ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ‘ಸಂಕೋಲೆ’ ಸಡಿಲಗೊಳ್ಳದಿರಲಿ

Last Updated 4 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಇನ್ನೊಂದು ಸಾರ್ವತ್ರಿಕ ಚುನಾವಣೆಗೆ ಜನ ಎದುರು ನೋಡುತ್ತಿದ್ದಾರೆ. ಸಂಸತ್ತಿನಲ್ಲಿ ಕೆಲವು ಸಮಯದ ಹಿಂದೆ ನಡೆದ ಘಟನೆಗಳು ಅಸಹನೀಯವಾಗಿದ್ದವು, ನಿಜ.  ಆದರೆ ಇಂತಹ ಪರಿ­ಸ್ಥಿತಿ ನಮ್ಮಲ್ಲಿ ಮಾತ್ರ ಇದೆ ಎಂದೇನೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಏಷ್ಯಾದ ಇತರ ಕೆಲವು ದೇಶಗಳಲ್ಲಿಯೂ ಪ್ರಜಾಸತ್ತಾತ್ಮಕ ವ್ಯವಸ್ಥೆ ಹದಗೆಟ್ಟು ಬಿಟ್ಟಿದೆ. ಇದು ದುರದೃಷ್ಟಕರ.

ಇನ್ನೇನು, ಎರಡು–ಮೂರು ತಿಂಗಳಲ್ಲಿ  ಭಾರತದ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತಗಟ್ಟೆಗಳ ಎದುರು ಸರತಿಯ ಸಾಲಿನಲ್ಲಿ ನಿಲ್ಲಲಿದ್ದಾರೆ.  ಆಮ್‌ ಆದ್ಮಿ ಪಕ್ಷದ (ಎಎಪಿ) ಬೆಳವಣಿಗೆ ಕಂಡಾಗ ಮುಂದಿನ ಸಂಸತ್ತು ಉತ್ತಮ ಗುಣ­ಮಟ್ಟದಿಂದ ಕೂಡಿರುವ ಸಾಧ್ಯತೆ ಇದೆ ಎಂಬ ನಂಬಿಕೆ ನನ್ನದು. ಈ ದೇಶದ ರಾಜಕಾರಣದಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ತುಂಬುವ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ಹೆಜ್ಜೆಗಳು ಮೂಡಿ ಬರಲಿವೆ ಎಂದೆನಿಸುತ್ತಿದೆ.

ದೇಶದಲ್ಲಿ ಸೇನೆಯ ಪ್ರಭಾವ ಹೆಚ್ಚುವುದನ್ನು ನಾನು ಯಾವತ್ತೂ ಇಷ್ಟ ಪಡುವುದಿಲ್ಲ. ‘ಈ ದೇಶದಲ್ಲಿ ಸೇನಾ  ದಂಗೆ ನಡೆಯುತ್ತದೆ ಎಂದು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ’ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿರುವುದೂ ಸರಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದ­ರ್ಭದಲ್ಲಿ ಜವಾಹರಲಾಲ್‌ ನೆಹರೂ ಅವರೂ ಇದೇ ಮಾತನ್ನು ಹೇಳಿದ್ದರು. ‘ನಮ್ಮದು ವಿಶಾಲ­ವಾದ ಭೂಪ್ರದೇಶವನ್ನು ಹೊಂದಿರುವ ಮತ್ತು ಅಸಂಖ್ಯ ಜಾತಿ ಮತ್ತು ಹತ್ತು ಹಲವು ಧರ್ಮ­ಗಳನ್ನು ಹೊಂದಿರುವ ದೇಶವಾಗಿದ್ದು, ಇದು ಸೇನೆಯ ಮಂದಿಗೆ ಕೈಗೆಟುಕುವಂತಹದ್ದೇ ಅಲ್ಲ’ ಎಂಬುದು ಅಂದು ನೆಹರೂ ಅವರ ವಾದ­ವಾ­ಗಿತ್ತು. ಆ ಮಾತು ಇವತ್ತಿಗೂ ಸತ್ಯವೆನಿಸುತ್ತದೆ.

ಆದರೆ ಕೆಲವೊಮ್ಮೆ ಆಡಳಿತದಲ್ಲಿ ಸೇನೆಯ ಕೆಲವು ಅಭಿಪ್ರಾಯಗಳಿಗೂ ಮನ್ನಣೆ ಸಿಕ್ಕಿಬಿಡು­ತ್ತದೆ ನೋಡಿ, ಅದು ನನಗೆ  ಬೇಸರವನ್ನು ಉಂಟು  ಮಾಡುತ್ತದೆ. ಹಿಮಾಲಯದ ಸಿಯಾ­ಚಿನ್‌ ಗ್ಲೇಸಿಯರ್‌ ಬಳಿ ಸೇನಾ ತಂಡವೊಂದನ್ನು ಇರಿಸಿರುವ ಬಗ್ಗೆ ಸರ್ಕಾರದ ನಿರ್ಧಾರವೇ ಇದಕ್ಕೆ ಸ್ಪಷ್ಟ ನಿದರ್ಶನ. ಹಲವು ಮಂದಿ ನಿವೃತ್ತ ಸೇನಾನಿಗಳು ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಅಲ್ಲಿ ಸೇನೆಯನ್ನು ಇರಿಸ­ಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ವಿದೇಶಾಂಗ ಕಾರ್ಯದರ್ಶಿಗಳ ನಡುವಣ ಮಾತು­ಕತೆಯ ನಂತರ ಒಪ್ಪಂದವೊಂದಕ್ಕೂ ಬರಲಾಗಿತ್ತು. ಆದರೆ ನಮ್ಮ ಸೇನೆ ಅದಕ್ಕೆ ಬದ್ಧತೆ ತೋರಲೇ ಇಲ್ಲ. ತೀರಾ ಪ್ರತಿಕೂಲ ಹವಾಮಾನ ಇರುವ ಆ ಪ್ರದೇಶ ಮನುಷ್ಯನ ವಾಸಕ್ಕೆ ಯೋಗ್ಯ ಅಲ್ಲವೇ ಅಲ್ಲ. ಆದರೂ ಅಲ್ಲಿ ಸೈನಿಕರು ಇರಲೇ ಬೇಕಾಗಿದೆ. ಇದರಿಂದ ಹಲವು ಸಲ ಪ್ರಾಣಹಾನಿಗಳಾಗಿವೆ.

ಇನ್ನು ಸೇನೆಗೆ ವಿಶೇಷಾಧಿಕಾರ ನೀಡುವ (ಎಎಫ್‌ಎಸ್‌ಪಿಎ) ಕಾನೂನು ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸ ಬೇಕಿದೆ. ಈ ಕಾನೂನು ಜಾರಿಯಲ್ಲಿರುವ ಪ್ರದೇಶದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಅನುಮಾನ ಉಂಟಾದರೆ ನ್ಯಾಯಾಂಗದ ಪ್ರಕ್ರಿಯೆಗಳು ಇಲ್ಲದೆಯೇ ಆ ವ್ಯಕ್ತಿಯನ್ನು ಬಂಧಿಸುವ ಅಥವಾ ಕೊಂದು ಹಾಕುವ ಅಧಿಕಾರ ಸೇನೆಗೆ ಇರುತ್ತದೆ. ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಇವತ್ತಿಗೂ ಈ ಕಾನೂನು ಜಾರಿಯಲ್ಲಿದೆ. ಇದಕ್ಕೆ ಸಂಬಂಧಿಸಿ­ದಂತೆ ಸರ್ಕಾರವೇ ಹಿಂದೆ ಸಮಿತಿಯೊಂದನ್ನು ನೇಮಿಸಿ ವರದಿಯೊಂದನ್ನು ನೀಡಿತ್ತು. ‘ಈ ಕಾನೂನು ಅನಗತ್ಯ’ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ಈ ಕಾನೂನು ಇನ್ನೂ ಜಾರಿಯಲ್ಲಿದೆ!

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಕೇಂದ್ರ ಸರ್ಕಾರಕ್ಕೆ ಅಧಿಕೃತವಾದ ಪತ್ರವೊಂದನ್ನು ಬರೆದು ಈ ಕಾನೂನನ್ನು ಕಿತ್ತೊಗೆಯಬೇಕೆಂದು ತಿಳಿಸಿದ್ದರು.  ಸಾರ್ವಜನಿಕವಾಗಿಯೇ ಅವರು ಈ ಮನವಿ ಸಲ್ಲಿಸಿದ್ದರು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಕಿವಿಗೊಡಲೇ ಇಲ್ಲ. ಏಕೆಂದರೆ ಅಲ್ಲಿ ಸೇನೆಯ ಮಾತಿಗೇ ಹೆಚ್ಚು ಮನ್ನಣೆ ತಾನೆ?

ಬಂಧನದಲ್ಲಿರುವ ಕೆಲವು ಚಳವಳಿಗಾರರನ್ನು ಬಿಡುಗಡೆ ಮಾಡಬೇಕೆಂದೂ, ಅವರ ಸಜ್ಜನಿಕೆ­ಯನ್ನು ಗಮನಿಸಿ ರಿಯಾಯಿತಿ ತೋರಬೇಕೆಂದೂ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮಾಡಿದ ಮನವಿಗೂ ಮನ್ನಣೆ ಸಿಗಲಿಲ್ಲ.

ಜಮ್ಮು ಮತ್ತು ಕಾಶ್ಮೀರದ ಪತ್ರಿಬಾಲ್‌ ಎಂಬಲ್ಲಿ ನಡೆದ ‘ಕಾರ್ಯಾಚರಣೆ’ಗೆ ಸಂಬಂಧಿ­ಸಿದ ತನಿಖೆಯೂ ಸರ್ಕಾರದ ಇಂತಹದೇ ಒಂದು ಧೋರಣೆಗೆ ಮತ್ತೊಂದು ನಿದರ್ಶನವಾಗಿದೆ. ಭಯೋತ್ಪಾದಕರೆಂಬ ಹಣೆಪಟ್ಟಿ ನೀಡಿದ ಸೇನೆ­ಯು ಐದು ಮಂದಿಯನ್ನು ಗುಂಡಿಟ್ಟು ಕೊಂದು ಹಾಕಿತು. ಆದರೆ ಸಂಬಂಧಪಟ್ಟ ಗ್ರಾಮದ ನಿವಾಸಿ­ಗಳೆಲ್ಲಾ ಒಗ್ಗೂಡಿ ಸರ್ಕಾರ ಮತ್ತು ಸೇನೆಗೆ ಮನವಿ ಸಲ್ಲಿಸಿ ‘ಸತ್ತವರು ನಿರಪ­ರಾಧಿಗಳು, ಮುಗ್ಧರು. ಅವರನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು’ ಎಂದಿದ್ದರು. ಆಗ ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಲಾಯಿತು. ಸಿಬಿಐ ಸಮಗ್ರ ತನಿಖೆ ನಡೆಸಿ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿತು. ಅದೊಂದು ನಕಲಿ ಕಾರ್ಯಾಚರಣೆ ಎಂಬುದಾಗಿ ಆ ವರದಿಯಲ್ಲಿ ಹೇಳಲಾಗಿತ್ತು.

ಈ ಸಂದರ್ಭದಲ್ಲಿ ಇನ್ನೊಂದು ಸಂಗತಿಯನ್ನು ಹೇಳಲೇಬೇಕೆನಿಸುತ್ತದೆ. 23 ವರ್ಷಗಳ ಹಿಂದೆ ಎಸ್‌.ಎಂ. ಯಾಸಿನ್‌ ಎಂಬುವರು ಕುಪ್ವಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದರು. 1991ರ ಫೆಬ್ರುವರಿ­ಯಲ್ಲಿ ಕೋನಮ್‌ ಫೋಷ್ಪೋರದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬರೆ­ದಿರುವ ವರದಿಯನ್ನು ಬದಲಿಸುವಂತೆ ಅಂದು ಅವರ ಮೇಲೆ ತೀವ್ರ ಒತ್ತಡ ಹೇರಲಾಗಿ­ತ್ತಂತೆ. ಆ ರೀತಿ ಮಾಡಿದರೆ ಅವರಿಗೆ ಶೀಘ್ರ ಬಡ್ತಿ ನೀಡುವುದಾಗಿಯೂ ಆಮಿಷ ಒಡ್ಡಲಾಗಿತ್ತಂತೆ. ಆ ಅಂಶವನ್ನು ಎರಡು ದಶಕಗಳ ನಂತರ ಯಾಸಿನ್‌ ಬಹಿರಂಗ ಗೊಳಿಸಿದರು. ಅಚ್ಚರಿ ಎಂದರೆ ಅಂತಹದ್ದೊಂದು ಘಟನೆ ನಡೆದೇ ಇಲ್ಲ ಎಂದು ಅಂದು ಸೇನೆ ವಾದಿಸಿತ್ತು. ಇಂತಹ ಘಟನೆ­ಗಳಿಂದ ಜಮ್ಮು ಮತ್ತು ಕಾಶ್ಮೀರದ ಜನ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳದಿರಲು ಸಾಧ್ಯವೇ?

ಆದರೆ 2012ರ ಜನವರಿಯಲ್ಲಿ ಸೇನಾ ದಂಗೆಗೆ ಸಂಬಂಧಿಸಿದಂತೆ ಸದ್ದು ಮಾಡಿದ ಸುದ್ದಿಯೊಂದು ಗಮನ ಸೆಳೆಯುವಂತಹದ್ದೇ ಹೌದು. ಸೇನೆಯ ಎರಡು ಸೇನಾ ತುಕಡಿಗಳು ಆಗ್ರಾದಿಂದ ದೆಹಲಿಯತ್ತ ಸಾಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಂದಿತ್ತು. ಸೇನೆಯಲ್ಲಿ ಇಂತಹ ಯಾವುದೇ ಚಲನವಲನಕ್ಕೆ ಪೂರ್ವಾನು­ಮತಿ ಬೇಕೇ ಬೇಕು. ಆದರೆ ಆ ರೀತಿ ಅನುಮತಿ ಇಲ್ಲದೆಯೇ ಅದೊಂದು ದಿನ ಅಂತಹದ್ದೊಂದು ಚಟುವಟಿಕೆ ನಡೆದಿತ್ತೆನ್ನಲಾಗಿದೆ. ಆಗ ರಕ್ಷಣಾ ಕಾರ್ಯದರ್ಶಿಯವರು ಸೇನಾ ಕಾರ್ಯಾಚರಣೆ­ಗಳ ಮಹಾನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ಎ.ಕೆ.ಚೌಧರಿ ಅವರನ್ನು ಮಧ್ಯರಾತ್ರಿ ಕರೆಸಿ­ಕೊಂಡು ಈ ಬಗ್ಗೆ ಚರ್ಚಿಸಿದ್ದರೆನ್ನಲಾಗಿದೆ.

‘ಸರ್ಕಾರದ ಉನ್ನತ ಸ್ಥಾನಗಳಲ್ಲಿರುವವರು ಇಂತಹ ಸುದ್ದಿಯ ಬಗ್ಗೆ ಆತಂಕಗೊಂಡಿದ್ದಾರೆ’ ಎಂದಿದ್ದರಂತೆ. ತಕ್ಷಣ ಸೇನೆಯ ಅಂತಹದ್ದೊಂದು ಚಲನವಲನಕ್ಕೆ ತಡೆ ನೀಡಲಾಗಿತ್ತು ಎನ್ನಲಾಗಿದೆ. ಆ ದಿನಗಳಲ್ಲೇ ದಿನಪತ್ರಿಕೆಯೊಂದು ಆ ಸುದ್ದಿಯನ್ನು ಬಯಲುಗೊಳಿಸಿದಾಗ ರಕ್ಷಣಾ ಸಚಿವ ಆಂಟನಿಯವರು ಅಲ್ಲಗಳೆದಿದ್ದರು. ಆದರೆ ಸೇನಾಧಿಕಾರಿ ಎ.ಕೆ.ಚೌಧರಿ ತಮ್ಮ ನಿವೃತ್ತಿಯ ನಂತರ ಅದಕ್ಕೆ ಸಂಬಂಧಿಸಿದಂತೆ ಮಾತನಾಡಿ ‘ಆ ಘಟನೆ ನಿಜ’ ಎಂದು ಒಪ್ಪಿಕೊಂಡಿದ್ದರು. ಆಗ ವಾಯುಪಡೆಯ ಮುಖ್ಯಸ್ಥರಾಗಿದ್ದ ಎನ್‌.ಎ.ಕೆ. ಬ್ರೌನೆ ಅವರೂ ನಂತರ ಹೇಳಿಕೆಯೊಂದನ್ನು ನೀಡಿ ಅಂತಹದ್ದೊಂದು ಘಟನೆ ನಡೆದ ಬಗ್ಗೆ ಆಧಾರಗಳನ್ನು ಬಯಲುಗೊಳಿಸಿದ್ದರು. ಆದರೆ ರಕ್ಷಣಾ ಸಚಿವರು ಮಾತ್ರ ‘ಅದೊಂದು ನಿತ್ಯದ ತರಬೇತಿ ಪ್ರಕ್ರಿಯೆಯ ಭಾಗ’ ಎಂದಿದ್ದರು.

ಅಂದು ಭೂಪಡೆಯ ಮುಖ್ಯಸ್ಥರಾಗಿದ್ದ ಜನ­ರಲ್‌ ವಿ.ಕೆ.ಸಿಂಗ್‌ ಅವರ ಜನ್ಮದಿನಾಂಕ ವಿವಾ­ದವು ದೊಡ್ಡ ಸುದ್ದಿಯಾಗಿದ್ದುದರಿಂದ, ಸೇನೆಯ ‘ಆಗ್ರಾದಿಂದ ದೆಹಲಿಯತ್ತ ನಡೆ’ ಘಟನೆಯು ಇನ್ನಿಲ್ಲದ ಮಹತ್ವ ಪಡೆದುಕೊಂಡಿತ್ತು. ಅದೇನೇ ಇರಬಹುದು, ಆದರೆ ಈ ಬಗ್ಗೆ ಸೇನೆ ಮತ್ತು ನಾಗರಿಕ ಸೇವೆಯ ನಿವೃತ್ತ ಉನ್ನತ ಅಧಿಕಾರಿಗಳ ತಂಡವೊಂದು ಸರಿಯಾದ ತನಿಖೆ ನಡೆಸಿದ್ದರೆ, ‘ನಿತ್ಯದ ತರಬೇತಿಯ ಪ್ರಕ್ರಿಯೆ’ಯ ನಿಜಬಣ್ಣ ಬಯಲಾಗುತ್ತಿತ್ತೇನೊ.

ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಒಂದೇ ರೀತಿಯ ಸೇನಾ ತರಬೇತಿ ಇದೆ.  ಅವರಿಗೆ ಯಾವುದೇ ರೀತಿಯ ರಾಜಕೀಯ ಸೋಂಕೂ ಇರು­­ವುದಿಲ್ಲ. ಆದರೆ ಆ ಎರಡೂ ದೇಶಗಳಲ್ಲಿ ಸೇನೆ­ಯೇ ಎದ್ದು ನಿಂತು, ಚುನಾಯಿತ ಸರ್ಕಾರ­ಗಳನ್ನು ಮೂಲೆಗೆ ತಳ್ಳಿದ್ದನ್ನು ಮರೆಯುವುದೆಂತು? ಇವತ್ತು ಸೇನೆ ತಮ್ಮ ಬ್ಯಾರಕ್‌ಗಳಿಗೆ ಮರಳಿರಬಹುದು. ಆದರೆ ಒಂದು ವ್ಯವಸ್ಥೆಯಲ್ಲಿ ಸೇನೆಯ ಆಸ್ತಿತ್ವವನ್ನು ಲಘುವಾಗಿ ತಳ್ಳಿ ಹಾಕುವಂತಿಲ್ಲ.
ಭಾರತದಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆ­ಯಲ್ಲಿ ಸೇನೆಗೆ ಅದರದೇ ಆದ ಮಿತಿಗಳಿವೆ. ಈ ನೆಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಖರ ಬೆಳಕಿನಲ್ಲಿ ಸೇನೆ ಪ್ರಾಬಲ್ಯ ಸಾಧಿಸುವುದು ಅಸಾಧ್ಯ. ಆ ರೀತಿ ನಮ್ಮಷ್ಟಕ್ಕೆ ನಾವು ಪರಿ­ಭಾವಿಸಿಕೊಂಡು ಎಚ್ಚರ ತಪ್ಪುವುದೂ ಸರಿಯಲ್ಲ. ಸೇನೆಗೆ ಸಂಬಂಧಿಸಿದಂತೆ ಯಾವುದೇ ಸಣ್ಣ ವಿವಾದವನ್ನೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿರಬೇಕು.

ದೇಶದ ರಕ್ಷಣೆಗಾಗಿಯೇ ಸೇನೆ ಇರುವುದು. ಆದರೆ ಸೇನೆ ಏನು ಮಾಡಬೇಕು ಅಥವಾ ಮಾಡ­ಬಾರದು ಎಂಬ ಕುರಿತು ಚುನಾಯಿತ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇದು ಮೂಲ­ಭೂತ ಅಂಶವಾಗಿದ್ದು, ಇದರಲ್ಲಿ ಯಾವುದೇ ರಾಜಿಗೆ ಅವಕಾಶ ಇರಬಾರದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT