ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷೆಯ ಆರೂ ಹಂತಗಳನ್ನು ಮೀರಿ ದುರಂತ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಸಾರ್ವಜನಿಕ ಸುರಕ್ಷತೆಯ ವಿಷಯದಲ್ಲಿ ‘ಅಕ್ಷಮ್ಯ’ ಎಂಬ ಪದಕ್ಕೆ ಪರಮೋಚ್ಚ ಉದಾಹರಣೆ ಬೇಕಿದ್ದರೆ ದೂರದಲ್ಲಿ ಹುಡುಕುವುದೇ ಬೇಡ. ನಮ್ಮ ರಾಜ್ಯದಲ್ಲಿ ಒಂದಕ್ಕಿಂತ ಒಂದನ್ನು ಮೀರಿಸಬಲ್ಲ ಸಂಗತಿಗಳು ಜರುಗುತ್ತಿವೆ. ಮೈಸೂರಿನ ಹೊರವಲಯದಲ್ಲಿ ಹರ್ಷೆಲ್ ಎಂಬ ಬಾಲಕನನ್ನು ಬಲಿತೆಗೆದುಕೊಂಡ ಕೆಮಿಕಲ್ ತ್ಯಾಜ್ಯದ ಉದಾಹರಣೆ ಈ ಪಟ್ಟಿಯಲ್ಲಿ ತೀರ ಇತ್ತೀಚಿನದು. ಅದಕ್ಕೂ ಮೊದಲು, ಬೆಂಗಳೂರಿನಲ್ಲಿ ಚರಂಡಿಗುಂಡಿಗೆ ಇಳಿದ ಮೂವರು ಪ್ರಾಣ ಬಿಟ್ಟರು. ಅದಕ್ಕಿಂತ ತುಸು ಮುಂಚೆ ಬೆಳ್ಳಂದೂರು ಕೆರೆಗೆ ಸುರಿದ ತ್ಯಾಜ್ಯದಿಂದ ಹೊಗೆಬೆಂಕಿ ಉರಿಯಿತು. ಅದಕ್ಕಿಂತ ಕೊಂಚ ಹಿಂದೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು ಸ್ಟಂಟ್ ಕಲಾವಿದರು ಜೀವ ಕಳೆದುಕೊಂಡರು. ಅದಕ್ಕಿಂತ ಹಿಂದೆ ವರ್ತೂರು ಕೆರೆಯಲ್ಲಿ ನೊರೆಹಾವಳಿ ಪ್ರಕರಣದಲ್ಲಿ ನೀರಿಗೇ ಬೆಂಕಿ ಬಿದ್ದುದನ್ನು ನೋಡಿದೆವು.

ಅಪಾಯಗಳ ನಿರ್ವಹಣೆಯಲ್ಲಿ ‘ಸುರಕ್ಷೆಯ ಷಟ್ಪಥಗಳು’ (ಸಿಕ್ಸ್ ಸ್ಟೆಪ್ಸ್ ಆಫ್ ಸೇಫ್ಟಿ) ಎಂಬ ಸೂತ್ರವೊಂದಿದೆ. ಆ ಆರು ಹಂತಗಳು ಯಾವವು? ಮ್ಯಾನೇಜ್‌ಮೆಂಟ್ ಭಾಷೆಯಲ್ಲಿ ಹೇಳುವುದಕ್ಕಿಂತ ಸಿನಿಮಾ ಶೂಟಿಂಗ್ ದುರಂತದ ಉದಾಹರಣೆಯ ಮೂಲಕ ಅವನ್ನು ವಿವರಿಸಬಹುದು. 1. ಈಜು ಬಾರದವರನ್ನು ನೀರಿಗೆ ಧುಮುಕಿಸಬಾರದಾಗಿತ್ತು. ಅಥವಾ 2. ಧುಮುಕುವವರಿಗೆ ತೇಲುಕವಚ ತೊಡಿಸಬೇಕಿತ್ತು. ಅಥವಾ 3. ಮುಳುಗುವವರನ್ನು ಎತ್ತಿ ತರಬಲ್ಲ ತಜ್ಞರು ಇರಬೇಕಿತ್ತು. ಅಥವಾ 4. ಇಬ್ಬರು ಸ್ಟಂಟ್‌ಮನ್‌ಗಳ ರಕ್ಷಣೆಗೆ ಧಾವಿಸಲೆಂದು ಎರಡು ದೋಣಿಗಳನ್ನು ಇಡಬೇಕಿತ್ತು. ಅಥವಾ 5. ಒಂದೇ ದೋಣಿಯಾಗಿದ್ದರೂ ಅದರ ಎಂಜಿನ್ ಸುಸ್ಥಿತಿಯಲ್ಲಿ ಇದೆಯೇ ನೋಡಬೇಕಿತ್ತು. ಅಥವಾ 6. ಅದರ ಎಂಜಿನ್ ಚಾಲೂ ಸ್ಥಿತಿಯಲ್ಲೇ ಇರುವಂತೆ ನೋಡಿಕೊಳ್ಳಬೇಕಿತ್ತು. ಈ ಆರು ಹಂತಗಳಲ್ಲಿ ಯಾವ ಒಂದು ಹಂತದಲ್ಲಾದರೂ ಎಚ್ಚರಿಕೆ ವಹಿಸಿದ್ದಿದ್ದರೆ ಅವರ ಜೀವ ಉಳಿಯುತ್ತಿತ್ತು. ಒಂದೇ ದೋಣಿ. ಅದರ ಎಂಜಿನ್ ಕೂಡ ಸುಲಭಕ್ಕೆ ಚಾಲೂ ಆಗುತ್ತಿರಲಿಲ್ಲ. ಶೂಟಿಂಗ್ ವೇಳೆ ಸದ್ದಾಗುತ್ತದೆ ಎಂದು ಆ ಎಂಜಿನ್ನನ್ನೂ ಸ್ತಬ್ಧಗೊಳಿಸಲಾಗಿತ್ತು. ಅಂದರೆ, ಸುರಕ್ಷೆಯ ಆರಕ್ಕೆ ಆರನ್ನೂ ಕಡೆಗಣಿಸಲಾಗಿತ್ತು. ನಿರ್ಲಕ್ಷ್ಯದ ಪರಾಕಾಷ್ಠೆ ಎನ್ನಲು ಬೇರೆ ಉದಾಹರಣೆ ಬೇಕೆ?

ಬೇಕಾದಷ್ಟಿವೆ ಬಿಡಿ. ಮೈಸೂರಿನ ಸುತ್ತ ಎಲ್ಲ ಉದ್ಯಮಗಳೂ ತಮ್ಮ ಉತ್ಪಾದನೆ ಏನೇನು, ಅವುಗಳಿಂದ ಹೊಮ್ಮುವ ತ್ಯಾಜ್ಯಗಳ ಸ್ವರೂಪ ಎಂಥದ್ದು ಎಂಬ ದಾಖಲೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಒಪ್ಪಿಸಬೇಕಾದುದು ನಿಯಮ. ಮಂಡಳಿಯ ಎಂಜಿನಿಯರ್‌ಗಳು ಆ ದಾಖಲೆಗಳನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ಮಾಡಿ, ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸರಿ ಇದೆಯೆಂದು ಅನುಮತಿ ನೀಡಿದ ನಂತರವೇ ಉದ್ಯಮ ಆರಂಭವಾಗಬೇಕು. ಅಂಥ ಅನುಮತಿ ಪಡೆಯದೆ ನೀವು ಒಂದು ಉಪ್ಪಿನಕಾಯಿ ಫ್ಯಾಕ್ಟರಿಯನ್ನೂ ಹಾಕಲಾರಿರಿ. ಮಾಲಿನ್ಯತಜ್ಞ ಅಧಿಕಾರಿಗಳು ವರ್ಷಕ್ಕೊಮ್ಮೆ ಕಾರ್ಖಾನೆಗೆ ಹೋಗಿ ತಪಾಸಣೆ ಮಾಡುತ್ತಿರಬೇಕು. ಇನ್ನು, ತಾನಾಗಿ ಬೆಂಕಿ ಹೊತ್ತಿಕೊಳ್ಳುವಂಥ ಕೆಮಿಕಲ್ ತ್ಯಾಜ್ಯ ಇದ್ದರೆ (ಯಾವ ನಗರದಲ್ಲೇ ಇದ್ದರೂ) ಅವನ್ನೆಲ್ಲ ಪೀಪಾಯಿಗಳಲ್ಲಿ ತುಂಬಿ ಸೀಲ್ ಮಾಡಿ, ತುಮಕೂರಿನ ಸಮೀಪದ ಡಾಬಸ್‌ಪೇಟೆಯಲ್ಲಿರುವ ಭೂಗತ ಗೋದಾಮಿಗೆ ಶುಲ್ಕ ಸಮೇತ ಜಮೆ ಮಾಡಬೇಕು. ಜರ್ಮನ್ ಎಂಜಿನಿಯರ್‌ಗಳು ನಿರ್ಮಿಸಿಕೊಟ್ಟ ಈ ಗೋದಾಮಿಗೆ ದೂರದ ಹೈದರಾಬಾದ್‌ನಿಂದಲೂ ತ್ಯಾಜ್ಯಗಳನ್ನು ತಂದು ಸುರಕ್ಷಿತ ಪೇರಿಸುವ ಅವಕಾಶ ಇದೆ. ಆದರೆ ಅಷ್ಟು ದೂರ ಸಾಗಿಸಿ ಶುಲ್ಕವನ್ನೂ ತೆರುವುದೇಕೆಂದು ಕೆಲವು ಕಾರ್ಖಾನೆಗಳು ತಮ್ಮ ಕೊಳಕನ್ನು ಕದ್ದುಮುಚ್ಚಿ ನಿರ್ಜನ ಜಾಗದಲ್ಲಿ ಸುರಿಯುತ್ತವೆ. ಅದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಹಾಗೆ ಕದ್ದುಮುಚ್ಚಿ ಸುರಿಯುವುದಾದರೂ ಪೀಪಾಯಿಯಲ್ಲಿ ತಂದು, ಗುಂಡಿಯಲ್ಲಿ ಹೂತು, ದಪ್ಪ ಮಣ್ಣು ಮುಚ್ಚಬಹುದಿತ್ತು. ಅದರಲ್ಲೂ ಹಣ ಉಳಿಸುವವರು, ಟ್ಯಾಂಕರಿನಿಂದ ನೇರವಾಗಿ ಗುಂಡಿಗೆ ವಿಷವಸ್ತುಗಳನ್ನು ಸುರಿದು, ಅಲ್ಲೊಂದು ಬೇಲಿ ಕಟ್ಟಿ ‘ಅಪಾಯ’ದ ಫಲಕ ಸಿಕ್ಕಿಸಿ ಹೋಗಬಹುದಿತ್ತು. ಬೇಲಿ ಕಟ್ಟಲು ವ್ಯವಧಾನ ಇಲ್ಲದಿದ್ದರೆ, ಆರನೆಯ ಹಂತದ ಸುರಕ್ಷಾ ಕ್ರಮವಾಗಿ ಗುಂಡಿಯ ಸುತ್ತ ಕಡೇಪಕ್ಷ ಹಳದಿ ರಿಬ್ಬನ್ ಸುತ್ತಿ ಅಪಾಯದ ಫಲಕ ಹಾಕಿ ಹೋಗಬಹುದಿತ್ತು.

ಹತ್ತು ವರ್ಷಗಳ ಹಿಂದೆ ಕೊರಟಗೆರೆ ಬಳಿಯ ಯಾದ್ಗೆರೆಯ ಜಮೀನಿನಲ್ಲಿ ಯಾರೋ ಕೇಡಿಗಳು ಘಾಟು ವಾಸನೆಯ ತಿಪ್ಪೆಯನ್ನು ರಾಯಗಢದ ಫ್ಯಾಕ್ಟರಿಯಿಂದ ತಂದು ಸುರಿದು, ರೈತ ತಿಮ್ಮಯ್ಯನಿಗೆ ಕಾಸು ಕೊಟ್ಟು ಹೋಗಿದ್ದರು. ಅಕ್ಕಪಕ್ಕದವರು ಕೊಳವೆ ಬಾವಿಯ ನೀರಿನ ಘಾಟು ತಾಳಲಾರದೆ ದೂರು ಕೊಟ್ಟು, ತನಿಖೆಯ ನಂತರ ಗೊತ್ತಾಗಿದ್ದು ಏನೆಂದರೆ- ದಲ್ಲಾಳಿಯೊಬ್ಬ ಮಹಾರಾಷ್ಟ್ರ, ಪುದುಚೆರಿ, ತಮಿಳು ನಾಡಿನಿಂದಲೂ ಔಷಧ ಮತ್ತು ಕೆಮಿಕಲ್ ಕಂಪನಿಗಳ ಕಚಡಾಗಳನ್ನು ಪಿಪಾಯಿಗಳಲ್ಲಿ ತಂದು ಸುರಿದಿದ್ದ, ಖಾಲಿ ಪಿಪಾಯಿಯನ್ನು ತೊಳೆದು ಮಾರಿ ಅದರಿಂದಲೂ ಹಣ ಗಳಿಸುತ್ತಿದ್ದ.
ಹಾಗಿದ್ದರೆ ಮೈಸೂರಿನಲ್ಲೂ ನೆರೆ ರಾಜ್ಯದ ತ್ಯಾಜ್ಯಗಳನ್ನು ಸುರಿದಿರಬಹುದೆ? ಹಾಗೆ ಹೇಳಿ ಮಾಲಿನ್ಯ ನಿಯಂತ್ರಣ ಮಂಡಳಿ ನುಣುಚಿಕೊಳ್ಳಲಾಗದು. ಅದು ತಕ್ಷಣ ತನ್ನ ಕಡತವನ್ನು ತೆರೆದು ನೋಡಿ, ನಗರದ ಸುತ್ತ ಯಾವ ಯಾವ ಫ್ಯಾಕ್ಟರಿಯಲ್ಲಿ ಎಂತೆಂಥ ತ್ಯಾಜ್ಯ ಉತ್ಪಾದನೆ ಆಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಬೇಕಿತ್ತು. ಅಂಥ ಕಾರ್ಖಾನೆಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದ್ದೀತು. ನಿಯಮಗಳ ಪ್ರಕಾರ, ಮೈಸೂರಿನ ಅಪಾಯಕಾರಿ ಕಾರ್ಖಾನೆಗಳ ಬಗ್ಗೆ, ಅಲ್ಲಿಂದ ಹೊಮ್ಮುವ ತ್ಯಾಜ್ಯಗಳ ಬಗ್ಗೆ ಪೊಲೀಸರಿಗೆ, ಜಿಲ್ಲಾ ವೈದ್ಯಾಧಿಕಾರಿಗೆ, ಅಗ್ನಿಶಾಮಕ ದಳಕ್ಕೆ, ಮಾಧ್ಯಮಕ್ಕೆ ಮತ್ತು ಆಯಾ ಗ್ರಾಮ ಪಂಚಾಯಿತಿಗೆ ತುಂಬ ಹಿಂದೆಯೇ ಮಾಹಿತಿ ನೀಡಿರಬೇಕಿತ್ತು. ಭೋಪಾಲ ದುರಂತದ ಸಂದರ್ಭದಲ್ಲಿ ಯಾವ ವಿಷಗಾಳಿ ಹೊಮ್ಮಿತು, ಹೇಗೆ ನಿಭಾಯಿಸಬೇಕು ಎಂಬುದರ ಅರಿವು ಪೊಲೀಸರಿಗೆ ಹಾಗಿರಲಿ ವೈದ್ಯರಿಗೂ ಇರಲಿಲ್ಲ. ಮೀಥೈಲ್ ಐಸೊಸೈನೇಟ್ ಎಂದರೆ ಏನೆಂಬುದನ್ನು ಅರಿಯಲು ಮಾಧ್ಯಮಗಳೂ ತಿಣುಕಾಡಬೇಕಾಯಿತು. 30 ಸಾವಿರ ಜನರನ್ನು ಬಲಿ ಹಾಕಿದ ನಂತರ ನಿಯಮಗಳು ಬಿಗಿಯಾದವು. ಇಲ್ಲೂ ಅಷ್ಟೆ, ನೆಲಬೆಂಕಿಯ ವಿಷಯ ತಿಳಿಯುತ್ತಲೇ ಯಾರನ್ನು ಸಂಪರ್ಕಿಸಬೇಕು ಎಂಬುದೂ ಮಾಧ್ಯಮಗಳಿಗೆ ಗೊತ್ತಿರಲಿಲ್ಲ. ‘ಅಪಾಯಕಾರಿ ತ್ಯಾಜ್ಯಗಳ’ ಪಟ್ಟಿಯೊಂದು ಮಾಧ್ಯಮಗಳಿಗೆ ಲಭ್ಯ ಇದ್ದಿದ್ದರೆ, ಈ ತ್ಯಾಜ್ಯಗಳು ಎಲ್ಲಿಯವು ಎಂದು ಬಿ.ಎಸ್‌ಸಿ ಪದವೀಧರನೂ ತಕ್ಷಣ ಹೇಳಲು ಸಾಧ್ಯವಿತ್ತು. ಆರೂ ಸುರಕ್ಷಾ ಕ್ರಮಗಳು ವಿಫಲವಾದವು.

ಮೈಸೂರಿನ ಅಂಚಿನ ರಟ್ನಹಳ್ಳಿಯಲ್ಲಿ ಪರಮಾಣು ಇಲಾಖೆಗೆ ಸೇರಿದ ‘ಅಪರೂಪದ ವಸ್ತುಗಳ ಕಾರ್ಖಾನೆ’ (ರೇರ್ ಮಟೀರಿಯಲ್ಸ್ ಪ್ಲಾಂಟ್ -ಆರ್‌ಎಮ್‌ಪಿ) ಇದೆ. ಅತ್ಯಂತ ವಿಷಕಾರಿ ವಿಕಿರಣಭರಿತ ಪುಡಿಗೆ ಜರಡಿ ಹಿಡಿಯುವ ಕೆಲಸ ಅಲ್ಲಿ ನಡೆಯುತ್ತಿದೆ. ಅಂದರೆ ಶೇಕಡಾ 1ರಷ್ಟು ಅತ್ಯಲ್ಪ ಪ್ರಮಾಣದ ಯುರೇನಿಯಂ ಇರುವ ಖನಿಜದ ಪುಡಿಯನ್ನು ಇಲ್ಲಿ ಚಕ್ರಾಕಾರ ವೇಗವಾಗಿ ಸುತ್ತಿಸಿ, ಅದನ್ನು ಶೇ 97ರವರೆಗೆ ಸಾಂದ್ರೀಕರಿಸಲಾಗುತ್ತಿದೆ. ನಂತರ ಅದನ್ನು ಬಾಂಬ್ ತಯಾರಿಸಲೆಂದೋ ಅಥವಾ ಅಮೆರಿಕದಿಂದ ಬರಬಹುದಾದ ವಿದ್ಯುತ್ ಸ್ಥಾವರಗಳಲ್ಲಿ ಉರಿಸಲೆಂದೋ ಬಳಸಬಹುದು. ರಟ್ನಹಳ್ಳಿಯ ಹೆಗ್ಗಳಿಕೆ ಏನೆಂದರೆ ಅಮೆರಿಕದವರೂ ತಮಗೆ ಅಪಾಯಕಾರಿ ಎಂದು ಬದಿಗಿಟ್ಟ ತಂತ್ರಜ್ಞಾನವನ್ನು ಇಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಈ ರಹಸ್ಯ ಜಗತ್ತಿಗೆಲ್ಲ ಗೊತ್ತಿದೆಯಾದರೂ ರಟ್ನಹಳ್ಳಿಯ ಸುತ್ತಮುತ್ತಲಿನ ಜನರಿಗೆ ಗೊತ್ತಾಗದಂತೆ ಗೋಪ್ಯವಾಗಿಡಲಾಗಿದೆ. ಅಲ್ಲಿ ಸೂಸುತ್ತಿರಬಹುದಾದ ವಿಕಿರಣ ಅನಿಲವನ್ನು ಪತ್ತೆ ಮಾಡಬಲ್ಲ ‘ಜಿಎಮ್ ಕೌಂಟರ್’ ಎಂಬ ಮೊಬೈಲ್ ಮಾದರಿಯ ಸಾಧನಗಳು ರಟ್ನಹಳ್ಳಿಯ ಸಮೀಪದ ಪಂಚಾಯಿತಿ ಕಚೇರಿಯಲ್ಲಿ ಇರಬೇಕಿತ್ತು. ಶಾಲಾ ಮಕ್ಕಳೂ ವಿಕಿರಣ ಮಟ್ಟವನ್ನು ಅಳೆಯಲು ಸಮರ್ಥರಾಗಬೇಕಿತ್ತು. ಜಪಾನಿನಲ್ಲಿ ಆ ವ್ಯವಸ್ಥೆ ಇದೆ.

ಆದರೆ ನಮ್ಮಲ್ಲಿ ಆ ಉಪಕರಣ ಯಾರಿಗೂ ಲಭ್ಯವಿಲ್ಲ. ರಟ್ನಹಳ್ಳಿಯಲ್ಲಿ ಹಿಂದೆಯೂ ವಿಕಿರಣ ಸೋರಿಕೆಯ ಆಕಸ್ಮಿಕ ಆಗಿತ್ತು. ಸುರಕ್ಷೆಯ ಆರನೆಯ ಹಂತವನ್ನೂ ಮೀರಿ ಅಲ್ಲಿ ಅಕಸ್ಮಾತ್ ದೊಡ್ಡದೇನಾದರೂ ಸಂಭವಿಸಿದರೆ ಎಂಥ ಶುಶ್ರೂಷೆ ನೀಡಬೇಕೆಂದು ಗೊತ್ತಾಗದೆ ಡಾಕ್ಟರ್‌ಗಳೂ ಕೈಚೆಲ್ಲಬೇಕಾಗುತ್ತದೆ. ದಿಲ್ಲಿ ಬಳಿಯ ನರೋರಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ 1993ರಲ್ಲಿ ಸುರಕ್ಷೆಯ ಐದು ಹಂತಗಳು ಕೈಕೊಟ್ಟು, ಆರನೆಯದು ಕೆಲಸ ಮಾಡಿದ್ದರಿಂದ ದೊಡ್ಡ ಅವಘಡ ತಪ್ಪಿತ್ತು (ಅಂದಹಾಗೆ, ಚೆರ್ನೊಬಿಲ್ ದುರಂತದ 31ನೇ ವರ್ಷದಲ್ಲಿ ಇದೀಗ ಅಲ್ಲಿ ಕುಸಿದ ಸ್ಥಾವರಕ್ಕೆ ಹೊಸ ಮುಚ್ಚಳವನ್ನು ಹೊದೆಸಲಾಗಿದೆ. 300 ಅಡಿ ಎತ್ತರ, 800 ಅಡಿ ಅಗಲದ ಮುಚ್ಚಳವನ್ನು ದೂರದಲ್ಲಿ ನಿರ್ಮಿಸಿ ಅಲ್ಲಿಗೆ ತಳ್ಳಿ ತಂದು ಕೂರಿಸಲಾಗಿದೆ. ಮನುಷ್ಯ ತಳ್ಳಿ ತಂದ ಅತಿ ದೊಡ್ಡ ಗೋಪುರ ಅದು). ದೇಶದ ಅತ್ಯಂತ ಕ್ಲೀನ್ ಸಿಟಿ ಎಂಬ ಹೆಗ್ಗಳಿಕೆ ಪಡೆದ ಮೈಸೂರಿನ ಕತೆಯನ್ನು ಇನ್ನೊಂದು ಮಗ್ಗುಲಲ್ಲೂ ನೋಡಬೇಕು. ನಗರ ಕ್ಲೀನ್ ಆಗಿದ್ದಷ್ಟೂ ಸುತ್ತಲಿನ ಹಳ್ಳಿ, ಹಳ್ಳಕೊಳ್ಳಗಳಲ್ಲಿ ಕೊಳಕಿನ ರಾಶಿ ಏರುತ್ತದೆ. ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ ಇತ್ಯಾದಿಗಳ ಕತೆ ವಿಭಿನ್ನ ಬಿಡಿ. ಇಲ್ಲಿ ಒಳಗೂ ಕೊಳಕು, ಹೊರಗೂ ಕೊಳಕು!  ಹಿಂದೆ 80ರ ದಶಕಗಳಲ್ಲಿ ಕಾರ್ಖಾನೆಗಳನ್ನು ನಗರಗಳಾಚೆ ತಳ್ಳಿದ್ದಾಯಿತೇ ವಿನಾ, ತ್ಯಾಜ್ಯಗಳೇ ಹೊಮ್ಮದಂತೆ ಕಾರ್ಖಾನೆಗಳ ನವೀಕರಣ ಮಾತ್ರ ಆಗಲಿಲ್ಲ. ಅನೇಕ ಕಡೆ ಕೊಳಚೆ ಸಂಸ್ಕರಣೆಗೆ ಜಾಗವನ್ನೂ ಸರ್ಕಾರ ಕೊಟ್ಟಿಲ್ಲ, ಸೌಲಭ್ಯಗಳನ್ನೂ ನಿರ್ಮಿಸಿಲ್ಲ. ಮೈಸೂರಿನ ಶಾದನಹಳ್ಳಿಯ ದಿಬ್ಬದಲ್ಲಿ ಉರಿಯುತ್ತಿರುವುದು ಏನೇ ಆಗಿರಲಿ, ಅದು ಅಪರೂಪದ ಸಂಪನ್ಮೂಲ ಎಂದು ಉತ್ಪಾದಕರಿಗೆ ಅನ್ನಿಸಬೇಕಿತ್ತು. ಇಂದಿನ ತಾಂತ್ರಿಕ ಯುಗದಲ್ಲಿ ಎಂಥ ತ್ಯಾಜ್ಯವನ್ನೂ ಸಂಸ್ಕರಿಸಿ ಮರುಬಳಕೆ ಮಾಡಿ, ಉತ್ಪಾದನಾ ವೆಚ್ಚ ತಗ್ಗಿಸಲು ಸಾಧ್ಯವಿದೆ. ಆದರೆ ನಮ್ಮ ತಂತ್ರಜ್ಞಾನ ಹೇಗಿದೆ ಎಂದರೆ, ತ್ಯಾಜ್ಯದ ಹೊರೆಯೆಲ್ಲ ನಿಸರ್ಗದ ಮೇಲೆ; ಹಳೇ ತಂತ್ರಜ್ಞಾನದ ದುಬಾರಿ ವೆಚ್ಚವೆಲ್ಲ ಬಳಕೆದಾರರ ಮೇಲೆ ಎಂಬಂತಿದೆ. ಲಾಭವೆಲ್ಲ ಕಾರ್ಖಾನೆಗಳಿಗೆ ಮತ್ತು ಮೇಲಿನವರಿಗೆ.

‘ನಿಮ್ಮ ತಂತ್ರಜ್ಞಾನವನ್ನು ನವೀಕರಿಸಿಕೊಳ್ಳಿ, ಅಥವಾ ಬಾಗಿಲು ಮುಚ್ಚಿ ಹೊರಡಿ’ ಎಂದು ಉದ್ಯಮಗಳಿಗೆ ಹೆದರಿಸಿ ಹೇಳಬಲ್ಲ ಗಟ್ಟಿ ಹಲ್ಲುಗಳೇ ನಮ್ಮ ಅಧಿಕಾರಿ ವರ್ಗದಲ್ಲಿ ಯಾರಿಗೂ ಉಳಿದಿಲ್ಲವೇನೊ. ಇಷ್ಟಕ್ಕೂ ಕಂಡಲ್ಲಿ ತ್ಯಾಜ್ಯ ಸುರಿಯುವವರನ್ನು ಹದ್ದುಬಸ್ತಿನಲ್ಲಿ ಇಡಬಲ್ಲ ಎಷ್ಟೊಂದು ಕಾನೂನುಗಳು ನಮ್ಮಲ್ಲಿವೆ. ಅವನ್ನು ಜಾರಿಗೆ ತರಬೇಕಾದವರೆಲ್ಲ ಬಾಲ ಮುದುರಿಸಿ ಕೂತಿದ್ದಾರೆ. ತ್ಯಾಜ್ಯಗಳನ್ನು ನಮ್ಮವರೇ ಸೃಷ್ಟಿಸುತ್ತಿರುವುದು ಸಾಲದೆಂದು ವಿದೇಶಗಳಿಂದಲೂ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ‘ಅಪಾಯಕಾರಿ ತ್ಯಾಜ್ಯಗಳ ಆಮದನ್ನು ನಿಲ್ಲಿಸಿ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ‘ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುಡುವವರಿಗೆ ₹ 5,000 ದಂಡ ಹಾಕಿ’ ಎಂದು ಹಸುರು ನ್ಯಾಯಮಂಡಳಿ ಆದೇಶ ನೀಡಿದೆ. ದಂಡವೂ ಇಲ್ಲ, ದಂಡ ಪ್ರಯೋಗವೂ ಇಲ್ಲ.  

ನಾಡಿದ್ದು ಏಪ್ರಿಲ್ 22ರಂದು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಸಂಭ್ರಮದ ‘ಭೂದಿನ’ ಆಚರಣೆ ನಡೆಯಲಿದೆ. ಭೂಮಿಯನ್ನು ಸುಸ್ಥಿತಿಯಲ್ಲಿಟ್ಟು ಮುಂದಿನ ಪೀಳಿಗೆಗೆ ಅದನ್ನು ಸುರಕ್ಷಿತವಾಗಿ ಹಸ್ತಾಂತರಿಸುವ ಬಗ್ಗೆ ಎಲ್ಲ ದೇಶಗಳಲ್ಲಿ ಕಳಕಳಿ ವ್ಯಕ್ತವಾಗುತ್ತಿದೆ. ನಮ್ಮಲ್ಲೂ ಮನಸ್ಸಿದ್ದರೆ ಪ್ರತಿ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲೂ ಅಂದು ಭೂಮಿಹಬ್ಬ ಏರ್ಪಡಿಸಬಹುದಿತ್ತು. ಸಸ್ಯ, ಪ್ರಾಣಿ, ನೆಲ-ಜಲಕ್ಕೆ ಸಂಬಂಧಿಸಿದಂತೆ ನಾವು 15ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳನ್ನು, ನಿಗಮ ಮಂಡಳಿಗಳನ್ನು, ಲಕ್ಷಾಂತರ ಸಿಬ್ಬಂದಿಯನ್ನು ಪೋಷಿಸುತ್ತಿದ್ದೇವೆ. ಆದರೆ ಏಪ್ರಿಲ್ ಕೊನೆ ಎಂದರೆ ಎಲ್ಲೆಲ್ಲೂ ವರ್ಗಾವಣೆಯ ತರಾತುರಿ, ಪದೋನ್ನತಿಯ ಸಂಭ್ರಮ. ಭೂಮಿಯತ್ತ ನೋಡಲು ಬಿಡುವು ಯಾರಿಗಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT