ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಖೆಯ ಮಾತು ಬಿಡಿ, ಸಂಗೀತ ಕೇಳಿ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೆಟ್ಟ ಸೆಖೆಯ ಬಗ್ಗೆ ಎಲ್ಲರೂ ಬೇಸರದಿಂದ ಮಾತಾಡುವ ಸಮಯ ಇದು. ಹೀಗೆ ಮಾತಾಡುವಾಗ ಬೇಸಿಗೆಯ ಆಕರ್ಷಣೆಗಳನ್ನು ಮರೆತುಬಿಡುತ್ತೇವೆ. ತಾಜಾ ಮಾವಿನ ಹಣ್ಣು, ಕಲ್ಲಂಗಡಿ ಸಿಗುವುದು ಈ ಎರಡು ಮೂರು ತಿಂಗಳಲ್ಲಿ ಮಾತ್ರ. ಪಠ್ಯ ಪುಸ್ತಕ ಬಿಟ್ಟು ಹೊಸ ವಿಷಯ ಕಲಿಯುವ ಅವಕಾಶವನ್ನು ಮಕ್ಕಳಿಗೆ ಬೇಸಿಗೆ ಒದಗಿಸಿ ಕೊಡುತ್ತದೆ. ರಜಾ ಸಿಕ್ಕ ಖುಷಿಯಲ್ಲಿ ತಾಪವನ್ನು, ಖರ್ಚನ್ನು ಲೆಕ್ಕಿಸದೆ ಊರೂರು ಸುತ್ತುತ್ತೇವೆ, ನೆಂಟರಿಷ್ಟರನ್ನು ಕಂಡುಬರುತ್ತೇವೆ. ಎಷ್ಟೇ ಬಿಸಿಲಿದ್ದರೂ ಬೇಸಿಗೆ ಒಂದು ಥರ ಮಜದ ಸೀಸನ್, ಅಲ್ಲವೇ? 

ನನ್ನ ತಲೆಮಾರಿನವರಿಗೆ ಬೇಸಿಗೆಯೆಂದರೆ ಸಂಗೀತ ಕೇಳುವ ಸೀಸನ್ ಕೂಡ ಆಗಿತ್ತು. ಎಂಬತ್ತರ ದಶಕದಲ್ಲಿ ಟ್ರಾಫಿಕ್ ಈಗಿರುವಷ್ಟು ಭೀಕರವಾಗಿರಲಿಲ್ಲ. ಜಯನಗರದಿಂದ ಸೈಕಲ್ ತುಳಿದುಕೊಂಡು ಚಾಮರಾಜಪೇಟೆಗೋ, ವಿಶ್ವೇಶ್ವರಪುರಕ್ಕೋ ಹೋಗುವುದು ದುಸ್ಸಾಹಸ ಎನಿಸುತ್ತಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳಾಗಿದ್ದ ನಾನು ಮತ್ತು ನನ್ನ ಸ್ನೇಹಿತರು ನೂರಾರು ಸಂಗೀತ ಕಛೇರಿಗಳನ್ನು ಕೇಳಲು ಸಾಧ್ಯವಾಯಿತು. ಇದಕ್ಕೆ ನಾವು ಧನ್ಯವಾದ ಹೇಳಬೇಕಾಗಿರುವುದು `ಶ್ರೀ ರಾಮ ಸೇವಾ ಮಂಡಲಿ' ಎಂಬ ಸಂಸ್ಥೆಗೆ. ಈಗ ಮಂಡಲಿ 75ನೆಯ ವರ್ಷಕ್ಕೆ ಕಾಲಿಟ್ಟಿದೆ.

ಚೆನ್ನೈಗೆ ಡಿಸೆಂಬರ್ ಹೇಗೋ ಬೆಂಗಳೂರಿಗೆ ಏಪ್ರಿಲ್ ಹಾಗೆ. ಸಂಗೀತ ದಿಗ್ಗಜರು ಬಂದು ಕಛೇರಿ ನಡೆಸಿಕೊಡುವ ಸಮಯ ಇದು. ಏಪ್ರಿಲ್ ಮೊದಲ ವಾರ ಬೆಂಗಳೂರಿನ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಪ್ರಾರಂಭವಾಗುವ ರಾಮೋತ್ಸವ 36 ದಿನ ಎಡಬಿಡದೆ ನಡೆಯುತ್ತದೆ. ಹಿರಿಯ ಕಿರಿಯ ಕಲಾವಿದರಿಗೆ ವೇದಿಕೆ ಒದಗಿಸುವ ಮಂಡಲಿ ಹಳೆ ಮೈಸೂರಿನ ಸಂಗೀತ ಸಂಪ್ರದಾಯವನ್ನು ಕಾಪಾಡಿಕೊಂಡು ಬಂದಿದೆ. ಇದು ಸಾಂಸ್ಕೃತಿಕವಾಗಿ ಎಷ್ಟು ದೊಡ್ಡ ಕೆಲಸ ಎಂದು ಬೇರೆ ಹೇಳಬೇಕಾಗಿಲ್ಲ.

ಇಂಥ ಉತ್ಸವ ನಡೆಸುವುದು ಸುಲಭವಾಗಿರಲಾರದು. ಮೊದಲ ಬಾರಿಗೆ ರಾಮ ಸೇವಾ ಮಂಡಳಿ ಈ ಹಬ್ಬವನ್ನು ಏರ್ಪಡಿಸಿದ್ದು 1939ರಲ್ಲಿ, ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ. ಎಸ್.ವಿ. ನಾರಾಯಣ ಸ್ವಾಮಿ ಎಂಬ ಸಂಗೀತ ಪ್ರೇಮಿ ಆರಂಭಿಸಿದ ಈ ಸಂಪ್ರದಾಯವನ್ನು ಅವರ ಮಗ ಎಸ್.ಎನ್. ವರದರಾಜ್ ಮತ್ತು ಅವರ ಕುಟುಂಬದವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ನಾರಾಯಣ ಸ್ವಾಮಿ ಎಚ್.ಎ.ಎಲ್.ನಲ್ಲಿ ಕೆಲಸ ಮಾಡುತ್ತಿದ್ದರು. ಚೌಡಯ್ಯ ಮತ್ತು ಮಹಾಲಿಂಗಂರಂಥ ಸಂಗೀತಗಾರರಿಗೆ ಬಹಳ ಆತ್ಮೀಯರಾಗಿದ್ದರು. ವರದರಾಜ್ ಹೇಳುವಂತೆ ಐದು ದಶಕದ ಹಿಂದೆ 5,000 ರೂಪಾಯಿ ಇದ್ದರೆ ಎಲ್ಲ ನಡೆದುಹೋಗುತ್ತಿತ್ತು. ಈಗ ವರ್ಷಕ್ಕೆ ಸುಮಾರು 50 ಲಕ್ಷ ರೂಪಾಯಿ ಖರ್ಚಾಗುತ್ತದೆ. ಹಲವು ದಾನಿಗಳು ಮತ್ತು ಪ್ರಾಯೋಜಕರ ಸಹಾಯದಿಂದ ಸಂಗೀತ ಸೇವೆ ಮೊದಲಿನಂತೆಯೇ ನಡೆಯುತ್ತಿದೆ. 

ನಾನು ಕಾಲೇಜು ಮುಗಿಸುವ ಹೊತ್ತಿಗೆ ರಾಮೋತ್ಸವ ಕಛೇರಿಗಳಿಗೆ ಬರುವ ರಸಿಕರ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ನಾನು ಕಂಡಂತೆ ಚಾಮರಾಜಪೇಟೆ ಸುತ್ತಲಿನ ಪ್ರದೇಶಗಳು ಕಮರ್ಷಿಯಲ್ ಆಗುತ್ತಾ ಹೋದವು. ಹಳೆಯ ನಿವಾಸಿಗಳು ಬೇರೆ ಬಡಾವಣೆಗಳಿಗೆ ಹೊರಟುಹೋದರು. ಅವರ ಮಕ್ಕಳು ಅಮೆರಿಕ ಸೇರಿದರು.

ವರದರಾಜ್ ಹೇಳುವಂತೆ ತೊಂಬತ್ತರ ದಶಕದಲ್ಲಿ ಯುವ ಸಂಗೀತ ಪ್ರೇಮಿಗಳು ಬರುವುದು ಕಡಿಮೆಯಾಗಿ ಹೋಗಿತ್ತು. ಆದರೆ ಐದು ವರ್ಷದಿಂದ ಅಂಥವರ ಸಂಖ್ಯೆ ಹೆಚ್ಚಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಾಫ್ಟ್‌ವೇರ್ ವಲಯದಲ್ಲಿ ಕೆಲಸ ಮಾಡುವ ದಕ್ಷಿಣ ಭಾರತೀಯರು ಹೆಚ್ಚು ಹೆಚ್ಚು ಬರುತ್ತಿದ್ದಾರಂತೆ. ನಾನು ಅಮ್ಜದ್ ಅಲಿ ಖಾನ್, ದೊರೆಸ್ವಾಮಿ ಅಯ್ಯಂಗಾರ್, ಯೇಸುದಾಸ್ ಮೊದಲಾಗಿ ಹಲವು ಹೆಸರಾಂತ ಕಲಾವಿದರನ್ನು ಕಂಡಿದ್ದು, ಕೇಳಿದ್ದು ಇಲ್ಲಿಯೇ. ಕರ್ನಾಟಕ ಸಂಗೀತದಲ್ಲಿನ ಖ್ಯಾತನಾಮರೆಲ್ಲ ಇಲ್ಲಿಗೆ ಬಂದು ಹಾಡಿದ್ದಾರೆ, ನುಡಿಸಿದ್ದಾರೆ.  

ಒಂದು ವೈಯಕ್ತಿಕ ಟಿಪ್ಪಣಿ: ಸಂಗೀತ ಕೇಳುವ ಮುಂಚಿನ ದಿನಗಳಲ್ಲಿ ಬೇಸಿಗೆ ಬಂತೆಂದರೆ ನಮ್ಮ ತಾಯಿ ನಮ್ಮನ್ನು ಮದ್ರಾಸಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ತಮ್ಮ ಅಲ್ಲಿದ್ದರು. ಪೋರ್ಟ್ ಟ್ರಸ್ಟ್‌ನಲ್ಲಿ ಕ್ಯಾಪ್ಟನ್ ಆಗಿದ್ದರು. ದೇಶೀ ವಿದೇಶಿ ಹಡಗುಗಳನ್ನು ಬಂದರಿನ ಒಳಗೆ ತರುವ ಕೆಲಸ ಅವರದು. ಹೋದಾಗಲೆಲ್ಲ ಮದ್ರಾಸಿನ ಟೂರಿಸ್ಟ್ ಸ್ಥಳಗಳನ್ನೆಲ್ಲ ತೋರಿಸಿ ಸಂಜೆ ವೇಳೆ ಬೀಚ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಬೆಂಗಳೂರಿಗಿಂತ ವಿಪರೀತ ಸೆಖೆ ಇರುತ್ತಿದ್ದ ಊರು ಅದು. ಆದರೆ ನಾನು, ನನ್ನ ತಂಗಿಯರಿಗೆ ಮದ್ರಾಸ್ ಟ್ರಿಪ್ ಅಂದರೆ ಸಂಭ್ರಮ! ಹಾಗಾಗಿ ನನಗೆ ಬೇಸಿಗೆಯ ನೆನಪೆಂದರೆ ಆಟ, ಪ್ರವಾಸ, ಸಂಗೀತ; ಸೆಖೆಯಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT