ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿಗಳ ಕಾಲದ ಅಭಿವ್ಯಕ್ತಿ ಸ್ವಾತಂತ್ರ್ಯ

Last Updated 10 ಜೂನ್ 2017, 9:03 IST
ಅಕ್ಷರ ಗಾತ್ರ

ಸುಮಾರು ನೂರು ವರ್ಷಗಳ ಹಿಂದೆ ಜಪಾನ್‌ನ ನಗರಗಳ ಹೊಟೇಲುಗಳು ತಮ್ಮಲ್ಲಿಗೆ ಬರುವ ಹಳ್ಳಿಗರನ್ನು ಆಕರ್ಷಿಸುವುದಕ್ಕಾಗಿ ಖಾದ್ಯಗಳ ಮೇಣದ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡುತ್ತಿದ್ದವು. ಇದೊಂದು ರೀತಿಯಲ್ಲಿ ಸಂವಹನದ ಅನುಕೂಲಕ್ಕಾಗಿ ಮಾಡಿಕೊಂಡ ವ್ಯವಸ್ಥೆ. ನಿರ್ದಿಷ್ಟ ಖಾದ್ಯವೊಂದು ಹೇಗಿರುತ್ತದೆ ಅದರ ಪ್ರಮಾಣ ಎಷ್ಟೆಂದು ವಿವರಿಸುವುದರ ಬದಲಿಗೆ ಅದರದ್ದೊಂದು ಮಾದರಿ ಇದ್ದರೆ ಉತ್ತಮ ಎಂದು ಯಾರೋ ಜಾಣ ಕಂಡುಕೊಂಡದ್ದು ಬಹುಬೇಗ ಜಪಾನಿನ ಎಲ್ಲಾ ನಗರಗಳ ಹೊಟೇಲುಗಳಿಗೂ ವಿಸ್ತರಿಸಿಕೊಂಡಿತು. ಈ ಮಾದರಿಗಳನ್ನು ತಯಾರಿಸುತ್ತಿದ್ದವರು ಅಂತಿಂಥ ಕಲಾವಿದರಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಮನುಷ್ಯನ ದೇಹದ ವಿವಿಧ ಅಂಗಾಂಗಗಳ ಮಾದರಿಯನ್ನು ತಯಾರಿಸುತ್ತಿದ್ದ ಪರಿಣಿತರು.

ಸಹಜವಾಗಿಯೇ ಇವು ನಿಜ ಖಾದ್ಯಗಳಂತೆಯೇ ಕಾಣಿಸುತ್ತಿದ್ದವು. ಈ ಕಲೆ ಈಗಲೂ ಜಪಾನ್‌ನಲ್ಲಿ ಜನಪ್ರಿಯ. ಮೇಣದ ಮಾದರಿಗಳ ಬದಲಿಗೆ ಈಗ ಪ್ಲಾಸ್ಟಿಕ್ ಮಾದರಿಗಳು ಬಂದಿವೆ. ಒಂದು ಕಾಲದಲ್ಲಿ ಹಳ್ಳಿಗರ ಅನುಕೂಲಕ್ಕಾಗಿ ರೂಪುಗೊಂಡ ಈ ತಂತ್ರವನ್ನು  ಈಗ ವಿದೇಶೀ ಪ್ರವಾಸಿಗರಿಗೆ ತಮ್ಮಲ್ಲಿರುವ ಖಾದ್ಯಗಳು ಯಾವುದೆಂದು ತಿಳಿಸುವುದಕ್ಕೆ ಹೊಟೇಲುಗಳು ಬಳಸುತ್ತವೆ. ಜಪಾನೀ ಭಾಷೆಯನ್ನು ಓದಲು ತಿಳಿಯದವರೂ ಈ ಖಾದ್ಯಗಳ ಮಾದರಿಯನ್ನು ತೋರಿಸಿ ‘ನನಗಿದು ಬೇಕು’ ಎಂದು ತೋರಿಸಿ ಖರೀದಿಸಬಹುದು.

ಈ ಬಗೆಯ ಮಾದರಿಗಳನ್ನು ಕೊರಿಯಾ ಮತ್ತು ಚೀನಾದ ಹೊಟೇಲುಗಳಲ್ಲಿ ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ ಇದು ಭಾರತದ ಹೊಟೇಲುಗಳಿಗೂ ವಿಸ್ತರಿಸಿದೆ. ಇಡ್ಲಿಯಂಥ ಸರಳವಾದ ಖಾದ್ಯದಿಂದ ತೊಡಗಿ ಅತ್ಯಂತ ಸಂಕೀರ್ಣ ವಿನ್ಯಾಸವಿರುವ ಹೂಕೋಸು ಎಲೆಕೋಸಿನಂಥ ತರಕಾರಿಗಳ ತುಂಡುಗಳ ಮಾದರಿಗಳೂ ಈಗ ಕಾಣಸಿಗುತ್ತವೆ. ನೂರು ವರ್ಷಗಳ ಹಿಂದೆ ಜಪಾನಿನ ಕಲಾವಿದರು ಸೃಜಿಸಿದ ಈ ತಂತ್ರ ಭಾರತದಲ್ಲಿ ಇಂಟರ್ನೆಟ್ ಬಳಸುತ್ತಿರುವ ಸಾಮಾನ್ಯ ಜನರ ಬಳಿಗೆ ತಲುಪುತ್ತಿರುವ ಬಗೆ ಮಾತ್ರ ವಿಚಿತ್ರವಾಗಿದೆ.

ಈ ಲೇಖನವನ್ನು ಓದುತ್ತಿರುವ ಪ್ರತಿಯೊಬ್ಬರೂ ಎಲೆಕೋಸು, ಹೂಕೋಸು, ಮೊಟ್ಟೆಯ ಖಾದ್ಯಗಳು ಇತ್ಯಾದಿಗಳನ್ನೆಲ್ಲಾ ತಯಾರಿಸುವ ವಿಡಿಯೋಗಳನ್ನು ಬೇರೆಯೇ ಬಗೆಯಲ್ಲಿ ನೋಡಿರುತ್ತೇವೆ. ‘ಚೀನಾದಲ್ಲಿ ತಯಾರಾಗುತ್ತಿರುವ ಎಲೆಕೋಸು. ನಿಮ್ಮ ತರಕಾರಿ ಮಾರುಕಟ್ಟೆಯಲ್ಲಿಯೂ ಇರಬಹುದು ಎಚ್ಚರ!’ ಎಂಬರ್ಥ ಹುಟ್ಟಿಸುವ ವಿವರಣೆಯೊಂದಿಗೆ ಈ ವಿಡಿಯೋಗಳು ನಮ್ಮೆಲ್ಲರ ಫೋನುಗಳಿಗೆ ವಾಟ್ಸ್ ಆಪ್‌ನಲ್ಲಿ ಬಂದಿರುವ ಸಾಧ್ಯತೆ ಇದೆ. ಇಲ್ಲವಾದರೆ ನಮ್ಮ ಗೆಳೆಯರಲ್ಲೊಬ್ಬರು ಫೇಸ್‌ಬುಕ್ ನಲ್ಲಿ ಇದೇ ಬಗೆಯಲ್ಲಿ ವಿಡಿಯೋಗಳನ್ನು ಹಂಚಿಕೊಂಡಿರುತ್ತಾರೆ. ಹೀಗೆಯೇ ಪ್ಲಾಸ್ಟಿಕ್ ಅಕ್ಕಿ, ಗೋಧಿ, ಬಾರ್ಲಿಯ ತಯಾರಿಕೆಯ ವಿಡಿಯೋಗಳೂ ಬಂದಿರುವ ಸಾಧ್ಯತೆ ಇರುತ್ತದೆ.

ಈ ವಿಡಿಯೋಗಳು ನಿಜಕ್ಕೂ ಏನು ಎಂಬುದನ್ನು ವಿವರಿಸುವ ಸಾವಿರಾರು ಜಾಲತಾಣಗಳು ಲಭ್ಯವಿದ್ದರೂ ಯಾರೂ ಅವುಗಳನ್ನು ನೋಡುವ ಗೋಜಿಗೆ ಹೋಗುವುದಿಲ್ಲ. ಮಾರುಕಟ್ಟೆಗೆ ದಾಳಿ ಇಟ್ಟಿರಬಹುದಾದ ಚೀನಾದಿಂದ ಆಮದಾದ ‘ಕೃತಕ ಎಲೆಕೋಸು’ ಮನೆಗೆ ಗಾಡಿಯಲ್ಲಿ ತರಕಾರಿ ತರುವವನ ಬಳಿಯೂ ಇರಬಹುದೆಂಬ ಭಯವನ್ನು ಹಂಚುತ್ತಾ ಹೋಗುತ್ತೇವೆ ಎಂಬುದು ವಿಚಿತ್ರವಾದರೂ ಸತ್ಯ.

ಇದನ್ನು ಹೋಲುವಂಥ ಮತ್ತೊಂದು ವಿದ್ಯಮಾನ ಒಂದೆರಡು ದಶಕಗಳ ಹಿಂದೆ ಕರ್ನಾಟಕವೂ ಸೇರಿದಂತೆ ಭಾರತಾದ್ಯಂತ ವ್ಯಾಪಕವಾಗಿತ್ತು. ಪ್ರಸಿದ್ಧ ಧಾರ್ಮಿಕ ಕ್ಷೇತ್ರವೊಂದರಲ್ಲಿ ಹಾವೊಂದು ಮನುಷ್ಯರೂಪ ಪಡೆದು ಹೇಳಿದ ಸಂಗತಿಯೊಂದನ್ನು ವಿವರಿಸುವ ಕರಪತ್ರವೊಂದನ್ನು ಹಂಚುವವರು ಪ್ರತಿಯೊಂದು ಊರಿನಲ್ಲಿಯೂ ಕಾಣಸಿಗುತ್ತಿದ್ದರು. ಹಾವು ಮನುಷ್ಯ ರೂಪ ಪಡೆದು ಹೇಳಿದ ಸಂಗತಿಯನ್ನು ನಿರ್ದಿಷ್ಟ ಸಂಖ್ಯೆಯ ಜನರಿಗೆ ತಲುಪಿಸಿದರೆ ಆಗುವ ಒಳಿತು, ತಲುಪಿಸದೇ ಇದ್ದರೆ ಆಗಬಹುದಾದ ಕೆಡುಕುಗಳ ವಿವರ ಆ ಕರಪತ್ರದಲ್ಲಿ ಇರುತ್ತಿತ್ತು. ತರಕಾರಿ ಮತ್ತು ಆಹಾರ ಪದಾರ್ಥಗಳ ಮಾದರಿಯನ್ನು ತಯಾರಿಸುವ ವಿಡಿಯೋಗಳಲ್ಲಿ ದೈವ ಕೋಪದಂಥ ಸಂಗತಿಯೇನೂ ಇರುವುದಿಲ್ಲ. ಆದರೂ ನಾವದನ್ನು ಹಂಚುತ್ತಾ ಹೋಗುತ್ತೇವೆ ಎಂಬುದು ಈ ಸೈಬರ್ ಕಾಲಘಟ್ಟದ ವಿಶೇಷ. ಸತ್ಯೋತ್ತರ ಕಾಲಘಟ್ಟ ಎಂದರೆ ಇದುವೇ ಇರಬಹುದೇನೋ.

ಎಲೆಕೋಸಿನ ಬೆಲೆ ಕಿಲೋಗ್ರಾಂ ಒಂದಕ್ಕೆ ಐವತ್ತು ರೂಪಾಯಿಗಳಷ್ಟಿದ್ದರೂ ಅದರ ಪ್ಲಾಸ್ಟಿಕ್ ನಕಲನ್ನು ಸೃಷ್ಟಿಸಿ ಮಾರುವುದು ಲಾಭಕರವೇನೂ ಅಲ್ಲ. ಒಂದು ವೇಳೆ ಹೀಗೆ ಮಾರಿದರೂ ಅದನ್ನು ಕತ್ತರಿಸಿ ಬೇಯಿಸುವ ಹೊತ್ತಿಗೆ ಅದು ನಕಲಿ ಎಂಬುದು ಜಗಜ್ಜಾಹೀರಾಗಿರುತ್ತದೆ. ಇಷ್ಟು ಸರಳ ವಿಷಯವೊಂದು ಯಾಕೆ ಯಾರಿಗೂ ಅರ್ಥವಾಗುತ್ತಿಲ್ಲ? ಈ ಪ್ರಶ್ನೆಗೆ ಉತ್ತರ ದೊರೆತರೆ ಸೈಬರ್ ಯುಗದ ‘ಸುಳ್ಳು ಸುದ್ದಿ’ ಹಾವಳಿಗೂ ಒಂದು ಪರಿಹಾರ ದೊರೆಯುತ್ತದೆ.

ಕರಪತ್ರಗಳನ್ನು ಮುದ್ರಿಸಿ ಹಂಚಬೇಕಾದ ಕಾಲದಲ್ಲಿ ಆ ಮಾಧ್ಯಮಕ್ಕೇ ಆದ ಕೆಲವು ಮಿತಿಗಳಿದ್ದವು. ಈಗ ಹಾಗಲ್ಲ. ಒಂದು ಮೊಬೈಲ್ ಫೋನು ಮತ್ತು ಅದಕ್ಕೊಂದು ಇಂಟರ್ನೆಟ್ ಪ್ಯಾಕ್ ಇದ್ದರೆ ಸುಳ್ಳು ಸುದ್ದಿಯೊಂದು ಕ್ಷಣಾರ್ಧದಲ್ಲಿ ವಿಶ್ವದ ಯಾವುದೇ ಮೂಲೆಗೂ ತಲುಪಿಬಿಡುತ್ತದೆ. 20 ಕೋಟಿಗೂ ಹೆಚ್ಚು ಫೇಸ್‌ಬುಕ್ ಮತ್ತು ವಾಟ್ಸ್ ಆಪ್ ಬಳಕೆದಾರರಿರುವ ದೇಶದಲ್ಲಿ ಸುಳ್ಳು ಸುದ್ದಿಯೊಂದು ಸೃಷ್ಟಿಸಬಹುದಾದ ಅನಾಹುತಗಳೇನು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಹಲವು ಉದಾಹರಣೆಗಳಿವೆ.

ಚೀನಾದಿಂದ ಆಮದಾದ ನಕಲಿ ಎಲೆಕೋಸು, ಹೂಕೋಸು, ಅಕ್ಕಿಗಳ ಸಂಗತಿ ಗ್ರಾಹಕರಲ್ಲಿ ಸುಖಾಸುಮ್ಮನೆ ಒಂದಷ್ಟು ಸಂಶಯಗಳನ್ನಷ್ಟೇ ಬಿತ್ತುತ್ತದೆ. ಅದಕ್ಕಿಂತ ಅಪಾಯಕಾರಿಯಾದ ಸುಳ್ಳು ಸಂದೇಶಗಳು ಈ ಮಾದರಿಯಲ್ಲಿ ಹರಡುತ್ತಿರುವುದು ಈಗಿನ ಸಮಸ್ಯೆ. ಜಾರ್ಖಂಡ್‌ನಲ್ಲಿ ವಾಟ್ಸ್ ಆಪ್ ಮೂಲಕ ಹರಡಿದ ‘ಮಕ್ಕಳ ಅಪಹರಣಕಾರರ’ ವದಂತಿ ಆರು ಮಂದಿಯ ಪ್ರಾಣಕ್ಕೆ ಎರವಾಯಿತು. ಹೊಸ ಎರಡು ಸಾವಿರ ರೂಪಾಯಿಗಳ ನೋಟಿನಲ್ಲಿ ಮೈಕ್ರೋಚಿಪ್ ಇದೆ ಎಂಬ ವದಂತಿಯಂತೂ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕಾಣಿಸಿಕೊಂಡುಬಿಟ್ಟಿತು. ಇನ್ನು ಪಕ್ಕದ ಬೀದಿಯಲ್ಲೇ ನಡೆದ ಕೊಲೆ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅನೇಕ ಚಿತ್ರಗಳು ದೂರದ ಯಾವುದೋ ದೇಶದ್ದಾಗಿರುವ ಸಾಧ್ಯತೆಗಳೇ ಹೆಚ್ಚು.

ಇಂಟರ್ನೆಟ್ ತಂತ್ರಜ್ಞಾನ ಸಮೂಹ ಸಂವಹನದ ವ್ಯಾಖ್ಯೆ ಮತ್ತು ವ್ಯಾಪ್ತಿಗಳೆರಡನ್ನೂ ಬದಲಾಯಿಸಿಬಿಟ್ಟಿದೆ. ಸಾಂಪ್ರದಾಯಿಕ ಮಾಧ್ಯಮಗಳ ಯುಗದಲ್ಲಿ ಸಂಸ್ಥೆಯೊಂದಕ್ಕೆ ಸಾಧ್ಯವಿದ್ದುದನ್ನು ಇಂದು ವ್ಯಕ್ತಿಯೊಬ್ಬ ಮಾಡಬಹುದು. ಆದರೆ ಇದು ಇತ್ತೀಚಿನ ವರ್ಷಗಳಲ್ಲಿ ಪಡೆದುಕೊಂಡಿರುವ ವಿಕೃತ ರೂಪ ಅತ್ಯಂತ ಸಂಕೀರ್ಣವಾದ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರತಿಯೊಬ್ಬನಿಗೂ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವ ಸಾಮಾಜಿಕ ತಾಣಗಳೀಗ ಮುಕ್ತ ಅಭಿವ್ಯಕ್ತಿಯನ್ನು ಅಸಾಧ್ಯಗೊಳಿಸುವ ಹಾದಿಯಲ್ಲಿ ಸಾಗುತ್ತಿವೆ. ಅಂತರ್ಜಾಲದ ದೊಡ್ಡ ಸಾಧ್ಯತೆಯೆಂದರೆ ‘ಅನಾಮಿಕತೆ’. ಅತ್ಯಂತ ಕ್ರೂರಿ ಪ್ರಭುತ್ವಗಳನ್ನು ಎದುರಿಸುವುದಕ್ಕೆ ಈ ಅನಾಮಿಕತೆ ಒಂದು ಕವಚದಂತೆ ಬಳಕೆಯಾಗುತ್ತಿತ್ತು. ವಿಕೃತ ಸುಳ್ಳು ಸುದ್ದಿಗಳ ವಿರಾಟ್ ಸ್ವರೂಪವೇ ಅನಾವರಣಗೊಳ್ಳತೊಡಗಿದ್ದರಿಂದ ಇಂಟರ್ನೆಟ್‌ನಲ್ಲಿ ಜನಸಾಮಾನ್ಯರಿಗೆ ಲಭ್ಯವಿರುವ ಪ್ರತಿಯೊಂದು ವೇದಿಕೆಯೂ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಗುರುತಿಸುವುದಕ್ಕೆ ಅಗತ್ಯವಿರುವ ಮಾಹಿತಿಗಳನ್ನು ನೀಡುವುದನ್ನು ಕಡ್ಡಾಯಗೊಳಿಸುತ್ತಿವೆ.

ಇದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ‘ಸುಳ್ಳು ಸುದ್ದಿ’ ಅಥವಾ ‘ಪ್ರಚೋದನಕಾರಿ ಸುದ್ದಿ’ಯನ್ನು ಕಂಡುಹಿಡಿಯುವ ಸ್ವಯಂ ಚಾಲಿತ ವ್ಯವಸ್ಥೆ. ಇದು ಹೊಸಬಗೆಯ ಸೆನ್ಸಾರಿಂಗ್. ನಿರ್ದಿಷ್ಟ ಹಿತಾಸಕ್ತಿ ಇರುವ ಗುಂಪೊಂದು ವ್ಯವಸ್ಥಿತವಾಗಿ ಕಾರ್ಯಾಚರಿಸಿದರೆ ನಿಜ ಸುದ್ದಿಗಳನ್ನು ನೀಡುವವರನ್ನೂ ತೊಂದರೆಗೆ ಈಡು ಮಾಡಬಹುದು. ನಿರ್ದಿಷ್ಟ ಸೈದ್ಧಾಂತಿಕ ನಿಲುವುಗಳಿಗೆ ವಿರುದ್ಧವಾದ ಎಲ್ಲಾ ಅಭಿವ್ಯಕ್ತಿಗಳನ್ನು ಹತ್ತಿಕ್ಕಬಹುದು ಎಂಬುದನ್ನು ತೋರಿಸಿಕೊಡಬಲ್ಲ ಅನೇಕ ಘಟನೆಗಳು ಇತ್ತೀಚೆಗಷ್ಟೇ ನಡೆದವು. ವ್ಯಂಗ್ಯವನ್ನು ಪ್ರಧಾನವಾಗಿಟ್ಟುಕೊಂಡ ಕೆಲವು ಫೇಸ್‌ಬುಕ್ ಪುಟಗಳು ಮತ್ತು ಟ್ವಿಟ್ಟರ್ ಹ್ಯಾಂಡಲ್‌ಗಳು ಇದ್ದಕ್ಕಿದ್ದಂತೆಯೇ ನಿಷೇಧಕ್ಕೆ ಒಳಗಾಗಿಬಿಡುವುದು ಇದೇ ಕಾರಣದಿಂದ.

ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸುಲಭದ ಮಾರ್ಗಗಳಿಲ್ಲ. ಪತ್ರಿಕೆ, ರೇಡಿಯೋ ಮತ್ತು ಟಿ.ವಿ.ಗಳಿಗೆ ಇರುವ ದೊಡ್ಡ ಪರಂಪರೆಯ ಮಾಧ್ಯಮ ಇದಲ್ಲ. ಆ ಕಾರಣದಿಂದಾಗಿಯೇ ಇಲ್ಲೊಂದಷ್ಟು ಅಪಕ್ವ ಅಭಿವ್ಯಕ್ತಿ ಇದೆ ಎಂದು ಒಪ್ಪಿಕೊಂಡು ಮುಂದುವರಿಯಬೇಕಷ್ಟೇ. ಮಾಧ್ಯಮ ಪಕ್ವಗೊಳ್ಳುವ ಪ್ರಕ್ರಿಯೆಯಲ್ಲಿ ಆಗುವ ಪ್ರಾಣಹಾನಿಗಳಿಗೇನು ಮಾಡುವುದು ಎಂಬ ದೊಡ್ಡ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುತ್ತದೆ. ಇದಕ್ಕೆ ಉತ್ತರವಿರುವುದು ಮಾಧ್ಯಮದ ಬಳಕೆದಾರರ ಬಳಿ. ಸಂದೇಶವನ್ನು ಹಂಚಿಕೊಳ್ಳುವ ಮೊದಲು ಅರೆಕ್ಷಣ ಅದರ ಸತ್ಯಾಸತ್ಯತೆಯ ಬಗ್ಗೆ ತರ್ಕಬದ್ಧವಾಗಿ ಆಲೋಚಿಸುವುದೊಂದೇ ಸದ್ಯಕ್ಕೆ ಇರುವ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT