ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪಾರಿ ಚಿಂತಕರು ಮತ್ತು ಸುಪಾರಿ ಹಂತಕರು!

Last Updated 7 ಜೂನ್ 2016, 19:40 IST
ಅಕ್ಷರ ಗಾತ್ರ

ಪತ್ರಿಕೆಗಳ ಕ್ರೈಂ ಪುಟಗಳಲ್ಲಿ ‘ಸುಪಾರಿ’ ಎಂಬ ಪದ ನೋಡಿನೋಡಿ, ಈ ‘ಸುಪಾರಿ’ ಎಂಬ ಪದ ಎಲ್ಲಿಂದ ಬಂತು ಎಂದು ಹುಡುಕತೊಡಗಿದೆ. ಪೊಲೀಸ್ ಮಿತ್ರರೊಬ್ಬರು ಅದರ ಮೂಲವನ್ನು ವಿವರಿಸಿದರು: ‘ಸುಪಾರಿ ಎಂದರೆ ವ್ಯಕ್ತಿಯೊಬ್ಬ ಯಾರನ್ನೋ ಕೊಲ್ಲಲು ಮಾಡಿಕೊಳ್ಳುವ ಒಪ್ಪಂದ; ಅದು ಅಪರಾಧ ಜಗತ್ತಿನ ಒಂದು ‘ಧಾರ್ಮಿಕ’ ಆಚರಣೆ. ಒಬ್ಬ ಕೊಲೆಗಡುಕನಿಗೆ ಎಲೆಅಡಿಕೆ ಮೇಲೆ ಹಣ ಇಟ್ಟು ಕೊಟ್ಟರೆ ಆತ ತನ್ನ ಕಾರ್ಯಕ್ಕೆ ಬದ್ಧನಾಗಿರಬೇಕು. ಇದು ಅಪರಾಧಲೋಕದ ಒಂದು ನೈತಿಕ ನಿಯಮ!’

ಈ ಪದಮೂಲ ‘ಸಂಶೋಧನೆ’ಯನ್ನು ಯೂನಿವರ್ಸಿಟಿಯೊಂದರ ಪ್ರಾಧ್ಯಾಪಕಿಯೊಬ್ಬರಿಗೆ ಹೇಳಿದರೆ, ‘ಅಯ್ಯೋ! ಸುಪಾರಿ ಈಗ  ಯೂನಿವರ್ಸಿಟಿಗಳವರೆಗೂ ಬಂದಿದೆ. ಇದು ಕೊಲೆಯ ಮಟ್ಟದ್ದಲ್ಲದ್ದಿರಬಹುದು; ಆದರೆ ಇದು ಬೇರೆ ಬೇರೆ ಥರದ ಸುಪಾರಿ, ಅಷ್ಟೆ!’ ಅಂದರು. ಕೊಂಚ ವಿಚಾರಿಸಿದಾಗ, ವಿಶ್ವವಿದ್ಯಾಲಯಗಳಲ್ಲಿ ಪ್ರಮೋಷನ್, ಸೀನಿಯಾರಿಟಿ ಇತ್ಯಾದಿಗಳನ್ನು ನೆಪವಾಗಿಟ್ಟುಇನ್ನೊಬ್ಬರಿಗೆ ಕಿರುಕುಳ ಕೊಡುವ ಮೇಷ್ಟರುಗಳನ್ನು, ಆ ಬಗೆಯ ಕಿರುಕುಳಗಳನ್ನು ಬಾಡಿಗೆ ಭಂಟರಿಂದ ಮಾಡಿಸಲು ಹಣ ಸುರಿಯುವವರನ್ನು ಅವರು ‘ಸುಪಾರಿಗಳು’ ಎನ್ನುತ್ತಿದ್ದರೆಂದು ತಿಳಿಯಿತು. ಕೊಲೆಗಡುಕ ಜಗತ್ತಿನ ಪದ ಹಾಗೂ ಕಾರ್ಯಾಚರಣೆಗಳೆರಡೂ ‘ಸರಸ್ವತಿಮಂದಿರ’ಗಳೆಂದು ಕರೆಯಲಾಗುವ ವಿಶ್ವವಿದ್ಯಾಲಯಗಳಲ್ಲಿ ನಿರ್ಲಜ್ಜವಾಗಿ ಚಲಾವಣೆಯಲ್ಲಿದ್ದಂತಿದ್ದವು!

ಪ್ರೊ. ಕಲಬುರ್ಗಿಯವರ ಹತ್ಯೆಯ ಹಿನ್ನೆಲೆಯಲ್ಲಿ ಯೂನಿವರ್ಸಿಟಿಯೊಳಗೇ ಇಂಥ ಯಾವುದಾದರೂ ಗುಂಪುಗಳು ಏನಾದರೂ ಕೆಲಸ ಮಾಡಿರಬಹುದೇ ಎಂದು ಆರಂಭದಲ್ಲಿ ಪೊಲೀಸರು ಹುಡುಕಾಡುತ್ತಿದ್ದುದು ನೆನಪಾಯಿತು. ಈ ಹತ್ಯೆಯಲ್ಲಿ ಕಲಬುರ್ಗಿಯವರು ತಾತ್ವಿಕವಾಗಿ ವಿರೋಧಿಸುತ್ತಿದ್ದ ಮಠಗಳ, ಗುಂಪುಗಳ ಹಾಗೂ ಕಲಬುರ್ಗಿಯವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರ ಕೈವಾಡವಿರಬಹುದೇ ಎಂದು ಕೂಡ ಪೊಲೀಸರು ಹುಡುಕಿದಂತಿದೆ. ಇವೆಲ್ಲವನ್ನೂ ನೋಡುತ್ತಿದ್ದಾಗ, ಈ ಕಾಲದಲ್ಲಿ ‘ಸುಪಾರಿ’ ಎಂಬ ಪದದ ಅರ್ಥ ಯಾವುದೇ ಬಗೆಯ ಕಿರುಕುಳ ಕೊಡಲು ಇನ್ನೊಬ್ಬರಿಗೆ ಹಣ ಮುಂತಾಗಿ ಯಾವುದೇ ಆಮಿಷ ಒಡ್ಡಿ ಒಪ್ಪಿಸುವ ಕೆಲಸಕ್ಕೆ ವಿಸ್ತರಿಸಿಕೊಂಡಿದೆ ಎಂಬುದು ಹೊಳೆಯಿತು. ಅಂದರೆ, ತಮಗೆ ಆಗದ ಇನ್ನೊಬ್ಬರನ್ನು ತುಳಿಯಲು ಮಾಡುವ ಹೊಂಚುಗಳೆಲ್ಲವೂ  ಒಂದು ಬಗೆಯ ಸುಪಾರಿ ಸಂಚುಗಳೇ!

ಇದು ಒಂದು ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ನಡೆದ ‘ಸುಪಾರಿ’ ಘಟನೆ: ಡಾ. ಎಕ್ಸ್ ಪ್ರಸಿದ್ಧ ವಿದ್ವಾಂಸರು. ಅವರಿಗೆ ರೀಡರ್ ಹುದ್ದೆಗೆ ಪ್ರಮೋಷನ್ ಸಂದರ್ಭ ಬಂತು. ಅರ್ಜಿ ಹಾಕಿದರು. ಅರ್ಜಿಯನ್ನು ಪರಿಶೀಲಿಸಿದ ಹಿರಿಯ ಪ್ರೊಫೆಸರ್ ‘ಎಕ್ಸ್ ಕೊಟ್ಟಿರುವ ಅರ್ಜಿ ಕ್ರಮಬದ್ಧವಾಗಿಲ್ಲ; ಅವರಿಗೆ ರೀಡರ್ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇಲ್ಲ’ ಎಂದು ಷರಾ ಬರೆದರು. ಎಕ್ಸ್ ಎಲ್ಲ ದಾಖಲೆಗಳನ್ನೂ ಪುಸ್ತಕಗಳನ್ನೂ ಮಂಡಿಸಿದರು. ಅದಕ್ಕೆ ಉತ್ತರವಿಲ್ಲ. ಎಕ್ಸ್ ಅರ್ಜಿಯನ್ನು ಹಿರಿಯ ಪ್ರೊಫೆಸರ್ ಯಾಕೆ ತಿರಸ್ಕರಿಸಿದರು? ‘ಎಕ್ಸ್ ಅಹಂಕಾರಿ. ನನ್ನಂಥ ಸೀನಿಯರ್ ಪ್ರೊಫೆಸರ್ ಬರೆದ ಲೇಖನಗಳಲ್ಲಿ ದೋಷವನ್ನು ಗುರುತಿಸಿ, ಆಡಿಕೊಂಡು ನಕ್ಕಿದ್ದಾನೆ. ಅವನಿಗೆ ಪಾಠ ಕಲಿಸಲು ತಕ್ಕ ಸಮಯವಿದು’ ಎಂದು ಪ್ರೊಫೆಸರ್ ದಿಗ್ವಿಜಯ ಸಾಧಿಸಿದವನಂತೆ ಆಡತೊಡಗಿದರು! ಇದಕ್ಕಾಗಿ ಅವರ ಕುಲಸಚಿವರು ‘ಸುಪಾರಿ’ಯನ್ನೂ ಕೊಟ್ಟಿದ್ದರಂತೆ!

ಈ ಕತೆ ಕೇಳಿದ ಮೇಲೆ, ಹಿಂದೊಮ್ಮೆ ಅದೇ ವಿಶ್ವವಿದ್ಯಾಲಯದ ಇನ್ನೊಬ್ಬ ಪ್ರೊಫೆಸರ್ ಪ್ರತಿಕ್ರಿಯೆ ನೆನಪಾಯಿತು. ಅಲ್ಲಿನ ವಿದ್ವಾಂಸಮಿತ್ರರೊಬ್ಬರು ವಿಚಿತ್ರ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದರು. ‘ಅವರಿಗೆ ಸಹಾಯ ಮಾಡಿ’ ಎಂದು ಆ ಪ್ರೊಫೆಸರರನ್ನು ಕೇಳಿದಾಗ ಥಟ್ಟನೆ ಬಂದ ಉತ್ತರ: ‘ಅವನಿಗೆ  ಹಾಗೇ ಆಗಲಿ ಬಿಡಿ. ಅವತ್ತು ಆ ದುರಹಂಕಾರಿ ನನ್ನ ಮುಂದೆಯೇ ಕಾಲ ಮೇಲೆ ಕಾಲು ಹಾಕಿಕೊಂಡು ಸಿಗರೇಟು ಸೇದುತ್ತಿದ್ದ’. ಅಂದರೆ, ಸಾಕ್ರೆಟೀಸ್‌ಗೆ ವಿಷ ಕುಡಿಸಿದ ಗ್ರೀಕ್ ಸಮಾಜ, ಗೆಲಿಲಿಯೋನ ಸಂಶೋಧನೆಯನ್ನು ಕೊಂದ ಚರ್ಚ್, ಲೇಖಕನೊಬ್ಬನ ಪುಸ್ತಕ ತಮಗೆ ಒಪ್ಪಿಗೆಯಾಗದಿದ್ದಕ್ಕೆ ಅವನಿಗೆ ಕಿರುಕುಳ ಕೊಡುವ ಮಠಗಳು… ಇವೆಲ್ಲದರ ರೆಂಬೆಗಳು ವಿಶ್ವವಿದ್ಯಾಲಯಗಳಲ್ಲೂ, ರಾಜಕೀಯ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲೂ ಹಬ್ಬಿಕೊಂಡಿವೆ ಎಂದಾಯಿತು.  

ಈ ಮಾತಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಿಚಾರವಾದಿ ದಾಭೋಲ್ಕರ್ ಹತ್ಯೆಯ ಹಿಂದೆ ಕೆಲವು ಹಿಂದೂವಾದಿ ಸಂಘಟನೆಗಳ ಕೈವಾಡವಿದೆಯೆಂಬ ಪತ್ರಿಕಾ ವರದಿಯನ್ನು ನೋಡಿದಾಗ, ಮೂಲಭೂತವಾದಿ ಸಿದ್ಧಾಂತಗಳು, ಅದರಲ್ಲೂ ಜನರನ್ನು ಒಡೆದು ತಮ್ಮ ಅಧಿಕಾರ ಸಾಧಿಸಲು ಹೊರಡುವ ‘ಸಿದ್ಧಾಂತ’ಗಳು ಸುಪಾರಿಗಳಾಗಿ ಕೆಲಸ ಮಾಡಬಲ್ಲವು ಎಂಬುದಕ್ಕೆ ಇತಿಹಾಸದ ಪುಟಗಳಿಂದ ಇಲ್ಲಿಯತನಕ ಪುರಾವೆಗಳಿವೆ ಎನ್ನಿಸಿತು. ಟೈಲರ್ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ಇದ್ದ ಗೋಡ್ಸೆ, ಹಿಂದೂರಾಷ್ಟ್ರ ಕುರಿತ ಸಾವರ್ಕರ್ ಮಾತು-ಬರಹಗಳಿಂದ ವಿಕೃತನಾದ. ಆ ವಿಕೃತ ಮನಸ್ಥಿತಿ ಅವನನ್ನು ಗಾಂಧೀಜಿ ಕೊಲೆಯವರೆಗೂ ಕರೆದೊಯ್ದಿತು. ‘ಗಾಂಧೀಜಿ ಮುಸ್ಲಿಮರ ಪರವಾಗಿದ್ದಾರೆ’ ಎಂದು ಅವರನ್ನು ಮುಗಿಸುವ ಸಂಚು ಮಾಡಿದ ಅವನ ಜೊತೆಯವರು ಕೂಡ ಮೂಲಭೂತವಾದಿ ಚಿಂತನೆಗಳ ಪ್ರೇರಣೆಯಿಂದ ಹಾಗೂ ಮುಸ್ಲಿಂ ದ್ವೇಷ
ದಿಂದ  ಈ ಕೆಲಸ ಮಾಡಿದ್ದರು. ಈಚೆಗಂತೂ ಇಂಥವರ ಸಂತತಿ  ಹೆಚ್ಚುತ್ತಿದೆ. ಇಸ್ಲಾಮಿಕ್ ರಾಷ್ಟ್ರ ಕಟ್ಟುತ್ತೇವೆಂದು ಹೊರಟವರ ಕ್ರೌರ್ಯ ಇನ್ನಷ್ಟು ಭೀಕರವಾಗಿದೆ.  ಇಸ್ಲಾಂ, ಸಿಖ್ ಅಥವಾ ಹಿಂದೂ ಧರ್ಮ ಯಾವುದರ ಹೆಸರಲ್ಲೇ ಆಗಲಿ, ನಕ್ಸಲಿಸಂ ಹೆಸರಿನಲ್ಲೇ ಆಗಲಿ, ಹಿಂಸೆಯನ್ನು ಪ್ರಚೋದಿಸುವ ಆಲೋಚನೆಗಳು ಅದರಲ್ಲಿ ಭಾಗಿಯಾಗುವ ಅನುಯಾಯಿಗಳನ್ನು ಸುಪಾರಿ ಕೊಲೆಗಾರರನ್ನಾಗಿಸುತ್ತಿರುತ್ತವೆ ಹಾಗೂ ಅವರನ್ನು ಅಪಾಯದ ಅಂಚಿಗೂ ತಳ್ಳುತ್ತಿರುತ್ತವೆ.

ಈ ಮಾತಿಗೆ ಈಚಿನ ಪುರಾವೆಯಾಗಿ, ಮೊನ್ನೆ ಹೆಸರಿಸಲಾದ ಸಮಜೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದ ಅಪರಾಧಿಗಳನ್ನು, ಗುಜರಾತಿನ ಗೋಧ್ರಾ ಹತ್ಯಾಕಾಂಡ
ದಲ್ಲಿ, ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಕೊಲೆ ಹಾಗೂ ನಂತರದ ಹತ್ಯಾಕಾಂಡದಲ್ಲಿ ಸಿಕ್ಕಿಬಿದ್ದಿರುವವರನ್ನು ಗಮನಿಸಿ. ಇವರಲ್ಲಿ ಹಿಂದೂ ಮೂಲಭೂತವಾದ ಹಾಗೂ ಇಸ್ಲಾಮಿಕ್ ಮೂಲಭೂತವಾದ ಎರಡರಿಂದಲೂ ಪ್ರಭಾವಿತರಾದವರಿದ್ದಾರೆ.  ತಾವು ಒಪ್ಪುವ ಐಡಿಯಾಗಳ ಪ್ರಕಾರವೇ ಎಲ್ಲವೂ ನಡೆಯಬೇಕು; ಅವನ್ನು ಒಪ್ಪದವರನ್ನು ಇಲ್ಲವಾಗಿಸಬೇಕು ಎಂದು ಹೊರಡುವ ಕ್ರೂರಿಗಳ ಆಶಯಕ್ಕೆ ತಕ್ಕ ಅನುಯಾಯಿಗಳು ಸಿಕ್ಕ ಮೇಲೆ, ಆ ಆಶಯ ಅಹಂಕಾರವಾಗಿ ಪರಿವರ್ತನೆಯಾಗುತ್ತದೆ. ಈ ಕ್ರೂರಿಗಳು ತಮ್ಮ ಅನುಯಾಯಿಗಳನ್ನು ಹಣ, ಆಮಿಷ ಹಾಗೂ ಶಬ್ದಜಾಲಗಳಿಂದ ಪ್ರಚೋದಿಸಿದಂತೆಲ್ಲ ಆ ಅನುಯಾಯಿಗಳು ಯಾವುದಕ್ಕೂ ಹೇಸದವರಾಗುತ್ತಾರೆ; ಕೊಲೆ, ದೊಂಬಿ, ಗಲಭೆ ಎಲ್ಲದಕ್ಕೂ ಸಿದ್ಧರಾಗುತ್ತಾರೆ.

ದುಷ್ಟರ ಆಲೋಚನೆಗಳೇ ಸುಪಾರಿಗಳಾಗಿ ಕೆಲಸ ಮಾಡುವ ಈ ಮಾದರಿ ಚರಿತ್ರೆಯ ಹಳೆಯ ರೋಗಗಳು ಇವತ್ತಿಗೂ ಮರುಕಳಿಸುತ್ತಿರುವುದನ್ನು ಸೂಚಿಸುತ್ತದೆ. ಚರಿತ್ರೆಯಲ್ಲಿ ‘ಧರ್ಮ’ಗಳ ಸ್ಥಾಪನೆಗಾಗಿ ನಡೆದಿರುವ ಕೊಲೆಗಳ ಸರಣಿಗಳನ್ನು ನೋಡಿ: ಎಲ್ಲರನ್ನೂ ಒಳಗೊಳ್ಳಬೇಕಾದ ಧರ್ಮಗಳು ಜಡಸಿದ್ಧಾಂತಗಳಾಗಿ ತಮ್ಮ ಮಾರ್ಗ
ಗಳನ್ನು ಒಪ್ಪದವರನ್ನು ಮುಗಿಸುವ ಕತ್ತಿಗಳಾಗುತ್ತಾ ಬಂದಿವೆ. ಚರಿತ್ರೆಯುದ್ದಕ್ಕೂ ಇಂಥ ಭೀಕರ ರಕ್ತದ ಕಲೆ ಅಂಟಿರುವ ಧಾರ್ಮಿಕ ನಾಯಕರ, ಅನುಯಾಯಿಗಳ ಕೈಗಳ ರಕ್ತದ ಕಲೆಯನ್ನು, ಶೇಕ್‌ಸ್ಪಿಯರ್ ಮಾತಿನಲ್ಲೇ ಹೇಳುವುದಾದರೆ ‘ಅರೇಬಿಯಾದ ಎಲ್ಲ ಸುಗಂಧ ದ್ರವ್ಯಗಳೂ ಮಧುರಗೊಳಿಸಲಾರವು!’      

ಇವೆಲ್ಲ ಎಂದೋ ಚರಿತ್ರೆಯಲ್ಲಿ ಆಗಿ ಹೋದ ಕತೆಗಳೆಂದು ಮೂಗು ಮುರಿಯುವುದು ಮೂರ್ಖತನವಾದೀತು. ಚರಿತ್ರೆಯ ಈ  ಚಾಳಿಗಳು ಈಗ ಹೆಚ್ಚುತ್ತಿರುವುದು ರಾಜಕಾರಣ ಹಾಗೂ ಧರ್ಮಗಳ ಭಯಾನಕ ಬೆಸುಗೆಯಿಂದ. ಗೆಲ್ಲುವುದು ತನ್ನ ಜನಾನುರಾಗದಿಂದಲ್ಲ; ಬದಲಿಗೆ ಇನ್ನೊಬ್ಬನನ್ನು ‘ಮುಗಿಸುವುದರಿಂದ’ ಎಂದು ಹೊರಟಿರುವ ರಾಜಕಾರಣಿಗಳ ಹೀನಚಾಳಿ ಇಡೀ ದೇಶಕ್ಕೇ ಹಬ್ಬುತ್ತಿದೆ. ಅದು ಧರ್ಮದಿಂದ ರಾಜಕೀಯಕ್ಕೆ; ರಾಜಕೀಯದಿಂದ ಕುಟುಂಬಕ್ಕೆ; ಕುಟುಂಬದಿಂದ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಹಬ್ಬುತ್ತಿದೆ. ಮೂರ್ಖ ರಾಜಕೀಯ ನಾಯಕರು ತಮ್ಮ ಎದುರಾಳಿ ಪಕ್ಷಗಳನ್ನು ‘ಸೋಲಿಸುವ’ ಮಾತಾಡದೆ, ‘ಮುಗಿಸುವ’ ಅಹಂಕಾರದ ಮಾತಾಡತೊಡಗಿದಾಗ ಅವರ ಹುಂಬ ಅನುಯಾಯಿಗಳು ತಮ್ಮ ಎದುರಾಳಿ ಪಕ್ಷಗಳ ಕಾರ್ಯಕರ್ತರನ್ನು ‘ಮುಗಿಸಿ’ ಜೈಲಿಗೆ ಹೋಗುತ್ತಾರೆ, ಅಷ್ಟೆ. ಇಂಡಿಯಾದಲ್ಲಿ ನಡೆಯುವ ರಾಜಕೀಯ ಕಾರ್ಯಕರ್ತರ ಕೊಲೆಗಳ ಹಿಂದೆ ಈ ಬಗೆಯ ಹೀನ ರಾಜಕೀಯ ‘ಚಿಂತನೆ’ಗಳ ಕುಮ್ಮಕ್ಕು ಎದ್ದು ಕಾಣುತ್ತದೆ. 

ಈ ಬಗ್ಗೆ ಬರೆಯುತ್ತಿದ್ದಾಗ, ಅನಂತಮೂರ್ತಿಯವರು ಬರೆದ ಮಾತೊಂದು ಕಣ್ಣಿಗೆ ಬಿತ್ತು. ಅರವತ್ತು, ಎಪ್ಪತ್ತರ ದಶಕದಲ್ಲಿ ಸಮಾಜವಾದಿ ಗುಂಪುಗಳ ನಡುವೆ ನಡೆಯು
ತ್ತಿದ್ದ ತಾತ್ವಿಕ ಭಿನ್ನಾಭಿಪ್ರಾಯಗಳು, ಜಗಳಗಳನ್ನು ಕುರಿತು ಬರೆಯುತ್ತಾ, ‘ಈ ಜಗಳಗಳಲ್ಲಿ ಕಪಟಗಳಾಗಲೀ ಕಾರಸ್ಥಾನಗಳಾಗಲೀ ಇರಲಿಲ್ಲ’ ಎಂಬುದನ್ನು ಅನಂತಮೂರ್ತಿ ಗುರುತಿಸುತ್ತಾರೆ. ಈ ತಾತ್ವಿಕ ಜಗಳಗಳಲ್ಲಿ ತೀವ್ರತೆ, ಘನತೆಯ ಜೊತೆಗೆ ಕಹಿಯೂ ಇತ್ತು, ನಿಜ. ಆದರೆ ಒಬ್ಬರನ್ನೊಬ್ಬರು ‘ಮುಗಿಸುವ’ ಸಂಚುಗಳಿರಲಿಲ್ಲ.  ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಸಮಾಜವಾದಿಗಳಿಗೆ ಕಾಂಗ್ರೆಸ್ಸಿಗರ ಜೊತೆಗೆ ತೀವ್ರ ತಾತ್ವಿಕ ಜಗಳಗಳಿದ್ದವು. ಕಾಂಗ್ರೆಸ್ಸಿನಲ್ಲಿದ್ದ ಸಮಾಜವಾದಿಗಳ ನಡುವೆ ಉಗ್ರವಾದವನ್ನು ಪ್ರತಿಪಾದಿಸುತ್ತಿದ್ದ ಜಯಪ್ರಕಾಶ ನಾರಾಯಣ್ ಥರದವರಿದ್ದರು. ಆದರೆ ಅವರಲ್ಲಿ ಯಾರೂ ತಮ್ಮ ನಿಲುವನ್ನು ಒಪ್ಪದ ಪಕ್ಷದ ನೇತಾರರನ್ನು ದೈಹಿಕವಾಗಿ ಮುಗಿಸುವ ನೀಚತನಕ್ಕೆ ಇಳಿಯಲಿಲ್ಲ. ಆನಂತರ ಇವರೆಲ್ಲ ವಿವಿಧ ಪಕ್ಷಗಳಾಗಿ ಕವಲೊಡೆದಾಗಲೂ ಪರಸ್ಪರ ಕಟುವಾದ ವಿಮರ್ಶೆಯ ಭಾಷೆಯನ್ನು ಬಳಸಿದರೇ ಹೊರತು ಹಿಂಸೆಯ ಭಾಷೆಯನ್ನಲ್ಲ; ಅದಕ್ಕೆ ಆ ಪಕ್ಷಗಳ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಹಿಂಸೆಯ ವಿಭಜಕ ಭಾಷೆಯಿರಲಿಲ್ಲ ಎನ್ನುವುದೂ ಒಂದು ಕಾರಣ.

ಆ ಕಾಲದ ರಾಜಕಾರಣಿಗಳು ತಮ್ಮ ಎದುರಾಳಿ ಪಕ್ಷಗಳನ್ನು ಎದುರಿಸಲು ಹೋರಾಟ, ಚರ್ಚೆ, ಚುನಾವಣೆಗಳ ಮಾರ್ಗಗಳನ್ನು ಬಳಸಿದರೇ ಹೊರತು ‘ಸುಪಾರಿ’ಯನ್ನಲ್ಲ. ಗಾಂಧಿವಾದಿಗಳಲ್ಲೂ ಭಿನ್ನಾಭಿಪ್ರಾಯಗಳಿದ್ದವು; ಆದರೆ ಅವರಲ್ಲಿ ಇನ್ನೊಬ್ಬರನ್ನು ಮುಗಿಸುವ ಕ್ರೌರ್ಯವಿರಲಿಲ್ಲ. ಇಂಥ ಉದಾರವಾದಿ ಚರಿತ್ರೆಯ ಅರಿವಿಲ್ಲದ ಇವತ್ತಿನ ಹುಂಬರು ಮಾತ್ರ ಭಿನ್ನಾಭಿಪ್ರಾಯ ಬಂದ ತಕ್ಷಣ ಅಸಹ್ಯಕರ ಭಾಷೆಯನ್ನು, ಆಯುಧಗಳನ್ನು ಬಳಸಿ ಇತರರನ್ನು ಮುಗಿಸಲೆತ್ನಿಸುತ್ತಾರೆ. ಈ ಧೋರಣೆಗಳು ಇಂಡಿಯಾದ ಜಾತಿಮೂಲದ ಫ್ಯೂಡಲ್ ಮೂಲದಿಂದಲೂ ಬಂದಿವೆ. ನಗರದಲ್ಲಿ ಓದಿದ ದಲಿತ ಹುಡುಗನೊಬ್ಬ ಒಳ್ಳೆಯ ಬಟ್ಟೆ ಹಾಕಿಕೊಂಡು ಊರಿಗೆ ಬಂದದ್ದಕ್ಕೇ ಉರಿದುಬೀಳಬಲ್ಲ ಗೌಡ, ಪಟೇಲ, ಶಾನುಭೋಗರ ನಾಡು ಇದು. ಈ ಎಲ್ಲರೂ ಒಂದಲ್ಲ ಒಂದು ಬಗೆಯ ಸುಪಾರಿ ಚಿಂತನೆಯ ಮುಂದುವರಿಕೆಯೇ ಆಗಿರುತ್ತಾರೆ. ‘ಸುಪಾರಿ’ ಎನ್ನುವುದು ಈ ನೆಲದಲ್ಲೇ ಹರಿಯುತ್ತಿರುವ ಕ್ರೌರ್ಯದ ಮುಂದುವರಿಕೆ ಕೂಡ ಎಂಬುದು ಹೊಳೆಯಿತೆ?

ಸುಪಾರಿ: ಕೊಟ್ಟೋನು ವೀರಭದ್ರ; ಇಸ್ಕೊಂಡೋನು ಕೋಡಂಗಿ!
ಈ ಅಂಕಣ ಬರೆಯುವ ದಿನ ಖ್ಯಾತ ವಕೀಲ ಸಿ.ಎಚ್.ಹನುಮಂತರಾಯರು ಸುಪಾರಿ ಹತ್ಯೆಯೊಂದನ್ನು ಕುರಿತು ಹೇಳಿದರು. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಸುಪಾರಿ ಕೊಟ್ಟು ಕೊಲೆ ಮಾಡಲು ಹಚ್ಚಿದವನು ಐದು ವರ್ಷಗಳಿಂದ (ಪೊಲೀಸರ ಪ್ರಕಾರ!) ‘ಕಾಣೆಯಾಗಿದ್ದಾನೆ’; ಸುಪಾರಿ ಪಡೆದು ಕೊಲೆ ಮಾಡಿದವನು ಸಿಕ್ಕಿಬಿದ್ದು ವಿಚಾರಣೆ ಎದುರಿಸುತ್ತಿದ್ದಾನೆ. ‘ಸಾಮಾನ್ಯವಾಗಿ ಸುಪಾರಿಯನ್ನು ಯಾರೋ ಯಾರ ಮೂಲಕವೂ ಯಾರಿಗೋ ಕೊಡಿಸುತ್ತಾರೆ. ಹೀಗಾಗಿ ಸುಪಾರಿ ಪಡೆದವನು, ಕೊಲೆಯಾದವನು ಇಬ್ಬರೂ ಬಲಿಪಶುಗಳೇ; ಆದರೆ ತನಿಖೆ ದಕ್ಷವಾಗಿರದಿದ್ದರೆ ಸುಪಾರಿ ಕೊಟ್ಟವನು ಬಚಾವಾಗುತ್ತಾನೆ’ ಎಂದು ಹನುಮಂತರಾಯರು ವಿಶ್ಲೇಷಿಸಿದರು.

ಈ ಮಾತಿನ ಹಿನ್ನೆಲೆಯಲ್ಲಿ ಗುಜರಾತಿನ ಕೋಮು ಗಲಭೆಗಳ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವವರನ್ನು ನೋಡಿ: ಇವರಲ್ಲಿ ಮುಗ್ಧರೂ ಇರಬಹುದು.  ಅವರ ಜೊತೆಗೇ ಧರ್ಮದ ಅಮಲಿನಲ್ಲಿ ಅಥವಾ ಹಣಕ್ಕಾಗಿ ಹೀನ ಕೆಲಸಕ್ಕೆ ಇಳಿದವರೂ ಸಿಕ್ಕಿಬಿದ್ದಿದ್ದಾರೆ; ಅವರನ್ನು ಪ್ರಚೋದಿಸಿದ ರಾಜಕಾರಣಿಗಳು ಬಚಾವಾಗಿದ್ದಾರೆ. ಆದರೂ ಎಂಜಲಿಗಾಗಿ ದುಷ್ಟತನ ಮಾಡುವವರೆಲ್ಲ ಒಂದಲ್ಲ ಒಂದು ದಿನ ಮೊಕದ್ದಮೆಯನ್ನೂ, ಶಿಕ್ಷೆಯನ್ನೂ ಅನುಭವಿಸಲೇಬೇಕಾಗುತ್ತದೆ; ಅವರಿಗೆ ಕುಮ್ಮಕ್ಕು ಕೊಟ್ಟವರೂ ಸಿಕ್ಕಿಬೀಳಬೇಕಾಗುತ್ತದೆ. ಕೊಂಚ ವಿವೇಕವಿದ್ದರೆ, ಇದು ಎಲ್ಲರಿಗೂ  ಹೊಳೆಯುವ ಸತ್ಯ. ಆದರೆ ‘ಮನುಷ್ಯನ ವಿವೇಕ ಅವನಿಗೆ ಯಾಕೆ ಸಕಾಲಕ್ಕೆ ನೆರವಿಗೆ ಬರುವುದಿಲ್ಲ?’ ಎಂಬ ವಿಸ್ಮಯಕರ ಪ್ರಶ್ನೆಯನ್ನು ಗ್ರೀಕ್ ನಾಟಕಕಾರರು ಎರಡು ಸಾವಿರ ವರ್ಷಗಳ ಕೆಳಗೆ ಎತ್ತಿದ್ದರು; ಅದಕ್ಕೆ ಇವತ್ತಿಗೂ ಉತ್ತರ ಸಿಕ್ಕದಿರುವುದು ವಿಚಿತ್ರ!

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT