ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಿಕ್ಷಿತ ಮುಸ್ಲಿಮರು ಹಾದಿ ತಪ್ಪುತ್ತಿರುವರೇ?

Last Updated 9 ಜುಲೈ 2016, 19:30 IST
ಅಕ್ಷರ ಗಾತ್ರ

ಸತ್ಯ ಮರೆಮಾಚಲು ಸಂದಿಗ್ಧ ಭಾಷೆ ಬಳಸುವ ಝಕೀರ್‌ ನಾಯ್ಕ್‌ ಅವರ  ವರ್ತನೆಯು ಅವರ ವ್ಯಕ್ತಿತ್ವದಲ್ಲಿನ ದೋಷ ಮತ್ತು ಅವರಲ್ಲಿ ಇರುವ ಅಪಾಯಕಾರಿ ಗುಣಕ್ಕೆ ಕನ್ನಡಿ ಹಿಡಿಯುತ್ತದೆ.

ಪಾಕಿಸ್ತಾನದ ಜನಪ್ರಿಯ ಅಂಕಣಕಾರ ಖಲೇದ್‌ ಅಹ್ಮದ್‌ ಅವರು ನನ್ನ ಗಮನಕ್ಕೆ ತರುವುದಕ್ಕೂ ಮೊದಲು, ಝಕೀರ್‌ ನಾಯ್ಕ್‌ ಎನ್ನುವ ವ್ಯಕ್ತಿ ಭಾರತದಲ್ಲಿ ಇದ್ದಾರೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಖಲೇದ್ ಅವರು, ಪಾಕಿಸ್ತಾನದ ನನ್ನ ಮೊದಲ ಸ್ನೇಹಿತರೂ ಹೌದು. 1984ರಲ್ಲಿಯೇ ನಾನು ಅವರನ್ನು ಬೋಸ್ಟನ್‌ ಪಾರ್ಕ್‌ ಪ್ಲಾಝಾ ಹೋಟೆಲ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ.

ಝಕೀರ್‌ ಬಗ್ಗೆ ನನ್ನಲ್ಲಿ ಯಾವುದೇ ಮಾಹಿತಿ ಇಲ್ಲದಿದ್ದುದನ್ನು ಕಂಡು ಖಲೇದ್‌ ಆಶ್ಚರ್ಯಚಕಿತರಾಗಿದ್ದರು. ಇದು ಬಹುಶಃ 2009ರಲ್ಲಿ ಇರಬಹುದು. ಸಮಾವೇಶದ ಸಂದರ್ಭದಲ್ಲಿ ಭೇಟಿಯಾಗಿದ್ದ ಅವರು ಝಕೀರ್‌ ವ್ಯಕ್ತಿತ್ವವನ್ನು ನನಗೆ ಮೊದಲ ಬಾರಿಗೆ ಪರಿಚಯಿಸಿದ್ದರು.

ಟೆಲಿವಿಷನ್‌ ಮೂಲಕ ಧಾರ್ಮಿಕ ಬೋಧನೆಯಲ್ಲಿ ತೊಡಗಿರುವ ಝಕೀರ್‌, ಇಂಗ್ಲಿಷ್‌ನಲ್ಲಿ ಧರ್ಮ ಬೋಧನೆ ಮಾಡುವ ಮೂಲಕ ಭಾರತ ಉಪಖಂಡದಲ್ಲಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿಯೂ ಜನಪ್ರಿಯತೆ ಹೊಂದಿದ್ದಾರೆ ಎಂದು ಅವರು ಹೇಳಿದ್ದರು.

ಆ ಹೊತ್ತಿಗಾಗಲೇ ಝಕೀರ್, ತಮ್ಮದೇ ಆದ ಟೆಲಿವಿಷನ್‌ (Peace TV) ಕಾರ್ಯಕ್ರಮದ ಮೂಲಕ  ಸಾಕಷ್ಟು ಜನಾನುರಾಗಿಯಾಗಿದ್ದರು. ಅವರ ಬಗೆಗಿನ ನನ್ನ ಅಜ್ಞಾನ ಕಂಡು ಖಲೇದ್‌ ಹೆಚ್ಚು ಚಿಂತಿತರೂ ಆಗಿದ್ದರು.

‘ಈ ಟಿ.ವಿ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ವೀಕ್ಷಿಸು. ಅವರ ಬಗ್ಗೆ ಮಾಹಿತಿ ಕಲೆಹಾಕು. ಮುಂಬರುವ ದಿನಗಳಲ್ಲಿ ಇವರ ಬಗ್ಗೆ ನಾವು (ಪತ್ರಕರ್ತರು) ಬಹಳಷ್ಟು ಕೇಳಬೇಕಾಗಿ ಬರಬಹುದು’ ಎಂದು ಹೇಳಿದ್ದರು.

‘ಝಕೀರ್‌ ಬಗ್ಗೆ ಈಗಾಗಲೇ ನಾನು ಕೆಲ ಲೇಖನಗಳನ್ನು ಬರೆದಿರುವೆ. ಕೇಳುಗರನ್ನು ಮೋಡಿ ಮಾಡುವ, ಸಾಂಪ್ರದಾಯಿಕ ಮತೀಯ ಸಿದ್ಧಾಂತವನ್ನು ತರ್ಕಕ್ಕೆ ಒಳಪಡಿಸುವ ಅವರ ಭಾಷಣ ಕಲೆ ಕಂಡು ವಿಸ್ಮಯಗೊಂಡಿರುವೆ’ ಎಂದೂ ಹೇಳಿಕೊಂಡಿದ್ದರು.

ಪ್ರತಿಯೊಬ್ಬರೂ ಮಾಡುವಂತೆ ನಾನು ಕೂಡ ಗೂಗಲ್‌ನಲ್ಲಿ ಝಕೀರ್‌ ನಾಯ್ಕ್‌ ಬಗ್ಗೆ ಮಾಹಿತಿ ತಡಕಾಡಿದೆ. ಅವರ ಬಗೆಗಿನ ಬರಹಗಳನ್ನು ಓದತೊಡಗಿದೆ, ‘ಪೀಸ್‌ ಟಿ.ವಿ’ಯಲ್ಲಿ ಪ್ರಸಾರವಾದ ಅವರ ಧ್ವನಿಮುದ್ರಿತ ಭಾಷಣಗಳನ್ನು ಆಲಿಸಿದೆ.

ಇನ್ನಷ್ಟು ಶ್ರಮವಹಿಸಿ ಅವರ ಬಗ್ಗೆ ಇತರ ಮಾಹಿತಿ ಕಲೆ ಹಾಕುತ್ತಿದ್ದಂತೆ ಖಲೇದ್‌ ಅವರ ಮಾತಿನ ಅರ್ಥ ತಿಳಿದುಕೊಳ್ಳಲು ಹೆಚ್ಚು ಕಷ್ಟವಾಗಲಿಲ್ಲ. ಪದವೀಧರ, ಅಲೋಪಥಿ ವೈದ್ಯರಾಗಿದ್ದ ಝಕೀರ್‌ ಆನಂತರ ಟೆಲಿವಿಷನ್‌ನಲ್ಲಿ ಧರ್ಮ ಬೋಧಕರಾಗಿ ಪರಿವರ್ತನೆಗೊಂಡಿದ್ದರು. ಧರ್ಮ ಬೋಧನೆಯ ಚಾಣಾಕ್ಷ ಮಾತುಗಾರಿಕೆ ಮೂಲಕ ಅಲ್ಪಾವಧಿಯಲ್ಲಿ ಇಸ್ಲಾಂನ ಸಾಂಪ್ರದಾಯಿಕ ಪ್ರಮುಖ ವಕ್ತಾರರಾಗಿ ಜನಾನುರಾಗಿಯಾಗಿ ಬೆಳೆದು ಬಿಟ್ಟಿದ್ದರು.

ಅವರಾಡುವ ಭಾಷೆ, ಸರಳವಾಗಿ ನಗುವ ಪರಿ, ಕುರ್‌ಆನ್‌, ಭಗವದ್ಗೀತೆ, ಉಪನಿಷತ್ತು, ಬೈಬಲ್‌ ಮತ್ತಿತರ ಗ್ರಂಥಗಳ ಉಲ್ಲೇಖಗಳನ್ನು ಯಥೇಚ್ಛ ಪ್ರಮಾಣದಲ್ಲಿ ಓತಪ್ರೋತವಾಗಿ ಉದ್ಧರಿಸುವುದರಲ್ಲಿ ಸಿದ್ಧಹಸ್ತರಾಗಿದ್ದಾರೆ.

ತಮ್ಮ ಪ್ರಾರ್ಥನಾ ಸಭೆಯಲ್ಲಿ ಕ್ರೈಸ್ತರು, ಹಿಂದೂಗಳು ಮತ್ತು ನಿರೀಶ್ವರವಾದಿಗಳಿಗೂ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಟ್ಟು ಮೌಲಾನಾಗಳ ಏಕತಾನತೆಯಿಂದ ಭಿನ್ನವಾಗಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಹ್ಯ ನೋಟದಲ್ಲಿಯೂ ಮೌಲಾನಾಗಳಿಗಿಂತ ಪ್ರತ್ಯೇಕವಾಗಿ ಕಾಣುತ್ತಾರೆ. ಸೂಟು ಧರಿಸಿ ಟೈ ಕಟ್ಟುವ, ಮುಖದ ಮೇಲೆ ಅಷ್ಟೇನೂ ಒತ್ತಾಗಿಲ್ಲದ ಗಡ್ಡ, ತಲೆಯ ಮೇಲೊಂದು ಟೊಪ್ಪಿಗೆ ಧರಿಸುವ ಝಕೀರ್‌, ವಿಚಾರಪೂರ್ಣವಾದ ಮಾತುಗಾರಿಕೆ ಮತ್ತು ಶ್ರದ್ಧಾವಂತ ಮುಸ್ಲಿಮನಾಗಿ ಗಮನ ಸೆಳೆಯುತ್ತಾರೆ.

ಮುಂದೊಂದು ದಿನ ನನ್ನ ಸಹೋದ್ಯೋಗಿಯ ನೆರವಿನಿಂದ ಝಕೀರ್‌ ಅವರ ಅನುಯಾಯಿಗಳನ್ನು ಸಂಪರ್ಕಿಸುವಲ್ಲಿ ಸಫಲನಾದೆ. ನಮ್ಮಿಬ್ಬರ ಮಧ್ಯೆ ಸಂದರ್ಶನ ನಡೆಸಲು ಅವರೂ ಉತ್ಸಾಹದಿಂದ ಮುಂದಾದರು. ಹೀಗಾಗಿ 2009ರ ಮಾರ್ಚ್‌ ತಿಂಗಳಲ್ಲಿ ನಾನು ಅವರನ್ನು ಮೊದಲ ಬಾರಿಗೆ ಮುಖತಃ ಭೇಟಿಯಾಗುವ ಅವಕಾಶ ಒದಗಿ ಬಂದಿತ್ತು.

ಝಕೀರ್‌ ನಾಯ್ಕ್‌ ಅವರು ಯಾವುದೇ ಅಧಿಕೃತ ಅಥವಾ ಧಾರ್ಮಿಕ ಪಟ್ಟವನ್ನೇನೂ ಹೊಂದಿಲ್ಲ. ತಮ್ಮನ್ನು ಮೌಲ್ವಿ ಅಥವಾ ಮೌಲಾನಾ ಎಂದು ಕ್ಯಾಮೆರಾ ಎದುರು ಕರೆಸಿಕೊಳ್ಳಲೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸಾರ್ವಜನಿಕ ಭಾಷಣಗಳ ಮೂಲಕ ಅಪಾರ ಜನಮನ್ನಣೆ ಗಳಿಸಿರುವ ‘ರಾಕ್‌ ಸ್ಟಾರ್‌’ ಆಗಿದ್ದೀರಿ ಎನ್ನುವ ನನ್ನ ಹೊಗಳಿಕೆಯನ್ನು ಉಲ್ಲಾಸದಿಂದಲೇ ಸ್ವೀಕರಿಸಿದರು. ಟೆಲಿವಿಷನ್ನಿನ ತಾರೆಯಾಗುವ ಅರ್ಹತೆ ಅವರಲ್ಲಿತ್ತು. ಆಸ್ಥಾ ಚಾನೆಲ್‌ನಲ್ಲಿ ಫ್ಯಾನ್ಸಿ ಬಟ್ಟೆ ಧರಿಸಿ ಧರ್ಮ ಬೋಧನೆ ಮಾಡುವವರು ಹೊಟ್ಟೆಕಿಚ್ಚು ಪಡುವಷ್ಟು ವರ್ಚಸ್ವಿ ವ್ಯಕ್ತಿತ್ವ ಅವರದಾಗಿತ್ತು.

ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯು ಸಂಘರ್ಷ ಸ್ವರೂಪದಲ್ಲೇನೂ ಇದ್ದಿರಲಿಲ್ಲ. ಬಹುತೇಕ ಮಾತುಕತೆ ಸ್ನೇಹ ಸೌಹಾರ್ದ ರೂಪದಲ್ಲಿಯೇ ನಡೆದಿತ್ತು. ಭಾರತದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಕೊಂಡಾಡಿದ್ದ ಅವರು ‘ಈ ಎರಡೂ ಸಂಸ್ಥೆಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಇಂದಲ್ಲ ನಾಳೆ ಮುಸ್ಲಿಮರೂ ಸೇರಿದಂತೆ ಎಲ್ಲರೂ ನ್ಯಾಯ ಪಡೆಯಲಿದ್ದಾರೆ’ ಎಂದೂ ಹೇಳಿದ್ದರು.

ದೇಶ ವಿಭಜನೆ ಬಗೆಗಿನ ಅವರ ಧೋರಣೆ ಆರ್‌ಎಸ್‌ಎಸ್‌ನ ವಿಚಾರಧಾರೆಗಿಂತ ಭಿನ್ನವಾಗಿ ಏನೂ ಇದ್ದಿರಲಿಲ್ಲ. ‘ಭಾರತ ಉಪಖಂಡವು ಮೂರು ದೇಶಗಳಾಗಿ ಹೋಳಾಗಿರುವುದು ನಿಜಕ್ಕೂ ದುರಂತವೇ ಸರಿ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಒಂದೇ ದೇಶವಾಗಿ ಉಳಿದಿದ್ದರೆ ಕ್ರೀಡೆಯಿಂದ ಹಿಡಿದು ಆರ್ಥಿಕತೆವರೆಗೆ ನಾವು ಜಾಗತಿಕ ಶಕ್ತಿಯಾಗಿ ಇರುತ್ತಿದ್ದೆವು’ ಎಂದು ಹೇಳಿದ್ದರು.

‘ಭಾರತದ ಬಹುತೇಕ ಮುಸ್ಲಿಮರಿಗೆ ಯಾವತ್ತೂ ಪಾಕಿಸ್ತಾನ ಬೇಕಾಗಿರಲಿಲ್ಲ ಅಥವಾ ಅವರು ಕೇಳಿರಲೂ ಇಲ್ಲ. ಪಾಕಿಸ್ತಾನ ರಚನೆಯಾಗಲು ಪಟ್ಟು ಹಿಡಿದು ಚಳವಳಿಯ ಮುಂಚೂಣಿಯಲ್ಲಿ ಇದ್ದವರು ಮೂಲತಃ ಇಸ್ಲಾಂ ಧರ್ಮವನ್ನೇ ಅನುಸರಿಸುತ್ತಿರಲಿಲ್ಲ’ ಎಂದು ಝಕೀರ್‌ ಅಭಿಪ್ರಾಯಪಟ್ಟಿದ್ದರು.

ಪಾಕಿಸ್ತಾನದ ವಿಭಜನೆಯನ್ನು ಅವರು ಆರ್‌ಎಸ್‌ಎಸ್‌ನ ಆಲೋಚನೆಗೆ ಭಿನ್ನವಾಗಿ, ಮುಸ್ಲಿಮರ ಹಿತಾಸಕ್ತಿ ದೃಷ್ಟಿಕೋನದಿಂದ ನೋಡಿದ್ದರು. ಸಂಪ್ರದಾಯವಾದಿ ಮುಸ್ಲಿಮರು ಜಮಾತ್‌–ಎ– ಇಸ್ಲಾಮಿ ನೇತೃತ್ವದಲ್ಲಿ ಪಾಕಿಸ್ತಾನ ಅಸ್ತಿತ್ವಕ್ಕೆ ಬರುವುದನ್ನು ವಿರೋಧಿಸಿದ್ದಕ್ಕೆ ಹಿನ್ನೆಲೆ ಇರುವುದೂ ನನಗೆ ಗೊತ್ತಿತ್ತು. ಭಾರತದ ಸಂವಿಧಾನ, ನ್ಯಾಯಾಂಗ ಮತ್ತು ರಾಷ್ಟ್ರೀಯತೆ ಬಗೆಗಿನ ಅವರ ನಿಲುವು ಸ್ವಾಗತಾರ್ಹವಾಗಿತ್ತು.

ಆದರೆ, ಪಾಕಿಸ್ತಾನದ ಬಗ್ಗೆ ಅವರು ಆಡಿದ ಮಾತು ಬಹುತೇಕ ಪಾಕಿಸ್ತಾನೀಯರಿಗೆ ಪಥ್ಯವಾಗುವುದಿಲ್ಲ. ಇವರನ್ನು ದ್ವೇಷಿಸುವ ಮತ್ತು ಬೆದರಿಕೆ ಹಾಕುವವರೂ ಕಾಶ್ಮೀರ ಕುರಿತ ಅವರ ಅಭಿಪ್ರಾಯವನ್ನು ತಮಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾರೆ.

ಜನರಲ್‌ ಕೃಷ್ಣರಾವ್‌ ಅವರು ಜಮ್ಮು ಮತ್ತು ಕಾಶ್ಮೀರದ ಗವರ್ನರ್‌ ಆಗಿದ್ದಾಗ ತಮ್ಮ ಪ್ರಭಾವ ಬೀರಿ ಕಣಿವೆ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಬೇಕೆಂದೂ ಝಕೀರ್‌ ಮನವಿ ಮಾಡಿಕೊಂಡಿದ್ದರು.

‘ಭಾರತ ಮತ್ತು ಪಾಕಿಸ್ತಾನಗಳ ಧೋರಣೆಯಿಂದ ಕಾಶ್ಮೀರ ಜನತೆ ರೋಸಿ ಹೋಗಿದ್ದಾರೆ. ಒಂದು ವೇಳೆ ಜನಾಭಿಪ್ರಾಯ ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟರೆ, ಸ್ಥಳೀಯರು ಸ್ವತಂತ್ರ ಕಾಶ್ಮೀರವನ್ನೇ ಆಯ್ಕೆ ಮಾಡಿಕೊಂಡಾರು.

ಅಂತಹ ಮುಕ್ತ ಅವಕಾಶವೇ ಇಲ್ಲದಿರುವಾಗ ಭಾರತವು ಕಾಶ್ಮೀರ ಕಣಿವೆಯಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಿ, ಉದ್ಯೋಗ ಅವಕಾಶ ಹೆಚ್ಚಿಸಿ, ಶಾಂತಿ ನೆಲೆಸಲು ಅವಕಾಶ ಮಾಡಿಕೊಟ್ಟರೆ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳೀತು’ ಎನ್ನುವುದು ಅವರ ಆಶಾವಾದವಾಗಿತ್ತು. ನಮ್ಮಿಬ್ಬರ ಮಾತು ಜಟಿಲವಾದ ವಿಷಯಗಳತ್ತ ಹೊರಳಿದಾಗ ಸಮಸ್ಯೆಗಳು ಎದುರಾದವು.

ಭಯೋತ್ಪಾದಕರು ಮುಂಬೈ (26/11) ಮತ್ತು ಅಮೆರಿಕದ (9/11) ಮೇಲೆ ನಡೆಸಿದ ಪೈಶಾಚಿಕ ದಾಳಿಯನ್ನು ಝಕೀರ್‌ ಖಂಡಿಸಿದ್ದರು. ‘ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ (ಡಬ್ಲ್ಯುಟಿಸಿ) ಅವಳಿ ಗೋಪುರಗಳನ್ನು ಧ್ವಂಸಗೊಳಿಸಿದವರದ್ದು ನೂರಕ್ಕೆ ನೂರರಷ್ಟು ತಪ್ಪು’ ಎಂದು ಬಣ್ಣಿಸಿದ್ದರು. ‘ಬಹುಶಃ ಅವರು ಇಸ್ಲಾಂ ಧರ್ಮ ಪಾಲನೆ ಮಾಡುವವರಾಗಿರಲಿಕ್ಕಿಲ್ಲ.

ಅವರ ಕೃತ್ಯ ಖಂಡನೀಯ. ಅದು ಒಸಾಮ ಬಿನ್‌ ಲಾಡೆನ್‌ನ ಕೃತ್ಯವಾಗಿರಬಹುದು ಎನ್ನುವುದರ ಬಗ್ಗೆ ಮಾತ್ರ ನನಗೆ ಖಚಿತ ಮಾಹಿತಿ ಇಲ್ಲ. ಆ ಘಟನೆ ನಡೆದಾಗ ನಾನು ಪ್ರವಾಸದಲ್ಲಿದ್ದೆ. ಸಾಕ್ಷ್ಯಚಿತ್ರಗಳಿಂದ ನಾನು ಮಾಹಿತಿ ಪಡೆದಿದ್ದೆ.

ಸಾಕ್ಷ್ಯಚಿತ್ರದ ಪ್ರಕಾರ, ಅದೊಂದು ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಷ್‌ ಅವರೇ ಮಾಡಿಸಿದ ಕೃತ್ಯವಾಗಿತ್ತು. ನಾನು ನೋಡಿದ ಸಾಕ್ಷ್ಯಾಧಾರಗಳು ಒಸಾಮ ಬಿನ್‌ ಲಾಡೆನ್‌ ವಿರುದ್ಧದ ಸಾಕ್ಷ್ಯಗಳಿಗಿಂತ, ಒಳಗಿನವರ (ಅಮೆರಿಕದವರ) ಕೈವಾಡದ ಬಗ್ಗೆ  ಹೆಚ್ಚು ಬಲಯುತವಾಗಿದ್ದವು’ ಎಂದು ಹೇಳಿದ್ದರು.

ಮುಸ್ಲಿಮರ ಮನಸ್ಥಿತಿ ಮೇಲೆ ಇವರ ಪ್ರಭಾವ ಕ್ರಮೇಣ ಬಿಗಿಯಾಗುತ್ತಿರುವುದು, ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ದಿನಪತ್ರಿಕೆ 2010ರಲ್ಲಿ ಪ್ರಕಟಿಸಿದ ವಾರ್ಷಿಕ ಪ್ರಭಾವಿ ವ್ಯಕ್ತಿಗಳ ಲೇಖನದ ಮೂಲಕ ದೃಢಪಟ್ಟಿತ್ತು.

ಸತ್ಯ ಮರೆಮಾಚಲು ಸಂದಿಗ್ಧ ಭಾಷೆ ಬಳಸುವ ಝಕೀರ್‌ ಅವರ ಇಂತಹ ವರ್ತನೆಯು ಅವರ ವ್ಯಕ್ತಿತ್ವದಲ್ಲಿನ ದೋಷಕ್ಕೆ ಮತ್ತು ಅವರಲ್ಲಿ ಇರುವ ಅಪಾಯಕಾರಿ ಗುಣಕ್ಕೆ ಕನ್ನಡಿ ಹಿಡಿಯುತ್ತದೆ. ಪತ್ನಿಯನ್ನು ದೈಹಿಕವಾಗಿ ದಂಡಿಸುವುದನ್ನು ಬಲವಾಗಿ ಬೆಂಬಲಿಸುವ ಮೂರ್ಖತೆಯನ್ನೂ ಅವರು ಪ್ರದರ್ಶಿಸಿದ್ದರು.

ಝಕೀರ್‌ ಅವರ ಆಧುನಿಕ ಹೊರನೋಟ, ಮಾತು ಮಾತಿಗೆ ಧರ್ಮಗ್ರಂಥ ಉದ್ಧರಿಸುವ ಮಾಂತ್ರಿಕ ಮಾತು ಅವರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಸಾಂಪ್ರದಾಯಿಕ ಮತ್ತು ಧರ್ಮಶಾಸ್ತ್ರದ ದೃಷ್ಟಿಕೋನವು ಇರುವುದನ್ನು ತೋರಿಸುತ್ತದೆ.

ಅವರ ಧಾರ್ಮಿಕ ಬೋಧನೆಯ ವಿಧಾನವು ಒಳ್ಳೆಯ ನಡತೆಯಿಂದಲೇ ಕೂಡಿದ್ದು,  ಬೆದರಿಕೆ ಸ್ವರೂಪದಲ್ಲೇನೂ ಇದ್ದಿರಲಿಲ್ಲ. ಆದರೆ, ಮುಗ್ಧ ಮನಸ್ಸುಗಳನ್ನು ಕೆದಕುವ ವಿಷಯದಲ್ಲಿ ಮಾತ್ರ ಅವರು ಅಪಾಯಕಾರಿಯಾಗಿ ಕಾಣಿಸುತ್ತಿದ್ದರು.

ಇತರ ಧರ್ಮದವರು ಅಥವಾ ಸರ್ಕಾರದ ವಿರುದ್ಧ ಹಿಂಸೆ ಎಸಗಲು ಝಕೀರ್‌ ಪ್ರಚೋದನೆ ನೀಡಿದ್ದಾರೆ ಎನ್ನುವುದನ್ನು ಮಾತ್ರ ನಾನು ನಂಬಲಾರೆ. ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿಗಳ  ಉಪಟಳವನ್ನು ಝಕೀರ್‌ ಖಂಡಿತವಾಗಿಯೂ ವಿರೋಧಿಸುತ್ತಿದ್ದಾರೆ.

‘ಐಎಸ್‌’ ಎನ್ನುವುದು ಇಸ್ಲಾಂ ವಿರುದ್ಧದ ಸಂಚು’ ಆಗಿದೆ ಎನ್ನುವುದು ಅವರ ದೃಢ ಅಭಿಪ್ರಾಯವಾಗಿದೆ. ಆದರೆ, ಮುಗ್ಧ ಯುವ ಮುಸ್ಲಿಂ ಮನಸ್ಸುಗಳು, ಇಸ್ಲಾಂ ಅನ್ನು ವ್ಯಾಖ್ಯಾನಿಸುವ ಮೂಲಭೂತವಾದಿಗಳ ವಿಧಾನವನ್ನೇ ಅನುಮಾನಿಸಿ ನೋಡುತ್ತವೆ. 

ಇದೇ ಕಾರಣಕ್ಕೆ, ಬಾಂಗ್ಲಾದೇಶದ ಕೆಲ ಉಗ್ರರು ಝಕೀರ್‌ ಅವರ ಅನುಯಾಯಿಗಳಾಗಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಲಿಲ್ಲ. ಉತ್ತಮ ಶಿಕ್ಷಣ ಪಡೆದ, ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿರುವ, ಇಂಗ್ಲಿಷ್‌ ಮಾತನಾಡುವ ಯುವ ಮುಸ್ಲಿಮರು ಉಗ್ರಗಾಮಿಗಳಾಗಿ ಪರಿವರ್ತನೆಗೊಂಡಿರುವುದು, ಅದರಲ್ಲೂ ‘ಐಎಸ್‌’ನ ಕಟ್ಟಾ ಬೆಂಬಲಿಗರಾಗಿರುವುದು ಏಕೆ ಎನ್ನುವ ಪ್ರಶ್ನೆ ಅನೇಕರನ್ನು ಬಹುವಾಗಿ ಕಾಡುತ್ತಿದೆ.

ಈ ಹೊಸ ಮುಸ್ಲಿಂ ಉಗ್ರಗಾಮಿಗಳು  ಹಳೆಯ ಬಡ, ಅಶಿಕ್ಷಿತ ಅಜ್ಮಲ್‌ ಕಸಾಬ್‌ನಂತಹವರನ್ನು ನಿರ್ಲಕ್ಷಿಸುತ್ತಿರುವುದು ಏಕೆ ಎನ್ನುವುದಕ್ಕೆ ಹೈದರಾಬಾದ್‌ನ ಸಂಸದ ಅಸಾದುದ್ದೀನ್‌ ಒವೈಸಿ ಅವರಲ್ಲಿ ಉತ್ತರ ಇರಬಹುದು. ಇವರು ಕೂಡ ಹಿಂದೂ ಬಲಪಂಥೀಯ ಸಂಘಟನೆಗಳು ದ್ವೇಷಿಸುವ ವ್ಯಕ್ತಿಯಾಗಿದ್ದಾರೆ. ಅವರೇ ನನ್ನ ಬಳಿ ಈ ಮಾತನ್ನು ಹೇಳಿಕೊಂಡಿದ್ದರು.

ಒವೈಸಿ ಅವರು ನನ್ನನ್ನು ಒಮ್ಮೆ ತಮ್ಮ ಕುಟುಂಬ ಮತ್ತು ಮಜ್ಲಿಸ್‌– ಎ– ಇತ್ತೆಹಾದುಲ್‌ ಮುಸ್ಲಿಮೀನ್‌– ಎಂಐಎಂ ಪಕ್ಷದ ಸಂಪೂರ್ಣ ಹಿಡಿತದಲ್ಲಿ ಇರುವ ಹೈದರಾಬಾದ್‌ನ ಒಳಭಾಗದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರು ಸ್ಥಾಪಿಸಿರುವ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ನನಗೆ ಮಾಹಿತಿ ನೀಡಲು ಕರೆದೊಯ್ದಿದ್ದರು. ಅಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಅನುಪಾತ 70:30 ಇದ್ದುದು ಕಂಡು ನನಗೆ ಸಂತಸವಾಗಿತ್ತು.

ಅಲ್ಲಿನ ಕೆಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದೆ. ಅದಕ್ಕೆ ಅನೇಕರಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ವಿದ್ಯಾರ್ಥಿನಿಯರು ಮುಖಪರದೆ ಧರಿಸಿದ್ದುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ‘ಈ ವಿದ್ಯಾರ್ಥಿನಿಯರು ಮದ್ರಸಾಗಳಿಗೆ ತೆರಳುವುದಕ್ಕಿಂತ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವುದು ಹೆಚ್ಚು ಮುಖ್ಯವಲ್ಲವೇ ಎಂದು ನೀವು ನಿಮ್ಮನ್ನು ದೂಷಿಸುವವರನ್ನು ಪ್ರಶ್ನಿಸಿ’ ಎಂದು ಒವೈಸಿ ನನ್ನನ್ನು ಕೇಳಿಕೊಂಡಿದ್ದರು.

ಕೆಲ ಕ್ಷಣಗಳ ಮೌನದ ನಂತರ, ‘ಯುವ ಮುಸ್ಲಿಮರು ಕೂಡ ಮದ್ರಸಾಗಳಿಗೆ ತೆರಳುವುದೇ ಹೆಚ್ಚು ಸೂಕ್ತವಾಗಿರಬಹುದು. ಮೌಲ್ವಿಗಳು ಅಲ್ಲಿ ಇಸ್ಲಾಂನ ಅರ್ಥ, ಅದರ ತತ್ವಗಳು ಸೇರಿದಂತೆ ಜಿಹಾದ್‌ (ಧರ್ಮಯುದ್ಧ) ಬಗ್ಗೆಯೂ ಬೋಧಿಸಬಹುದು. ಅದೇ ಒಳ್ಳೆಯದೇನೊ’ ಎಂದು ಒವೈಸಿ ಹೇಳಿದ್ದರು. ಮುಸ್ಲಿಮರೂ ಎಂಜಿನಿಯರ್‌, ವೈದ್ಯರು, ಎಂಬಿಎ ಪದವೀಧರರು ಆಗುವುದು ಬೇಡವೇ ಎನ್ನುವ ನೋವು ಅವರ ಮಾತಿನಲ್ಲಿ ಅಡಗಿತ್ತು.

ಮುಸ್ಲಿಂ ಯುವಕನೊಬ್ಬ ಗೂಗಲ್‌ನಲ್ಲಿ ಜಿಹಾದ್‌ ಬಗ್ಗೆ ಮಾಹಿತಿ ಶೋಧಿಸಲು ಹೊರಟರೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೊಹಮ್ಮದ್‌ ಹಫೀಜ್‌ ಸಯೀದ್ ಮತ್ತು ಅವರ ಜೆಯುಡಿ ಸಂಘಟನೆಗಳ ಮಾಹಿತಿಯೇ ಮೊದಲಿಗೆ ಬರುತ್ತದೆ.

ಇದೇ ಸದ್ಯಕ್ಕೆ ಇಸ್ಲಾಂ ಧರ್ಮಕ್ಕೆ ಎದುರಾಗಿರುವ ಅತಿದೊಡ್ಡ ಸವಾಲಾಗಿದೆ. ‘ಐಎಸ್‌’ ತಮ್ಮಲ್ಲಿ ಜುಗುಪ್ಸೆ ಮೂಡಿಸಿದ್ದು, ಹೈದರಾಬಾದ್‌ನ ಹಳೆ ನಗರ ಪ್ರದೇಶದಲ್ಲಿ ಅದರ ವಿರುದ್ಧ ಜಾಹೀರಾತು ಪ್ರದರ್ಶಿಸಿರುವುದಾಗಿ ಒವೈಸಿ ಹೇಳಿದ್ದರು.

‘ಯುವ, ಸುಶಿಕ್ಷಿತ  ಮುಸ್ಲಿಂ ವೃತ್ತಿಪರರು ಗೂಗಲ್‌ನಲ್ಲಿ ಜಿಹಾದ್‌ ಬಗ್ಗೆ ಮಾಹಿತಿ ಅರಸುತ್ತಿರುವ, ಆಧುನಿಕ  ಶೈಲಿಯ ಧರ್ಮ ಬೋಧಕರಿಂದ ತಮ್ಮ ಧಾರ್ಮಿಕ ನಂಬಿಕೆ ಕಲಿಯುತ್ತಿರುವುದರ ವಿದ್ಯಮಾನವನ್ನು ಹೇಗೆ ಎದುರಿಸಬೇಕು ಎಂದು ತಿಳಿಯುತ್ತಿಲ್ಲ’ ಎನ್ನುವ ಒವೈಸಿ ಅವರ ಗೊಂದಲವನ್ನು ಅರ್ಥೈಸಿಕೊಳ್ಳಬೇಕಾಗಿದೆ. 

ಮುಸ್ಲಿಮರು ಬಲಿಪಶುಗಳಾಗುತ್ತಿದ್ದಾರೆ ಎಂದು ಮನದಟ್ಟಾಗುವಂತಹ ಝಕೀರ್‌ ನಾಯ್ಕ್‌ ಅವರ ಭಾಷಣಗಳು ಮತ್ತು ಪ್ರಚಾರದಿಂದ ಯುವ ಮನಸ್ಸುಗಳು ಪ್ರಭಾವಿತಗೊಳ್ಳುತ್ತಿವೆ.

ಈ ಮಧ್ಯೆ, ಕಾಂಗ್ರೆಸ್‌ ಮುಖಂಡರೂ ಸೇರಿದಂತೆ (ಬರೀ ದಿಗ್ವಿಜಯ್‌ ಸಿಂಗ್‌ ಅವರಲ್ಲ) ಸ್ವಯಂ ಘೋಷಿತ ಜಾತ್ಯತೀತವಾದಿಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಇಶ್ರತ್‌ ಜಹಾಂ ಎನ್‌ಕೌಂಟರ್‌ ಮತ್ತು ಬಾತ್ಲಾ ಹೌಸ್‌ ದಾಳಿ ಪ್ರಕರಣಗಳು ಮುಗ್ಧ ಮುಸ್ಲಿಂ ಯುವಕರ ವಿರುದ್ಧ ನಡೆಸಿದ ಸಂಚು ಎಂದು ಬಣ್ಣಿಸುತ್ತಿದ್ದಾರೆ.  

ಭಾರತದಲ್ಲಿನ ಸಂಕೀರ್ಣ ಪರಿಸ್ಥಿತಿ ಹೀಗಿದ್ದರೆ, ಇನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಹೇಗಿರಬೇಕು ಎನ್ನುವುದನ್ನು ಓದುಗರೇ ಊಹಿಸಬೇಕು. ಅಂದಾಜು 50 ಕೋಟಿ ಮನಸ್ಸುಗಳು ಅಥವಾ ವಿಶ್ವ ಮುಸ್ಲಿಂ ಜನಸಂಖ್ಯೆಯ ಶೇ 40ರಷ್ಟು ಜನರ ಮೇಲೆ ಇಂತಹ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT