ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿಯಲ್ಲಿ ಆಸಕ್ತಿ, ನೈಜ ಸುದ್ದಿಯಲ್ಲಿ ನಿರಾಸಕ್ತಿ

Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ನಾನು ಈ ಬರಹವನ್ನು ಕೋಲ್ಕತ್ತದಿಂದ ಬರೆದಿದ್ದೇನೆ. ಇಲ್ಲಿನ ಸಾಹಿತ್ಯೋತ್ಸವದಲ್ಲಿ ಮಾತನಾಡಲು ಬಂದಿದ್ದೇನೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಂತಹ ಅನೇಕ ಕಾರ್ಯಕ್ರಮಗಳು ದೇಶದ ವಿವಿಧೆಡೆ ಆರಂಭವಾಗಿವೆ. ಬೇರೆ ಯಾವುದೇ ದೇಶದಲ್ಲಿ ನಡೆಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸಾಹಿತ್ಯೋತ್ಸವಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ. ಇದು ಬಹಳ ಗಮನಾರ್ಹ ಎಂದು ನನಗೆ ಅನಿಸುತ್ತದೆ. ಏಕೆಂದರೆ ನಾವು ಬರಹದೆಡೆಗೆ, ಸಾಹಿತ್ಯದೆಡೆಗೆ ಆಕರ್ಷಿತವಾಗುವ ಸಂಸ್ಕೃತಿಯೊಂದು ಇರಬಹುದು; ಆದರೆ, ಭಾರತದ ಸಮಾಜದ ಮೇಲೆ ಬರಹಗಾರ ಹೆಚ್ಚಿನ ಪ್ರಭಾವ ಹೊಂದಿಲ್ಲ.

ಬರಹಗಾರ ವಾಕ್ಲಾ ಹಾವೆಲ್, ಜೆಕ್ ಗಣರಾಜ್ಯದ ಮೊದಲ ಅಧ್ಯಕ್ಷರಾದವರು. ಅಲ್ಲಿ ಆದಂತೆ ಬರಹಗಾರನೊಬ್ಬ ಭಾರತದಲ್ಲಿ ಅಂತಹ ಉನ್ನತ ಸ್ಥಾನಕ್ಕೆ ಬರುವ ಸಾಧ್ಯತೆ ಇಲ್ಲ. ಶಿಕ್ಷಕರಿಗೆ ಗೌರವ ನೀಡುವಂತೆಯೇ ನಮ್ಮಲ್ಲಿ ಬರಹಗಾರರಿಗೂ ಗೌರವ ನೀಡಲಾಗುತ್ತದೆ- ಆದರೆ ಅವರನ್ನು ಅನುಕರಿಸುವುದಿಲ್ಲ. ಹಾಗಾದರೆ, ನಮ್ಮಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಾಹಿತ್ಯೋತ್ಸವಗಳು ಏಕೆ ನಡೆಯುತ್ತಿವೆ? ಈ ಎಲ್ಲ ಸಾಹಿತ್ಯೋತ್ಸವಗಳಿಗೆ ಸಾವಿರಾರು ಜನ- ಅವರಲ್ಲಿ ಯುವಕರೇ ಹೆಚ್ಚು- ಏಕೆ ಬರುತ್ತಾರೆ? ಎಲ್ಲೆಡೆ ಚರ್ಚಿಸಲಾಗದ ಹಲವಾರು ವಿಷಯಗಳನ್ನು ಇಂತಹ ಉತ್ಸವಗಳಲ್ಲಿ ಚರ್ಚಿಸಬಹುದು. ಅದರಲ್ಲೂ ಮುಖ್ಯವಾಗಿ, ಸಾರ್ವಜನಿಕವಾಗಿ ಚರ್ಚಿಸಲಾಗದ ಸಂಗತಿಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಚರ್ಚಿಸಬಹುದು ಎಂಬುದು ನಾನು ಗಮನಿಸಿದ ಸಂಗತಿ.

ಇಂತಹ ಸಾಹಿತ್ಯೋತ್ಸವಗಳಲ್ಲಿ ನಡೆಯುವ ಅತಿದೊಡ್ಡ ಕಾರ್ಯಕ್ರಮಗಳು ಪುಸ್ತಕ ಅಥವಾ ಲೇಖಕರಿಗೆ ನೇರವಾಗಿ ಸಂಬಂಧಿಸಿರುವುದಿಲ್ಲ. ಅವು ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸಮಕಾಲೀನ ವಿದ್ಯಮಾನಗಳಿಗೆ ಸಂಬಂಧಿಸಿರುತ್ತವೆ. ಏಕೆಂದರೆ ಅಲ್ಲಿ ಇಂತಹ ವಿಷಯಗಳನ್ನು ಚರ್ಚಿಸಬಹುದು. ಈ ವಾರ ನಾನು ಇದ್ದ ಒಂದು ತಜ್ಞರ ಗುಂಪು ಸುಳ್ಳು ಸುದ್ದಿಗಳ ಬಗ್ಗೆ ಚರ್ಚಿಸಿತು. ಸುಳ್ಳು ಸುದ್ದಿಯ ವಿದ್ಯಮಾನವನ್ನು ಎರಡು ರೀತಿಗಳಲ್ಲಿ ವಿವರಿಸಬಹುದು. ಅಮರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಥ ಮಾಡಿಕೊಂಡಿರುವ ಒಂದು ರೀತಿಯಲ್ಲಿ ವಿವರಿಸಬಹುದು. ಅವರು ಮುಖ್ಯವಾಹಿನಿಯ ಮಾಧ್ಯಮಗಳಾದ ನ್ಯೂಯಾರ್ಕ್‌ ಟೈಮ್ಸ್‌, ವಾಷಿಂಗ್ಟನ್ ಪೋಸ್ಟ್ ಮತ್ತು ಸಿಎನ್‌ಎನ್‌ ಬಗ್ಗೆ ಉಲ್ಲೇಖಿಸಿ ಒಂದು ರೀತಿಯಲ್ಲಿ ಮಾತನಾಡುತ್ತಾರೆ.

ಜಗತ್ತಿನ ಇತರ ಭಾಗಗಳ ಜನ, ಅದರಲ್ಲೂ ಮುಖ್ಯವಾಗಿ ಪತ್ರಕರ್ತರು, ಈ ಮಾಧ್ಯಮಗಳನ್ನು ಗೌರವಾರ್ಹವೆಂದು, ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ವರದಿ ಮಾಡುವ ಮಾಧ್ಯಮಗಳು ಎಂದು ಭಾವಿಸಿದರೂ, ಟ್ರಂಪ್‌ ಪಾಲಿಗೆ ಅವುಗಳಲ್ಲಿ ಬರುವ ವರದಿಗಳೆಲ್ಲವೂ 'ಸುಳ್ಳು'. ಏಕೆಂದರೆ ಈ ಮಾಧ್ಯಮಗಳು, ಟ್ರಂಪ್‌ ಅವರ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುವ ವಿಚಾರಗಳನ್ನು ವರದಿ ಮಾಡುತ್ತವೆ.

ಸುಳ್ಳು ಎಂದು ಸ್ಪಷ್ಟವಾಗಿ ಗೊತ್ತಿದ್ದರೂ, ಕಿಡಿಗೇಡಿ ಬುದ್ಧಿಯಿಂದ ಅಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುವುದು ಇನ್ನೊಂದು ಬಗೆ. ವಿಶ್ವದ ಒಂದು ಭಾಗದಲ್ಲಿ ನಡೆದ ಹಿಂಸಾಕೃತ್ಯದ ಚಿತ್ರವನ್ನು ಬಳಸಿ, ಅದು ಇನ್ನೊಂದು ಭಾಗದಲ್ಲಿ ನಡೆದ ಹಿಂಸಾಚಾರದ ದೃಶ್ಯ ಎಂದು ಬಿಂಬಿಸುವುದು ಇಂತಹ ಸುಳ್ಳು ಸುದ್ದಿಗಳಿಗೆ ಒಂದು ಉದಾಹರಣೆ. ಸತ್ಯವಲ್ಲದ ವಿಷಯಗಳನ್ನೇ ಬಳಸಿಕೊಂಡು ಒಂದು ಪರಿಸ್ಥಿತಿಯನ್ನು ವಿವರಿಸುವುದು ಅಥವಾ ಒಬ್ಬ ವ್ಯಕ್ತಿಯನ್ನು ಚಿತ್ರಿಸುವುದು ಕೂಡ ಇಂಥ ಸುಳ್ಳು ಸುದ್ದಿಗಳಿಗೆ ಒಂದು ಉದಾಹರಣೆ. ವಾಟ್ಸ್‌ ಆ್ಯಪ್‌ನಲ್ಲಿ ಇಂತಹ ಹಲವು ಸಂದೇಶಗಳನ್ನು ನಾವು ಸ್ವೀಕರಿಸಿರುತ್ತೇವೆ. ಈ ಬಗ್ಗೆ ನಾನು ಹೆಚ್ಚು ಚರ್ಚಿಸಲು ಮುಂದಾಗುವುದಿಲ್ಲ.

ನಮ್ಮ ಗುಂಪಿನಲ್ಲಿ ಅಹಮದಾಬಾದ್ ಮೂಲದ ಪ್ರತೀಕ್ ಸಿನ್ಹಾ ಎಂಬ ವ್ಯಕ್ತಿ ಇದ್ದರು. ಇವರು altnews.in ಎನ್ನುವ ವೆಬ್‌ಸೈಟ್‌ ನಡೆಸುತ್ತಾರೆ. ದುರುದ್ದೇಶದಿಂದ ಪ್ರಸಾರ ಮಾಡುವ ಸಂದೇಶಗಳನ್ನು ಇವರು ಪರಿಶೀಲಿಸಿ, ಅವುಗಳಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ಎಂಬುದನ್ನು ತೋರಿಸಿಕೊಡುತ್ತಾರೆ. ಇವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ, ಭಾರತೀಯರನ್ನು ವಿಭಜಿಸುವ ಸುಳ್ಳು ಸುದ್ದಿಗಳ ಮರ್ಮವನ್ನು ಇವರು ಬಯಲು ಮಾಡುತ್ತಿದ್ದಾರೆ. ಜಾರ್ಖಂಡ್‌ನ ಮಕ್ಕಳ ಅಪಹರಣಕಾರರ ಕುರಿತ ಒಂದು ಸುಳ್ಳು ಸುದ್ದಿಯು ಕಳೆದ ವರ್ಷದ ಮೇ ತಿಂಗಳಲ್ಲಿ ಏಳು ಜನರ ಮೇಲೆ ಹಲ್ಲೆ ನಡೆಯುವುದಕ್ಕೆ ಕಾರಣವಾಯಿತು.

ಸಿನ್ಹಾ ಅವರು ಕೆಲವು ಆಸಕ್ತಿಕರ ಅಂಕಿ-ಅಂಶಗಳನ್ನು ಕೊಟ್ಟರು. ಎರಡೇ ಎರಡು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆಯ ಪ್ರಮಾಣ ಐದು ಪಟ್ಟಿಗಿಂತ ಹೆಚ್ಚಾಗಿದೆ ಎಂಬುದು ಅವುಗಳಲ್ಲಿ ಒಂದು. ಹಲವು ಜನ ಸ್ಮಾರ್ಟ್‌ ಫೋನ್‌ ಬಳಸಲು ಆರಂಭಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅಂದರೆ, ಕಾಲ ಸಾಗಿದಂತೆ ವಾಟ್ಸ್‌ ಆ್ಯಪ್‌ ಮೂಲಕ ಹರಡುವ ಇಂತಹ ಸುದ್ದಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವುದು ಖಚಿತ.

ದೇಶದಲ್ಲಿ ಮಾಧ್ಯಮಗಳು ಇನ್ನಷ್ಟು ವಿಘಟನೆ ಆಗುತ್ತಿವೆ. ಅಂದರೆ ಸ್ವತಂತ್ರ ಹಾಗೂ ಸಣ್ಣ ಮಾಧ್ಯಮ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಿರುವ ಸಂದರ್ಭದಲ್ಲಿ, ಸುದ್ದಿಯ ಖಚಿತತೆಯನ್ನು ತಿಳಿಸುವ ವ್ಯವಸ್ಥೆ ದೇಶದ ಜನರ ಪಾಲಿಗೆ ಇರಬೇಕಾಗಿದ್ದು ಬಹಳ ಮುಖ್ಯ.

ಇದೇನೇ ಇರಲಿ, ನಮ್ಮ ಸಮಸ್ಯೆ ಇರುವುದು ಅತಿಯಾದ 'ಸುಳ್ಳು ಸುದ್ದಿ'ಗಳಲ್ಲೋ ಅಥವಾ ನೈಜ ಸುದ್ದಿಗಳ ವಿಚಾರದಲ್ಲಿ ನಮಗಿರುವ ನಿರಾಸಕ್ತಿಯಲ್ಲೋ ಎಂಬುದು ನನ್ನಲ್ಲಿರುವ ಪ್ರಶ್ನೆ. ಒಂದು ಉದಾಹರಣೆ ಗಮನಿಸೋಣ. ನಾವು ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುವುದಕ್ಕಿಂತ 10 ಪಟ್ಟು ಹೆಚ್ಚು ಹಣವನ್ನು ರಕ್ಷಣೆಗೆ ವಿನಿಯೋಗಿಸುತ್ತೇವೆ (ರಕ್ಷಣಾ ಉದ್ದೇಶಕ್ಕೆ ₹ 4 ಲಕ್ಷ ಕೋಟಿ, ಆರೋಗ್ಯ ಕ್ಷೇತ್ರಕ್ಕೆ ₹ 40 ಸಾವಿರ ಕೋಟಿ). ಇದು ತೀರಾ ಈಚಿನ ಬೆಳವಣಿಗೆ ಅಲ್ಲ. ನಾವು ಆಸ್ಪತ್ರೆಗಳು, ವೈದ್ಯರು ಮತ್ತು ಔಷಧಿಗಳಿಗೆ ಮಾಡುವುದಕ್ಕಿಂತ ಹೆಚ್ಚಿನ ಖರ್ಚನ್ನು ಹೊಸ ಯುದ್ಧ ಟ್ಯಾಂಕ್‌ಗಳು, ವಿಮಾನಗಳು ಹಾಗೂ ಯುದ್ಧ ನೌಕೆಗಳನ್ನು ಖರೀದಿಸಲು ಎಂದಿನಿಂದಲೂ ಮಾಡುತ್ತಿದ್ದೇವೆ. ಈ ಕೆಲಸವನ್ನು ಎಲ್ಲ ಸರ್ಕಾರಗಳೂ ಮಾಡಿವೆ. ಯಾವ ಪಕ್ಷವೂ ಇದನ್ನು ವಿರೋಧಿಸಿಲ್ಲ.

ದೇಶದ ಈಶಾನ್ಯ ರಾಜ್ಯಗಳಲ್ಲಿ ಆಂತರಿಕ ಭದ್ರತೆಗಾಗಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿದ್ದಕ್ಕೆ 2018ರಲ್ಲಿ 60 ವರ್ಷಗಳು ಆಗಲಿವೆ. ದೇಶವಾಸಿಗಳನ್ನು ಮಿಲಿಟರಿ ಆಡಳಿತಕ್ಕೆ ಇಷ್ಟು ದೀರ್ಘ ಅವಧಿಗೆ ಗುರಿಪಡಿಸಿದ್ದು ಏಕೆ ಎಂದು ನಾವು ಕೇಳಬಾರದೇ? ನಾವು ಮಾತಿನಲ್ಲಿ ನಾಜೂಕುತನ ತೋರಿಸುವುದು ಬೇಡ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎ.ಎಫ್‌.ಎಸ್‌.ಪಿ.ಎ) ಜಾರಿಯಲ್ಲಿರುವ ಪ್ರದೇಶದ ಜನ ಮಿಲಿಟರಿ ಆಡಳಿತದಲ್ಲಿ ಇದ್ದಾರೆ ಎಂದೇ ಅರ್ಥ. ಆದರೆ ಈಶಾನ್ಯ ರಾಜ್ಯಗಳಿಗೆ ಸೇರದ ಜನರ ಮತ್ತು ರಾಜಕಾರಣಿಗಳ ಪಾಲಿಗೆ ಇದರ ಬಗ್ಗೆ ಆಸಕ್ತಿ ಇರುವಂತಿಲ್ಲ.

ತಾನು ರಾಷ್ಟ್ರೀಯತೆಯ ಬಗ್ಗೆ ನಂಬಿಕೆ ಹೊಂದಿದ್ದೇನೆ ಎಂದು ಹೇಳುವ ಆಡಳಿತ ಪಕ್ಷವೊಂದು ರಾಜಕೀಯ ವರ್ಣಭೇದ ನೀತಿಯನ್ನು ಅನುರಿಸುತ್ತಿದೆ. ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಆ ಪಕ್ಷದ ಮುಸ್ಲಿಂ ಶಾಸಕರ ಸಂಖ್ಯೆ ಹೀಗಿದೆ- ಗುಜರಾತ್: ಸೊನ್ನೆ, ಉತ್ತರಪ್ರದೇಶ: ಸೊನ್ನೆ, ಮಹಾರಾಷ್ಟ್ರ: ಸೊನ್ನೆ, ಮಧ್ಯಪ್ರದೇಶ: ಸೊನ್ನೆ, ಛತ್ತೀಸಗಡ: ಸೊನ್ನೆ, ಜಾರ್ಖಂಡ್: ಸೊನ್ನೆ. ಬೇರೆ ರಾಜ್ಯಗಳಲ್ಲಿ ಬಿಜೆಪಿಯು ಬಾಯುಪಚಾರದ ಕೆಲಸವನ್ನಷ್ಟೇ ಮಾಡಿದೆ.

ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸ ನಮ್ಮ ಎದುರಿನಲ್ಲೇ ನಡೆಯುತ್ತಿದೆ. ಆದರೆ ಇದನ್ನು ನಿರ್ಲಕ್ಷಿಸಲಾಗಿದೆ, ಇದನ್ನು ಚರ್ಚೆಗೆ ಎತ್ತಿಕೊಳ್ಳುತ್ತಿಲ್ಲ. ಇದು ಸುದ್ದಿ ಕೂಡ ಆಗುತ್ತಿಲ್ಲ. ಏಕೆ? ಏಕೆಂದರೆ ಭಿನ್ನ ದನಿಗಳನ್ನು ಆಲಿಸುವ ಕೆಲಸ ಆಗುತ್ತಿಲ್ಲ. ಅಂತಹ ದನಿಗಳು ಇಂತಹ ಸಾಹಿತ್ಯೋತ್ಸವಗಳಲ್ಲಿ ಮಾತ್ರ ಕೇಳಿಸುತ್ತಿವೆ. ಟ್ರಂಪ್ ಮತ್ತು ಪಶ್ಚಿಮದ ಜಗತ್ತಿನ ಪಾಲಿಗೆ ಸುಳ್ಳು ಸುದ್ದಿಯ ಸಮಸ್ಯೆಯು ನಮ್ಮಲ್ಲಿಯಷ್ಟು ದೊಡ್ಡ ಸಮಸ್ಯೆ ಅಲ್ಲ. ಅಂದರೆ ಅದು ಅವರ ಪಾಲಿಗೆ ಅಷ್ಟೊಂದು ಪರಿಣಾಮ ಉಂಟುಮಾಡುವುದಿಲ್ಲ. ಆದರೆ, ಸುಳ್ಳು ಸುದ್ದಿಯು ಭಾರತದಲ್ಲಿ ಒಬ್ಬನ ಹತ್ಯೆಗೆ ಕಾರಣವಾಗಬಹುದು. ಆದರೆ, ಸುಳ್ಳು ಸುದ್ದಿ ನಿರ್ಮೂಲವಾದರೂ ಸಮಸ್ಯೆಗಳು ಉಳಿದುಕೊಂಡಿರುತ್ತವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.
––
ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT