ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳಿನಿಂದ ಹಾನಿ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಈ ಘಟನೆಯನ್ನು ನವರತ್ನ ರಾಮರಾಯರು ತಮ್ಮ  ಕೆಲವು ನೆನಪುಗಳು  ಎಂಬ ಪುಸ್ತಕದಲ್ಲಿ ತುಂಬ ಸೊಗಸಾಗಿ ಚಿತ್ರಿಸಿದ್ದಾರೆ. ಆ ಕಾಲದಲ್ಲಿ ಅಮಲ್ದಾರ ಹುದ್ದೆ ದೊಡ್ಡದಾದದ್ದು.

ಅಮಲ್ದಾರರು ತಮ್ಮ ಸುಪರ್ದಿಗೆ ಬರುವ ಹಳ್ಳಿಗಳ ವ್ಯವಸ್ಥೆಯನ್ನು ಗಮನಿಸಲು ಆಗಾಗ ಪ್ರವಾಸ ಮಾಡಬೇಕಾಗುತ್ತಿತ್ತು. ಅದಕ್ಕಾಗಿ ಅವರಿಗೆ ಕುದುರೆ ಸವಾರಿಯನ್ನು ಕಲಿಯುವುದು ಅವಶ್ಯವಾಗಿತ್ತು.

ಆದರೂ ಕೆಲವರು ಅದನ್ನು ಇಷ್ಟಪಡದೇ ಹಾಗೆಯೇ ಕೆಲಸ ನಡೆಸುತ್ತಿದ್ದರು. ಒಂದೂರಿನ ಅಮಲ್ದಾರರಿಗೆ ಕುದುರೆ ಸವಾರಿ ಇಷ್ಟವಿಲ್ಲ. ಆದರೆ ಒಂದು ಬಾರಿ ಡೆಪ್ಯುಟಿ ಕಮಿಷನರ್ ಸಾಹೇಬರು ಬಂದು ಬಿಟ್ಟರು. ಅವರು ಕುದುರೆ ಸವಾರಿಯಲ್ಲಿ ಪರಿಣತರೆಂದೂ, ಆಡಳಿತದಲ್ಲಿ ಬಹಳ ಧೂರ್ತರೆಂದೂ ಖ್ಯಾತಿ ಪಡೆದಿದ್ದರು.

ಅದರಲ್ಲಿಯೂ ಹೆದರಿಕೊಳ್ಳುವ ಅಧಿಕಾರಿಗಳು ಸಿಕ್ಕರಂತೂ ಅವರ ಸೃಜನಶೀಲತೆ ಮುಗಿಲು ಮುಟ್ಟುತ್ತಿತ್ತು. ತಾವು ತಾಲ್ಲೂಕಿಗೆ ಬಂದ ದಿನವೇ ಅಮಲ್ದಾರರಿಗೆ ಹೇಳಿ ಕಳುಹಿಸಿದರು. ಕೆಲವು ಸಾಮಾನ್ಯ ಪ್ರಶ್ನೋತ್ತರಗಳಾದ ಮೇಲೆ ನಾಳೆ ಬೆಳಿಗ್ಗೆ ಹಳ್ಳಿಗಳ ತಪಾಸಣೆಗೆ ಹೋಗಬೇಕೆಂತಲೂ ಅದಕ್ಕಾಗಿ ಸರಿಯಾಗಿ ಏಳು ಗಂಟೆಗೆ ಸಿದ್ಧರಾಗಿ ಬರಬೇಕೆಂದು ತಾಕೀತು ಮಾಡಿದರು. ಅಮಲ್ದಾರರಿಗೆ ಹೃದಯವೇ ಬಾಯಿಗೆ ಬಂತು.

ಸಾಹೇಬರಂತಹ ಕುಶಲ ಕುದುರೆ ಸವಾರರೊಂದಿಗೆ ತಾವು ಹೇಗೆ ಹೋಗುವುದು. ಇಲ್ಲವೆನ್ನುವುದಕ್ಕಾಗುತ್ತದೆಯೇ. ಸರಿ ಮಹಾಸ್ವಾಮಿ ಎಂದು ಮನೆಗೆ ತೆರಳಿದರು. ಮಾರನೆಯ ದಿನ ಮುಖದಲ್ಲಿ ದೀನತೆಯನ್ನು ಹೊತ್ತು ಯಾರಿಂದಲೂ ತಡೆಯಲಾರದ ನೋವನ್ನು ಕಷ್ಟಪಟ್ಟು ತಡೆಯುವವರಂತೆ ಸೊಟ್ಟು ಮೊಗವನ್ನು ಮಾಡಿಕೊಂಡ ಸಾಹೇಬರು ತಂಗಿದ್ದ ಮುಸಾಫಿರ್ ಖಾನೆಯ ಹತ್ತಿರ ಹೋದರು.

ಸಾಹೇಬರು ಹೊರಬಂದು,  ಹೊರಡೋಣವೋ. ಪ್ರವಾಸ ಹತ್ತು ಮೈಲಿ ಮಾತ್ರ. ಒಂದು ತಾಸಿನಲ್ಲಿ ಬಂದು ಬಿಡಬಹುದು. ನಿಮ್ಮ ಕುದುರೆ ಎಲ್ಲಿ ಎಂದು ಕೇಳಿದರು. ಅಮಲ್ದಾರರು ಮತ್ತಷ್ಟು ನೋವನ್ನು ಪ್ರಕಟಿಸುತ್ತ,  ಸಾಹೇಬರೇ ತಮ್ಮ ಪ್ರವಾಸಕ್ಕೆ ಎಲ್ಲ ಏರ್ಪಾಡನ್ನು ಮಾಡಿದ್ದೇನೆ. ನನ್ನ ಮೈಗೆ ಹುಷಾರಿಲ್ಲ  ಎಂದರು.

 ಓಹೋ ಹಾಗೋ. ಮೈಗೆ ಏನಾಗಿದೆ.  ಕೇಳಿದರು ಸಾಹೇಬರು. ಮತ್ತಷ್ಟು ಮುಖ ಕಿವುಚಿ,  ಬಹಳ ಹೊಟ್ಟೆ ನೋವು ಸ್ವಾವಿ   ಎಂದರು ಅಮಲ್ದಾರರು. ಆಗ ಸಾಹೇಬರು ತಕ್ಷಣ,  ಹೊಟ್ಟೆನೋವನ್ನು ಉಪೇಕ್ಷೆ ಮಾಡಬಾರದು, ಬನ್ನಿ  ಎಂದು ಅಮಲ್ದಾರರ ಕೈಹಿಡಿದು ಎಳೆದುಕೊಂಡೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿ,  ಡಾಕ್ಟ್ರೇ, ನಮ್ಮ ಅಮಲ್ದಾರರಿಗೆ ಹೊಟ್ಟೆ ನೋವು, ಒಂದು ಔನ್ಸ್ ಹರಳೆಣ್ಣೆ ಕೊಡಿ  ಎಂದು ಹೇಳಿ ಕುಡಿಸಿಯೇ ಬಿಟ್ಟರು.  ಅಮಲ್ದಾರರೇ, ನಿಮ್ಮ ಜೀವ ಬಹಳ ಅಮೂಲ್ಯವಾದದ್ದು.

ಇನ್ಸ್‌ಪೆಕ್ಷನ್ ಯಾವಾಗಲಾದರೂ ಮಾಡಬಹುದು  ಎಂದು ಅತೀವ ಭ್ರಾತೃಪ್ರೇಮ ಪ್ರದರ್ಶಿಸುತ್ತ,  ಡಾಕ್ಟ್ರೇ ಇನ್ನೊಂದು ಔನ್ಸ್ ಹರಳೆಣ್ಣೆ ಕೊಟ್ಟೇ ಬಿಡಿ, ಯಾಕೆಂದರೆ ಅಮಲ್ದಾರರಿಗೆ ಬಂದ ಹೊಟ್ಟೆ ನೋವು ತುಂಬ ತೀವ್ರವಾಗಿದೆ  ಎಂದು ಅದನ್ನು ಕುಡಿಸಿದರು. ಅಮಲ್ದಾರರಿಗೆ ಸಾಕು ಬೇಕಾಯಿತು.

ಆಗ ಸಾಹೇಬರು,  ಅಮಲ್ದಾರರೇ, ನಿಮ್ಮ ಔಷಧಿ ನಿಮಗೆ ನೀಡುವ ಕೆಲಸವೇ ಸಾಕಷ್ಟಿದೆ. ಬೇಗನೇ ಮನೆಗೆ ಹೋಗಿ. ನಿಮಗೆ ಕುದುರೆ ಸವಾರಿ ಬರದಿದ್ದರೆ ಹಾಗೆಯೇ ಹೇಳಬಹುದಿತ್ತಲ್ಲ, ಹೊಟ್ಟೆನೋವಿನ ನೆವ ಯಾಕೆ ಹೇಳಿದಿರಿ. 

ನಿಮಗೆ ಹರಳೆಣ್ಣೆ ಬಹಳ ಇಷ್ಟವೇ ಎಂದು ನಕ್ಕು ಹೊರಟರು. ಸುಳ್ಳು ಎಂದಿಗೂ ಒಳ್ಳೆಯದನ್ನು ಮಾಡಲಾರದು. ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿಕೊಳ್ಳಲು ಹತ್ತು ಸುಳ್ಳು ಹೇಳಬೇಕಾಗುತ್ತದೆ. ಅದಲ್ಲದೇ ಅದರ ಪರಿಣಾಮ ಹರಳೆಣ್ಣೆ ಕುಡಿದದ್ದಕ್ಕಿಂತ ಬೇರೆಯಾಗುವುದಿಲ್ಲ, ಹೊಟ್ಟೆಯನ್ನು ತೊಳೆಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT