ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಹೂಡಿಕೆಗೆ ಅಧ್ಯಯನ ಅಗತ್ಯ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಷೇರಿನ ಬೆಲೆಗಳಲ್ಲಿ ಏರಿಳಿತ ಪ್ರದರ್ಶನಕ್ಕೆ ಕಾರಣಗಳು ವೈವಿಧ್ಯಮಯವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಏರಿಳಿತಕ್ಕೆ ಹೊರಗಿನ ಕಾರಣಗಳೇ ಹೆಚ್ಚು ಪ್ರಭಾವಿಯಾಗಿರುವುದನ್ನು ಕಾಣುತ್ತೇವೆ. ವಿಶೇಷವಾಗಿ ಅಗ್ರಮಾನ್ಯ ಕಂಪನಿಗಳ ಷೇರುಗಳ ಬೆಲೆಗಳಲ್ಲಿ ತೀವ್ರತರವಾದ ಏರಿಳಿತಗಳು ಪ್ರದರ್ಶಿತವಾಗಿ ಹಲವಾರು ಅಲ್ಪಕಾಲೀನ ಅವಕಾಶಗಳು ಸೃಷ್ಟಿಯಾಗಿ ಮಾಯವಾಗುವುದು ಈ ವಾರವೂ ಕಂಡು ಬಂದಿದೆ. ಕಂಪನಿಗಳಾದ ದಿವೀಸ್ ಲ್ಯಾಬೊರೇಟರೀಸ್, ಡಿಮಾರ್ಟ್, ದಿವಾನ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್, ರಿಲಯನ್ಸ್ ಕ್ಯಾಪಿಟಲ್, ಎಡಲ್ವಿಸ್ ಫೈನಾನ್ಶಿಯಲ್ ಸರ್ವಿಸಸ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಸಿಮನ್ಸ್ ಲಿಮಿಟೆಡ್, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಏಷಿಯನ್ ಪೇಂಟ್ಸ್, ಬಜಾಜ್ ಫಿನ್ ಸರ್ವ್ , ಇಂಡಿಗೊ, ಜೆಟ್ ಏರ್‌ವೇಸ್ ಮುಂತಾದ ಕಂಪನಿಗಳು ಕಂಡ ಕುಸಿತವು ಅಗಾಧವಾದುದಾಗಿದೆ.  ಇವುಗಳಲ್ಲಿ ಹಲವಾರು ಕಂಪನಿಗಳು ಆಕರ್ಷಕ ಚೇತರಿಕೆ ಕಂಡಿವೆ.

ಈ ವಾರ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್, ದಿವೀಸ್ ಲ್ಯಾಬ್, ಕಂಪನಿಗಳ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲಾಯಿತು. ಈ ಕಾರಣಕ್ಕೆ ಷೇರಿನ ಬೆಲೆಗಳು ಉತ್ತುಂಗಕ್ಕೆ ತಲುಪಿ ನಂತರ ಜಾರಿದವು. ಆದರೆ, ದಿವೀಸ್ ಲ್ಯಾಬ್ ಕಂಪನಿಯ ಬಗ್ಗೆ ಪ್ರಚಲಿತದಲ್ಲಿದ್ದ ಸುದ್ದಿಯು ಬೇರೆಯೇ ಆಗಿದೆ. ಅಮೆರಿಕದ ಎಫ್ ಡಿ ಎ ಯ ಕ್ಲಿನ್ ಚಿಟ್ ನಿರೀಕ್ಷೆಯಿಂದ ಷೇರಿನ ಬೆಲೆ ₹ 1,000  ದಾಟಿತು. ವಾರ್ಷಿಕ ಸಾಮಾನ್ಯ ಸಭೆಯ ನಂತರ ಷೇರಿನ ಬೆಲೆ, ಅಮೆರಿಕಾದ ಎಫ್ ಡಿ ಎ ಯ ಹೊಸ ತಕರಾರುಗಳ ಕಾರಣ ಕುಸಿಯಿತು.

ಡಿಮಾರ್ಟ್ ಕಂಪನಿಯ ಷೇರಿನ ಬೆಲೆಯು ₹ 984 ರ ಸಮೀಪಕ್ಕೆ ಸೋಮವಾರ ಕುಸಿಯಿತು. ಆದರೆ, ಮಂಗಳವಾರ   ₹1,217 ರ ವಾರ್ಷಿಕ ಗರಿಷ್ಠದ ದಾಖಲೆ ಮಟ್ಟಕ್ಕೆ ಜಿಗಿತ ಕಂಡಿತು. ಬುಧವಾರ ₹1,070 ಕ್ಕೆ ಇಳಿದು ₹1,077 ರಲ್ಲಿ ಕೊನೆಗೊಂಡಿತು. ಈ ಮಟ್ಟದ ರಭಸದ ಏರಿಳಿತಕ್ಕೆ ಯಾವುದೇ ಆಂತರಿಕ ಬೆಳವಣಿಗೆಗಳಾಗಲಿ, ಘೋಷಣೆಗಳಾಗಲಿ ಇದ್ದಿರಲಿಲ್ಲ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ.

ಅದರಂತೆ ವಿತ್ತೀಯ ಸೇವಾ ವಲಯದ ಎಡಲ್ವಿಸ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿ ಷೇರಿನ ಬೆಲೆಯು ಸೋಮವಾರ ₹237 ರ ಸಮೀಪಕ್ಕೆ ಕುಸಿದು ಮಂಗಳವಾರ ₹280 ರ ಸಮೀಪಕ್ಕೆ ಚೇತರಿಸಿಕೊಂಡು ಬುಧವಾರ ₹294 ರವರೆಗೂ ಜಿಗಿದು ಅಂದೇ ₹263 ರ ಸಮೀಪಕ್ಕೆ ಕುಸಿದಿದೆ. ಈ ರೀತಿಯ ಚಟುವಟಿಕೆಯ ಹಿಂದೆ ಕಂಪನಿ ₹2,000 ಕೋಟಿ ಮೌಲ್ಯದ ಷೇರುಗಳ ಅಥವಾ ಮತ್ತ್ಯಾವುದೋ ರೂಪದಲ್ಲಿ ಸಂಪನ್ಮೂಲ ಸಂಗ್ರಹಣೆಗೆ ನಿರ್ಧರಿಸಿರುವುದೇ ಮುಖ್ಯ ಕಾರಣ.

ಗೃಹ ಸಾಲಗಳ ಕಂಪನಿ ದಿವಾನ್ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆಯೂ ಸಹ ಹೆಚ್ಚು ಏರಿಳಿತಗಳನ್ನು ಪ್ರದರ್ಶಿಸಿದೆ. ಹಿಂದಿನ ವಾರ ₹597 ರವರೆಗೂ ಏರಿಕೆ ಕಂಡಿದ್ದ ಈ ಕಂಪನಿ ಸೋಮವಾರ ಭಾರಿ ಕುಸಿತಕ್ಕೊಳಗಾಗಿ ₹518 ರ ಸಮೀಪಕ್ಕೆ ಇಳಿಯಿತು. ಆದರೆ ಮಂಗಳವಾರ ಷೇರಿನ ಬೆಲೆಯು ಪುಟಿದೆದ್ದು ₹556 ರ ಸಮೀಪ ಕೊನೆಗೊಂಡಿತು. ಬುಧವಾರ ಷೇರು ಮತ್ತೊಮ್ಮೆ ₹520 ರವರೆಗೂ ಕುಸಿಯಿತು. ಈ ರೀತಿ ಏರಿಳಿತಕ್ಕೆ ಯಾವುದೇ ಅಧಿಕೃತ ಕಾರಣಗಳು ಇದ್ದಿರಲಿಲ್ಲ.

ಒಟ್ಟಾರೆ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಮಾದರಿಯ ಚಟುವಟಿಕೆಯು ಬಂಡವಾಳ ಸುರಕ್ಷತೆಯೊಂದಿಗೆ ಲಾಭ ಗಳಿಕೆಗೆ ಅವಕಾಶ ಮಾಡಿಕೊಡುವುದು ಎಂಬುದು ಖಾತ್ರಿಯಾಗಿದೆ.

ಸೆಪ್ಟೆಂಬರ್ ಮಾಸದ ಅಂತ್ಯದಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲೇ ಬೇಕಾಗಿದ್ದರಿಂದ ಕಂಪನಿಗಳ ಗಮನವು ಅತ್ತ ಕಡೆ ಕೇಂದ್ರೀಕೃತವಾಗಿರುತ್ತದೆ. ಈ ತ್ರೈಮಾಸಿಕದಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಸಂಪನ್ಮೂಲ ಸಂಗ್ರಹಣೆಯತ್ತ ಹೆಚ್ಚಿನ ಗಮನ ಹರಿಸಿವೆ. ಲಾಭಾಂಶ ಪ್ರಕಟಣೆಯಂತೂ ಇಲ್ಲವೇ ಇಲ್ಲ ಎನ್ನುವಂತಿದೆ.

ವಾರದುದ್ದಕ್ಕೂ ನಕಾರಾತ್ಮಕ ವಿಚಾರಗಳು ತೇಲುತ್ತಿದ್ದವು. ಜಿಡಿಪಿ ಕುಸಿತ, ವಿದೇಶಿ ವಿತ್ತೀಯ ಸಂಸ್ಥೆಗಳ ಭರ್ಜರಿ ಮಾರಾಟ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂಡಿರುವ ಉತ್ತರ ಕೊರಿಯಾ ಗೊಂದಲ, ರೂಪಾಯಿ ಬೆಲೆ ಕುಸಿತಗಳೊಂದಿಗೆ ಮೂಲಾಧಾರಿತ ಪೇಟೆಯ ಚುಕ್ತಾಚಕ್ರದ ಅಂತಿಮ ಸಮಯವೂ ಪೇಟೆಯ ಕುಸಿತಕ್ಕೆ ಕಾರಣಗಳಾದರೂ ಇತ್ತೀಚಿಗೆ ಪೇಟೆಯಲ್ಲಿ ಕಂಡಿರುವ ಅಭೂತಪೂರ್ವ ಏರಿಕೆಯು ಲಾಭದ ನಗದೀಕರಣಕ್ಕೆ ಒತ್ತು ನೀಡಿದೆ. ಒಟ್ಟಾರೆ 688 ಪಾಯಿಂಟುಗಳ ಇಳಿಕೆ ಕಂಡ ಸಂವೇದಿ ಸೂಚ್ಯಂಕವು ಒಂದು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿದರೆ, ಮಧ್ಯಮಶ್ರೇಣಿ ಸೂಚ್ಯಂಕವು 17 ಪಾಯಿಂಟುಗಳ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 178 ಪಾಯಿಂಟುಗಳ ಇಳಿಕೆ ಕಂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿದ್ದರೂ ಸಹ ಸೂಚ್ಯಂಕಗಳು ಅದಕ್ಕನುಗುಣವಾಗಿ ಕುಸಿಯದಿರುವುದಕ್ಕೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ಮತ್ತು ಮ್ಯೂಚುವಲ್ ಫಂಡ್ ಗಳ ಬೆಂಬಲ ಪೇಟೆಗೆ ದೊರೆತಿರುವುದಾಗಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹133.35 ಲಕ್ಷ ಕೋಟಿಯಿಂದ ₹131.81 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಬೋನಸ್ ಷೇರಿನ ವಿಚಾರ: ಶಿವಾಲಿಕ್ ಬೈಮೆಟಲ್ ಕಂಟ್ರೋಲ್ಸ್ ಲಿಮಿಟೆಡ್ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಅಕ್ಟೊಬರ್ 6 ನಿಗದಿತ ದಿನವಾಗಿದೆ.

ಹೊಸ ಷೇರಿನ ವಿಚಾರ: ಇತ್ತೀಚಿಗೆ ಪ್ರತಿ ಷೇರಿಗೆ ₹700 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ ಎಸ್ ಬಿ ಐ ಲೈಫ್ ಇನ್ಶುರನ್ಸ್ ಕಂಪನಿ ಲಿಮಿಟೆಡ್ ಷೇರುಗಳು ಅಕ್ಟೊಬರ್ 3 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

* ಗಾದ್ರೇಜ್ ಅಗ್ರೋವೆಟ್ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ ₹450 ರಿಂದ ₹460 ರ ಅಂತರದಲ್ಲಿ ಅಕ್ಟೋಬರ್ 4 ರಿಂದ ಅಕ್ಟೋಬರ್ 6 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 32 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

* ಎಂ ಎ ಎಸ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಕಂಪನಿ ₹ 10 ರ ಮುಖಬೆಲೆಯ ಪ್ರತಿಷೇರಿಗೆ ₹456 ರಿಂದ ₹459 ರ ಅಂತರದಲ್ಲಿ ಅಕ್ಟೋಬರ್ 6 ರಿಂದ 10 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 32 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

* ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್ ಲಿಮಿಟೆಡ್ ಕಂಪನಿ ಅಕ್ಟೊಬರ್ 9 ರಿಂದ 11 ರವರೆಗೂ ₹10 ರ ಮುಖಬೆಲೆಯ ಷೇರುಗಳನ್ನು ಆರಂಭಿಕ ಷೇರು ವಿತರಣೆ ಮೂಲಕ ಪೇಟೆ ಪ್ರವೇಶಿಸಲಿದೆ.

* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಪೋಲೊ ಕ್ವೀನ್ ಇಂಡಸ್ಟ್ರಿಯಲ್ ಅಂಡ್ ಫಿನ್ ಟೆಕ್ ಲಿಮಿಟೆಡ್ 28 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಹಕ್ಕಿನ ಷೇರಿನ ವಿಚಾರ: ದಿ ಇಂಡಿಯನ್ ಹೋಟೆಲ್ಸ್ ಕಂಪನಿ 1:5 ರ ಅನುಪಾತದ, ಪ್ರತಿ ಷೇರಿಗೆ ₹ 75 ರಂತೆ ವಿತರಿಸಲಿರುವ ಹಕ್ಕಿನ ಷೇರಿಗೆ ಅಕ್ಟೋಬರ್ 5 ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ ವಿಚಾರ: ಕ್ಯಾನ್ ಫಿನ್ ಹೋಮ್ಸ್ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಅಕ್ಟೋಬರ್ 13 ನಿಗದಿತ ದಿನವಾಗಿದೆ.

* ಹೆರಿಟೇಜ್ ಫುಡ್ಸ್ ಲಿ ಕಂಪನಿಯ ಷೇರಿನ ಮುಖಬೆಲೆ ₹10 ರಿಂದ ₹5 ಕ್ಕೆ ಸೀಳಲು ಅಕ್ಟೊಬರ್ 11 ನಿಗದಿತ ದಿನವಾಗಿದೆ.

(9886313380 ಸಂಜೆ 4.30 ರನಂತರ)

**

ವಾರದ ವಿಶೇಷ

ಷೇರುಪೇಟೆಯ ಸೂಚ್ಯಂಕಗಳು ದಾಖಲೆ ಮಟ್ಟದಲ್ಲಿದ್ದು ಅದರ ಸಮೀಪದಲ್ಲಿಯೇ ತೇಲಾಡುತ್ತಿವೆ. ಪೇಟೆಯ ಪರಿಸ್ಥಿತಿಗನುಗುಣವಾಗಿ ವಿಶ್ಲೇಷಣೆಗಳು ಸಹ ಹರಿದಾಡುತ್ತವೆ. ಹೂಡಿಕೆದಾರರು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಮುನ್ನ ಸಾಧ್ಯವಾದಷ್ಟು ಅಧ್ಯಯನ ನಡೆಸಿ ನಿರ್ಧರಿಸಿದಲ್ಲಿ ಸ್ವಲ್ಪಮಟ್ಟಿನ ಸುರಕ್ಷತೆ ಇರುತ್ತದೆ. ಶುಕ್ರವಾರ ಸಂವೇದಿ ಸೂಚ್ಯಂಕವು ಒಂದು ಹಂತದಲ್ಲಿ 200 ಪಾಯಿಂಟುಗಳಿಗೂ ಹೆಚ್ಚಿನ ಏರಿಕೆಯಲ್ಲಿತ್ತು. ಅಂತಿಮವಾಗಿ ಕೇವಲ ಒಂದು ಪಾಯಿಂಟು ಏರಿಕೆಯಿಂದ ಕೊನೆಗೊಂಡಿದೆ. ಈ ಸ್ಥಿರತೆಗೆ ಕಾರಣ ಅಂದು ಎಲ್ ಅಂಡ್ ಟಿ, ಎಚ್ ಡಿ ಎಫ್ ಸಿ ಬ್ಯಾಂಕ್ ಗಳ ಜೊತೆಗೆ ಆಟೊ ವಲಯದ ಮಾರುತಿ ಸುಜುಕಿ, ಮಹೀಂದ್ರಾ ಅಂಡ್ ಮಹೀಂದ್ರಾ, ಹೀರೊ ಮೋಟೊಕಾರ್ಪ್, ಬಜಾಜ್ ಆಟೊಗಳು ಉತ್ತಮ ಏರಿಕೆ ಕಂಡ ಕಾರಣ ಈ ರೀತಿಯ ಸ್ಥಿರತೆಯ ಕೊನೆ ಕಾಣಲು ಸಾಧ್ಯವಾಯಿತು.

ಅಂದು ಹಿಂದುಸ್ಥಾನ್ ಲಿವರ್, ಟಿ ಸಿ ಎಸ್, ಐ ಟಿ ಸಿ ಗಳ ಕುಸಿತವು ತೀವ್ರತರವಾಗಿದ್ದುದು ಗಮನಾರ್ಹ. ಆಟೊ ವಲಯದ ಷೇರುಗಳಲ್ಲಿ ಚಟುವಟಿಕೆ ನಡೆಸುವ ಮುನ್ನ ಆಟೊವಲಯ ಸೂಚ್ಯಂಕವು ಸೆಪ್ಟೆಂಬರ್ ತಿಂಗಳ 19 ರಂದು 25,053 ಪಾಯಿಂಟುಗಳ ಸರ್ವಕಾಲೀನ ಗರಿಷ್ಟಕ್ಕೆ ತಲುಪಿರುವುದು ಗಮನಿಸಬೇಕಾದ ಅಂಶ. ಈ ಸಮಯದಲ್ಲಿ ಮತ್ತೊಂದು ಆಕರ್ಷಣೀಯ ಅಂಶ ಎಂದರೆ ಈ ಸೂಚ್ಯಂಕವು ಡಿಸೆಂಬರ್ 2008 ರಲ್ಲಿ ಕೇವಲ 2,127 ರಲ್ಲಿತ್ತು. ಅಂದರೆ ಕೇವಲ 9 ವರ್ಷಗಳಲ್ಲಿ ಸುಮಾರು 23 ಸಾವಿರ ಪಾಯಿಂಟುಗಳ ಜಿಗಿತ ಕಂಡಿದೆ.

ಅಂದರೆ ಅದು ಬೆಳೆದಿರುವ ಗಾತ್ರ ಅಭೂತಪೂರ್ವವಾಗಿದ್ದು, ಅದಕ್ಕನುಗುಣವಾಗಿ ಮೂಲ ಸೌಕರ್ಯಗಳಾದ ರಸ್ತೆ, ವಾಹನ ನಿಲುಗಡೆ ವ್ಯವಸ್ಥೆ ಮುಂತಾದವುಗಳು ಬೆಳೆದಿರದೆ ಇರುವುದಕ್ಕೆ ಇಂದಿನ ವಾಹನ ದಟ್ಟಣೆಯೇ ಕನ್ನಡಿಯಾಗಿದೆ. ಈ ಮೂಲ ಸೌಕರ್ಯಗಳ ಅಭಿವೃದ್ಧಿಯಾಗದೇ ಆಟೊ ವಲಯ ಮುಂದೆಬರುವುದು ಅಸಾಧ್ಯ. ಸದ್ಯಕ್ಕೆ ಸೂಚ್ಯಂಕಗಳಲ್ಲಿ ಸ್ಥಿರತೆ ಮೂಡಿಸುವ ಪ್ರಕ್ರಿಯೆಯಾಗಿ ಈ ವಲಯದ ಷೇರುಗಳನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಸಂದೇಹವು ಮೂಡುತ್ತದೆ. ಪೇಟೆಯ ವಿಶ್ಲೇಷಣೆಗಳನ್ನಾಧರಿಸಿ ಚಟುವಟಿಕೆ ನಡೆಸುವ ಮುನ್ನ ಅಲ್ಪ ಮಟ್ಟಿನ ಅಧ್ಯಯನ ಅಥವಾ ತಜ್ಞರ ಮಾರ್ಗದರ್ಶನ ಅಗತ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT