ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂತ್ರಾತೀತ ಲೋಕದಲ್ಲಿ ಸೂತ್ರಗಳ ಹುಡುಕಾಟ

Last Updated 28 ಜೂನ್ 2014, 19:30 IST
ಅಕ್ಷರ ಗಾತ್ರ

ನಿನ್ನ ಸಿನಿಮಾವನ್ನು ಜನ ನೋಡುವಂತಾಗಲಿ. ನಿನಗೆ ಶುಭ ಕೋರುತ್ತಿರುವುದರಲ್ಲಿ ನನ್ನ ಸ್ವಾರ್ಥವೂ ಇದೆ. ನಿನ್ನ ಚಿತ್ರಕ್ಕೆ ಯಶಸ್ಸು ಸಿಕ್ಕರೆ, ಅದೇ ಜಾಡಿನಲ್ಲಿ ಯೋಚಿಸುವ, ಕೌಟುಂಬಿಕ ಚಿತ್ರಗಳಲ್ಲಿ ನಂಬಿಕೆ ಇರಿಸಿ ಸಿನಿಮಾ ಮಾಡುವ, ನನ್ನಂಥವರಿಗೆ ಒಂದು ಭರವಸೆ ಹುಟ್ಟುತ್ತದೆ. ನಿನಗೆ ಒಳ್ಳೆಯದಾಗಲಿ- ಎಂದು ಗೆಳೆಯ ಪ್ರಕಾಶ್ ರೈಗೆ ಆತನ ಚಿತ್ರ ‘ಒಗ್ಗರಣೆ’ ಬಿಡುಗಡೆಯ ಹಿಂದಿನ ದಿನ ಹೇಳಿದ್ದೆ. Let’s hope ಎಂದಿದ್ದ. ಗಳಿಕೆ ಉತ್ತಮವಾಗಿದೆ. ಕೌಟುಂಬಿಕ ಪ್ರೇಕ್ಷಕರು ವಿಶೇಷವಾಗಿ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರವನ್ನು ನೋಡುತ್ತಿದ್ದಾರೆ. ‘ದೃಶ್ಯ’ ಎಂಬ ಸಿನಿಮಾ ಕೂಡಾ ಇದೇ ಹಾದಿಯಲ್ಲಿದೆ. ಟೆಲಿವಿಶನ್ ಸೆಟ್‌ಗಳಿಗೆ ತುಸು ವಿರಾಮ ಕೊಟ್ಟು, ವಿಶಾಲ ತೆರೆಯ ಎದುರು ಬಂದು ಸಿನಿಮಾಗಳನ್ನು ನೋಡತೊಡಗಿದರೆ ಉದ್ಯಮಕ್ಕೆ ಜೀವ ಬಂದಂತೆ. ಮೇಲೆ ಉಲ್ಲೇಖಿಸಿದ ಎರಡು ಚಿತ್ರಗಳೂ ರೀಮೇಕ್ ಅನ್ನುವ ಸಣ್ಣ ಅತೃಪ್ತಿಯನ್ನು ಬಿಟ್ಟರೆ, ಒಳ್ಳೆಯ ಚಿತ್ರಗಳಿಗೆ ಜನಮನ್ನಣೆ ಸಿಕ್ಕಿದೆ ಎಂಬ ಸಮಾಧಾನ. ಜನಮನ್ನಣೆಯಿಂದ ಮಾತ್ರ ಉದ್ಯಮದ ಉಳಿವು. ಉದ್ಯಮ ಉಳಿದರೆ ಮಾತ್ರ ಪ್ರಯೋಗಶೀಲತೆಗೆ ಅವಕಾಶ. ಪ್ರಯೋಗಶೀಲತೆ ಉಳಿದರೆ ಮಾತ್ರ ಪ್ರಗತಿಯ ಸಾಧ್ಯತೆ.

ನೀತ್ಯಾತೀತ ಲೋಕದಲ್ಲಿ ನೀತಿಯನ್ನು ಹುಡುಕಿದಂತೆ, ಈ ಸೂತ್ರಾತೀತ ಲೋಕದಲ್ಲಿ ನಾವೆಲ್ಲ ಸೂತ್ರಗಳನ್ನು ಹುಡುಕುತ್ತಿದ್ದೇವೆ. ಆ ಸೂತ್ರದ ಸರಳ ಹೆಸರು ಗೆಲುವು. ವಿಚಿತ್ರವೆಂದರೆ ಈ ಗೆಲುವೆಂಬುದೇ ಸೂತ್ರಾತೀತ. ಒಬ್ಬನ ಗೆಲುವನ್ನು ಇನ್ನೊಬ್ಬ ಕುರುಡಾಗಿ ಅನುಸರಿಸಲು ಯತ್ನಿಸುತ್ತಾನೆ. ಹಾಗೆ ಯತ್ನಿಸಿದೊಡನೆ ಮಕಾಡೆ ಬೀಳುತ್ತಾನೆ. ಆ ಕ್ಷಣದವರೆಗೆ ಗೆಲುವಿನ ಸೂತ್ರವಾಗಿದ್ದುದು, ಸೋಲಿನ ಸಂಕೇತವಾಗುತ್ತದೆ. ಮತ್ತೆ ಯಾರೋ ಒಂದು ಗೆಲುವಿನ ಉದಾಹರಣೆಯೊಂದಿಗೆ ಪ್ರತ್ಯಕ್ಷವಾಗುತ್ತಾನೆ. ಅದು ಸೂತ್ರವಾಗುತ್ತದೆ. ಸೂತ್ರ ಪುನರಾವರ್ತನೆಯಾದ ಕೂಡಲೇ ಎಲ್ಲರೂ ಅಪ್ಪಚ್ಚಿ. ಕಾರಣ ಸೂತ್ರದ ದುರ್ಬಳಕೆ. ಒಂದು ಸ್ವಂತ ನಿದರ್ಶನ ಕೊಡುವುದಾದರೆ ಹದಿನಾಲ್ಕು ವರ್ಷಗಳ ಹಿಂದೆ ಹೊಸ ಹುಡುಗ -ಹುಡುಗಿ ಹಾಕಿಕೊಂಡು ‘ನನ್ನ ಪ್ರೀತಿಯ ಹುಡುಗಿ’ ಎಂಬ ಸಿನಿಮಾ ನಿರ್ಮಿಸಿದ್ದೆ. ಕಪಾಲಿಯಲ್ಲಿ ಇಪ್ಪತ್ತೈದು ವಾರಗಳ ಭರ್ಜರಿ ಯಶಸ್ಸು.

ಬಿ. ಜಯಶ್ರೀ ಕಂಠದ ಕಾರ್‌ಕಾರ್ ಎಲ್ನೋಡಿ ಕಾರ್ ಹಾಡು ಎಲ್ಲೆಡೆ ಮೊಳಗಿತ್ತು. ಹೊಸಬರ ಸುವರ್ಣಯುಗ ಆರಂಭವಾಯಿತೆಂದು ಹಳಬರೆಲ್ಲ ವಿಗ್ ಧರಿಸಿ ನಾಯಕರಾಗಹೊರಟರು. ದಪ ದಪ ಬಿದ್ದರು. ಅವರು ಬೀಳುವುದಿರಲಿ, ಮತ್ತೆ ಹೊಸ ಹುಡುಗ- ಹುಡುಗಿ ಹಾಕಿಕೊಂಡು ಮಾಡಿದ ಪ್ಯಾರಿಸ್ ಪ್ರಣಯದಲ್ಲಿ ನಾನೇ ಬಿದ್ದೆ. ನನ್ನ ಸೂತ್ರ ನನಗೇ ದಕ್ಕದಾಯಿತು. ಹೀಗೆ ಸೂತ್ರಗಳು ಸವಕಲಾಗುತ್ತಿದ್ದಂತೆ ಹುಟ್ಟಿಸಿದವನನ್ನೇ ಸಾಯಿಸಬಲ್ಲವು.

ಮುಖ್ಯವಾಹಿನಿಯಲ್ಲೀಗ ಮೂರು ಜಾತಿಯ ಸಿನಿಮಾಗಳಿವೆ. ಮೊದಲನೆಯದು: ಪ್ರಸಿದ್ಧ ತಾರೆಗಳ, ಅಧಿಕ ಬಂಡವಾಳದ ಚಿತ್ರಗಳು. ಎರಡನೆಯದು: ಅಷ್ಟೇನೂ ಪ್ರಸಿದ್ಧ ತಾರೆಗಳಲ್ಲದ, ಆದರೆ ಪರಿಚಿತ ಮುಖಗಳನ್ನುಳ್ಳ, ಭಾಗಶಃ ತಾರೆಗಳನ್ನು ಹೊಂದಿದ ಚಿತ್ರಗಳು. ಮೂರನೆಯದು: ಸಂಪೂರ್ಣ ಹೊಸಬರನ್ನೇ ಹಾಕಿಕೊಂಡು ತಮ್ಮ ಕಥೆ-ನಿರೂಪಣೆಗಳನ್ನಷ್ಟೇ ನೆಚ್ಚಿ ಹೊರಡುವ ಚಿತ್ರಗಳು. ಈ ವರ್ಗೀಕರಣ ಕನ್ನಡಕ್ಕೆ ಮಾತ್ರವಲ್ಲ ; ಜಾಗತಿಕ ಸಿನಿಮಾಗಳಿಗೂ ಅನ್ವಯವಾಗುತ್ತದೆ. ಮೂರನೆಯ ವರ್ಗದಲ್ಲಿ ವಿಜಯಿಯಾದವನು ಎರಡನೆ ವರ್ಗಕ್ಕೂ, ಎರಡನೆಯ ವರ್ಗದಲ್ಲಿ ಗೆದ್ದವನು ಮೊದಲನೆ ವರ್ಗಕ್ಕೂ ಬಡ್ತಿ ಪಡೆಯುತ್ತಾನೆ. ಇದಕ್ಕೆ ರಿವರ್ಸ್ ಗೇರೂ ಇದೆ. ಮೊದಲನೆ ವರ್ಗದಲ್ಲಿ ಮುಗ್ಗರಿಸಿದರೆ ಎರಡನೆ ವರ್ಗಕ್ಕೂ, ಎರಡನೆಯ ವರ್ಗದಲ್ಲಿ ಕುಸಿದರೆ ಮೂರನೆಯ ವರ್ಗಕ್ಕೂ ಇಳಿಯಬೇಕಾಗುತ್ತದೆ.

ಕೆಲವರು ಮೂರನೆ ಸ್ಥಾನದಿಂದ ಮೊದಲ ಸ್ಥಾನಕ್ಕೆ ಹೈಜಂಪ್ ಮಾಡಿದಂತೆಯೇ, ಮೊದಲ ಸ್ಥಾನದಿಂದ ಮೂರನೆ ಸ್ಥಾನಕ್ಕೆ ಲಾಂಗ್‌ಜಂಪೂ ಮಾಡುತ್ತಾರೆ. ಪ್ರೇಕ್ಷಕನಿಗೆ ಈ ಯಾವ ಪುರಾಣವೂ ಬೇಕಿಲ್ಲ. ಈ ಕ್ಷಣ, ಅವನಿಗೆ ಖಾದ್ಯ ರುಚಿಸಬೇಕು. ಅಡುಗೆ ಮಾಡಿದವರು ಯಾರೇ ಆಗಿರಬಹುದು; ಪರಿಕರಗಳನ್ನು ಎಲ್ಲಿಂದಲೇ ತಂದಿರಬಹುದು. ಈಗ ರುಚಿಕಟ್ಟಾದ ಊಟ ಬೇಕು. ಅಜೀರ್ಣ, ಅನಾರೋಗ್ಯ ನಂತರದ ಮಾತು. ಒಂದು ಕಾಲಕ್ಕೆ ಸಹೃದಯ ಎಂಬ ಸಿಂಹಾಸನವನ್ನಲಂಕರಿಸಿದ್ದ ಪ್ರೇಕ್ಷಕ ಈಗ, ಹಣ ತೆತ್ತು ಲಾಭವನ್ನು ಒತ್ತಾಯಿಸುವ ಅಪ್ಪಟ ಗ್ರಾಹಕ. ಸಮಾಜ ಸಜ್ಜನರಿಲ್ಲದೆ ಬರಿದಾಗಿದೆ ಎಂದು ಇದರ ಅರ್ಥವಲ್ಲ. ಆದರೆ ಅಂಥವರು ಸಿನಿಮಾ ನೋಡುವುದಿಲ್ಲ. ಕೆಲವು ಸಜ್ಜನರಂತೂ ಕನ್ನಡ ಸಿನಿಮಾ ನೋಡಿ ಹತ್ತು ವರ್ಷ ಆಯ್ತು ಎಂದು ಅಭಿಮಾನಪೂರ್ವಕವಾಗಿ ನುಡಿಯುತ್ತಾರೆ. ಒಳ್ಳೆಯ ಚಿತ್ರ ಹೇಗಿರಬೇಕೆಂದು ಉಚಿತ ಪ್ರದರ್ಶನಾನಂತರ ಬೈಟುತ್ತಾರೆ. ಒಳ್ಳೆಯ ಸಿನಿಮಾಗಳಿಲ್ಲ ಎಂದು ಸಜ್ಜನರು ಗೊಣಗಿದರೆ, ಅವು ಬಂದಾಗ ಜನ ನೋಡುವುದಿಲ್ಲ ಎಂದು ಉದ್ಯಮ ದೂರುತ್ತದೆ. ಬೆಕ್ಕಿಗೆ ಗಂಟೆ ಕಟ್ಟುವವರು

ಯಾರು? ನಾಯಕನಟ, ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಈಗ ಚಿತ್ರರಂಗವನ್ನು ಹೊತ್ತು ನಿಂತಿರುವ ನಾಲ್ಕು ಸ್ತಂಭಗಳು. ಉಳಿದವರು ಈ ಚಪ್ಪರದ ಕೆಳಗೆ. ಚಪ್ಪರ ಕುಸಿದರೆ, ತಪ್ಪಿಸಿಕೊಳ್ಳಲು ಮೂರು ಕಂಬಗಳಿಗೂ ದಾರಿ ಇರುತ್ತದೆ; ನಿರ್ಮಾಪಕನನ್ನು ಬಿಟ್ಟು! ಈಗ ನಿರ್ಮಾಪಕ, ವಿತರಕ, ಪ್ರದರ್ಶಕ ಎಲ್ಲವೂ ಕಲಸುಮೇಲೋಗರ ಆಗಿರುವುದರಿಂದ ಕಂಬ ಯಾವುದು, ಡಿಂಬ ಯಾವುದು, ನಿಜವಾದ ಭಾರ ಯಾರ ಮೇಲೆ ಬಿತ್ತು ಎಂದು ಹೇಳುವುದು ಕಷ್ಟ. ಅವನ ಹತ್ತು ಚಿತ್ರ ಸಾಲಾಗಿ ನೆಲಕಚ್ಚಿದರೂ ತಾರೆಯೊಬ್ಬ ನಿರುದ್ಯೋಗಿಯಾಗುವುದಿಲ್ಲ. ಆದರೆ ಒಂದು ಚಿತ್ರ ಸೋತರೂ ನಿರ್ದೇಶಕ ನಿರುದ್ಯೋಗಿ; ನಿರ್ಮಾಪಕ ಅನಾಥ.

ತಾರೆಗಳದೇನೂ ತಪ್ಪಿಲ್ಲ, ಅವರದೂ ಹೋರಾಟದ ಬದುಕೇ. ಯಶಸ್ಸು ಸುಮ್ಮನೆ ಸಿಕ್ಕಿದ್ದಲ್ಲ. ಇಕ್ಕಟ್ಟಾದ ಎವರೆಸ್ಟ್ ಶಿಖರದ ಮೇಲೆ ಆತಂಕದಲ್ಲೇ ಕುಳಿತ ಎಲ್ಲರಿಗೂ ಬೀಳುವ ಭಯ. ಜನ ನೋಡುವವರೆಗೆ ನಾವು ಆಡುತ್ತೇವೆ; ನಾವಿರುವುದರಿಂದಲೇ ಉದ್ಯಮ ಎನ್ನುತ್ತಾರೆ. ಹೌಸ್‌ಫುಲ್ ಫಲಕಗಳು, ಜನಜಾತ್ರೆ, ನೂರಾರು ಕುಟುಂಬಗಳ ಬದುಕು, ಉದ್ಯಮದ ಆರ್ಥಿಕ ಚಟುವಟಿಕೆಗಳು ಅವರಿಂದಲೇ. ಮಾರುಕಟ್ಟೆ ಹಿಗ್ಗುವುದೂ ತಾರೆಗಳಿಂದಲೇ. ರಾಜನೇ ಪ್ರತ್ಯಕ್ಷ ದೈವ ಎಂದೊಮ್ಮೆ ನಂಬಿದ್ದ ನಾಡು ನಮ್ಮದು. ಈಗ ರಾಜನ ಜಾಗಕ್ಕೆ ಎಲ್ಲ ಕ್ಷೇತ್ರಗಳಲ್ಲೂ ನಾಯಕರು ಬಂದಿದ್ದಾರಷ್ಟೆ. ಆರಾಧಿಸುವುದು ಭಕ್ತರ ಇಚ್ಛೆ ಮತ್ತು ಆಯ್ಕೆ. ಆರಾಧಿಸಲ್ಪಡುವುದು ನಾಯಕನ ಅದೃಷ್ಟ ಮತ್ತು ಅರ್ಹತೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಇದನ್ನು ಒಪ್ಪಿಕೊಳ್ಳಲೇಬೇಕು.

ನನ್ನ ಲೆಕ್ಕ ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ: ಕನ್ನಡದಲ್ಲಿ ಪ್ರಥಮ ಶ್ರೇಣಿಯ, ಶಿಖರವೇರಿ ಕುಳಿತ, ದುಬಾರಿ ನಾಯಕನಟರು ಆರೇಳು ಜನರಿರಬಹುದು. ಇವರು ವರ್ಷಕ್ಕೆ ತಲಾ ನಾಲ್ಕು ಚಿತ್ರಗಳನ್ನು ಕೊಟ್ಟರೂ ಅಂದಾಜು ಮುವ್ವತ್ತು ಚಿತ್ರಗಳಾದವು. ಸರಾಸರಿ ನೂರಿಪ್ಪತ್ತು ಚಿತ್ರಗಳನ್ನು ವಾರ್ಷಿಕವಾಗಿ ಉತ್ಪಾದಿಸುವ ಕನ್ನಡ ಸಿನಿಮೋದ್ಯಮಕ್ಕೆ ಉಳಿದ ಶೇಕಡಾ ಎಪ್ಪತ್ತೈದರಷ್ಟು ಚಿತ್ರಗಳನ್ನು ನೀಡುತ್ತಿರುವವರು ದ್ವಿತೀಯ ಮತ್ತು ತೃತೀಯ ಶ್ರೇಣಿಯವರು. ಇವರನ್ನು ನೈತಿಕವಾಗಿ ಮತ್ತು ಆರ್ಥಿಕವಾಗಿ ಬಲಪಡಿಸಬೇಕು. ಖಾಸಗಿ ವಾಹಿನಿಯವರಿಗೆ ಸಲಹೆ ಕೊಡುವ ಹಕ್ಕು ನನಗಿಲ್ಲ. ಅದೊಂದು ಅಪ್ಪಟ ವ್ಯವಹಾರಿಕ ಜಗತ್ತು. ಆದರೂ ನಾಯಕ ನಟರ ಚಿತ್ರಗಳಿಗೆ ಕೋಟಿ ಚೆಲ್ಲಿ ಕೊಂಡುಕೊಳ್ಳುವ ವಾಹಿನಿಗಳು ದ್ವಿತೀಯ, ತೃತೀಯ ಶ್ರೇಣಿಯ ಚಿತ್ರಗಳನ್ನು ಕೆಲವು ಲಕ್ಷಗಳನ್ನಾದರೂ ಕೊಟ್ಟು ಉತ್ತಮವಾದವುಗಳನ್ನು ಕೊಂಡುಕೊಳ್ಳುವುದು ಸೂಕ್ತ. ವಾಸ್ತವವಾಗಿ ಸ್ಯಾಟಲೈಟ್ ಹಕ್ಕುಗಳ ಪರಿಕಲ್ಪನೆ ಆರಂಭವಾದದ್ದೇ ಪುಟ್ಟ ಚಿತ್ರಗಳಿಂದ. ಆದರೆ ಈಗ ಅದು ಪೂರ್ಣ ಸ್ಥಗಿತಗೊಂಡಂತಾಗಿದೆ. ನೀವೂ ಬದುಕಿ, ನಮ್ಮನ್ನೂ ಬದುಕಿಸಿ- ಎಂಬ ಉದಾತ್ತತೆ ಈಗ ಬೇಕಾಗಿದೆ.

ಕನ್ನಡ ಚಿತ್ರರಂಗ ಪುಟ್ಟ ಕುಟುಂಬ. ಇಲ್ಲಿ ಒಬ್ಬರನ್ನೊಬ್ಬರು ಕಾಪಾಡಿಕೊಳ್ಳುವುದು ಅಗತ್ಯ. ನೀತಿಸಂಹಿತೆ ಸರ್ಕಾರಕ್ಕೆ ಮಾತ್ರವಲ್ಲ; ಖಾಸಗಿ ಸಂಸ್ಥೆಗಳಿಗೂ ಇರಬೇಕು. ಇದನ್ನು ಕಾರ್ಯರೂಪಕ್ಕೆ ತರಲು ವಾಣಿಜ್ಯ ಮಂಡಳಿಯೂ ಯೋಚಿಸಬೇಕು. ತಾರೆಗಳಿಲ್ಲದ ಚಿತ್ರಗಳನ್ನು ನೈತಿಕವಾಗಿ ಬಲಪಡಿಸುವುದೆಂದರೆ, ಈ ಹಿಂದೆ ವಿವರಿಸಿದ ಸಜ್ಜನರು, ಸಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬಂದು, ಉತ್ತಮ ಚಿತ್ರಗಳೆಂದು ತಿಳಿದಂಥವುಗಳನ್ನು ಮೊದಲ ವಾರವೇ ನೋಡಬೇಕು ಮತ್ತು ನೋಡಿಸಬೇಕು. ಇದು ಆಗ್ರಹವಲ್ಲ; ಮನವಿ. ದೈನಂದಿನ ಆದ್ಯತೆಗಳು ನೂರಾರು ಇರುವಾಗ ಮೊದಲ ವಾರವೇ ಕನ್ನಡ ಸಿನಿಮಾ ನೋಡಿ ಎಂದು ಕೇಳುವುದು ಹಾಸ್ಯಾಸ್ಪದ ಅನ್ನಿಸಬಹುದು. ಮೂರನೇ ವಾರಕ್ಕೆ ನೋಡಬೇಕೆಂದಿರುವುದನ್ನು ಮೊದಲ ವಾರವೇ ನೋಡಿ ಎಂದಷ್ಟೇ ಇದರರ್ಥ. ಯಾಕೆಂದರೆ ಚಿತ್ರ ಎರಡನೆ ವಾರಕ್ಕೇ ಇರುವುದಿಲ್ಲ. ತಾರೆಗಳ ಅಭಿಮಾನಿಗಳು ಪಣ ತೊಟ್ಟಂತೆ ಚಿತ್ರವನ್ನು ಮೊದಲ ವಾರ ಉಳಿಸಿಕೊಳ್ಳುತ್ತಾರೆ. ತಾರೆಗಳಿಲ್ಲದ ಚಿತ್ರಗಳನ್ನು ಮೊದಲ ವಾರ ಉಳಿಸಿಕೊಳ್ಳುವ ತಾಯ್ತನವನ್ನು ಸದಭಿರುಚಿಯ ಮತ್ತು ಮುಕ್ತ ಪ್ರೇಕ್ಷಕನಿಂದ ನಿರೀಕ್ಷಿಸುವುದು ತಪ್ಪಿರಲಿಕ್ಕಿಲ್ಲ. ಇವೆಲ್ಲ ಅನುಷ್ಠಾನಗೊಳ್ಳಲಾರದ ಅಪೇಕ್ಷೆಗಳು ಎಂದು ತಿಳಿದೂ ಬರೆಯುತ್ತಿದ್ದೇನೆ.
*
ನನಗೆ ಸುಂಕದ ಕಟ್ಟೆಗಳಲ್ಲಿ, ಪೆಟ್ರೋಲ್ ಪಂಪುಗಳಲ್ಲಿ, ಸಾರ್ವಜನಿಕ ಜಾಗಗಳಲ್ಲಿ ನಿತ್ಯ ಎದುರಾಗುವ ಪ್ರಶ್ನೆ : ಯಾಕ್ಸಾರ್ ಸುಮ್ನಿದ್ದೀರ? ಯಾವಾಗ ನಿಮ್ಮ ಮುಂದಿನ ಸಿನ್ಮಾ? ಈ ಪ್ರಶ್ನೆಗಳಿಗೆ ಉತ್ತರ ಸರಳವಲ್ಲ. ಹೇಳಿ, ಎಂಥ ಸಿನಿಮಾ ಮಾಡಬೇಕು? ಎಂದು ಮರುಪ್ರಶ್ನೆ ಇಟ್ಟರೆ, ಒಬ್ಬರು ‘ಉಂಡೂ ಹೋದ’ದಂಥ ಕಾಮಿಡಿ, ‘ಬಾನಲ್ಲೆ ಮಧುಚಂದ್ರಕೆ’ಯಂಥ ಮಿಸ್ಟರಿ, ‘ಅಮೆರಿಕಾ ಅಮೆರಿಕಾ’ದಂಥ ಕ್ಲಾಸಿಕ್, ‘ಅಮೃತಧಾರೆ’ಯಂಥ ದುರಂತ ಪ್ರೇಮ ದಾಂಪತ್ಯ ಕಥನ, ‘ಮಾತಾಡ್ ಮಾತಾಡು ಮಲ್ಲಿಗೆ’ಯಂಥ ಸಮಸ್ಯೆಗಳನ್ನಾಧರಿಸಿದ ಚಿತ್ರಗಳನ್ನು ಮತ್ತೆ ಮಾಡಿ ಎನ್ನುತ್ತಾರೆ. ಅದು ಅವರ ಅಭಿಮಾನದ ಮಾತು. ಒಂದು ಮಧುರ ಹಾಡನ್ನು ಕೇಳಿ ಸವಿಯುವ ಸಾವಧಾನವೇ ಕಣ್ಮರೆಯಾಗಿರುವ ಈ ದಿನಗಳಲ್ಲಿ ಕಾವ್ಯದ ಸ್ಪರ್ಶ ಉಳ್ಳ ಕಥಾವಸ್ತುವನ್ನು ಕುಳಿತು ನೋಡುತ್ತಾರೆಯೇ? ಎಫ್‌ಎಂಗಳ ತುಂಬ ಅರೆಹುಚ್ಚು ಕುಣಿತದ ಟಪಾಂಗುಚ್ಚಿ ಹಾಡುಗಳದೇ ಅಬ್ಬರ. ಕೊಡುವವರ ಬಾಯಿ, ಪಡೆಯುವವರ ಕಿವಿ- ಇವುಗಳಲ್ಲಿ ಮೊದಲು ಕೆಟ್ಟಿದ್ದು ಯಾವುದೋ ತಿಳಿಯೆ. ಇದೆಲ್ಲ ಏಕಸ್ವಾಮ್ಯವೋ, ಸಮೂಹಸನ್ನಿಯೋ, ಸಜ್ಜನರ ಜಾಣಗಿವುಡೋ ಅರ್ಥವಾಗದು. ನಮಗೆ ಹೊಸತು ಬೇಕು. ಹೊಸತನ್ನು ಬೆರಗಿನಿಂದ ಬರಮಾಡಿಕೊಳ್ಳಬೇಕು. ಆದರೆ ಹೊಸತರ ಹೆಸರಿನಲ್ಲಿ ವಿಕೃತಿಯನ್ನಲ್ಲ. ಸಿನಿಮಾ ಆಗಾಗ ಗಡಿ ಮೀರುವ ಕಡಲು. ಸೀಮಾರೇಖೆ ದಾಟಬಯಸುವ ಕಲೆ. ಎಲ್ಲವನ್ನೂ ಮೀರುವುದೇ ಇಲ್ಲಿನ ಲಕ್ಷಣ. ಆದರೆ ಅದು ಅಸ್ವಾಭಾವಿಕ, ಅವೈಜ್ಞಾನಿಕ ಮತ್ತು ಅವೈಚಾರಿಕವಾದರೆ ಅದು ಅಪಾಯಕಾರಿ ಸುನಾಮಿಯಾಗುತ್ತಾ, ಮೂಲ ಸೌಂದರ್ಯವನ್ನೆಲ್ಲಾ ಕೊಚ್ಚಿಹಾಕುತ್ತದೆ. ಹಣ, ಮಾರುಕಟ್ಟೆ ಉಳಿಸಿಕೊಂಡೂ ಸಿನಿಮಾ ತನ್ನ ಘನತೆ ಮತ್ತು ಸೌಂದರ್ಯವನ್ನು ಉಳಿಸಿಕೊಳ್ಳಬೇಕು.

ಪ್ರತಿ ವಾರವೂ ನನ್ನ ಕಚೇರಿಗೆ ಒಬ್ಬ ಹೊಸ ನಿರ್ಮಾಪಕರು ಬರುತ್ತಾರೆ. ಸಿನಿಮಾ ಮಾಡಿಕೊಡಿ ಅನ್ನುತ್ತಾರೆ. ಅವರು ಹೇಳುವುದು ನನಗೆ, ನಾನು ಹೇಳುವುದು ಅವರಿಗೆ ಜಟಿಲವಾಗಿ ಕೇಳಿಸುತ್ತದೆ. ಈ ಜಟಿಲತೆ, ದ್ವಂದ್ವಗಳು ಉದ್ಯಮದವು ಕೂಡಾ. ನನ್ನ ಸರೀಕ ನಿರ್ದೇಶಕರು -ನಿರ್ಮಾಪಕರು ಇಂಥದ್ದೇ ಸ್ಥಿತಿಯಲ್ಲಿರಲಿಕ್ಕೆ ಸಾಕು. ಡಿಫರೆಂಟ್ ಆಗಿರಬೇಕು ಅನ್ನುತ್ತಲೇ ಅದೇ ಮಚ್ಚು, ಲಾಂಗಿಗೆ ಕೈ ಹಾಕುತ್ತಾರೆ. ಕೈಗಳು ನೋಯುವುದಿಲ್ಲವೆ? ಹಾಡಿನ ದೃಶ್ಯಗಳು ಒಂದೇ ಬಗೆಯಲ್ಲಿದ್ದು ಯಾವುದೇ ಸಿನಿಮಾಕ್ಕೆ ಜೋಡಿಸಬಹುದಾಗಿರುತ್ತವೆ. ಇದು ಹೇಗೆ ಡಿಫರೆಂಟು? ಮಾಡಿದ್ದನ್ನೇ ಮಾಡಲಾಗದ, ಹೊಸತನ್ನು ಹಿಡಿಯಲಾಗದ ಸಿನಿಮಾ ಎಂಬ ಮಾಯೆ ಎಷ್ಟೊಂದು ಭಯಾನಕ? ಎಷ್ಟೊಂದು ಮೋಹಕ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT