ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಸ್ ವಿಡಿಯೊ ಎಂಬ ಸಮ್ಮೋಹನಾಸ್ತ್ರ

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

2008 ಮತ್ತು 2016ರ ನಡುವಣ ಕರ್ನಾಟಕದ ಚರಿತ್ರೆಯನ್ನು ಮುಂದಿನ ತಲೆಮಾರು ನೀಲಿ ಅಕ್ಷರಗಳಲ್ಲಿ ಬರೆದಿಡಬೇಕಾದ ಕಾಲ ಎಂದು ವರ್ಣಿಸಬಹುದು. ಕಳೆದ ಎಂಟು ವರ್ಷಗಳಲ್ಲಿ ರಾಜ್ಯ ಎಂಥೆಂಥ ಸೆಕ್ಸ್ ಹಗರಣಗಳಿಗೆಲ್ಲಾ ಸಾಕ್ಷಿಯಾಗಿಬಿಟ್ಟಿತು!

ಒಂದು ಲೆಕ್ಕದಲ್ಲಿ ರಾಜಕಾರಣಿಗಳನ್ನು ಒಳಗೊಂಡ ಲೈಂಗಿಕ ಪ್ರಕರಣಗಳನ್ನೆಲ್ಲಾ ಹಗರಣ ಎಂಬ ದೊಡ್ಡ ಶಬ್ದ ಬಳಸಿ ವರ್ಣಿಸಬಾರದು. ಯಾಕೆಂದರೆ ಉಳಿದೆಲ್ಲಾ ವಿಷಯಗಳಲ್ಲಿ ಇರುವಂತೆ ಈ ಲೈಂಗಿಕ ಪ್ರಕರಣಗಳಿಗೂ ಹಲವು ಸ್ತರಗಳಿರುತ್ತವೆ. ಎಲ್ಲವನ್ನೂ ಹಗರಣ ಎಂದು ಕರೆದರೆ ಅದು ಚುನಾವಣೆಯ ಸಮಯದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಧರಣಿ ಮಾಡಿದವರನ್ನೂ ಸೇರಿಸಿದ ಹಾಗಾಗುತ್ತದೆ. ಆದರೆ ಲೈಂಗಿಕ ಪ್ರಕರಣಗಳ ವಿಷಯದಲ್ಲಿ ನಮಗೆ ಅಂತಹ ವ್ಯವಧಾನ ಇರುವುದಿಲ್ಲ. ಸಮಚಿತ್ತ ಇರುವುದಿಲ್ಲ. 

‘... ನಾ ಭಯ, ನಾ ಲಜ್ಜ’ ಎನ್ನುವ ಸಂಸ್ಕೃತ ಶ್ಲೋಕವನ್ನು ಮಾಡುವವರಿಗೂ, ನೋಡುವವರಿಗೂ, ವಿಶ್ಲೇಷಿಸುವವರಿಗೂ, ಹೋರಾಡುವವರಿಗೂ ಅನ್ವಯಿಸಿ ತಿರುಮಂತ್ರ ಬರೆಯಬೇಕು.

ಸೆಕ್ಸ್ ವಿಷಯದಲ್ಲಿ ಭಾರತೀಯರದ್ದು ಅರ್ಜುನ ದೃಷ್ಟಿ. ಶಸ್ತ್ರಾಭ್ಯಾಸ ಪರೀಕ್ಷೆಯ ಕಾಲದಲ್ಲಿ ಮರದ ಮೇಲೆ ನೆಟ್ಟ ಹಕ್ಕಿಯ ಗೊಂಬೆಯೊಂದರ ಕಣ್ಣಿಗೆ ಬಾಣ ಹೂಡಬೇಕು  ಎಂದು ಗುರು ದ್ರೋಣರಿಂದ ಆಜ್ಞಪ್ತನಾದ ಮಹಾಭಾರತದ ಅರ್ಜುನನಿಗೆ ಹಕ್ಕಿಯ ಕಣ್ಣಿನ ಹೊರತು ಮತ್ತೇನೂ ಕಾಣಿಸಲಿಲ್ಲವಂತೆ. ಭಾರತೀಯ ಮನಸ್ಸುಗಳೂ ಹಾಗೆಯೇ.

ಒಂದು ವಿಷಯಕ್ಕೆ ಸೆಕ್ಸ್ ತಳಕು ಹಾಕಿಕೊಂಡಿತು ಎಂದಾದರೆ ಆ ವಿಷಯದ ಸುತ್ತಮುತ್ತ, ಮೇಲೆ ಕೆಳಗೆ, ಅಕ್ಕಪಕ್ಕ ಅದೆಂತಹ ಮಹತ್ವದ ಅಂಶಗಳಿದ್ದರೂ ಎಲ್ಲವೂ ಗೌಣವಾಗಿ ಭಾರತೀಯ ಕಣ್ಣುಗಳಿಗೆ ಕಾಣಿಸುವುದು ಸೆಕ್ಸ್ ಮಾತ್ರ. ಎಲ್ಲಾ ಚರ್ಚೆಗಳು ಅದರ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ. ನೀಲಿ ಕಣ್ಣುಗಳಿಂದ ಪ್ರಪಂಚವನ್ನು ನೋಡುವುದು ಹೇಗೆ ಎನ್ನುವುದನ್ನು ಪ್ರಪಂಚ ಭಾರತದಿಂದ ಕಲಿಯಬೇಕು. ಕರ್ನಾಟಕದಿಂದ ಕಲಿತರಂತೂ ಇನ್ನೂ ಉತ್ತಮ.

ವ್ಯಭಿಚಾರದ ಬಗ್ಗೆ, ಲಂಪಟತನದ ಬಗ್ಗೆ, ಕದ್ದು ಮುಚ್ಚಿ ನಡೆಯುವ ಖಾಸಗಿ ವ್ಯವಹಾರಗಳ ಬಗ್ಗೆ ಭಾರತೀಯ ಮನಸ್ಥಿತಿಗೆ ಇರುವ ಕುತೂಹಲವೇ ಬಹುಶಃ ಅವುಗಳ ವಿಚಾರದಲ್ಲಿ ಅನಗತ್ಯ ನೈತಿಕ ನಿಲುವುಗಳನ್ನು ತೆಗೆದುಕೊಳ್ಳಲು ನಮ್ಮನ್ನು ಪ್ರೇರೇಪಿಸುವುದು. ಈ ಕುತೂಹಲ ತಣಿಸುವ ಧಾವಂತದಲ್ಲಿ ಗಂಭೀರ ವಿಚಾರಗಳೆಲ್ಲ ಮರೆತುಹೋಗುತ್ತವೆ. ಕೇಳಬೇಕಾದ ಪ್ರಶ್ನೆಗಳು ಉಳಿಯುತ್ತವೆ. ಸೆಕ್ಸ್ ಎಂಬ ಸಮ್ಮೋಹನಾಸ್ತ್ರ ಎಲ್ಲರ ಬಾಯಿಮುಚ್ಚಿಸುತ್ತದೆ.

ವ್ಯಕ್ತಿಗಳ ಹಿಂದೆ ರಹಸ್ಯ ಕ್ಯಾಮೆರಾ ಹಿಡಿದು ಓಡಾಡಿದರೆ ಯಾರೂ ಊಹಿಸಲು ಸಾಧ್ಯವಾಗದ ಲೀಲಾ ಸರಕುಗಳೆಲ್ಲಾ ಸಿಗಬಹುದು. ಇದು ಅಧಿಕಾರಸ್ಥರ ವಿಚಾರದಲ್ಲೂ ಸತ್ಯ, ಅಧಿಕಾರ ಇಲ್ಲದವರ ವಿಚಾರದಲ್ಲೂ ಸತ್ಯ. ಇದು ಪಕ್ಷಾತೀತ, ಧರ್ಮಾತೀತ, ಜಾತ್ಯತೀತ ಮತ್ತು ಕಾಲಾತೀತ  ಸತ್ಯ. ಸಾರ್ವಜನಿಕ ಜೀವನದಲ್ಲಿರುವವರ ಅಥವಾ ಅಧಿಕಾರಸ್ಥರ ಲೈಂಗಿಕ ಸಂಬಂಧದ ಕುರಿತಾದ ಒಂದು ದೃಶ್ಯ ದಾಖಲೆ ಬೆಳಕಿಗೆ ಬಂದಾಗ ನಿಜಕ್ಕೂ ಮುಖ್ಯವಾಗುವ ಪ್ರಶ್ನೆಗಳು ಯಾವುವು? ಮೊದಲನೆಯದಾಗಿ ಮುಖ್ಯವಾಗುವುದು ಅಲ್ಲಿ ಅಧಿಕಾರ ದುರ್ಬಳಕೆ ನಡೆದಿದೆಯೇ ಎನ್ನುವ ಪ್ರಶ್ನೆ.

ಅಧಿಕಾರ ಚಲಾಯಿಸಿ ಕೆಲವರು ಅಮಾಯಕ ಮಹಿಳೆಯರ ಮೇಲೆ ರೇಪ್ ಮುಂತಾದ ಲೈಂಗಿಕ ದೌರ್ಜನ್ಯವನ್ನು  ನಡೆಸಬಹುದು. ಅಥವಾ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಯಾವುದೋ ಕೆಲಸವನ್ನು ಕಾನೂನಾತ್ಮಕವಾಗಿ ಅಥವಾ ಕಾನೂನನ್ನು ಮೀರಿ ಮಾಡಿಕೊಡಲು ದೇಹ ಸಂಪರ್ಕದ ಬೇಡಿಕೆ ಇರಿಸಬಹುದು. ಇದು ಲಂಚದ ಇನ್ನೊಂದು ರೂಪ. ಇವೆರಡೂ ಸ್ಪಷ್ಟವಾದ ಅಪರಾಧಗಳು. ಸೆರೆ ಸಿಕ್ಕ ದೃಶ್ಯಾವಳಿಗಳು ಇವೆರಡು ರೀತಿಯ ಅಧಿಕಾರ ದುರ್ಬಳಕೆಗೆ  ಸಂಬಂಧಿಸಿದ್ದಲ್ಲ ಎಂದಾದರೆ ಅದು ಇಬ್ಬರು ವಯಸ್ಕ ವ್ಯಕ್ತಿಗಳು ಪರಸ್ಪರ ಒಪ್ಪಿಕೊಂಡು ಬೆಳೆಸಿದ ದೈಹಿಕ ಸಂಬಂಧ ಇರಬಹುದು. ಇದು ಒಂದು ಮಟ್ಟಿಗೆ ವೈಯಕ್ತಿಕ. ಆದರೆ ಇಲ್ಲೂ ಒಂದು ಕಾನೂನಿನ ಎಳೆ ಇದೆ.

ಭಾರತೀಯ ದಂಡ ಸಂಹಿತೆಯ ಪ್ರಕಾರ ವಿವಾಹಿತ ಮಹಿಳೆಯೊಂದಿಗೆ ಗಂಡನಲ್ಲದ ವ್ಯಕ್ತಿ ಒಪ್ಪಿತ ದೈಹಿಕ ಸಂಪರ್ಕ ಇರಿಸಿಕೊಳ್ಳುವುದು ಅಪರಾಧ. ಅದಕ್ಕೆ ಶಿಕ್ಷೆ ಇದೆ. ಈ ಕಾನೂನಿನ ಬಗ್ಗೆ ಬಗೆಬಗೆಯ ಆಕ್ಷೇಪಗಳಿವೆ. ಈ ತನಕ ಅದು ಕಾನೂನು ಪುಸ್ತಕದಲ್ಲಿ ಉಳಿದುಕೊಂಡ ಕಾರಣ ಅದನ್ನು ಉಲ್ಲಂಘಿಸುವುದು ಅಪರಾಧವೇ ಎನ್ನೋಣ. 

ಇನ್ನುಳಿದಂತೆ ಇರುವುದು ಎಲ್ಲವೂ ನೈತಿಕ ಸರಿ-ತಪ್ಪುಗಳ ಪ್ರಶ್ನೆಗಳು. ರಾಜಕಾರಣಿಗಳ ಖಾಸಗಿ ಕ್ಷಣಗಳ ಉದ್ದೇಶಗಳಿಗೆ ಸರ್ಕಾರಿ ಕಟ್ಟಡ ಬಳಕೆಯಾಯಿತು ಎನ್ನುವುದು ಕೂಡಾ ಒಂದು ಅರ್ಥದಲ್ಲಿ ನೈತಿಕ ಪ್ರಶ್ನೆಯೇ. ಸರ್ಕಾರಿ ಕಟ್ಟಡ ಅಂದರೆ ಯಾವುದು? ಅದು ಅತಿಥಿ ಗೃಹವೇ? ಕಚೇರಿಯೇ? ಕಚೇರಿಯಲ್ಲಿ ನೀಡಲಾದ ಖಾಸಗಿ ವಲಯವೇ ಇತ್ಯಾದಿ ಪ್ರಶ್ನೆಗಳು ಬರುತ್ತವೆ.

ಕರ್ನಾಟಕ ನೀಲಿ ಧಾರಾವಾಹಿಯ ಹೊಚ್ಚ ಹೊಸ ಕಂತಿನಲ್ಲಿ ಅಂದರೆ ಹೋದ ವಾರ ನಡೆದುಹೋದ ಅಬಕಾರಿ ಸಚಿವರ  ಸೆಕ್ಸ್ ವಿಡಿಯೊ ಪ್ರಕರಣ ಭೇದಿಸಿದ ಸಮಾಜ ಸೇವಕರು ಬಹಿರಂಗ ಗೊಳಿಸಿದ್ದಾದರೂ ಏನನ್ನು? ಅದು ಅತ್ಯಾಚಾರ ಪ್ರಕರಣವಲ್ಲ.  ಲೈಂಗಿಕ ಸಂಪರ್ಕವನ್ನು ಲಂಚ ರೂಪದಲ್ಲಿ ಪಡೆದ ಪ್ರಕರಣದಂತೆ ಕಾಣಿಸಲಿಲ್ಲ. ಅದು ಎಲ್ಲಿ ನಡೆದದ್ದು ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೆಚ್ಚೆಂದರೆ ಅವರಿಬ್ಬರ ಮಧ್ಯೆ ಒಪ್ಪಿತ ವಿವಾಹೇತರ ದೈಹಿಕ ಸಂಪರ್ಕ ಏರ್ಪಟ್ಟಿರಬಹುದು. ರಾಜಕೀಯ ಉದ್ದೇಶಗಳಿಗೆ ಇದು ದೊಡ್ಡ ಸರಕಾಗಬಹುದು ಮತ್ತು ಆಗಿದೆ.

ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ? ಹಿಂದೆ ಬಿಜೆಪಿ ಕಾಲದಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಕೂಡಾ ಇದೇ ಪ್ರಶ್ನೆ ಇತ್ತು. ಆದರೆ ಅಲ್ಲಿ ಸಂಬಂಧಪಟ್ಟ ಮಹಿಳೆಯರು ದೂರು ನೀಡಿದ್ದರು ಎನ್ನುವ ಕಾರಣಕ್ಕೆ ಅವುಗಳು ಸ್ವಲ್ಪ ಭಿನ್ನ ಎನಿಸಿದ್ದವು. ಉಳಿದಂತೆ ಮೂರೂ ಪ್ರಕರಣಗಳಲ್ಲೂ ಸಾಮ್ಯತೆ ಇದೆ. ಸೆಕ್ಸ್‌ನ ಸುತ್ತ ನೈತಿಕ ಪ್ರಶ್ನೆಗಳನ್ನು ಎತ್ತುವ ಧಾವಂತದಲ್ಲಿ ಈ ಪ್ರಕರಣಗಳ ಹಿಂದೆ ಮುಂದೆ ಇದ್ದ ಹಲವಾರು ನಿಜ ಅರ್ಥ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳೆಲ್ಲಾ ಮರೆಯಲ್ಲೇ ಉಳಿದವು ಅಥವಾ ಅವುಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಯಿತು.

ಈ ಸರ್ಕಾರದ ಅಬಕಾರಿ ಸಚಿವರ ಪ್ರಕರಣದಲ್ಲಿ ಸಚಿವರು ಮತ್ತು ಮಹಿಳೆಯ ಸಂಬ೦ಧದ ವಿಡಿಯೊ ಮಾಡಿದ್ದು ಪೊಲೀಸ್ ಇಲಾಖೆಗೆ ಸೇರಿದ ವ್ಯಕ್ತಿ.  ಆ ವ್ಯಕ್ತಿ ಪೊಲೀಸ್ ಕಾನ್‌ಸ್ಟೆಬಲ್. ‘ಆತ ನಮ್ಮವ,  ಆತನನ್ನು ಇಲಾಖೆಗೆ ಸೇರಿಸಿದ್ದು ನಾನೇ’ ಎನ್ನುತ್ತಾರೆ ಈಗ ರಾಜೀನಾಮೆ ನೀಡಿರುವ ಸಚಿವರು. ‘ಅವ ನಮ್ಮವ’ ಎನ್ನುವ ಕಾರಣಕ್ಕೆ ಅವರು ಆತನಿಗೆ ಪೊಲೀಸ್ ಕೆಲಸ ಹೇಗೆ ಕೊಡಿಸಿದರು? ಪೊಲೀಸ್ ಇಲಾಖೆ ಏನು ಸಚಿವರ ಉಂಬಳಿಯೇ? ಈ ವಿಚಾರದಲ್ಲಿ ಯಾರಿಗೂ ಯಾವುದೇ ಕಾನೂನಿನ ನೈತಿಕತೆಯ ಪ್ರಶ್ನೆ ಕಾಡುವುದಿಲ್ಲ. ಆತ ಆ ವಿಡಿಯೊವನ್ನು ಹಿಡಿದು ಬಿಜೆಪಿ ನಾಯಕರೊಬ್ಬರು ಸೇರಿದಂತೆ ಹಲವರಿಗೆ ಅದನ್ನು ಮಾರಲು ಪ್ರಯತ್ನಿಸಿದ್ದಾನೆ. ಅಲ್ಲಿ ಯಾರಿಗೂ ಯಾವುದೇ ಕಾನೂನಿನ ನೈತಿಕತೆಯ ಪ್ರಶ್ನೆ ಕಾಡುವುದಿಲ್ಲ.

ವಿಡಿಯೊ ಬಹಿರಂಗಗೊಳಿಸುವಲ್ಲಿ ಸೂತ್ರಧಾರನಂತೆ ಕೆಲಸ ಮಾಡಿದ ವ್ಯಕ್ತಿಯನ್ನು ಮಾಧ್ಯಮಗಳು ಆರ್.ಟಿ.ಐ. ಕಾರ್ಯಕರ್ತ ಎಂದು ಕರೆದಿವೆ. ಭಾರತ ಕಂಡ ಅತ್ಯಂತ ಉದಾತ್ತ ಕಾಯ್ದೆ ಆರ್.ಟಿ.ಐ. ಅಥವಾ ಮಾಹಿತಿ ಹಕ್ಕು ಕಾಯ್ದೆ. ಇದರ ಹೆಸರನ್ನು ಆ ವ್ಯಕ್ತಿಯ ಹೆಸರಿಗೆ ಸೇರಿಸಿ ಈ ರೀತಿ ಅಪವಿತ್ರಗೊಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬಾರದಿತ್ತು. ಮಾಧ್ಯಮಗಳಲ್ಲಿ ವರದಿಯಾದ ಮತ್ತು ಕೇಳಿಸಿದ ಆ ವ್ಯಕ್ತಿಯ ಸಂಭಾಷಣೆ ನೋಡಿದರೆ ಅಲ್ಲೊಂದು ಬ್ಲ್ಯಾಕ್‌ಮೇಲ್  ಆಯಾಮ ಇದೆ. ಆ ವಿಚಾರದಲ್ಲಿ  ನೈತಿಕ ಪ್ರಶ್ನೆಗಳು ಯಾರನ್ನೂ ಕಾಡುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಆ ವ್ಯಕ್ತಿಯ ವರ್ತನೆ ಸೆಕ್ಸ್ ವಿಷಯದಲ್ಲಿ ಇಡೀ ಸಮಾಜಕ್ಕಿರುವ ಸಾಂದ್ರ ಮನಸ್ಥಿತಿಯನ್ನು ನೇರವಾಗಿ ಪ್ರತಿಫಲಿಸುತ್ತದೆ.

ಸೆಕ್ಸ್ ವಿಡಿಯೊ ಒಂದು ತನ್ನ ಕೈಯಲ್ಲಿದ್ದ ಕಾರಣಕ್ಕೆ ಈ ದೇಶದ ಗೃಹ ಸಚಿವರೇ ತನ್ನನ್ನು  ಭೇಟಿ ಮಾಡಿ  ಚರ್ಚಿಸಬೇಕೆಂದು ಪ್ರಯತ್ನಿಸುವ ಅವರ ಮನೋಭಾವವೇ ವಿಚಿತ್ರವಾಗಿದೆ. ಯಾವುದೋ ಒಂದು ರಾಜ್ಯದ ಒಂದಾನೊಂದು ಸಚಿವರ ‘ಅನೈತಿಕ’ ನಡವಳಿಕೆ ಈ ದೇಶದ ಗೃಹ ಮಂತ್ರಿಗಳು ಚರ್ಚಿಸಬೇಕಾದಂತಹ ಗಂಭೀರ ವಿಚಾರ ಎಂದು  ಯಾರಾದರೂ ಭಾವಿಸಿದರೆ ಒಂದೋ ಹಾಗೆ ತಿಳಿದುಕೊಂಡವರ ಮಾನಸಿಕ ಅವಸ್ಥೆ ಕುಸಿದಿದೆ ಎನ್ನಬೇಕು, ಇಲ್ಲದಿದ್ದರೆ ದೇಶದ ನೈತಿಕ ಮಟ್ಟ ಹಿಮಾಲಯದೆತ್ತರಕ್ಕೆ ಏರಿ ನೈತಿಕ ಗಡಿಗಳನ್ನು ದಾಟುವುದೆಂದರೆ ಶತ್ರುಗಳು ದೇಶದ ಗಡಿ ದಾಟಿದಂತೆ ಎಂಬುದು ಹೊಸ ರಾಷ್ಟ್ರೀಯ ನೀತಿಯಾಗಿರಬೇಕು. ಆದರೆ ಮಾಧ್ಯಮಗಳು ಈ ವ್ಯಕ್ತಿಯಲ್ಲಿ ಒಬ್ಬ ಸಮಾಜೋದ್ಧಾರಕನನ್ನು ಗುರುತಿಸುತ್ತವೆ.

ಕೆಲ ಸಮಯದ ಹಿಂದೆ ತನಗೆ ಅನ್ಯಾಯವಾಗಿದೆ ಎಂದು ರಾಜೀನಾಮೆ ನೀಡಿದ ಮಹಿಳಾ ಡಿವೈಎಸ್ಪಿಯೊಬ್ಬರು ಅಂದಿನ ಸಚಿವರೊಬ್ಬರ ಖಾಸಗಿ ಬದುಕಿನ ಬಗ್ಗೆ ವಿಡಿಯೊ ಬಿಡುಗಡೆ ಮಾಡುತ್ತೇನೆ ಎಂದರು. ‘ನಿಮಗಾದ ಅನ್ಯಾಯಕ್ಕೂ ಈ ವಿಡಿಯೊಗೂ ಏನು ಸಂಬಂಧ’ ಎಂದು ಆಗ ಅವರನ್ನು ಯಾರೂ ಕೇಳಲಿಲ್ಲ. ಎಲ್ಲರೂ ಸಿ.ಡಿ.ಯಲ್ಲಿದ್ದದನ್ನು ಕಲ್ಪಿಸಿಕೊಂಡು ಅದರ ಬಿಡುಗಡೆಗೆ ಎದುರು ನೋಡಿದರೇ ಹೊರತು, ಅದು ಆ ರಾಜಕಾರಣಿ ಯಾರಿಗಾದರೂ ಲೈಂಗಿಕ ಕಿರುಕುಳ ನೀಡಿದ ಪುರಾವೆಯ  ವಿಡಿಯೊವೇ ಅಥವಾ ಆತನ ಖಾಸಗಿ ಬದುಕಿನ ವಿಡಿಯೊವೇ ಎಂದು ಯಾರೂ ಕೇಳಲಿಲ್ಲ.

ಒಂದು ವೇಳೆ ಅದು ಆತ ನಡೆಸಿದ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ ಆದರೆ ಪೊಲೀಸ್ ಅಧಿಕಾರಿಯಾಗಿದ್ದು ಏನು ಸಾಧ್ಯವೋ ಆ ಕ್ರಮಗಳನ್ನು ಯಾಕೆ ಕೈಗೊಳ್ಳಲಿಲ್ಲ ಎಂದು ಯಾರೂ ಕೇಳಲಿಲ್ಲ. ಅದು ಆತನ ಖಾಸಗಿ ಬದುಕಿನ ವಿಡಿಯೊ ಆದರೆ ಅದನ್ನು ಚಿತ್ರೀಕರಿಸಿ ಇಟ್ಟುಕೊಂಡದ್ದು ಯಾಕೆ ಎಂದು ಯಾರೂ ಕೇಳಲಿಲ್ಲ. ಆ ಮಹಿಳಾ ಅಧಿಕಾರಿಯ ಪ್ರಕರಣ ಸ್ಪಷ್ಟವಾಗಿ ಎತ್ತಿ ತೋರಿಸಿದ್ದು ನಮ್ಮ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಎಂಥೆಂಥ  ಅಪ್ರಬುದ್ಧರಿದ್ದಾರೆ ಎನ್ನುವ ಸತ್ಯವನ್ನು. ಆದರೂ ಮಾಧ್ಯಮಗಳು, ಪ್ರಾಮಾಣಿಕರಿಗೆ ಹೀಗಾಗಿಹೋಯಿತು ಎಂದವು.

ನಾವು ಅಪ್ರಬುದ್ಧ ಪ್ರಾಮಾಣಿಕತೆ, ಅಸಂಗತ ಪ್ರಾಮಾಣಿಕತೆ ಮತ್ತು ಅಪ್ರಾಮಾಣಿಕತೆಗಳ ನಡುವೆ ಪ್ರಾಮಾಣಿಕತೆಯನ್ನು ಹುಡುಕಬೇಕಿದೆ. ಅಬಕಾರಿ ಸಚಿವರ ವಿಡಿಯೊ ಮುಂದಿಟ್ಟುಕೊಂಡು, ರಾಜೀನಾಮೆ ನೀಡಿರುವ ಈ ಮಹಿಳೆಗೆ ಮತ್ತೆ ಹುದ್ದೆ ನೀಡಬೇಕು ಎಂಬ ಬೇಡಿಕೆ ಬಂದ ವಿಚಾರವೂ ವಿಚಿತ್ರವಾಗಿದೆ. ಒಬ್ಬ ಸಚಿವರ ರಾಜೀನಾಮೆ ಪಡೆಯಬೇಕಾದರೂ ಸರಿ, ಆ ಮಹಿಳೆಯನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಸರ್ಕಾರದ ನಿಲುವು ಈ ಕೆಟ್ಟ ಸಿನಿಮಾದ ಏಕೈಕ ಸುಂದರ ದೃಶ್ಯ.

ಬಿಜೆಪಿಯ ಮೂವರು ಸಚಿವರು ವಿಧಾನಸಭೆಯಲ್ಲಿ ತಮ್ಮ ಮೊಬೈಲ್ ಫೋನ್ ಬಳಸಿ ನೋಡಬಾರದ್ದನ್ನೆಲ್ಲ ನೋಡಿದರು ಎಂಬ ವಿಚಾರದ ಬಗ್ಗೆ ಗುಲ್ಲೆದ್ದದ್ದನ್ನು ನೆನಪಿಸಿಕೊಳ್ಳಿ. ಈಗಲೂ ಕಾಂಗ್ರೆಸ್ ಬತ್ತಳಿಕೆಯಲ್ಲಿ ಬಿಜೆಪಿಯ ವಿರುದ್ಧ ಪ್ರಯೋಗಿಸಲು ಉಳಿದಿರುವ ಬ್ರಹ್ಮಾಸ್ತ್ರ ಇದು. ಇದನ್ನು ತಟಸ್ಥಗೊಳಿಸುವ ಪ್ರಯತ್ನದ ಭಾಗವಾಗಿಯೇ ಅಬಕಾರಿ ಸಚಿವರ ಪ್ರಕರಣ ಹೆಣೆಯಲಾಗಿದೆ ಎನ್ನುವ ಗುಮಾನಿ ಇದೆ. ಅದು ಹೌದಾದರೂ ದೊಡ್ಡದಲ್ಲ. ರಾಜಕಾರಣ ನಡೆಯುವುದೇ ಹಾಗೆ. ಬಲೆಗೆ ಬೀಳದಂತೆ ಆಳುವ ಪಕ್ಷದ ಮಂದಿ ಎಚ್ಚರ ವಹಿಸಬೇಕಿತ್ತು. ವಿಷಯ ಅದಲ್ಲ.

ಅಂದು ಬಿಜೆಪಿ ಸಚಿವರು ಸಿಕ್ಕಿಬಿದ್ದಾಗ ಅಯ್ಯಯ್ಯೋ ಇಡೀ ಸದನದ ಪಾವಿತ್ರ್ಯ ನಾಶವಾಯಿತು ಎಂಬ ಬೊಬ್ಬೆ ಕೇಳಿಸಿತು. ಅಲ್ಲಿಯೂ ಕಂಡದ್ದು ಸೆಕ್ಸ್ ವಿಚಾರದಲ್ಲಿ ನಮ್ಮ ಸಮಾಜಕ್ಕೆ ಇರುವ ಮಡಿವಂತಿಕೆ ಮತ್ತು ಕುತೂಹಲ. ಸದನ ನಡೆಯುತ್ತಿದ್ದಾಗ ಸದಸ್ಯರು ಮೊಬೈಲ್ ಹಿಡಿದು ಆಟವಾಡುತ್ತಿದ್ದರೆ ನಮಗದು ಆಕ್ಷೇಪಾರ್ಹ ಆಗುವುದಿಲ್ಲ. ಸದನದ ಉದ್ದೇಶವನ್ನೇ ಮರೆತು ಇನ್ನೇನು ಮಾಡುತ್ತಿದ್ದರೂ ಅಲ್ಲಿ ಯಾರಿಗೂ ಕಾನೂನಿನ ಉಲ್ಲಂಘನೆಯೂ ಕಾಣುವುದಿಲ್ಲ. ಟಿಪ್ಪು ಜಯಂತಿಯಲ್ಲಿ ಈಗಿನ ಸಚಿವರೊಬ್ಬರು ಏನನ್ನು ನೋಡಿದರು ಎಂಬುದಾಗಿ ಉಂಟಾದ ವಿವಾದವೂ ಹೀಗೆಯೇ ಇದೆ.

ನಮ್ಮ ನೈತಿಕತೆಯ ಕಲ್ಪನೆ, ನಮ್ಮ ಪಾವಿತ್ರ್ಯದ ಕಲ್ಪನೆ ಎಲ್ಲವೂ ಸೆಕ್ಸ್ ವಿಚಾರದಲ್ಲಿ ಮಾತ್ರ ಜಾಗೃತಗೊಳ್ಳುವುದು. ಇನ್ನೊಬ್ಬರು ಸೆಕ್ಸ್ ವಿಚಾರದಲ್ಲಿ ಇಂತಹ ಒಲವು ನಿಲುವುಗಳನ್ನು ಹೊಂದಿದ್ದಾರೆ ಎನ್ನುವ ಭಾರತೀಯ ಮನಸ್ಸಿನ ವಿಲಕ್ಷಣ ಕುತೂಹಲದ ವ್ಯಕ್ತ ರೂಪವೇ ಈಗ ನಾವು ಕಾಣುತ್ತಿರುವ ನೈತಿಕ ಪೊಲೀಸ್ ಗಿರಿ. ಇಲ್ಲವಾದರೆ ಅಬಕಾರಿ ಸಚಿವರ ಖಾಸಗಿ ಕ್ಷಣಗಳ ವಿಡಿಯೊದ ಸುತ್ತ ಆವರಿಸಿಕೊಂಡಿರುವ ಗಂಭೀರ ಪ್ರಶ್ನೆಗಳು ನಮ್ಮನ್ನು ಕಾಡಬೇಕಿತ್ತು. ಆ ಮನುಷ್ಯ ಮಾಡಿದ ಅಥವಾ ಮಾಡಿದ ಎಂದು ಮಾಧ್ಯಮಗಳು ನಂಬಿಸಿದ ವಿಷಯ ನಮ್ಮನ್ನು ಈ ಪರಿ ಕಾಡಬಾರದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT