ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಯುಲರ್ ಭಾರತಕ್ಕೆ ಸತ್ಯ ತಿಳಿದಿರಬೇಕು

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇತಿಹಾಸದ ಮಾರ್ಕ್ಸ್‌ವಾದಿ ವ್ಯಾಖ್ಯಾನ ಸೃಷ್ಟಿಸಿರುವ ಸಮಸ್ಯೆಗಳನ್ನು ಪರಿಹರಿಸುವಾಗ ನಾವು ಇನ್ನೊಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ಸಮಸ್ಯೆಯನ್ನು ಬೆಲ್ಜಿಯಂನ ಪೌರಸ್ತ್ಯ ಪಂಡಿತ, ಭಾರತೀಯ ಸಂಸ್ಕೃತಿಗಳ ವಿದ್ವಾಂಸ ಕೊಯೆನ್ರಾಡ್‌ ಎಲ್ಸ್ಟ್‌ ಅವರು ‘ಭಾರತದಲ್ಲಿನ ನಿರಾಕರಣವಾದ’ ಎಂದು ಕರೆಯುತ್ತಾರೆ.

ಎಲ್ಸ್ಟ್‌ ಅವರು ಭಾರತದ ಇತಿಹಾಸ ಮತ್ತು ಹಿಂದೂ–ಮುಸ್ಲಿಂ ಸಂಬಂಧಗಳ ಕುರಿತ ಬರವಣಿಗೆಗಳಿಂದಾಗಿ ಖ್ಯಾತರು. ಎರಡನೆಯ ವಿಶ್ವ ಯುದ್ಧದ ಸಂದರ್ಭದಲ್ಲಿ ಯುರೋಪಿನಲ್ಲಿ ನಾಜಿಗಳು ನಡೆಸಿದ ಯಹೂದಿಗಳ ಮತ್ತು ಜಿಪ್ಸಿಗಳ ಹತ್ಯಾಕಾಂಡವನ್ನು ನಿರಾಕರಿಸುವುದು ಐರೋಪ್ಯ ನಿರಾಕರಣವಾದ. ಆದರೆ ಭಾರತದಲ್ಲಿ ‘ನಿರಾಕರಣವಾದ’ ಅಂದರೆ, ‘ಇಸ್ಲಾಂನ ಖಡ್ಗ ಹಿಡಿದಿದ್ದವರು ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯದ ನೆನಪುಗಳನ್ನು ಹಿಂದೂಗಳ ಸ್ಮೃತಿಪಟಲದಿಂದ ಅಳಿಸಿಹಾಕಲು ಕೆಲವು ವರ್ಗದ ಬುದ್ಧಿಜೀವಿಗಳು ನಡೆಸುವ ಯತ್ನ’ ಎಂದು ಎಲ್ಸ್ಟ್‌ ಹೇಳುತ್ತಾರೆ.

‘ನೆಗೇಷನಿಸಂ ಇನ್‌ ಇಂಡಿಯಾ– ಕನ್ಸೀಲಿಂಗ್‌ ದಿ ರೆಕಾರ್ಡ್‌ ಆಫ್‌ ಇಸ್ಲಾಂ’ (ಭಾರತದಲ್ಲಿ ನಿರಾಕರಣವಾದ– ಇಸ್ಲಾಂನ ಕೃತ್ಯಗಳ ಮರೆಮಾಚುವಿಕೆ) ಕೃತಿಯಲ್ಲಿ ಎಲ್ಸ್ಟ್‌ ಅವರು: ‘ಮುಸ್ಲಿಮರಿಂದ ಹಿಂದೂಗಳ ಮೇಲೆ ನಡೆದ ದೌರ್ಜನ್ಯಕ್ಕೆ ಬಲಿಯಾದವರ ಸಂಖ್ಯೆಯು, ನಾಜಿಗಳು ನಡೆಸಿದ ಜನಾಂಗೀಯ ಹತ್ಯಾಕಾಂಡಕ್ಕೆ ಬಲಿಯಾದವರ ಸಂಖ್ಯೆಗೆ ಸಮನಾಗಿದೆ. ಆದರೆ, ಹಿಂದೂ ಧರ್ಮದ ವಿರುದ್ಧ ನಡೆದ ಇಸ್ಲಾಮಿಕ್ ಅಭಿಯಾನದ ಕಾಲಾವಧಿಯಲ್ಲಿ ವರದಿಯಾದ ಹತ್ಯಾಕಾಂಡಗಳನ್ನು ಆಧರಿಸಿ, ಎಷ್ಟು ಲಕ್ಷ ಜನ ಮಡಿದಿರಬಹುದು ಎಂಬುದನ್ನು ಅಂದಾಜಿಸುವ ಪ್ರಯತ್ನವನ್ನು ಯಾರೂ ನಡೆಸಿಲ್ಲ’ ಎಂದು ಬರೆದಿದ್ದಾರೆ.

ಎಲ್ಸ್ಟ್‌ ಮಾತ್ರವೇ ಅಲ್ಲದೆ ಈ ವಿಷಯದ ಬಗ್ಗೆ ಪಶ್ಚಿಮದ ಇತರ ಹಲವು ವಿದ್ವಾಂಸರೂ ಮಾತನಾಡಿದ್ದಾರೆ. ಹಿಂದೂ ಧರ್ಮ ಮತ್ತು ವೇದಗಳ ಬಗ್ಗೆ ವಿಸ್ತೃತವಾಗಿ ಬರೆದಿರುವ ಅಮೆರಿಕದ ಹಿಂದೂ ಬೋಧಕ ಮತ್ತು ಲೇಖಕ ಡೇವಿಡ್ ಫ್ರಾಲೆ, ಮಧ್ಯಯುಗದ ಇತಿಹಾಸದ ಬಗ್ಗೆ ನಾವು ಹೊಂದಿರುವ ತಿಳಿವಳಿಕೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿರುವ, ಭಾರತವನ್ನೇ ತಮ್ಮ ಮನೆ ಮಾಡಿಕೊಂಡಿರುವ ಫ್ರೆಂಚ್‌ ಪತ್ರಕರ್ತ ಫ್ರಾನ್ಸ್ವಾ ಗೋತಿಯೆ ಇಂಥವರಲ್ಲಿ ಕೆಲವರು.

ಇತಿಹಾಸದಲ್ಲಿ ನಡೆದಿರುವುದನ್ನು ನಿರಾಕರಿಸುವುದು ಭಾರತದ ಬುದ್ಧಿಜೀವಿ ವರ್ಗ ಯಾವಾಗಲೂ ಮಾಡುವ ಕೆಟ್ಟ ಕೆಲಸ ಎಂದು ಹೇಳಲು ಎಲ್ಸ್ಟ್‌ ಅವರು ಅಮೆರಿಕನ್ ಇತಿಹಾಸಕಾರ ವಿಲ್ ಡ್ಯುರಾಂಟ್ ಅವರನ್ನು ಉಲ್ಲೇಖಿಸುತ್ತಾರೆ. ಡ್ಯುರಾಂಟ್ ಅವರು ಹೀಗೆ ಹೇಳಿದ್ದರು: ‘ಇಸ್ಲಾಮಿಕ್‌ ಆಡಳಿತಗಾರರು ಭಾರತವನ್ನು ಆಕ್ರಮಿಸಿದ್ದು ಇತಿಹಾಸದಲ್ಲಿನ ಅತ್ಯಂತ ರಕ್ತಸಿಕ್ತ ಕಥನ ಆಗಿರುವಂತಿದೆ. ಅದು ಎದೆಗುಂದಿಸುವ ಕಥೆಯೂ ಹೌದು. ಹೊರಗಿನಿಂದ ಆಕ್ರಮಣ ಮಾಡುವ ಅನಾಗರಿಕರು ಅಥವಾ ಒಳಗೊಳಗೇ ದ್ವಿಗುಣಗೊಳ್ಳುವ ಅನಾಗರಿಕರು ನಾಗರಿಕತೆ ಎಂಬ ಅಮೂಲ್ಯ ಮೌಲ್ಯವನ್ನು, ಅದರ ವ್ಯವಸ್ಥೆ ಮತ್ತು ಅದು ಕೊಡುವ ಸ್ವಾತಂತ್ರ್ಯವನ್ನು, ಸಂಸ್ಕೃತಿ ಮತ್ತು ಶಾಂತಿಯನ್ನು ಯಾವುದೇ ಕ್ಷಣದಲ್ಲೂ ಹೊಡೆದುಹಾಕಬಲ್ಲರು ಎಂಬ ನೀತಿ ಈ ಕಥೆಯಲ್ಲಿದೆ’.

‘ಭಾರತದಲ್ಲಿ ಅಲ್ಲಿನದೇ ಆದ ಪೂರ್ಣ ಪ್ರಮಾಣದ ನಿರಾಕರಣವಾದ ಇದೆ. ಇದನ್ನು ಮುನ್ನಡೆಸುತ್ತಿರುವವರು ಇಸ್ಲಾಮಿಕ್ ಹಿಂಸಾಕೃತ್ಯಗಳನ್ನು ಮರೆಮಾಚುವವರು ಮತ್ತು ಮಾರ್ಕ್ಸ್‌ವಾದಿ ಪ್ರಾಧ್ಯಾಪಕರು. ತಮ್ಮನ್ನು ಸೆಕ್ಯುಲರ್‌ ಎಂದು ಕರೆದುಕೊಳ್ಳುವ ಎಲ್ಲ ರಾಜಕಾರಣಿಗಳು, ಪತ್ರಕರ್ತರು ಮತ್ತು ಬುದ್ಧಿಜೀವಿಗಳು ಇದನ್ನು ಬೆಂಬಲಿಸುತ್ತಾರೆ’ ಎಂದು ಎಲ್ಸ್ಟ್‌ ಹೇಳುತ್ತಾರೆ. ನಿರಾಕರಣವಾದವನ್ನು ಭಾರತದ ಪ್ರಭುತ್ವ ಕೂಡ ಉತ್ತೇಜಿಸಿದೆ. ಐತಿಹಾಸಿಕ ಸತ್ಯಗಳನ್ನು ನಿರಾಕರಿಸುವ ಈ ಅಭಿಯಾನವನ್ನು ಮುನ್ನಡೆಸುವವರು ಬೇರೆಡೆ ಬಳಸಿದ ತಂತ್ರವನ್ನೇ ಇಲ್ಲೂ ಬಳಸುತ್ತಾರೆ – ಆ ತಂತ್ರಗಳಲ್ಲಿ ಕೆಲವು ಇಲ್ಲಿವೆ: ‘ಅಪ್ರಿಯ ಸಂಗತಿಗಳನ್ನು ಹೇಳುವ ವಿದ್ವಾಂಸರ ಚಾರಿತ್ರ್ಯವಧೆ ನಡೆಸುವುದು, ಅವರು ಮುಂದಿಡುವ ಗಟ್ಟಿ ಸಾಕ್ಷ್ಯಗಳಿಂದ ಇತರರ ಗಮನ ಬೇರೆಡೆ ತಿರುಗಿಸಲು ಅವರ ಕೃತ್ಯಗಳ ಹಿಂದೆ ರಾಜಕೀಯ ಅಥವಾ ಇತರ ಉದ್ದೇಶಗಳಿವೆ ಎಂದು ಆರೋಪಿಸುವುದು.’ ಇಷ್ಟೇ ಅಲ್ಲ, ಅಪ್ರಿಯ ಸತ್ಯಗಳ ರಾಶಿಯನ್ನು ಓದುಗರ ಕಣ್ಣ ನೋಟದಿಂದ ದೂರ ಇಡುವುದನ್ನು ಕೂಡ ಮಾಡಲಾಗುತ್ತದೆ. ಹೀಗೆ ಮಾಡುವುದು ಬೌದ್ಧಿಕ ಅಪರಾಧ. ಏಕೆಂದರೆ ಇದು ಸತ್ಯವನ್ನು ರಾಜಕೀಯ ಅನಿವಾರ್ಯಗಳ ಅಡಿಯಾಳನ್ನಾಗಿ ಮಾಡುತ್ತದೆ.

ಎಲ್ಸ್ಟ್‌ ಅವರು ತಮ್ಮ ಪುಸ್ತಕವನ್ನು ಕಾಲು ಶತಮಾನದ ಹಿಂದೆ ಪ್ರಕಟಿಸಿದರು. ಆದರೆ ತಮ್ಮ ವಾದ ಮುನ್ನೆಲೆಗೆ ಬರಲು ಅವರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಯಬೇಕಾಯಿತು. ನೆಹರೂವಾದಿಗಳು ಮತ್ತು ಮಾರ್ಕ್ಸ್‌ವಾದಿಗಳು 2014ರವರೆಗೂ ದೆಹಲಿಯ ‘ಪ್ರಭುತ್ವ’ ಆಗಿದ್ದರು. ಅವರು ಬೌದ್ಧಿಕ ವಲಯ ಮತ್ತು ಮಾಧ್ಯಮ ವಲಯಗಳಲ್ಲಿ ಇತರ ದನಿಗಳು ಕೇಳಿಬರದಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದರು. ಎಲ್ಸ್ಟ್‌ ಅವರು ಕಾಯಬೇಕಾಗಿ ಬಂದಿದ್ದರೆ ಇದು ಒಂದು ಕಾರಣ. ಇವೆಲ್ಲವುಗಳ ಪರಿಣಾಮವಾಗಿ, ಲಭ್ಯ ಸಾಕ್ಷ್ಯಗಳನ್ನು ನಿರ್ಲಕ್ಷಿಸಿ ಸುಳ್ಳು ವಿವರಣೆಗಳೇ ಹರಡಿಕೊಂಡಿದ್ದವು.

ಫ್ರಾಲೆ ಮತ್ತು ಗೋತಿಯೆ ಅವರಲ್ಲದೆ, ಭಾರತೀಯ ಮೂಲದ ಅನೇಕ ಲೇಖಕರು ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಸತ್ಯ ಮತ್ತು ಇತಿಹಾಸದ ನಡುವಣ ಅಂತರವನ್ನು ಇಲ್ಲವಾಗಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಅವರಲ್ಲಿ ಪ್ರಮುಖರು ಡಾ.ಎಸ್.ಎಲ್. ಭೈರಪ್ಪ. ನಮ್ಮ ಕಾಲದ ಅತ್ಯಂತ ಪ್ರಮುಖ ಭಾರತೀಯ ಕಾದಂಬರಿಕಾರರಲ್ಲಿ ಇವರು ಒಬ್ಬರು ಎಂಬುದರಲ್ಲಿ ಅನುಮಾನವೇ ಇಲ್ಲ. ಸುಳ್ಳಿನ ಆವರಣದಿಂದ ಭಾರತೀಯರು ಹೊರಬರಬೇಕು ಎಂದು ಹೇಳುವ ಅವರ ಐತಿಹಾಸಿಕ ಕಾದಂಬರಿ ‘ಆವರಣ’ ನಿರಾಕರಣವಾದಿಗಳ ಮೇಲೆ ಪ್ರಹಾರವನ್ನೇ ನಡೆಸಿದೆ.

ಎಲ್ಸ್ಟ್‌ ಅವರ ಮಾತುಗಳಿಗೆ ಡೇವಿಡ್‌ ಫ್ರಾಲೆ ಪೂರ್ತಿ ಬೆಂಬಲ ನೀಡುತ್ತಾರೆ. ‘ಆತ್ಮಘಾತುಕ ಪ್ರವೃತ್ತಿಯೊಂದು ಆಧುನಿಕ ಕಾಲದ ಭಾರತೀಯರಲ್ಲಿ ಇದೆ’ ಎಂದು ಫ್ರಾಲೆ ಹೇಳುತ್ತಾರೆ. ‘ಈ ಪ್ರವೃತ್ತಿಯನ್ನು ಬಹುಶಃ ಜಗತ್ತಿನ ಇತರ ಯಾವ ದೇಶಗಳ ಜನರಲ್ಲಿನ ಪ್ರವೃತ್ತಿಯ ಜೊತೆಯಲ್ಲೂ ಹೋಲಿಸಲಾಗದು’ ಎಂದೂ ಅವರು ಹೇಳುತ್ತಾರೆ.

ಭಾರತದ ಮೇಲ್ವರ್ಗದವರ ಮನಸ್ಥಿತಿ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ಫ್ರಾಲೆ ಅವರು: ‘ಈ ದೇಶದ ಮೇಲ್ವರ್ಗದವರ ಮನಸ್ಸಿನಲ್ಲಿ, ನಾಗರಿಕ ಸಂಘರ್ಷದ ಅಂಚಿನಲ್ಲಿ ಕುಳಿತಿರುವ ಆಂತರಿಕ ಸಂಘರ್ಷವೊಂದು ನಡೆದಿದೆ. ಹಿಂದೂ ಎಂಬ ಯಾವುದೂ ಸಂರಕ್ಷಿಸಲು ಅಥವಾ ಸುಧಾರಣೆಗೆ ಒಳಪಡಿಸಲು ಯೋಗ್ಯವಲ್ಲ, ಭಾರತೀಯ ಎನ್ನುವ ಕೆಲವೇ ಕೆಲವನ್ನು ಮಾತ್ರ ಸುಧಾರಿಸಬಹುದು, ಸಂರಕ್ಷಿಸಬಹುದು, ಈ ದೇಶಕ್ಕೊಂದು ವಿದೇಶಿ ಮುಖವಾಡ ತೊಡಿಸಬೇಕು ಎಂಬುದು ಇಲ್ಲಿನ ಸಾಂಸ್ಕೃತಿಕ ನಾಯಕರು ನಡೆಸುತ್ತಿರುವ ಪ್ರಮುಖ ಪ್ರಯತ್ನ ಆಗಿರುವಂತಿದೆ. ಇಂಗ್ಲಿಷ್‌ ಮಾತನಾಡುವ ಈ ಹೊಸ ಉಚ್ಚ ವರ್ಗವು ತನಗೆ ಜೀವ ಕೊಟ್ಟ ನೆಲ ಮತ್ತು ಜನರಿಂದ ದೂರ ಇರುವುದರಲ್ಲೇ ಹೆಮ್ಮೆ ಕಂಡುಕೊಳ್ಳುತ್ತಿದೆ’ ಎಂದು ಹೇಳುತ್ತಾರೆ.

ಇಂತಹ ಪ್ರವೃತ್ತಿಯನ್ನು ವಿಶ್ವದ ಯಾವ ದೇಶದಲ್ಲೂ ಕಾಣಲು ಆಗದು ಎಂದು ಅವರು ಹೇಳುತ್ತಾರೆ. ‘ತನ್ನದೇ ಇತಿಹಾಸ ಮತ್ತು ಸಂಸ್ಕೃತಿಯನ್ನು ಕೀಳಾಗಿ ಕಾಣುವ ಪ್ರವೃತ್ತಿ ಇರುವ ಸುಶಿಕ್ಷಿತ ವರ್ಗ ಬೇರೆ ಯಾವ ದೇಶದಲ್ಲೂ ಇದ್ದಿರಲಿಕ್ಕಿಲ್ಲ. ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಮಹಾನ್‌ ಪುರಾತತ್ವ ದಾಖಲೆಗಳು ದೊರೆತಾಗ ಅವು ರಾಷ್ಟ್ರೀಯ ಅಭಿಮಾನದ ವಸ್ತುವಾಗುವುದಿಲ್ಲ. ಬದಲಿಗೆ, ಅವುಗಳನ್ನು ಹಾಸ್ಯದ ವಸ್ತುವಾಗಿಸಲಾಗುತ್ತದೆ’ ಎಂದು ಅವರು ಬರೆದಿದ್ದಾರೆ. ಭಾರತದ ಉಚ್ಚ ವರ್ಗದವರ ಮೇಲೆ ಕಿಡಿ ಕಾರಿರುವ ಅವರು, ‘ಬಹುಸಂಖ್ಯಾತರ ಧರ್ಮ ಎಷ್ಟೇ ಜ್ಞಾನಸಂಪತ್ತಿನಿಂದ ಕೂಡಿರಲಿ, ಎಷ್ಟೇ ಆಧ್ಯಾತ್ಮಿಕ ಸಂಪತ್ತಿನಿಂದ ತುಂಬಿರಲಿ ಅಥವಾ ಎಷ್ಟೇ ಕೌತುಕಮಯ ಆಗಿರಲಿ, ಆ ಧರ್ಮವನ್ನು ಹಾಸ್ಯ ಮಾಡುವ ಕೆಲಸವನ್ನು ಬಹುಶಃ ಬೇರೆ ಯಾವ ದೇಶದಲ್ಲೂ ಮಾಡುವುದಿಲ್ಲ. ಅಲ್ಪಸಂಖ್ಯಾತ ಧರ್ಮಗಳು ಎಷ್ಟೇ ಮೂಲಭೂತವಾದಿ ಆಗಿದ್ದರೂ, ಎಷ್ಟೇ ತೀವ್ರಗಾಮಿ ಧೋರಣೆಗಳನ್ನು ಅವು ಹೊಂದಿದ್ದರೂ, ಅವುಗಳನ್ನು ಮುದ್ದಿಸುವುದು ಕೂಡ ಬೇರೆಡೆ ಇದ್ದಿರಲಿಕ್ಕಿಲ್ಲ’ ಎಂದು ಹೇಳಿದ್ದಾರೆ.

ಹೀಗೆ ಹೇಳಿಸಿಕೊಂಡಿರುವ ದೊಡ್ಡ ಬುದ್ಧಿಜೀವಿ ವರ್ಗಕ್ಕೆ ಇನ್ನೊಂದು ಹೆಸರು ಕೂಡ ಇದೆ. ‘ಮೆಕಾಲೆ ಪುತ್ರ’ ಎಂಬುದು ಆ ಹೆಸರು. ಭಾರತದ ನಾಗರಿಕತೆಯ ಶ್ರೇಷ್ಠತೆಯನ್ನು ನಿರಾಕರಿಸುವುದನ್ನು ಫ್ಯಾಷನ್ ಮಾಡಿಕೊಂಡಿರುವುದು ಇಲ್ಲಿನ ಇಂಗ್ಲಿಷ್‌ ಶಿಕ್ಷಣ ಪಡೆದ ವರ್ಗ. ಇವೆಲ್ಲ ಸರಿಯಾಗಬೇಕು ಎಂದಾದರೆ ಈ ವರ್ಗವನ್ನು ಆರಾಮ ಕುರ್ಚಿಯಿಂದ ಎಬ್ಬಿಸಬೇಕು.

ಅಪ್ರಿಯ ಸತ್ಯಗಳನ್ನು ಭಾರತದ ಇತಿಹಾಸದ ಪುಸ್ತಕಗಳಿಂದ ಮರೆಮಾಚುವ ಕೆಲಸ ಕಂಡು ತೀರಾ ಬೇಸರಗೊಂಡವರಲ್ಲಿ ಫ್ರಾನ್ಸ್ವಾ ಗೋತಿಯೆ ಕೂಡ ಒಬ್ಬರು. ಅವರು ತಮ್ಮ ಪುಸ್ತಕ ‘A History of India as it Happened’ನಲ್ಲಿ ಮಾರ್ಕ್ಸ್‌ವಾದಿ ಇತಿಹಾಸಕಾರರ ಪ್ರಶ್ನಾರ್ಹ ವಿವರಣೆಗಳ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಅವರ ಕೃತಿಗಳಲ್ಲಿ ಇರುವ ನಿರಾಕರಣವಾದದ ಬಗ್ಗೆ ಹಲವು ಉದಾಹರಣೆಗಳನ್ನು ನೀಡುತ್ತಾರೆ. ‘ಮುಸ್ಲಿಂ ಆಕ್ರಮಣದಿಂದ ಭಾರತದ ಮೇಲೆ ಆಗಿರುವ ಅಪಾರ ಭೌತಿಕ ಹಾನಿಯನ್ನು ಅಂದಾಜಿಸಲು ನಮ್ಮಿಂದ ಎಂದಿಗೂ ಸಾಧ್ಯವಿಲ್ಲ. ಹಿಂದೂ ಭಾರತಕ್ಕೆ ಉಂಟು ಮಾಡಿರುವ ನೈತಿಕ ಮತ್ತು ಆಧ್ಯಾತ್ಮಿಕ ಹಾನಿಯನ್ನು ಅಂದಾಜಿಸುವುದು ಇನ್ನೂ ಹೆಚ್ಚು ಕಷ್ಟದ ಕೆಲಸ’ ಎಂದು ಅವರು ಹೇಳುತ್ತಾರೆ.

ನಿರಾಕರಣವಾದವನ್ನು ಏಕೆ ಎದುರಿಸಬೇಕು ಎಂಬುದನ್ನು ಗೋತಿಯೆ ವಿವರಿಸುತ್ತಾರೆ. ‘ಇದು ಸೇಡು ತೀರಿಸಿಕೊಳ್ಳುವ ವಿಚಾರ ಅಲ್ಲ. ಹಿಂದೆ ನಡೆದ ಕಹಿ ಘಟನೆಗಳನ್ನು ಪುನಃ ನೆನಪಿಸುವುದೂ ಅಲ್ಲ ಇದು. ಆದರೆ, ಹಿಂದೆ ಮಾಡಿದ ತಪ್ಪುಗಳನ್ನು ಈಗ ಪುನಃ ಮಾಡದಿರುವುದಕ್ಕೆ ಸಂಬಂಧಿಸಿದ್ದು ಈ ವಿಚಾರ’ ಎಂದು ಅವರು ಹೇಳಿದ್ದಾರೆ. ಎಲ್ಸ್ಟ್‌, ಫ್ರಾಲೆ, ಗೋತಿಯೆ ಮತ್ತು ಭೈರಪ್ಪ ಅವರ ವಾದಗಳ ಕೇಂದ್ರದಲ್ಲಿ ಇರುವುದು ಇದೇ ಆಶಯ. ಸೆಕ್ಯುಲರ್, ಪ್ರಜಾತಂತ್ರ ಭಾರತಕ್ಕೆ ಸತ್ಯ ಗೊತ್ತಿರಬೇಕು. ಅದರ ಜೊತೆ ಸಹಬಾಳ್ವೆ ರೂಢಿಸಿಕೊಳ್ಳಬೇಕು.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT