತು. ಮಗ ಕೂಡ ಸುಸ್ಥಿತಿಯಲ್ಲಿ ಇರಲಿಲ್ಲ. ಉಳುಮೆ ಮಾಡುತ್ತಿದ್ದ ಸಣ್ಣ ಜಾಗಕ್ಕಾಗಿ ನರಸಿಂಹಯ್ಯ ತಣ್ಣಗೆ ಹೋರಾಡುತ್ತಿದ್ದರು. ಆದರೆ, ಆ ಊರಿನ ಜಮೀನ್ದಾರರು ಅವರನ್ನು ಓಡಿಸಬೇಕೆಂದು ದಬ್ಬಾಳಿಕೆ ನಡೆಸತೊಡಗಿದ್ದರು. ನರಸಿಂಹಯ್ಯ ನನ್ನ ಬಳಿ ಬಂದು ಅವಲತ್ತುಕೊಂಡರು.

ನಾನು ಎರಡು ಮೂರು ಸಲ ಅವರ ಊರಿಗೆ ಹೋಗಿ ದಬ್ಬಾಳಿಕೆ ನಡೆಸುತ್ತಿದ್ದ ಎರಡು ಮೂರು ಕುಟುಂಬದವರಿಗೆ ಎಚ್ಚರಿಕೆ ನೀಡಿ ಬಂದೆ. `ಕಾನೂನಿನ ರೀತಿಯಲ್ಲಿ ಕೇಸು ನಡೆಯುತ್ತಿದೆ; ಮಧ್ಯೆ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ~ ಎಂದು ನಾನು ಅವರಿಗೆ ಹೇಳಿದ್ದು ನರಸಿಂಹಯ್ಯನವರಿಗೆ ಸಮಾಧಾನ ತಂದಿರಬೇಕು.

ನನಗೆ ನರಸಿಂಹಯ್ಯನವರಿಗಿಂತ ಅವರ ಪತ್ನಿಯ ಚಹರೆಯನ್ನು ಮರೆಯಲು ಸಾಧ್ಯವಾಗುವುದಿಲ್ಲ. ನನ್ನ ಬದುಕಿನಲ್ಲಿ ನೋಡಿದ ಅತಿ ಹೆಚ್ಚು ಸುಕ್ಕುಗಟ್ಟಿದ ಮುಖ ಅದು.

ಜಾತಿ ಕಿರುಕುಳದಿಂದ, ತಲತಲಾಂತ ರಿಂದ ನಡೆದ ಶೋಷಣೆಯಿಂದ ಸುಟ್ಟು ಬೆಂದಂತೆ ಮುಖದಲ್ಲಿ ನಿರಿಗೆಗಳು ಮೂಡಿದ್ದವು. ಅಜ್ಜಿಯ ಅಷ್ಟೂ ನೋವುಗಳನ್ನು ಅಡಗಿಸಿಟ್ಟು ಕೊಂಡಂತಿದ್ದ ನಿರಿಗೆಗಳವು. ಅಷ್ಟೆಲ್ಲಾ ನೊಂದಿದ್ದರೂ ಅಜ್ಜಿ ಬೇರೆಯವರಿಗೆ ನೋವಾದರೆ ಬೇಸರ ಪಟ್ಟುಕೊಳ್ಳುತ್ತಿದ್ದರು. ಪೊಲೀಸರ ಮುಖದಲ್ಲಿ ಸ್ವಲ್ಪ ಬೆವರು ಕಂಡರೂ ಅವರ ಕರುಳು ಚುರ‌್ರೆನ್ನುತ್ತಿತ್ತು.

ಒಂಟಿಮನೆಗಳಿರುವ ಕಡೆ ದರೋಡೆ ವ್ಯಾಪಕವಾಗಿ ನಡೆಯತೊಡಗಿತು. ಹಾಗಾಗಿ ನಾವು ಕಾಚರಕನಹಳ್ಳಿಯಲ್ಲೂ ಗಸ್ತು ತಿರುಗಬೇಕಾಯಿತು. ಆಗ ಕೊರೆವ ಚಳಿಯಲ್ಲಿ ನರಸಿಂಹಯ್ಯನವರ ಒಂಟಿ ಮನೆಯ ಬಳಿ ನಾವು ಅಡ್ಡಾಡುವಾಗ ಆ ಅಜ್ಜಿ, `ಇಷ್ಟು ರಾತ್ರಿಯಲ್ಲಿ ಪಾಪ ನೀವು ಓಡಾಡಬೇಕಾ? ಅದೂ ಈ ಕೊರೆವ ಚಳಿಯಲ್ಲಿ. ಎಷ್ಟು ಕಷ್ಟ ಪಡ್ತೀರಪ್ಪಾ, ಮಕ್ಕಳಾ?~ ಎನ್ನುತ್ತಿದ್ದರು.

`ಕಾಚರಕನಹಳ್ಳಿಯ ಪಂಪ್‌ಹೌಸ್ ಒಂದರ ಬಳಿ ಕೆಲವರು ಇಸ್ಪೀಟ್ ಆಡುತ್ತಿದ್ದಾರೆ. ಹಣ ಕಟ್ಟಿ ಅಂದರ್ ಬಾಹರ್ ಆಡುತ್ತಾ ಜೂಜುಕಟ್ಟೆ ಮಾಡಿಕೊಂಡಿದ್ದಾರೆ~ ಎಂಬ ಮಾಹಿತಿ ನನಗೊಮ್ಮೆ ಬಂತು. ನಾನು ಅಲ್ಲಿಗೆ ಹೋಗಿ ರೇಡ್ ಮಾಡಿದೆ. ಜೂಜಾಡು ತ್ತಿದ್ದವರನ್ನೆಲ್ಲಾ ದಸ್ತಗಿರಿ ಮಾಡಲು ಮುಂದಾದಾಗ ಅಲ್ಲಿ ಜಮೀನ್ದಾರರು ಕೂಡ ಸಿಕ್ಕಿಬಿದ್ದರು. ವಯಸ್ಸಿನಲ್ಲಿ ಹಿರಿಯರಾದ ಅವರು ಊರಿನಲ್ಲಿ ಪಾಳೇಗಾರನಂತೆ ಗತ್ತಿನಿಂದ ಇ್ದ್ದದರು.

`ನಿಮ್ಮನ್ನ ಅರೆಸ್ಟ್ ಮಾಡ್ತಿದೀನಿ. ಸ್ಟೇಷನ್‌ಗೆ ನಡೀರಿ~ ಎಂದೆ. `ಏನೇ ಆದ್ರೂ ನಾನು ಬರೋದಿಲ್ಲ. ನನ್ನನ್ನು ಅರೆಸ್ಟ್ ಮಾಡಿದರೆ ಮತ್ತೆ ಊರಲ್ಲಿ ಮುಖ ತೋರ‌್ಸೋಕೆ ಆಗೋಲ್ಲ. ನೀವೇನಾದ್ರೂ ಅರೆಸ್ಟ್ ಮಾಡಿ ಕರ‌್ಕೊಂಡು ಹೋದ್ರೆ ಮಾರನೆದಿನವೇ ನನ್ನ ಹೆಣ ನೋಡ್ಬೇಕಾಗುತ್ತೆ. ನಾನು ಆತ್ಮಹತ್ಯೆ ಮಾಡ್ಕೋತೀನಿ~ ಅಂತ ಅವರು ಧಮಕಿ ಹಾಕಿದರು.

ನನಗೆ ತಕ್ಷಣಕ್ಕೆ ಆ ದಲಿತ ದಂಪತಿ ನೆನಪಿಗೆ ಬಂದರು. ಈಗ ಆತ್ಮಗೌರವದ ಮಾತಾಡುವ ನೀವು ಬೇರೆಯವರ ಆತ್ಮಗೌರವದ ಬಗ್ಗೆ ಯಾಕೆ ಯೋಚಿಸುವುದಿಲ್ಲ ಎಂದೆ.`ಅಂಥಾ ಆತ್ಮಗೌರವ ಯಾರಿಗಿದೆ~ ಎಂದು ಮರುಸವಾಲು ಹಾಕಿದರು.  ಆಗ ಆ ದಲಿತ ದಂಪತಿಯ ಪ್ರಸ್ತಾಪ ಮಾಡಿದೆ. ಅವರಿಗೆ ಒಂದು ಸಣ್ಣ ತುಂಡು ಜಾಗ ಕೊಟ್ಟರೆ ಕಳೆದುಕೊಳ್ಳುವುದು ಏನೂ ಇಲ್ಲವೆಂದೆ. `ಬೇರೆ ಏನು ಬೇಕಾದ್ರೂ ಕೇಳಿ. ಆ ಜಾಗ ಮಾತ್ರ ಕೇಳಬೇಡಿ. ಅದು ನಮ್ಮ ಜಾಗ. ಅವರು ಬೇಲಿ ಹಾಕ್ಕೊಂಡಿದಾರೆ. ಬಿಟ್ಟು ಕೊಡುವ ಮಾತೇ ಇಲ್ಲ~ ಎಂದರು.

ಹಾಗಾದರೆ ಸ್ಟೇಷನ್‌ಗೆ ಬರಲೇಬೇಕು ಎಂದು ನಾನು ಅಸ್ತ್ರ ಪ್ರಯೋಗಿಸಿದೆ. ಆಗಲೂ ಅವರು ಜಗ್ಗಲಿಲ್ಲ. `ಬೇಕಾದ್ರೆ ನೀವು ಒಂದು ಲಕ್ಷ ರೂಪಾಯಿ ಕೇಳಿ, ಕೊಟ್ಟುಬಿಡ್ತೀನಿ. ಅವನಿಗೆ ಜಾಗ ಕೊಡಿ ಅಂತ ಮಾತ್ರ ಹೇಳಬೇಡಿ. ಅದು ಸಾಧ್ಯವೇ ಇಲ್ಲ~ ಎಂದು ಪಟ್ಟುಹಿಡಿದರು.

ಅಷ್ಟುಹೊತ್ತಿಗೆ ಮಾಹಿತಿ ಹರಡಿ ಊರಿನ ಜನರೆಲ್ಲಾ ಅಲ್ಲಿ ಸೇರತೊಡಗಿದರು. ನಮ್ಮ `ಮೊಬೈಲ್ ಸ್ವ್ಯಾಡ್~ ಕೂಡ ಬಂತು. ಆ ಜಮೀನ್ದಾರರು ಮಾತ್ರ ಪೊಲೀಸ್ ವ್ಯಾನ್ ಹತ್ತಲಿಲ್ಲ. ತಮ್ಮದೇ ಕಾರಿನಲ್ಲಿ ಬರಲು ಅವಕಾಶ ಮಾಡಿಕೊಂಡುವಂತೆ ನನ್ನನ್ನು ಕೋರಿಕೊಂಡರು. ಊರಿನ ಅನೇಕ ಜನರ ಬೆಂಬಲ ಕೂಡ ಅವರಿಗಿತ್ತು. ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದ ಅವರಿಗೆ ತಮ್ಮದೇ ಕಾರಿನಲ್ಲಿ ಬರಲು ಅನುಮತಿ ಕೊಟ್ಟೆ.
 
ನಾವು ಠಾಣೆ ತಲುಪಿದ ಕೆಲವೇ ನಿಮಿಷಗಳಲ್ಲಿ ಅವರೂ ಬಂದರು. ಅವರ ಜೊತೆ ಊರಿನ ಹಲವಾರು ಹಿರಿಯರು ಬಂದಿದ್ದರು. ಅವರನ್ನು ಬಂಧಿಸಿ ನಾನೇ ತಪ್ಪು ಮಾಡಿಬಿಟ್ಟೆ ಎಂಬಂತೆ ತಲೆಗೊಬ್ಬರು ಮಾತನಾಡಿದರು. ನಾನು ಮಾತ್ರ ತಲೆಕೆಡಿಸಿಕೊಳ್ಳದೆ ಪದೇಪದೇ ಆ ದಲಿತ ದಂಪತಿಯ ವಿಷಯ ಪ್ರಸ್ತಾಪ ಮಾಡತೊಡಗಿದೆ.

`ಏನೇ ಆದರೂ ಆ ಜಾಗವನ್ನು ಮಾತ್ರ ಬಿಡುವುದು ಸಾಧ್ಯವಿಲ್ಲ. ಪ್ರಾಣ ಬಿಟ್ಟರೂ ಬಿಟ್ಟೇನು~ ಎಂದೇ ಆ ಜಮೀನ್ದಾರರು ಹೇಳುತ್ತಿದ್ದರು. ನನಗೆ ಜಾತಿಯ ಬೇರುಗಳು ಎಷ್ಟು ಬಿಗಿಯಾಗಿರುತ್ತವೆ ಎಂಬುದು ಸ್ಪಷ್ಟವಾಗಿ ಗೊತ್ತಾಯಿತು.

`ನಿಮ್ಮ ಮೇಲೆ ಯಾವ ಕೇಸನ್ನೂ ಹಾಕದೆ, ಎಚ್ಚರಿಕೆ ಕೊಟ್ಟಂತೆ ಮಾಡಿ ಬಿಟ್ಟುಬಿಡುತ್ತೇನೆ. ಆದರೆ, ಆ ದಲಿತ ಕುಟುಂಬಕ್ಕೆ ಜಾಗ ಬಿಟ್ಟುಕೊಡಿ~ ಎಂದು ಕೊನೆಯದಾಗಿ ಎಂಬಂತೆ ವಿನಂತಿಸಿಕೊಂಡೆ. ಅವರ ಮುಖಭಾವದಲ್ಲಿ ಸ್ವಲ್ಪ ಬದಲಾವಣೆ ಕಂಡಿತು. `ನೀವು ದಲಿತರಾ? ಯಾಕೆ ಅವರ ಪರವಾಗಿ ಇಷ್ಟು ಮಾತನಾಡುತ್ತಿದ್ದೀರಿ?~ ಎಂದು ಮತ್ತೆಮತ್ತೆ ನನ್ನನ್ನೇ ವಿಚಾರಣೆ ಮಾಡುವಂತೆ ವಾದ ಹೂಡಲು ಮುಂದಾದರು. ನಾನು ದಲಿತ ಅಲ್ಲ ಎಂಬುದನ್ನು ಹೇಳಿದೆ. ಅವರು ಜಗ್ಗುವುದಿಲ್ಲ ಎಂದುಕೊಂಡು ಯಾವ ಕೇಸೂ ಹಾಕದೆ ಮನೆಗೆ ಹೋಗುವಂತೆ ಸೂಚಿಸಿದೆ.

ಅದುವರೆಗೆ ಪಟ್ಟುಹಿಡಿದಿದ್ದ ಅವರು ತಾವು ಅಷ್ಟು ಹಟ ಮಾಡಿದರೂ ನಾನು ಕೇಸು ಹಾಕದೆ ಇದ್ದುದನ್ನು ಕಂಡು ಕರಗಿಹೋದರು. `ನೀವು ಹಣಕ್ಕೆ ಆಸೆ ಪಡಲಿಲ್ಲ. ನನ್ನ ಮೇಲೂ ಹಟ ಸಾಧಿಸಲಿಲ್ಲ. ಹಾಗಾಗಿ ಅವರಿಗೆ ಜಾಗ ಬಿಟ್ಟುಕೊಡುತ್ತೇನೆ. ಡೀಸಿಗಾಗಲೀ ಕಾನೂನಿಗಾಗಲೀ ನಾನು ಜಗ್ಗಿರಲಿಲ್ಲ. ನಿಮ್ಮ ಸ್ವಭಾವಕ್ಕೆ, ಮಾನವೀಯತೆಗೆ ಬೆಲೆ ಕೊಟ್ಟು ನನ್ನ ನಿರ್ಧಾರ ಬದಲಿಸಿದ್ದೇನೆ~ ಎಂದಾಗ ನನಗಾದ ಆನಂದ ಅಷ್ಟಿಷ್ಟಲ್ಲ.

ಆಮೇಲೆ ಜಾಗ ಅಳೆಸುವಾಗ ನಾನೂ ಅಲ್ಲಿಗೆ ಹೋದೆ. ಅಲ್ಲೊಂದು ದೊಡ್ಡ ಹಲಸಿನ ಮರವಿತ್ತು. ಬಹಳ ಹಳೆಯದ್ದು. ಯಾವುದೇ ಕಾರಣಕ್ಕೂ ಆ ಮರ ಮಾತ್ರ ಬಿಟ್ಟುಕೊಡಬೇಡಿ ಎಂದು ಮತ್ತೆ ಕೆಲವು ಹಿರಿಯರು ಜಮೀನ್ದಾರರನ್ನು ಎತ್ತಿಕಟ್ಟಿದರು. `ಅವರು ಬೆಳೆದ ಮರ ಅದು. ಅದರ ಫಲವೂ ಅವರಿಗೇ ಸಲ್ಲಬೇಕಲ್ಲವೇ?~ ಎಂದು ನಾನು ವಾದಿಸಿದೆ. ಕೊನೆಗೆ ಅದಕ್ಕೂ ಜಮೀನ್ದಾರರು ಮಣಿದರು.

ಆ ಅಜ್ಜಿಗೆ ನನ್ನ ಮೇಲೆ ವಿಚಿತ್ರವೆಂಬಂಥ ಕಕ್ಕುಲತೆ  ಹುಟ್ಟಿತು. ಊರಿನವರು ಅವರ ಮನೆಯ ಹೊಸ್ತಿಲು ತುಳಿಯದ ಹೊತ್ತಿನಲ್ಲಿ ನಾನು ಆ ಅಜ್ಜಿ ಮಾಡಿದ ಚಹಾ ಕುಡಿದಿದ್ದೆ. ಆ ಅಜ್ಜಿ ತನಗಿಷ್ಟ ಬಂದಾಗ ನಾನಿದ್ದ ಪೊಲೀಸ್ ಠಾಣೆಗೆ ಬರುತ್ತಿದ್ದರು.
 
ತಲೆ ಮೇಲೆ ಕೈಯಿಟ್ಟು ಐದು ನಿಮಿಷ ತಮ್ಮಲ್ಲೇ ಏನೋ ಮಂತ್ರದಂತೆ ಗೊಣಗಿ ಆಶೀರ್ವಾದ ಮಾಡಿ ಹೊರಡುತ್ತಿದ್ದರು. ಅವರು ಯಾವಾಗ ಬಂದರೂ ತಡೆಯಬೇಡಿ ಎಂದು ಠಾಣೆಯ ಸಿಬ್ಬಂದಿಗೆ ಹೇಳಿದ್ದೆ. ಆ ಅಜ್ಜಿ ನನ್ನ ತಲೆ ಮೇಲೆ ಕೈಯಿಟ್ಟು ಹೋದ ನಂತರ ಏನೋ ಒಂದು ದಿವ್ಯ ಚೇತನ ಮೂಡಿದಂತೆ ನನಗೆ ಭಾಸವಾಗುತ್ತಿತ್ತು. ಮನಸ್ಸಿನಲ್ಲಿ ನಿರಾಳಭಾವ ತುಂಬುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT